ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಉತ್ತರ ಪ್ರದೇಶದ ರಾಜ್ಯವಿದಾನಸಭೆಗೆ 2017ರ ಪೂರ್ವಾರ್ದದಲ್ಲಿ ನಡೆಯಲಿರುವ ಚುನಾವಣೆಗಳಿಗಾಗಿ ಬಹುತೇಕ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ದತೆ ನಡೆಸುತ್ತಿದ್ದು,ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಬಹುದಾದ ವಿಷಯಗಳಿಗೆ ಪ್ರದಾನ್ಯತೆ ಕೊಡುತ್ತ ಚುನಾವಣೆಯ ಕಾವನ್ನು ಏರಿಸುತ್ತಿವೆ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಜನರ ಬಾವನಾತ್ಮಕ ವಿಷಯಗಳಿಗೇ ಹೆಚ್ಚು ಮಹತ್ವ ನೀಡುತ್ತ, ಜಾತಿ ಧರ್ಮಗಳ ನೆಲೆಯಲ್ಲಿಯೇ ಮತ ಪಡೆಯುವ ಹುನ್ನಾರ ನಡೆಸಿವೆ. ಉತ್ತರ ಪ್ರದೇಶದ ಮಟ್ಟಿಗೆ ಜಾತಿ ರಾಜಕಾರಣ ತೀರಾ ವಾಸ್ತವವಾಗಿದ್ದು, ಈಗಾಗಲೇ ಜಾತಿ ಸಮೀಕರಣಗಳ ಲೆಕ್ಕಾಚಾರಗಳು ಎಲ್ಲ ಪಕ್ಷಗಳ ಆಂತರೀಕ ವಲಯದಲ್ಲಿ ಮಹತ್ವ ಪಡೆಯುತ್ತಿವೆ.
ತಮ್ಮ ಚುನಾವಣಾ ಸಲಹೆಗಾರ ಪ್ರಶಾಂತ್ ಕಿಶೋರ್ ಸಲಹೆಯಂತೆ ಕಾಂಗ್ರೆಸ್ ಬ್ರಾಹ್ಮಣ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯ ಅಭ್ಯರ್ಥಿಯನ್ನಾಗಿಸಿದ್ದು, ಬ್ರಾಹ್ಮಣರ ಜೊತೆಗೆ ದಲಿತ ಮತ್ತು ಮುಸ್ಲಿಮರ ಮತ ಸೆಳೆಯುವ ಯೋಜನೆ ರೂಪಿಸಿದೆ. ಇನ್ನು ಸಮಾಜವಾದಿ ಪಕ್ಷವು ಎಂದಿನಂತೆ ಮುಸ್ಲಿಂ ಮತ್ತು ಯಾದವರನ್ನೊಳಗೊಂಡ ಹಿಂದುಳಿದ ವರ್ಗಗಳ ಮತಬ್ಯಾಂಕಿಗೆ ಕಣ್ಣು ಹಾಕಿದೆ. ಅದೇ ರೀತಿ ಬಹುಜನ ಪಕ್ಷವು ತನ್ನ ದಲಿತ ಮತಬ್ಯಾಂಕಿನ ಜೊತೆ,ಬ್ರಾಹ್ಮಣ ಮತದಾರರನ್ನು, ಹಾಗು ಸಮಾಜವಾದಿ ಪಕ್ಷದಿಂದ ದೂರ ಸರಿಯುತ್ತಿದ್ದಾರೆಂದು ಹೇಳಲಾಗುತ್ತಿರುವ ಮುಸ್ಲಿಂ ಮತದಾರರನ್ನು ತನ್ನತ್ತ ಸೆಳೆಯಲು ತಂತ್ರಗಾರಿಕೆ ಮಾಡುತ್ತಿದೆ. ಇನ್ನು ಕೇಂದ್ರದಲ್ಲಿರುವ ಬಾಜಪ ತನ್ನ ಸಾಂಪ್ರದಾಯಿಕ ಮೇಲ್ವರ್ಗಗಳ ಮತದಾರರ ಜೊತೆ ಬ್ರಾಹ್ಮಣರನ್ನು, ಮಾಯಾವತಿಯ ಕಾರ್ಯವೈಖರಿಯಿಂದ ಬೇಸತ್ತಿರಬಹುದಾದ ದಲಿತ ಮತದಾರರನ್ನು ಆಕಷರ್ಿಸಲು ಹರಸಾಹಸ ಮಾಡುತ್ತಿದೆ.ಹೀಗೆ ಎಲ್ಲ ರಾಜಕೀಯ ಪಕ್ಷಗಳೂ ಯಾವ ಸಂಕೋಚ ನಾಚಿಕೆಯಿರದೆ ಜಾತಿಗಳ ಸಮೀಕರಣಗಳನ್ನು ಲೆಕ್ಕ ಹಾಕುತ್ತ ಅದಕ್ಕೆ ತಕ್ಕಂತೆ ಟಿಕೇಟು ಹಂಚುವ ಮತ್ತು ಪ್ರಚಾರ ಕೈಗೊಳ್ಳುವ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿವೆ.
ಇವುಗಳ ನಡುವೆ ಇನ್ನೊಂದು ಅಪಾಯಕಾರಿ ಬೆಳವಣಿಗೆಯು ಸದ್ದಿರದೆ ನಡೆಯುತ್ತಿದೆ. ಅದೆಂದರೆ ವಿವಾದಿತ ಆಯೋದ್ಯೆಯ ಶ್ರೀರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣದ ವಿಷಯವೀಗ ಬಾಜಪಕ್ಕೆ ಸೀಮಿತವಾಗಿ ಉಳಿದಿಲ್ಲ. ಬದಲಿಗೆ ಬಾಜಪ ಈ ವಿಷಯವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದೆಂಬ ಆತಂಕದಿಂದ ಉತ್ತರಪ್ರದೇಶದ ಮುಖ್ಯಮಂತ್ರಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವರು ಸಹ ಇದರ ಬಗ್ಗೆ ತಮ್ಮದೇ ಆದ ಕೆಲವು ನಿರ್ದಾರಗಳನ್ನು ಪ್ರಕಟಿಸಿ ಹಿಂದೂ ಮತಬ್ಯಾಂಕನ್ನು ಒಂದಿಷ್ಟಾದರು ತನ್ನತ್ತ ಸೆಳೆಯುವ ತಂತ್ರಗಾರಿಕೆ ನಡೆಸಿದ್ದಾರೆ.ಇದರ ಬಗ್ಗೆ ಚರ್ಚಿಸುವುದಕ್ಕಿಂತ ಮೊದಲು ಈ ವಿಚಾರದಲ್ಲಿ ಬಾಜಪದ ನಿಲುವು ಮತ್ತು ನಡೆಗಳತ್ತ ಒಂದಿಷ್ಟು ಅವಲೋಕಿಸೋಣ:
2014ರಲ್ಲಿ ಬಾಜಪ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದನಂತರ ಬಾಜಪದ ಹಲವಾರು ನಾಯಕರುಗಳು ಪದೇಪದೇ ರಾಮಮಂದಿರ ನಿರ್ಮಾಣದ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ವಕ್ತಾರರಾದ ಶ್ರೀ ಶರದ್ಶರ್ಮರವರು 2017 ರ ಹೊತ್ತಿಗೆ ರಾಮ ಮಂದಿರ ನಿರ್ಮಾಣ ಮಾಡಿಯೇ ಸಿದ್ದ ಎಂದು 2016ರಲ್ಲಿಯೇ ಹೇಳಿಕೆ ನೀಡಿದ್ದರು ಇದಲ್ಲದೆ ಬಾಜಪದ ವಿವಾದಾಸ್ಪದ ನಾಯಕ ಶ್ರೀ ಸುಬ್ರಮಣ್ಯಸ್ವಾಮಿಯವರು ಸಹ ಮಂದಿರ ನಿರ್ಮಾಣ ಆಗಿಯೇ ತೀರುತ್ತದೆಯೆಂದು ದೆಹಲಿಯಲ್ಲಿ ಸಂಸತ್ತಿನ ಅಧಿವೇಶನ ನಡೆಯುವ ಸಂದರ್ಭದಲ್ಲಿಯೇ ಹೇಳಿದ್ದರು.ಇದರ ಬೆನ್ನಲ್ಲೇ 2016ರ ಮದ್ಯಭಾಗದಲ್ಲಿ ಅಯೋದ್ಯೆಯ ರಾಮಸೇವಕ ಪುರಕ್ಕೆ ರಾಷ್ಟ್ರದ ಹಲವು ಕಡೆಗಳಿಂದ ಶಿಲೆಗಳು ಬಂದಿಳಿದಿದ್ದು, ಶ್ರೀರಾಮ ಶಿಲಾನ್ಯಾಸ ಸಮಿತಿಯ ಅದ್ಯಕ್ಷರಾದ ಶ್ರೀ ನೃತ್ಯಗೋಪಾಲ್ ದಾಸ್ ಈ ಶಿಲೆಗಳಿಗೆ ಪೂಜೆಯನ್ನು ಸಲ್ಲಿಸಿ, ಇನ್ನೂ ಬಹಳಷ್ಟು ಶಿಲೆಗಳು ಸ್ಥಳಕ್ಕೆ ಬರಲಿದ್ದು ರಾಮಮಂದಿರ ನಿರ್ಮಾಣ ಆಗಿಯೇ ತೀರುತ್ತದೆ ಎಂದು ಘೋಷಿಸಿದ್ದರು.
ಹೀಗೆ ಪದೆಪದೆ ಬಾಜಪದ ನಾಯಕರುಗಳು ಮಂದಿರ ನಿರ್ಮಾಣದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತ ಸದರಿ ವಿವಾದ ಜನರ ಮನಸ್ಸಿನಿಂದ ಮರೆಯಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ. 2017ರ ವಿದಾನಸಭೆಯ ಚುನಾವಣೆ ನಡೆಯುವವರೆಗು ಮಂದಿರ ನಿರ್ಮಾಣದಂತಹ ವಿಷಯವನ್ನು ಜೀವಂತವಾಗಿಡುವುದೇ ಬಾಜಪದ ಉದ್ದೇಶವಾಗಿದೆ. ಇದು ಸಾಲದೆಂಬಂತೆ ಸಮಾಜವಾದಿ ಪಕ್ಷವೂ ಈ ವಿಷಯದಲ್ಲಿ ಮೂಗು ತೂರಿಸುತ್ತ ಹಿಂದು ಮತಬ್ಯಾಂಕಿನ ಒಂದಷ್ಟು ಪಾಲನ್ನು ತಾನೂ ಪಡೆಯುವ ಇರಾದೆ ತೋರಿಸುತ್ತಿದೆ.
ಇದರ ಒಂದು ಭಾಗವಾಗಿ ಕಳೆದ ತಿಂಗಳು ನಡೆದ ಉತ್ತರಪ್ರದೇಶದ ಸಚಿವ ಸಂಪುಟ ಸಭೆಯಲ್ಲಿ ಅಯೋದ್ಯೆಯಲ್ಲಿ 225 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ರಾಮಲೀಲಾ ಥೀಮ್ ಪಾರ್ಕನ್ನು ಸ್ಥಾಪಿಸುವ ಹಾಗು 151 ಕೋಟಿರೂಪಾಯಿಗಳ ವೆಚ್ಚದಲ್ಲಿ ರಾಮಾಯಣಕ್ಕೆ ಸಂಬಂದಿಸಿದ ಮ್ಯೂಸಿಯಂ ಒಂದನ್ನು ಸ್ಥಾಪಿಸುವ ಯೋಜನೆಗೆ ಮಂಜೂರಾತಿ ನೀಡಿದೆ.ಇಷ್ಟಲ್ಲದೆ ಈ ಥೀಮ್ ಪಾರ್ಕಿಗೆ ಉನ್ನತ ದರ್ಜೆಯ ಕೆಂಪುಕಲ್ಲನ್ನು ಬಳಸುವುದಾಗಿ ಸ್ವತ: ಮುಖ್ಯಮಂತ್ರಿಗಳಾದ ಶ್ರೀ ಅಖಿಲೇಶ್ ಯಾದವರು ಘೋಷಿಸಿ ರಾಮಮಂದಿರನಿರ್ಮಾಣದ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಇದರ ಹಿಂದೆ ಸಮಾಜವಾದಿ ಪಕ್ಷದ ಚುನಾವಣಾ ತಂತ್ರ ಇದೆ. ಯಾಕೆಂದರೆ ಕಳೆದ ಬಾರಿ ಒಂದು ಸಮುದಾಯವಾಗಿ ಮುಸ್ಲಿಂ ಮತದಾರರು ಸಮಾಜವಾದಿ ಪಕ್ಷಕ್ಕೆ ಮತ ಚಲಾಯಿಸಿ ಅದರ ಗೆಲುವಿಗೆ ಕಾರಣರಾಗಿದ್ದರು. ಉತ್ತರ ಪ್ರದೇಶದ ಮಟ್ಟಿಗೆ ಅಲ್ಪಸಂಖ್ಯಾತ ಸಮುದಾಯ ಯಾವತ್ತಿಗೂ ಬಾಜಪದ ವಿರುದ್ದ ನಕಾರಾತ್ಮಕ ಮತಗಳನ್ನು ಚಲಾಯಿಸುವ ರೂಡಿಯನ್ನು ಇಟ್ಟುಕೊಂಡಿದೆ. ಆದರೆ ಕಳೆದ ಬಾರಿ ಅಧಿಕಾರಕ್ಕೆ ಬಂದನಂತರ ಸಮಾಜವಾದಿ ಪಕ್ಷವು ಮುಸ್ಲಿಮರನ್ನು ನಿರ್ಲಕ್ಷಿಸಿತೆಂಬ ಬಾವನೆ ಇವತ್ತು ಅವರಲ್ಲಿ ಬಲವಾಗಿ ಬೆಳೆದು ನಿಂತಿದೆ. ಮುಜಾಫರ್ ನಗರದ ಕೋಮುಗಲಭೆಗಳ ನಂತರ ಮುಸ್ಲಿಮರಲ್ಲಿ ಇಂತಹದೊಂದು ಬಾವನೆ ಬಲಗೊಳ್ಳತೊಡಗಿತು. ಕಾರಣ ಗಲಭೆಗಳಾದ ಆರು ತಿಂಗಳವರೆಗು ಮುಖ್ಯಮಂತ್ರಿ ಅಖಿಲೇಶ್ ಯಾದವರಾಗಲಿ ಇಲ್ಲ ಮುಲಾಯಂಸಿಂಗ್ ಯಾದವರಾಗಲಿ ಮುಜಾಫರ್ ನಗರಕ್ಕೆ ಬೇಟಿ ನೀಡಿರಲಿಲ್ಲ. ಬಾಜಪಕ್ಕೆ ಅನುಕೂಲವಾಗುವ ರೀತಿಯಲ್ಲಿ ಸಮಾಜವಾದಿ ಪಕ್ಷ ನಡೆದುಕೊಳ್ಳುತ್ತಿದೆಯೆಂಬ ಬಾವನೆ ಮೂಡಿದ್ದೇ ಇದಕ್ಕೆ ಕಾರಣವಾಯಿತು.
ಆದರೆ ತಕ್ಷಣ ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಬಾಜಪದ ಸಂಸದ ಮತ್ತು ತೊಂಭತ್ತರ ದಶಕದ ಕಟ್ಟಾ ಹಿಂದೂ ಹೋರಾಟಗಾರರಾದ ಶ್ರೀ ವಿನಯ್ ಕತಿಯಾರ್ ಅವರು ಹಿಂದುಗಳಿಗೆ ಬೇಕಾಗಿರುವುದು ನಿಜವಾದ ರಾಮಮಂದಿರವೇ ಹೊರತು ಅಖಿಲೇಶ್ ನೀಡ ಹೊರಟಿರುವ ಥೀಮ್ ಪಾರ್ಕ ಎಂಬ ಲಾಲಿಪಾಪ್ ಅಲ್ಲ ಎಂದಿದ್ದಾರೆ.ಆದರೆ ಬಾಜಪದ ನಾಯಕರು ಉತ್ತರಪ್ರದೆಶದ ಚುನಾವಣೆಯು ಅಭಿವೃದ್ದಿಯ ಆಧಾರದಲ್ಲಿ ನಡೆಯಲಿದೆ ಎಂದಿದ್ದಾರೆಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತ, ಇರಬಹುದು ಆದರೆ ಅಭಿವೃದ್ದಿಯ ಜೊತೆಗೆ ಮಂದಿರ ನಿಮಾಣವೂ ನಮಗೆ ಮುಖ್ಯವಾಗಲಿದೆಯೆಂದು ಹೇಳುತ್ತ, ಲೋಕಸಭೆಯಲ್ಲಿ ಎನ.ಡಿ.ಎ. ಬಹುಮತ ಹೊಂದಿರುವುದರಿಂದ ಸರಕಾರ ಮಂದಿರ ನಿಮಾಣಕ್ಕೆ ಶಾಸನವೊಂದನ್ನು ಜಾರಿಗೊಳಿಸಬೇಕೆಂದು ಸಹ ಒತ್ತಾಯಿಸಿದರು. ಇದರೊಂದಿಗೆ ಈಗಾಗಲೇ ಕೇಂದ್ರ ಸರಕಾರವು 2016ರಲ್ಲಿಯೇ ಮ್ಯೂಸಿಯಂ ನಿಮಾಣಕ್ಕೆ ಅನುದಾನ ಒದಗಿಸಿರುವುದರಿಂದ ತಾವು ರಾಜ್ಯಸರಕಾರದಿಂದ ಇದರ ಬಗ್ಗೆ ನಿರೀಕ್ಷೆಯನ್ನೇನು ಇಟ್ಟುಕೊಂಡಿಲ್ಲವೆಂದೂ ತಿಳಿಸಿದರು.
ಒಟ್ಟಿನಲ್ಲಿ ಉತ್ತರಪ್ರದೇಶದಲ್ಲಿ ನಡೆಯಲಿರುವ 2017 ರ ರಾಜ್ಯವಿದಾನಸಭಾ ಚುನಾವಣೆಗಳು 2019ರ ಲೋಕಸಭಾ ಚುನಾವಣೆಗಳ ದೃಷ್ಠಿಯಿಂದ ಮಹತ್ವ ಪಡೆದುಕೊಂಡಿದ್ದು, ಯಥಾ ಪ್ರಕಾರ ರಾಜಕೀಯ ಪಕ್ಷಗಳು ಜನಪರ ಕಾರ್ಯಕ್ರಮಗಳ ಬದಲಿಗೆ ಜಾತಿ ಮತ್ತು ಧರ್ಮಗಳ ಆಧಾರದ ಮೇಲೆ ಸಮಾಜವನ್ನು ವಿಭಜಿಸುವು ರಾಜಕಾರಣ ಮಾಡುತ್ತಲೇ ಅದರ ಲಾಭ ಪಡೆಯಲು ಪ್ರಯತ್ನಿಸುತ್ತಿವೆ. ಇದರಲ್ಲಿ ಯಾವ ಪಕ್ಷವೂ ಹಿಂದೆ ಬಿದ್ದಿಲ್ಲ. ಉತ್ತರಪ್ರದೇಶದ ಮಟ್ಟಿಗೆ ಎಲ್ಲ ರಾಜಕೀಯ ಪಕ್ಷಗಳೂ ಜಾತಿಯನ್ನು, ಧರ್ಮವನ್ನು ತಮ್ಮ ದಾಳವನ್ನಾಗಿ ಬಳಸಿಕೊಳ್ಳಲು ಸಿದ್ದವಾಗಿ ನಿಂತಿವೆ.
No comments:
Post a Comment