ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
1830ರ ಡಿಸೆಂಬರ್ 14ರಿಂದು 1831ರ ಜನವರಿ 10ರವರೆಗೆ ಶತ್ರುಗಳು ರೈತರಲ್ಲಿ ಭೀತಿಯನ್ನುಟ್ಟಿಸಲು ಪ್ರಚಾರ ನಡೆಸಿದರು. ಈ ಭೀತಿಯ ಪ್ರಚಾರವನ್ನು ರಾಜನ ಪ್ರವಾಸದ ಭಾಗವಾಗಿ ನಡೆಸಲಾಯಿತು; ಮೈಸೂರು, ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ತೊಂದರೆಗೀಡಾದ ಪ್ರದೇಶಗಳಿಗೆ ರಾಜ ಪ್ರವಾಸ ನಡೆಸುತ್ತಿದ್ದ.
ರಾಜನೊಂದಿಗೆ ಸಾವಿರ ಸೊವರ್ಗಳು, 200 ಮಂದಿ ಅಂಗರಕ್ಷಕರು ಮತ್ತು ಮೂರು ಬೆಟಾಲಿಯನ್ನಿನಷ್ಟು ಕಾಲಾಳು ಸೈನಿಕರಿದ್ದರು. ರೈತರನ್ನು ಸಂತೈಸುವುದು ಇದರ ಉದ್ದೇಶವಾಗಿತ್ತು, ಆದರೆ ವಾಸ್ತವದಲ್ಲಿ, ರೈತರು ಪ್ರತಿರೋಧಿಸುವ ಧೈರ್ಯವನ್ನೂ ಮಾಡಬಾರದೆಂಬ ನಿಟ್ಟಿನಲ್ಲಿ ನಡೆದ ಪ್ರಭುತ್ವದ ಶಕ್ತಿ ಪ್ರದರ್ಶನವಾಗಿತ್ತಿದು.
ಚೆನ್ನರಾಯಪಟ್ಟಣದಲ್ಲಿ ನಡೆದದ್ದರ ಬಗ್ಗೆ ಶ್ಯಾಮ ರಾವ್ ಹೇಳುತ್ತಾರೆ: “….ಚೆನ್ನರಾಯಪಟ್ಟಣದಲ್ಲಿ ಇಬ್ಬರನ್ನು ಹಾಗೂ ಕಿಕ್ಕೇರಿಯಲ್ಲಿ ಇಬ್ಬರನ್ನು (ಇದೀಗ ಮಂಡ್ಯ ಜಿಲ್ಲೆಯಲ್ಲಿದೆ) ಗಲ್ಲಿಗೇರಿಸುವುದಾಗಿ ಪ್ರಚಾರ ಮಾಡಲಾಯಿತು ಮತ್ತದೇ ರೀತಿ ಅವತ್ತೇ ಗಲ್ಲಿಗೇರಿಸಲಾಯಿತು. ಇದೇ ರೀತಿ ಹೊಳೆನರಸೀಪುರದಲ್ಲಿ ಇಬ್ಬರನ್ನು ಗಲ್ಲಿಗೇರಿಸುವುದಾಗಿ ತಿಳಿಸಲಾಗಿತ್ತು. ಆದರೆ ಅವರಲ್ಲೊಬ್ಬರನ್ನು ರೆಸೆಡೆಂಟರ ಮಾತಿನಿಂದಾಗಿ ಉಳಿಸಲಾಯಿತು ಮತ್ತು ಇನ್ನೊಬ್ಬನನ್ನು ಗಲ್ಲಿಗೇರಿಸಲಾಯಿತು. ಒಟ್ಟಾರೆಯಾಗಿ ಎಂಟರಿಂದ ಒಂಭತ್ತು ಜನರನ್ನು ವಿವಿಧ ಸ್ಥಳಗಳಲ್ಲಿ ಗಲ್ಲಿಗೇರಿಸಲಾಯಿತು, ಕೂಟ ಸೇರುವವರಿಗೆ ಅಥವಾ ದ್ರೋಹವೆಸಗುವ ಚಿಂತನೆಯಲ್ಲಿ ಜೊತೆಯಾಗುವವರಿಗೆ ಇದು ಎಚ್ಚರಿಕೆಯಾಗಿತ್ತು.” (104)
ಕೆ.ಆರ್ ಒಡೆಯರರ ಉಗ್ರ ಪ್ರವಾಸದ ಜೊತೆಜೊತೆಯಲ್ಲೇ, ನಗರದಲ್ಲಿ, ಕೃಷ್ಣರಾವ್ ಇದೇ ರೀತಿಯ ಪ್ರವಾಸ ನಡೆಸಿದ, ಇನ್ನೂ ಹೆಚ್ಚಿನ ತೀರ್ವತೆಯೊಂದಿಗೆ.
ಶಿವಮೊಗ್ಗದಿಂದ ಹೊನ್ನಾಳಿಗೆ ಹೋಗುತ್ತಿರುವಾಗ ಕೃಷ್ಣರಾವ್ 2,000 ರೈತರ ಪ್ರತಿಭಟನೆಯನ್ನು ಕಂಡ, ಅವರು ಚೆನ್ನಗಿರಿಗೆ ಹೋಗುತ್ತಿದ್ದರು, ಅಮಲ್ದಾರನನ್ನು ಶರಣಾಗಿಸಲು. ಫೌಜುದಾರ ತನ್ನ ಪಡೆಗಳಿಗೆ ಗುಂಡಾರಿಸಲು ಆದೇಶಿಸಿದ, ಮುನ್ನೂರು ಮಂದಿಗೆ ಗಾಯಗಳಾದವು. (105)
ಮತ್ತೆ ಉಡ್ಗನಿಯಲ್ಲಿ, ಫೌಜುದಾರ 40 ಮಂದಿ ರೈತರನ್ನು ಬಂಧಿಸಿದ. ಅವರಲ್ಲಿ ಒಬ್ಬನನ್ನು ನೇಣಿಗೇರಿಸಿದರು ಮತ್ತು ಉಳಿದವರನ್ನು ಬಿಡುಗಡೆಗೆ ಮುನ್ನ ಅಂಗವಿಹೀನರನ್ನಾಗಿಸಿದರು.
1831ರ ಮೊದಲಿನಲ್ಲಿ, ನಗರದ 24 ಶ್ರೀಮಂತ ರೈತರು, ಗವರ್ನರ್ ಜೆನರಲ್ಲಿಗೊಂದು ಪತ್ರ ಕಳುಹಿಸುತ್ತಾರೆ. ಅದರಲ್ಲವರು ಕೃಷ್ಣಾ ರಾವ್ ನಡೆಸಿದ ಅನಾಚಾರಗಳ ಬಗ್ಗೆ ಬರೆಯುತ್ತಾರೆ.
“ಒಂಭತ್ತು ಲಕ್ಷ (ಪಗೋಡಾಗಳನ್ನು) ಉತ್ಪಾದಿಸುವ ನಗರ ದೇಶದ ತಾಲ್ಲೂಕುಗಳಿಗೆ ಸೇರಿದ ರೈತರ ವಿನಮ್ರ ಮನವಿಯಿದು.
1840ಫಸ್ಲಿ ಜನವರಿ 19…..
ಕೆಳದಿ ಶಿವಪ್ಪ ನಾಯಕನ ಕುಟುಂಬದ ಆಳ್ವಿಕೆಯಲ್ಲಿದ್ದಾಗ, ಮತ್ತು ನವಾಬ್ ಬಹದ್ದೂರ್ ಟಿಪ್ಪೂವಿನ ಆಳ್ವಿಕೆಯಲ್ಲಿದ್ದಾಗ, ನಾವು ಸಂತಸದಿಂದಿದ್ದೆವು. ಕಂಪನಿ ಸರಕಾರ ಈ ದೇಶವನ್ನು ವಶಪಡಿಸಿಕೊಂಡಾಗ, ಇದನ್ನು ಮುಂಚಿದ್ದ ನಗರದ ರಾಜನ ಕುಟುಂಬಕ್ಕೆ ಒಪ್ಪಿಸದೆ, ಮೈಸೂರು ರಾಜನ ಆಳ್ವಿಕೆಗೆ ಸೇರಿಸಿಬಿಟ್ಟರು; ನಮ್ಮ ದೇಶದ ಪರಿಸ್ಥಿತಿ ಬಗ್ಗೆ ಕನಿಷ್ಟ ಮಟ್ಟದಲ್ಲೂ ವಿಚಾರಿಸದೆ ನಮ್ಮನ್ನಾಳಲು ಫೌಜುದಾರನನ್ನು ನೇಮಿಸಿಬಿಟ್ಟರು. ಈ ಫೌಜುದಾರ, ಕಂದಾಯ ವ್ಯವಹಾರಗಳನ್ನು ಅರ್ಥೈಸಿಕೊಳ್ಳದೇ, ತನಗೆ ಅನುಕೂಲವಾಗುವಂತದ್ದನ್ನು ಮಾತ್ರ ಮಾಡಿಕೊಳ್ಳುತ್ತ ಬಲವಂತದಿಂದ ಈ ಸರಕಾರಿ ಕಂದಾಯ ಪತ್ರಕ್ಕೆ ನಮ್ಮಿಂದ ಸಹಿ ಹಾಕಿಸಿಕೊಳ್ಳುತ್ತಿದ್ದಾನೆ, ಮತ್ತು ಹಣ ಸಂಗ್ರಹಿಸುತ್ತಿದ್ದಾನೆ. ಕಂದಾಯ ಕಟ್ಟುವುದು ನಿಗದಿತ ದಿನಾಂಕಕ್ಕಿಂತ ಒಂದೆರಡು ದಿನ ತಡವಾಗಿಬಿಟ್ಟರೆ, ಲಂಚ ಕೊಡುವಂತೆ ನಮಗೆ ಕಿರುಕುಳ ನೀಡಲಾಗುತ್ತದೆ, ಮತ್ತಿದೆಲ್ಲದರ ಜೊತೆಗೆ, ಹಳ್ಳಿಗಳಲ್ಲಿ ಉಳಿದಿರುವ ನಮ್ಮಂತವರನ್ನು, ಊರಿನಲ್ಲಿರುವ ಖರಾಬು ಭೂಮಿ, ಬಾಕಿ ಉಳಿಸಿಕೊಂಡ ಬಡವರ ಹಣ ಮತ್ತು ಓಡಿಹೋದ ರೈತರ ಹಣವನ್ನು ಕಟ್ಟುವಂತೆ ಮಾಡಿಬಿಟ್ಟರು. ಫೌಜುದಾರನ ಈ ದಬ್ಬಾಳಿಕೆಯಿಂದ ಸಾಯುವಷ್ಟು ಬೇಸರವಾಗಿದ್ದ ಕಾರಣದಿಂದ, ಸೆಪ್ಟೆಂಬರ್ ಕೊನೆಯಿಂದ ಡಿಸೆಂಬರ್ ಕೊನೆಯವರೆಗೆ ರಾಜನಿಗೆ ಹಲವು ಅರ್ಜಿಗಳನ್ನು ಕೊಟ್ಟಿದ್ದೆವು, ಈ ವಿಷಯಗಳ ಬಗ್ಗೆ ತನಿಖೆ ನಡೆಸಬೇಕೆಂಬ ನಮ್ಮ ಕೋರಿಕೆಗೆ ರಾಜ ಯಾವುದೇ ಆಸಕ್ತಿ ತೋರಿಸಲಿಲ್ಲ. ಇದಾದ ನಂತರ ಫೌಜುದಾರ ಕೃಷ್ಣ ರಾವ್, ಸಮಾಧಾನ ಪಡಿಸುವೆಂಬ ನೆಪದಲ್ಲಿ ಹೊಳೆ ಹೊನ್ನೂರಿನ ಕೆಲವು ರೈತರನ್ನು ಕರೆಸಿಕೊಂಡ, ತನ್ನನ್ನು ನಂಬಬಹುದೆಂದು ಹೇಳಿದ, ರೈತರನ್ನು ಕೋಟೆಯೊಳಗೆ ಕರೆದುಕೊಂಡು ಹೋಗಿ, 500 ಜನರನ್ನು ಸಾಯಿಸಿಬಿಟ್ಟ, ಕೆಲವರನ್ನು ಗಾಯಗೊಳಿಸಿದ, ಗಾಯಗೊಂಡವರನ್ನು ದೊಡ್ಡ ಕಲ್ಲಿಗೆ ಕಟ್ಟಿ ಆಳವಾದ ಕೆರೆಗೆ ಎಸೆದುಬಿಡಿ ಎಂದು ಆದೇಶಿಸಿದ. ಈ ಭಯಾನಕ ದೃಶ್ಯಗಳನ್ನು ನೋಡಿದ ನಾವು, ಕಾಡಿಗೆ ಓಡಿ ಹೋದೆವು. ಇದಾದ ನಂತರ ನಗರವನ್ನಾಳಿದ ಕೆಳದಿ ರಾಜರ ಕುಟುಂಬಕ್ಕೆ ಸೇರಿದ ಸೋಮಶೇಖರ ನಾಯಕರಿಗೆ ಈ ವಿಷಯ ತಲುಪಿ ಅವರು ನಗರಕ್ಕೆ ಬಂದರು. ತಮ್ಮ ಸಾಮ್ರಾಜ್ಯವನ್ನು ಮರಳಿ ಪಡೆಯಲೋಸುಗ, ಕಂಪನಿ ಸರಕಾರ ಕೊಟ್ಟಿದ್ದ ಆದೇಶಗಳನ್ನು ತೋರಿಸಿದರು. ನಾವು ಅವರನ್ನು ಸೇರಿ ಅವರ ರಕ್ಷಣೆಯಲ್ಲಿ ಜೀವಿಸುತ್ತಿದ್ದೆವು. ಫೌಜುದಾರ ಕೃಷ್ಣ ರಾವ್ ಮತ್ತವನ ಅಳಿಯ ಶ್ರೀನಿವಾಸ ರಾವ್ ಕೆಲವು ಸೈನಿಕರು ಮತ್ತು ಅಶ್ವಾರೋಹಿ ಪಡೆಗಳನ್ನು ಸೇರಿಸಿಕೊಂಡು ಇಲ್ಲಿಗೆ ಬಂದರು, ಮುತ್ತಿಗೆ ಹಾಕಿದರು, ರೈತರನ್ನು ನೇಣಿಗೇರಿಸಿದರು, ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದರು ಮತ್ತು ಮಹಿಳೆಯರ ಹಾಗೂ ಅವರ ಮಕ್ಕಳ ಕಿವಿ ಮೂಗುಗಳನ್ನು ಕತ್ತರಿಸಿ ಹಾಕಿದರು, ಅವರ ಮನೆಗಳನ್ನು ದೋಚಿ ಬೆಂಕಿ ಹಚ್ಚಿದರು. ಈ ರೀತಿಯಾಗಿ ಹಲವು ತಾಲ್ಲೂಕುಗಳನ್ನು ನಾಶಪಡಿಸಿ, ಸೊಮಶೆ (?) ತಾಲ್ಲೂಕಿನ ಕೋಟೆಗೆ ಬಂದರು, ಇಲ್ಲಿ ನಮ್ಮ ರಾಜನ ಪಡೆಗಳು, ಅವರಿಗೆದುರಾಗಿ ಹೋರಾಡಿದರು. ಫೌಜುದಾರ ಕೃಷ್ಣಾರಾವ್ ಅನಂತಪುರದಲ್ಲಿ ಕೆಲವು ಪಡೆಗಳನ್ನು ಹೊಂದಿಸಿಕೊಂಡಿದ್ದ, ಅವರ ಸಹಾಯದಿಂದ ಮರಾಮೋಸದಿಂದ ಲೂಟಿ ಮಾಡಿ ರೈತರ ಮನೆಗಳಿಗೆ ಬೆಂಕಿ ಹಚ್ಚಿದ. ಈ ಮರಾಮೋಸಕ್ಕೆದುರಾಗಿ ನಮ್ಮ ಜೀವವನ್ನುಳಿಸಿಕೊಳ್ಳುವ ಯಾವ ದಾರಿಯೂ ಇಲ್ಲ – ಕಂಪನಿಯು ನಮ್ಮ ದೇಶವನ್ನು ಮೈಸೂರಿನ ರಾಜರಿಗೆ ಕೊಟ್ಟ ನಂತರ, ಆತ ಯಾವತ್ತಿಗೂ ನಮ್ಮ ಪರಿಸ್ಥಿತಿಗಳ ಬಗ್ಗೆ ವಿಚಾರಿಸಲಿಲ್ಲ, ಆದರೆ ನಾವು ಮೇಲೆ ತಿಳಿಸಿದಂತೆ ನಡೆದುಕೊಂಡರು. 9 ಲಕ್ಷ ಉತ್ಪಾದಿಸುವ ದೇಶದಲ್ಲಿ ವಾಸಿಸುತ್ತಿರುವ ರೈತರ ಮುಂದೆ ಸಾವಿನ ಹೊರತಾಗಿ ಬೇರೇನೂ ಇಲ್ಲ, ಹಾಗಾಗಿ ನಾವು ಮೈಸೂರು ರಾಜರ ಪ್ರಜೆಗಳಾಗಿರುವುದು ಯಾವುದೇ ರೀತಿಯಿಂದಲೂ ಸಾಧ್ಯವಿಲ್ಲ. ನಾವು ಹೇಳಿದ್ದೆಲ್ಲವನ್ನು ನಿಮ್ಮ ದಯಾಮಯಿ ಸರಕಾರ ಗಣನೆಗೆ ತೆಗೆದುಕೊಂಡು, ಶೀಘ್ರವಾಗಿ ನಮಗೆ ಪರಿಹಾರ ಮತ್ತು ರಕ್ಷಣೆಯನ್ನು ಕೊಡಬೇಕು”. (106)
ರಾಜ ಅಥವಾ ಕೃಷ್ಣ ರಾವ್ ನಡೆಸಿದ ಉಗ್ರತೆಯೆಲ್ಲವೂ ಬ್ರಿಟೀಷ್ ವಸಾಹತುಶಾಹಿಯ ನೀತಿ – ನಿರ್ಧಾರಗಳ ಪರಿಣಾಮದಿಂದಾಗಿತ್ತು ಎನ್ನುವ ಅಂಶ ಆಗ ರೈತರಿಗಿನ್ನೂ ತಿಳಿದಿರಲಿಲ್ಲ.
1831ರ ಮೇ 16ರ ಪತ್ರದಲ್ಲಿ ಹಂಗಾಮಿ ಮುಖ್ಯ ಕಾರ್ಯದರ್ಶಿ ಗವರ್ನರ್ ಜೆನರಲ್ ಗೆ ಬರೆದ ಪತ್ರದಲ್ಲಿ: “ಉತ್ತರದ ಜಿಲ್ಲೆಗಳೀಗಾಗಲೇ ಬೆಂಕಿಯಲ್ಲಿವೆ, ಕಂಪನಿಯ ಕೆನರಾ, ಬಿಳಗಿ ಹಾಗೂ ಸೂಂಡಾ ಜಿಲ್ಲೆಗಳಿಗೂ ಹಬ್ಬುತ್ತದೆ. ದೃಡ ನಿರ್ಧಾರಗಳನ್ನು ಆದಷ್ಟು ಶೀಘ್ರವಾಗಿ ಅಳವಡಿಸಿಕೊಳ್ಳದಿದ್ದರೆ, ಈ ಪಾಪ ಕಾರ್ಯಗಳು ಪ್ರತಿದಿನವೂ ವ್ಯಾಪಿಸುವ ನಿರೀಕ್ಷೆಯಿದೆ”. (107)
ಹಂಗಾಮಿ ಮುಖ್ಯ ಕಾರ್ಯದರ್ಶಿ ಮೈಸೂರಿನ ರೆಸೆಡೆಂಟನಾಗಿದ್ದ ಕಾಸಾಮೈಯೂರ್ 1830 ಡಿಸೆಂಬರ್ ಕೊನೆಯಿಂದ 1831ರ ಜನವರಿ ಮೊದಲ ಭಾಗದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ದೃಡಪಡಿಸುತ್ತಿದ್ದನಷ್ಟೇ. ರಾಜ ಪ್ರವಾಸ ಅರ್ಧದಷ್ಟು ಸಾಗಿದ್ದಾಗ, ಕಾಸಾಮೈಯೂರ್ ಆತನಿಗೆ ಸ್ಪಷ್ಟ ಸೂಚನೆಗಳನ್ನು ಕಳುಹಿಸಿದ ಮತ್ತು ಕೈಗೊಂಬೆ ರಾಜ ಅದನ್ನು ಚಾಚೂ ತಪ್ಪದೆ ಪಾಲಿಸಿದ: “…ನೇಣಿಗಾಕುವುದು, ಛಾಟಿ ಏಟು, ದಂಡ ಮತ್ತು ಬಂಧನದಂತಹ ತೀರ್ವ ಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ ದಂಗೆಯು ಕಂಪನಿಯ ಪ್ರಾಂತ್ಯಗಳಿಗೂ ಹಬ್ಬಿಬಿಡಬಹುದು ಎನ್ನುವುದು ರೆಸಿಡೆಂಟರ ಅಭಿಪ್ರಾಯವಾಗಿದೆ; ಹಾಗಾಗಿ ನಿರ್ಣಾಯಕವಾಗಿ ಕೆಲಸ ಮಾಡುವುದು ಅವಶ್ಯಕವಾಗಿದೆ”. (108)
1831ರ ಜನವರಿ 5ರಂದು ಮುಖ್ಯ ಕಾರ್ಯದರ್ಶಿ ಫೋರ್ಟ್ ವಿಲಿಯಮ್ಮಿಗೆ ಬರೆದ ಪತ್ರದಲ್ಲಿ ಕಾಸಾಮೈಯೂರ್: “….ಮತ್ತಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದು ಶಾಂತಿಗೆ ಮಾರಕವಾಗಹುದೆಂದನ್ನಿಸುತ್ತದೆ”. (109)
ಉಗ್ರತೆಯನ್ನು ಛೂ ಬಿಟ್ಟ ಕಾಸಾಮೈಯೂರ್ ಯುದ್ಧಕ್ಕೆ ತಯಾರಾಗುತ್ತಿದ್ದ.
(ii) ಯುದ್ಧವನ್ನಾರಂಭಿಸಿದ ಬ್ರಿಟೀಷ್ ರಾಜ್
ಕಾಸಾಮೈಯೂರ್ ಹಾಗೂ ವಸಾಹತುಶಾಹಿ ಮೈಸೂರಿನ ರಾಜನ ಉಗ್ರ ಪ್ರವಾಸದಿಂದ ಸಂತೃಪ್ತರಾಗಿರಲಿಲ್ಲ. ಅವರು ರೈತರನ್ನು ಸಂಪೂರ್ಣವಾಗಿ ದಮನಿಸಲು ನಿರ್ಧರಿಸಿದ್ದರು, ನಾಶಪಡಿಸಿ ತಮ್ಮ ಹೊಸ ಅಧಿಕಾರವನ್ನು ಮರಳಿಗಳಿಸಲು ನಿರ್ಧರಿಸಿದ್ದರು. ಹಾಗಾಗಿ ಅಘೋಷಿತ ಯುದ್ಧವೊಂದು ಪ್ರಾರಂಭವಾಯಿತು. ಈ ಯುದ್ಧವು ವಸಾಹತುಶಾಹಿ ಕರ್ನಾಟಕದ ಜನತೆಯ ಮುಂದೆ ಬೆತ್ತಲಾಗುವಂತೆ ಮಾಡಿತು.
ಮೂರು ಪ್ರಮುಖ ರೀತಿಯಲ್ಲಿ ಈ ರಕ್ತದಾಹಿ ಯುದ್ಧವನ್ನು ನಡೆಸಲಾಯಿತು. ಮೊದಲ ಪ್ರತಿಗಾಮಿ ಸೈನಿಕ ಕಾರ್ಯಾಚರಣೆಯು 1831ರ ಜನವರಿಯಿಂದ 1831ರ ಜೂನ್ ತಿಂಗಳಿನವರೆಗೆ ನಡೆಯಿತು. ಎರಡನೆ ಕಾರ್ಯಾಚರಣೆ 1831ರ ಅಕ್ಟೋಬರಿನಲ್ಲಿ ಶುರುವಾಗಿ 1832ರ ಜೂನಿನಲ್ಲಿ ಮುಂಗಾರು ಪ್ರಾರಂಭವಾಗುವುದಕ್ಕೆ ಮುಂಚೆ ಕೊನೆಗೊಂಡಿತು. ಮೂರನೇ ಕಾರ್ಯಾಚರಣೆ 1832ರ ಸೆಪ್ಟೆಂಬರಿನಲ್ಲಿ ಶುರುವಾಗಿ 1833ರ ಮೇ ತಿಂಗಳಿನಲ್ಲಿ ಅಂತ್ಯವಾಯಿತು, ಮಲೆನಾಡನ್ನು ರಕ್ತದಲ್ಲಿ ತೋಯಿಸಿತು ಮತ್ತು ಪೂರ್ವಾಭಿಮುಖವಾಗಿ ಹರಿಯುವ ನದಿಯ ನೀರುಗಳೆಲ್ಲ ಕೆಂಪಾಯಿತು.
ಮೊದಲ ಕಾರ್ಯಾಚರಣೆಯಲ್ಲಿ, ಅಣ್ಣಪ್ಪ ಮತ್ತು ಲೆಫ್ಟಿನೆಂಟ್ ಕೊಲೊನಲ್ ರೊಚ್ ಫೋರ್ಟ್ ನೇತೃತ್ವದ ಮೈಸೂರಿನ ಎರಡು ದಳಗಳ ಜೊತೆಗೆ, ಲೆಫ್ಟಿನೆಂಟ್ ಕೊಲೊನಲ್ ವೊಲ್ಫೆ ನೇತೃತ್ವದಲ್ಲಿ ಹರಿಹರದಲ್ಲಿದ್ದ ಮತ್ತೊಂದು ದಳವನ್ನೂ ಕರೆಸಿಕೊಳ್ಳಲಾಯಿತು. ಏಪ್ರಿಲ್ಲಿನಲ್ಲಿ, ಕೊಲೊನಲ್ ಇವಾನ್ಸ್ ನೇತೃತ್ವದಲ್ಲಿದ್ದ ಮತ್ತೊಂದು ದಳವನ್ನು ಬೆಂಗಳೂರಿನಿಂದ ಕರೆಸಿಕೊಳ್ಳಲಾಯಿತು. ಹತ್ತಿರತ್ತಿರ 4000 ಸೈನಿಕರನ್ನು ಸೇರಿಸಲಾಯಿತು. ಕೆಲವೊಮ್ಮೆ ಈ ದಳಗಳು ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸಿದರೆ, ಕೆಲವೊಮ್ಮೆ ಒಟ್ಟಾಗಿ ರೆಸೆಡೆಂಟನ ಆದೇಶದನ್ವಯ ಕಾರ್ಯನಿರ್ವಹಿಸುತ್ತಿದ್ದವು. ದೂತರ ಮೂಲಕ ಮಾಹಿತಿಯನ್ನು ರವಾನಿಸಿ ರೆಸೆಡೆಂಟ್ ಇಡೀ ಯುದ್ಧವನ್ನು ನಿರ್ದೇಶಿಸುತ್ತಿದ್ದ.
ಮೊದಲ ಕಾರ್ಯಾಚರಣೆಯಲ್ಲಿ ವಸಾಹತು ಮತ್ತು ಕೈಗೊಂಬೆ ರಾಜ್ಯನ ಪಡೆಗಳು ಕಮನದುರ್ಗ, ತರಿಕೆರೆ, ಹೊನ್ನಾಳಿ, ಶಿಕಾರಿಪುರ, ಮಸೂರು, ಹರಿಹರ, ನಗರ, ಫತೇಪೇಟೆ, ಆನಂದಪುರ, ಸಾಗರ, ಚಂದ್ರಗುತ್ತಿ, ಮಂಡಗದ್ದೆ ಮತ್ತು ಇತರೆ ಪ್ರದೇಶಗಳಿಗೆ ತೆರಳಿದರು.
ಎರಡನೇ ಕಾರ್ಯಾಚರಣೆಯಲ್ಲಿ, 15000 ಸೈನಿಕರನ್ನು ಸೇರಿಸಲಾಗಿತ್ತು; ಬ್ರಿಟೀಷ್ ಕಮ್ಯಾಂಡರ್ರಿನಡಿಯಲ್ಲಿ ಐದು ಪಡೆಗಳಾಗಿ ಅವರನ್ನು ಸಂಘಟಿಸಿದ್ದರು, ಮೈಸೂರಿನ ಅಣ್ಣಪ್ಪ ಈ ಪಡೆಯ ಮುಂಚೂಣಿಯಲ್ಲಿದ್ದ.
ಮೂರನೇ ಕಾರ್ಯಾಚರಣೆಯ ಬಗ್ಗೆ ನಮ್ಮಲ್ಲಿರುವ ಮಾಹಿತಿ ತುಂಬಾ ಕಡಿಮೆ, ಕೊನೆಯ ಸಾರಿಸುವಿಕೆಯನ್ನಿದು ಮಾಡಿತ್ತು. ಅಪಾರ ಸಂಖೈ ರೈತರನ್ನು ನೇಣಿಗೇರಿಸಲಾಗುತ್ತಿತ್ತು; ಮೂರು ವರುಷಗಳ ಕಾಲ ನಡೆದ ಯುದ್ಧವನ್ನು ಮುಕ್ತಾಯಗೊಳಿಸಿತು ಮತ್ತು ಸಾವಿರಾರು ಪುರುಷ ಮಹಿಳೆಯರ ಜೀವವನ್ನು ತೆಗೆದುಕೊಂಡಿತು.
ಹಾಗಿದ್ದೂ, ಈ ಯುದ್ಧ ಏಕಮುಖಿಯಾಗಿರಲಿಲ್ಲ. ಶತ್ರುಗಳ ಮೊದಲ ಗುಂಡು ಹಾರುತ್ತಿದ್ದಂತೆಯೇ ರೈತ ಕಾರ್ಮಿಕರು ಪ್ರತಿರೋಧವನ್ನಾರಂಭಿಸಿದರು ಮತ್ತು ಪ್ರತಿಗಾಮಿಗಳಿಗೆ ಧೀರೋದ್ಧಾತ ಪ್ರತಿಕ್ರಿಯೆ ನೀಡುವುದಕ್ಕೆ ಸಮಯ ವ್ಯರ್ಥ ಮಾಡಲಿಲ್ಲ. ಈ ರೀತಿ ಮಾಡುವುದರೊಂದಿಗೆ, ರೈತರ ಹೋರಾಟವು ಒಂದು ಗಟ್ಟಿ ರೂಪವನ್ನು ಪಡೆದುಕೊಳ್ಳಲಾರಂಭಿಸಿತ್ತು ಮತ್ತು ಜನ ಸಮೂಹದ ಸೈನಿಕ ಸೃಜನಶೀಲತೆಯು ಪೂರ್ಣಪ್ರಮಾಣದ ಗೆರಿಲ್ಲಾ ಯುದ್ಧವನ್ನು ಹೊರಹೊಮ್ಮಿಸಿತು.
ಮುಂದಿನ ವಾರ: ಮೂರನೇ ಅಲೆ: ರೈತರ ಗೆರಿಲ್ಲಾ ಯುದ್ಧ
No comments:
Post a Comment