ಲೋಕಸಭೆ ಮತ್ತು ದೇಶದ ಎಲ್ಲಾ ರಾಜ್ಯಗಳ ವಿದಾನಸಭೆಗಳಿಗೆ ಏಕಕಾಲದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವುದು ಸೂಕ್ತವೆಂಬ ಶಿಫಾರಸ್ಸನ್ನು ಕೇಂದ್ರ ಚುನಾವಣಾ ಆಯೋಗವು ಕಾನೂನು ಸಚಿವಾಲಯಕ್ಕೆ ನೀಡುವುದರ ಮೂಲಕ ಈ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆಗೆ, ಮತ್ತೊಂದಿಷ್ಟು ವಿವಾದಗಳಿಗೆ ನಾಂದಿ ಹಾಡಿದೆ. ಈ ಹಿಂದೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಸಹ ಇಂತಹದೊಂದು ಅನಿಸಿಕೆಯನ್ನು ಸಾರ್ವಜನಿಕವಾಗಿಯೇ ಹೇಳಿದ್ದರು. ಆದರೆ ಅದರ ಹಿಂದೆ ಇರಬಹುದಾದ ರಾಜಕೀಯ ಕಾರಣಗಳನ್ನು ಮನಗಂಡವರ್ಯಾರೂ ಅದರ ಬಗ್ಗೆ ಅಷ್ಟೊಂದು ಗಂಬೀರವಾಗೇನು ಚರ್ಚೆ ಮಾಡಲು ಹೋಗಲಿಲ್ಲ. ಆದರೆ ಇದೀಗ ಚುನಾವಣಾ ಆಯೋಗವೇ ಇಂತಹದೊಂದು ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸುತ್ತ, ಕಾನೂನು ಇಲಾಖೆಗೆ ಈ ಬಗ್ಗೆ ತನ್ನ ಒಪ್ಪಿಗೆಯನ್ನು ಸೂಚಿಸಿರುವುದರಿಂದ ಏಕಕಾಲದ ಚುನಾವಣೆಯ ವಿಷಯವನ್ನು ಚರ್ಚಿಸಲೇ ಬೇಕಾದ ಅನಿವಾರ್ಯತೆ ಬಂದೊದಗಿದೆ. ಆದರೆ ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸರ್ವಾನುಮತದ ಒಪ್ಪಿಗೆಯೂ ಬೇಕೆಂಬ ಮಾತನ್ನೂ ಆಯೋಗವು ಒತ್ತಿ ಹೇಳಿದೆ.
1999ರಲ್ಲಿಯೂ ರಾಷ್ಟ್ರೀಯ ಕಾನೂನು ಆಯೋಗವು ಇಂತಹದೊಂದು ಪ್ರಸ್ತಾವನೆಯ ಬಗ್ಗೆ ಮಾತಾಡುತ್ತ 1962 ಕ್ಕೂ ಮುಂಚೆಯಿದ್ದ ವ್ಯವಸ್ಥೆಯ ರೀತಿಯಲ್ಲಿಯೇ ಚುನಾವಣೆಗಳನ್ನು ನಡೆಸಬೇಕೆಂದು ಹೇಳಿತ್ತು. ವಿಶೇಷವೆಂದರೆ ಹೀಗೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ವಿಷಯ ಚರ್ಚೆಗೆ ಬಂದಿದ್ದು ಕೇಂದ್ರದಲ್ಲಿ ಬಾಜಪದ ಸರಕಾರಗಳು ಇದ್ದಾಗಲೇ ಎನ್ನುವುದು ಗಮನಾರ್ಹ! ಹೀಗಾಗಿಯೇ ಈ ಚರ್ಚೆಗೆ ಒಂದು ರಾಜಕೀಯ ಬಣ್ಣ ಬಂದಿರುವುದು. 1968ರವರೆಗೂ ರಾಷ್ಟ್ರದ ಸಂಸತ್ತು ಹಾಗು ವಿದಾನಸಭೆಗಳಿಗೂ ಏಕಕಾಲಕ್ಕೆ ಚುನಾವಣೆಗಳು ನಡೆಯುತ್ತಿದ್ದು, ಆ ಕಾಲಘಟ್ಟದಲ್ಲಿ ನಡೆದ ರಾಜಕೀಯ ವಿದ್ಯಾಮಾನಗಳು ನಮ್ಮ ಚುನಾವಣಾ ವ್ಯವಸ್ಥೆಯನ್ನೇ ಬದಲಾಯಿಸಿಬಿಟ್ಟವು.
1967 ರ ಹೊತ್ತಿಗೆ ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಸತತವಾಗಿ ಆಡಳಿತ ನಡೆಸುತ್ತ ಬಂದಿದ್ದ ಕಾಂಗ್ರೆಸ್ಸಿನ ಬಗ್ಗೆ ಜನರಿಗೆ ಏಕತಾನತೆ ಮೂಡಿತ್ತು. ಇದೇ ಸಮಯದಲ್ಲಿ ಸಮಾಜವಾದಿ ಚಿಂತನೆಗಳು ರಾಷ್ಟ್ರದಾದ್ಯಂತ ತೀವ್ರವಾಗಿ ಹಬ್ಬುತ್ತಿದ್ದು ದಿವಂಗತ ಶ್ರೀ ರಾಮಮನೋಹರ್ ಲೋಹಿಯಾರಂತವರು ಸಮಾಜವಾದಿ ಚಳುವಳಿಯ ಮುಂಚೂಣಿಯಲ್ಲಿ ನಿಮತಿದ್ದರು. ಕಾಂಗ್ರೆಸ್ ಹೊರತಾದ ಸರಕಾರಗಳು ಎನ್ನುವ ಲೋಹಿಯಾರವರ ವಘೋಷಣೆ ಕೆಳರಾಜ್ಯಗಳಲ್ಲಿ ತನ್ನ ಪ್ರಭಾವ ಬೀರ ತೊಡಗಿತ್ತು. ನಿರಂತರವಾಗಿ ಕಾಂಗ್ರೇಸ್ಸಿನ ಆಡಳಿತವನ್ನು ಅನುಭವಿಸುತ್ತ ಬಂದಿದ್ದ ಜನತೆಗೆ ಬದಲಾವಣೆಯ ಅಗತ್ಯವೊಂದು ಕಂಡುಬಂದಿದ್ದಲ್ಲಿ ಅಚ್ಚರಿಯೇನೂ ಇರಲಿಲ್ಲ. ಹಾಗಾಗಿಯೇ 1967ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲಬಾರಿಗೆ ದೇಶದ ಎಂಟು ರಾಜ್ಯಗಳಲ್ಲಿ ಕಾಂಗ್ರೆಸ್ ಮೊದಲಿಗೆ ತನ್ನ ಅಧಿಕಾರ ಕಳೆದುಕೊಳ್ಳಬೇಕಾಯಿತು. ಪ್ರಜಾ ಸೋಷಿಯಲಿಸ್ಟ್ ಪಾರ್ಟಿ, ಜನಸಂಘ, ಎಡಪಕ್ಷಗಳು ಸೇರಿದಂತೆ ಅನೇಕ ಸಣ್ಣಪುಟ್ಟ ಪಕ್ಷಗಳು ಸೇರಿ ಸಂಯುಕ್ತ ವಿದಾಯಕ ದಳದ ಹೆಸರಲ್ಲಿ ರಾಜ್ಯಗಳ ಅಧಿಕಾರ ಹಿಡಿದಾಗ ಸಹಜವಾಗಿಯೇ ಈ ಮೈತ್ರಿಕೂಟಗಳು ಒಳಜಗಳಗಳಿಂದ ತತ್ತರಿಸಿದವು. ಮೊದಲೇ ಕಾಂಗ್ರೇಸ್ಸೇತರ ಪಕ್ಷಗಳ ಬಗ್ಗೆ ತೀವ್ರತರ ಅಸಹನೆ ಹೊಂದಿದ್ದ ಕಾಂಗ್ರೆಸ್ ಇದನ್ನು ಬಳಸಿಕೊಂಡು 356ನೇ ವಿಧಿಯನ್ನು ದುರ್ಬಳಕೆ ಮಾಡಿಕೊಂಡು ಆ ರಾಜ್ಯಸರಕಾರಗಳನ್ನು ವಜಾ ಮಾಡಿ ವಿದಾನಸಭೆಗಳನ್ನು ವಿಸರ್ಜಿಸಿತು.
ಆದರೆ ಇದನ್ನು ವಿರೋಧಿಸುತ್ತಲೇ ಬಂದ ವಿರೋಧಪಕ್ಷಗಳು ಸಹ ಇದೇ ಪರಿಪಾಠವನ್ನು ಮುಂದುವರೆಸಿದವು. ತುರ್ತುಪರಿಸ್ಥಿತಿಯ ನಂತರ 1977ರಲ್ಲಿ ಜನತಾಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೂ ಸಹ ವಿರೋಧಪಕ್ಷಗಳ ರಾಜ್ಯ ಸರಕಾರಗಳನ್ನು 356ನೇ ವಿಧಿಯ ಅನ್ವಯ ವಜಾಗೊಳಿಸಿದ್ದರು. ನಂತರ 1980ರಲ್ಲಿ ಶ್ರೀಮತಿ ಇಂದಿರಾಗಾಂದಿಯವರು ಸಹ ಇಂತಹ ರಾಜಕಾರಣವನ್ನೇ ಮುಂದುವರೆಸಿದರು. ಈ ಎಲ್ಲ ಬೆಳವಣಿಗೆಗಳಿಂದಾಗಿ ಲೋಕಸಭಾ ಮತ್ತು ವಿದಾನಸಭಾ ಚುನಾವಣೆಗಳ ವೇಳಾಪಟ್ಟಿಗಳು ಬದಲಾಗುತ್ತ ಹೋದವು. ಇಂತಹ ಬೆಳವಣಿಗೆಗಳು ವಿದಾನಸಭೆಗಳ ಚುನಾವಣೆಗಳನ್ನೂ ಮೀರಿ ಸಂಸತ್ತಿನ ಚುನಾವಣೆಗಳಿಗೂ ವ್ಯಾಪಿಸುತ್ತ ಹೋದವು. ಎಂಭತ್ತರ ದೇಶಕದಲ್ಲಾದ ಇಂದಿರಾ ಮತ್ತು ರಾಜೀವರ ಹತ್ಯೆಗಳು ಹಾಗು ನಂತರದಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯತೊಡಗಿದ ಮೈತ್ರಿಕೂಟಗಳ ಸರಕಾರಗಳು ತಮ್ಮ ಕಿತ್ತಾಟಗಳಿಂದ ಅವಧಿ ಪೂರೈಸಲಾಗದೆ ವಿಸರ್ಜನೆಯಾಗತೊಡಗಿದವು. ಅಲ್ಲಿಂದ ಇಲ್ಲಿಯವರೆಗೂ ಯಾವ ನಿಶ್ಚಿತ ವೇಳಾಪಟ್ಟಿಯ ಹಂಗಿರದೆ ರಾಜಕೀಯ ಪಕ್ಷಗಳ ಹಿತಾಸಕ್ತಗಳಿಗನುಗುಣವಾಗಿ ನಡೆಯುತ್ತಿವೆ.
ಮೊದಲು, ಏಕಕಾಲಕ್ಕೆ ಚುನಾವಣೆಗಳು ನಡೆದರೆ ಆಗಬಹುದಾದ ಅನುಕೂಲಗಳ ಬಗ್ಗೆ ಒಂದಿಷ್ಟು ಚರ್ಚಿಸೋಣ:
ಸಾಮಾನ್ಯವಾಗಿ ಚುನಾವಣೆ ಎಂದರೆ ನಮ್ಮ ಕಣ್ಮುಂದೆ ಬರುವುದು, ಚುನಾವಣಾ ಪ್ರಕ್ರಿಯೆಗಳಿಗೆ ಸರಕಾರವೊಂದು ಖರ್ಚು ಮಾಡುವ ಹಣ. ಇಂಡಿಯಾದಂತಹ ವಿಶಾಲವಾದ ರಾಷ್ಟ್ರದಲ್ಲಿ ಚುನಾವಣೆಗಳೆನ್ನುವುದು ರಾಜ್ಯಖಜಾನೆಗೆ ಬಾರೀ ಹೊರೆಯೇ ಹೌದು. ಒಂದು ಸಾರ್ವತ್ರಿಕ ಚುನಾವಣೆಯೆಂದರೆ ಲಕ್ಷಾಂತರ ಜನ ಚುನಾವಣಾ ಸಿಬ್ಬಂದಿಗಳನ್ನು ಬೂತುಗಳಿಗೆ ನೇಮಿಸಬೇಕಾಗುತ್ತದೆ. ಅದೇರೀತಿ ಯಾವುದೇ ಹಿಂಸಾಚಾರಗಳು, ಅಕ್ರಮಗಳು ನಡೆಯದಂತೆ ನಡೆಯಲು ಲಕ್ಷಾಂತರ ಪೋಲೀಸ್ ಮತ್ತು ಅರೆಸೇನಾಪಡೆಯ ಸಿಬ್ಬಂದಿಗಳನ್ನು ಚುನಾವಣಾ ಕೆಲಸಕ್ಕೆ ಒದಗಿಸಬೇಕಾಗುತ್ತದೆ. ಈ ಎಲ್ಲ ಸಿಬ್ಬಂದಿಗಳಿಗೆ ನೀಡಬೇಕಾಗುವ ಭತ್ಯೆಗಳೇ ಕೋಟಿಕೋಟಿಯಾಗುತ್ತದೆ. ಈ ವೆಚ್ಚವನ್ನು ಯಾವುದೇ ರೀತಿಯಲ್ಲಿಯೂ ಕಡಿಮೆಯಾಗಿಸಲು ಆಗುವುದಿಲ್ಲ. ಸಂಸತ್ತು ಮತ್ತು ವಿದಾನಸಭೆಗೆ ಒಂದೇ ಸಾರಿ ಚುನಾವಣೆಗಳು ನಡೆದರೆ ಒಂದೇ ವೆಚ್ಚದಲ್ಲಿ ಚುನಾವಣೆ ಮಾಡಬಹುದು. ಇದಲ್ಲದೆ ಸ್ಪರ್ದಿಸುವ ಅಭ್ಯರ್ಥಿಗಳು ಖರ್ಚುಮಾಡುವ ಹಣವೇ ಸಾವಿರಾರು ಕೋಟಿಗಳನ್ನು ದಾಟುತ್ತದೆ( ಕಪ್ಪು ಹಣವೆಷ್ಟು ಎಂಬುದರ ಬಗ್ಗೆ ನೀವೇ ಯೋಚಿಸಿ). ಹೀಗೆ ಖರ್ಚಾಗುವ ಲಕ್ಷಾಂತರ ಕೋಟಿಗಳು ಅನುತ್ಪಾದಕ ವೆಚ್ಚವೆಂದೇ ಪರಿಗಣಿಸಬೇಕಾಗುತ್ತದೆ.
ಇನ್ನು ಚುನಾವಣೆಗಾಗಿ ಸಾರ್ವಜನಿಕ ರಜೆ ಘೋಷಣೆ ಅನಿವಾರ್ಯವಾಗಿದ್ದು, ಆ ಒಂದು ದಿನದ ಮಟ್ಟಿಗೆ ಸರಕಾರಿ ಮತ್ತು ಖಾಸಗಿ ಕ್ಷೇತ್ರದ ಕಛೇರಿಗಳು ಮುಚ್ಚಿದ್ದು ಉತ್ಪಾದನಾ ಮತ್ತು ಸೇವಾ ಕ್ಷೇತ್ರಗಳಲ್ಲಿಯೂ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತದೆ.
ಗಂಬೀರವಾದ ಇನ್ನೊಂದು ಕಾರಣವೆಂದರೆ ಪ್ರತಿ ಚುನಾವಣೆಯಲ್ಲಿಯೂ ನೀತಿ ಸಂಹಿತೆಯೊಂದು ಜಾರಿಗೆ ಬರುವುದರಿಂದ ಸರಕಾರದ ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಳ್ಳುವುದು. ಒಂದು ಚುನಾವಣೆಗಳಿಗೆ ಕನಿಷ್ಠ ಅರವತ್ತು ದಿನಗಳವರೆಗೆ ನೀತಿಸಂಹಿತೆ ಜಾರಿಯಾಯಿತು ಎಂದರೆ ಆ ಎರಡು ತಿಂಗಳ ಕಾಲ ಸರಕಾರಿ ಯಂತ್ರ ಸ್ಥಗಿತಗೊಂಡಿತು ಎಂತಲೇ ಅರ್ಥ. ಇದಕ್ಕೆ ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದ ಚುನಾವಣೆಗಳನ್ನೇ ಉದಾಹರಣೆಯನ್ನೇ ಕೊಡಬಹುದಾಗಿದೆ. 2013ರಲ್ಲಿ ವಿದಾನಸಭಾ ಚುನಾವಣೆ, 2014ರಲ್ಲಿ ಲೋಕಸಭಾ ಚುನಾವಣೆ, ನಂತರದಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆ, ತದನಂತರದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಯ ಚುನಾವಣೆಗಳು ಒಂದಾದ ಮೇಲೊಂದರಂತೆ ನಡೆಯುತ್ತಲೇ ಹೋದವು. ಇದರ ಮದ್ಯೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ,ಶಿಕ್ಷಕ ಪ್ರತಿನಿಧಿಗಳ, ಪಧವೀದರ ಪ್ರತಿನಿಧಿಗಳ ಕ್ಷೇತ್ರಗಳಿಂದ ವಿದಾನಪರಿಷತ್ತಿಗೆ ಚುನಾವಣೆಗಳು ನಡೆದಿದ್ದವು. ಇಷ್ಟೊಂದು ಚುನಾವಣೆಗಳು ನಡೆದಾಗ ಹೇಗೆ ಸರಕಾರವೊಂದು ಹೊಸ ಯೋಜನೆಗಳನ್ನು ಪ್ರಕಟಿಸದೆ ಅಭಿವೃದ್ದಿ ಕಾರ್ಯಗಳನ್ನು ನಡೆಸಲು ಸಾದ್ಯ? ಈ ಸಂದರ್ಭದಲ್ಲಿ ಯಾವುದೇ ಕೆಲಸಕಾರ್ಯಗಳ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳಿಂದ ಬರುವ ಉತ್ತರ ಚುನಾವಣಾ ನೀತಿ ಸಂಹಿತೆ ಎನ್ನುವುದೊಂದೆ. ಮೊದಲೇ ಜಡಗೊಂಡಿರುವ ಕಾರ್ಯಾಂಗಕ್ಕೆ ನೀತಿಸಂಹಿತೆಯೆಂಬುದು ತೂಕಡಿಸುವವನಿಗೆ ಹಾಸಿಕೊಟ್ಟಂತೆ ಎನ್ನಬಹುದು. ಚುನಾವಣೆ ಘೋಷಣೆಯಾಗಿ ಅದು ಮುಗಿಯುವವರೆಗೂ ದೇಶದ ಲಕ್ಷಾಂತರ ಮಾನವ ದಿನಗಳು ಅನುತ್ಪಾದಕವಾಗಿ ಹೋಗುತ್ತವೆ. ಯಾಕೆಂದರೆ ಇಂಡಿಯಾದ ಚುನಾವಣೆಗಳು ಜಾತ್ರೆಯ ರೀತಿಯಲ್ಲಿ ನಡೆಯುವುದರಿಂದ ಜನತೆ ಸಂಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಇನ್ನು ನಮ್ಮಲ್ಲಿರುವ ಎರಡು ರಾಷ್ಟ್ರೀಯ ಪಕ್ಷಗಳ ಹೊರತಾಗಿ ಅನೇಕ ಚಿಕ್ಕಪುಟ್ಟ ಪ್ರಾದೇಶಿಕ ಪಕ್ಷಗಳೂ ಇದ್ದು ಪದೇಪದೇ ನಡೆಯುವ ಚುನಾವಣೆಗಳಿಗೆ ಹಣ ಖರ್ಚು ಮಾಡಲು ಅವುಗಳಿಂದಾಗದೆ ಹಣಕಾಸಿನ ವಿಚಾರದಲ್ಲಿ ಬಲಾಢ್ಯವಾಗಿರುವ ರಾಷ್ಟ್ರೀಯ ಪಕ್ಷಗಳ ಏಕಸ್ವಾಮ್ಯ ಮುಂದುವರೆಯುತ್ತದೆ ಎನ್ನುವುದು ಮತ್ತೊಂದು ವಾದವಾಗಿದೆ.
ಒಟ್ಟಿನಲ್ಲಿ ಮೇಲೆ ನಾನು ಉಲ್ಲೇಖಿಸಿದ ಅಂಶಗಳಲ್ಲಿ ಬಹಳ ಮುಖ್ಯವಾಗಿ ಕಾಣಿಸುವುದೆಂದರೆ ಚುನಾವಣೆಗಳು ಆರ್ಥಿಕವಾಗಿ ಖಜಾನೆಗೆ ಹೊರೆಯಾಗುತ್ತವೆ ಎನ್ನುವುದೇ ಆಗಿದೆ
ಹೀಗೆ ಏಕಕಾಲಕ್ಕೆ ಚುನಾವಣೆ ನಡೆಯಬೇಕೆನ್ನುವವರು ಈ ಅಂಶಗಳನ್ನು ಮುಂದಿಟ್ಟು ವಾದ ಮಾಡುತ್ತಾರೆ. ಆದರೆ ಇದೇ ಅಂಶಗಳನ್ನು ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸಿ ಯಥಾಸ್ಥಿತಿ ಮುಂದುವರೆಯಲಿ ಎಂದು ವಾದಿಸುವವರೂ ಇದ್ದಾರೆ. ಆ ವಾದಗಳ ಬಗ್ಗೆಯೂ ಒಂದಿಷ್ಟು ನೋಡೋಣ:
ಚುನಾವಣಾ ವೆಚ್ಚವೆನ್ನುವುದು ಒಂದು ಕಾರಣವೇ ಅಲ್ಲ. ಯಾಕೆಂದರೆ ಇಂಡಿಯಾದಂತಹ ವಿಶಾಲವಾದ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಯಶಸ್ಸಿಗೆ ಹೋಲಿಸಿದರೆ ನಾವು ಖರ್ಚು ಮಾಡುವ ಹಣ ದೊಡ್ಡದೇನಲ್ಲ. ಅಂತಿಮವಾಗಿ ಮುಖ್ಯವಾಗುವುದು ಯಶಸ್ವೀ ಚುನಾವಣಾ ಪ್ರಕ್ರಿಯೆಯೇ ಹೊರತು ಖಜಾನೆಯಿಂದಖರ್ಚು ಮಾಡಲ್ಪಟ್ಟ ಹಣವೇನಲ್ಲ ಎಂದೂ ವಾದಿಸುವವರಿದ್ದಾರೆ. ಇನ್ನು ಅಭ್ಯರ್ಥಿಗಳು ಖರ್ಚು ಮಾಡುವ ಹಣವನ್ನು ಕಾನೂನುಗಳಿಂದ ನಿಯಂತ್ರಿಸಬೇಕೇ ಹೊರತು ಅದೇ ದೊಡ್ಡ ಸಮಸ್ಯೆ ಎಂಬು ಬಿಂಬಿಸುವುದು ಬಾಲೀಶತನ.
ನೀತಿ ಸಂಹಿತೆಯ ವಿಚಾರಕ್ಕೆ ಬಂದರೆ ಹೊಸ ಯೋಜನೆಗಳನ್ನು ಪ್ರಕಟಿಸಬಾರದೆಂಬ ನಿಯಮವಿದೆಯೇ ಹೊರತು ಈಗಾಗಲೇ ಪ್ರಾರಂಭವಾಗಿರುವ ಕಾಮಗಾರಿಗಳನ್ನು, ಅಭಿವೃದ್ದಿ ಕಾರ್ಯಗಳನ್ನು ಮಾಡಬಾರದೆಂದು ಯಾವ ಕಾನೂನು ಹೇಳುವುದಿಲ್ಲ. ಹಾಗಾಗಿ ಇದು ಏಕಕಾಲಕ್ಕೆ ಚುನಾವಣೆ ಬೇಕು ಎನ್ನುವವರು ನೀಡುವ ಸಬೂಬು ಮಾತ್ರ!
ಇನ್ನು ಸರಕಾರಿ ಕಛೇರಿಗಳಲ್ಲಿ ಚುನಾವಣೆಯ ಕಾರಣಗಳಿಂದಾಗಿ ಸಾರ್ವಜನಿಕರ ಕೆಲಸಕಾರ್ಯಗಳು ಸರಿಯಾಗಿ ನಡೆಯುವುದಿಲ್ಲವೆಂಬುದು ಅಪ್ಪಟ ಸುಳ್ಳು. ಯಾವುದೇ ಕಛೇರಿಯ ಎಲ್ಲ ಸಿಬ್ಬಂದಿಗಳನ್ನೂ ಚುನಾವಣಾ ಕಾರ್ಯಕ್ಕೆ ನೇಮಿಸಲಾಗುವುದಿಲ್ಲ. ಬದಲಿಗೆ ಆಡಳಿತ ನಡೆಸುವವರು ಬಿಗಿಯಾಗಿದ್ದರೆನೌಕರರು ಸಬೂಬು ಹೇಳದೆ ಕೆಲಸ ಮಾಡುತ್ತಾರೆ. ಮಾನವ ದಿನಗಳು ವ್ಯರ್ಥವಾಗುತ್ತವೆ ಎನ್ನುವುದು ಸಹ ಹುರುಳಿಲ್ಲದ್ದು. ಪ್ರಜಾಸತ್ತೆಯಲ್ಲಿ ದುಡಿದು ಬದುಕಬೇಕಾದ ಅನಿವಾರ್ಯತೆ ಇರುವವನು ಚುನಾವಣೆಯ ನೆಪ ಹೇಳಿ ಮನೆಯಲ್ಲಿ ಕೂರಲು ಸಾದ್ಯವಿಲ್ಲ. ಯಾರೋ ಒಂದಷ್ಟು ಜನರ ಉದಾಹರಣೆ ನೀಡಿ ಇಂಡಿಯಾದ ಜನತೆ ಸೋಮಾರಿಗಳು ಎಂಬಂತೆ ಚಿತ್ರಿಸುವುದು ಸರಿಯಲ್ಲ.
ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳಿಗೆ ಹಣ ಖರ್ಚು ಮಾಡಲು ಕಷ್ಟವಾಗುತ್ತದೆ ಎನ್ನುವುದು ಮೂರ್ಖತನ. ಯಾಕೆಂದರೆ ಚುನಾವಣಾ ಆಯೋಗ ನಿಗದಿ ಪಡಿಸಿದಷ್ಟೇ ಮೊತ್ತವನ್ನು ಖರ್ಚು ಮಾಡುವುದೇ ಆದಲ್ಲಿ ಅದು ಯಾವ ಪಕ್ಷಕ್ಕೂ ಹೊರೆಯೆನಿಸುವುದಿಲ್ಲ. ಅಧಿಕವಾಗಿ ಖರ್ಚು ಮಾಡುವ ಪಕ್ಷ ಮತ್ತು ಅಭ್ಯರ್ಥಿಗಳಿಗೆ ಮಾತ್ರ ಇದು ಹೊರೆಯಾಗಬಹುದು. ಜೊತೆಗೆ ಚುನಾವಣೆಗಳು ಕೆಳಸ್ಥರದ ಜನರಿಗೆ ತಾತ್ಕಾಲಿಕವಾಗಿ ಒಮದಷ್ಟು ಉದ್ಯೋಗಗಳನ್ನು ಒದಗಿಸುತ್ತದೆ. ಇದು ಜನಪರವೆಂದು ಹೇಳಬಹುದೆಂದು ಹೇಳುವವರು ಇದ್ದಾರೆ.
ಈ ವಾದಗಳ ಜೊತೆ ಇನ್ನೊಂದು ಮುಖ್ಯವಾದ ವಾದವೂ ಈಗ ಬಲಗೊಳ್ಳುತ್ತಿದೆ. ಒಂದು ದೊಡ್ಡ ರಾಜ್ಯದ ಚುನಾವಣೆಯನ್ನೇ ಎರಡು ಮೂರು ಹಂತಗಳಲ್ಲಿ ನಡೆಸಬೇಕಾದ ಅನಿವಾರ್ಯತೆ ನಮಗಿದೆ. ಯಾಕೆಂದರೆ ಚುನಾವಣಾ ಭದ್ರತೆಗೆ ಸಾಕಷ್ಟು ಪೋಲೀಸ್ ಮತ್ತು ಅರೆಸೇನಾ ಪಡೆಗಳನ್ನು ಏಕಕಾಲದಲ್ಲಿ ರಾಜ್ಯದಾದ್ಯಂತ ನಿಯೋಜಿಸುವುದು ಕಷ್ಟ. ಇತ್ತೀಚೆಗೆ ನಡೆದ ಕೆಲವು ರಾಜ್ಯಗಳ ಚುನಾವಣೆಗಳ ವಿವರಗಳನ್ನು ನೋಡಿದರೆ ಈ ಸಮಸ್ಯೆ ಅರ್ಥವಾಗುತ್ತದೆ. ಅಸ್ಸಾಮಿನಂತಹ ಸಣ್ಣ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸ ಬೇಕಾಯಿತು. ಆದರೆ ಪಶ್ಚಿಮ ಬಂಗಾಳದಂತಹ ದೊಡ್ಡ ರಾಜ್ಯದ ವಿದಾನಸಭಾ ಚುನಾವಣೆಯನ್ನು 6 ಹಂತಗಳಲ್ಲಿ ನಡೆಸಬೇಕಾಯಿತು. ಈ ಪ್ರಕ್ರಿಯೆ ಸರಿ ಸುಮಾರು ಮೂರು ತಿಂಗಳವರೆಗೂ ನಡೆಯಬೇಕಾಗಿ ಬಂತು. ಇದಕ್ಕೆ ಕಾರಣ, ಇಡೀ ರಾಜ್ಯದಾದ್ಯಂತ ಒಂದೇ ದಿನ ಚುನಾವಣೆ ನಡೆಸಲು ಬೇಕಾದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಅಸಾದ್ಯವಾದುದಾಗಿತ್ತು. ಇನ್ನು ಇಡೀ ದೇಶದಾದ್ಯಂತ ಒಂದೇ ಬಾರಿಗೆ ಚುನಾವಣೆ ನಡೆಸಲು ಹೊರಟರೆ ಅಂದಾಜು ಎಷ್ಟು ಹಂತಗಳು ಬೇಕಾಗಬಹುದು ಮತ್ತು ಅಂತಹ ಚುನಾವಣಾ ಪ್ರಕ್ರಿಯೆ ಮುಗಿಯಲು ಎಷ್ಟು ತಿಂಗಳಾಗಬಹುದೆಂದು ನಾವು ಯೋಚಿಸಬೇಕಾಗುತ್ತದೆ. ಹಾಗಾಗಿ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದು ಸಾದ್ಯವಿಲ್ಲ ಮತ್ತು ಇದು ಅವೈಜ್ಞಾನಿಕವೆಂಬ ವಾದವನ್ನು ಮಾಡಲಾಗುತ್ತಿದೆ.
ಇವೆರಡೂ ವಾದಗಳಲ್ಲಿ ಯಾವುದು ನಮ್ಮ ಪ್ರಜಾಸತ್ತೆಗೆ ಉಚಿತವೆನ್ನವುದನ್ನು ಸಾರ್ವಜನಿಕ ಚಚೆಯ ನಂತರವಷ್ಟೇ ತೀರ್ಮಾನಿಸಬಹುದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದ ಕಾನೂನು ಸಚಿವಾಲಯ ಸೂಕ್ತವಾದ ಚರ್ಚೆ ನಡೆಸಲು ಮುಂದಾಗಬೇಕಾಗಿದೆ. ಮುಖ್ಯವಾಗಿ ನಮ್ಮ ರಾಜಕೀಯ ಪಕ್ಷಗಳು ಈ ವಿಷಯದ ಬಗ್ಗೆ ತಮ್ಮ ಸ್ಪಷ್ಟ ನಿಲುವನ್ನು ಜನತೆಯ ಮುಂದಿಡಬೇಕಿದೆ. ನಂತರವಷ್ಟೆ ಅಂತಿಮ ತೀರ್ಮಾನ ಸಾದ್ಯವಾಗಬಹುದಾಗಿದೆ.( ಇನ್ನು ಏಕಕಾಲದಲ್ಲಿ ಚುನಾವಣೆ ನಡೆಸಲು ಆಸಕ್ತಿ ತೋರಿಸಿರುವ ನಮ್ಮ ಪ್ರದಾನಿಗಳ ಆಶಯದ ಹಿಂದೆ ಇರಬಹುದಾದ ರಾಜಕೀಯ ಕಾರಣಗಳನ್ನು ಮತ್ತೊಮ್ಮೆ ಚರ್ಚಿಸೋಣ)
ಸದ್ಯದ ಭಾರತದ ಪಾಳೇಗಾರಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏಕಕಾಲಕ್ಕೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ನಡೆಸುವುದರಿಂದ ೫ ವರ್ಷಗಳ ಅವಧಿಗೆ ನಿರಂಕುಶ ಪ್ರಭುತ್ವಕ್ಕೆ ಅನುವು ಮಾಡಿಕೊಟ್ಟಂತೆ ಆದೀತು ಏಕೆಂದರೆ ನಮ್ಮ ಸದ್ಯದ ಹುಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಒಮ್ಮೆ ಮತದಾನ ಮಾಡಿದ ನಂತರ ಯಾವ ಬೆಲೆಯೂ ಇಲ್ಲ. ಪ್ರಜೆಗಳ ಸಾರ್ವತ್ರಿಕ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲ. ಚುನಾಯಿತ ಪ್ರತಿನಿಧಿಗಳು ಪ್ರಜೆಗಳ ಬಗ್ಗೆ ಗಮನಹರಿಸುವುದು ಚುನಾವಣೆ ಬಂದಾಗ ಮಾತ್ರ. ದೇಶದಲ್ಲಿ ರಾಜ್ಯ ವಿಧಾನಸಭೆ ಬೇರೆ ಬೇರೆ ಸಮಯಗಳಲ್ಲಿ ಚುನಾವಣೆ ನಡೆಯುತ್ತಿದ್ದರೆ ಪ್ರಜೆಗಳ ಬಗ್ಗೆ ಕೆಲವು ಸಲವಾದರೂ ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರ ಸ್ವಲ್ಪವಾದರೂ ಗಮನ ಹರಿಸುತ್ತವೆ. ಏಕಕಾಲಕ್ಕೆ ಚುನಾವಣೆ ನಡೆದು ಮುಂದೆ ೫ ವರ್ಷ ಚುನಾವಣೆ ಇಲ್ಲ ಎಂದಾದರೆ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಆಡಿದ್ದೇ ಆಟ ಎಂಬ ಪರಿಸ್ಥಿತಿ ತಲೆದೋರಬಹುದು. ಹೀಗಾಗಿ ದೇಶದಲ್ಲಿ ಒಂದಲ್ಲ ಒಂದು ಕಡೆ ಆಗಾಗ ಚುನಾವಣೆಗಳು ನಡೆಯುತ್ತಿರುವುದು ಒಳ್ಳೆಯದು.
ReplyDelete