ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಇ. ಭೂಭಾಗದ ಸರಿಯಾದ ಉಪಯೋಗ
ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಭಾಗಗಳನ್ನೊಳಗೊಂಡಿದ್ದ ಕಿತ್ತೂರು ಸಂಸ್ಥಾನದ ಪಶ್ಚಿಮ ಭಾಗದಲ್ಲಿ ಮಲೆನಾಡಿನ ಅರಣ್ಯ ಪ್ರದೇಶವಿತ್ತು. ಇನ್ನಿತರ ದಿಕ್ಕುಗಳು ಪಕ್ಕದ ದೇಶಗಳಿಗೆ ತೆರೆದುಕೊಂಡಿತ್ತು. ಚೆನ್ನಮ್ಮಳ ಹೋರಾಟ ಪ್ರಾರಂಭವಾದಾಗಲೂ ಬ್ರಿಟೀಷರಿಗೆ ಕಿತ್ತೂರಿನ ಮಲೆನಾಡಿನಲ್ಲಿ ಸೋಲುಂಟಾಗಬಹುದೆಂಬ ಭಯವಿತ್ತು. ಹಾಗಾಗ್ಯೂ, ರಾಣಿ ಮತ್ತವಳ ಮಂತ್ರಿಗಳ ಊಳಿಗಮಾನ್ಯ ಮನಸ್ಥಿತಿ ಭೂಭಾಗದ ಸರಿಯಾದ ಉಪಯೋಗವನ್ನು ತಡೆದುಬಿಟ್ಟಿತು. ಆದರೂ, ಬ್ರಿಟೀಷರು ಈ ಪ್ರದೇಶದ ಬಗ್ಗೆ ಪದೇ ಪದೇ ತೋರಿದ ಆತಂಕ 1829 – 30ರಲ್ಲಿ ಸತ್ಯವಾಯಿತು. ಕಿತ್ತೂರಿನ ಬಂಡಾಯದ ಬಗ್ಗೆ ಬರೆದ ಮೊದಲ ಟಿಪ್ಪಣಿಯಲ್ಲೇ ಎಲ್ಫಿನ್ ಸ್ಟೋನ್: “……ಕಿತ್ತೂರು ಜಾಗೀರುದಾರರ ಭೂಮಿಯ ಮಧ್ಯದಲ್ಲಿದೆ, ಕೊಲ್ಲಾಪುರದಿಂದಾಗಲೀ ಅಥವಾ ವಾರೀಯಿಂದಾಗಲೀ ಹೆಚ್ಚು ದೂರವೇನಿಲ್ಲ, ಮತ್ತು ನಮ್ಮ ಮತ್ತು ಪೋರ್ಚುಗೀಸರ ಪ್ರಾಂತ್ಯದ ಮಧ್ಯೆ ಇರುವ ಕಾಡು ಗುಡ್ಡಗಳ ಸಮೀಪದಲ್ಲಿದೆ. ಈ ಕಾರಣಗಳಿಂದ, ಅರಣ್ಯ ಯುದ್ಧವಿಲ್ಲಿ ದೀರ್ಘಕಾಲೀನವಾಗುವ ಪರಿಸ್ಥಿತಿಯುಂಟಾಗಬಹುದು ಮತ್ತು ಆ ಯುದ್ಧ ಹೆಚ್ಚೆಚ್ಚು ಕಡೆಗೆ ಹರಡುತ್ತದೆ, ಅತಿ ಶೀಘ್ರವಾಗಿ ನಿಯಂತ್ರಿಸದಿದ್ದರೆ”. (69)
ಸಂಗೊಳ್ಳಿ ರಾಯಣ್ಣ ಮಲೆನಾಡನ್ನು ಬೆನ್ನೆಲುಬಾಗಿ ಬಳಸಿದ. ತನ್ನ ಪಡೆಗಳನ್ನು ಪುನರ್ ಸಂಯೋಜಿಸಲು, ವಿಶ್ರಮಿಸಲು ಮತ್ತು ಹೊಸ ದಾಳಿಗಳನ್ನು ಪ್ರಾರಂಭಿಸಲು ಮಲೆನಾಡನ್ನು ಉಪಯೋಗಿಸಿದ. ದಾಳಿ ನಡೆಸಿದ ನಂತರ ಹಿಂದಿರುಗಿದಾಗ ಅಡಗಿಕೊಳ್ಳಲು ಮಲೆನಾಡು ಉಪಯುಕ್ತವಾಯಿತು; ಮಲೆನಾಡು ಗೆರಿಲ್ಲಾಗಳಿಗೆ ಕೋಟೆಯಂತಾಯಿತು, ಅಲ್ಲವರು ಶಕ್ತಿ ಪಡೆದು ಬಯಲುಸೀಮೆಯಲ್ಲಿದ್ದ ಶತ್ರುವಿನ ಮೇಲೆ ದಾಳಿ ಆಯೋಜಿಸುತ್ತಿದ್ದರು.
ಇದು ಎಷ್ಟು ಪರಿಣಾಮಕಾರಿಯಾಗಿ ನಡೆಯಿತು ಎನ್ನುವುದನ್ನು ಕೃಷ್ಣರಾವ್ ಮತ್ತು ಹಾಲಪ್ಪ ನಮಗೆ ಮಾಹಿತಿ ನೀಡುತ್ತಾರೆ: “ಬೆಳಗಾವಿಯ ಸಂಪಗಾಂವಿನ ಹಾಗೂ ಬಿಡಿಯ ಅಮಲ್ದಾರರು ಧಾರವಾಡದ ಕಲೆಕ್ಟರರ ಮಾರ್ಗದರ್ಶನದಲ್ಲಿ ರಾಯಣ್ಣನನ್ನು ಹುಡುಕುತ್ತಿದ್ದರು, ರಾಯಣ್ಣ ಅವರಿಂದ ಯಶಸ್ವಿಯಾಗಿ ತಪ್ಪಿಸಿಕೊಂಡಿದ್ದ. ರಾಯಣ್ಣ ಮತ್ತವನ ಬೆಂಬಲಿಗರು ಬೆಟ್ಟದ ಮೇಲೆ ದಿನಗಳನ್ನು ಕಳೆದರು…..ಸಂಪಗಾಂವಿನ ಅಮಲ್ದಾರ ಕೃಷ್ಣ ರಾವ್ ರಾಯಣ್ಣನನ್ನಿಡಿಯಲು ತನ್ನೆಲ್ಲಾ ಶಕ್ತಿಯನ್ನೂ ವಿನಿಯೋಗಿಸಿದ ಮತ್ತು ಹಲವಾರು ಬಾರಿ ನಿರಾಶೆಗೊಳಗಾದ. ದಟ್ಟಾರಣ್ಯದ ಬೆಟ್ಟಗಳಿಂದಾವೃತವಾದ ದೇಶದಲ್ಲಿ ಕಿತ್ತೂರಿನ ಸಾಹಸಿಗಳನ್ನು ಹಿಡಿಯುವುದಕ್ಕೆ ಸಾಮಾನ್ಯ ಪಡೆಗಳಲ್ಲಿ ಸಾಮರ್ಥ್ಯವಿರದ ಕಾರಣದಿಂದಾಗಿ ಇಂಗ್ಲೀಷ್ ಅಧಿಕಾರಿಗಳು ಮತ್ತವರ ಬೆಂಬಲಿಗರಿಗೆ ಕಿತ್ತೂರಿನ ನಾಯಕನನ್ನು ಹುಡುಕುವುದು ತುಂಬಾ ಕಷ್ಟದ ಕೆಲಸವಾಯಿತು”. (70)
ರಾಯಣ್ಣನ ‘ತಪ್ಪೊಪ್ಪಿಗೆ’ಯಲ್ಲಿ ದೇಶದ ಬಯಲು ಪ್ರದೇಶವನ್ನೂ ಹೇಗೆ ತನ್ನನುಕೂಲಕ್ಕೆ ಉಪಯೋಗಿಸಿಕೊಂಡ ಎಂದು ಕಾಣಬಹುದು. ಅಲ್ಲಲ್ಲಿ ಬೆಟ್ಟಗಳಿದ್ದವು, ರಾಯಣ್ಣ ಸಾಮಾನ್ಯವಾಗಿ ಅವುಗಳನ್ನು ಹಿಮ್ಮೆಟ್ಟಿದಾಗ ಕೂಡಿಕೊಳ್ಳಲು ಉಪಯೋಗಿಸಿ, ಅಲ್ಲಿಂದಲೇ ಯೋಜನೆಯನ್ನು ಅಂತಿಮಗೊಳಿಸಿ ದಾಳಿಯನ್ನು ನಡೆಸುತ್ತಿದ್ದರು.
ಭೂಪ್ರದೇಶದ ಬಗ್ಗೆ ಉತ್ತಮ ಜ್ಞಾನವಿರುವುದು ಹುಡುಕುತ್ತಿರುವ ಶತ್ರುವಿನೆದುರಿಗೆ ತುಂಬಾ ಅನುಕೂಲಗಳನ್ನು ಮಾಡಿಕೊಡುತ್ತದೆ. “ಖಾನಾಪುರಕ್ಕೆ ಬೆಂಕಿ ಹಾಕಿದ ನಂತರ, ಕಿತ್ತೂರಿನ ದೇಶಪ್ರೇಮಿಗಳು ಹತ್ತಲವು ದಿಕ್ಕಿಗೆ ಚದುರಿ ಹೋದರು ಮತ್ತು ತಮ್ಮ ದಾಳಿಯನ್ನು ಮುಂದುವರೆಸಿದರು…..ರಾಯಣ್ಣ ನಂದಗಡಕ್ಕೆ ಬಂದ. ನಂದಗಡಕ್ಕೆ ರಾಯಣ್ಣನನ್ನು ಹುಡುಕಿಕೊಂಡು ಹೊರಟಿದ್ದ ಪಡೆಯನ್ನು ಮತ್ತಷ್ಟು ಶಕ್ತಗೊಳಿಸಬೇಕೆಂದು ನಿಸ್ಬೆಟ್ ದೋಬ್ ಪಡೆಯ ಕಮ್ಯಾಂಡರಿಗೆ ಮನವಿ ಮಾಡಿಕೊಂಡ…..ಈಗ ರಾಯಣ್ಣನ ಜೊತೆಗಿದ್ದ ಜನರ ಸಂಖೈ ಐನೂರಕ್ಕಿಂತಲೂ ಹೆಚ್ಚಿತ್ತು, ಮತ್ತು ದಿನೇ ದಿನೇ ಈ ಸಂಖೈಯಲ್ಲಿ ಹೆಚ್ಚಳವಾಗುತ್ತಿತ್ತು. ಸ್ಥಳೀಯ ಜ್ಞಾನದ ಕಾರಣದಿಂದಾಗಿ ಸರಕಾರಿ ಪಡೆಗಳಿಗಿಂತ ಹೆಚ್ಚು ಅನುಕೂಲ ಪರಿಸ್ಥಿತಿಯಲ್ಲಿದ್ದರು. ರಾಯಣ್ಣ ನಂದಗಡದಲ್ಲಿ ಸರಕಾರಿ ಪಡೆಗಳಿಂದ ತಪ್ಪಿಸಿಕೊಂಡ ಮತ್ತು ಪೂರ್ವದೆಡೆಗೆ ಪಯಣಿಸಿದ……” (71)
ಈ. ಕತ್ತಲೊದಿಕೆಯ ಉಪಯೋಗ
ರಾಯಣ್ಣ ಮತ್ತವನ ಗೆರಿಲ್ಲಾ ಹೋರಾಟಗಾರರು ಯಾವಾಗಲೂ ಚಲಿಸುತ್ತಲೇ ಇರಬೇಕಿತ್ತು. ನಿರ್ದಿಷ್ಟ ಗುರಿಗಳ ಮೇಲೆ ದಾಳಿ ಮಾಡಿದ ನಂತರ ಅವರು ಹೊರಟುಬಿಡಬೇಕಿತ್ತು, ಕೆಲವೊಮ್ಮೆ ಜನರ ಜೊತೆಗೆ ಮತ್ತು ದಾಳಿ ಶತ್ರು ಸೈನ್ಯದ ಮೇಲಾಗಿದ್ದರೆ ಜನರಿಲ್ಲದೆಯೇ; ಶತ್ರುಗಳನ್ನು ತಮ್ಮ ಬೆನ್ನು ಹತ್ತುವುದನ್ನು ತಪ್ಪಿಸುವ ಸಲುವಾಗಿ ಇದನ್ನವರು ಮಾಡಲೇಬೇಕಿತ್ತು. ಇದಕ್ಕಾಗಿ ಅವರು ಕತ್ತಲನ್ನು ತುಂಬಾ ಚೆನ್ನಾಗಿ ಉಪಯೋಗಿಸಿಕೊಂಡರು; ಹುಡುಕುತ್ತಿರುವ ಸೈನ್ಯವನ್ನು ಬಿಟ್ಟು ರಾತ್ರಿಯಲ್ಲಿ ಪಯಣಿಸುತ್ತಿದ್ದರು.
ರಾತ್ರಿಯನ್ನು ಮತ್ತೆ ಎಲ್ಲರನ್ನೂ ಸೇರಿಸಲು ಬಳಸುತ್ತಿದ್ದರು ಹಾಗೂ ಬೆಳಗಾಗುತ್ತಿದ್ದಂತೆಯೇ ದಾಳಿಯನ್ನಾಯೋಜಿಸುತ್ತಿದ್ದರು. ಶತ್ರುವಿಗಿದರ ಬಗ್ಗೆ ಅರಿವೇ ಇರುತ್ತಿರಲಿಲ್ಲ, ಉದಾಹರಣೆಗೆ ಬೆಳಗಿನ ಜಾವ ಐದಕ್ಕೆ ಬಿಡಿಯ ಮೇಲೆ ನಡೆದ ದಾಳಿ. (72)
ಮತ್ತವರು ಸೂರ್ಯ ಮುಳುಗುವ ಹೊತ್ತಿನಲ್ಲಿ ದಾಳಿ ನಡೆಸುತ್ತಿದ್ದರು, ಕತ್ತಲನ್ನು ಹಿಮ್ಮೆಟ್ಟಿ ಅಡಗಿಕೊಳ್ಳಲು ಯಶಸ್ವಿಯಾಗಿ ಉಪಯೋಗಿಸುತ್ತ. ರಾತ್ರಿ ಹತ್ತರ ಸಮಯದಲ್ಲಿ ಕೊಲೊನಲ್ ಮೆಕ್ ಲಿಯಾಡಿಗೆ ಬರೆದ ವರದಿಯಲ್ಲಿ ದಾಳಿಗೊಳಗಾದ ಪಡೆಯ ಮೇಜರ್ ಪಿಕೆರಿಂಗ್ ಬರೆಯುತ್ತಾನೆ: “ಈ ಸಂಜೆ ನನ್ನ ಮೇಲೆ ದೊಡ್ಡ ಸಂಖೈಯ ಬಂಡಾಯಗಾರರು ದಾಳಿ ನಡೆಸಿದರು…..ಸೂರ್ಯಾಸ್ತಮಾನದ ಸಮಯದಲ್ಲಿ ಅವರು ಬಂದರು ಆದರೆ ಕತ್ತಲಾಗಿ ಸ್ವಲ್ಪ ಹೊತ್ತಿನವರೆಗೂ ದೂರದಿಂದ ಗುಂಡು ಹಾರಿಸುತ್ತಲೇ ಇದ್ದರು ಮತ್ತು ನಮ್ಮ ಪಡೆಗಳಿಂದ ಅವರನ್ನು ಕೊನೆಗೆ ಹಿಮ್ಮೆಟ್ಟಿಸಲಾಯಿತು”. (73)
ಎರಡು ಪ್ರಮುಖ ಸಂದರ್ಭದಲ್ಲಿ ಬಂಡಾಯಗಾರರು ನಷ್ಟವನ್ನನುಭವಿಸಿದರು. ಮೊದಲನೆಯದು ಜನವರಿ 21ರಂದು ಗೌಡಳ್ಳಿಯಲ್ಲಿ ಶತ್ರುಗಳ ಪಡೆಗಳ ಕ್ಯಾಂಪಿನ ಮೇಲೆ ನಡೆಸಿದ ದಾಳಿ. ಅದು ಮಧ್ಯಾಹ್ನದ ಸಮಯ. ಯುದ್ಧ ನಲವತ್ತೈದು ನಿಮಿಷಗಳ ಕಾಲ ಎಳೆಯಿತು. ಶತ್ರುಗಳ ಪಡೆಯಲ್ಲಿ ಹೆಚ್ಚಿನ ಜನರಿದ್ದಾರೆ ಎಂದರಿವಾದ ಮೇಲೆ ಗೆರಿಲ್ಲಾಗಳು ವಾಪಸ್ಸು ಹೊರಟುಹೋದರು, ಸತ್ತ ಎಂಟು ಮಂದಿ ಗೆರಿಲ್ಲಾಗಳ ದೇಹವನ್ನಲ್ಲಿಯೇ ಬಿಟ್ಟು.
ಇದಾದ ನಂತರ ರಾಯಣ್ಣ ಕೆಲ ಪಡೆಗಳನ್ನು ಪರಿತ್ಯಜಿಸಿದ. ಹಾಗಾಗ್ಯೂ, ಚೇತರಿಸಿಕೊಳ್ಳಲು ಆತನಿಗೆ ಹೆಚ್ಚಿನ ಸಮಯವೇನು ಬೇಕಾಗಲಿಲ್ಲ. ಫೆಬ್ರವರಿ 8ರಂದು ಕಿತ್ತೂರಿನ ಹೊರಭಾಗದಲ್ಲೇ ಮುಖಾಮುಖಿಯಾಯಿತು, ದಿನದ ಪ್ರಖರ ಬೆಳಕಿನ ಸಮಯದಲ್ಲಿ. ರಾಯಣ್ಣ ಈ ಕದನದಲ್ಲಿರಲಿಲ್ಲ, ಆದರೆ ಅವನ ಹೆಚ್ಚಿನ ಪಡೆ ಅಲ್ಲಿತ್ತು. (74) ತರಬೇತಿ, ಶಸ್ತ್ರಾಸ್ತ್ರ ಮತ್ತು ಯುದ್ಧ ಭೂಮಿಯಲ್ಲಿನ ಚಲನೆಯಲ್ಲಿ ಉನ್ನತಿ ಸಾಧಸಿದ್ದ ಶತ್ರುಗಳು ಬಂಡಾಯವೆದ್ದವರ ಮೇಲೆ ಕ್ಷಣಮಾತ್ರದಲ್ಲಿ ದಾಳಿ ನಡೆಸಿದ್ದರಿಂದ 78 ಜನರು ಸತ್ತರು, 36 ಮಂದಿ ಗಾಯಗೊಂಡರು ಮತ್ತು 85 ಜನರನ್ನು ಬಂಧಿಸಲಾಯಿತು. ಸರಕಾರದ ಕಡೆಯಲ್ಲಿ ಯಾವುದೇ ಸಾವುಗಳಾಗಿರಲಿಲ್ಲ. ಈ ಕದನ ಎಷ್ಟು ಕಾಲ ನಡೆಯಿತು ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ ಬಂಡಾಯಗಾರರು ತಮ್ಮ ಪುರಾತನ ಸಾಮ್ರಜ್ಯವಾದ ಕಿತ್ತೂರಿನ ಹೊರವಲಯದಲ್ಲಿ ಬೆಳಗಿನ ಹೊತ್ತು ಕಾಣಿಸಿಕೊಂಡು ಶತ್ರುಗಳಿಗೆ “ಅಚ್ಚರಿ” ಮೂಡಿಸಿದ್ದರು.
ಇದೇ ರೀತಿಯ ಪರಿಸ್ಥಿತಿಯಲ್ಲೊಮ್ಮೆ, ಕಿತ್ತೂರು ನಗರದ ಹತ್ತಿರದಲ್ಲೇ ಹೋಗುತ್ತಿದ್ದಾಗಲೂ ರಾಯಣ್ಣನೊಮ್ಮೆ ದಾಳಿ ಮಾಡದೇ ಸುಮ್ಮನಾಗಿದ್ದ.
ತನ್ನ ಹೇಳಿಕೆಯಲ್ಲಿ ರಾಯಣ್ಣ, ಕೆಲವು ನಾಯಕರು ಬೆಳಗಾವಿಯ ಮೇಲೂ ದಾಳಿ ನಡೆಸಬೇಕೆಂದು ಹೇಳಿದ್ದನ್ನು ತಿಳಿಸಿದ್ದ. “ಆದರೆ ಅದು ಅಸಾಧ್ಯವಾದುದರಿಂದ ನಾನೇ ಪ್ರೋತ್ಸಾಹಿಸಲಿಲ್ಲ”. (75)
ತನ್ನಿತರೆ ಲೆಫ್ಟಿನೆಂಟುಗಳಿಗಿಂತ ಗೆರಿಲ್ಲಾ ಯುದ್ಧತಂತ್ರದ ಬಗ್ಗೆ ರಾಯಣ್ಣನಲ್ಲೊಂದು ವಿಲಕ್ಷಣ ಗ್ರಹಿಕೆಯಿತ್ತು ಎಂಬುದು ವೇದ್ಯವಾಗುತ್ತದೆ.
ಕಿತ್ತೂರಿನಲ್ಲಾದ ಹಿನ್ನಡೆಯನ್ನು ಕೆಲಕಾಲದಲ್ಲೇ ಸರಿಪಡಿಸಿಕೊಳ್ಳಲಾಯಿತು ಮತ್ತು ಗೆರಿಲ್ಲಾಗಳು ತಮ್ಮ ಹೋರಾಟವನ್ನು ಮುಂದುವರೆಸಿದರು; ದೊಡ್ಡ ನಗರಗಳ ಮೇಲೆ ದಿನದಲ್ಲಿ ದಾಳಿ ಮಾಡುವ ತಪ್ಪನ್ನು ಮತ್ತೆ ಮಾಡಲಿಲ್ಲ.
ಉ. ಸಣ್ಣ ಗಾತ್ರದ ರಚನೆ
ಪ್ರಾರಂಭಿಕ ಹಂತಗಳಲ್ಲಿ, ರಾಯಣ್ಣನ ಪಡೆಗಳ ಸಂಖೈಯಿನ್ನೂ ಚಿಕ್ಕದಿದ್ದಾಗ, ಅವರೆಲ್ಲರನ್ನೂ ಒಂದೇ ಪಡೆಯಾಗಿ ಸಂಘಟಿಸಲಾಗಿತ್ತು. ಆದರೆ ಜನವರಿ ಮಧ್ಯಭಾಗದಳಷ್ಟೊತ್ತಿಗೆ, ರಾಯಣ್ಣನ ಪಡೆ ಐನೂರು ಜನರಷ್ಟು ಜಾಸ್ತಿಯಾಗಿತ್ತು ಎಂಬ ಬಗ್ಗೆ ನಮ್ಮಲ್ಲಿ ವರದಿಗಳಿವೆ. ನಂತರದ ಕಾರ್ಯಾಚರಣೆಯಲ್ಲಿ, ರಾಯಣ್ಣ ದೊಂಡಿಯಾ ವಾಗ್ ನಡೆಸಿದ ತಪ್ಪುಗಳನ್ನು ಮಾಡಲಿಲ್ಲ. ಬಹಳಷ್ಟು ಸಲ ತನ್ನ ಪಡೆಯನ್ನು ವಿಭಾಗಿಸುತ್ತಿದ್ದ, ಒಂದು ಪಡೆಯಲ್ಲಿನ ಹೋರಾಟಗಾರರ ಸಂಖೈ ನೂರಕ್ಕಿಂತ ಹೆಚ್ಚಿರದಂತೆ ನೋಡಿಕೊಳ್ಳಲಾಗುತ್ತಿತ್ತು ಮತ್ತು ಅವರೆಲ್ಲರೂ ಒಂದೇ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಉದಾಹರಣೆಗೆ ನಮಗೆ ಹೇಳಲಾಗುತ್ತದೆ: “ರಾಯಣ್ಣ ಮತ್ತವನ ಬೆಂಬಲಿಗರು ದಿನಗಳನ್ನು ಬೆಟ್ಟಗಳ ಮೇಲೆ ಕಳೆಯುತ್ತಾರೆ ಮತ್ತು ರಾತ್ರಿಗಳಲ್ಲಿ ಸಂಘಟಿತ ಗುಂಪುಗಳಾಗಿ ವಿಭಜಿತರಾಗುತ್ತಾರೆ, ಸರಕಾರಿ ಪಡೆಗಳ ಮೇಲೆ ದಾಳಿ ನಡೆಸಲು”. (76)
ರಾಯಣ್ಣನ ಪಡೆಗಳ ಬಗ್ಗೆ ಹೇಳುವ ಸ್ಟೋಕ್ಸ್ ಇದನ್ನು ಧೃಡೀಕರಿಸುತ್ತಾರೆ: “ಉಳಿದವರು ಸುಟ್ಟಗತ್ತಿಗೆ ತೆರಳಿದರು, ಅಲ್ಲವರು ಎರಡು ದೊಡ್ಡ ಗುಂಪುಗಳಾದರು, ಒಂದು ಗುಂಪು ರಾಯಪ್ಪನೊಡನೆ ಸಂಗೊಳ್ಳಿಯ ಮೂಲಕ ಕಿತ್ತೂರಿನ ಬೆಟ್ಟಕ್ಕೆ ವಾಪಸ್ಸಾಯಿತು ಮತ್ತೊಂದು ಗುಂಪು ಮರಿಕತ್ತಿಯನ್ನು ಲೂಟಿ ಮಾಡಿ ಸುಟ್ಟು ಹಾಕಿದರು”. (77) ಮತ್ತೊಂದು ಸಂದರ್ಭದಲ್ಲಾಗಿದ್ದರ ಬಗ್ಗೆ ಸ್ಟೋಕ್ಸ್ ಹೇಳುತ್ತಾನೆ: “ಅವರು ಇಡೀ ದಿನವನ್ನು ಬಾಳಗುಂದ ಮತ್ತು ಹಂಡಿ ಬಡಗನಾಥ ಬೆಟ್ಟದಲ್ಲಿ ಕಳೆದರು ಮತ್ತು ರಾತ್ರಿ ವಿವಿಧ ತಂಡಗಳಾಗಿ ಲೂಟಿ ಮಾಡಲೊರಟರು”. (78)
“ದೊಡ್ಡ ಸೈನ್ಯವನ್ನು ಕಟ್ಟಿ ಹೋರಾಡುವುದು ಆತನ ನೀತಿಯಾಗಿರಲಿಲ್ಲ” ಎಂದು ಶ್ರೀನಿವಾಸ್ ಹಾವನೂರ್ ಸರಿಯಾದ ರೀತಿಯಲ್ಲಿ ಗಮನಿಸುತ್ತಾರೆ. (79)
ಈ ತತ್ವಗಳಾಧಾರದ ಮೇಲೆ ಕಾರ್ಯನಿರ್ವಹಿಸಿದ ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಸೈನ್ಯ, ಜನರ ಶತ್ರುಗಳನ್ನು ಗುರಿಯಾಗಿಸಿಕೊಂಡಿತು, ಹಳ್ಳಿಗಳ ಬಡ್ಡಿದಾರರು ಮತ್ತು ಭೂಮಾಲೀಕರಿಂದ (ತಮ್ಮ ಯುದ್ಧದ ವೆಚ್ಚಕ್ಕೆ ಹಣ ನೀಡಲು ಇವರಿಗೆ ಒತ್ತಾಯಿಸಲಾಗುತ್ತಿತ್ತು) ಹಿಡಿದು ಆಡಳಿತ ನಡೆಸುತ್ತಿದ್ದ ಅಧಿಕಾರಿಗಳು ಹಾಗೂ ವಸಾಹತು ಸೈನ್ಯ ಇವರ ಗುರಿಯಾಗಿತ್ತು. ಬ್ರಿಟೀಷರು ನಿಜಕ್ಕೂ ಗೊಂದಲಕ್ಕೀಡಾಗಿದ್ದರು ಮತ್ತು ಈ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂಬ ಬಗ್ಗೆ ಅವರಿಗಿದ್ದ ಜ್ಞಾನ ಅತ್ಯಲ್ಪವಾಗಿತ್ತು. ಸ್ಟೋಕ್ಸ್ ಹೇಳುತ್ತಾನೆ: “ಮೊದಲಿಗೆ ಈ ಬಂಡಾಯವನ್ನು ಸೈನಿಕ ಶಕ್ತಿಯನ್ನು ಉಪಯೋಗಿಸದೆ ದಮನಿಸಬಹುದೆಂಬ ಭರವಸೆ ಇತ್ತು, ಆದರೆ ಯಾವಾಗ ಕಿತ್ತೂರಿನ ಶೇಟ್ ಸನ್ನದಿಗಳು ಸೇವೆ ನೀಡಲು ನಿರಾಕರಿಸಿದರೋ ಮತ್ತು ಕ್ಷೋಭೆ ಹೆಚ್ಚಾಗಲಾರಂಭಿಸಿತೋ, ಆಗ ಸಶಕ್ತ ಪಡೆಗಳ ನೆರವು ಪಡೆಯುವುದು ಅನಿವಾರ್ಯವಾಯಿತು. ದರೋಡೆಕೋರರ ಗುಂಪುಗಳನ್ನು ಕಷ್ಟಕರವಾದ ಭೂಪ್ರದೇಶದಲ್ಲಿ ಹುಡುಕುವುದಕ್ಕೆ ಈ ಪಡೆಗಳು ಅಷ್ಟಾಗಿ ಸೂಕ್ತವಲ್ಲ ಎನ್ನುವುದು ನಿರೀಕ್ಷಿತವೇ ಆಗಿತ್ತು”. (80)
ರಾಯಣ್ಣನ ಯುದ್ಧ ತಂತ್ರದಿಂದ ದಿಗಿಲುಗೊಂಡು ಕಿರುಚಿದ ಅಂಶಗಳಿದ್ದ ಬ್ರಿಟೀಷರ ಪತ್ರವ್ಯವಹಾರವನ್ನು ಕೃಷ್ಣ ರಾವ್ ಮತ್ತು ಹಾಲಪ್ಪ ನಮ್ಮ ಮುಂದಿಡುತ್ತಾರೆ. ಶತ್ರುವಿನ ಶಾಂತಿ ನಾಶವಾಗಿತ್ತು ಮತ್ತು ಎಲ್ಲಿ ಯಾವಾಗ ಯಾವ ದಿಕ್ಕಿನಿಂದ ದಾಳಿ ನಡೆಯಬಹುದು ಎಂಬ ನಿರೀಕ್ಷೆಯಲ್ಲಿ ತುದಿಗಾಲ ಮೇಲೇ ನಿಂತಿರಬೇಕಿತ್ತು.
ಶುದ್ಧ ಸೈನಿಕ ದಾರಿಯಿಂದ ಈ ಯುದ್ಧದಲ್ಲಿ ಗೆಲ್ಲುವುದು ಅಸಾಧ್ಯವೆಂದು ಅರಿವಾದ ಮೇಲೆ ಅವರು ಇತರೆ ದಾರಿಗಳನ್ನು ಆಯ್ದುಕೊಂಡರು: ರೈತಾಪಿ ಯುದ್ಧವನ್ನು ಸೋಲಿಸಲು ತಮ್ಮ ಕಡೆಯವರನ್ನು ವಿರೋಧಿ ಪಾಳಯದಲ್ಲಿ ರಹಸ್ಯವಾಗಿ ತೂರಿಸುವುದೇ ಸರಿಯಾದ ಆಯ್ಕೆಯಂತೆ ತೋರಿತು.
ಬ್ರಿಟೀಷ್ ವಸಾಹತುಶಾಹಿ, ಈ ಕೆಲಸಕ್ಕಾಗಿ, ನಂಬುವಂತಹ ಮಿತ್ರರಾದ ಭೂಮಾಲೀಕರು ಮತ್ತು ಮಧ್ಯವರ್ತಿಗಳ ಸಹಾಯವನ್ನು ಪಡೆದುಕೊಂಡರು. ಅಮಲ್ದಾರ್ ಕೃಷ್ಣರಾವ್ ಬ್ರಿಟೀಷರಿಗೆ ಜೊತೆಯಾಗಿದ್ದ. ಕುದ್ನಾಪುರದ ಪಟೇಲ, ಲಿಂಗನ ಗೌಡ, ತನ್ನ ಗುಪ್ತಚರರನ್ನು ಬಂಡಾಯಗಾರರ ಬಳಿಗೆ ಕಳುಹಿಸಿ ಮುನ್ನೂರು ಜನರೊಡನೆ ಸೇರಿಕೊಳ್ಳುತ್ತೇನೆಂದು ತಿಳಿಸಿದ. ರಾಯಣ್ಣ ಇದಕ್ಕೆ ಒಪ್ಪಿಗೆ ಕೊಟ್ಟ ಮತ್ತು ಮಾರ್ಚಿ ತಿಂಗಳ ಕೊನೆಯೆರಡು ವಾರ, ಲಿಂಗನ ಗೌಡ ಗೆರಿಲ್ಲಾ ಪಡೆಯ ಎಲ್ಲಾ ಕಾರ್ಯಾಚರಣೆಗಳಲ್ಲೂ ಭಾಗವಹಿಸಿದ. ಸ್ಟೋಕ್ಸ್ ಮಿಕ್ಕಿದ್ದನ್ನು ಹೇಳುತ್ತಾನೆ: “ನಂತರ ಒಂದು ದಿನ, ರಾಯಪ್ಪ ತನ್ನ ಶಸ್ತ್ರವನ್ನು ಒಂದೆಡೆ ಇಟ್ಟು ಸ್ನಾನ ಮಾಡುತ್ತಿದ್ದ, ನೇಗಿನಹಾಳದ ಸನ್ನದಿ ಲಕ್ಕಪ್ಪ ಇದ್ದಕ್ಕಿದ್ದಂತೆ ರಾಯಣ್ಣನೆಡೆಗೆ ನುಗ್ಗಿ ಅವನ ದೇಹವನ್ನು ತಬ್ಬಿ ಹಿಡಿದ, ಇನ್ನೊಬ್ಬ ರಾಯಣ್ಣನ ಶಸ್ತ್ರವನ್ನು ಎತ್ತಿಕೊಂಡ. ಮಿಕ್ಕವರು ರಾಯಣ್ಣನನ್ನು ಸುತ್ತುವರೆದರು, ಅವನ ಕೈ ಕಾಲು ಕಟ್ಟಿ ಹಾಕಿದರು ಮತ್ತು ವಿಜಯೋತ್ಸವದಿಂದ ಅವನನ್ನು ಧಾರವಾಡಕ್ಕೆ ಹೊತ್ತೊಯ್ದರು”. (81) ರಾಯಣ್ಣನ ಬಂಧನವಾಗುತ್ತಿದ್ದಂತೆಯೇ ನಾಲ್ಕುನೂರಕ್ಕೂ ಅಧಿಕ ಗೆರಿಲ್ಲಾಗಳು ಶರಣಾಗಿಬಿಟ್ಟರು. (82)
ಕೃಷ್ಣರಾವನಿಗೆ ದೊಡ್ಡ ಮೊತ್ತದ ಹಣವನ್ನು ನೀಡಲಾಯಿತು. ರೈತಾಪಿ ಬಂಡಾಯವನ್ನು ಸೋಲಿಸಲು ಮೋಸಗೈದ ಭೂಮಾಲೀಕರನ್ನು ಬ್ರಿಟೀಷರು ಪುರಸ್ಕರಿಸಿದರು. ಅವರಿಗೆ ಮುನ್ನೂರು ರುಪಾಯಿಗಳನ್ನು ನೀಡಲಾಯಿತು ಮತ್ತು ಇಡೀ ಹಳ್ಳಿಯನ್ನೇ ಇನಾಮಾಗಿ ಕೊಡಲಾಯಿತು. ಲಿಂಗನ ಗೌಡನಿಗೆ ಕಿತ್ತೂರಿನ ಬಳಿಯ ಕಲೋಲಿ ಸಿಕ್ಕಿತು ಮತ್ತು ಯಂಕನ ಗೌಡನಿಗೆ ಧಾರವಾಡದ ಧೋರಿ ದಕ್ಕಿತು. (83)
ರಾಯಣ್ಣ ಮತ್ತು ಕುರುಬ, ಬೇಡ, ಜೈನ, ಲಿಂಗಾಯತ, ಸಿದ್ದಿ, ಮುಸ್ಲಿಮ್, ಪಂಚಮ ಸಾಲಿ ಮತ್ತು ಇನ್ನೂ ಅನೇಕ ವಿಧದ ಜಾತಿಗಳಿಂದ ಬಂದಿದ್ದ ಅವನ ಕಾಮ್ರೇಡುಗಳಿಗೆ, ಸಾವು ಸಿಕ್ಕಿತು.
ಆದರೆ, 1837-38ರಲ್ಲಿ, ಕಿತ್ತೂರಿನಲ್ಲಿ ಒಂದು ಚಿಕ್ಕ ಮಟ್ಟದ ಬಂಡಾಯವೆದ್ದಿತ್ತು. ಇದು ಕಿತ್ತೂರನ್ನು ಅಲುಗಾಡಿಸಿದ ಐದನೇ ಹಾಗೂ ಕೊನೆಯ ನಡುಕ. ಬಂಡಾಯವನ್ನು ಹತ್ತಿಕ್ಕಲಾಯಿತು. ಆದರೆ ಬಂಡುಕೋರರು ಕುದ್ನಾಪುರದ ಮೋಸಗಾರ ಪಟೇಲ ಲಿಂಗನ ಗೌಡ ಸಾಯುವುದನ್ನು ಖಾತ್ರಿ ಮಾಡಿಕೊಂಡರು. (84) ಸೋಲಿನ ಸಮ್ಮುಖದಲ್ಲೂ ಹೇಗೆ ಜನಸಮೂಹ ಗುರಿಯೆಡೆಗೆ ಪಯಣಿಸುತ್ತಾರೆ, ಹೇಗೆ ತಾಳ್ಮೆಯಿಂದ ಸೇಡಿನಿಂದ ತಮ್ಮ ಶತ್ರುಗಳ ಮೇಲೆ ದಾಳಿ ನಡೆಸುತ್ತಾರೆ ಎಂದು ಕರ್ನಾಟಕದ ಇತಿಹಾಸ ಮತ್ತೊಮ್ಮೆ ನಿರೂಪಿಸಿತ್ತು.
ಹೂಹಾರಗಳಿಂದ ಮತ್ತು ಪೂಜಾ ಧ್ವಜಗಳಿಂದಲಕೃತವಾಗಿರುವ ಸಂಗೊಳ್ಳಿ ರಾಯಣ್ಣನ ಸಮಾಧಿಯಿರುವ ಆಲದ ಮರ.
ಸಂಗೊಳ್ಳಿ ರಾಯಣ್ಣ ತನ್ನ ‘ತಪ್ಪೊಪ್ಪಿಗೆಯಲ್ಲಿ’ ನನ್ನಲ್ಲಿ ತಪ್ಪಿತಸ್ಥನ ಭಾವವಿಲ್ಲವೆಂದು ತಿಳಿಸಿದ ಮತ್ತು ತನ್ನ ಹೇಳಿಕೆಯ ಮೂಲಕ ತನ್ನ ಕಾರ್ಯಚರಣೆಯ ಸಂಪೂರ್ಣ ವಿವರಗಳನ್ನು ಕರ್ನಾಟಕದ ಜನತೆಗೆ ಬಿಟ್ಟು ಹೋದ. ರಾಯಣ್ಣನನ್ನು ನಂದಗಡದಲ್ಲೇ ನೇಣಿಗಾಕಬೇಕೆಂದು ಸ್ಟೋಕ್ಸ್ ದಾಖಲಿಸಿದ, ನಂದಗಡ “ಪ್ರಮುಖ ದರೋಡೆಯ ಕೇಂದ್ರವಾಗಿತ್ತು” ಮತ್ತು “ಸಮಾಧಿಯೆಡೆಗೆ ಆತ ರಸ್ತೆಯಲ್ಲಿ ಪಯಣಿಸುತ್ತಿದ್ದಾಗ, ತನ್ನನ್ನು ಊಳಲು ಒಂದು ಜಾಗವನ್ನು ತೋರಿಸಿದ, ತನ್ನುಳಿಕೆಯಿಂದ ದೊಡ್ಡ ಮರವೊಂದು ಚಿಗುರುತ್ತದೆ ಎಂದು ಹೇಳಿದ…..ಮತ್ತೀಗ ನಂದಗಡದ ರಸ್ತೆಯ ಸಮೀಪದಲ್ಲಿ ಒಂದು ದೊಡ್ಡ ಆಲದ ಮರ ಬೆಳೆದಿದೆ, ಅವನ ಸಮಾಧಿಯಿಂದಲೇ ಬೆಳೆದಂತಿದೆ”. (85) ರಾಯಣ್ಣನ ಕೊನೆಯ ಆಸೆ ಸಾಧಾರಣ ರೈತನದ್ದಾಗಿತ್ತು.
ಆದರಿದು ಅಮೂಲಾಗ್ರವಾಗಿ ವಸಾಹತು ವಿರೋಧಿ ಪ್ರಜ್ಞೆಯೂ ಆಗಿತ್ತು. ನೇಣಿಗೇರಿಸುವ ಕ್ಷಣ ಮುಂಚೆ ರಾಯಣ್ಣ ಹೇಳಿದ: “ಮತ್ತೆ ಈ ದೇಶದಲ್ಲಿ ಹುಟ್ಟಿ ಬ್ರಟೀಷರ ವಿರುದ್ಧ ಹೋರಾಡಿ ಅವರನ್ನು ಈ ಪವಿತ್ರ ಭೂಮಿಯಿಂದ ಹೊಡೆದೋಡಿಸುವುದೇ ನನ್ನ ಕೊನೆಯ ಆಸೆ”. (86) ಸಂಗೊಳ್ಳಿ ರಾಯಣ್ಣ ಜನರ ಉದ್ದಿಶ್ಯಕ್ಕಾಗಿ ಹುತಾತ್ಮನಾದ. ಅವರ ನಾಯಕನಾದ. ಜನಪದ ಹಾಡುಗಾರರು ರಾಯಣ್ಣನ ಮೇಲೆ ಹಲವಾರು ಹಾಡುಗಳನ್ನು ಕಟ್ಟಿದ್ದಾರೆ ಮತ್ತು ರಾಯಣ್ಣ ಅವರ ವರ್ಗದಾಕಾಂಕ್ಷೆಗಳ ಮತ್ತು ಆಸೆಗಳ ಚಿಹ್ನೆಯಾಗಿದ್ದಾನೆ. ನಂದಗಡದಲ್ಲಿ ಹೂತ ವಿನಮ್ರ ಬೀಜವೊಂದು ಮೊಳಕೆಯೊಡೆಯಲಾರಂಭಿಸಿದಂತೆ, ನಗರದಲ್ಲಿ ಗೆರಿಲ್ಲಾ ಯುದ್ಧ ಪ್ರಾರಂಭವಾಯಿತು. ರಾಯಣ್ಣನ ತ್ಯಾಗ ಮತ್ತು ಅವನು ಹಾಕಿಕೊಟ್ಟ ಹಾದಿಯು ಕರ್ನಾಟಕದ ಮಲೆನಾಡಿನ ಉತ್ತರದ ತುದಿಯಿಂದ ಏಳುನೂರು ಕಿಲೋಮೀಟರುಗಳಷ್ಟು ಸುದೀರ್ಘ ಹಾದಿಯಲ್ಲಿ ಸಾಗಿ ಬಂದು ನಿದ್ರಾವಸ್ಥೆಯಲ್ಲಿದ್ದ ರೈತಾಪಿ ಸಮೂಹವನ್ನು ಹಿಂದೆಂದೂ ಎಚ್ಚರಿಸದ ರೀತಿಯಲ್ಲಿ ಬಡಿದೆಬ್ಬಿಸಿತು.
ಮುಂದಿನ ವಾರ: ನಗರದ ರೈತಾಪಿ ಬಂಡಾಯ
No comments:
Post a Comment