ಸಾಂದರ್ಭಿಕ ಚಿತ್ರ: ಬ್ಯುಸಿನೆಸ್ ಲೈನ್ |
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಚುನಾವಣೆಗಳಿಗೂ ಮುಂಚೆ ಹೇಳಿದಂತೆಯೇ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಗಣತಿಯನ್ನು ( ಇನ್ನೊಂದು ಅರ್ಥದಲ್ಲಿ ಜಾತಿಗಣತಿ), ಮೇಲ್ವರ್ಗಗಳ ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಮಾಡಿ ಮುಗಿಸಿದರು. ಇವತ್ತು ನಾವೇನೇ ಜಾತಿವಿನಾಶದ ಆದರ್ಶದ ಮಾತುಗಳನ್ನು ಆಡಿದರೂ ಜಾತಿ ಎನ್ನುವುದು ಈ ದೇಶದ ಕಟುವಾಸ್ತವ ಎಂಬುದನ್ನು ಮರೆಯಬಾರದು. ಈ ಗಣತಿ ಕಾರ್ಯವನ್ನು ವಿರೋಧಿಸಿದವರೆಲ್ಲ ಜಾತಿಪದ್ದತಿಯ ಪೋಷಕರೇ ಆಗಿದ್ದುದು ಮತ್ತು ಅಂತಹ ಮೇಲ್ವರ್ಗಗಳ ಬೆಂಬಲ ಪಡೆದ ರಾಜಕೀಯ ಪಕ್ಷಗಳೇ ಆಗಿದ್ದವು. ಸರಕಾರದ ಒಳಗೇ ಇರುವ ಹಲವು ಮೇಲ್ವರ್ಗಗಳ ನಾಯಕರುಗಳೇ ಈ ಜಾತಿ ಗಣತಿಯನ್ನು ಆಂತರಿಕವಾಗಿ ವಿರೋಧಿಸಿದ್ದರು. ಇಷ್ಟಲ್ಲದೆ ಮೇಲ್ವರ್ಗಗಳ ಹಿಡಿತದಲ್ಲಿರುವ ನಮ್ಮ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಸಹ ಈ ಜಾತಿ ಗಣತಿಯನ್ನು ವಿಡಂಬನೆ ಮಾಡುತ್ತ, ಪರೋಕ್ಷವಾಗಿ ತಮ್ಮ ಅಸಮಾದಾನವನ್ನೂ ವ್ತಕ್ತ ಪಡಿಸಿದ್ದವು. ಆದರೆ ಯಥಾ ಪ್ರಕಾರ ತಮ್ಮ ನಿಲುವನ್ನು ಸಡಿಲಿಸದ ಮುಖ್ಯಮಂತ್ರಿಗಳು ಗಣತಿ ಕಾರ್ಯ ಮುಗಿಯುವಂತೆ ನೋಡಿಕೊಂಡರು, ಸ್ವಾತಂತ್ರ ಪೂರ್ವದಲ್ಲಿ ಅಂದರೆ ಬ್ರಿಟೀಷರ ಆಳ್ವಿಕೆಯಲ್ಲಿ 1931ನೇ ಇಸವಿಯಲ್ಲಿ ನಡೆದ ಜಾತಿಗಣತಿಯ ನಂತರ ಇದುವರೆಗು ಇಂಡಿಯಾದ ಯಾವ ರಾಜ್ಯದಲ್ಲು ಇಂತಹ ಗಣತಿಕಾರ್ಯ ನಡೆದಿರಲಿಲ್ಲ.
ಯಾವುದೇ ಜನಪರ ಸರಕಾರ ಇಂತಹ ಗಣತಿಯನ್ನು ನಡೆಸಲು ಮುಂದಾದಗೆಲ್ಲ,ಮೇಲ್ವರ್ಗಗಳು ಇದು ಸಮಾಜವನ್ನು ಒಡೆಯುವ ತಂತ್ರವೆಂದು ವಾದಿಸುತ್ತ ತಮ್ಮ ರಾಜಕೀಯ ಶಕ್ತಿಯ ಮೂಲಕ ಸರಕಾರಗಳನ್ನು ಬೆದರಿಸುತ್ತ ಜಾತಿಗಣತಿ ನಡೆಯದಂತೆ ನೋಡಿಕೊಂಡ ಇತಿಹಾಸ ನಮ್ಮಲ್ಲಿದೆ. ಈ ಬಾರಿಯೂ ಮೇಲ್ವರ್ಗಗಳ ವಿರೋಧದ ಕಾರಣದಿಂದಾಗಿಯೇ ಈ ಗಣತಿಯ ಕಾರ್ಯವನ್ನು ಸಾಮಾಜಿಕ, ಶೈಕ್ಷಣಿಕ,ಆರ್ಥಿಕ ಗಣತಿಯೆಂದು ಕರೆಯಬೇಕಾಯಿತು.
ಈ ಗಣತಿಯಿಂದ ತಳಸ್ಥರದವರು ಸ್ವರ್ಗವನ್ನೇನು ನಿರೀಕ್ಷಿಸಿರದಿದ್ದರೂ ಈ ರಾಜ್ಯದ ಜಾತಿವಾರು ಬಲಾಬಲಗಳನ್ನು ಸ್ಪಷ್ಟ ಅಂಕಿಸಂಖ್ಯೆಗಳಲ್ಲಿ ತಿಳಿಯಬಹುದು ಮತ್ತು ತಮ್ಮ ಸಂಖ್ಯೆಯನ್ನು ನಗಣ್ಯವಾಗಿಸಿ ತಮಗೆ ಸೂಕ್ತ ಪ್ರಾತಿನಿಧ್ಯ ನೀಡದ ಈ ವ್ಯವಸ್ಥೆಯಲ್ಲಿ ಒಂದಿಷ್ಟಾದರು ಬದಲಾವಣೆ ಉಂಟಾಗಬಹುದೆಂಬ ಆಸೆಯನ್ನಿಟ್ಟು ಕೊಂಡಿದ್ದರು. ಅವರಿಗೆ ಬೇಕಾಗಿದ್ದುದು ಯಾವ ಜಾತಿಗಳು ಎಷ್ಟು ಸಂಖ್ಯೆಯಲ್ಲಿವೆ ಎಂಬ ನೈಜ ಅಂಕಿಅಂಶಗಳಷ್ಟೆ. ಆದರೆ ನೈಜ ಅಂಕಿಅಂಶಗಳು ಹೊರಬಂದರೆ ತಮ್ಮ ರಾಜಕೀಯ ಅಸ್ಥಿತ್ವಕ್ಕೆಲ್ಲಿ ದಕ್ಕೆ ಬರುತ್ತದೆಯೊ ಎಂಬ ಆತಂಕದಲ್ಲಿದ್ದ ಮೇಲ್ವರ್ಗಗಳು ಗಣತಿಯ ಆರಂಭಕ್ಕೆ ಮೊದಲು, ಗಣತಿ ನಡೆಯುವಾಗ,ಗಣತಿ ಮುಗಿದ ನಂತರವೂ ಸರಕಾರದ ಕ್ರಮಗಳನ್ನು ವಿರೋಧಿಸುತ್ತಲೇ ಬಂದವು. ಇದೀಗ ಗಣತಿಯ ಕಾರ್ಯಮುಗಿದಿದ್ದು ಸರಕಾರ ಅಧಿಕೃತವಾಗಿ ಯಾವುದೇ ಅಂಕಿಅಂಶಗಳನ್ನು ಬಿಡುಗಡೆ ಮಾಡದೇ ಹೋದರೂ, ಹಲವು ಮೂಲಗಳಿಂದ ಸೋರಿಕೆಯಾದ ಮಾಹಿತಿಯನ್ನು ನೋಡುವುದಾದರೆ ಇದುವರೆಗು ನಾವು ನಂಬಿಕೊಂಡು ಬಂದಿದ್ದ ಮತ್ತು ಅದರ ಆಧಾರದ ಮೇಲೆ ನೀಡುತ್ತಿದ್ದ ಸಾಮಾಜಿಕ, ರಾಜಕೀಯ ಪ್ರಾತಿನಿಧ್ಯಗಳೆಲ್ಲ ದೊಡ್ಡ ಮೋಸವೆಂದು ಅರ್ಥವಾಗುತ್ತಿದೆ. ಈ ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ ಈ ರಾಜ್ಯದಲ್ಲಿ ಪರಿಶಿಷ್ಟಜಾತಿಗಳು 1.8ಕೋಟಿ, ಪರಿಶಿಷ್ಟವರ್ಗಗಳು 42ಲಕ್ಷ, ಮುಸ್ಲಿಮರು 75 ಲಕ್ಷ, ಲಿಂಗಾಯಿತರು 59 ಲಕ್ಷ, ಒಕ್ಕಲಿಗರು 49 ಲಕ್ಷ, ಕುರುಬರು 43 ಲಕ್ಷ, ಬ್ರಾಹ್ಮಣರು 13 ಲಕ್ಷ ಇದ್ದಾರೆಂಬುದು ತಿಳಿದುಬಂದಿದೆ. ಗಣತಿಯನ್ನು ಶತಾಯಗತಾಯ ವಿರೋಧಿಸಿದ ಮಾಧ್ಯಮಗಳೇ ಬಿಡುಗಡೆ ಮಾಡಿದ ಈ ಅಂಕಿ ಅಂಶಗಳನ್ನು ನೋಡಿದ ಸಮಾಜ ಒಂದು ಕ್ಷಣ ಬೆಚ್ಚಿಬಿದ್ದಿದ್ದು ನಿಜ. ಯಾಕೆಂದರೆ ಇದುವರೆಗು ನಾವು ನಂಬಿಕೊಂಡಿದ್ದ ಅಂಕಿ ಅಂಶಗಳೆಲ್ಲ ಬುಡಮೇಲಾಗಿದ್ದವು. ಇದುವರೆಗು ನಾವು ಈ ರಾಜ್ಯದ ಜನಸಂಖ್ಯೆಯಲ್ಲಿ ಲಿಂಗಾಯಿತರು ಮೊದಲ ಸ್ಥಾನದಲ್ಲಿಯು, ಒಕ್ಕಲಿಗರು ಎರಡನೇ ಸ್ಥಾನದಲ್ಲಿಯೂ ಇದ್ದಾರೆಂದು ಬಾವಿಸಿದ್ದೆವು. ಇದಕ್ಕೆ ತಕ್ಕಹಾಗೆ ನಮ್ಮ ರಾಜಕೀಯ ಪಕ್ಷಗಳು ಸಹ ಆ ಜಾತಿಗಳಿಗೆ ಹೆಚ್ಚಿನ ಪ್ರಾತಿನಿದ್ಯ ನೀಡುತ್ತ ಆ ಸಮುದಾಯಗಳನ್ನು ರಾಜಕೀಯವಾಗಿ ಬಲಿಷ್ಠಗೊಳಿಸುತ್ತ ಬಂದಿದ್ದವು. ಆದರೀಗ ಹೊರಬಿದ್ದಿರುವ ಅಂಕಿಅಂಶಗಳಿಂದ ಕಂಗಾಲಾಗಿರುವ ಮೇಲ್ವರ್ಗಗಳು ಹೇಗಾದರು ಮಾಡಿ ಈ ವರದಿಯನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿವೆ. ಇದಕ್ಕಾಗಿ ಸರಕಾರದ ಹೊರಗೆ ಮತ್ತು ಒಳಗಿರುವ ಮೇಲ್ವರ್ಗಗಳ ಶಕ್ತಿಗಳಿಂದ ಸರಕಾರದ ಮೇಲೆ ಒತ್ತಡ ಹಾಕುತ್ತಿವೆ.
ನಿಶ್ಚಿತವಾಗಿ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದೆಂದು ಸ್ವತ: ಮುಖ್ಯಮಂತ್ರಿಗಳೇ ಹೇಳಿದ್ದರೂ, ಇದುವರೆಗು ಅದರ ಬಗ್ಗೆ ಯಾವುದೇ ಸುಳಿವನ್ನೂ ಅವರು ನೀಡಿಲ್ಲ. ಪ್ರಾರಂಭದಲ್ಲಿ ಹುಟ್ಟು ಹೋರಾಟಗಾರರಂತೆ ಮಾತನಾಡುತ್ತಿದ್ದ ಸಮಾಜಕಲ್ಯಾಣ ಇಲಾಖೆಯ ಸಚಿವರಾದ ಆಂಜನೇಯರವರು ಸಹ ಇದೀಗ ಮೌನಕ್ಕೆ ಶರಣಾಗಿದ್ದಾರೆ. ಸರಕಾರದ ಸುಮಾರು 200 ಕೋಟಿಗಳನ್ನು ಖರ್ಚುಮಾಡಿ ತಯಾರಿಸಿದ ಒಂದು ವರದಿಯನ್ನು ದೂಳು ಹಿಡಿಸುತ್ತಿರುವ ಸರಕಾರದ ಈ ನಡೆ ಇದೀಗ ತಳಸ್ತರದ ಜನತೆಯಲ್ಲಿ ಅನುಮಾನದ ಅಲೆಗಳನ್ನು ಏಳಿಸಿದೆ. ಸರಕಾರ ಮೇಲ್ವರ್ಗಗಳ ಒತ್ತಡಗಳಿಗೆ ಮಣಿದಿದೆಯೆಂಬ ಅನುಮಾನ ಜನತೆಗೆ ಮೂಡಿದ್ದರೆ ಅದರಲ್ಲಿ ಜನತೆಯ ತಪ್ಪೇನು ಇಲ್ಲ. ಬದಲಿಗೆ ಈ ವರದಿಯನ್ನು ದೂಳು ಹಿಡಿಯಲು ಬಿಟ್ಟಿರುವ ಸರಕಾರವೇ ಇಂತಹ ಸಂಶಯ ಹುಟ್ಟಲು ಕಾರಣಕರ್ತವಾಗಿದೆ. ಮುಖ್ಯಮಂತ್ರಿಗಳಾಗಲಿ ಮತ್ತು ಸಚಿವ ಆಂಜನೇಯ ಅವರಾಗಲಿ, ಆಯೋಗದ ಅದ್ಯಕ್ಷರಾದ ಶ್ರೀ ಕಾಂತರಾಜು ಅವರಾಗಲಿ ಈ ಬಗ್ಗೆ ಮಾತಾಡುತ್ತಿಲ್ಲ. ಅಹಿಂದ ವರ್ಗಗಳ ಕಲ್ಯಾಣಕ್ಕಾಗಿ ಏನನ್ನು ಬೇಕಾದರು ಮಾಡಲು ಸಿದ್ದವೆಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯನವರ ಈ ಮೌನದ ಹಿಂದಿರುವ ನೈಜಕಾರಣವನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ.
ನಿಜಕ್ಕೂ ಸಿದ್ದರಾಮಯ್ಯನವರು ಮೇಲ್ವರ್ಗಗಳ ಒತ್ತಡ ಮತ್ತು ಬ್ಲಾಕ್ ಮೆಯಿಲ್ ತಂತ್ರಕ್ಕೆ ಮಣಿದು ಈ ವರದಿಯನ್ನು ದೂಳು ಹಿಡಿಸುತ್ತಿರುವುದು ನಿಜವೇ ಆಗಿದ್ದರೆ ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಅವರ ಪಕ್ಷದ ಮೇಲೆ ಆಗುವುದು ಖಚಿತ. ಅಹಿಂದ ವರ್ಗದ ಪರವೆಂದು ಬಿಂಬಿಸಿಕೊಂಡಿರುವ ಮುಖ್ಯಮಂತ್ರಿಗಳು ಈಗಲಾದರು ಇದನ್ನು ಅರ್ಥಮಾಡಿಕೊಂಡು ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಒಳ್ಳೆಯದು. ಹಾಗೆ ಮಾಡಿದಲ್ಲಿ ಮಾತ್ರ ಸಿದ್ದರಾಮಯ್ಯನವರು ಇಷ್ಟು ದಿನಗಳ ಕಾಲ ಮಾಡಿದ ಅಹಿಂದ ವರ್ಗಗಳ ಪರವಾದ ರಾಜಕಾರಣಕ್ಕೆ ನಿಜವಾದ ಅರ್ಥ ಬರುತ್ತದೆ.
No comments:
Post a Comment