Sep 17, 2016

ಮರಳಿ ಭೂಮಿ ಪಡೆದ ಸಿಂಗೂರಿನ ರೈತರು: ಕೃಷಿವಲಯಕ್ಕೆ ಸಂದ ಜಯ!

ಸಾಂದರ್ಭಿಕ ಚಿತ್ರ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
17/09/2016
ಸುದ್ದಿ-ನಿನ್ನೆ ಮಮತಾಬ್ಯಾನರ್ಜಿಯವರು ಸಿಂಗೂರಿನ ರೈತರಿಗೆ ಅವರ ಕೃಷಿಭೂಮಿಯನ್ನು ಪರಿಹಾರದ ಸಮೇತ ಮರಳಿಸಿದ್ದಾರೆ!

ಇಡೀ ಇಂಡಿಯಾ ಮುಕ್ತ ಆರ್ಥಿಕ ನೀತಿಗೆ ತನ್ನನ್ನು ತೆರದುಕೊಂಡು ತನ್ನ ಸಮಾಜವಾದಿ ಆಶಯಗಳನ್ನೆಲ್ಲ ಗಾಳಿಗೆ ತೂರುವ ರೀತಿಯಲ್ಲಿ ಹೊಸ ಹೊಸ ಶಾಸನಗಳನ್ನು ರೂಪಿಸುತ್ತಿರುವ ಈ ಹೊತ್ತಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಕುಮಾರಿ ಮಮತಾ ಬ್ಯಾನರ್ಜಿಯವರ ಈ ನಡೆ ನನ್ನ ಮಟ್ಟಿಗಂತು ಐತಿಹಾಸಿಕವೆನಿಸುತ್ತಿದೆ. ಏಕೆಂದರೆ ಚುನಾವಣೆಗಳಲ್ಲಿ ನೀಡುವ ಜನಪರ ಆಶ್ವಾಸನೆಗಳನ್ನು ನೆನಪಲ್ಲಿಟ್ಟುಕೊಂಡು ರಾಜಕಾರಣ ಮಾಡುವವರ ಸಂಖ್ಯೆ ವಿರಳವಾಗುತ್ತಿರುವ ಈ ದಿನಗಳಲ್ಲಿ, ತಾವು ಅಧಿಕಾರದಲ್ಲಿರದೆ ಹೋದಾಗ ಸಿಂಗೂರು ರೈತರ ಹೋರಾಟದಲ್ಲಿ ಬಾಗವಹಿಸಿ ಅವರಿಗೆ ಭೂಮಿಯನ್ನು ಮರಳಿಸುವುದಾಗಿ ಭರವಸೆ ನೀಡಿಯೇ ಅಧಿಕಾರದ ಖುರ್ಚಿಗೆ ಲಗ್ಗೆ ಹಾಕಿದ ಅವರು ತಮ್ಮ ಮಾತನ್ನು ಉಳಿಸಿಕೊಳ್ಳುವುದರ ಮೂಲಕ ಎರಡು ಅಂಶಗಳನ್ನು ಭಾರತೀಯರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.

ಮೊದಲನೆಯದು, ಚುನಾವಣೆಗಳಲ್ಲಿ ನೀಡುವ ಆಶ್ವಾಸನೆಗಳು ವಾಸ್ತವಿಕ ನೆಲೆಗಟ್ಟಿನಲ್ಲಿದ್ದು, ಅವನ್ನು ಈಡೇರಿಸುವ ರಾಜಕೀಯ ಇಚ್ಚಾಶಕ್ತಿ ಇದ್ದರೆ ಅವನ್ನು ಜನಪರವಾಗಿ ಕಾರ್ಯರೂಪಕ್ಕೆ ತರುವುದು ಕಷ್ಟವೇನಲ್ಲ ಎನ್ನವುದು. ಎರಡನೆಯದಾಗಿ, ಮುಕ್ತ ಆರ್ಥಿಕ ನೀತಿಯ ಈ ದಿನಮಾನಗಳಲ್ಲಿಯೂ, ಇರುವ ಕಾನೂನುಗಳನ್ನು ಬಳಸಿಕೊಂಡು, ಜನರನ್ನು ಒಗ್ಗೂಡಿಸಿ, ಹೋರಾಟ ನಡೆಸಿದರೆ ರೈತರ ಕೃಷಿಭೂಮಿಯನ್ನು ಯಾವ ಬಂಡವಾಳಶಾಹಿ ಶಕ್ತಿಗಳೂ ಅದನ್ನು ವಶಪಡಿಸಿಕೊಳ್ಳಲಾರವು ಎನ್ನುವುದು. ನಿಜ, ಇವತ್ತು ವಿಶೇಷ ಆರ್ಥಿಕ ಯೋಜನೆಗಳ ಅಡಿಯಲ್ಲಿ ಲಕ್ಷಾಂತರ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಸ್ವದೇಶಿ ಮತ್ತು ವಿದೇಶಿ ಬಂಡವಾಳಶಾಹಿ ಕಂಪನಿಗಳ ಮಡಿಲಿಗೆ ಒಪ್ಪಿಸಲು ಬಹುತೇಕ ಸರಕಾರಗಳು ಟೊಂಕ ಕಟ್ಟಿ ನಿಂತಿವೆ. ವಿದೇಶಿ ಬಂಡವಾಳ ಹೂಡಿಕೆಯಿಂದ ಮಾತ್ರ ನಮ್ಮ ಜಿಡಿಪಿ ಹೆಚ್ಚಾಗುವುದೆಂಬ ಭ್ರಮೆಯನ್ನು ಜನರಲ್ಲಿ ಮೂಡಿಸುವ ಮೂಲಕ ನಮ್ಮನ್ನು ತಪ್ಪುದಾರಿಗೆಳೆಯುತ್ತಿರುವ ಸರಕಾರಗಳು ಅದಕ್ಕಾಗಿ ಖಾಸಗಿಯವರಿಗೆ ಉಚಿತವಾಗಿ ಭೂಮಿ, ನೀರು, ವಿದ್ಯುತ್ ಅನ್ನು ನೀಡುತ್ತ ರೈತರನ್ನು ಅವೇ ಕಂಪನಿಗಳ ಕೂಲಿಗಳನ್ನಾಗಿಯೂ ಮತ್ತು ಗ್ರಾಹಕರನ್ನಾಗಿಯೂ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಈಗಾಗಲೇ ಸರಕಾರ ವಶಪಡಿಸಿಕೊಂಡು ಖಾಸಗಿ ಕಂಪನಿಯೊಂದಕ್ಕೆ ನೀಡಿದ ಭೂಮಿಯನ್ನು ಜನಹೋರಾಟ ಮತ್ತು ಕಾನೂನು ಹೋರಾಟಗಳ ಮೂಲಕ ವಾಪಾಸು ರೈತರಿಗೆ ಕೊಡಿಸುವುದು ಮಹತ್ವದ ವಿಚಾರವೇ ಸರಿ. ಈ ಹಿನ್ನೆಲೆಯಲ್ಲಿ ಸಿಂಗೂರು ರೈತರ ಕೃಷಿಭೂಮಿಯನ್ನು ವಶಪಡಿಸಿಕೊಂಡ ಸರಕಾರದ ಕ್ರಮಗಳನ್ನು ಮತ್ತು ಅದನ್ನು ವಿರೋಧಿಸಿ ನಡೆದ ಹೋರಾಟವನ್ನು ಸಂಕ್ಷಿಪ್ತವಾಗಿ ನೋಡೋಣ:

ಈ ಹಿಂದೆ ಪಶ್ಚಿಮಬಂಗಾಳವನ್ನು ಆಳುತ್ತಿದ್ದ ಎಡಪಕ್ಷಗಳ ಸರಕಾರ ಟಾಟಾ ಮೋಟಾರ್ಸ್ ಕಂಪನಿಯವರು ಉತ್ಪಾದಿಸಲು ನಿರ್ದರಿಸಿದ್ದ ನ್ಯಾನೋ ಕಾರುಗಳ ಘಟಕ ಸ್ಥಾಪನೆಗಾಗಿ ಹೂಗ್ಲಿ ಜಿಲ್ಲೆಯ ಸಿಂಗೂರು ಗ್ರಾಮದ ಸುಮಾರು 997 ಏಕರೆ ಫಲವತ್ತಾದ ಕೃಷಿಭೂಮಿಯನ್ನು ರೈತರಿಂದ ವಶಪಡಿಸಿಕೊಂಡಿತು. ಇದಕ್ಕಾಗಿ ಅದು 1894ರ ಕಾಲದ ಭೂ ಸ್ವಾದೀನ ಕಾಯಿದೆಯನ್ನು ಬಳಸಿಕೊಂಡಿತ್ತು.ಇದನ್ನು ವಿರೋಧಿಸಿದ ಬಹುಸಂಖ್ಯಾತ ರೈತರ ಅಭಿಪ್ರಾಯಕ್ಕೆ ಸರಕಾರ ಯಾವ ಮಾನ್ಯತೆಯನ್ನು ನೀಡದೇ ಹೋದಾಗ ಸ್ಥಳೀಯವಾಗಿ ರೈತರ ಪ್ರತಿರೋಧ ಹೆಚ್ಚುತ್ತ ಹೋಯಿತು. ಇದಕ್ಕಾಗಿ ರೈತರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಕಾರ್ಯಾಚರಣೆ ಪ್ರಾರಂಭವಾಯಿತು. ಇಷ್ಟಲ್ಲದೆ ಸರಕಾರ ಘೋಷಿಸಿದ ಪರಿಹಾರದ ಮೊತ್ತ ಮಾರುಕಟ್ಟೆ ದರಕ್ಕಿಂತ ತೀರಾ ಅಲ್ಪಪ್ರಮಾಣದ್ದಾಗಿತ್ತು. ಅದಲ್ಲದೆ ಅದನ್ನು ನೀಡುವಲ್ಲಿಯೂ ವಿಳಂಬ ನೀತಿ ಅನುಸರಿಸಲಾಯಿತು. ಇದಕ್ಕೆ ಮುಖ್ಯಕಾರಣ ಸರಕಾರದ ವಸಾಹತುಶಾಹಿ ಕಾಲದ ಭೂಸ್ವಾದೀನ ಕಾನೂನಿನ ಪ್ರಕಾರ ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯೇ ಕಾನೂನಿನ ಪ್ರಕಾರ ಅಸಂಬದ್ದವಾಗಿತ್ತು. ಹೀಗಾಗಿ ಸಿಂಗೂರು ರೈತರ ಪರವಾಗಿ ಆಗಿನ ಬಹುತೇಕ ರಾಜಕೀಯ ಪಕ್ಷಗಳು ಹೋರಾಟಕ್ಕೆ ತಯಾರಾದವು. ಸಾರ್ವಜನಿಕವಾಗಿ ಸಿಂಗೂರು ರೈತರ ಪರವಾದ ಒಂದು ಅನುಕಂಪದ ಅಲೆ ಏಳತೊಡಗಿತು. ರೈತರ ಪರವಾದ ಈ ಹೋರಾಟಕ್ಕೆ ಮಮತಾ ಬ್ಯಾನರ್ಜಿಯವರು ಕೈಜೋಡಿಸಿದ್ದು ರೈತರಿಗೆ ಬಲಬಂದಂತಾಯಿತು. ಕ್ರಮೇಣ ಈ ಹೋರಾಟಕ್ಕೆ ಸಾಮಾಜಿಕ ಕಾರ್ಯಕರ್ತರಾದ ಮೇದಾ ಪಾಟ್ಕರ್, ಬರಹಗಾರ್ತಿ ಅರುಂದತಿ ರಾಯ್, ಜ್ಞಾನಪೀಠ ಪ್ರಶಸ್ತಿ ವಿಜೇತೆ ಶ್ರೀಮತಿ ಮಹಾಶ್ವೇತಾದೇವಿಯವರು ಸಹ ಕೈಜೋಡಿಸಿದರು. ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞರಾದ ಶ್ರೀ ಅಮರ್ತ್ಯಾ ಸೇನ್ ಕಾರು ತಯಾರಿಕಾ ಘಟಕಕ್ಕೆ ಬೆಂಬಲ ನೀಡಿದರೂ ಸಹ, ಒತ್ತಾಯಪೂರ್ವಕವಾಗಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವ ಸರಕಾರದ ವಿರುದ್ದದ ಹೋರಾಟಕ್ಕೆ ಬೆಂಬಲ ನೀಡಿದರು.

ಈ ಹಂತದಲ್ಲಿ ರೈತಪರ ಹೋರಾಟಗಾರರ ಮತ್ತು ಎಡಪಕ್ಷಗಳ ಕಾರ್ಯಕರ್ತರ ನಡುವೆ ಹೊಡೆದಾಟಗಳು ನಡೆದು ಹೋರಾಟಗಾರರ ಮೇಲೆ ದೈಹಿಕ ಹಲ್ಲೆಗಳೂ ನಡೆದವು. ಒಂದು ಹಂತದಲ್ಲಿ ಸಿಂಗೂರು ಕೃಷಿಭೂಮಿ ಹೋರಾಟ ಸಮಿತಿಗೆ ನಕ್ಸಲರು ಬೆಂಬಲಿಸುತ್ತಿದ್ದಾರೆಂಬ ಗಂಬೀರ ಆಪಾದನೆಯನ್ನು ಎಡಪಕ್ಷಗಳು ಮಾಡಿದವು. ಜೊತೆಗೆ ಮಮತಾ ಬ್ಯಾನರ್ಜಿಯವರು ನಕ್ಸಲರನ್ನು ಕೇಳದೆ ಯಾವ ತೀರ್ಮಾನವನ್ನೂ ತೆಗೆದುಕೊಳ್ಳುತ್ತಿಲ್ಲವೆಂಬ ಆರೋಪವನ್ನೂ ಮಾಡಲಾಯಿತು. ಈ ನಡುವೆ ಸರಕಾರ ಸಿಂಗೂರಿನಲ್ಲಿ ಅನಿರ್ದಿಷ್ಟ ಅವಧಿಯ ಕರ್ಫ್ಯೂವನ್ನು ಜಾರಿಗೊಳಿಸಿತಾದರೂ, ತದನಂತರದಲ್ಲಿ ಕೊಲ್ಕತ್ತಾ ಉಚ್ಚ ನ್ಯಾಯಾಲಯ ಅದನ್ನು ಅನೂರ್ಜಿತಗೊಳಿಸಿತು. ಸಿಂಗೂರಿನಲ್ಲಿ ದೊಡ್ಡ ಪ್ರಮಾಣದ ಭೂಮಿಯನ್ನು ಹೊಂದಿದ್ದ ಎಡಪಕ್ಷಗಳ ಕಾರ್ಯಕರ್ತರುಗಳು ಮಾತ್ರ ಈ ಭೂಸ್ವಾದೀನದ ಪರವಾಗಿ ನಿಂತರು. ಈ ಎಲ್ಲ ಹೋರಾಟಗಳ ನಡುವೆಯೇ ಸರಕಾರ ಸದರಿ ಭೂಮಿಗೆ ಬೇಲಿ ಹಾಕುವ ಕೆಲಸವನ್ನು 2006ರಲ್ಲಿ ಪ್ರಾರಂಬಿಸಿತು. ಇದನ್ನು ಪ್ರತಿಭಟಿಸಿ ಮಮತಾ ಬ್ಯಾನರ್ಜಿ ತಮ್ಮ ಹೋರಾಟವನ್ನು ತೀವ್ರಗೊಳಿಸಿದಾಗ ಸರಕಾರ ಅವರು ಸಿಂಗೂರಿಗೆ ಪ್ರವೇಶಿಸದಂತೆ ಪ್ರತಿಬಂದನೆ ವಿಧಿಸಿತು. ಇದರಿಂದ ಹೋರಾಟದ ತೀವ್ರತೆ ಮತ್ತಷ್ಟು ಹೆಚ್ಚಿ ರಾಜ್ಯವ್ಯಾಪಿ ಬಂದ್ ನಡೆಯಿತು. ತೃಣಮೂಲದ ಶಾಸಕರುಗಳ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ವಿದಾನಸಭೆಯ ಪೀಠೋಪಕರಣಗಳು ದ್ವಂಸಗೊಂಡವು. ಆಗ ಮಮತಾರವರು 25 ದಿನಗಳ ಉಪವಾಸ ಸತ್ಯಾಗ್ರಹವನ್ನು ನಡೆಸಿದರು.

ತದನಂತರ ಸರಕಾರ ಭೂಮಿಗೆ ಹಾಕಿದ್ದ ಬೇಲಿಯ ರಕ್ಷಣೆಗೆ ಪೋಲಿಸರನ್ನು ನೇಮಿಸಿದರೂ ಹೋರಾಟ ತೀವ್ರವಾಗುತ್ತಲೇ ಹೋಯಿತು. ಸರಕಾರದ ವಿರುದ್ದ ಹೋರಾಟ ನಡೆಸುತ್ತಿದ್ದ ತಪಸಿಮಲಿಕ್‍ಎಂಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು ಆಕೆಯನ್ನು ಸುಟ್ಟು ಹಾಕಿದ ಪ್ರಕರಣದಲ್ಲಿ ಅಂದಿನ ಸಿ.ಪ.ಐ.(ಎಂ.)ನ ಜೋನಲ್ ಕಾರ್ಯದರ್ಶಿಯನ್ನು ಸಿ.ಬಿ.ಐ. ಬಂದಿಸಿತು.

ಈ ಎಲ್ಲ ಹೋರಾಟಗಳ ಹಿನ್ನೆಲೆಯಲ್ಲಿ 2008ರ ಸೆಪ್ಟೆಂಬರ್ 23ರಂದು ಸದರಿ ಯೋಜನೆಯಿಂದ ತಾನು ಹಿಂದೆ ಸರಿಯುವುದಾಗಿ ಟಾಟಾ ಕಂಪನಿ ಘೋಷಣೆ ಮಾಡಿತು. ಒಂದು ತಿಂಗಳ ನಂತರ ಸರಕಾರವೂ ಇದನ್ನು ಅನುಮೋದಿಸಿ ಅಧಿಕೃತ ಹೇಳಿಕೆ ನೀಡಿತು. ನಂತರದ ಚುನಾವಣೆಗಳಲ್ಲಿ ಎಡರಂಗ ಸೋಲನ್ನಪ್ಪಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಅಧಿಕಾರ ಹಿಡಿಯಿತು. ನಂತರದಲ್ಲಿ ಸರಕಾರ ಮತ್ತು ಟಾಟಾ ನಡುವೆ ಹಲವು ಸುತ್ತಿನ ನ್ಯಾಯಾಂಗ ಹೋರಾಟಗಳು ನಡೆದು ಅಂತಿಮವಾಗಿ ಸಿಂಗೂರಿನ ಕೃಷಿ ಭೂಮಿಯು ರೈತರಿಗೆ ದೊರಕಿದಂತಾಗಿದೆ.

ಈ ಹೋರಾಟದ ಅಂತಿಮ ಕ್ರಿಯೆ ಎಂಬಂತೆ ಮೊನ್ನೆ ದಿನ ಮಮತಾ ಬ್ಯಾನರ್ಜಿಯವರು ಸಾಮಾಜಿಕ ಹೋರಾಟಗಾರ್ತಿ ಮೇದಾಪಾಟ್ಕರ್ ಜೊತೆ ಸೇರಿ ರೈತರಿಗೆ ಅವರ ಭೂಮಿಯ ಹಕ್ಕುಪತ್ರಗಳನ್ನು ಮತ್ತು ಪರಿಹಾರಗಳ ಚೆಕ್ಕುಗಳನ್ನು ವಿತರಿಸಿದ್ದಾರೆ. ಇದರ ರಾಜಕೀಯ ಮೇಲಾಟಗಳೇನೆ ಇದ್ದರೂ ಇದು ಅಂತಿಮವಾಗಿ ಈ ದೇಶದ ಅನ್ನದಾತ ರೈತನ ಹೋರಾಟಕ್ಕೆ ಸಂದ ಜಯವೆನ್ನಬಹುದು. ಇದನ್ನು ಎಡಪಕ್ಷಗಳನ್ನು ಹಣಿಯಲು ಮಮತಾರವರು ರಾಜಕೀಯವಾಗಿ ಬಳಸಿಕೊಂಡದ್ದು ಎಷ್ಟರ ಮಟ್ಟಿಗೆ ನಿಜವೋ, ಹಾಗೆಯೇ ಎಡಪಕ್ಷಗಳು ಸಹ ರೈತರ ನಾಡಿಮಿಡಿತವನ್ನು ಅರಿಯಲು ವಿಫಲವಾಗಿದ್ದು ಸಹ ಅಷ್ಟೇ ನಿಜ.

ಕೊನೆಯಮಾತುಗಳು:

ಸಿಂಗೂರಿನಲ್ಲಿ ನಡೆದ ಸಮಾರಂಭದಲ್ಲಿ ಮಮತಾರವರು ಮತ್ತೆ ಟಾಟಾ ಕಂಪನಿ ತಮ್ಮಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲೆಂದು ಎಂದು ಕರೆಕೊಟ್ಟಿದ್ದಾರೆ. ಆದರೆ ಈ ಬಾರಿ ತಾವು ಸರಕಾರದ ವತಿಯಿಂದ ಬಂಜರು ಭೂಮಿಯನ್ನು ಮಾತ್ರ ನೀಡುವುದಾಗಿಯೂ ಹಾಗು ತಮಗೆ ಬೇಕಾದ ಭೂಮಿಯನ್ನು ಅವರೇ ರೈತರಿಂದ ನೇರವಾಗಿ ಖರೀದಿಸಬೇಕೆಂದೂ ಹೇಳಿದ್ದಾರೆ. ಒಟ್ಟಿನಲ್ಲಿ ತಮ್ಮ ಅಧಿಕಾರದ ಅವಧಿಯಲ್ಲಿ ರೈತರ ಕೃಷಿಭೂಮಿಯ ತಂಟೆಗೆ ತಾವಾಗಲಿ ತಮ್ಮ ಸರಕಾರವಾಗಲಿ ಹೋಗುವುದಿಲ್ಲವೆಂಬ ವಾಗ್ದಾನ ಮಾಡುವ ಮೂಲಕ ಬಂಗಾಳದ ರೈತರ ನೆಮ್ಮದಿಗೆ ಸದ್ಯಕ್ಕಂತು ಕಾರಣರಾಗಿದ್ದಾರೆ.

ಸಿಂಗೂರಿನ ಈ ರೈತ ಹೋರಾಟ ಇನ್ನಾದರು ಬಂಡವಾಳಶಾಹಿಗಳ ಗುಲಾಮರಂತೆ ವರ್ತಿಸುವ ಇತರೇ ಸರಕಾರಗಳಿಗೆ ಒಂದು ಪಾಠವಾಗಬೇಕಿದೆ.

No comments:

Post a Comment