ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ರಾಜಕೀಯ ಪಕ್ಷಗಳ ಮತ್ತು ರಾಜಕಾರಣಿಗಳ ನಿಜ ಬಣ್ಣ ಬಯಲಾಗುವುದು ಚುನಾವಣೆಗಳು ಹತ್ತಿರ ಬಂದಾಗಲೇ ಎಂಬ ಮಾತನ್ನು ಉತ್ತರಪ್ರದೇಶದ ಬರಲಿರುವ ರಾಜ್ಯವಿದಾನಸಭಾ ಚುನಾವಣೆಗಳು ಸಾಭೀತು ಪಡಿಸುತ್ತಿವೆ.ಈ ವರ್ಷದ ಆರಂಭದಿಂದಲೇ ಶುರುವಾದ ಚುನಾವಣಾ ತಯಾರಿಗಳು ಅಲ್ಲಿನ ನಾಲ್ಕೂ ಪ್ರಮುಖ ಪಕ್ಷಗಳ ಮುಖವಾಡಗಳನ್ನು ಕಳಚಿಹಾಕುತ್ತಿವೆ.
ಪ್ರಾರಂಭವಾಗಿರುವ ಪಕ್ಷಾಂತರ ಪರ್ವ:
ಪ್ರತಿ ಚುನಾವಣೆಗೂ ಮೊದಲು ಮುಂದೆ ಅಧಿಕಾರಕ್ಕೆ ಬರುವ ಹೆಚ್ಚು ಸಾದ್ಯತೆಯನ್ನುಳ್ಳ ಪಕ್ಷವೊಂದಕ್ಕೆ ಇತರೇ ಪಕ್ಷಗಳ ನಾಯಕರುಗಳು ಪಕ್ಷಾಂತರ ಮಾಡುವುದು ಇಂಡಿಯಾದ ಪ್ರಜಾಸತ್ತೆಯಲ್ಲಿ ಮಾಮೂಲಿಯಾಗಿ ಹೋಗಿದೆ. ಇದಕ್ಕೆ ಉತ್ತರಪ್ರದೇಶವೇನೂ ಹೊರತಲ್ಲ. ಬಹುಜನಪಕ್ಷದ ಹಿಂದುಳಿದವರ್ಗಗಳ ಪ್ರಮುಖನಾಯಕ ಶ್ರೀಸ್ವಾಮಿಪ್ರಸಾದ್ ಮೌರ್ಯರವರಿಂದ ಶುರುವಾದ ಪಕ್ಷಾಂತರ ಪರ್ವ ಮುಂದುವರೆದಿದೆ. ಬಹುಜನಪಕ್ಷದ ನಾಯಕಿ ಮಾಯಾವತಿಯವರು ವಿದಾನಸಭಾ ಟಿಕೆಟ್ ಮಾರಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಪಕ್ಷ ತೊರೆದ ಮೌರ್ಯ ಬಾಜಪವನ್ನು ಸೇರುವುದರೊಂದಿಗೆ ಇದುವರೆಗಿನ ತಮ್ಮ ಜಾತ್ಯಾತೀತ ರಾಜಕಾರಣದ ಸಿದ್ದಾಂತಗಳೆಲ್ಲ ಪೊಳ್ಳು ಎಂದು ತೋರಿಸಿಕೊಟ್ಟರು. ಅವರೊಂದಿಗೆ ಬಹುಜನ ಪಕ್ಷದಿಂದ ಉಚ್ಚಾಟನೆಗೊಂಡ ಮತ್ತು ಪಕ್ಷ ತ್ಯಜಿಸಿದ ಸುಮಾರು ಹತ್ತು ಜನ ಹಾಲಿ ಶಾಸಕರುಗಳು ಸಹ ಬಾಜಪವನ್ನು ಸೇರುವುದರೊಂದಿಗೆ ತಮ್ಮ ಅಧಿಕಾರ ಲಾಲಸೆಯನ್ನು ಬಹಿರಂಗಗೊಳಿಸಿದರು. ರಾಜ್ಯಸಭಾ ಸದಸ್ಯರೂ, ಇನ್ನೊಬ್ಬ ಮುಖ್ಯ ದಲಿತ ನಾಯಕರೂ ಆದ ಶ್ರೀ ಜುಗಲ್ ಕಿಶೋರ್ ಸಹ ಬಾಜಪಕ್ಕೆ ಪಕ್ಷಾಂತರ ಮಾಡಿದರು. ಮಾಯಾವತಿಯವರ ಬಹುಜನ ಪಕ್ಷವನ್ನು ಮುಗಿಸುವುದೇ ತಮ್ಮ ಮುಖ್ಯ ಧ್ಯೇಯವೆಂದು ಘೋಷಿಸಿರುವ ಮೌರ್ಯರವರು ಬಹುಜನ ಪಕ್ಷದಲ್ಲಿ ತಮಗಿದ್ದ ಸಂಪರ್ಕಗಳನ್ನು ಬಳಸಿ ಇನ್ನಷ್ಟು ಪ್ರಮುಖ ನಾಯಕರುಗಳನ್ನು ಬಾಜಪಕ್ಕೆ ಸೆಳೆಯುವ ಪ್ರಯತ್ನ ಮುಂದುವರೆಸಿದ್ದಾರೆ. ಇಷ್ಟು ವರ್ಷಗಳ ಕಾಲ ಪಕ್ಷಾಂತರಗಳನ್ನು ಪ್ರೋತ್ಸಾಹಿಸುವ ವರ್ತನೆಯನ್ನು ಖಂಡಿಸುತ್ತಿದ್ದ ಬಾಜಪ ಇದೀಗ ಸ್ವತ: ಅಂತಹ ಪಕ್ಷಾಂತರಗಳನ್ನು ಕಾರ್ಯಗತಗೊಳಿಸುತ್ತ ತಮ್ಮ ಪಕ್ಷವನ್ನು ಬಲಪಡಿಸುವ ಕೈಂಕರ್ಯದಲ್ಲಿ ತೊಡಗಿದೆ. ತನ್ನ ಸಂಘಪರಿವಾರದ ಮೂಲ ಸಿದ್ದಾಂತಗಳನ್ನು ಒಪ್ಪಿಕೊಳ್ಳುವವರಿಗೆ ಮಾತ್ರ ತನ್ನ ಪಕ್ಷದಲ್ಲಿ ಸ್ಥಾನವೆಂದು ಬೊಬ್ಬೆ ಹೊಡೆಯುತ್ತಿದ್ದ ಬಾಜಪ ಇದೀಗ ತನ್ನೆಲ್ಲ ತಾತ್ವಿಕತೆಯನ್ನು ತೊರೆದು ಅಧಿಕಾರ ಹಿಡಿಯುವ ಏಕೈಕ ಗುರಿಯಿಂದ ಅನ್ಯಪಕ್ಷಗಳ ನಾಯಕರುಗಳನ್ನು ತನ್ನತ್ತ ಸೆಳೆಯಲು ವಾಮಮಾರ್ಗವನ್ನು ಹಿಡಿದಿದೆ. ಹೀಗೆ ಪಕ್ಷಾಂತರಗೊಂಡ ನಾಯಕರುಗಳಿಗೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಟಿಕೇಟು ನೀಡುವ ಮತ್ತು ಸಚಿವ ಸ್ಥಾನ ನೀಡುವ ವಾಗ್ದಾನಗಳನ್ನು ಮಾಡಿರುವುದರಿಂದ ಪಕ್ಷದೊಳಗೆ ಉಂಟಾಗಬಹುದಾದ ಆಂತರಿಕ ಗೊಂದಲಗಳು ಬಾಜಪದ ಮಟ್ಟಿಗೆ ಯಾವ ಪರಿಣಾಮವನ್ನು ಉಂಟು ಮಾಡಬಲ್ಲವೆಂಬುದನ್ನು ಕಾದು ನೋಡಬೇಕಿದೆ. ಇದೊಂದು ಕಡೆಯಾದರೆ ತನ್ನ ಕೌಟುಂಬಿಕ ಒಳಜಗಳಗಳಿಂದ ತತ್ತರಿಸಿರುವ ಸಮಾಜವಾದಿ ಪಕ್ಷವನ್ನು ತೊರೆಯಲು ಸಿದ್ದವಿರುವ ಹಲವಾರು ನಾಯಕರುಗಳನ್ನು ತಮ್ಮತ್ತ ಸೆಳೆಯಲು ಬಾಜಪದ ಜೊತೆಗೆ ಕಾಂಗ್ರೆಸ್ ಕೂಡ ತಮ್ಮ ಪಕ್ಷದ ಕಛೇರಿಯ ಬಾಗಿಲನ್ನು ತೆರೆದು ಕೂತಿದೆ.
ಅಯೋದ್ಯೆಯ ವಿಷಯದಲ್ಲಿ ಬದಲಾದ ಸಮಾಜವಾದಿ ಪಕ್ಷದ ನಿಲುವು:
ಮುಂದಿನ ಚುನಾವಣೆಯಲ್ಲಿ ಬಾಜಪದ ಹಿಂದುತ್ವವಾದಿ ನಿಲುವಿಗೆ ಪ್ರತಿತಂತ್ರ ಹೆಣೆಯುವ ಭರದಲ್ಲಿ ಸಮಾಜವಾದಿ ಪಕ್ಷ ರಾಮಜನ್ಮಭೂಮಿ ವಿವಾದವನ್ನು ಬೇರೊಂದು ರೀತಿಯಲ್ಲಿ ಜೀವಂತವಾಗಿರಿಸಿ ಹಿಂದೂಮತಗಳನ್ನು ಸೆಳೆಯುವ ತಂತ್ರಗಾರಿಕೆಯನ್ನು ಹೂಡುತ್ತಿದೆ. ಕಳೆದ ಐದು ವರ್ಷಗಳ ತನ್ನ ಆಳ್ವಿಕೆಯಿಂದ ಬೇಸರಗೊಂಡಿರುವ ಮುಸ್ಲಿಮರು ಈ ಬಾರಿ ಸರಾಸಗಟಾಗಿ ತನಗೆ ಮತ ನೀಡಲಾರರೆಂಬುದನ್ನು ಅರ್ಥಮಾಡಿಕೊಂಡಿರುವ ಸಮಾಜವಾದಿ ಪಕ್ಷ ಆ ಕೊರತೆಯನ್ನು ನೀಗಿಸಿಕೊಳ್ಳಲು ಇದೀಗ ಅಯೋದ್ಯೆಯನ್ನು ಚುನಾವಣಾ ವಿಷಯವನ್ನಾಗಿಸುವ ಪ್ರಯತ್ನದಲ್ಲಿದೆ. ಇದಕ್ಕಾಗಿ ಅದು ಅಯೋದ್ಯೆಯಲ್ಲಿ ರಾಮಲೀಲಾ ಥೀಮ್ ಪಾರ್ಕೊಂದನ್ನು ಸ್ಥಾಪಿಸಲು ಸಂಪುಟದಲ್ಲಿ ನಿರ್ಣಯ ಅಂಗೀಕರಿಸಿದೆ. ಇಷ್ಟಲ್ಲದೆ ಅಲ್ಲಿ ಅರ್ದ ವರ್ತುಲಾಕಾರದ ಥಿಯೇಟರ್ ಒಂದನ್ನು ಸಹ ಸ್ಥಾಪಿಸುವ ನಿರ್ದಾರವನ್ನು ಪ್ರಕಟಿಸಿದೆ. ರಾಮಮಂದಿರವನ್ನು ಕೇಂದ್ರವಾಗಿಟ್ಟುಕೊಂಡು ಅಯೋದ್ಯೆಯನ್ನು ವಿಶ್ವದ ಪ್ರಮುಖ ಪ್ರವಾಸಿ ತಾಣವನ್ನಾಗಿಸಲು ಸಹ ಅದು ಯೋಜನೆಯನ್ನು ರೂಪಿಸಿದೆ. ಸಮಾಜವಾದಿ ಪಕ್ಷದ ಮೂಲಗಳೇ ಹೇಳುವಂತೆ ಇದು ಆಯೋದ್ಯೆಯ ವಿಚಾರವನ್ನು ತನ್ನ ಚುನಾವಣಾ ವಿಷಯವನ್ನಾಗಿ ಮಾಡಿಕೊಳ್ಳುವ ಬಾಜಪದ ತಂತ್ರಕ್ಕೆ ಪ್ರತಿತಂತ್ರವಾಗಿದ್ದು, ತಾನು ಅಲ್ಪಸಂಖ್ಯಾತರನ್ನು ಓಲೈಸುತ್ತಿಲ್ಲವೆಂದು ಬಹುಸಂಖ್ಯಾತ ಹಿಂದೂಗಳಿಗೆ ಮನವರಿಕೆ ಮಾಡಿ ಕೊಡುವ ಚಾಣಾಕ್ಷ್ಯ ನಡೆಯ ಒಂದು ಭಾಗವೆಂದೇ ಹೇಳಲಾಗುತ್ತಿದೆ. ಇದುವರೆಗೂ ಅಯೋದ್ಯೆಯ ವಿಚಾರದಲ್ಲಿ ಅಲ್ಪಸಂಖ್ಯಾತರ ಪರ ನಿಂತು ಬಾಜಪವನ್ನು ಕೋಮುವಾದಿ ರಾಜಕೀಯ ಪಕ್ಷವೆಂದು ಆರೋಪಿಸುತ್ತಿದ್ದ ಸಮಾಜವಾದಿ ಪಕ್ಷ ಇದೀಗ ತನ್ನ ನಿಲುವಿನಲ್ಲಿ 360 ಡಿಗ್ರಿಯ ಬದಲಾವಣೆಯನ್ನು ತಂದು ಕೊಂಡಿದೆ.
ರಕ್ಷಣೆಯ ವಿಚಾರದಲ್ಲೂ ರಾಜಕೀಯ:
ಇತ್ತೀಚೆಗೆ ಗಡಿಯಾಚೆ ನಮ್ಮ ಸೈನ್ಯ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ಪಕ್ಷದ ಯಾರೂ ಬಹಿರಂಗವಾಗಿ ಸಾಧನೆಯೆಂಬಂತೆ ಹೇಳಿಕೊಳ್ಳಬಾರದೆಂಬ ಪ್ರದಾನಿಗಳ ಹೇಳಿಕೆಯ ಹಿಂದೆಯೇ ಹಣಕಾಸು ಸಚಿವರಾದ ಶ್ರೀ ಅರುಣ್ ಜೈಟ್ಲಿಯವರ ನಿವಾಸದಲ್ಲಿ ನಡೆದ ಬಾಜಪದ ಸಭೆಯಲ್ಲಿ ಮುಂದಿನ ಚುನಾವಣೆಗಳಲ್ಲಿ ಈ ಸರ್ಜಿಕಲ್ ಸ್ಟ್ರೈಕನ್ನು ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಬಳಸಬಹುದೆಂಬ ಬಗ್ಗೆ ವಿಸ್ತೃತ ಚರ್ಚೆಯೊಂದು ನಡೆದಿದೆ. ಚುನಾವಣೆಯ ಸಾರ್ವಜನಿಕ ಸಭೆಗಳಲ್ಲಿ ಈ ವಿಷಯವನ್ನು ಬಳಸಿದರೆ ವಿರೋಧಪಕ್ಷಗಳು ಕಾನೂನಿನ ನೆರವಿನಿಂದ ಬಾಜಪವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾದ್ಯತೆಯಿದ್ದು ಇದರ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದುವರೆಯಲು ಆ ಸಭೆಯಲ್ಲಿ ನಿರ್ದರಿಸಲಾಗಿದೆ.
ಇಷ್ಟಲ್ಲದೆ ಅಹಮದಾಬಾದಿನಲ್ಲಿ ರಕ್ಷಣಾ ಸಚಿವರಾದ ಶ್ರೀಪರಿಕ್ಕರ ಮಾತಾಡುತ್ತಾ, ನಾನು ಎಂದೂ ನಿರ್ದಿಷ್ಟ ದಾಳಿಯನ್ನು ನೋಡದ ಗೋವಾದಿಂದ ಬಂದವನಾಗಿದ್ದು, ಪ್ರದಾನಿ ಮೋದಿಯವರು ಅಹಿಂಸೆಯ ಪ್ರತಿಪಾದಕರಾದ ಮಹಾತ್ಮಗಾಂದಿಯವರ ನಾಡಿನಿಂದ ಬಂದವರಾಗಿದ್ದು, ನಾವಿಬ್ಬರೂ ಸರ್ಜಿಕಲ್ ದಾಳಿಗೆ ಆದೇಶ ನೀಡುವುದರ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಭೋದನೆಯಿದ್ದು, ಅದರ ಪ್ರಭಾವವಿದೆ ಎಂದು ಹೇಳುವುದರ ಮೂಲಕ ದೇಶದ ರಕ್ಷಣಾ ವಿಷಯವನ್ನು ಸಂಘಪರಿವಾರದ ಸಿದ್ದಾಂತಗಳಿಗೆ ಥಳುಕು ಹಾಕಿದ್ದಾರೆ. ಈ ಮೂಲಕ, ದೇಶದ ಗಡಿಯನ್ನು ಬಾಜಪ ಮಾತ್ರ ರಕ್ಷಿಸಬಲ್ಲದೆಂಬ ಬಾವನೆಯನ್ನು ಬಿತ್ತುತ್ತ, ಗಡಿಯ ವಿಷಯವನ್ನೂ ಚುನಾವಣೆಯ ಬಾವನಾತ್ಮಕ ವಿಷಯವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಚುನಾವಣೆಗು ಮುಂಚೆಯೇ ಸೋಲನ್ನೊಪ್ಪಿಕೊಂಡಂತಿರುವ ಕಾಂಗ್ರೆಸ್ ಪರೋಕ್ಷವಾಗಿ ಸರ್ಜಿಕಲ್ ದಾಳಿಯೇ ಮಿಥ್ಯವೆಂದು ಆರೋಪಿಸುತ್ತ ದೇಶದ ರಕ್ಷಣಾ ವಿಷಯದಲ್ಲಿ ರಾಜಕೀಯ ಮಾಡಲು ತನಗೂ ಬರುತ್ತದೆಯೆನ್ನುವುದನ್ನು ನಿರೂಪಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿದೆ.
ಒಟ್ಟಿನಲ್ಲಿ ಚುನಾವಣೆಗಳು ಇರದೇ ಇದ್ದಂತಹ ಶಾಂತಿಸಮಯದಲ್ಲಿ ತತ್ವ ಸಿದ್ದಾಂತಗಳ ಬಗ್ಗೆ ಮಾತಾಡುತ್ತ, ನೀತಿ ಅನೀತಿಯ ಬಗ್ಗೆ ಬಾಷಣ ಮಾಡುವ ರಾಜಕೀಯ ಪಕ್ಷಗಳು ಚುನಾವಣೆಗಳು ಹತ್ತಿರವಾದೊಡನೆ ಎಲ್ಲವನ್ನೂ ಮರೆತು ಕೀಳುಮಟ್ಟದ ರಾಜಕಾರಣ ಮಾಡಲು ತೊಡಗುತ್ತವೆ ಎನ್ನುವುದೇ ಇಂಡಿಯಾದ ಪ್ರಜಾಪ್ರಭುತ್ವದ ದೊಡ್ಡ ದೋಷವಾಗಿದೆ. ಇದನ್ನೆಲ್ಲ ನೋಡಿದರೆ ನಮ್ಮ ಪ್ರಜಾಪ್ರಭುತ್ವ ಪೌಢಾವಸ್ಥೆಯನ್ನು ತಲುಪಿದೆಯೆಂದು ಹೇಳುವವರು ಮೂರ್ಖರಿರಬೇಕು ಅನಿಸದೇ ಇರದು.
No comments:
Post a Comment