ಕು.ಸ.ಮದುಸೂದನನಾಯರ್ ರಂಗೇನಹಳ್ಳಿ
ದಿನಾಂಕ 9-11-2016ರ ಬುದವಾರ ತಡಸಂಜೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, ಅನಾಣ್ಯೀಕರಣದ(ಡಿಮೊನೈಟೇಷನ್) ನಿರ್ದಾರವನ್ನು ಪ್ರಕಟಿಸಿದ ಕೂಡಲೆ ಇಡೀ ರಾಷ್ಟ್ರ ಒಮ್ಮೆಲೇ ಬೆಚ್ಚಿ ಬಿದ್ದಿತ್ತು. ಊಟ ಮಾಡುತ್ತ ಅಥವಾ ಊಟ ಮುಗಿಸಿ ವಾಹಿನಿಗಳಲ್ಲಿ ಸುದ್ದಿ ನೋಡುತ್ತ(ಕೇಳತ್ತ) ಕೂತಿದ್ದ ಜನತೆ ಆತಂಕಕ್ಕೀಡಾಗಿದ್ದು ಸುಳ್ಳಲ್ಲ. ಅನಾಣ್ಯೀಕರಣದ ಬಗ್ಗೆ ಹೆಚ್ಚೆನು ಮಾಹಿತಿ ಇರದ ಜನತೆಗೆ ಇದರ ಹಿಂದಿನ ಉದ್ದೇಶ ಮತ್ತು ಸಾಧಕಬಾದಕಗಳನ್ನು ಅರ್ಥಮಾಡಿಕೊಳ್ಳಲು ಸುಮಾರು ಮೂರು ದಿನ ಬೇಕಾಗಿತ್ತು. ಸುದ್ದಿವಾಹಿನಿಗಳನ್ನು ನೋಡಿದವರು, ವೃತ್ತಪತ್ರಿಕೆಗಳನ್ನು ಓದಿದವರು ಒಂದಷ್ಟು ಅರ್ಥಮಾಡಿಕೊಂಡರೂ, ಬಹಳಷ್ಟು ಜನ ಅವಿದ್ಯಾವಂತರಿಗೆ ಈ ನಡೆಯನ್ನು ಅರಿತುಕೊಳ್ಳಲು ಕಷ್ಟವಾಗಿದ್ದು ನಿಜ. ಅನಾಣ್ಯೀಕರಣವೆಂದರೆ ಜಾಸ್ತಿ ಮುಖಬೆಲೆಯ ಅಂದರೆ ಐನೂರು ಮತ್ತು ಸಾವಿರದ ನೋಟುಗಳನ್ನು ಸರಕಾರ ಹಿಂದಿರುಗಿ ಪಡೆದು ಅವುಗಳ ಬದಲಿಗೆ ಅದೇ ಮೌಲ್ಯದ ಕಡಿಮೆ ಮುಖಬೆಲೆಯ ನೋಟುಗಳನ್ನು ಜನರಿಗೆ ನೀಡುವುದೆಂಬ ಮಾತು ಜನರಿಗೆ ಅರ್ಥವಾದರೂ, ಅವರಿಗೆ ಅರ್ಥವಾಗದೇ ಹೋದದ್ದು. ಹೀಗೆ ನೋಟು ಬದಲಿಸಿಕೊಳ್ಳುವ ಮಾರ್ಗ ಮತ್ತು ಅವಧಿಯ ಬಗ್ಗೆ. ಅಂತೂ ಮೂರ್ನಾಲ್ಕು ದಿನಗಳ ಒಳಗೆ ಜನರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿಯಂತು ಸಿಕ್ಕಿತ್ತು.
ಇಷ್ಟರಲ್ಲಾಗಲೇ ಈ ಅನಾಣ್ಯೀಕರಣ ಕಾರ್ಯ ಸರಿಯೇ ತಪ್ಪೇ ಎನ್ನುವ ಬಗ್ಗೆ ರಾಷ್ಟ್ರದಾದ್ಯಂತ ಹೊಸ ಚರ್ಚೆಯೊಂದು ಹುಟ್ಟಿಯಾಗಿತ್ತು! ಸರಕಾರದ ಪ್ರತಿ ನಿರ್ದಾರಗಳ ನಂತರವೂ ನಡೆಯುವಂತೆ ಇಲ್ಲಿಯೂ ನಡೆಯಿತು. ಬಾಜಪ ಮತ್ತದರ ಮಿತ್ರ ಪಕ್ಷಗಳು, ಮೋದಿಯ ಹಿಂಬಾಲಕರು ಅದನ್ನು ಸ್ವಾಗತಿಸುತ್ತ, ಕಪ್ಪುಹಣ ನಿಯಂತ್ರಣಕ್ಕೆ ಪ್ರದಾನಮಂತ್ರಿ ಮೋದಿಯವರು ಕೈಗೊಂಡ ಈ ನಿರ್ದಾರ ಆರ್ಥಿಕ ಸರ್ಜಿಕಲ್ ಸ್ಟ್ರೈಕ್ ಎಂದು ಬಣ್ಣಿಸಿ ಬೀಗತೊಡಗಿದರು. ಮಿಕ್ಕಂತೆ ಕಾಂಗ್ರೆಸ್ ಒಳಗೊಂಡಂತೆ ಇತರೇ ವಿರೋಧ ಪಕ್ಷಗಳು ಈ ಬಗ್ಗೆ ಸ್ಪಷ್ಟವಾದ ಯಾವುದೇ ಹೇಳಿಕೆ ನೀಡದೆ ಇನ್ನಷ್ಟು ಗೊಂದಲಗಳನ್ನು ಹುಟ್ಟು ಹಾಕಿದರು. ಅನಾಣ್ಯೀಕರಣ ಒಳ್ಳೆಯದೇ ಆದರೂ, ಇದರಿಂದ ಸಮಾಜದ ಕೆಳವರ್ಗಗಳಿಗೆ ಕೂಲಿಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಎಂದೂ ಹಾಗು ಇದನ್ನು ಕಾರ್ಯಗತಗೊಳಿಸುವಲ್ಲಿ ಇನ್ನಷ್ಟು ಜಾಣತನ ತೋರಬಹುದಿತ್ತೆಂದೂ ಹೇಳಿಕೆ ನೀಡಿದ ವಿರೋಧ ಪಕ್ಷಗಳು ಸರತಿ ಸಾಲಲ್ಲಿ ನಿಂತು ನೋಟು ಬದಲಾಯಿಸಿಕೊಳ್ಳಬೇಕಾಗಿ ಬಂದ ಬಡಜನರ ಪರವಾಗಿ ಮಾತನಾಡತೊಡಗಿದವು. ಇನ್ನಷ್ಟು ಬುದ್ದಿವಂತಿಕೆ ಮತ್ತು ಪೂರ್ವಸಿದ್ದತೆಯೊಂದಿಗೆ ಇದನ್ನು ಜಾರಿಗೊಳಿಸಬಹುದೆಂಬ ಹೇಳಿಕೆ ನೀಡಿದ ಯಾರೂ ಆ ಬುದ್ದಿವಂತಿಕೆ ಮತ್ತು ಸಿದ್ದತೆ ಏನೆಂಬುದನ್ನು ಹೇಳದೇ ಹೋಗಿದ್ದು ನಮ್ಮ ದುರಂತ.
ಕಳೆದ ತಿಂಗಳು ಗಡಿಯಾಚೆಗೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಘಟನೆಯಿಂದ ಇನ್ನೂ ಸುದಾರಿಸಿಕೊಳ್ಳಲು ಒದ್ದಾಡುತ್ತಿದ್ದ ಕಾಂಗ್ರೆಸ್ನಂತಹ ಪಕ್ಷಗಳಿಗೆ ಇದು ಮತ್ತೊಂದು ಆಘಾತಕಾರಿ ವಿಷಯವಾಗಿತ್ತು. ಕಳೆದ ಎರಡೂವರೆ ವರ್ಷಗಳಿಂದ ಪ್ರದಾನಿ ನರೇಂದ್ರ ಮೋದಿಯವರು ಬರಿ ವಿದೇಶ ಸುತ್ತುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸುತ್ತಿದ್ದ ವಿರೋಧಪಕ್ಷಗಳಿಗೆ ಮೋದಿಯವರ ಈ ನಿರ್ದಾರಗಳು ಶಾಕ್ ನೀಡಿದ್ದವು.
ಇರಲಿ, ಆರ್ಥಿಕ ವಿಷಯಗಳಲ್ಲಿ ನಾನು ತಜ್ಞನೂ ಅಲ್ಲ ಮತ್ತು ಇದರಿಂದ ಕಪ್ಪು ಹಣದ ಹಾವಳಿ ನಿಲ್ಲುತ್ತದೆಯೊ ಇಲ್ಲವೊ ಎಂದು ಚರ್ಚಿಸುವ ಮಟ್ಟಿಗೆ ಅರಿವೂ ಇಲ್ಲದಿರುವುದರಿಂದ ನಾನು ಅನಾಣ್ಯೀಕರಣದ ಸಾಧಕಬಾದಕಗಳ ಬಗ್ಗೆ ಇಲ್ಲಿ ಚರ್ಚಿಸಲು ಹೋಗುವುದಿಲ್ಲ. ನನ್ನ ಈ ಬರಹದ ಉದ್ದೇಶ ಇರುವುದು: ಈ ಅನಾಣ್ಯೀಕರಣದ ಹಿಂದಿರುವ ರಾಜಕೀಯ ಲಾಭನಷ್ಟಗಳ ಬಗ್ಗೆ ಮತ್ತು ಮುಂದಿನ ದಿನಗಳ ರಾಜಕಾರಣದಲ್ಲಿ ಇದು ವಹಿಸಬಹುದಾದ ಮುಖ್ಯ ಪಾತ್ರದ ಬಗ್ಗೆ:ಇದೊಂದೇ ನಿರ್ದಾರದಿಂದ ಮೋದಿಯವರು ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನು ಹೊಡೆಯುವ ಪ್ರಯತ್ನವಂತು ಮಾಡಿದ್ದಾರೆ.
ಮೊದಲನೆಯದಾಗಿ ಕಳೆದ ಸಾರ್ವತ್ರಿಕ ಚುನಾವಣೆಯ ಪ್ರಚಾರದಲ್ಲಿ ಮೋದಿಯವರು ವಿದೇಶದಿಂದ ಕಪ್ಪುಹಣ ವಾಪಾಸು ತರುತ್ತೇನೆಂದು ಹೇಳಿ ಇದುವರೆಗು ಕಪ್ಪುಹಣದ ಕುರಿತು ಏನನ್ನೂ ಮಾಡಿಲ್ಲ ಎನ್ನುವ ವಿರೋಧ ಪಕ್ಷಗಳ ಟೀಕೆಗೆ ಅನಾಣ್ಯೀಕರಣದ ಮೂಲಕ ಕಟುವಾದ ಉತ್ತರವನ್ನೇ ನೀಡಿದ್ದಾರೆ. ಇದರಿಂದ ಕಪ್ಪಹಣ ಇಲ್ಲವಾಗುತ್ತದೆಯೊ ಇಲ್ಲವೊ ಸಾಮಾನ್ಯ ಜನರಂತು ಕಪ್ಪುಹಣ ಹೋಗಿಯೇ ಹೋಗುತ್ತದೆ ಮತ್ತು ಮೋದಿಯವರೇ ಇದನ್ನು ಮಾಡಿದ್ದಾರೆಂದು ಸದ್ಯಕ್ಕಂತು ನಂಬಿದ್ದಾರೆ. ಇದರಿಂದ ಅನಾಣ್ಯೀಕರಣವನ್ನೇ ಟೀಕಿಸುತ್ತಿರುವ ವಿರೋಧಪಕ್ಷಗಳನ್ನೇ ಜನ ಟೀಕಿಸುವಷ್ಟರ ಮಟ್ಟಿಗೆ ಇದು ಸಾಮಾನ್ಯ ಜನರ ನಡುವೆ ಪ್ರಬಾವ ಬೀರಿರುವುದಂತು ನಿಜ. ಹೀಗಾಗಿ ಅನಾಣ್ಯೀಕರಣ ಮೋದಿಯವರಿಗೆ ತಂದಿಟ್ಟ ಮೊದಲ ರಾಜಕೀಯ ಮೇಲುಗೈ ಎನ್ನಬಹುದು.
ಎರಡನೆಯದಾಗಿ 'ವಾಲಂಟಿರಿ ಇನ್ಕಮ್ ಡಿಸ್ ಕ್ಲೋಸರ್'ಗೆ ಕಳೆದ ಸೆಪ್ಟೆಂಬರ್ ಅಂತ್ಯದವರೆಗು ಗಡುವು ನೀಡಿದ್ದರೂ ಅದರಿಂದ ಪ್ರಯೋಜನವೇನೂ ಆಗಿರಲಿಲ್ಲ. ಮತ್ತು ಸರಕಾರದ ನಿರೀಕ್ಷೆ ಈ ವಿಷಯದಲ್ಲಿ ಸುಳ್ಳಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಉಪಾದ್ಯಕ್ಷರಾದ ಶ್ರೀ ರಾಹುಲ್ ಗಾಂದಿಯವರು ಇದನ್ನು ಸರಕಾರದ 'ಫೇರ್ ಅಂಡ್ ಲವ್ಲೀ' ಯೋಜನೆಯೆಂದು ಕುಹಕವಾಡಿದ್ದರು. ಇದರಿಂದ ಸರಕಾರಕ್ಕೆ ಮುಜುಗರವಾಗಿದ್ದು ನಿಜ. ಈ ಅನಾಣ್ಯೀಕರಣ ಆ ಮಜುಗರವನ್ನು ಸದ್ಯಕ್ಕಂತು ಹೋಗಲಾಡಿಸಿದೆ.
ಮೂರನೆಯದಾಗಿ, ರಾಜಕೀಯವಾಗಿ ಇದು ಬಾಜಪಕ್ಕೆ ತುಂಬಾ ಅನುಕೂಲವಾಗಲಿದ್ದು, ಮಸುಕಾಗುತ್ತಿದ್ದ ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ವರ್ಚಸ್ಸನ್ನು ಒಂದಷ್ಟಾದರು ಹೆಚ್ಚಿಸುವಲ್ಲಿ ನೆರವಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಮುಂದಿನ ವರ್ಷ ಅಂದರೆ 2017 ರಲ್ಲಿ ನಡೆಯಲಿರುವ ಹಲವು ರಾಜ್ಯಗಳ ರಾಜ್ಯ ವಿದಾನಸಭಾ ಚುನಾವಣೆಗಳಲ್ಲಿ ಈ ಅಂಶ ಬಾಜಪಕ್ಕೆ ಲಾಭ ತರುವುದರಲ್ಲಿ ಸಂಶಯವಿಲ್ಲ. ಮುಂದಿನ ವರ್ಷ ಸಮಾಜವಾದಿ ಪಕ್ಷದ ಸರಕಾರವಿರುವ ಉತ್ತರಪ್ರದೇಶದಲ್ಲಿ, ಕಾಂಗ್ರೆಸ್ ಸರಕಾರಗಳಿರುವ ಹಿಮಾಚಲ ಪ್ರದೇಶ-ಮಣಿಪುರ,ಹಾಗು ಸ್ವತ: ಬಾಜಪದ ಸರಕಾರಗಳಿರುವ ಗುಜರಾತ್ ಮತ್ತು ಗೋವಾ, ಪಂಜಾಬುಗಳಲ್ಲಿ ವಿದಾನಸಭಾ ಚುನಾವಣೆಗಳು ನಡೆಯಲಿದ್ದು, ಬಾಜಪದಕ್ಕೆ ಅನಾಣ್ಯೀಕರಣ ವರವಾಗುವ ಸಾದ್ಯತೆ ಹೆಚ್ಚಾಗಿದೆ. ಯಾಕೆಂದರೆ 2014ರಲ್ಲಿದ್ದ ನರೇಂದ್ರ ಮೋದಿಯವರ ಅಲೆ ಕಾಲಕಳೆದಂತೆ ಕಡಿಮೆಯಾಗುತ್ತಿದ್ದು, ಚುನಾವಣಾ ಪ್ರಚಾರಕ್ಕೆ ಬೇರೆ ವಿಚಾರಗಳನ್ನೇ ಹೆಚ್ಚು ಅವಲಂಬಿಸಬೇಕಾದ ಸ್ಥಿತಿ ಬಾಜಪಕ್ಕಿತ್ತು. ಆದರೆ ಇದೀಗ ಮೋದಿಯವರೇ ಆ ಪಕ್ಷದ ತಾರಾಪ್ರಚಾರಕರಾಗಿ ಕಂಗೊಳಿಸಲಿದ್ದಾರೆ. ಗಡಿಯಾಚೆಗಿನ ಸರ್ಜಿಕಲ್ ಸ್ಟ್ರೈಕ್ ತಂದು ಕೊಟ್ಟ ಪ್ರಚಾರಕ್ಕಿಂತ ಈ ಅನಾಣ್ಯೀಕರಣದ ವಿಷಯ ಹೆಚ್ಚು ಜನಪ್ರಿಯತೆ ಪಡೆಯಲಿದೆ.
ಇದಕ್ಕೆ ಕೆಲ ಸೂಕ್ಷ್ಮವಾದ ಕಾರಣಗಳೂ ಇವೆ: ಅದೇನೆಂದರೆ ಅನಾಣ್ಯೀಕರಣದ ವಿಷಯವನ್ನು ದೇಶದ ಹಣಕಾಸು ಸಚಿವರು ಇಲ್ಲ ರಿಸರ್ವ ಬ್ಯಾಂಕಿನ ಗವರ್ನರ್ ಪ್ರಕಟಿಸುವುದು ಮಾಮೂಲಿಯಾಗಿದ್ದು, ಈ ಬಾರಿ ಸ್ವತ: ಪ್ರದಾನಿಯವರೇ ಅದನ್ನು ಘೋಷಿಸುವುದರ ಮೂಲಕ ನಿಯಮವನ್ನು ಮುರಿದಿದ್ದಲ್ಲದೆ, ಅದರಿಂದ ಸಿಗಬಹುದಾದ ಜನಪ್ರಿಯತೆಯನ್ನೂ ತಾವೇ ಪಡೆದುಕೊಂಡಿದ್ದಾರೆ. ಮೋದಿಯವರ ಈ ನಡೆಯ ಹಿಂದೆ ಅವರ ರಾಜಕೀಯ ತಂತ್ರಗಾರಿಕೆ ಎದ್ದುಕಾಣುತ್ತದೆ.
ಹೀಗೆ ಅನಾಣ್ಯೀಕರಣದ ಆರ್ಥಿಕ ಪರಿಣಾಮಗಳೇನೇ ಇರಲಿ ರಾಜಕೀಯವಾಗಿ ಇದು ಬಾಜಪಕ್ಕೆ ಮತ್ತು ಮೋದಿಯವರಿಗೆ ಸಂಪೂರ್ಣ ಲಾಭ ತಂದುಕೊಡಲಿರುವುದು ಖಚಿತ. ಯಾಕೆಂದರೆ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರಗಳಿಂದ ಬೇಸತ್ತಿರುವ ಸಾಮಾನ್ಯ ಜನತೆಗೆ ಅವುಗಳ ವಿರುದ್ದ ಸರಕಾರವೊಂದು ತೆಗೆದುಕೊಳ್ಳುವ ಸಣ್ಣದೊಂದು ಕ್ರಮವೂ ದೊಡ್ಡದಾಗಿಯೇ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಅನಾಣ್ಯೀಕರಣವೆನ್ನುವುದು ತಾತ್ಕಾಲಿಕವಾಗಿಯಂತು ಬಾಜಪಕ್ಕೆ ವರವಾಗಿ ಪರಿಣಮಿಸಿದೆ. ಮುಂದಿನ ವರ್ಷಗಳ ಚುನಾವಣೆಯ ಪಲಿತಾಂಶ ಈ ಲಾಭದ ಮೊತ್ತವೆಷ್ಟೆಂಬುದನ್ನು ಬಯಲು ಮಾಡಲಿದೆ.
ಹಳೆಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸುವ ಮೊದಲು ಹೊಸ ನೋಟುಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ ೬ ತಿಂಗಳ ಮೊದಲೇ ಗೌಪ್ಯತೆ ಕಾಯ್ದುಕೊಂಡು ಪ್ರಿಂಟ್ ಮಾಡಿದ್ದಿದ್ದರೆ ಇಂದು ಜನಸಾಮಾನ್ಯರು ತಮ್ಮ ಕೆಲಸ ಬಿಟ್ಟು ಕ್ಯೂ ನಿಲ್ಲಬೇಕಾಗಿರಲಿಲ್ಲ. ಇಂದು ರೂಪಾಯಿಗೆ ಬೆಲೆಯಿಲ್ಲದ ಕಾರಣ ೫೦೦ ರೂಪಾಯಿ ನೋಟುಗಳು ಹೆಚ್ಚು ಚಲಾವಣೆಯಲ್ಲಿದ್ದವು ಮತ್ತು ಇದು ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಬಳಕೆಯಾಗುತ್ತಿದ್ದವು. ಎಟಿಎಂಗಳಲ್ಲಿ ೫೦೦ ಅಥವಾ ಸಾವಿರದ ನೋಟು ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತಿದ್ದದ್ದೂ ಜನರ ಬಳಿ ೫೦೦/೧೦೦೦ ರೂಪಾಯಿ ನೋಟುಗಳು ಹೆಚ್ಚು ಚಲಾವಣೆಗೆ ಬರಲು ಕಾರಣ. ಹೀಗಾಗಿ ಇವುಗಳನ್ನು ಅಮಾನ್ಯಗೊಳಿಸುವ ಮೊದಲು ವಿಜ್ಞಾನಿ ಮುಂದಾಲೋಚನೆ ಮಾಡುವಂತೆ ಮುಂದಿನ ಪರಿಣಾಮಗಳನ್ನು ಆಲೋಚನೆ ಮಾಡಬೇಕಾಗಿತ್ತು. ಆದರೆ ಆಡಳಿತ ನಡೆಸುವವರ ಮುಂದಾಲೋಚನೆಯ ಕೊರತೆಗೆ ಜನಸಾಮಾನ್ಯರು ಬಸವಳಿಯುವಂತಾಗಿರುವುದು ಶೋಚನೀಯ.
ReplyDeleteವ್ಯಾಪಾರ, ವಹಿವಾಟುಗಳು ಕಳೆದ ಕೆಲವು ದಿನಗಳಿಂದ ಕಡಿಮೆಯಾಗಿವೆ. ಇದೇ ರೀತಿ ಬಹಳ ದಿನ ಮುಂದುವರಿದಲ್ಲಿ ದೇಶ ಆರ್ಥಿಕ ಹಿಂಜರಿತಕ್ಕೆ ಸಿಲುಕುವ ಅಪಾಯವೂ ಇದೆ. ಒಂದು ದಿನದ ಬಂದ್ ನಡೆದರೆ ದೇಶಕ್ಕೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟವಾಗುತ್ತದೆ. ಸರ್ಕಾರದ ಮುಂದಾಲೋಚನೆಯಿಲ್ಲದ ನಿರ್ಧಾರದಿಂದ ಹಲವಾರು ದಿನಗಳು ಅಥವಾ ತಿಂಗಳುಗಳೇ ವ್ಯಾಪಾರ, ವಹಿವಾಟುಗಳು ಕಡಿಮೆಯಾದರೆ ಅದು ಇಡೀ ದೇಶದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುವ ಸಂಭವ ಇದೆ. ಒಂದು ಮಾಡಲು ಹೋಗಿ ಇನ್ನೊಂದು ಆದರೆ ಜನಸಾಮಾನ್ಯರು ತೀವ್ರ ತೊಂದರೆಗೆ ಒಳಗಾಗಬೇಕಾದೀತು. ಮೊದಲೇ ಜನ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ನಿರುದ್ಯೋಗ, ಕಡಿಮೆ ವರಮಾನ ಮೊದಲಾದವುಗಳಿಂದ ಬಸವಳಿಯುತ್ತಿದ್ದಾರೆ. ಇದಕ್ಕೆ ಇನ್ನಷ್ಟು ಸೇರಿಸಿದಂತೆ ನೋಟು ಅಮಾನ್ಯಗೊಳಿಸುವಿಕೆ ಇನ್ನಷ್ಟು ತೊಂದರೆ ಉಂಟುಮಾಡುವ ಸಾಧ್ಯತೆ ಇದೆ.
ನೋಟು ಅಮಾನ್ಯಗೊಳಿಸುವಿಕೆಯಿಂದ ಭ್ರಷ್ಟಾಚಾರ ಒಂದಿಷ್ಟೂ ಕಡಿಮೆಯಾಗುವ ಸಂಭವ ಇಲ್ಲ. ಭ್ರಷ್ಟಾಚಾರ ಕಡಿಮೆ ಮಾಡಬೇಕಾದರೆ ಕೆಂಪು ಪಟ್ಟಿಯ ಅನವಶ್ಯಕ ಕಾನೂನುಗಳನ್ನು ತೆಗೆದುಹಾಕಿ ಲೋಕಾಯುಕ್ತ, ಲೋಕಪಾಲದಂಥ ವ್ಯವಸ್ಥೆಗಳನ್ನು ಬಲಪಡಿಸುವುದು ಅಗತ್ಯ. ಅದೇ ರೀತಿ ನ್ಯಾಯಾಂಗವನ್ನೂ ಬಲಪಡಿಸಿ ಶೀಘ್ರ ನ್ಯಾಯ ನೀಡುವ ವ್ಯವಸ್ಥೆ ಮಾಡಬೇಕಾಗಿದೆ. ಆದರೆ ಆ ನಿಟ್ಟಿನಲ್ಲಿ ಯಾವುದೇ ಕ್ರಮ ಸರ್ಕಾರ ಕೈಗೊಳ್ಳುತ್ತಿಲ್ಲ. ಮಾಧ್ಯಮಗಳು ಕೂಡ ಈ ಬಗ್ಗೆ ಜನಜಾಗೃತಿ ಮೂಡಿಸುತ್ತಿಲ್ಲ. ನೋಟು ಅಮಾನ್ಯಗೊಳಿಸುವಿಕೆಯಿಂದ ತೊಂದರೆಗೊಳಗಾದ ಜನ ಚುನಾವಣೆಗಳಲ್ಲಿ ತಿರುಗಿಬೀಳುವ ಸಂಭವ ಕೂಡ ಅಲ್ಲಗಳೆಯಲಾಗದು ಏಕೆಂದರೆ ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಹೀಗಾಗಿ ಇದು ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಪೆಟ್ಟು ಕೊಡುವ ಸಂಭವ ಇದೆ. ನೋಟು ಅಮಾನ್ಯಗೊಳಿಸುವಿಕೆ ಜನರಿಗೆ ತೊಂದರೆ ಉಂಟುಮಾಡಬಲ್ಲುದೇ ಹೊರತು ಮಹತ್ತರ ಪರಿಣಾಮ ಉಂಟುಮಾಡುವ ಸಂಭವ ಇಲ್ಲ.