ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಅ. ವ್ಯಾಪಕ ಬಂಡಾಯ
1830 – 33ರ ಸಮಯದಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ ರೈತಾಪಿ – ಜನರ ವ್ಯಾಪಕ ಬಂಡಾಯವೆದ್ದಿತು. ಇದು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡಿದ್ದ ನಗರ ಫೌಜುದಾರಿಯಲ್ಲಿ ತೀರ್ವವಾಗಿದ್ದ ಕಾರಣದಿಂದಾಗಿ ನಗರ ರೈತಾಪಿ ಬಂಡಾಯ ಎಂದು ಖ್ಯಾತವಾಯಿತು. ಇದೇ ಸಮಯದಲ್ಲಿ ಇತರೆ ಜಿಲ್ಲೆಗಳಿಗೂ ಸಶಸ್ತ್ರ ಕ್ರಾಂತಿ ಹಬ್ಬಿತ್ತು. ಉತ್ತರ ಕನ್ನಡ, ಚಿತ್ರದುರ್ಗ, ತುಮಕೂರು, ಹಾಸನ, ಮೈಸೂರು, ಮಂಡ್ಯ ಮತ್ತು ಬೆಂಗಳೂರಿನಲ್ಲಿ ಸಶಸ್ತ್ರ ಕ್ರಾಂತಿ ನಡೆದಿತ್ತು. ಹಿಂಸಾತ್ಮಕ ರೂಪವನ್ನಿನ್ನೂ ಪಡೆಯದ ಜನ ಸಮೂಹದ ಹೋರಾಟಗಳು ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ನಡೆದಿದ್ದವು. ರಾಯಚೂರು ಮತ್ತು ಧಾರವಾಡ ಜಿಲ್ಲೆಗಳು ವಿವಿಧ ರೂಪಗಳಲ್ಲಿ ಹೋರಾಟಕ್ಕೆ ತಮ್ಮ ಬೆಂಬಲವನ್ನು ನೀಡಿದವು. ಧಾರವಾಡದ ಉತ್ತರ ಭಾಗದಲ್ಲಿ ಸಂಗೊಳ್ಳಿ ರಾಯಣ್ಣನ ನೇತೃತ್ವದಲ್ಲಿ ಬಂಡಾಯ ನಡೆದಿದ್ದರೆ, ದಕ್ಷಿಣದ ಭಾಗಗಳು ಆ ಬಂಡಾಯಕ್ಕೆ ಕೈಲಾದ ಸಹಾಯವನ್ನು ಮಾಡಿದವು. ಹಾಗಾಗಿ ನಗರದ ರೈತಾಪಿ ಬಂಡಾಯ ಬಹುಶಃ ಕರ್ನಾಟಕದಲ್ಲಷ್ಟೇ ಅಲ್ಲದೆ ಇಡೀ ಭಾರತದಲ್ಲಿ ಬ್ರಿಟೀಷ್ ವಸಾಹತುಶಾಹಿಯ ಆಳ್ವಿಕೆಯ ಮೊದಲ ದಶಕಗಳಲ್ಲಿ ನಡೆದ ವ್ಯಾಪಕ ಊಳಿಗಮಾನ್ಯ ವಿರೋಧಿ ಮತ್ತು ವಸಾಹತು ವಿರೋಧಿ ಹೋರಾಟವಾಗಿತ್ತು.
ಆ. ಬಂಡಾಯ ಸ್ಪೋಟದಲ್ಲಿ ಭೂಮಾಲೀಕರ ಪಾತ್ರ
ಭೂಮಾಲೀಕ ವರ್ಗದ ಕೆಲವರು ವಸಾಹತುಶಾಹಿಯ ವಿರುದ್ಧದ ಚಳುವಳಿಗೆ ಚಾಲನೆ ಕೊಟ್ಟ ನಂತರ ರೈತಾಪಿ ವರ್ಗದವರು ಸ್ವತಂತ್ರವಾಗೊಂದು ನಿರ್ಧಾರಕ್ಕೆ ಬಂದರು. ಚೆನ್ನಮ್ಮಳ ಹೋರಾಟ ಮತ್ತಾಕೆ ಬೆಳೆಸಿದ ಊಳಿಗಮಾನ್ಯ ವರ್ಗದ ಬೇಡಿಕೆಗಳು ರೈತಾಪಿ ವರ್ಗದ ಭಾಗವಹಿಸುವಿಕೆಯನ್ನೂ ಪ್ರೋತ್ಸಾಹಿಸಿದ್ದನ್ನು ನಾವೀಗಾಗಲೇ ನೋಡಿದ್ದೇವೆ. ಆದರೆ ರೈತಾಪಿ ವರ್ಗ, ಹಾಗೆ ಮಾಡುವಾಗ, ಅವರು ತಮ್ಮದೇ ಸ್ವಂತ ಊಳಿಗಮಾನ್ಯ ವಿರೋಧಿ ಹಾಗೂ ವಸಾಹತುಶಾಹಿ ವಿರೋಧಿ ಬೇಡಿಕೆಗಳನ್ನಿಟ್ಟರು, ಕೊನೆಗಿದು ಒಳತಿರುಳಾಗಿದ್ದ ಸೃಜನಶೀಲತೆ ಮತ್ತು ಶೌರ್ಯವನ್ನು ಬಿಡುಗಡೆಗೊಳಿಸಿ ಸುಸ್ಥಿರವಾಗಿಸಿತು.
ಸಂಗೊಳ್ಳಿ ರಾಯಣ್ಣನ ಹೋರಾಟದಲ್ಲಿ, ರೈತಾಪಿ ವರ್ಗದ ದೃಷ್ಟಿಕೋನವು ಊಳಿಗಮಾನ್ಯ ರಾಜಕೀಯ ನಡೆಗಳಿಗನುಗುಣವಾಗಿಯೇ ಇತ್ತು. ಜನಸಮೂಹ ಕಿತ್ತೂರು ಸಂಸ್ಥಾನವನ್ನು ಮರುಸ್ಥಾಪಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಅದೇ ರೀತಿಯಲ್ಲಿ, ನಗರದ ಬಂಡಾಯದಲ್ಲೂ ರೈತಾಪಿ ವರ್ಗದ ಊಳಿಗಮಾನ್ಯ ವಿರೋಧಿ, ವಸಾಹತು ವಿರೋಧಿ ಆಕಾಂಕ್ಷೆಗಳು ಒಂದು ನಿರ್ದಿಷ್ಟ ರಾಜಕೀಯ ಚೌಕಟ್ಟಿನೊಳಗಿತ್ತು. ಬುಡಿಬಸಪ್ಪ ನಾಯಕನನ್ನು ಇಕ್ಕೇರಿ ರಾಜವಂಶಸ್ಥ ಎಂದು ಗುರುತಿಸಿದರು ಮತ್ತು ನಗರದಲ್ಲಿ ಇಕ್ಕೇರಿ ಆಳ್ವಿಕೆಯನ್ನು ಮರು ಸ್ಥಾಪಿಸಬೇಕೆಂದು ಪಣ ತೊಟ್ಟರು.
ನಗರದ ಬಂಡಾಯದಲ್ಲಿ ಮೊದಲ ಹೆಜ್ಜೆಯನ್ನು ವಸಾಹತುಶಾಹಿಯ ಸಹವಾಸದಿಂದ ಹೊರಬಂದ ಭೂಮಾಲೀಕರಾಗಲಿ ಪಾಳೇಗಾರರಾಗಲೀ ಇಡಲಿಲ್ಲ. ಅವರುಗಳು ಒಂದಷ್ಟು ತಡವಾಗಿ ಬಂದರು. ಬದಲಿಗೆ, ಮೊದಲ ಹೆಜ್ಜೆಯನ್ನಿಟ್ಟಿದ್ದು ಪ್ರತಿಗಾಮಿ ಮಧ್ಯವರ್ತಿ – ಊಳಿಗಮಾನ್ಯ ಅಧಿಕಾರಶಾಹಿ. 1820ರ ಕೊನೆಯಷ್ಟೊತ್ತಿಗೆ, ವ್ಯಾಪಕವಾದ ಬಿಕ್ಕಟ್ಟಿನ ವಾತಾವರಣದಲ್ಲಿ, ಆಳುವಾಸೆಯ ವರ್ಗಗಳು ಆಸ್ಥಾನದಲ್ಲಿ ಒಂದಾದವು.
ಬಂಡಾಯಕ್ಕೆ ಸಹಾಯ ಮಾಡಿದ ಕಾರಣಗಳನ್ನು ವಿವರಿಸುತ್ತಾ ಶಾಮ ರಾವ್ ಹೇಳುತ್ತಾರೆ: “ಭಕ್ಷಿ ರಾಮ ರಾವ್ ನಗರದ ಫೌಜುದಾರನಾಗಿದ್ದಾಗ ಮತ್ತು ನಂತರ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ವಿವಿಧ ಹುದ್ದೆಗಳನ್ನಲಂಕರಿಸುವ ಮೂಲಕ ಸ್ಥಾಪಿನಾದಾಗ ಮಾಡಿದ ಪ್ರಭಾವದ ಕಾರಣದಿಂದ, ನಾವೀಗಾಗಲೇ ನೋಡಿದಂತೆ ಫೌಜುದಾರಿಯ ಪ್ರಮುಖ ಸ್ಥಾನಗಳನ್ನೆಲ್ಲ ಅವನ ಕುಟುಂಬಸ್ಥರು ಮತ್ತು ಅಣ್ಣಿಗೇರಿ ಹಾಗೂ ಹಾನಗಲ್ಲಿನ ಕುಟುಂಬದವರೇ ತುಂಬಿಕೊಂಡರು. ಹೀಗೆ ಸಶಕ್ತ ಆಸಕ್ತಿಗಳುಳ್ಳ, ಅವರದೇ ಕೌಟುಂಬಿಕ ಪಕ್ಷಗಳು ಅಧಿಕಾರವನ್ನನುಭವಿಸಿದವು, 1830ರಲ್ಲಿ ಬಂಡಾಯ ಪ್ರಾರಂಭವಾಗುವವರೆಗೆ. ನಂಬಿಕೆಯ ಪ್ರಕಾರ, ಈ ಪಕ್ಷಗಳ ಹಲವು ಸದಸ್ಯರು ವಿವಿಧ ರೀತಿಯ ಮೋಸ ಮಾಡಿದರು ಹಾಗೂ ಹಣವನ್ನು ದುರುಪಯೋಗ ಪಡಿಸಿಕೊಂಡರು. ಆ ಭಾಗದ ದೇಶದ ಅರಣ್ಯದಲ್ಲಿ ಆಶ್ರಯ ಪಡೆದಿದ್ದ ದರೋಡೆಕೋರರ ಗುಂಪುಗಳೊಂದಿಗೂ ಗುರುತಿಸಿಕೊಂಡಿದ್ದರು ಎಂಬ ಅನುಮಾನಗಳಿವೆ. ಹೊನ್ನಾಳಿ ತಾಲ್ಲೂಕಿನ ಚಟ್ನಹಳ್ಳಿ ಗ್ರಾಮದಲ್ಲಿ ಕಳ್ಳರ ಕೆಲವು ಕುಟುಂಬಗಳು (ಸ್ಥಳೀಯವಾಗವರನ್ನು ಫಸೇಗಾರರು ಎಂದು ಕರೆಯಲಾಗುತ್ತಿತ್ತು), ಹಲವು ವರುಷಗಳಿಂದ ನೆಲೆಸಿದ್ದರು. 1820ರ ಸುಮಾರಿನಲ್ಲಿ ದಕ್ಷಿಣ ಮರಾಠ ದೇಶದಿಂದ ಇದೇ ಕುಟುಂಬಗಳ ದೊಡ್ಡ ಸಂಖೈಯ ಜನರು ಬಂದು ನೆರೆಹೊರೆಯಲ್ಲಿ ನೆಲೆ ನಿಂತರು. ಉತ್ತರ ಆರ್ಕೋಟಿನ ಮತ್ತೊಂದು ಗುಂಪು ಮತ್ತು ಬೆಂಗಳೂರಿನತ್ತಿರದಿಂದ ಬಂದ ಗುಂಪು ತರೀಕೆರೆಯಿಂದ ಸ್ವಲ್ಪ ದೂರದಲ್ಲಿರುವ ಲಕ್ಕವಳ್ಳಿಯಲ್ಲೆ ನೆಲೆ ನಿಂತಿತು. ಈ ಗುಂಪಿನ ಜನರಲ್ಲಿ ಕೆಲವು ಕುಖ್ಯಾತ ದರೋಡೆಕೋರರಿದ್ದರು, ಮೇಲೆ ತಿಳಿಸಿದ ಶಕ್ತಿಶಾಲಿ ಕುಟುಂಬಗಳು ಈ ಗುಂಪಿನ ಕೆಲವರಿಗೆ ಪ್ರೋತ್ಸಾಹ ಕೊಡುತ್ತಿದ್ದರು ಎಂಬ ಗುಮಾನಿಗಳಿವೆ. ಉದಾಹರಣೆಗೆ ನೋಡುವುದಾದರೆ, ಜನವರಿ 1827ರಲ್ಲಿ, ಯೆಡೆಹಳ್ಳಿ (ಈಗದನ್ನು ನರಸಿಂಹರಾಜಪುರ ಎಂದು ಕರೆಯಲಾಗುತ್ತದೆ) ಎಂಬ ಪಟ್ಟಣದ ಶ್ರೀಮಂತ ವರ್ತಕನ ಮನೆಗೆ ಕನ್ನ ಹಾಕಿ, ಹಲವರನ್ನು ಸಾಯಿಸಲಾಗಿತ್ತು ಮತ್ತು ದೋಚಿದ ಸಂಪತ್ತು ಮೂರೂವರೆ ಲಕ್ಷ ರುಪಾಯಿಯಷ್ಟಿತ್ತು. ಆ ಸಮಯದಲ್ಲಿ ದೇಶದೆಲ್ಲೆಡೆಯಿದ್ದ ನಂಬುಗೆಯೆಂದರೆ, ಈ ಕಾರ್ಯಕ್ಕಾಗಿ ದರೋಡೆಕೋರರನ್ನು ನಿಯೋಜಿಸಿದ್ದು ಚೆನ್ನಗಿರಿಯ ಅಮಲ್ದಾರ ಅಣ್ಣಿಗೇರಿಯ ವೆಂಕಟ ರಾವ್, ಬೆಂಬಲ ಕೊಟ್ಟಿದ್ದು ಸಂಬಂಧಿಕನಾಗಿದ್ದ ನಗರದ ಫೌಜುದಾರನಾಗಿದ್ದ ಹಾನಗಲ್ ಕೃಷ್ಣ ರಾವ್. ಜನರಲ್ಲಿದ್ದ ಈ ನಂಬುಗೆ ಮತ್ತು ನಿಯಮಿತವಾಗಿ ದೇಶದ ವಿವಿದೆಡೆ ನಡೆಯುತ್ತಿದ್ದ ದರೋಡೆಗಳು ರೈತಾಪಿ ಜನರ ಬಂಡಾಯವನ್ನು ವ್ಯಾಪಕವಾಗಿಸಿತು, ಇಲ್ಲವಾದರಿದಿಷ್ಟು ವ್ಯಾಪಕವಾಗುವ ಸಾಧ್ಯತೆಗಳಿರಲಿಲ್ಲ”. (86)
ಈ ಸಂಪುಟದಲ್ಲೀಗಾಗಲೇ ನಗರದ ಕುಖ್ಯಾತ ಫೌಜುದಾರ ಕೃಷ್ಣರಾವ್ ತನ್ನ ಜಾಗದಲ್ಲಿ ನೇಮಕವಾಗಿದ್ದ ವೀರ ರಾಜ ಅರಸನನ್ನು ಎತ್ತಂಗಡಿಮಾಡಲು ಜನರನ್ನು ಎತ್ತಿ ಕಟ್ಟಿದ್ದೇಗೆ ಎಂದು ನೋಡಿದ್ದೇವೆ.
ಮಧ್ಯವರ್ತಿ – ಊಳಿಗಮಾನ್ಯ ಅಧಿಕಾರಶಾಹಿಗಳ ನಡುವಿನ ನಾಯಿ ಜಗಳ ಹಿಂಸಾತ್ಮಕ ರೂಪ ಪಡೆದುಕೊಂಡಿತು. ರೈತಾಪಿ ಜನ ಸಮೂಹದ ಮೇಲಿನ ಅವಲಂಬನೆ ಹೆಚ್ಚಾಯಿತು ಮತ್ತವರನ್ನು ತಮ್ಮ ಸುಳಿಯೊಳಗೆ ಎಳೆದುಕೊಳ್ಳುವ ಪ್ರಯತ್ನಗಳು ಹೆಚ್ಚಾದವು. ಶಾಮ ರಾವ್ ಹೇಳುವ ‘ಕಳ್ಳರು’ ಮತ್ತು ‘ದರೋಡೆಕೋರರು’ ಬಡತನದಿಂದ ಹೊರಬರಲು ಆ ದಾರಿಯನ್ನು ಆರಿಸಿಕೊಂಡಿರಲೂ ಬಹುದು.
ಹಾಗಾಗ್ಯೂ, ಕೃಷ್ಣರಾವನ ಬೇಡಿಕೆಗಳು ಈಡೇರಿದ ನಂತರ, ಅಮಲ್ದಾರರು ಬೆಳೆಸಿದವರಲ್ಲಿ ಒಬ್ಬನಾದ ಬುಡಿ ಬಸಪ್ಪ ನಾಯಕ, ನಾಯಕತ್ವವನ್ನು ವಹಿಸಿಕೊಂಡು ಹೋರಾಟಕ್ಕೊಂದು ಹಾದಿ ಮಾಡಿದ. ಬುಡಿ ಬಸಪ್ಪನ ನಿಜವಾದ ಹೆಸರು ಹೈಗಮಲ್ಲ ಎನ್ನುತ್ತಾರೆ ಶಾಮ ರಾವ್; ಆತ “ವೃತ್ತಿಯಿಂದ ಕೃಷಿಕನಾಗಿದ್ದ ಮತ್ತು ತನ್ನನ್ನು ತಾನೇ ಬುಡಿ ಬಸಪ್ಪ ಎಂದು ಕರೆದುಕೊಂಡು, ನಗರದ ಕೊನೆಯ ರಾಜನ ದತ್ತು ಪುತ್ರ ನಾನು ಎಂದು ಹೇಳಿಕೊಳ್ಳುತ್ತ ನಗರದ ಗಡಿಯ ಮೇಲೆ ಹಕ್ಕು ಸಾಧಿಸಲು ಮುಂದುವರೆದ. ವಾಸ್ತವದಲ್ಲಿ, ಅವನು ಹೇಳುತ್ತಿದ್ದುದು ಸುಳ್ಳಾಗಿತ್ತು ಮತ್ತಾತ ಹೊನ್ನಾಳಿ ಬಳಿಯ ಚಿನಿಕಟ್ಟೆ ಗ್ರಾಮದವನು; ಅಲ್ಲಿ ಅವನ ತಾಯಿ ಮತ್ತು ಹಿರಿಯಣ್ಣ ವಾಸಿಸುತ್ತಿದ್ದಾರೆ.
ಚಿಕ್ಕಂದಿನಿಂದಲೂ ಹೈಗಮಲ್ಲ ಅಲೆಮಾರಿ ಜೀವನ ನಡೆಸುತ್ತಿದ್ದ ಮತ್ತು ತನ್ನಳ್ಳಿಯ ನೆರೆಹೊರೆಯಲ್ಲಿ ಬದುಕುತ್ತಿದ್ದ ಕಳ್ಳರಲ್ಲಿ ಒಪ್ಪಬಹುದಾದ ಕಾಮ್ರೇಡುಗಳನ್ನು ಹುಡುಕಿಕೊಂಡಿದ್ದ”. (87)
ಎಂ.ಎಚ್.ಗೋಪಾಲ್ ಇದಕ್ಕೊಂದಷ್ಟು ಸೇರಿಸುತ್ತಾ: “ಇಪ್ಪತ್ತು ವರುಷಗಳಾಗುವುದಕ್ಕೆ ಮೊದಲೇ ಆತ ಹಲವಾರು ದರೋಡೆಗಳನ್ನು ಮಾಡಿ ಎರಡು ವರುಷ ಜೈಲಿನಲ್ಲೂ ಇದ್ದು ಬಂದಿದ್ದ. ನಂತರ ಆತನನ್ನು ಜಂಗಮರೊಬ್ಬರ ಸೇವೆಗೆ ಕರೆದೊಯ್ಯಲಾಯಿತು…..ನಗರದ ಕೊನೆಯ ಪಾಳೇಗಾರರ ಆಧ್ಯಾತ್ಮಿಕ ಗುರುಗಳಾಗಿದ್ದರು ಈ ಜಂಗಮರು ಮತ್ತವರ ಬಳಿ ಪಾಳೇಗಾರನ ಮುದ್ರಾ ಉಂಗುರಗಳಿತ್ತು. ಸಾದರ ಮಲ್ಲ (ಹೈಗಮಲ್ಲ) ಅಥವಾ ಮುಂದಾತ ಹೆಸರಾದಂತೆ ಬುಡಿ ಬಸವಪ್ಪ ಈ ಮುದ್ರಾ ಉಂಗುರಗಳನ್ನು ವಶಪಡಿಸಿಕೊಂಡ ಮತ್ತು ರಹಸ್ಯವಾಗಿ ತಾನು ನಗರದ ಪಾಳೇಗಾರರ ವಂಶಸ್ಥ ಎಂಬ ಕತೆಯನ್ನು ಹಬ್ಬಿಸಿದ. 1812ರಲ್ಲಿ (1821?) ಆತನನ್ನು ದರೋಡೆಯ ಆರೋಪದ ಮೇರೆಗೆ ಸುದೀರ್ಘ ಕಾಲ ಕೆನರಾದಲ್ಲಿ ಬಂಧನದಲ್ಲಿಡಲಾಗಿತ್ತು, ಮತ್ತವನ ಬಿಡುಗಡೆಯೊಂದಿಗೆ, ನಗರದ ದಿವಂಗತ ರಾಣಿಯ ದತ್ತು ಪುತ್ರ ದೊಡ್ಡ ಬಸವಪ್ಪನ ಮಗ ನಾನು ಎಂದು ಹೇಳಿಕೊಳ್ಳುತ್ತಾ, ಕೆನರಾದ ಜಿಲ್ಲಾ ನ್ಯಾಯಾಲಯದಿಂದ ‘ಬುಡಿ ಬಸವಪ್ಪ, ನಗರದ ಖಾವಂದರು ಅಥವಾ ನಗರದ ದೊರೆಗಳು ಎಂದೊಂದು ರಹದಾರಿ ಪತ್ರ ಪಡೆದುಕೊಂಡುಬಿಟ್ಟ. ಏಪ್ರಿಲ್ 1830ರಲ್ಲಿ, ಅವನ ಮದುವೆಯ ಸಂದರ್ಭದಲ್ಲಿ, ಬಹುಶಃ ಉದ್ದೇಶಪೂರ್ವಕವಾಗಿ ಅನವಟ್ಟಿಯ ಅಮಲ್ದಾರ ಬುಡಿ ಬಸವಪ್ಪನನ್ನು ಕೆಲವು ವುರಷಗಳಿಂದ ದರೋಡೆ ಮತ್ತು ಕಳ್ಳತನಕ್ಕೊಳಗಾಗಿದ್ದ ಜಿಲ್ಲೆಯಾದ ‘ನಗರದ ರಾಜ’ ಎಂದು ಗುರುತಿಸಿದರು. ಕೆಲವು ಕಾಲದ ನಂತರ, ಆತನನ್ನು ಕೆಲವು ಪಟೇಲರು ನಗರದ ಸಾರ್ವಭೌಮನನ್ನಾಗಿ ಅಧಿಕೃತವಾಗಿ ಪೀಠಾರೋಹಣ ಮಾಡಿಸಿದರು. ಈ ಎಲ್ಲಾ ಕೆಲಸಗಳಿಗೂ ಫೌಜುದಾರಿಯಲ್ಲಿದ್ದ ಕೆಲವು ಸರಕಾರಿ ಅಧಿಕಾರಿಗಳ ಬೆಂಬಲವಿತ್ತು; ಬೆಂಬಲ ನೀಡಿದವರು ಮಾಜಿ ದಿವಾನನಾಗಿದ್ದ ರಾಮ ರಾವಿನ ಜೊತೆಗಾರರು ಮತ್ತು ರಾಮ ರಾವಿನ ಸೋದರಳಿಯ ಕೃಷ್ಣಾ ರಾವನ ಜಾಗದಲ್ಲಿ ವೀರ ರಾಜ ಅರಸನನ್ನು ಫೌಜುದಾರನನ್ನಾಗಿಸಿದ್ದನ್ನು ವಿರೋಧಿಸುತ್ತಿದ್ದವರು.
ಈ ಮಧ್ಯೆ, 1827ರಲ್ಲಿ ರಾಮರಾವ್ ಬಾಕಿ ಉಳಿಸಿಕೊಂಡಿದ್ದ ಸರಕಾರಕ್ಕೆ ಕಟ್ಟಬೇಕಿದ್ದ ಮೊತ್ತವನ್ನು ಸಂಗ್ರಹಿಸಲು ವೀರ ರಾಜ ಪ್ರಯತ್ನಿಸಿದ್ದು, 1826 – 28ರ ನಡುವಿನ ಪ್ರತಿಕೂಲ ಹವಾಮಾನ, ಸಾಮಾನ್ಯ ದಬ್ಬಾಳಿಕೆ ಮತ್ತು ನಗರದ ಫೌಜುದಾರಿಯಲ್ಲಿದ್ದ ಭ್ರಷ್ಟಾಚಾರ ಹಾಗೂ ಜೀವ ಮತ್ತು ಸಂಪತ್ತಿನ ಅಸುರಕ್ಷತೆಗಳೆಲ್ಲವೂ ಸೇರಿ ನಗರದಲ್ಲೊಂದು ಎಚ್ಚರಿಕೆಯ ವಾತಾವರಣವನ್ನು ಹಾಗೂ ಅಸಮಾಧಾನವನ್ನು ಹುಟ್ಟಿಹಾಕಿತ್ತು. ಇದರ ಲಾಭ ಪಡೆಯುತ್ತಾ, ಬಸವಪ್ಪ ತಾನು ಈ ದೇಶದ ಸಾರ್ವಭೌಮತ್ವವನ್ನು ಮರಳಿ ಪಡೆದಿದ್ದೇನೆ ಎಂಬ ಸುದ್ದಿಯನ್ನು ಹರಡಿಸುತ್ತ ಬಸವಪ್ಪ ರೈತರಿಗೆ ‘ತನ್ನ ಉದ್ದೇಶಗಳಿಗೆ ಬೆಂಬಲ ಕೊಟ್ಟರೆ ಎಲ್ಲಾ ಬಾಕಿಗಳನ್ನು ಮನ್ನಾ ಮಾಡುವುದಾಗಿ ಹಾಗೂ ಸರಕಾರಕ್ಕೆ ಕಟ್ಟಬೇಕಿರುವ ಭೂಕಂದಾಯವನ್ನು ಈಗಿರುವ ಒಂದು ಪಗೋಡಾದಿಂದ ಕೇವಲ ಒಂದು ರುಪಾಯಿಗೆ ಇಳಿಸಲಾಗುವುದೆಂದು’ ಪ್ರಮಾಣ ಮಾಡಿದನು’.
ನಂತರದಲ್ಲಾತ ಸಶಸ್ತ್ರ ಸೈನಿಕರನ್ನು ಬೆಳೆಸಲಾರಂಭಿಸಿದ…..” (88)
ನಗರದಲ್ಲಿ ಬುಡಿ ಬಸವಪ್ಪನ ಆಳ್ವಿಕೆ ಸಂಪೂರ್ಣವಾಗಿ ನಡೆಯುತ್ತಿರಬೇಕಾದರೆ, ಚಿಕ್ಕಮಗಳೂರಿನಲ್ಲಿ ಈ ಮುಂಚೆ ಇಕ್ಕೇರಿ ಸಾಮ್ರಾಜ್ಯದಡಿ ಸೇವೆ ಸಲ್ಲಿಸುತ್ತಿದ್ದ ತರೀಕರೆಯ ಪಾಳೇಗಾರ ರಂಗಪ್ಪ ನಾಯಕನ ನಾಯಕತ್ವ ಪ್ರಾಬಲ್ಯ ಮೆರೆಯಿತು.
ಈ ಮಹತ್ವಾಕಾಂಕ್ಷೆಯ ಪಾಳೇಗಾರನ ಬಗ್ಗೆ ಶಾಮ ರಾವ್ ಬರೆಯುತ್ತಾರೆ:
“ರೈತರ ಅಸಮಾಧಾನಕ್ಕೆ ಬೆಂಬಲ ಕೊಟ್ಟ ಮತ್ತೊಬ್ಬ ವ್ಯಕ್ತಿಯೆಂದರೆ ರಂಗಪ್ಪ ನಾಯಕ, ತರೀಕೆರೆಯ ಪಾಳೇಗಾರ ಕುಟುಂಬದ ಮುಖ್ಯಸ್ಥ. ಸ್ಥಳಾಂತರಗೊಂಡ ಪಾಳೇಗಾರರು ಅಥವಾ ಅವರ ವಂಶಜರು ರಾಜ್ಯದ ರಾಜಧಾನಿಯಲ್ಲಿ ವಾಸಿಸಬೇಕಿತ್ತು. ಇದರ ಪ್ರಕಾರವಾಗಿಯೇ, ಈ ರಂಗಪ್ಪ ನಾಯಕ ಮೈಸೂರಿನಲ್ಲಿ ವಾಸಿಸುತ್ತಿದ್ದ. ನಗರ ವಿಭಾಗದಲ್ಲಿನ ಅಸಮಾಧಾನಗಳ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ, ತರೀಕೆರೆಯಲ್ಲೊಂದು ಮದುವೆ ಇರುವ ನೆಪಮಾಡಿಕೊಂಡು ಅನುಮತಿ ಪಡೆದು ಮೈಸೂರನ್ನು ತೊರೆದ…..ತರೀಕೆರೆಯನ್ನು ತಲುಪುತ್ತಿದ್ದಂತೆ, ಮೈಸೂರು ಮಹಾರಾಜ, ಕಂಪನಿಯ ಒಪ್ಪಿಗೆಯೊಂದಿಗೆ ತನಗೆ ತನ್ನ ಪುರಾತನ ಪ್ರಾಂತ್ಯವನ್ನು ಮರಳಿಸಿದ್ದಾರೆ ಎಂದೊಂದು ತಪ್ಪು ಮಾಹಿತಿಯನ್ನು ಜನರಿಗೆ ನೀಡಿಬಿಟ್ಟ. ಮರಳಿಸಿರುವುದು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಶಾಂತ ಪರಿಸ್ಥಿತಿಯನ್ನು ಉಳಿಸುವುದಕ್ಕೆ, ಈ ಕಾರ್ಯದಲ್ಲಿ ನೀವು ನನಗೆ ಸಹಾಯ ಮಾಡಿದರೆ ತೆರಿಗೆಯ ಕೆಲ ಭಾಗವನ್ನು ಮನ್ನಾ ಮಾಡುವುದಾಗಿ ತಿಳಿಸಿದ….” (89)
ಹಾಗಾಗಿ ಒಂದು ಗಮನಾರ್ಹ ಬದಲಾವಣೆ ಇಲ್ಲಿ ಕಂಡು ಬಂತು. ಎಲ್ಲಿಯವರೆಗೆ ಭ್ರಷ್ಟ ಮಧ್ಯವರ್ತಿ – ಊಳಿಗಮಾನ್ಯ ಅಧಿಕಾರಶಾಹಿಗಳು ಬಂಡಾಯವನ್ನು ಯಾವೊಂದು ಜನಪ್ರಿಯ ಬೇಡಿಕೆಯೂ ಇಲ್ಲದೆ ಮುನ್ನಡೆಸುತ್ತಿದ್ದರೋ, ಅಲ್ಲಿಯವರೆಗೆ ಪ್ರತಿಗಾಮಿ ಗುಂಪಿನ ವಿರುದ್ಧ ನಿಂತಿದ್ದ ಮತ್ತೊಂದು ಪ್ರತಿಗಾಮಿ ಗುಂಪಿನ ಆಸಕ್ತಿಗಳನ್ನಷ್ಟೇ ಅದು ಪೂರೈಸುತ್ತಿತ್ತು. ಕೃಷ್ಣರಾವಿನ ಅಧಿಕಾರ ಮರಳಿದ ನಂತರ ಘಟನಾವಳಿಗಳಲ್ಲಿ ತಿರುವುಗಳಾದವು. ಹೊಸ ನಾಯಕರು ಹುಟ್ಟಿದರು: ಬುಡಿ ಬಸವಪ್ಪ ಮತ್ತು ರಂಗಪ್ಪ. ಇಬ್ಬರನ್ನೂ ಪ್ರೋತ್ಸಾಹಿಸಿದ್ದು ಊಳಿಗಮಾನ್ಯ ವರ್ಗ ಆಸಕ್ತಿಗಳು. ಆದರೂ, ಈ ಸಮಯದಲ್ಲಿ ಅವರು ರೈತಾಪಿ ಸಮೂಹದ ವಿಷಯಗಳನ್ನೆತ್ತಿಕೊಂಡರು ಮತ್ತು ಸ್ಪಷ್ಟವಾಗಿ ಅದರ ಬಗ್ಗೆ ಮಾತನಾಡಲಾರಂಭಿಸಿದರು. ಜನರ ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರಗಳನ್ನೇಳುವ ಒತ್ತಡ ಅವರ ಮೇಲಿತ್ತು. ಹಾಗಾಗಿ ಜನ ಸಮೂಹ ಅವರ ಹಿಂದೆ ಮೆರವಣಿಗೆ ಹೊರಟರು ಮತ್ತು ಅಧಿಕಾರವನ್ನು ಗಳಿಸುವ ಅವರ ಹೋರಾಟದಲ್ಲಿ ಭಾಗಿಯಾದರು, ಇದರಿಂದಾಗಿ ಮತ್ತು ಇದರಿಂದ ಮಾತ್ರ ತಮ್ಮ ಮೇಲಿನ ಹೊರೆ ಕಡಿಮೆಯಾಗುವುದೆಂಬ ಭಾವ ಅವರಲ್ಲಿತ್ತು.
ಮುಂದಿನ ವಾರ: ನಗರದ ರೈತಾಪಿ ಬಂಡಾಯ ಭಾಗ2
No comments:
Post a Comment