ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕೈಗಾರಿಕೆಗಳಿಗೆ ಸುಲಭವಾಗಿ ಭೂಮಿ ಒದಗಿಸಲು ಸರಕಾರವೇ ರಚಿಸಿದ್ದ ಲ್ಯಾಂಡ್ ಬ್ಯಾಂಕನ್ನು ವಿಸರ್ಜಿಸುವುದರೊಂದಿಗೆ ಕರ್ನಾಟಕ ಸರಕಾರ ಒಂದು ಮಹತ್ವಪೂರ್ಣ ಹೆಜ್ಜೆಯನ್ನಿಟ್ಟಿದೆ.
ಹಾಗೆ ನೋಡಿದರೆ ಈ ಲ್ಯಾಂಡ್ ಬ್ಯಾಂಕ್ ಎನ್ನುವುದೇ ರೈತ ವಿರೋಧಿಯಾದ ಮತ್ತು ಬಂಡವಾಳಶಾಹಿ ಸ್ನೇಹಿಯಾದ ಒಂದು ಸಂಸ್ಥೆ! ಯಾಕೆಂದರೆ ಜಾಗತೀಕರಣದ ನಂತರ ಇಂಡಿಯಾದಲ್ಲಿ ತಮ್ಮ ಉದ್ದಿಮೆಗಳನ್ನು ಸ್ಥಾಪಿಸುವಂತೆ ಸ್ವದೇಶಿ ಮತ್ತು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳನ್ನು ರತ್ನಗಂಬಳಿ ಹಾಸಿ ಸ್ವಾಗತಕ್ಕೆ ನಿಂತ ಸರಕಾರಕ್ಕೆ ಇದ್ದ ಮೊದಲ ಸಮಸ್ಯೆ ಎಂದರೆ ಸದರಿ ಉದ್ದಿಮೆಗಳಿಗೆ ಭೂಮಿ ಒದಗಿಸುವುದಾಗಿತ್ತು. ಮುಕ್ತ ಆರ್ಥಿಕ ನೀತಿಗೆ ಬದಲಾದ ನಮ್ಮ ಹೊಸ ಆರ್ಥಿಕ ವ್ಯವಸ್ಥೆಗಾಗಿ ಕೇಂದ್ರ ಸರಕಾರ ಹಲವಾರು ಕಾನೂನುಗಳನ್ನು ತಿದ್ದುಪಡಿ ಮಾಡುವುದರ ಮತ್ತು ಹೊಸ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಕೈಗಾರೀಕರಣದ ಪ್ರಕ್ರಿಯೆಯ ವೇಗ ಹೆಚ್ಚಿಸುವ ಕ್ರಮಕ್ಕೆ ಟೊಂಕ ಕಟ್ಟಿ ನಿಂತಿತು. ಕೇಂದ್ರ ಸರಕಾರಗಳ ಇಂತಹ ಆಶಯಕ್ಕೆ ಕೈ ಜೋಡಿಸಿದ ಬಹುತೇಕ ರಾಜ್ಯಗಳು ಬಹುರಾಷ್ಟ್ರೀಯ ಕಂಪನಿಗಳನ್ನು ತಮ್ಮ ರಾಜ್ಯಕ್ಕೆ ಸೆಳೆಯಲು ಉಚಿತವಾಗಿ ಅಥವಾ ಅಲ್ಪಬೆಲೆಗೆ ಭೂಮಿ ನೀಡಲು ಮುಂದಾದವು. ಆದರೆ ಕಂಪನಿಯೊಂದು ಕೈಗಾರಿಕೆ ಸ್ಥಾಪಿಸಲು ಮುಂದೆ ಬಂದ ಕೂಡಲೆ ರೈತರ ಭೂಮಿಯನ್ನು ವಶಪಡಿಸಿಕೊಂಡು ತಕ್ಷಣಕ್ಕೆ ನೀಡಲು ಹಲವಾರು ಅಡಚಣೆಗಳು ಎದುರಾಗುತ್ತಿದ್ದುದರಿಂದ ರಾಜ್ಯ ಸರಕಾರಗಳು ಲ್ಯಾಂಡ್ ಬ್ಯಾಂಕ್ ಎಂಬ ಸರಕಾರಿ ಸಂಸ್ಥೆಯನ್ನು ಸ್ಥಾಪಿಸಿ, ಮೊದಲೇ ಭೂಮಿ ವಶ ಪಡಿಸಿಕೊಂಡು ಲ್ಯಾಂಡ್ ಬ್ಯಾಂಕಲ್ಲಿ ಇಟ್ಟುಕೊಂಡು ಕೈಗಾರಿಕೆಗಳು ಬಂದಾಗ ಅವುಗಳಿಗೆ ಅದನ್ನು ನೀಡುವಂತಹ ಒಂದು ವ್ಯವಸ್ಥೆಯನ್ನು ರೂಪಿಸಿಕೊಂಡವು.
ಆದರೆ ಸರಕಾರಗಳೇ ಅಧಿಕೃತವಾಗಿ ನೀಡುವ ವರದಿಗಳ ಪ್ರಕಾರ ಈ ಲ್ಯಾಂಡ್ ಬ್ಯಾಂಕಿಗಾಗಿ ರೈತರಿಂದ ಸರಕಾರ ವಶಪಡಿಸಿಕೊಂಡ ಭೂಮಿಯ ಶೇಕಡಾ 40 ರಿಂದ 50 ರಷ್ಟು ಭೂಮಿಯನ್ನು ಯಾವ ಕೈಗಾರಿಕೆಗಳಿಗೂ ಬಳಸದೆ ಬೀಳು ಬಿಡಲಾಗಿದೆ. ಅಂದರೆ ಇತ್ತ ಕೃಷಿಯನ್ನು ಮಾಡದೆ ಅತ್ತ ಕೈಗಾರಿಕೆಗಳಿಗೂ ಬಳಸದೆ ಹಾಗೆಯೇ ಬಿಡಲಾಗಿದೆ. ಹೀಗೆ ಲ್ಯಾಂಡ್ ಬ್ಯಾಂಕಿಗಾಗಿ ಹೆಚ್ಚು ಭೂಮಿಯನ್ನು ವಶಪಡಿಸಿಕೊಂಡಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ, ಆಂದ್ರಪ್ರದೇಶ, ಗುಜರಾತ್, ಮದ್ಯಪ್ರದೇಶ ಮತ್ತು ಕರ್ನಾಟಕ ಪ್ರಮುಖ ರಾಜ್ಯಗಳಾಗಿವೆ. ರಾಜಾಸ್ಥಾನ್ ಮತ್ತು ಉತ್ತರಪ್ರದೇಶಗಳು ಈ ಸಾಲಿನಲ್ಲಿವೆ. ಹಾಗಾದರೆ ತರಾತುರಿಯಲ್ಲಿ ರೈತರಿಂದ ವಶಪಡಿಸಿಕೊಂಡ ಭೂಮಿಯನ್ನು ಲ್ಯಾಂಡ್ ಬ್ಯಾಂಕಿನ ಖಾತೆಗೆ ಸೇರಿಸಿಕೊಂಡ ಭೂಮಿಯನ್ನು ಸರಕಾರವೇಕೆ ಉದ್ದಿಮೆಗಳಿಗೆ ನೀಡದೇ ಉಳಿಸಿಕೊಂಡಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ಸಿಗುವುದು ಪೂರ್ವಸಿದ್ದತೆಯಿಲ್ಲದ ಸರಕಾರದ ಯೋಜನೆಗಳು ಮತ್ತು ಕೈಗಾರಿಕಾ ನೀತಿಗಳು.
ವಶಪಡಿಸಿಕೊಂಡ ಭೂಮಿಯನ್ನು ಲ್ಯಾಂಡ್ ಬ್ಯಾಂಕಿನ ಮೂಲಕ ತನ್ನ ವಶದಲ್ಲಿಟ್ಟುಕೊಂಡಿರುವ ಸರಕಾರಗಳು, ಸದರಿ ಭೂಮಿಯಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಬೇಕಾದಂತಹ ಮೂಲಸೌಕರ್ಯಗಳನ್ನು ಕಲ್ಪಿಸುವ ಯಾವ ಪ್ರಯತ್ನಗಳನ್ನೂ ಮಾಡದಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಮೂಲಭೂತ ಸೌಕರ್ಯಗಳಾದ ವಿದ್ಯುತ್, ನೀರು, ಮತ್ತು ಸಾರಿಗೆ-ಸಂಪರ್ಕಗಳನ್ನು ಆ ಭೂಮಿಗೆ ಒದಗಿಸದ ಸರಕಾರಗಳು ಇತ್ತ ಕೃಷಿಗೂ ನ್ಯಾಯ ಒದಗಿಸಲಾಗದೆ,ಇತ್ತ ಕೈಗಾರಿಕೆಗಳಿಗೂ ಅವಕಾಶ ಕಲ್ಪಿಸಲಾಗದೆ ತ್ರಿಶಂಕು ಸ್ಥಿತಿಯಲ್ಲಿವೆ.
ಕೇಂದ್ರ ಸರಕಾರವು ತನ್ನ ನೀತಿಯ ಪ್ರಕಾರ ಎಲ್ಲ ರಾಜ್ಯಗಳೂ ಲ್ಯಾಂಡ್ ಬ್ಯಾಂಕನ್ನು ರಚಿಸಿ ಭೂಮಿಯನ್ನು ಸಿದ್ದವಾಗಿಟ್ಟುಕೊಂಡು ತನ್ನ ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕ ವಾತಾವರಣ ಕಲ್ಪಿಸುವ ಆದೇಶ ನೀಡಿರುವ ಈ ಸಂದರ್ಭದಲ್ಲಿ ಕರ್ನಾಟಕದಂತಹ ರಾಜ್ಯಗಳು ತಾವು ಈಗಾಗಲೇ ಲ್ಯಾಂಡ್ ಬ್ಯಾಂಕಿಗೆ ವಶಪಡಿಸಿಕೊಂಡಿರುವ ಭೂಮಿಯನ್ನು ಸದ್ವಿನಿಯೋಗ ಮಾಡಿಕೊಳ್ಳಲಾಗದೆ ಅದನ್ನು ಪಾಳು ಬಿಟ್ಟಿರುವುದು ಕಂಡು ಬರುತ್ತಿದೆ. ಇದಕ್ಕೆ ಇನ್ನೂ ಒಂದು ಕಾರಣವಿದೆ. ಸರಕಾರಗಳು ಏನೇ ವಿಶ್ವ ಹೂಡಿಕೆದಾರರ ಸಮ್ಮೇಳನಗಳನ್ನು ಮಾಡಿದರೂ ತಮಗೆ ಸಂಪೂರ್ಣ ಲಾಭವಿದೆಯೆಂದು ಅನಿಸುವವರೆಗೂ ಯಾವ ಉದ್ದಿಮೆದಾರರೂ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರುವುದಿಲ್ಲ. ಜೊತೆಗೆ ಈಗಾಗಲೇ ಅಭಿವೃದ್ದಿಯಾಗಿರುವ ರಾಜ್ಯ ರಾಜದಾನಿಗಳ ಆಸುಪಾಸಿನಲ್ಲಿ ಭೂಮಿ ನೀಡಿದರೆ ಮಾತ್ರ ಅವು ಬರುವ ಇರಾದೆಯನ್ನು ಹೊಂದಿವೆ. ಇವತ್ತು ನಾವೇನೇ ಆಮೀಷ ತೋರಿಸಿದರೂ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಿಂದ ದೂರದಲ್ಲಿ ತಮ್ಮ ಕೈಗಾರಿಕೆಗಳನ್ನು ಸ್ಥಾಪಿಸಲು ಇಚ್ಚಿಸುವುದಿಲ್ಲವೆಂಬುದು ವಾಸ್ತವ. ಬಹಳ ಜನಕ್ಕೆ ಗೊತ್ತಿರದ ಇನ್ನೊಂದು ವಿಚಾರವೆಂದರೆ ತಮಗೆ ಪೂರಕವಾಗಿರುವ ಪಕ್ಷಗಳ ಸರಕಾರಗಳು ಇದ್ದ ಕಡೆ ಮಾತ್ರ ಈ ಉದ್ದಿಮೆದಾರರು ಹೋಗಲು ಮನಸು ಮಾಡುವುದುಂಟು. ಈ ಎಲ್ಲ ಕಾರಣಗಳಿಂದ ಬಹುತೇಕ ರಾಜ್ಯಗಳು ತಾವು ಲ್ಯಾಂಡ್ ಬ್ಯಾಂಕಿನ ಮೂಲಕ ವಶಪಡಿಸಿಕೊಂಡ ಭೂಮಿಯನ್ನು ಹಾಗೆಯೇ ಇಟ್ಟುಕೊಂಡು ಕೂತಿವೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ತನ್ನ ಲ್ಯಾಂಡ್ ಬ್ಯಾಂಕನ್ನು ವಿಸರ್ಜಿಸುವ ನಿರ್ದಾರ ತೆಗೆದುಕೊಂಡಿರುವುದು ಸ್ವಾಗತಾರ್ಹವಾಗಿದೆ. ಇದರ ಮೊದಲ ಹಂತವಾಗಿ ಇನ್ನೂ ಅಂತಿಮ ಅಧಿಸೂಚನೆ ಬಾಕಿ ಇರುವ ದಾವಣಗೆರೆ, ಚಿತ್ರದುರ್ಗ, ತುಮಕೂರು, ವಿಜಯಪುರ ಜಿಲ್ಲೆಗಳಲ್ಲಿನ ಸುಮಾರು 13,788 ಎಕರೆ ಭೂಮಿಯನ್ನು ರೈತರಿಗೆ ಹಿಂದಿರುಗಿಸಲು ನಿರ್ದರಿಸಲಾಗಿದೆ. ಸರಕಾರದ ಹೇಳಿಕೆಯ ಪ್ರಕಾರ ಈ ಭೂಮಿಯನ್ನು ವಶಪಡಿಸಿಕೊಂಡು ಎಂಟು ವರ್ಷಗಳಾಗಿದ್ದರೂ ಇದರಲ್ಲಿ ಯಾವುದೇ ಕೈಗಾರಿಕಾ ಚಟುವಟಿಕೆಗಳನ್ನು ಕೈಗೊಳ್ಳಲಾಗದೇ ಇರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಈಗ ಈ ಭೂಮಿಯನ್ನು ರೈತರಿಗೆ ಹಿಂದಿರುಗಿಸುವುದರಿಂದ ಆ ಭೂಮಿಯ ಮಾಲೀಕರು ಕೃಷಿ ಮಾಡಲು ಮತ್ತು ಬ್ಯಾಂಕುಗಳಿಂದ ಕೃಷಿಸಾಲ ಪಡೆಯಲು ಅನುಕೂಲವಾಗಲಿದೆಯೆಂದು ಹಾಗು ಇದರಿಂದ ಯಾವುದೇ ಅಕ್ರಮ ರಿಯಲ್ ಎಸ್ಟೇಟ್ ವ್ಯವಹಾರ ನಡೆಯಲು ಆಸ್ಪದವಿಲ್ಲದಂತಾಗಿದೆಯೆಂದು ಸರಕಾರವೇನೊ ತಿಳಿಸಿದೆ.
ಆದರೆ ಲ್ಯಾಂಡ್ ಬ್ಯಾಂಕಿನ ವಿಸರ್ಜನೆ ಎಂಬ ಸರಕಾರದ ನಿಲುವಿನಲ್ಲಿಎಷ್ಟರ ಮಟ್ಟಿಗೆ ಪ್ರಾಮಾಣಿಕತೆ ಅಡಗಿದೆಯೆಂಬುದನ್ನು ಮುಂದಿನ ದಿನಗಳ ಅದರ ನಡವಳಿಕೆಯಿಂದ ಗೊತ್ತಾಗಬೇಕಿದೆ. ಯಾಕೆಂದರೆ ಈಗಾಗಲೇ 40924.13 ಎಕರೆ ಭೂಮಿಗೆಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು. ಇನ್ನು 39258ಎಕರೆ ಭೂಮಿಗೆ ಅಂತಿಮ ಅಧಿಸೂಚನೆ ಬಾಕಿಯಿದೆ. ಅಂತಿಮ ಅಧಿಸೂಚನೆ ಹೊರಡಿಸಿದ ಭೂಮಿಯನ್ನು ತದನಂತರದಲ್ಲಿ ಹಂತಹಂತವಾಗಿ ರೈತರಿಗೆ ಹಿಂದಿರುಗಿಸಲಾಗುವುದೆಂದು ಸರಕಾರವೇನೊ ಹೇಳಿದೆ. ಇಲ್ಲಿರುವ ಅನುಮಾನವೆಂದರೆ ಇದೀಗ ಅಂತಿಮ ಅಧಿಸೂಚನೆಯಾಗಿರುವ ಹೆಚ್ಚಿನ ಭೂಮಿ ಬೆಂಗಳೂರು,ಮೈಸೂರು, ಮುಂತಾದ ಅಭಿವೃದ್ದಿಯಾಗಿರುವ ಮುಖ್ಯನಗರಗಳಲ್ಲಿ ಅಥವಾ ಅವುಗಳ ಸಮೀಪವಿದ್ದು ಇವುಗಳನ್ನು ರೈತರಿಗೆ ಹಿಂದಿರುಗಿಸುವ ನೆಪದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಸಕ್ರಿಯವಾಗುವ ಅಪಾಯವೂ ಇದೆಯೆಂಬುದಾಗಿದೆ.ಹೀಗಾಗಿ ಬೇಡಿಕೆಯಿರದ ಇತರೇ ಜಿಲ್ಲೆಗಳಲ್ಲಿನ ಭೂಮಿಯನ್ನು ರೈತರಿಗೆ ನೀಡುವಷ್ಟು ಸುಲಭವಾಗಿ ರಾಜದಾನಿ ಮತ್ತಿತರೆ ಅಭಿವೃದ್ದಿ ಹೊಂದಿದ ನಗರಗಳಲ್ಲಿ ವಶಪಡಿಸಿಕೊಂಡ ಭೂಮಿಯನ್ನು ಹಿಂದಿರುಗಿಸುವ ಕಾರ್ಯದಲ್ಲಿ ರಿಯಲ್ ಎಸ್ಟೇಟ್ ಹಿತಾಸಕ್ತಿಗಳು ಮೂಗುತೂರಿಸಲಾರವೆಂಬುದಕ್ಕೆ ಯಾವುದೇ ಭರವಸೆಯಿಲ್ಲ. ಹೀಗಾಗಿ ಸರಕಾರವು ಈ ವಿಚಾರದಲ್ಲಿ ಹೆಚ್ಚು ಪಾರದರ್ಶಕವಾಗಿ ಇರಬೇಕಾದ ಅಗತ್ಯವಿದೆ. ಜೊತೆಗೆ ಇದು ಡಿನೋಟಿಫಿಕೇಷನ್ನಿನ ಇನ್ನೊಂದು ರೂಪವಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವೂ ಇದೆ.
ಇತ್ತೀಚೆಗೆ ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಟಾಟಾ ಕಂಪನಿಗಾಗಿ ಅಲ್ಲಿನ ರಾಜ್ಯಸರಕಾರ ವಶಪಡಿಸಿಕೊಂಡಿದ್ದ ರೈತರ ಕೃಷಿ ಭೂಮಿಯನ್ನು ಮಮತಾ ಬ್ಯಾನರ್ಜಿಯವರು ರೈತರಿಗೆ ಹಿಂದಿರುಗಿಸಿದ ಘಟನೆಯಿನ್ನು ಹಸಿರಾಗಿರುವಾಗಲೇ ಕರ್ನಾಟಕ ರಾಜ್ಯ ಸರಕಾರ ಲ್ಯಾಂಡ್ ಬ್ಯಾಂಕನ್ನು ವಿಸರ್ಜಿಸುವ ನಿರ್ದಾರ ಕೈಗೊಂಡಿರುವುದು ವಿಶೇಷವಾಗಿದೆ.
No comments:
Post a Comment