ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇಂಡಿಯಾದ ಪ್ರಜಾಪ್ರಭುತ್ವಕ್ಕೀಗ ಸರಿ ಸುಮಾರು ಅರವತ್ತೇಳರ ಹರಯ! ಎರಡನೆಯ ಮಹಾಯುದ್ದ ಮುಗಿದ ಕೆಲವೇ ವರ್ಷಗಳಲ್ಲಿ ನಾವು ಪಡೆದ ಸ್ವಾತಂತ್ರ ಇಂಡಿಯಾದ ಜನರಿಗೆ ಪ್ರಜಾಪ್ರಭುತ್ವದಲ್ಲಿ ಬಾಗವಹಿಸುವ ಸೌಭಾಗ್ಯವನ್ನು ಕಲ್ಪಿಸಿದ್ದು ಅಂದಿನ ರಾಷ್ಟ್ರ ನಾಯಕರುಗಳ ಹಿರಿಮೆಯೆಂದೇ ಹೇಳಬೇಕು. ಯಾಕೆಂದರೆ ಅದಾಗ ತಾನೇ ವಿಶ್ವದ ಪಾಲಿಗೆ ಸಿಂಹಸ್ವಪ್ನರಾಗಿ, ಸರ್ವಾಧಿಕಾರಿಗಳಾಗಿದ್ದ ಜರ್ಮನಿಯ ಅಡಾಲ್ಫ್ ಹಿಟ್ಲರ ಮತ್ತುಇಟಲಿಯ ಮುಸಲೋನಿಯವರ ಅಂತ್ಯವಾಗಿದ್ದರೂ ಅವರು ಬಿತ್ತಿಹೋಗಿದ್ದ ರಾಷ್ಟ್ರೀಯವಾದಗಳಾಗಲಿ, ಜನಾಂಗೀಯ ಶ್ರೇಷ್ಠತೆಯ ವ್ಯಸನಗಳಾಗಲಿ ಜನತೆಯ ಮನಸ್ಸಿಂದ ಪೂರ್ಣವಾಗಿ ಮರೆಯಾಗಿರಲಿಲ್ಲ. ಇದರ ಜೊತೆಗೆ ಅಂದಿನ ವಿಶ್ವದ ಪ್ರಬಲ ಶಕ್ತಿಶಾಲಿ ರಾಷ್ಟ್ರವಾಗಿದ್ದ ಸೋವಿಯತ್ ಯೂನಿಯನ್ ಕಮ್ಯುನಿಸ್ಟ್ ಆಡಳಿತಕ್ಕೆ ಒಳಪಟ್ಟಿದ್ದು, ಪ್ರಪಂಚದ ಇತರೇ ರಾಷ್ಟ್ರಗಳಲ್ಲಿಯೂ ಕಮ್ಯುನಿಸ್ಟ್ ಸರಕಾರಗಳನ್ನು ಸ್ಥಾಪಿಸುವ ಪ್ರಯತ್ನದಲ್ಲಿತ್ತು. ಇಂಡಿಯಾದ ಆಚೆಗೆ ಇಂತಹ ಫ್ಯಾಸಿಸ್ಟ್ ಸಿದ್ದಾಂತಗಳು, ಕಮ್ಯುನಿಸ್ಟ್ ಸಿದ್ದಾಂತಗಳು ಪ್ರಬಲವಾಗಿದ್ದ ಕಾಲದಲ್ಲಿ ಇಂಡಿಯಾದಂತಹ ಬಹುಮುಖ ಸಂಸ್ಕೃತಿಯ ರಾಷ್ಟ್ರವೊಂದು ಇವ್ಯಾವುದರ ಪ್ರಬಾವಕ್ಕೂ ಒಳಗಾಗದೆ ತನ್ನನ್ನು ಆಳುತ್ತಿದ್ದ ವಸಾಹತುಶಾಹಿ ರಾಷ್ಟ್ರವಾದ ಇಂಗ್ಲೇಂಡಿನ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪ್ಪಿಕೊಂಡಿದ್ದು ವಿಶೇಷವೇ ಸರಿ. ಈ ವಿಷಯದಲ್ಲಿ ನಾವು ಒಂದು ಹಂತದವರೆಗೂ ಅದೃಷ್ಠಶಾಲಿಗಳೇ ಸರಿ. ಅಕಸ್ಮಾತ್ ಅಂದು ಈ ಪ್ರಜಾಪ್ರಭುತ್ವ ಶೈಲಿಯನ್ನು ಒಪ್ಪಿಕೊಳ್ಳದೇ ಹೋಗಿದ್ದಲ್ಲಿ ಇವತ್ತು ಇಂಡಿಯಾ ದೇಶ ಒಂದು ಸಮಗ್ರ,ಸಾರ್ವಭೌಮ ರಾಷ್ಟ್ರವಾಗಿ ಬದುಕುಳಿಯಲು ಸಾದ್ಯವಿರಲಿಲ್ಲ.
ಜನರ ಆಶಯಗಳಿಗೆ ಪೂರಕವಾದ ಒಂದು ಸಂವಿದಾನವನ್ನು ಅಂಗೀಕರಿಸಿ, ಅದರ ಪ್ರಕಾರವೇ ನಿಗದಿತ ಅವಧಿಗಳಿಗೆ ಸಾರ್ವತ್ರಿಕ ಚುನಾವಣೆಗಳ ಪ್ರಕ್ರಿಯೆಯನ್ನು, ಕೇಂದ್ರದಲ್ಲಿ ಜನಪ್ರತಿನಿಧಿಗಳ ಸಂಸತ್ತು, ರಾಜ್ಯಮಟ್ಟದಲ್ಲಿ ವಿದಾನಸಭೆಗಳೆಂಬ ಶಾಸಕಾಂಗವನ್ನು, ಶಾಸನಗಳನ್ನು ಜಾರಿಗೆ ತರಲು ಪೂರಕವಾಗುವಂತಹ ಕಾರ್ಯಾಂಗವನ್ನು, ಇವೆರಡರ ಮೇಲೆ ಸ್ವತಂತ್ರವಾದ ಒಂದು ನ್ಯಾಯಾಂಗ ವ್ಯವಸ್ಥೆಯೊಂದನ್ನು ಒಳಗೊಂಡ ನಮ್ಮ ಸಂಸದೀಯ ಪ್ರಜಾಸತ್ತೆಗೆ ಏಳುದಶಕಗಳು ತುಂಬಲಿರುವ ಈ ಸಂದರ್ಭದಲ್ಲಿ ಈ ವ್ಯವಸ್ಥೆಯು ಸದ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಒಂದಷ್ಟು ಬೆಳಕು ಚೆಲ್ಲುವುದು ಅಗತ್ಯವೆನಿಸುತ್ತದೆ. 1947ರಲ್ಲಿದ್ದ ಅನಕ್ಷರತೆ, ಜಾತಿಯತೆ, ಬಡತನಗಳು ಇವತ್ತಿಗೂ ಇದ್ದು, ಇವುಗಳ ನಿವಾರಣೆಗೆ ಸಾಕಷ್ಟು ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗಿದೆ. ಇದೀಗ ಇವುಗಳಲ್ಲದೆ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ನಮ್ಮ ಪ್ರಜಾಪ್ರಭುತ್ವಕ್ಕೆ ಹೊಸ ಸಮಸ್ಯೆಗಳು, ಹೊಸ ಸವಾಲುಗಳು ಎದುರಾಗಿವೆ. ಈ ಸವಾಲು,ಸಮಸ್ಯೆಗಳನ್ನು ವಿಶ್ಲೇಷಿಸಿ ನೋಡಿ ಅವುಗಳ ನಿವಾರಣೆಗೆ ಬೇಕಾದ ಮಾರ್ಗಗಳನ್ನು ಹುಡುಕಿಕೊಳ್ಳುವುದು ಇವತ್ತಿನ ಅನಿವಾರ್ಯತೆಯಾಗಿದೆ.
ಆಧುನಿಕ ಜಗತ್ತಿನ ಬಹುತೇಕ ರಾಷ್ಟ್ರಗಳು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳು ನಮ್ಮವೂ ಆಗಿವೆ. ಅವುಗಳಲ್ಲಿ ಪ್ರಮುಖವಾಗಿರುವವು: 1.ಜಾಗತೀಕರಣ(ಮುಕ್ತ ಆರ್ಥಿಕನೀತಿ) 2. ಭಯೋತ್ಪಾದನೆ.
1.ಜಾಗತೀಕರಣ(ಮುಕ್ತ ಆರ್ಥಿಕನೀತಿ)
ಸ್ವಾತಂತ್ರ ಸಿಕ್ಕ ತರುವಾಯದಲ್ಲಿ ನಾವು ಅಳವಡಿಸಿಕೊಂಡ ಆರ್ಥಿಕ ವ್ಯವಸ್ಥೆಗೆ ಕಲ್ಯಾಣ ರಾಜ್ಯದ ಗುಣಗಳ ಸ್ಪರ್ಶವಿತ್ತು. ಸೋವಿಯತ್ ಯೂನಿಯನ್ನಿನ ಪ್ರಬಾವದಿಂದಲೋ ಏನೋ ಸಮಾಜವಾದಿ ಸಿದ್ದಾಂತಗಳಡಿಯಲ್ಲಿ ನಾವು ಜಾರಿಗೆ ತಂದ ಸಮಾಜವಾದಿ ಸಿದ್ದಾಂತಗಳು ಈ ದೇಶವನ್ನು ಅಹಾರ ಸ್ವಾವಲಂಬಿಯನ್ನಾಗಿ ಮಾಡಲು, ಮತ್ತು ಕೈಗಾರಿಕೆಗಳ ಉತ್ಪಾದಕ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸಿದವು. ಆಗ ಜಾರಿಗೆ ತಂದ ಪಂಚವಾರ್ಷಿಕ ಯೋಜನೆಗಳು( ಅವುಗಳ ಬಗ್ಗೆ ಈಗ ಎದ್ದಿರುವ ಅಥವಾ ಸೃಷ್ಠಿಸಲ್ಪಟ್ಟಿರುವ ಆರೋಪಗಳೇನೇ ಇರಲಿ) ದೇಶವನ್ನು ಆಹಾರ ಸ್ವಾವಲಂಬನೆಯತ್ತ ಕೈಗೊಂಡವು. ಜೊತೆಗೆ ಇಲ್ಲಿ ಬಾರೀ ನೀರಾವರಿಗಳು, ದೊಡ್ಡ ದೊಡ್ಡ ಸಾರ್ವಜನಿಕ ಉದ್ದಿಮೆಗಳು ಸ್ಥಾಪನೆಯಾದವು. ರಾಷ್ಟ್ರದ ಆರ್ಥಿಕ ಏಳಿಗೆಗೆ ಅವುಗಳದೇ ಆದ ಕಾಣಿಕೆ ನೀಡಿದ್ದವು.ಆದರೆ ಎಪ್ಪತ್ತರ ದಶಕದ ನಂತರದಲ್ಲಿ ಪರಿಸ್ಥಿತಿ ಬದಲಾಗುತ್ತ ಹೋಯಿತು. ಸ್ವಾತಂತ್ರ ದೊರಕಿದಾಗ ಇದ್ದ ಆದರ್ಶಮಯ ರಾಜಕಾರಣ ಮಾಯವಾಗುತ್ತ ಹೋಯಿತು. ಶಾಸಕಾಂಗ ಮತ್ತು ಕಾರ್ಯಾಂಗಗಳು ಭ್ರಷ್ಟವಾಗುತ್ತ ರಾಜಕೀಯ ಹಿತಾಸಕ್ತಿಗಳೇ ಮುಖ್ಯವಾಗುತ್ತ, ಹಣದಾಹ ಅಧಿಕಾರದಾಹಗಳು ಲಜ್ಜೆಯ ಸೀಮೆಯನ್ನೂ ದಾಟಿ ತಾಂಡವ ಆಡತೊಡಗಿದವು. ತೊಂಭತ್ತರ ದಶಕದ ವೇಳೆಗೆ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ತೀರಾ ಹೀನಾಯ ಪರಿಸ್ಥಿತಿ ತಲುಪಿತು. ದೇಶವನ್ನು ಈ ಆರ್ಥಿಕ ಸಂಕಷ್ಟದಿಂದ ಹೊರತರುವ ಬಗ್ಗೆ ಮಾತಾಡಿದ ಅಂದಿನ ಪ್ರದಾನಮಂತ್ರಿಯವರಾದ ದಿವಂಗತ ಶ್ರೀ ಪಿ.ವಿ.ನರಸಿಂಹರಾಯರ ಹಣಕಾಸು ಸಚಿವರಾಗಿದ್ದ ಶ್ರೀ ಮನಮೋಹನ ಸಿಂಗ್ ಅವರು ಜಾಗತೀಕರಣಕ್ಕೆ ನಮ್ಮ ಆರ್ಥಿಕತೆಯ ದಿಡ್ಡಿ ಬಾಗಿಲನ್ನು ತೆರದು ಕೂತರು. ನಂತರದಲ್ಲಿ ಆಗಿಹೋದ ಎಲ್ಲ ಸರಕಾರಗಳೂ ಹಂತಹಂತವಾಗಿ ಮುಕ್ತ ಆರ್ಥಿಕ ನೀತಿಯನ್ನು ಜಾರಿಗೊಳಿಸುತ್ತ ಹೋಗಿದ್ದರ ಪರಿಣಾಮವಾಗಿ ನಾವಿವತ್ತು ಮುಕ್ತ ಮಾರುಕಟ್ಟೆ ಆರ್ಥಿಕವ್ಯವಸ್ಥೆಯ ಒಂದು ಭಾಗವಾಗಿ ಬದುಕುವ ಅನಿವಾರ್ಯತೆ ತಲೆದೋರಿದೆ. ಇದೀಗ ಈ ವ್ಯವಸ್ಥೆಯಿಂದ ಹಿಂದೆ ಹೋಗಲೂ ಆಗದೆ, ಮುಂದೆ ಹೋಗಿ ಇನ್ನಷ್ಟು ವಿಪತ್ತುಗಳನ್ನು ತಲೆಯ ಮೇಲೆ ಎಳೆದುಕೊಳ್ಳಲೂ ಆಗದಂತಹ ವಿಷಮ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ.
ಇದೀಗ ಈ ಮುಕ್ತ ಆರ್ಥಿಕ ವ್ಯವಸ್ಥೆಯು ನಮ್ಮ ಕಲ್ಯಾಣ ರಾಜ್ಯದ ಕನಸುಗಳನ್ನು ಮಾತ್ರವಲ್ಲದೆ. ನಮ್ಮ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆಯೇ ಮಾರಕವಾಗುವ ಎಲ್ಲ ಲಕ್ಷಣಗಳನ್ನೂ ತೋರಿಸುತ್ತಿದೆ. ನಮ್ಮ ಅಭಿವೃದ್ದಿಯ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಬದಲಾಯಿಸಿದ ಇದು ಪಶ್ಚಿಮ ಮಾದರಿಯ ಅಭಿವೃದ್ದಿಯನ್ನು, ಅದೇ ಸಿದ್ದ ಮಾದರಿಯ ಉಪಭೋಗ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರಿದೆ. ಇದರಿಂದಾಗಿ ಸರಕಾರದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳನ್ನು ಇವತ್ತಿನ ಮಾರುಕಟ್ಟೆಯ ಶಕ್ತಿಗಳೇ ನಿರ್ಣಯಿಸುವ ಸ್ಥಿತಿ ನಿರ್ಮಾಣವಾಗಿದೆ.ಸರಕಾರಗಳ ನೀತಿ ನಿರೂಪಣೆಯಲ್ಲಿ ಜನರ ಪಾತ್ರವಹಿಸುವಿಕೆ ಕ್ರಮೇಣ ಕಡಿಮೆಯಾಗುತ್ತಿದೆ. ಇವತ್ತಿನ ಎಲ್ಲ ರಾಜಕೀಯ ಪಕ್ಷಗಳೂ ಜಾಗತೀಕರಣದ ಪರವಾಗಿ ನಿಂತಿರುವುದರಿಂದ ಯಾರೇ ಅಧಿಕಾರಕ್ಕೆ ಬಂದರೂ ಸರಕಾರದ ನೀತಿಗಳೇನು ಬದಲಾಗುವುದಿಲ್ಲ. ಕಲ್ಯಾಣರಾಜ್ಯದ ಗುರಿಯನ್ನಿಟ್ಟುಕೊಂಡಿದ್ದ ನಮ್ಮ ಸರಕಾರಗಳು ಬಡತನರೇಖೆಯಿಂದ ಕೆಳಗಿದ್ದವರಿಗೆ ಮತ್ತು ರೈತರಿಗೆ ನೀಡುತ್ತಿದ್ದ ಸಹಾಯಧನಗಳು ಗಣನೀಯವಾಗಿ ಕಡಿಮೆಯಾಗುತ್ತಿವೆ. ಸರಕಾರಗಳು ಜಾರಿಗೆ ತರುತ್ತಿದ್ದ ಬಹುತೇಕ ಜನಪರ ಯೋಜನೆಗಳಿಗೆ ವಿಶ್ವಬ್ಯಾಂಕಿನ ಕರಾರುಗಳು ಅಡ್ಡಿಯಾಗಿವೆ. ಇಲ್ಲಿ ಎರಡು ರೀತಿಯ ಅಪಾಯಗಳಿವೆ: ಮೊದಲನೆಯದು, ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಸರಕಾರವೊಂದು ಮಂಡಿಸುವ ಆಯವ್ಯಯ ಹೇಗಿರಬೇಕೆಂಬುದನ್ನು, ಮತ್ತು ತೆರಿಗೆ ವಿದಿಸುವ ಪ್ರಕ್ರಿಯೆಯನ್ನೂ ನಮ್ಮ ಜನಪ್ರತಿನಿಧಿಗಳ ಬದಲಿಗೆ ಬಹುರಾಷ್ಟ್ರೀಯ ಕಂಪನಿಗಳ ಸಿ.ಇ.ಓ.ಗಳು ನಿರ್ದರಿಸುವಂತಾಗಿದೆ. ಇನ್ನು ಎರಡನೆಯದು, ನಮ್ಮ ಒಟ್ಟಾರೆ ಆರ್ಥಿಕ ನೀತಿಯನ್ನು ವಿಶ್ವಬ್ಯಾಂಕ್ ನಿರ್ದೇಶಿಸುತ್ತಿದ್ದು ಬಡವರಿಗೆ ನೀಡುತ್ತಿದ್ದ ಸಬ್ಸಿಡಿಗಳಿಗೆ ಕತ್ತರಿ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ. ನಮ್ಮ ಪ್ರಜಾಪ್ರತಿನಿಧಿಗಳು ಬಾಗವಹಿಸುವ ಸಂಸತ್ತು, ವಿದಾನಸಭೆಯಂತಹ ವೇದಿಕೆಗಳು ಸಾಂಕೇತಿಕವಾಗುತ್ತಿವೆ. ಇನ್ನು ಗ್ರಾಮಸ್ವರಾಜ್ಯದ ಕಲ್ಪನೆಯ ಕೂಸಾದ ನಮ್ಮ ಪಂಚಾಯಿತಿ ವ್ಯವಸ್ಥೆಗೆ ಬಂದರೆ ಅಲ್ಲಿಯೂ ಜನರ ಬಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಸರಕಾರ ನೀಡುವ ಅನುದಾನವನ್ನು ಖರ್ಚು ಮಾಡುವ ಬಗ್ಗೆಯೂ ಜನರ ಬಾಗವಹಿಸುವಿಕೆ ಇಲ್ಲವಾಗಿ, ಅವು ಸರಕಾರದ ಯೋಜನೆಗಳನ್ನು ವಿತರಿಸುವ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಖಾಸಗೀಕರಣ ಹೆಚ್ಚಾದಂತೆ ಸರಕಾರದ ಪಾತ್ರ ನಗಣ್ಯವಾಗುತ್ತ, ಜನತೆಯ ಬಾಗವಹಿಸುವಿಕೆಗೆ ಅರ್ಥವಿಲ್ಲದಾಗಿ ಕ್ರಮೇಣ ಸರಕಾರಗಳು ದುರ್ಬಲಗೊಳ್ಳುತ್ತವೆ. ದುರ್ಬಲಗೊಳ್ಳುವ ಸರಕಾರಗಳು ಬಡ ಮತ್ತು ಕೆಳ ಮದ್ಯಮ ವರ್ಗದ ಜನತೆಯನ್ನು ಉಪೇಕ್ಷಿಸುತ್ತ ಹೋಗುತ್ತವೆ. ಇದರಿಂದ ಸಮಾಜದಲ್ಲಿ ಅಸಮಾನತೆ ಇನ್ನಷ್ಟು ಹೆಚ್ಚುತ್ತ ಪ್ರಜಾಪ್ರಭುತ್ವದಲ್ಲಿನ ಜನತೆಯ ವಿಶ್ವಾಸವೇ ಕಡಿಮೆಯಾಗಿ ಬಿಡುವ ಸಾದ್ಯತೆ ಇದೆ.
ಖಾಸಗೀಕರಣದ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹುನ್ನಾರವೊಂದು ಸದ್ದಿರದೆ ನಡೆಯುತ್ತಿದೆ. ಬ್ರಿಟೀಷರು ತಮ್ಮ ಆಳ್ವಿಕೆಯಲ್ಲಿ ಗುಮಾಸ್ತರುಗಳನ್ನು ಸೃಷ್ಠಿಸುವ ಶಿಕ್ಷಣವನ್ನು ನಮಗೆ ನೀಡಿದರೆಂದು ದೂರುವ ನಾವಿವತ್ತು, ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಬಹುರಾಷ್ಟ್ರೀಯ ಕಂಪನಿಗಳ ಗುಲಾಮರನ್ನು ತಯಾರಿಸುವ ಶಿಕ್ಷಣ ನೀತಿಗೆ ಮಣೆ ಹಾಕುತ್ತಿದ್ದೇವೆ. ತಾಂತ್ರಿಕ ಶಿಕ್ಷಣದಿಂದ ನಮ್ಮ ಯುವಜನರ ನೈಪುಣ್ಯತೆ ಬೆಳೆಯುತ್ತದೆ ಮತ್ತು ಉದ್ಯೋಗಾವಕಾಶಗಳು ಹೆಚ್ಚುತ್ತವೆ ಎಂಬ ಕಾರಣ ಕೊಡುತ್ತ, ಉನ್ನತ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಮನ್ನಣೆ ನೀಡುತ್ತ ಮಾನವೀಯ ಸಾಮಾಜಿಕ ಶಾಸ್ತ್ರಗಳ ಅದ್ಯಯನವನ್ನೇ ವ್ಯರ್ಥವೆನ್ನುವ ಮಟ್ಟಕ್ಕೆ ಬಂದು ನಿಂತಿದ್ದೇವೆ. ಶಿಕ್ಷಣವನ್ನೂ ಖಾಸಗೀಕರಿಸಿ, ಮುಕ್ತ ಆರ್ಥಿಕನೀತಿಗೆ ಅನುಕೂಲಕರ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುತ್ತ ಸಾಗಿದ್ದೇವೆ. ಈ ಕ್ರಮಗಳಿಂದ ನಮ್ಮ ಶಿಕ್ಷಣದ ಇತರೇ ವಿಭಾಗಗಳು ಬಡವಾಗುತ್ತಿವೆ.
ಹೀಗೆ ಒಂದೆಡೆ ಜಾಗತೀಕರಣವೆನ್ನುವುದು ಸರಕಾರದಲ್ಲಿ ಜನರ ಬಾಗವಹಿಸುವಿಕೆಯನ್ನು ಕಡಿಮೆ ಮಾಡುತ್ತ, ಇನ್ನೊಂದೆಡೆ ಶಿಕ್ಷಣವನ್ನೂ ಮಾರಾಟದ ಸರಕನ್ನಾಗಿಸಿ ಸಮಾಜ ಮತ್ತು ಮಾನವೀಯ ಶಾಸ್ತ್ರಗಳನ್ನು ಕಸದ ಬುಟ್ಟಿಗೆಸೆಯುತ್ತಿದೆ. ದೀರ್ಘಕಾಲೀನವಾಗಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿರುವ ಜಾಗತೀಕರಣಕ್ಕೆ ಪರ್ಯಾಯ ಆರ್ಥಿಕನೀತಿಯೊಂದನ್ನು ನಾವು ರೂಪಿಸಿಕೊಳ್ಳದೇ ಹೋದರೆ ಮುಂದೊಂದು ದಿನ ಪ್ರಜಾಸತ್ತೆಯನ್ನು ನಾಶ ಮಾಡಿದ ಅಪವಾದಕ್ಕೆ ನಾವೇ ಸಿಕ್ಕಿ ಹಾಕಿಕೊಳ್ಳಲಿದ್ದೇವೆ.
2. ಭಯೋತ್ಪಾದನೆ:
ಇನ್ನು 21ನೇ ಶತಮಾನದಲ್ಲಿ ಇಡೀ ವಿಶ್ವವೇ ಭಯೋತ್ಪಾದಕತೆಯ ಪಿಡುಗಲ್ಲಿ ಸಿಕ್ಕಿ ನರಳುತ್ತಿದೆ. ಇಂಡಿಯಾವು ಇದಕ್ಕೇನು ಹೊರತಾಗಿಲ್ಲ. ಪಕ್ಕದ ಪಾಕಿಸ್ತಾನದಿಂದ ನುಸುಳಿಬಂದು ದೇಶದೊಳಗೆ ಭಯೋತ್ಪಾದನೆ ನಡೆಸುವ ಚಟುವಟಿಕೆ ಒಂದೆಡೆಯಾದರೆ, ಆಂತರೀಕವಾಗಿ ಹೆಚ್ಚಾಗುತ್ತಿರುವ ಮತಾಂಧ ರಾಜಕಾರಣ ಇನ್ನೊಂದು ರೀತಿಯಲ್ಲಿ ಭಯೋತ್ಪಾದಕತೆ ಸೃಷ್ಠಿಸುತ್ತಿದೆ. ದೇಶದ ಭದ್ರತೆಗೆ ಮಾರಕವಾಗುತ್ತಿರುವ ಆಂತರಿಕ ಮತ್ತು ಬಾಹ್ಯ ಭಯೋತ್ಪಾದಕತೆಗಳು ನಮ್ಮ ಆರ್ಥಿಕ ವ್ಯವಸ್ಥೆಯ ಜೊತೆಗೆ ಪ್ರಜಾಪ್ರಭುತ್ವದ ಆಶಯಗಳಾದ ಶಾಂತಿ ಸಹಬಾಳ್ವೆಯ ತತ್ವಗಳನ್ನೇ ನಾಶ ಮಾಡುತ್ತಿವೆ. ಇದರಿಂದಾಗಿ ನಾವು ಸೈನ್ಯದ ಬಲವನ್ನು, ಪೋಲಿಸ್ ಬಲವನ್ನು ಹೆಚ್ಚಿಸಿಕೊಳ್ಳುವತ್ತ ನಡೆಯುತ್ತಿದ್ದೇವೆ. ಪೋಲಿಸ್ ಬಲದಿಂದ ಯಾವುದೇ ಪ್ರಜಾಪ್ರಭುತ್ವವನ್ನು ಬಹಳ ಕಾಲ ಮುನ್ನಡೆಸಲು ಸಾದ್ಯವಿಲ್ಲ. ಜೊತೆಗೆ ಭಯೋತ್ಪಾದನೆ ಮತ್ತು ಪೋಲಿಸ್ ರಾಜ್ಯದ ನಡುವೆ ಸಿಲುಕಿಕೊಳ್ಳುವ ಯಾವುದೇ ಸಾಮಾನ್ಯ ಮನುಷ್ಯನೂ ನಿರಾತಂಕವಾಗಿ ಪ್ರಜಾಪ್ರಭುತ್ವದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಬಾಗವಹಿಸಲು ಸಾದ್ಯವಿಲ್ಲ. ಅಭಿಪ್ರಾಯ ಸ್ವಾತಂತ್ರವನ್ನೇ ಹತ್ತಿಕ್ಕಲು ಯತ್ನಿಸುವ ಭಯೋತ್ಪಾದನೆ ಕ್ರಮೇಣ ಪ್ರಜಾಪ್ರಭುತ್ವದ ಕುತ್ತಿಗೆಯನ್ನೇ ಹಿಚುಕುವುದು ಖಚಿತ.
ಕಳೆದ ಏಳು ದಶಕಗಳಿಂದಲೂ ನಿರಾತಂಕವಾಗಿ ನಡೆಯುತ್ತ ಬಂದಿರುವ ( ಕೆಲವು ತಾತ್ಕಾಲಿಕ ಅಡೆತಡೆಗಳ ನಡುವೆಯೂ) ನಮ್ಮ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ನಮ್ಮ ಆರ್ಥಿಕ ನೀತಿಯನ್ನು ಮರುಪರಿಶೀಲನೆಗೆ ಒಳಪಡಿಸಬೇಕಾಗಿದೆ. ಇದರ ಜೊತೆಗೆ ಭಯೋತ್ಪಾದನೆಯ ಎಲ್ಲ ಬೇರುಗಳನ್ನು ಕಿತ್ತು ಹಾಕಲು ಒಂದು ರಾಷ್ಟ್ರವಾಗಿ ನಾವಿಂದು ಕೆಲಸ ಮಾಡಬೇಕಿದೆ.
No comments:
Post a Comment