ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಈ. ರೈತರ ವರ್ಗ ಬೇಡಿಕೆಗಳು
ಬುಡಿ ಬಸಪ್ಪ 1830ರಲ್ಲಿ ನಗರದ ಅನೇಕ ಭಾಗಗಳಲ್ಲಿ ಪ್ರವಾಸ ಮಾಡಿದ್ದ. ತನ್ನ ಪ್ರತಿನಿಧಿಯಾಗಿ ಮಾನಪ್ಪನನ್ನು ನೇಮಿಸಿದ್ದ. ಮಾನಪ್ಪನನ್ನು ಬುಡಿ ಬಸಪ್ಪನ “ಪ್ರಧಾನ ದಂಡನಾಯಕ”ನೆಂದೂ ಕರೆಯಲಾಗುತ್ತಿತ್ತು. (96)
ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪದ ಹೊಸಂತೆ ಗ್ರಾಮದಲ್ಲಿ 1830ರ ಆಗಷ್ಟ್ 23ರಂದು ರ್ಯಾಲಿಗೆ ಕರೆ ನೀಡಲಾಗಿತ್ತು. ಸಾವಿರಾರು ರೈತರು ಅದರಲ್ಲಿ ಭಾಗವಹಿಸಿದರು. ನೂರಾರು ಎತ್ತಿನಗಾಡಿಗಳು ಹೊಸಂತೆಯ ಮೈದಾನವನ್ನು ತುಂಬಿದವು ಎಂದು ರಾಮಭಟ್ಟ ಬರೆಯುತ್ತಾರೆ. ರೈತರು ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳಿಂದಲೂ ಬಂದಿದ್ದರು.
ಈ ಬೃಹತ್ ಪ್ರದರ್ಶನದಲ್ಲಿ ಅವಿರೋಧವಾಗಿ ಹಕ್ಕುಪತ್ರ ಮಂಡಿಸಲಾಯಿತು. ಅದರಲ್ಲಿದ್ದಿದ್ದು:
· ರೈತ ಸಂಘಟನೆಗಳನ್ನು ಎಲ್ಲೆಡೆಯೂ ಕಟ್ಟಬೇಕು.
· ಹೋರಾಟವನ್ನು ಬೇಡಿಕೆಗಳು ಈಡೇರುವವರೆಗೂ ಮುಂದುವರೆಸಬೇಕು.
· ಸರಕಾರೀ ಅಧಿಕಾರಿಗಳು ಹಳ್ಳಿಗಳನ್ನು ಪ್ರವೇಶಿಸುವುದನ್ನು ತಡೆಯಬೇಕು.
· ಸರಕಾರಕ್ಕೆ ಕಟ್ಟುವ ಕಂದಾಯವನ್ನು ನಿಲ್ಲಿಸಬೇಕು.
· “ಉಳುವವನೇ ಹೊಲದೊಡೆಯ” ಎನ್ನುವುದನ್ನು ಸರಕಾರ ಗುರುತಿಸಬೇಕು.
· ಮುಟ್ಟುಗೋಲು ಹಾಕಿಕೊಂಡ ಭೂಮಿಯನ್ನು ಅದರ ಗುತ್ತಿಗೆದಾರನಿಗೆ ವಾಪಸ್ಸು ಮಾಡಬೇಕು.
ರಾಜನಿಗೊಂದು ಪತ್ರ ಬರೆಯಲಾಯಿತು ಮತ್ತದಕ್ಕೆ ಅಲ್ಲಿ ಸೇರಿದ್ದ ಸಾವಿರಾರು ಜನರು ಸಹಿ ಮಾಡಿದರು. ಜೊತೆಗೆ, ನಗರ, ಚಿತ್ರದುರ್ಗ ಹಾಗೂ ಅಸ್ಥಾಗ್ರಾಮ ವಿಭಾಗದ ಫೌಜುದಾರರಿಗೆ ಪ್ರತ್ಯೇಕ ಪತ್ರಗಳನ್ನು ರಚಿಸಲಾಯಿತು.
ಈ ಸಭೆಯಲ್ಲಿ ಮಾನಪ್ಪನಿಗೆ ಸಹಾಯ ಮಾಡಲು ಮತ್ತು ಸಾಮ್ರಾಜ್ಯದ ಇತರೆ ಭಾಗಗಳಲ್ಲಿ ಪ್ರವಾಸ ಮಾಡಲು ಹತ್ತು ಜನರ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಈ ಮುಖಂಡರುಗಳಿಗೆ ಕುದುರೆಗಳನ್ನು ನೀಡಲಾಯಿತು.
ಇದಾದ ನಂತರದಲ್ಲೇ, ಮಾನಪ್ಪ ಮತ್ತು ಇನ್ನೈದು ಆಯ್ದ ಮುಖಂಡರು ಮೈಸೂರನ್ನು ತಲುಪಿ ರಾಜನನ್ನು ಭೇಟಿಯಾದರು. ಅವರ ಪತ್ರದಲ್ಲಿ ಈ ಕೆಳಗಿನ ಬೇಡಿಕೆಗಳಿದ್ದವು:
· ಕೃಷಿ ಭೂಮಿಯನ್ನು ರೈತರಿಗೆ ಮರಳಿಸಬೇಕು.
· ಗುತ್ತಿಗೆ ಪದ್ಧತಿಯನ್ನು ನಿಲ್ಲಿಸಬೇಕು.
· ಹರಾಜಾದ ಭೂಮಿಯನ್ನು ಅದರ ಹಿಂದಿನ ಮಾಲೀಕರಿಗೆ ಹಿಂದಿರುಗಿಸಬೇಕು.
· ಸರಕಾರಕ್ಕೆ ಕೊಡಬೇಕಿರುವ ಎಲ್ಲಾ ಸಾಲ ಮತ್ತು ತೆರಿಗೆಯನ್ನು ಮನ್ನಾ ಮಾಡಬೇಕು.
· ರೈತರ ಕುಟುಂಬದಲ್ಲಿನ ಜನರ ಸಂಖೈಯ ಆಧಾರದ ಮೇಲೆ ಅವರಿಗೆ ಹೆಚ್ಚಿನ ಭೂಮಿಯನ್ನು ಕೃಷಿಗಾಗಿ ನೀಡಬೇಕು.
· ಪಾಳು ಬಿದ್ದಿರುವ ಭೂಮಿಯನ್ನು ರೈತರಿಗೆ ಹಂಚಬೇಕು.
· ರೈತರಿಗೆ ನೀಡುವ ಆರ್ಥಿಕ ಸಹಾಯವನ್ನು ಸರಕಾರವೇ ನೇರವಾಗಿ ನೀಡಬೇಕು.
· ಬೀಜ ಮತ್ತು ಹಸುಗಳ ಖರೀದಿಗೆ ಮುಂದಿನ ಐದು ವರುಷಗಳ ಕಾಲ ಟಕವಿ ಸಾಲವನ್ನು ನೀಡಬೇಕು.
· ಕಂದಾಯ ಸಂಗ್ರಹದ ಶರಾತ್ ವ್ಯವಸ್ಥೆಯನ್ನು ಈ ತಕ್ಷಣದಿಂದಲೇ ರದ್ದುಗೊಳಿಸಬೇಕು.
· ಮುಂದಿನ ಹತ್ತು ವರುಷಗಳ ಕಾಲ ತೆರಿಗೆಯನ್ನು ಸಂಗ್ರಹಿಸಬಾರದು, ತಮ್ಮ ಭಯಾನಕ ಪರಿಸ್ಥಿತಿಯಿಂದ ರೈತರು ಹೊರಬರುವವರೆಗೆ.
· ಈ ಮೇಲಿನ ಬೇಡಿಕೆಗಳು ಈಡೇರುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. (97)
ಇದು ಪ್ರಜಾಪ್ರಭುತ್ವವಾದಿ ರೈತ ಸುಧಾರಣೆಯ ಹೆಜ್ಜೆಗಳು.
ಸಹಜವಾಗಿ, ಈ ಬೇಡಿಕೆಗಳನ್ನು ಈಡೇರಿಸಲು ತಾನು ಅಸಮರ್ಥ ಎಂದು ರಾಜ ತಿಳಿಸಿದ.
ಸುತ್ತುಬಳಸಿಕೊಂಡು ವಾಪಸ್ಸಾಗುವಾಗ, ಮಾನಪ್ಪನ ನೇತೃತ್ವದ ನಿಯೋಗ, ಮೈಸೂರು, ಮಂಡ್ಯ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ರೈತರನ್ನು ಭೇಟಿಯಾದರು.
ತನ್ನನ್ನು ಅಧಿಕಾರ ಪೀಠದಲ್ಲಿ ಕೂರಿಸಿದರೆ ಈ ಎಲ್ಲಾ ಬೇಡಿಕೆಗಳನ್ನೂ ಈಡೇರಿಸುವುದಾಗಿ ಬುಡಿ ಬಸಪ್ಪ ನಾಯಕ ಪ್ರಮಾಣ ಮಾಡಿದ. ಜನಸಮೂಹದ ಬೆಂಬಲವನ್ನು ಬುಡಿ ಬಸಪ್ಪ ಗೆದ್ದುಕೊಂಡಿದ್ದ.
ಮುಂದಿಟ್ಟ ಬೇಡಿಕೆಗಳಲ್ಲಿ ಸ್ಪಷ್ಟವಾಗಿ ಊಳಿಗಮಾನ್ಯ ವಿರೋಧಿ ಸುಧಾರಣೆಗಳು ಕಂಡುಬಂದವು. ಇದು ರೈತರ ವರ್ಗ ಆಕಾಂಕ್ಷೆಗಳನ್ನು ಪ್ರತಿಫಲಿಸಿದವು.
ಅಧಿಕಾರಕ್ಕೆ ಬರಬೇಕೆಂದರೆ, ಊಳಿಗಮಾನ್ಯ ಮುಖಂಡತ್ವ ಶೋಷಿತ ರೈತರ ವರ್ಗ ಬೇಡಿಕೆಗಳನ್ನು ಬಹಿರಂಗವಾಗಿ ಒಪ್ಪಬೇಕಾದ ಸಮಯ ಕರ್ನಾಟಕದ ಇತಿಹಾಸದಲ್ಲಿ ಬಂದಿತ್ತು. ಜನಸಮೂಹ ವಿಶ್ವಾಸದಿಂದ, ಧೃಡವಾಗಿ ಮತ್ತು ಗಟ್ಟಿ ದನಿಯಲ್ಲಿ ಇತಿಹಾಸ ಸೃಷ್ಟಿಸುತ್ತಿದ್ದರು.
ಉ. ಎರಡನೆಯ ಅಲೆ: ಪರಾವಲಂಬಿ ಅಧಿಕಾರಶಾಹಿಯ ವಿರುದ್ಧ ಸಮೂಹ ಕಾರ್ಯಾಚರಣೆ
ಕೂಟಗಳು ಇತರೆ ರೀತಿಯ ಸಾಮೂಹಿಕ ಕಾರ್ಯಾಚರಣೆಗೆ ದಾರಿ ಮಾಡಿಕೊಡುತ್ತಿತ್ತು. ಕೂಟಗಳ ರಚನೆ ದಕ್ಷಿಣದ ಜಿಲ್ಲೆಗಳಿಗೆ ಹಬ್ಬುತ್ತಿದ್ದಾಗ್ಯೂ, ಚಳುವಳಿಯ ಮುಂಚೂಣಿಯಲ್ಲಿದ್ದ ಶಿವಮೊಗ್ಗದಲ್ಲಿ ಕೂಟವು ಆಗಷ್ಟ್ 1830ರಷ್ಟರಲ್ಲಿ ಸಮೂಹ ಕಾರ್ಯಾಚರಣೆಯಾಗಿ ಬಡ್ತಿ ಪಡೆದಿದ್ದು. ಹೋರಾಟದಲ್ಲಿದ್ದ ಸಾವಿರಾರು ರೈತರು ಪರಾವಲಂಬಿ ಅಧಿಕಾರಶಾಹಿಯ ವಿರುದ್ಧ ನಡೆಸಿದ ಸಮೂಹ ಕಾರ್ಯಾಚರಣೆಯ ಈ ಹಂತವು 1830ರ ಕೊನೆಯವರೆಗೂ ಮುಂದುವರೆಯಿತು. ಉದ್ರಿಕ್ತಗೊಂಡ ಜನರನ್ನು ಸಮಾಧಾನಗೊಳಿಸಲು ರೆಸಿಡೆಂಟನ ಆದೇಶದಂತೆ 1830ರ ಡಿಸೆಂಬರ್ ಹಾಗೂ 1831ರ ಜನವರಿಯಲ್ಲಿ ರಾಜ ಉದ್ರಿಕ್ತತೆ ಸ್ವಲ್ಪ ಕಡಿಮೆ ಇರುವ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಾಗ ಅಪಾರ ಸಂಖೈಯಲ್ಲಿ ರೈತರು ರಾಜನ ವಿರುದ್ಧ ಪ್ರತಿಭಟನೆ ನಡೆಸಿದರು. ರಾಜನ ಪ್ರವಾಸ, ಮುತ್ತಿಗೆ ಹಾಕಲೊರಟ ಸೈನ್ಯದಂತೆ ವರ್ತಿಸಿತು ಮತ್ತು ಯಾವುದೇ ಫಲವನ್ನು ನೀಡಲಿಲ್ಲ. ಬದಲಿಗೆ, ಇದು ಹೋರಾಟವನ್ನು ಮತ್ತೊಂದು ಉನ್ನತ ಹಂತವಾದ ಸಶಸ್ತ್ರ ಚಳುವಳಿಯೆಡೆಗೆ ಸಾಗುವಂತೆ ಮಾಡಿತು.
ಮುಖ್ಯ ಕಾರ್ಯದರ್ಶಿ ಫೋರ್ಟ್ ವಿಲಿಯಮ್ಮಿಗೆ ಬರೆದ ಎರಡು ಪತ್ರಗಳಲ್ಲಿ ಕಾಸಾಮೈಯೂರ್ ಸಮೂಹ ಕಾರ್ಯಾಚರಣೆಯ ರೂಪಗಳನ್ನು ವಿವರಿಸುತ್ತಾರೆ. 1830ರ ಡಿಸೆಂಬರ್ ಆರರ ಪತ್ರದಲ್ಲಿ: “….ರಾಜನಾಳ್ವಿಕೆಗೆ ಪ್ರತಿರೋಧ ತೋರುತ್ತಿರುವ ಹಲವು ತಾಲ್ಲೂಕಿನ ರೈತರು ತಮ್ಮ ಎಂದಿನ ತೆರಿಗೆಯನ್ನು ಕಟ್ಟಲೂ ನಿರಾಕರಿಸುವ ಮಟ್ಟಿಗೆ ಹೋಗಿದ್ದಾರೆ. ಮೋಸದಿಂದ ಪಡೆದುಕೊಂಡ ಹಣವನ್ನು ವಾಪಸ್ಸು ಮಾಡಬೇಕೆಂದು ಅಮಲ್ದಾರನಿಗೆ ಬಲವಂತ ಪಡಿಸುತ್ತಿದ್ದಾರೆ. ದೊಡ್ಡ ಸಂಖೈಯಲ್ಲಿ ಗುಂಪು ಗೂಡುತ್ತಿದ್ದಾರೆ, ಆದರೆ ಪ್ರಮುಖವಾದಂತಹ ಯಾವುದೇ ಹಿಂಸಾಕೃತ್ಯವೂ ಈವರೆಗೆ ನಡೆದಿಲ್ಲ.” (98)
1830ರ ಆಗಸ್ಟಿನಲ್ಲಿ, ಮಾನಪ್ಪ 200 ಜನರ ಪಡೆಯನ್ನು ಒಟ್ಟುಮಾಡಿದ್ದ ಮತ್ತು “ಸುತ್ತಮುತ್ತಲಿನ ತಾಲ್ಲೂಕುಗಳಲ್ಲಿದ್ದ ಅಸಮಾಧಾನಗೊಂಡಿದ್ದ ರೈತರಿಗೆ ಸರಕಾರಕ್ಕೆ ಅಸಹಾಕಾರ ತೋರುವ ಕಾರ್ಯ ಮಾಡುವಂತೆ ಪ್ರೋತ್ಸಾಹಿಸುತ್ತಿದ್ದ.” (99)
1830ರ ಆಗಷ್ಟ್ 23ರಂದು ಆನಂದಪುರದಿಂದ ಮಾನಪ್ಪ ಕೊಟ್ಟ ಕರೆ ರೈತ ಹೋರಾಟ ಮತ್ತೊಂದು ಮಜಲಿಗೆ ಹೋಗುವಂತೆ ಮಾಡಿತು. ಅವನ ಮನವಿಯನ್ನು ಬೆಂಗಳೂರು ಮತ್ತು ಚಿತ್ರದುರ್ಗ ಫೌಜುದಾರಿಗಳ ಎಲ್ಲಾ ಜಿಲ್ಲೆಗಳಲ್ಲೂ ಪ್ರಸರಿಸಲಾಯಿತು, ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಇಡೀ ಮೈಸೂರು ಪ್ರಾಂತ್ಯದಲ್ಲಿ ಪ್ರಸರಿಸಲಾಯಿತು. ಅದರಲ್ಲಿ: “ನೀವು ನಮ್ಮಲ್ಲಿ ಸಕಾರಾತ್ಮಕತೆಯೊಂದಿಗೆ ಮನೆಗೊಬ್ಬರಂತೆ ಬರಬೇಕು…. ಶಾನುಭೋಗರು, ಜಮೀನ್ದಾರರು ಮತ್ತು ಇತರೆ ನಿವಾಸಿಗಳಿಗೂ ಸೂಕ್ತ ಗೌರವ ಕೊಟ್ಟು ಜೊತೆಯಲ್ಲಿ ಕರೆತರುವುದನ್ನು ಮರೆಯಬಾರದು. ಅಮಲ್ದಾರರು, ಕಿಲ್ಲೇದಾರರು, ಶಿರಸ್ತೇದಾರರನ್ನೂ ಮುಂಚೆ ಹೇಳಿದ ವರ್ಗಗಳಿಗೆ ಕೊಟ್ಟಷ್ಟೇ ಗೌರವದ ಪ್ರಮಾಣದಲ್ಲಿ ಅಗೌರವವನ್ನು ತೋರಿ ಕರೆತರಬೇಕು. ಈ ಅಧಿಕಾರಿಗಳನ್ನು ಬಂಧನದಲ್ಲಿಡಬೇಕು ಮತ್ತು ನಡೆಯುವಂತೆ ಮಾಡಬೇಕು.” (100). ಹಳ್ಳಿಗಳಂತದಿಂದಲೇ ಊಳಿಗಮಾನ್ಯ – ಅಧಿಕಾರಶಾಹಿ ಪ್ರತಿಗಾಮಿಗಳನ್ನು ಮಾನಪ್ಪ ಗುರಿಯಾಗಿಸಿರುವುದನ್ನು ಅವನ ಕರೆಯಿಂದ ಗೊತ್ತಾಗುತ್ತದೆ.
ಈ ಕರೆಗೆ ತತ್ ಕ್ಷಣದ ಪ್ರತಿಕ್ರಿಯೆ ಲಭಿಸಿತು. ಶಾಮ ರಾವ್ ಬರೆಯುತ್ತಾರೆ: “ಅಸಹಾಕಾರದ ಮೊದಲ ಚಿಹ್ನೆಗಳನ್ನು ತೋರಿದ್ದು ಚೆನ್ನಗಿರಿಯ ರೈತರು…..1830ರ ಸೆಪ್ಟೆಂಬರ್ ನಲ್ಲಿ, ಚೆನ್ನಗಿರಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ವಾರ್ಷಿಕ ಭೂಕಂದಾಯ ನಿಗದಿಯನ್ನು ಅಳೆಯುವ ಬೇಡಿಕೆ ಬಂದಾಗ, ರೈತರು ಯಾರ ಅನುಕೂಲಕ್ಕಾಗಿ ಈ ಭೂಕಂದಾಯವನ್ನಳೆಯಲಾಗುತ್ತಿದೆ? ಮೈಸೂರು ರಾಜನ ಅನುಕೂಲತೆಗೋ ಅಥವಾ ನಗರದ ರಾಜನ ಅನುಕೂಲತೆಗೋ? ಎಂದು ತುಚ್ಛೀಕರಣ ಭಾವದಿಂದ ಪ್ರಶ್ನೆ ಕೇಳಿದರು. ರೈತರು ಹಳ್ಳಿಯ ಹೊರ ಬಾಗಿಲನ್ನು ಮುಚ್ಚಿದರು, ಅಮಲ್ದಾರ ಗ್ರಾಮ ಪ್ರವೇಶಿಸಲು ಆ ಬಾಗಿಲನ್ನು ಬಲವಂತದಿಂದ ಮುರಿಯುವಂತೆ ಮಾಡಿದರು. ತದನಂತರ ಕೆಲವು ರೈತರನ್ನು ಬಂಧಿಸಲಾಯಿತು, ಗುಂಪು ಸೇರಿತು ಮತ್ತು ಅಮಲ್ದಾರ ಬಂಧಿತರ ಜೊತೆಗೆ ಚೆನ್ನಗಿರಿಗೆ ಪಲಾಯನ ಮಾಡಿದ ಮತ್ತು ಕೋಟೆಯೊಳಗಡೆ ಬಚ್ಚಿಟ್ಟುಕೊಂಡ. ಜನರ ಗುಂಪು ನಂತರ ಚೆನ್ನಗಿರಿ ಕಡೆಗೆ ಪಯಣ ಬೆಳೆಸಿತು ಮತ್ತು ಅವರಲ್ಲಿನ ಕೆಲವರು ಕೋಟೆಯ ಗೋಡೆಗಳನ್ನು ಏಣಿಗಳ ಸಹಾಯದಿಂದ ಹತ್ತಿಳಿದು ಬಂಧಿತರಾಗಿದ್ದ ತಮ್ಮ ಕಾಮ್ರೇಡುಗಳನ್ನು ಬಿಡಿಸಿಕೊಂಡರು. ಈ ಮಧ್ಯೆ ಅಮಲ್ದಾರ ಏನೇನು ನಡೆಯಿತು ಎಂಬುದರ ಬಗೆಗಿನ ಗುಪ್ತಚರ ವರದಿಯನ್ನು ಶಿವಮೊಗ್ಗದ ಫೌಜುದಾರನಿಗೆ ಕಳುಹಿಸಿದ ಮತ್ತು ಅಲ್ಲಿಂದ ಒಂದು ಸೈನಿಕ ಪಡೆ ಆಗಮಿಸುತ್ತಿದ್ದಂತೆ ಗುಂಪು ಚದುರಿತು…
ಮೋಟಿಕಾನೆ ನರಸಿಂಗ ರಾವನ ಸಹೋದರ ಶೇಷಗಿರಿ ರಾವ್ ಫೌಜುದಾರನಾಗಿದ್ದ ಚಿತ್ರದುರ್ಗದ ಫೌಜುದಾರಿಯಲ್ಲಿ, ಹೊಳಲ್ಕೆರೆಯ ರೈತರು ತಳಮಳದ ಮೊದಲ ಚಿಹ್ನೆಗಳನ್ನು ತೋರಿದರು; ಹೊಳಲ್ಕೆರೆ ತಾಲ್ಲೂಕು ಚೆನ್ನಗಿರಿಯ ಪಕ್ಕದಲ್ಲಿತ್ತು. ರೈತರನ್ನು ಸಮಾಧಾನಗೊಳಿಸುವ ಉದ್ದೇಶದಿಂದ ಶೇಷಗಿರಿ ರಾವ್ ಚಿಟ್ಟೇರಳ್ಳಿ ಎಂಬ ಊರಿನ ಕಡೆಗೆ ಪಯಣ ಬೆಳೆಸಿದ; ಅಲ್ಲವನಿಗೆ ಚಿತ್ರದುರ್ಗ ತಾಲ್ಲೂಕಿನ ಕೆಲವು ರೈತರು ಮಾವಿನಹಳ್ಳಿಯಲ್ಲಿ ಸೇರಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ ಎಂಬ ಸುದ್ದಿ ಬಂತು. ಮರುದಿನ ಸುಮಾರು 600ರಿಂದ 700ರವರೆಗೆ ಇದ್ದ ರೈತರ ಈ ಗುಂಪು ಚಿಟ್ಟೇರಳ್ಳಿಗೆ ಬಂದು, ಫೌಜಿದಾರನಿಗಾಗಲೀ, ಅವನ ಜನರಿಗಾಗಲೀ ಯಾವುದೇ ದಿನಸಿ ಸಾಮಾನನ್ನು ಮಾರಬಾರದು ಎಂದು ಮಾರುಕಟ್ಟೆಯ ವ್ಯಾಪಾರಿಗಳಿಗೆ ಎಚ್ಚರಿಕೆ ಕೊಟ್ಟರು. ನಾಲ್ಕರಿಂದ ಐದು ದಿನಗಳ ನಂತರ, ಹೊಳಲ್ಕೆರೆಯ ಐನೂರರಷ್ಟು ರೈತರು ಚಿಟ್ಟೇರಳ್ಳಿಗೆ ಬಂದರು, ಅವರನ್ನು ಚಿತ್ರದುರ್ಗದ ರೈತರು ಸ್ವಾಗತಿಸಿದರು. ಫೌಜುದಾರನನ್ನು ಗುಂಟನೂರು ಎಂಬ ಸ್ಥಳಕ್ಕೆ ಬಲವಂತವಾಗಿ ನಡೆಸಿಕೊಂಡು ಕರೆದೊಯ್ಯಲಾಯಿತು, ಅಲ್ಲೂ ಕೂಡ ದೊಡ್ಡ ಸಂಖೈಯ ರೈತರು ಜೊತೆಗೂಡಿದ್ದರು ಮತ್ತಿಲ್ಲಿ ಫೌಜುದಾರನ ಮೇಲೆ ಮತ್ತಷ್ಟು ಅವಮಾನವನ್ನು ಹೇರಲಾಯಿತು.
ಬೆಂಗಳೂರು ಫೌಜುದಾರಿಯ ದೊಡ್ಡಬಳ್ಳಾಪುರದಲ್ಲೂ ಕೆಲವು ಗೊಂದಲಗಳಿದ್ದವು….. ದೊಡ್ಡಬಳ್ಳಾಪುರ ತಾಲ್ಲೂಕಿನ ಅಮಲ್ದಾರನಾಗಿದ್ದ ವೆಂಕಟ ಕೃಷ್ಣಯ್ಯ ಈ ಮೊದಲು ಮಡ್ಡಗಿರಿಯ ಅಮಲ್ದಾರನಾಗಿದ್ದ, ಆ ತಾಲ್ಲೂಕಿನ ಜನರಿಂದ ಸಂಗ್ರಹಿಸಿದ್ದ ಹಣಕ್ಕೆ ಸರಿಯಾದ ಲೆಕ್ಕ ಕೊಡದೇ ಊರು ತೊರೆದಿದ್ದ. ಆ ಜನರು ಈಗ ದೊಡ್ಡಬಳ್ಳಾಪುರಕ್ಕೆ ಬಂದು ಗಲಾಟೆ ಎಬ್ಬಿಸಿದರು. ತನ್ನನ್ನು ವಶಪಡಿಸಿಕೊಳ್ಳಲು ಜನರ ಗುಂಪು ತಯಾರಾಗುತ್ತಿದೆ ಎಂಬ ಸುದ್ದಿಯನ್ನು ಕೇಳುತ್ತಿದ್ದಂತೆಯೇ ವೆಂಕಟಕೃಷ್ಣಯ್ಯ ಕಳ್ಳತನದಿಂದ ಬೆಂಗಳೂರಿಗೆ ಪರಾರಿಯಾದ.
ಮೈಸೂರು ಫೌಜುದಾರಿಯ ಕೃಷ್ಣರಾಜಕಟ್ಟೆ ಮತ್ತು ಅರಕಲಗೂಡಿನಲ್ಲಿ…..ಅನೇಕ ಅಧಿಕಾರಿಗಳನ್ನು ವಿವಿಧ ರೀತಿಯಲ್ಲಿ ಹಿಂಸಿಸಲಾಯಿತು, ಬೆಂಕಿಯನ್ನವರ ಮುಖಕ್ಕೆ ಹಿಡಿಯಲಾಯಿತು, ಇಕ್ಕಳದಿಂದ ಅವರ ತೊಡೆಯ ಮಾಂಸವನ್ನು ತಿರುವಲಾಯಿತು, ಕೈ ತಿರುಚಿ ನಿಲ್ಲಿಸಲಾಯಿತು, ಕಿವಿಗಳಿಗೆ ಚಿಕ್ಕ ಚಿಕ್ಕ ಕಲ್ಲುಗಳನ್ನು ತೂರಲಾಯಿತು, ಅವರ ಕಿವಿಹಿಡಿದು ಮೇಲಕ್ಕೆತ್ತಲಾಯಿತು….[ಈ ಎಲ್ಲಾ ಹಿಂಸೆಯ ರೀತಿಗಳನ್ನು ಉಪಯೋಗಿಸಿ ಅಮಲ್ದಾರರು ಈ ಮುಂಚೆ ಜನರನ್ನು ಹಿಂಸಿಸುತ್ತಿದ್ದರು].
ನಗರ ಮತ್ತು ಚಿತ್ರದುರ್ಗ ಫೌಜುದಾರಿಯಲ್ಲಿನ ಬಂಡಾಯದ ಸುದ್ದಿ ತಲುಪುತ್ತಿದ್ದಂತೆ ಬೆಂಗಳೂರು ಫೌಜುದಾರಿಯ ಬೂದಿಹಾಳದಲ್ಲಿಜ ಜನರು ಮೈಸೂರು ಖಜಾನೆಗೆ ರವಾನೆಯಾಗುತ್ತಿದ್ದ ಹಣಕ್ಕೆ ತಡೆಯೊಡ್ಡಿದರು. ಈ ಅಡೆತಡೆಯ ಬಗೆಗಿನ ವಿವರಗಳು ತಿಳಿಯುತ್ತಿದ್ದಂತೆ ಫೌಜುದಾರ ತಿಮ್ಮಪ್ಪರಾಜ ಅರಸ್ ತುಮಕೂರು ಜಿಲ್ಲೆಯ ಹುಲಿಯೂರು ಎಂಬ ಊರಿಗೆ ಹೋದನು ಮತ್ತು ಹಲವಾರು ರೈತರನ್ನು ಸಭೆಗೆ ಬರಬೇಕೆಂದು ಆದೇಶ ಕಳುಹಿಸಿದನು. ಅವನ ಕರೆಗೆ ಯಾರೂ ಪ್ರತಿಕ್ರಿಯಿಸಲಿಲ್ಲ ಆದರೆ ಅವನ ಕ್ಯಾಂಪಿನಿಂದ ಒಂದಷ್ಟು ದೂರದಲ್ಲಿ ಆರರಿಂದ ಏಳು ಸಾವಿರದಷ್ಟು ಸಂಖೈಯಲ್ಲಿ ದೊಣ್ಣೆ, ಕತ್ತಿ, ಈಟಿಯನ್ನಿಡಿದು ನಿಂತರು….ಅವರಲ್ಲಿನ ಹತ್ತು ಜನರು ಫೌಜುದಾರ ಇದ್ದ ಕ್ಯಾಂಪಿನ ಬಳಿಗೆ ಹೋಗಿ ಭೇಟಿಯಾಗಲು ಅವಕಾಶ ಕೇಳಿದರು. ಆದರೆ ಫೌಜುದಾರ, ತಮ್ಮ ಸಂಕಷ್ಟಗಳನ್ನು ಬರವಣಿಗೆಯಲ್ಲಿ ನೀಡಬೇಕೆಂದು ಅವರಿಗೆ ಹೇಳಿಕಳುಹಿಸಿದ. ತಮ್ಮ ಜೊತೆ ಫೌಜುದಾರ ವರ್ತಿಸಿದ ರೀತಿಯಿಂದ ಅಸಮಾಧಾನಗೊಂಡ ಜನರು ತಮ್ಮ ಬಳಿಯಿದ್ದ ಕಹಳೆಗಳನ್ನೂದಿ, ತಮಟೆಗಳನ್ನು ಬಡಿದು ಗಲಾಟೆಯೆಬ್ಬಿಸಿದರು. ತದನಂತರ ದೊಡ್ಡ ಗುಂಪಿನಲ್ಲಿ ಆಗಮನಿಸಿದ ಜನರು ಫೌಜುದಾರನ ಟೆಂಟನ್ನು ಸುತ್ತುವರಿದರು. ಫೌಜುದಾರನ ಬಳಿ ಎಂಟು ಸೇವಕರು ಮತ್ತು 80 ಗುಮಾಸ್ತರಷ್ಟೇ ಇದ್ದರು. ಈ ಸೇವಕರು ಗುಂಪಿನ ಮುನ್ನಡೆಯನ್ನು ನೋಡಿ, ತಮ್ಮ ಕತ್ತಿಯನ್ನು ಒರೆಯಿಂದೊರತೆಗೆದರು, ಜನರ ಗುಂಪು ನಿಂತು, ಹಳ್ಳಿಯ ಜನರು ಕೂಟ ಸೇರುವಂತೆ ಮಾಡಿದ ಇಬ್ಬರನ್ನು ಬಂಧನದಲ್ಲಿಟ್ಟಿದ್ದೀರಿ, ಅವರನ್ನು ಬಿಟ್ಟುಬಿಟ್ಟರೆ ನಾವು ಚದುರಿಹೋಗುತ್ತೇವೆ ಎಂದು ಫೌಜುದಾರನಿಗೆ ಮಾಹಿತಿ ಕಳುಹಿಸಿದರು. ಬಂಧಿತರನ್ನು ಅಪರಾಧಗಳಿಂದ ಮುಕ್ತಗೊಳಿಸಿ ಬಿಡುಗಡೆ ಮಾಡಲಾಯಿತು. ಮರುದಿನ, ಅಮಲ್ದಾರ ಮತ್ತು ಶಿರಸ್ತೇದಾರು ಶರಣಾಗಬೇಕು ಎಂದು ಹೊಸ ಬೇಡಿಕೆ ಇಡಲಾಯಿತು, ಅವರುಗಳು ಸ್ವ ಇಚ್ಛೆಯಿಂದ ಜನರ ಬಳಿ ಬಂದು ನಗರ ಲೂಟಿಯಾಗುತ್ತಿದ್ದುದನ್ನು ಹಾಗೂ ನಡೆಯುತ್ತಿದ್ದ ಗಲಭೆಯನ್ನು ನಿವಾರಿಸುವ ಸಲುವಾಗಿ ಶರಣಾದರು”. (101)
1831ರ ಜನವರಿ 5ರ ಮತ್ತೊಂದು ಪತ್ರ ಇನ್ನಷ್ಟು ಮಾಹಿತಿಯನ್ನು ನೀಡುತ್ತದೆ: “ಪ್ರತಿರೋಧದ ಸಂದರ್ಭಗಳು ದಿನೇ ದಿನೇ ಹೆಚ್ಚುತ್ತಿದೆ. ರಾಜನ ಟಪಾಲನ್ನು ನಿಲ್ಲಿಸಲಾಗಿದೆ. ಅಮಲ್ದಾರರನ್ನು ಹದ್ದುಬಸ್ತಿನಲ್ಲಿಡಲಾಗಿದೆ. ಅವರ ಕಛೇರಿಗಳ ಮುದ್ರೆಗಳನ್ನು ಅವರಿಂದ ಕಿತ್ತುಕೊಳ್ಳಲಾಗಿದೆ, ಸರಕಾರದ ಖಜಾನೆಗಳನ್ನು ಪಟೇಲರಿಂದ ವಶಪಡಿಸಿಕೊಳ್ಳಲಾಗಿದೆ. ವರ್ತಕರು ಮತ್ತು ಪ್ರವಾಸಿಗರನ್ನು ಹಲವಾರು ಬಂಡಾಯ ಗುಂಪುಗಳು ಬಂಧಿಸಿ ಬಲವಂತವಾಗಿ ಅವರಿಂದ ತೆರಿಗೆಯನ್ನು ವಸೂಲಿಮಾಡಲಾಗುತ್ತಿದೆ….” (102)
ಈ ರೀತಿಯ ಸಾಮೂಹಿಕ ಕಾರ್ಯಾಚರಣೆಗಳು ಸೆಪ್ಟೆಂಬರಿಂದ ಹಿಡಿದು ಡಿಸೆಂಬರ್ ತಿಂಗಳವರೆಗೂ ಕಂಡು ಬಂತು. ರೈತರು ಹಲವಾರು ವಿಧದ ಹೋರಾಟ ಮಾರ್ಗಗಳನ್ನುಪಯೋಗಿಸಿದರು. ಭ್ರಷ್ಟ ಅಧಿಕಾರಿಗಳನ್ನು ಗುರಿಯಾಗಿಸುವಾಗ, ಹಳ್ಳಿಗಳಲ್ಲಿ ಅಧಿಕಾರಿಗಳ ಜೊತೆಗಾರರಾಗಿದ್ದವರನ್ನು ಒಬ್ಬಂಟಿಯಾಗಿಸಿದರು.
ಊಳಿಗಮಾನ್ಯ ಮತ್ತು ಪ್ರತಿಗಾಮಿ ಶಕ್ತಿಗಳನ್ನು ಹಳ್ಳಿಗಳಲ್ಲಿ ಹೇಗೆ ಒಬ್ಬಂಟಿಗರನ್ನಾಗಿಸುತ್ತಿತ್ತು ಎನ್ನುವುದರ ಬಗ್ಗೆ ಬಿ.ಎಸ್.ರಾಮಭಟ್ಟ ವಿವರಿಸುತ್ತಾರೆ. ರೈತರು ತಂತ್ರ ಮತ್ತು ವಾಮಾಚಾರವನ್ನು ಸಾಮಾಜಿಕ ಚಳುವಳಿಗೆ ಕರೆತಂದರು. ಕೆಟ್ಟ ಶಕುನಗಳಿಗೆ ಆದೇಶ ಕೊಟ್ಟು ತಮ್ಮ ಶತ್ರುಗಳಿಗೆ ಶಾಪ ನೀಡುವ ಹಾಗೆ ಪ್ರತಿಗಾಮಿ ಶಕ್ತಿಗಳಿಗೆ ಶಾಪ ನೀಡಿದರು. ಪಾಪಾತ್ಮಗಳು ಯಶ ಕಂಡವು. 1830ರ ಡಿಸೆಂಬರ್ 21ರಂದು, ಸರಕಾರ ಒಂದು ಆದೇಶ ಹೊರಡಿಸಿತು “ಮೂಳೆ ಹಾಗೂ ಬೇವಿನೆಲೆಗಳನ್ನು ಹೊತ್ತೊಯ್ಯುತ್ತಿರುವ ಜನರನ್ನು ಬಂಧಿಸಿ, ವಿಚಾರಣೆ ನಡೆಸಬೇಕು. ಅವರು ಅಪರಾಧಿಗಳಾಗಿದ್ದರೆ, ನೇಣಿಗೇರಿಸಬೇಕು”. (103)
ಹಳ್ಳಿಗಳಲ್ಲಿ ಅಮಲ್ದಾರರು, ಭ್ರಷ್ಟ ಅಧಿಕಾರಿಗಳು ಮತ್ತು ಪ್ರತಿಗಾಮಿಗಳ ವಿರುದ್ಧ ನಡೆಸಿದ ಸಮೂಹ ಕಾರ್ಯಾಚರಣೆ ಯಶಸ್ವಿಯಾಗಿತ್ತು. ಜನಸಮೂಹದ ಪೆಟ್ಟಿಗೆ ಬೆದರಿದ ಅಮಲ್ದಾರರು ಒಂದೋ ಓಡಿ ಹೋದರು ಅಥವಾ ಸಮೂಹದೆದುರು ಶರಣಾದರು. 1830ರ ಕೊನೆಯಷ್ಟೊತ್ತಿಗೆ, ಸಮೂಹ ಕಾರ್ಯಾಚರಣೆ ಮುಗಿಯುವ ಹಂತ ತಲುಪಿದಾಗ, ಬಂಡಾಯವೆದ್ದಿದ್ದ ರೈತರು ಅಮಲ್ದಾರರ ಕಛೇರಿಗೆ ಮುತ್ತಿಗೆ ಹಾಕಲಾಯಿತು ಹಾಗು ಎಲ್ಲಾ ರೀತಿಯ ತೆರಿಗೆಯನ್ನು ಸಂಗ್ರಹಿಸುವುದು ಅಕ್ರಮವೆಂದ್ಹೇಳಿ ಹೊಸ ಆಡಳಿತ ರದ್ದುಗೊಳಿಸಿತು. ಆನಂದಪುರ, ಕುಮ್ಸಿ, ನಗರ, ತರೀಕರೆ, ಕಮನದುರ್ಗ, ಸಖರಾಯಪಟ್ಟಣ ಮತ್ತು ಪ್ರತಿಗಾಮಿ ಅಧಿಕಾರಶಾಹಿಗಳದ್ದ ಇತರೆ ಕೋಟೆಗಳಲ್ಲಿ ಅಧಿಕಾರ ಬದಲಾಗಿತ್ತು.
ಪರಿಸ್ಥಿತಿ ಇನ್ನೂ ಗಂಭೀರವಾಗಿಲ್ಲದ ಕೆಲವು ಪ್ರದೇಶಗಳಿಗೆ ರಾಜ ಭೇಟಿ ಕೊಟ್ಟು ರೈತರನ್ನು ಸಮಾಧಾನಪಡಿಸಲು ನಡೆಸಿದ ಪ್ರಯತ್ನ ವಿಫಲವಾಯಿತು. ಬದಲಿಗೆ, ಇದು ರಾಜ್ಯದ ದಮನದ ಮೊದಲ ಅಲೆಯನ್ನು ಉದ್ಘಾಟಿಸಿತು.
ಮುಂದಿನ ವಾರ: ರಾಜನ ಉಗ್ರ ಪ್ರವಾಸ
No comments:
Post a Comment