Nov 6, 2016

ಬಾಲ್ಯವೆಂದರೆ…..!

ಕು.ಸ.ಮಧುಸೂದನ್
ಬಾಲ್ಯದ ಬಗ್ಗೆ ಬಹಳ ಜನ
ರೊಮ್ಯಾಂಟಿಕ್
ಆಗಿ ಮಾತಾಡುತ್ತಾರೆ
ನನ್ನ ಕೈಲಿ ಆಗೋದಿಲ್ಲ.

ಬಾಲ್ಯವನ್ನು ನೆನಪಿಸಿಕೊಳ್ಳುವುದೆಂದರೆ
ನನಗೆ
ಹಳೆ ಗಾಯದ ಕಲೆಗಳನ್ನು
ಅದರ ನೋವನ್ನು 
ನೆಕ್ಕಿದಂತಾಗುತ್ತದೆ.

ಬಾಲ್ಯದಲ್ಲಿ ಮನೆಯಲಿದ್ದವರು
ನಾನು
ಅಮ್ಮ
ಮತ್ತು ಅಜ್ಜಿ
ಅಪ್ಪ ಅಂದರೇನೆಂದು ಗೊತ್ತಿರಲಿಲ್ಲ
ಸ್ಕೂಲಿನ ರಿಜಿಸ್ಟರ್ ನಲ್ಲಿ ಅಂತಹದೊಂದು
ಹೆಸರಿತ್ತು
ಅಂತ ಮಾತ್ರ ಗೊತ್ತಿತ್ತು
ಅಮ್ಮ ಹಗಲಿಡೀ ಮನೆಯ ಹೊರಗೆ ದುಡಿಯುತಿದ್ದಳು
ಮನೆಯಲಿದ್ದ ಅಜ್ಜಿ
ಕೆಮ್ಮುತ್ತ
ನರಳುತ್ತ
ನಡುನಡುವೆ ನನ್ನ ಹುಟ್ಟನ್ನು ಶಪಿಸುತ್ತ
ಮುದ್ದಿಸುತ್ತ
ಅಡುಗೆ ಮಾಡುತ್ತಿತ್ತು

ನಾನು ದೊಡ್ಡವನಾಗುವವರೆಗೂ ಅವಳು ಅಮ್ಮನ ಅಮ್ಮನೊ ಅಪ್ಪನ ಅಮ್ಮನೊ
ಗೊತ್ತಿರಲಿಲ್ಲ!

ನಿತ್ಯ ಸ್ಕೂಲಿಗೆ ಹೋಗುವಾಗ
ಅವಮಾನವಾಗುವ ಆತಂಕ
ವರ್ಣಿಸಲಾಗದ ಭಯ
ಆದರೂ ಮದ್ಯಾಹ್ನ ಕೊಡುತ್ತಿದ್ದ ಅಮೇರಿಕಾ ರವೆಯ ಉಪ್ಪಿಟ್ಟಿನಾಸೆಗೆ
ಹೋಗುತ್ತಿದ್ದೆ.

ಸ್ಕೂಲಿನ ಮೇಸ್ಟ್ರು
ಬೇಕೆಂತಲೆ
ದಿನಾ ನನ್ನನ್ನು
ನೀನು ಯಾರ ಮಗನೊ ಅಂತ ಕೇಳುತ್ತಿದ್ದ:
ನಾನು ಅಮಾಯಕನಾಗಿ
ಅಮ್ಮನ ಹೆಸರು ಹೇಳುತ್ತಿದ್ದೆ
ಬಾಂಚೋದ್ ಅಪ್ಪನ ಹೆಸರು ಹೇಳೋ!
ಅವನಿಲ್ಲದೇ ಹುಟ್ಟಿದವನೇನೊ ನೀನು
ಅಂತ ಸೀಮೆ ಸುಣ್ಣದ ಚೂರನ್ನು
ನನ್ನತ್ತ ಎಸೆಯುತ್ತಿದ್ದ
ಮನುಷ್ಯನೊಬ್ಬ ಹುಟ್ಟಲು ಅಪ್ಪ ಅನ್ನುವ ಪ್ರಾಣಿಯೊಂದು
ಬೇಕು
ಅನ್ನುವ ಸತ್ಯದ ಸಾಕ್ಷಾತ್ಕಾರ ಮಾಡಿಸಿದ
ಮಹಾಗುರು ಅವನು!
ನನಗಿಂತ ದೊಡ್ಡ ಹುಡುಗರು
ಅಪ್ಪನಿಲ್ಲದೆ ಹುಟ್ಟಿದವನು
ಅಂತ ಅಣಕಿಸುತ್ತ
ರಸ್ತೆಯಲ್ಲಿ ಐಸ್ ಕ್ಯಾಂಡಿ ಮಾರುತ್ತಿದ್ದ ಸಾಬಿಯನ್ನು
ಸೀಬೆಹಣ್ಣು ಮಾರುತ್ತಿದ್ದ
ಮುದುಕನನ್ನು
ಕೊನೆಗೆ ಸ್ಕೂಲಿನ ಮುಂದೆ ಬಿಕ್ಷೆ ಬೇಡಿ ಮಲಗುತ್ತಿದ್ದ
ಕುಷ್ಠರೋಗಿಯನ್ನು
ತೋರಿಸಿ
ಇವನಾ ನಿಮ್ಮಪ್ಪ ಹೇಳು
ಅಂತ ಗೋಳು ಹುಯ್ದುಕೊಳ್ಳುತ್ತಿದ್ದರು
ಆಮೇಲಾಮೇಲೆ ನಾನು ಶಾಲೆಗೆ
ಹೋಗುವುದನ್ನೆ ಕಡಿಮೆ ಮಾಡಿದೆ.
ಮನೆ ಹತ್ತಿರ ಮಕ್ಕಳು
ಆಟ ಆಡುತ್ತಿದ್ದರೆ
ನಾನು ದೂರದಲ್ಲೆ ಕುಕ್ಕರಗಾಲಲ್ಲಿ ಕುಂತು
ಆಸೆಯಿಂದ ನೋಡುತ್ತಿದ್ದೆ
ನನ್ನಲ್ಲಿ ಗೋಲಿಗಳಾಗಲಿ,ಬುಗುರಿಗಳಾಗಲಿ ಇರಲಿಲ್ಲ
ಧೈರ್ಯ ಮಾಡಿ ಯಾವತ್ತಾದರೂ ನಾನೇ ಹತ್ತಿರ ಹೋದರೆ
ಅಲ್ಲೇ ಹರಟೆ ಹೊಡೆಯುತ್ತಿದ್ದ ಅವರ ಅಮ್ಮಂದಿರು
ಆಟಕ್ಕೆ ಆ ಬೇವರ್ಸಿಯನ್ನು ಸೇರಿಕೊಳ್ಳಬೇಡಿರೋ
ಅಂತ ಅರಚುತ್ತಿದ್ದರು
ಆಗೆಲ್ಲ ಅವರ ಮುಖಕ್ಕೆ ಉಗಿಯಬೇಕು ಅನ್ನಿಸುತ್ತಿತ್ತು
ಆದರೆ ಏನು ಮಾಡಲೂ ಸಾದ್ಯವಿರದ ಷಂಡತನದಲ್ಲಿ
ಮನೆಗೆ ಹೋಗಿ ಮುದುರಿ ಮಲಗುತ್ತಿದ್ದೆ

ಅವತ್ತು ನನ್ನಲ್ಲಿ ಹುಟ್ಟಿದ ಕೀಳರಿಮೆಯನ್ನು
ಅವಮಾನದ ಗಾಯಗಳನ್ನು
ತೊಳೆದುಕೊಳ್ಳಲು
ಇವತ್ತಿಗೂ ಸಾದ್ಯವಾಗಿಲ್ಲ
ಮೂರು ಜನ್ಮಕ್ಕಾಗುವಷ್ಟು ನೋವು ನೀಡಿದ
ಬಾಲ್ಯವನ್ನು ಮರೆಯಲು ಯತ್ನಿಸಿದಷ್ಟೂ ಅದು
ನೆನಪಾಗುತ್ತಲೇ ಇರುತ್ತದೆ
ಹಾಗಾಗಿ ಬಾಲ್ಯದ ಬಗ್ಗೆ ಮಾತಾಡುವವರನ್ನು ಕಂಡರೆ
ಅವರನ್ನು ಕೊಲ್ಲುವಷ್ಟು ಕೋಪ
ಬರುತ್ತದೆ!
( ಅಮ್ಮಂದಿರ ಮಕ್ಕಳಿಗೆ ಅರ್ಪಣೆ)

No comments:

Post a Comment