ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇಂಡಿಯಾದಂತಹ ಒಕ್ಕೂಟ ವ್ಯವಸ್ಥೆಯೊಳಗಿನ ಅತಿ ದೊಡ್ಡ ದೋಷವೆಂದರೆ ಕೇಂದ್ರ ಸರಕಾರ ಅತೀವ ಬಲಿಷ್ಠವಾಗಿದ್ದು, ರಾಜ್ಯಗಳು ಕೇಂದ್ರದ ಮರ್ಜಿಗನುಗುಣವಾಗಿ ಬದುಕಬೇಕಾಗಿರುವುದು. ವೈವಿದ್ಯತೆಯಲ್ಲಿ ಏಕತೆ ಎಂಬ ಬಾವನಾತ್ಮಕ ಘೋಷಣೆಯ ಮೂಲಕವೇ ಇಂಡಿಯಾವನ್ನು ಹಿಡಿದಿಟ್ಟುಕೊಂಡಿರುವ ರಾಜಕೀಯ ವ್ಯವಸ್ಥೆ ರಾಜ್ಯಗಳನ್ನು ದುರ್ಬಲಗೊಳಿಸುತ್ತ ಸಮಗ್ರತೆಯ ಹೆಸರಲ್ಲಿ ಕೇಂದ್ರವನ್ನು ಬಲಿಷ್ಠವನ್ನಾಗಿಸುತ್ತ ನಡೆಯುತ್ತಿರುವ ರಾಜಕಾರಣದಲ್ಲಿ ರಾಷ್ಟ್ರೀಯ ಪಕ್ಷಗಳ ಸರಕಾರಗಳನ್ನು ಹೊಂದಿದ ಹಲವು ರಾಜ್ಯಗಳು ಕೇಂದ್ರದ ಮಲತಾಯಿ ಧೋರಣೆಗೆ ತುತ್ತಾಗಿವೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಈ ದೋಷವನ್ನು ಮನಗಂಡ ಅನೇಕ ರಾಜ್ಯಗಳು ರಾಜಕೀಯವಾಗಿ ಬಲಿಷ್ಠವಾಗುತ್ತ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ದಾರಿ ಕಂಡುಕೊಂಡಿವೆ. ನಮ್ಮ ನೆರೆ ರಾಜ್ಯಗಳಾದ ಆಂದ್ರಪ್ರದೇಶ, ತಮಿಳುನಾಡುಗಳು ಹಾಗೂ ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ, ಒರಿಸ್ಸಾಗಳು ಸಹ ತಮ್ಮದೇ ಆದ ಪ್ರಾದೇಶಿಕ ಪಕ್ಷಗಳನ್ನು ರಚಿಸಿಕೊಂಡು ದೆಹಲಿಯ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿವೆ.ಇದರಲ್ಲಿ ತಮಿಳುನಾಡು ಮೊದಲಿನಿಂದಲೂ ಪ್ರಾದೇಶಿಕ ಪಕ್ಷಗಳನ್ನು ಹೊಂದಿದ್ದು ಯಾವುದೇ ವಿಚಾರದಲ್ಲಿಯೂ ಅದು ಕೇಂದ್ರದ ವಂಚನೆಗೆ ಒಳಗಾಗದ ರೀತಿಯಲ್ಲಿ ತನ್ನ ರಾಜಕೀಯ ದಾಳಗಳನ್ನು ಉರುಳಿಸುತ್ತಿದೆ. ಉಳಿದೆಲ್ಲ ರಾಜ್ಯಗಳು ಎಂಭತ್ತರ ದಶಕದ ನಂತರ ಕ್ಷಿಪ್ರವಾಗಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಒಂದು ರಾಷ್ಟ್ರೀಯ ಪಕ್ಷವಾಗಿ ದುರ್ಬಲವಾಗುತ್ತ ಸಾಗಿರುವ ಕಾಂಗ್ರೆಸ್ಸಿನ ದೌರ್ಬಲ್ಯದ ಲಾಭ ಪಡೆದು ತಮ್ಮದೇ ನೆಲದ ಸೊಗಡಿನ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿಕೊಳ್ಳುತ್ತ ಬಲಾಢ್ಯವಾಗಿ ಹೋಗುತ್ತಿವೆ ಇತ್ತೀಚೆಗಿನ ದಿನಗಳಲ್ಲಿ ಕರ್ನಾಟಕದಂತ ರಾಜ್ಯದಲ್ಲಿಯೂ ಪ್ರಾದೇಶಿಕ ಪಕ್ಷವೊಂದು ಬೇಕೆನ್ನುವ ಕೂಗು ಕೇಳಿ ಬರುತ್ತಿದ್ದು,ಮುಂದಿನ ದಿನಮಾನಗಳಲ್ಲಿ ಇದು ದೊಡ್ಡದಾಗುವ ಸಾದ್ಯತೆ ಹೆಚ್ಚಾಗಿದೆ.
ಅದು ರಾಜ್ಯದ ನೆಲ (ಗಡಿವಿಚಾರ), ಜಲ(ಕಾವೇರಿ ನೀರು ಹಂಚಿಕೆ, ಕೃಷ್ಣಾ ನೀರು ಹಂಚಿಕೆ ಅಥವಾ ಮಹಾದಾಯಿ ಯೋಜನೆಯ ವಿಚಾರ)ದ ವಿಚಾರಗಳಲ್ಲಿ ಕೇಂದ್ರದಿಂದ ಅನ್ಯಾಯ ಹೆಚ್ಚಾಗುತ್ತಿದ್ದು, ನೆರೆ ರಾಜ್ಯಗಳು ಸಹ ಆಗಾಗ ತಮ್ಮ ಸ್ವಾರ್ಥಕ್ಕೆ ಇವನ್ನು ಬಳಸಿಕೊಳ್ಳುತ್ತ ಕರ್ನಾಟಕದ ತಲೆಯ ಮೇಲೆ ಸವಾರಿ ಮಾಡುತ್ತ ಬರುತ್ತಿವೆ. ಇವುಗಳಿಂದ ನಮಗೆ ಆರ್ಥಿಕವಾಗಿ ನಷ್ಟವಾಗುತ್ತಿರುವ ಜೊತೆಗೆ, ರಾಷ್ಟ್ರದಲ್ಲಿ ಬೇರೆ ರಾಜ್ಯಗಳು ನಮ್ಮನ್ನು ತಿರಸ್ಕಾರದಿಂದ ನೋಡುವಂತೆ ಮಾಡಿದೆ.ನಮಗಾಗುತ್ತಿರುವ ಅನ್ಯಾಯದ ವಿರುದ್ದ ಪ್ರತಿರೋಧಿಸಿ ನ್ಯಾಯ ಕೇಳಿದಾಗೆಲ್ಲ ನಮ್ಮನ್ನು ತಂಟೆಕೋರ ರಾಜ್ಯವೆಂದು ಬಿಂಬಿಸಲಾಗುತ್ತಿದೆ. ಮೊನ್ನಿನ ಕಾವೇರಿ ನೀರು ಹಂಚಿಕೆಯ ವಿಚಾರದಲ್ಲಿಯೂ ನಡೆದದ್ದು ಇದೆ. ನಮ್ಮ ಜಲಾಶಯಗಳಲ್ಲಿ ಸಾಕಷ್ಟು ನೀರಿರದೆ ಇರುವಾಗ ಮತ್ತು ಇರುವ ನೀರು ನಮ್ಮ ಜನರಿಗೆ ಕುಡಿಯಲೂ ಸಾಕಾಗದಂತ ಸನ್ನಿವೇಶವಿದ್ದಾಗಲೂ ನೆರೆಯ ತಮಿಳುನಾಡು ತನ್ನ ಬೆಳೆಗೆ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟಿನ ಮೊರೆ ಹೋಯಿತು. ಇಂತಹ ಸಮಯದಲ್ಲಿ ತಜ್ಞರ ತಂಡವೊಂದನ್ನು ಎರಡೂ ರಾಜ್ಯಗಳಿಗೆ ಕಳಿಸಿ ವಸ್ತುಸ್ಥಿತಿಯನ್ನು ಪರಿಶೀಲಿಸಿ ತೀರ್ಪು ನೀಡಬೇಕಿದ್ದ ನ್ಯಾಯಾಲಯ ಯಾವುದೋ ಪೂರ್ವಗ್ರಹಕ್ಕೆ ಸಿಲುಕಿದಂತೆ ತಮಿಳುನಾಡಿಗೆ ನೀರು ಬಿಡುವಂತೆ ನಮಗೆ ಆದೇಶಿಸಿತು. ಇದರಿಂದ ಆಕ್ರೋಶಕ್ಕೆ ಒಳಗಾದ ಕನ್ನಡಿಗರು ರಾಜ್ಯದಲ್ಲಿ ಬಂದ್ ಆಚರಿಸಿ, ಪ್ರತಿಭಟನೆ ನಡೆಸಿದರು. ಇಂತಹ ಪ್ರತಿಭಟನೆಯ ಸಮಯದಲ್ಲಿ ಸಹಜವಾಗಿಯೇ ಕೆಲ ವಿಚ್ಛಿದ್ರಕಾರಿ ಶಕ್ತಿಗಳು ಸಾಕಷ್ಟು ಸರಕಾರಿ ಆಸ್ತಿಪಾಸ್ತಿಗಳನ್ನು ನಾಶ ಮಾಡಿದವು. ನಮ್ಮ ರಾಜ್ಯ ಸರಕಾರಕ್ಕೂ ಇದರಿಂದ ಸಾವಿರಾರು ಕೋಟಿಗಳಷ್ಟು ನಷ್ಟ ಉಂಟಾಯಿತು. ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಇತರೇ ರಾಜ್ಯಗಳ ಮಾದ್ಯಮಗಳು, ರಾಷ್ಟ್ರೀಯ ಮಾದ್ಯಮಗಳು ಕರ್ನಾಟಕವನ್ನು ತಂಟೆಕೋರರ ರಾಜ್ಯವೆಂದೂ ಹಾಗು ಸುಪ್ರೀಂ ತೀರ್ಪನ್ನು ಪಾಲಿಸದೇ ಹೋದದ್ದರಿಂದ ಅವಿಧೇಯ ರಾಜ್ಯವೆಂಬಂತೆ ಬಿಂಬಿಸಿದವು. ಸಂಬಂದಿಸಿದ ತಮಿಳುನಾಡಿನ ರಾಜಕೀಯ ಪಕ್ಷಗಳು ಸಹ ನಮಗೆ ಅಂಟಿಸಲಾದ ಇಂತಹ ಕೆಟ್ಟ ಇಮೇಜನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದವು. ಇದೀಗ ಕರ್ನಾಟಕದಲ್ಲಿರುವ ರಾಜ್ಯಸರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನೀರು ಬಿಡಲಾಗದೆಂದು ಹಟ ಹಿಡಿದು ಕೂತಿದ್ದರು ಸಹ ಅವರು ಇಂತಹದೊಂದು ತೀರ್ಮಾನವನ್ನು ತೆಗೆದುಕೊಳ್ಳಲು ಸಾಕಷ್ಟು ಸಮಯ ಹಿಡಿಯಿತು. ಇದಕ್ಕೆ ಕಾರಣ ಅವರದೇ ಕಾಂಗ್ರೆಸ್ ಪಕ್ಷ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗೆ ತಾನು ರಾಷ್ಟ್ರೀಯ ಪಕ್ಷವಾಗಿದ್ದು ಏಕಮುಖವಾಗಿ ಕರ್ನಾಟಕದ ಪರವಾಗಿ ಯಾವುದೇ ನಿರ್ದಾರ ತೆಗೆದುಕೊಳ್ಳುವಲ್ಲಿ ವಿಳಂಬನೀತಿ ಅನುಸರಿಸುವಲ್ಲಿ ಅದಕ್ಕೆ ಅದರದೇ ಆದ ರಾಜಕೀಯ ಕಾರಣಗಳಿರುತ್ತವೆ. ಹೀಗಾಗಿ ಈ ವಿವಾದ ಶುರುವಾದ ಒಂದು ತಿಂಗಳಾದರು ಕಾಂಗ್ರೆಸ್ಸಿನ ಹೈ ಕಮ್ಯಾಂಡ್ ಈ ವಿಚಾರದ ಬಗ್ಗೆ ಒಂದೇ ಒಂದು ಹೇಳಿಕೆಯನ್ನೂ ನೀಡದೆ ಮೌನವಾಗಿ ಉಳಿದು ಬಿಟ್ಟಿತ್ತು. ಹೈಕಮ್ಯಾಂಡಿನ ಅಪ್ಪಣೆಯಿರದೆ ಇಂತಹದೊಂದು ನಿರ್ದಾರವನ್ನು ತೆಗೆದುಕೊಳ್ಳುವುದು ಮುಖ್ಯಮಂತ್ರಿಯವರಿಗೂ ಕಷ್ಟವಾಗಿತ್ತು. ಇದರಿಂದ ಸಮಸ್ಯೆ ಬೆಳೆಯುತ್ತ ಹೋಯಿತು. ಜೊತೆಗೆ ತಮಿಳುನಾಡಿನಲ್ಲಿ ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡುವ ಪ್ರಾದೇಶಿಕ ಪಕ್ಷ ಎ.ಐ.ಎ.ಡಿ.ಎಂ.ಕೆ. ಅಧಿಕಾರದಲ್ಲಿದ್ದು ಅದರೊಂದಿಗೆ ಕಾಂಗ್ರೆಸ್ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಇನ್ನು ತಮಿಳುನಾಡಿನಲ್ಲಿ ಕಾಂಗ್ರೆಸ್ಸಿನ ಮಿತ್ರ ಪಕ್ಷವಾದ ಡಿ.ಎಂ.ಕೆ. ವಿರೋಧಪಕ್ಷದಲ್ಲಿದ್ದರೂ ಅದು ತನ್ನ ರಾಜ್ಯದ ಜನರ ಹಿತಾಸಕ್ತಿಗಳನ್ನು ಕಾಪಾಡಲು ತಮಿಳುನಾಡು ಸರಕಾರದ ಪರ ನಿಂತಿತು. ರಾಷ್ಟ್ರೀಯ ಪಕ್ಷವೊಂದಕ್ಕೆ ಮತಚಲಾಯಿಸಿ ಅಧಿಕಾರಕ್ಕೆ ತಂದಿದ್ದರ ತಪ್ಪಿಗೆ ನಾವು ನಮ್ಮನ್ನು ಬೆಂಬಲಿಸುವ ಪಕ್ಷಗಳು, ರಾಜಕೀಯ ನಾಯಕರುಗಳು ಇಲ್ಲದೆ ತತ್ತರಿಸುವಂತಾಯಿತು.
ಇನ್ನು ಕೇಂದ್ರದಲ್ಲಿರುವ ಬಾಜಪ ಸಹ ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೊನೆಗಳಿಗೆಯವರೆಗೂ ಕರ್ನಾಟಕದ ನೆರವಿಗೆ ಬರದೇ ಹೋಯಿತು. ತಮಿಳುನಾಡಿನ ಮುಖ್ಯಮಂತ್ರಿಯಾದ ಕುಮಾರಿ ಜಯಲಲಿತಾರವರ ಜೊತೆ ಉತ್ತಮ ರಾಜಕೀಯ ಸಂಬಂದ ಹೊಂದಿರುವ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ತನ್ನ ಒಕ್ಕೂಟದಲ್ಲಿರುವ ಎರಡು ರಾಜ್ಯಗಳ ನಡುವಿನ ವಿರಸವನ್ನು ಬಗೆಹರಿಸುವತ್ತ ಮನಸ್ಸು ಮಾಡಲೇ ಇಲ್ಲ. ಸೆಪ್ಟೆಂಬರ್ ಮೊದಲವಾರದಲ್ಲಿ ಈ ನೀರು ಹಂಚಿಕೆಯ ವಿವಾದ ಪ್ರಾರಂಭವಾಗಿದ್ದರೂ ಕೂಡ ಪ್ರದಾನಮಂತ್ರಿ ನರೇಂದ್ರಮೋದಿಯವರಾಗಲಿ, ಕೇಂದ್ರ ಜಲಸಂಪನ್ಮೂಲ ಮಂತ್ರಿಯಾದ ಉಮಾಭಾರತಿಯವರಾಗಲಿ ಈ ಬಗ್ಗೆ ಒಂದೇ ಒಂದು ಮಾತನ್ನೂ ಆಡಲಿಲ್ಲ. ಹಾಗೆಯೇ ಕರ್ನಾಟಕದ ಕೋಟಾದಲ್ಲಿ ಕೇಂದ್ರಸಚಿವರುಗಳಾಗಿರುವ ನಾಲ್ಕೂ ಜನ ಸಂಸದರು ಕೂಡ ಈ ಬಗ್ಗೆ ತುಟಿಬಿಚ್ಚಲಿಲ್ಲ. ಕರ್ನಾಟಕದಿಂದ ಆಯ್ಕೆಯಾದ ಯಾವೊಬ್ಬ ಬಾಜಪದ ಸಂಸದರೂ ಕಾವೇರಿಯ ವಿವಾದಕ್ಕೆ ಸಿಲುಕುವ ಭಯದಿಂದ ಮಾದ್ಯಮಗಳಿಂದ ದೂರವುಳಿದಿಬಿಟ್ಟಿದ್ದರು. ರಾಜ್ಯಗಳ ನಡುವಿನ ಜಲವಿವಾದ ಸುಪ್ರೀಂ ಕೋರ್ಟಿನಲ್ಲಿರುವುದರಿಂದ ಪ್ರದಾನಿಯ ಮದ್ಯಸ್ಥಿಕೆ ಅಸಾದ್ಯವೆಂಬ ಬಾಜಪದ ನಿಲುವು ರಾಷ್ಟ್ರೀಯ ಪಕ್ಷವೊಂದರ ನಿಲುವಿಗೆ ಪೂರಕವಾಗಿಯೇ ಇತ್ತು. ಪ್ರದಾನಿಯವರ ಮೌನಕ್ಕೂ ಒಂದು ಕಾರಣವಿತ್ತು. ಅದೆಂದರೆ ಇವತ್ತಿಗೂ ರಾಜ್ಯಸಭೆಯಲ್ಲಿ ಬಾಜಪಕ್ಕೆ ಬಹುಮತವಿಲ್ಲ. ಯಾವುದೇ ಮಸೂದೆಯೊಂದನ್ನು ಪಾಸು ಮಾಡಲು ಅದು ಇತರೇ ಪಕ್ಷಗಳನ್ನು ಅವಲಂಬಿಸಲೇ ಬೇಕಾದ ಸ್ಥಿತಿಯಿದೆ. ಕಳೆದ ತಿಂಗಳು ಜಿ.ಎಸ್. ಟಿ.ಮಸೂದೆಯನ್ನು ಪಾಸ್ ಮಾಡಲು ಸಾದ್ಯವಾಗಿದ್ದು ಕಾಂಗ್ರೇಸ್ ನೀಡಿದ ಬೆಂಬಲದಿಂದಲೇ. ಇಂತಹ ಸ್ಥಿತಿಯಲ್ಲಿರುವ ಬಾಜಪ ರಾಜ್ಯಸಭೆಯಲ್ಲಿರುವ ಎ.ಐ.ಎ.ಡಿ.ಎಂ.ಕೆಯ ಹದಿಮೂರು ಜನ ಸಂಸದರನ್ನು ನಂಬಿಕೊಂಡೇ ಮಸೂದೆಗಳನ್ನು ಪಾಸು ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ. ಹಾಗಾಗಿ ಅದು ಕಾವೇರಿ ವಿಚಾರದಲ್ಲಿ ಮದ್ಯಪ್ರವೇಶಿಸಿ ತಮಿಳುನಾಡಿನ ಸಂಸದರನ್ನು ಎದುರು ಹಾಕಿಕೊಳ್ಳಲು ತಯಾರಿರಲಿಲ್ಲ. ಅಕ್ಟೋಬರ್ ಮೂರನೇ ತಾರೀಖು ತನ್ನ ಅಡ್ಚೋಕೇಟ್ ಜನರಲ್ ಮೂಲಕ, ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಲು ಆದೇಶ ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲವೆಂದು ಅಫಿಡೆವಿಟ್ ಹಾಕಿರುವುದರ ಹಿಂದೆಯೂ ಬಾಜಪದ ಮುಂದಿರುವುದು ರಾಜ್ಯದ ಹಿತಕ್ಕಿಂತ ಹೆಚ್ಚಾಗಿ 2018ರಲ್ಲಿ ಎದುರಾಗಲಿರುವ ಕರ್ನಾಟಕ ರಾಜ್ಯ ವಿದಾನಸಭಾ ಚುನಾವಣೆಗಳಲ್ಲಿ ಕನ್ನಡಿಗರ ಬೆಂಬಲ ಪಡೆಯಬೇಕೆಂಬುದೇ ಹೊರತು ಬೇರಿನ್ನಾವ ವಿಚಾರವೂ ಅಲ್ಲ. ಇಲ್ಲದಿದ್ದರೆ ಮೂರೇ ದಿನದ ಹಿಂದೆ ಮಂಡಳಿ ರಚನೆಗೆ ಒಪ್ಪಿಗೆ ನೀಡಿದ ಎಜಿಗೆ ದಿಡೀರನೇ ಜ್ಞಾನೋದಯವಾಗುವುದಾದರು ಹೇಗೆ ಸಾದ್ಯ?
ಹೀಗೆ ಕಾಂಗ್ರೆಸ್ ಮತ್ತು ಬಾಜಪಗಳೆಂಬ ಎರಡೂ ರಾಷ್ಟ್ರೀಯ ಪಕ್ಷಗಳು ತಮಗೆ ರಾಷ್ಟ್ರೀಯ ಹಿತಾಸಕ್ತಿ ಮುಖ್ಯವೆಂದು ಹೇಳುತ್ತ ನಮಗಾಗುವ ಅನ್ಯಾಯವನ್ನು ನೋಡುತ್ತ ಮೌನವಾಗಿ ಕುಳಿತಿವೆ. ಇದು ಕೇವಲ ಕಾವೇರಿ ನದಿ ನೀರಿನ ವಿಷಯದಲ್ಲಿ ಮಾತ್ರವಲ್ಲ. ಮಹಾದಾಯಿ ವಿಚಾರದಲ್ಲಿಯೂ ಇದು ನಡೆಯುತ್ತಲೇ ಬಂದಿದೆ. ಗೋವಾದಲ್ಲಿ ತನ್ನದೇ ಸರಕಾರವಿದ್ದಾಗ್ಯೂ ಬಾಜಪದ ಕೇಂದ್ರ ಸರಕಾರ ಮದ್ಯಪ್ರವೇಶಿಸಲು ನಿರಾಕರಿಸುತ್ತಿದೆ. ಇನ್ನು ಗೋವಾದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೂಡ ಮುಂದಿನ ವರ್ಷದ ಗೋವಾ ಚುನಾವಣೆಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಕರ್ನಾಟಕದ ಪರವಾಗಿ ನ್ಯಾಯಯುತ ಮಾತುಕತೆಗೆ ವೇದಿಕೆ ಕಲ್ಪಿಸಲು ಹಿಂದೆ ಮುಂದೆ ನೋಡುತ್ತಿದೆ.
ಇಂತಹ ಅನ್ಯಾಯಗಳು ನದಿನೀರಿನ ಹಂಚಿಕೆಯಲ್ಲಿ ಮಾತ್ರವಲ್ಲ, ನಮ್ಮ ಗಡಿ ವಿವಾದದ ಬಗ್ಗೆಯೂ ನಡೆಯುತ್ತಿದೆ. ಬೆಳಗಾವಿ ವಿಚಾರದಲ್ಲಿ ಆಗಾಗ ವಿವಾದ ಎಬ್ಬಿಸುವ ಮಹಾರಾಷ್ಟ್ರದ ರಾಜಕಾರಣಿಗಳಲ್ಲಿ ಕಾಂಗ್ರೆಸ್ ಮತ್ತು ಬಾಜಪ ಎರಡೂ ಪಕ್ಷಗಳವರು ಇದ್ದರೂ ಅವು ಅವರಿಗೆ ಯಾವುದೇ ಎಚ್ಚರಿಕೆ ನೀಡಿ ತಡೆಯುವ ಮಾತಾಡುವುದಿಲ್ಲ. ಮರಾಠಿ ಅಭಿಮಾನದ ಬಗ್ಗೆ ಅಲ್ಲಿ ಮಾತಾಡುವ ರಾಷ್ಟ್ರೀಯ ನಾಯಕರು ಕನ್ನಡಿಗರ ಸ್ವಾಭಿಮಾನದ ಬಗ್ಗೆ ಸೊಲ್ಲೆತ್ತುವುದಿಲ್ಲ. ಇನ್ನು ಚನ್ನೈನಲ್ಲಿ ಪ್ರವಾಹ ತಲೆದೋರಿದೊಡನೆ ಸಾವಿರಾರು ಕೋಟಿ ಪರಿಹಾರ ಘೋಷಿಸುವ ಕೇಂದ್ರ ಕರ್ನಾಟಕದಲ್ಲಿ ಬರಗಾಲದಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ಸಾಲಮನ್ನಾ ಮಾಡುವ ಬಗ್ಗೆ ಕನಿಷ್ಠ ಸೌಜನ್ಯದ ಮಾತನ್ನೂ ಆಡುವುದಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಇರಲಿ, ಬಾಜಪ ಇರಲಿ, ಕೈಗಾರಿಕೆಗಳ ವಿಚಾರದಲ್ಲಿ, ಕೇಂದ್ರದ ಅನುದಾನ ನೀಡುವ ವಿಚಾರದಲ್ಲಿ, ರೈಲ್ವೇ ಮಾರ್ಗಗಳನ್ನು ನೀಡುವ ವಿಚಾರದಲ್ಲಿ ಕರ್ನಾಟಕದ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿವೆ. ಇಷ್ಟೆಲ್ಲಾ ಆದರೂ ಇವತ್ತು ನಮ್ಮ ರಾಜ್ಯವೇನಾದರು ಅಭಿವೃದ್ದಿಯ ವಿಚಾರದಲ್ಲಿ ಮುಂಚೂಣಿಯ ರಾಜ್ಯಗಳಲ್ಲಿ ಒಂದಾಗಿದ್ದರೆ ಅದಕ್ಕೆ ಕಾರಣ ಇಲ್ಲಿನ ಜನರ ಬುದ್ದಿವಂತಿಕೆಯಷ್ಟೆ!ಇಷ್ಟಲ್ಲದೆ ಹೈಕಮ್ಯಾಂಡ್ ಸಂಸ್ಕೃತಿಯ ರಾಷ್ಟ್ರೀಯ ಪಕ್ಷಗಳು ಸ್ಥಳೀಯವಾದಬಲಿಷ್ಠ ನಾಯಕತ್ವ ಬೆಳೆಯಲು ತೊಡರುಗಾಲಾಗುತ್ತವೆ.ತನ್ನ ಮಾತು ಕೇಳುವ ಹಾಗು ಅತಿವಿದೇಯತೆ ಪ್ರದರ್ಶಿಸುವ ವ್ಯಕ್ತಿಯನ್ನು ಮಂತ್ರಿಗಳ ಸ್ಥಾನದಲ್ಲಿ ಕೂರಿಸಿ ಪರೋಕ್ಷವಾಗಿ ತಾನೇ ನಮ್ಮನ್ನು ಆಳಲು ಪ್ರಯತ್ನಿಸುವುದು ರಾಷ್ಟ್ರೀಯ ಪಕ್ಷಗಳ ಗುರಿಯಾಗಿರುತ್ತದೆ. ಮಾತ್ರವಲ್ಲದೆ ಮಾತೆತ್ತಿದರೆ ರಾಷ್ಟ್ರೀಯಬಾವೈಕ್ಯತೆಯ ಹೆಸರಲ್ಲಿ ನಮ್ಮನ್ನು ಎಮೋಷನಲ್ ಬ್ಲಾಕ್ ಮೆಯಿಲ್ ಮಾಡುವ ರಾಷ್ಟ್ರೀಯ ಪಕ್ಷಗಳುನಮ್ಮ ಸಂಪನ್ಮೂಲಗಳನ್ನು ಬಳಸಿಕೊಂಡು ಕೇಂದ್ರವನ್ನು ಇನ್ನಷ್ಟು ಬಲಾಢ್ಯಗೊಳಿಸುವ ಯೋಚನೆಯಲ್ಲಿ ಸದಾ ಮುಳುಗಿರುತ್ತವೆ.
ಇಷ್ಟಲ್ಲದೆ ಇವತ್ತು ಕಾಶ್ಮೀರದಲ್ಲಿಯಾಗಲಿ, ಪೂರ್ವಭಾರತದ ಹಲವಾರು ರಾಜ್ಯಗಳಲ್ಲಿ ಜನಾಭಿಪ್ರಾಯವೆಂಬವುದು ಸಂವಿದಾನದ ಪುಸ್ತಕಗಳಲ್ಲಿ ಮಾತ್ರ ಉಳಿದು, ಆ ಜನರು ಸದಾ ಬಲಪ್ರಯೋಗಗಳ ಆತಂಕದಲ್ಲಿಯೇ ಬದುಕುವಂತಾಗಿದೆ. ಸ್ಥಳೀಯ ಜನರ ಆಶೋತ್ತರಗಳ ಬಗ್ಗೆಯಾಗಲಿ, ಬುಡಕಟ್ಟುಜನಾಂಗಗಳ ಬಗ್ಗೆಯಾಗಲಿ, ಪ್ರಾದೇಶಿಕ ಬಾಷೆಗಳ ಬಗ್ಗೆಯಾಗಲಿ ಯಾವುದೇ ಆಸಕ್ತಿ ತೋರದ ಕೇಂದ್ರ ಸರಕಾರಗಳು ನಮ್ಮ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟು ಕಾಯುತ್ತಿವೆ.ಏಕತೆಯ ಹೆಸರಲ್ಲಿ ಇವತ್ತು ಹಿಂದಿಯನ್ನು ರಾಷ್ಟ್ರ ಬಾಷೆಯ ಹೆಸರಲ್ಲಿ ಹೇರುವುದು ಒಂದು ಕಡೆಯಾದರೆ, ನಮ್ಮ ವೃತ್ತಿ ತರಭೇತಿಯ ಕಾಲೇಜುಗಳಿಗೆ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳನ್ನು ನಡೆಸಿ ನಾವು ಕಟ್ಟಿದ ಸಂಸ್ಥೆಗಳಲ್ಲಿ ಅನ್ಯರಾಜ್ಯದವರು ಓದಲು ಅನುಕೂಲವಾಗುವಂತಹ ಕಾನೂನುಗಳನ್ನು ರಚಿಸುತ್ತ ಇದಕ್ಕೆ ನ್ಯಾಯಾಲಯಗಳನ್ನು ಬಳಸಿಕೊಳ್ಳುವುದು ಇನ್ನೊಂದು ಕಡೆಯಾಗಿದೆ. ಇದೇ ರೀತಿ ಸಾರ್ವಜನಿಕ ಉದ್ಯಮಗಳ ಹೆಸರಲ್ಲಿ ಅನ್ಯಬಾಷಿಕರ ವಲಸೆಯನ್ನು ಹೆಚ್ಚಿಸುತ್ತ ಸ್ಥಳೀಯ ಸಂಸ್ಕೃತಿಗಳ ನಾಶಕ್ಕೆ ನಾಂದಿ ಹಾಡುತ್ತಿವೆ.
ಒಕ್ಕೂಟ ವ್ಯವಸ್ಥೆಯ ಇಂತಹ ದೋಷಗಳನ್ನು ಮನಗಂಡ ಹಲವರು ಒಕ್ಕೂಟವನ್ನು ಧಿಕ್ಕರಿಸಿ ಹೊರಬರುವ ಮಾತಾಡುತ್ತಿದ್ದರೆ ಅದಕ್ಕೆ ಕಾರಣ ಏನೂ ಮಾಡಲಾಗದ ಅವರ ನೋವಿನ ಪ್ರತೀಕವಷ್ಟೇ! ಬೇರೇನಲ್ಲ.
ಹೀಗೆ ಯಾವುದೇ ಕೋನದಿಂದ ನೋಡಿದರೂ ಇರುವ ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಅವುಗಳ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಬಿಸಾಕುತ್ತಿವೆ. ಒಕ್ಕೂಟವ್ಯವಸ್ಥೆಯಿಂದ ಹೊರನಡೆಯುವುದರಿಂದ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ಆದ್ದರಿಂದ ಇರುವ ಒಕ್ಕೂಟವ್ಯವಸ್ಥೆಯ ಸಂಸದೀಯ ಪ್ರಜಾಪ್ರಭುತ್ವದಲ್ಲಿಯೇ ನಮ್ಮದೇ ಆದ ಪ್ರಾದೇಶಿಕ ಪಕ್ಷವೊಂದನ್ನು ಸ್ಥಾಪಿಸಿಕೊಂಡು ನಮ್ಮ ಸಹಜ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯಂತು ನಮ್ಮ ಮುಂದಿದೆ.ಇದರ ಬಗ್ಗೆ ಇನ್ನಷ್ಟು ಗಂಬೀರವಾದ ಚರ್ಚೆಗಳು ನಡೆಯ ಬೇಕಿದೆ. ಆ ದಿಸೆಯಲ್ಲಿ ಈ ಬರಹ ನೆರವಾಗಬಲ್ಲದೆಂದು ನಂಬಿದ್ದೇನೆ
No comments:
Post a Comment