Sep 8, 2016

ಗೋಹತ್ಯೆ – ಒಂದು ಪರಾಮರ್ಶೆ: ಭಾಗ 3.

ನಾಗೇಶ್ ಹೆಗಡೆ
25/08/2016
ಗೋಹತ್ಯೆ – ಒಂದು ಪರಾಮರ್ಶೆ: ಭಾಗ 1 ಓದಲು ಇಲ್ಲಿ ಕ್ಲಿಕ್ಕಿಸಿ
ಗೋಹತ್ಯೆ – ಒಂದು ಪರಾಮರ್ಶೆ: ಭಾಗ 2 ಓದಲು ಇಲ್ಲಿ ಕ್ಲಿಕ್ಕಿಸಿ
ಅಂಥದ್ದೇನೂ ಆಗುವುದಿಲ್ಲ; ದನಕರುಗಳು ಶಾಶ್ವತವೇನಲ್ಲವಲ್ಲ! ಅವು ಸಹಜವಾಗಿ ಸಾಯುತ್ತಿರುತ್ತವೆ. ಈಗಿನಷ್ಟೇ ಸಂಖೈಯಲ್ಲಿ ಆಗಲೂ ಸಾಯುತ್ತಿರುತ್ತವೆ. ಅವುಗಳ ಮಾಂಸ ತೆಗೆದು ಮಾರಲು ಅಥವಾ ಮೃಗಾಲಯಕ್ಕೆ ಸಾಗಿಸಲು ಅನುಮತಿ ಸಿಕ್ಕೇ ಸಿಗುತ್ತದೆ. ನೀವು ಉತ್ಪ್ರೇಕ್ಷೆ ಮಾಡಬೇಡಿ.
ಉತ್ಪ್ರೇಕ್ಷೆ ಅಲ್ಲ. ಈಗಿನ ವ್ಯವಸ್ಥೆಯಲ್ಲಿ ಅಲ್ಲಲ್ಲಿ ಕೇಂದ್ರೀಕೃತ ಕಸಾಯಿಖಾನೆಗಳಲ್ಲಿ ದಿನವೂ ಇಷ್ಟಿಷ್ಟೆಂಬಂತೆ ಮಾಂಸ ಲಭಿಸುತ್ತಿದೆ. ಎಲ್ಲೆಲ್ಲಿ ಎಂದೆಂದು ಎಷ್ಟೆಷ್ಟು ಡಿಮಾಂಡ್ ಇದೆಯೊ ಅಂದಂದು ಅಷ್ಟಷ್ಟು ಪೂರೈಕೆ ಆಗುತ್ತಿದೆ. ಗೋಹತ್ಯೆ ನಿಷೇಧಿಸಿದರೆ ಈ ಸಪ್ಲೈ ಚೇನ್ ನಲ್ಲಿ ಅವ್ಯವಸ್ಥೆ ಉಂಟಾಗುತ್ತದೆ. ಏಕೆಂದರೆ ಎಲ್ಲಿ, ಯಾವ ದಿನ ಎಷ್ಟು ದನಕರುಗಳು ಸಾಯಲಿವೆ ಎಂಬುದು ಯಾರಿಗೂ ಗೊತ್ತಾಗಲು ಸಾಧ್ಯವಿಲ್ಲ. ದನಗಳ ಕಳೇಬರದ ಸಾಗಾಣಿಕೆಗೆ ಸಂಬಂಧಿಸಿದಂತೆ ಪೊಲೀಸ್ ಕಿರುಕುಳ ಹೆಚ್ಚುವುದರಿಂದ, ಇಂಥ ರಗಳೆಯೇ ಬೇಡವೆಂದು ರೈತರು ತಮ್ಮ ದನ ಸತ್ತಾಗ ಯಾರಿಗೂ ತಿಳಿಸದೇ ಮಣ್ಣು ಮಾಡುವ ಸಾಧ್ಯತೆ ಹೆಚ್ಚುತ್ತದೆ. ಹೀಗಾದರೆ ಚರ್ಮೋದ್ಯಮವೂ ತತ್ತರಿಸಬಹುದು. ಪಶು ಆಹಾರ, ಔಷಧ ಉತ್ಪಾದನೆ ಮತ್ತು ಔದ್ಯಮಿಕ ಕಚ್ಚಾಪದಾರ್ಥ, ಸೌಂದರ್ಯವರ್ಧಕ ರಸವಸ್ತುಗಳ ತಯಾರಿಕೆ ಹೀಗೆ ಎಲ್ಲಕ್ಕೂ ನಾವು ವಿದೇಶೀ ಆಮದನ್ನೇ ಅವಲಂಬಿಸಲಬೇಕಾಗುತ್ತದೆ. ನಾಡಿನುದ್ದಕ್ಕೂ ಹಳ್ಳಿಗಳಲ್ಲಿ ಅಲ್ಲಲ್ಲಿ ಆಗಾಗ ಒಂದೋ ಎರಡೋ ರಾಸುಗಳು ಸತ್ತಿದ್ದು ಗೊತ್ತಾದರೂ ಅದರ ಮಾಂಸವನ್ನು ಸಾಗಿಸಿ ತಂದು ಆಹಾರವಾಗಿ ವಿಲೇವಾರಿ ಮಾಡುವುದಾದರೆ ಗುಣಮಟ್ಟ ಕೆಟ್ಟು ರೋಗರುಜಿನ ಹಬ್ಬಲು ಕಾರಣವಾಗಬಹುದು. ಬನ್ನೇರುಘಟ್ಟದಲ್ಲಿ ಐದು ಹುಲಿಗಳು ‘ಸಾಲ್ಮೊನೆಲ್ಲಾ’ ವಿಷಾಣು ಸೇರಿದ್ದ ರೋಗಗ್ರಸ್ತ ಮಾಂಸವನ್ನ ತಿಂದೇ ಸತ್ತಿವೆ.


ಔಷಧ ಮತ್ತು ರಸವಸ್ತುಗಳ ಉತ್ಪಾದನೆಗೆ ಗೋಹತ್ಯೆ ನಿಷೇಧದಿಂದ ಹೇಗೆ ಧಕ್ಕೆ ಬರಲು ಸಾಧ್ಯ? ವೈದ್ಯಕೀಯಕ್ಕೂ ದನಕರುಗಳಿಗೂ ಅದೆಂಥ ಸಂಬಂಧ?
ವೈದ್ಯಕೀಯ ರಂಗಕ್ಕಷ್ಟೇ ಅಲ್ಲ, ಉದ್ಯಮರಂಗಕ್ಕೆ ಮತ್ತು ನಮ್ಮ ದಿನಬಳಕೆಯ ಸಾವಿರಾರು ವಸ್ತುಗಳಿಗೆ ಬೇಕಾದ ಕಚ್ಚಾ ಪದಾರ್ಥಗಳು ಕಸಾಯಿಖಾನೆಗಳಿಂದಲೇ ಲಭಿಸುತ್ತವೆ. ಅದರ ವ್ಯಾಪ್ತಿ ಜನಸಾಮಾನ್ಯರ ಊಹೆಗೂ ಮೀರಿದ್ದಾಗಿದೆ. ಅದನ್ನು ತುಸು ವಿವರವಾಗಿ ನೋಡೋಣ:

ಒಂದು ಹಸು, ಎತ್ತು ಅಥವಾ ಎಮ್ಮೆ ಸತ್ತರೆ ಅದರ ಚರ್ಮವನ್ನು ಸುಲಿದು ಯಾರೋ ಪಾದರಕ್ಷೆ, ಬೆಲ್ಟ್ ಇತ್ಯಾದಿ ಮಾಡಲೆಂದು ಒಯ್ಯುತ್ತಾರೆ. ಮಾಂಸದ ಆಯ್ದ ಭಾಗಗಳನ್ನು ಕೆಲವರು ಆಹಾರಕ್ಕೆ ಬಳಸುತ್ತಾರೆ. ದನಗಳ ಗೊರಸು, ಕೋಡುಗಳಿಂದಲೇ ‘ಜೆಲ್ಲಿ’ ಎಂಬ ಅಂಟು ಪದಾರ್ಥವನ್ನು ತಯಾರಿಸುತ್ತಾರೆ ಅನ್ನೋದು ಗೊತ್ತಿತ್ತು. ಪುಡಿ ಮಾಡಿದ ಮೂಳೆಗಳನ್ನು ಸಕ್ಕರೆಯನ್ನು ಬಿಳಿ ಮಾಡಲು ಬಳಸುತ್ತಾರೆ. ರಸಗೊಬ್ಬರಕ್ಕೆ ಬೇಕಾದ ಕ್ಯಾಲ್ಸಿಯಂ ಮತ್ತು ರಂಜಕವನ್ನು ‘ಬೋನ್ ಮಿಲ್’ ಫ್ಯಾಕ್ಟರಿಗಳಿಂದಲೇ ಪೂರೈಸಲಾಗುತ್ತದೆ. ಇದರಾಚಿನ ಗೋಪುರಾಣ ಹೀಗಿದೆ:

ಉದಾಹರಣೆಗೆ, ದನಗಳ ಶ್ವಾಸಕೋಶ ಮತ್ತು ಶ್ವಾಸನಾಳದ ಒಳ ಪೊರೆಯಿಂದ ಹೆಪಾರಿನ್ ಎಂಬ ಔಷಧವನ್ನು ತಯಾರಿಸುತ್ತಾರೆ. ಮನುಷ್ಯರ ಸರ್ಜರಿ ಮಾಡುವಾಗ ರಕ್ತ ಗರಣೆಗಟ್ಟದ ಹಾಗೆ ತಡೆಯಲು, ವಿಶೇಷವಾಗಿ ಗ್ಯಾಂಗ್ರೀನ್ ಆಗದಂತೆ ತಡೆಯಲು ಈ ಔಷಧ ಬಳಕೆಯಾಗುತ್ತದೆ. ದನದ ಅಡ್ರಿನಾಲಿನ್ ಗ್ರಂಥಿಗಳಿಂದ ಸ್ಟಿರಾಯಿಡ್ ಗಳನ್ನು ತೀವ್ರ ಅಸ್ತಮಾದಂಥ ಕಾಯಿಲೆಗಳ ಉಪಶಮನಕ್ಕೆ ಬಳಸುತ್ತಾರೆ. ಇದೇ ಗ್ರಂಥಿಗಳಿಂದ ಎಪಿನೆಫ್ರಿನ್ ಎಂಬ ಔಷಧವನ್ನು ಉತ್ಪಾದಿಸಿ ಅದನ್ನು ರಕ್ತದ ಒತ್ತಡವನ್ನು ಹೆಚ್ಚಿಸಲು ಬಳಸುತ್ತಾರೆ. ಹೃದ್ರೋಗ ಚಿಕಿತ್ಸೆಗಂತೂ ಇದು ಬೇಕೇ ಬೇಕು. ದನದ ಯಕೃತ್ತಿನಿಂದ ಬಿ-12, ಲಿವರ್ ಎಕ್ಸ್‍ ಟ್ರ್ಯಾಕ್ಟ್ ಔಷಧಗಳು ತಯಾರಾಗುತ್ತವೆ. ಹಾಗೆಯೇ ಮಧುಮೇಹಿಗಳಿಗೆ ಬೇಕಾದ ಇನ್ಸೂಲಿನನ್ನು ದನಗಳ ಮೇಧೋಜೀರಕ ಗ್ರಂಥಿಗಳಿಂದ ಪಡೆಯಲಾಗುತ್ತದೆ. ಇನ್ನು ಕೀಲುನೋವು, ಸಂಧಿವಾತದಿಂದ ಬಳಲುವವರಿಗೆ ಕೊಡುವ ಕೊಂಡ್ರಾಯಿಟಿನ್ ಸಲ್ಫೇಟ್ ಎಂಬ ಔಷಧವನ್ನು ದನದ ಮೂಗಿನ ಹೊರಳೆಗಳ ನಡುವಿನ ಮೃದ್ವಸ್ಥಿಯಿಂದಲೇ ತಯಾರಿಸುತ್ತಾರೆ. ದನದ ಮಿದುಳಿನ ದಟ್ಟ ನಾರಿನಂಥ ಹೊರಗವಚವನ್ನು (ಡ್ಯುರಾ ಮೇಟರ್) ಮನುಷ್ಯರ ಮಿದುಳಿನ ಶಸ್ತ್ರಚಿಕಿತ್ಸೆ ಮಾಡುವಾಗ ತಲೆಬುರುಡೆಯ ಖಾಲಿ ಜಾಗವನ್ನು ತುಂಬಲು ಬಳಸಲಾಗುತ್ತದೆ.

ದನದ ಕರುಳನ್ನು ಉಪ್ಪಿನಲ್ಲಿ ಒಣಗಿಸಿ ಕೊಳವೆಯಂತೆ ಕತ್ತರಿಸಿ ಅದರಲ್ಲಿ ಮಸಾಲೆ ಮಾಂಸ ತುಂಬಿ ಕರಿದು ‘ಸಾಸೇಜ್’ ಎಂಬ ತಿಂಡಿಯನ್ನು ತಯಾರಿಸಲಾಗುತ್ತದೆ. ಕರುಳನ್ನು ದಾರದಂತೆ ಸೀಳಿ, ಗಾಯಕ್ಕೆ ಹೊಲಿಗೆ ಹಾಕುವ ದಾರವನ್ನಾಗಿ ಬಳಸಲಾಗುತ್ತದೆ.

ದನಗಳ ಪಿತ್ತಕೋಶದ ಕಲ್ಲುಗಳನ್ನು ಪಾಲಿಶ್ ಮಾಡಿ ಆಭರಣ ತಯಾರಕರು ಹರಳುಗಳಂತೆ ಕೂರಿಸುತ್ತಾರೆ. ಪ್ಲೈವುಡ್ ನಲ್ಲಿ ಕಟ್ಟಿಗೆಯ ತೆಳು ಹಾಳೆಗಳನ್ನು ಅಂಟಿಸಲು ದನಗಳ ರಕ್ತವನ್ನು ಗೋಂದಿನಂತೆ ಸಾಂದ್ರೀಕರಿಸಿ ಬಳಸುತ್ತಾರೆ. ಕಟ್ಟಡಗಳಿಗೆ ಬೆಂಕಿ ಬಿದ್ದಾಗ ಉಪಯೋಗಿಸುವ ಅಗ್ನಿಶಾಮಕ ನೊರೆಯನ್ನೂ ದನಗಳ ರಕ್ತದ ಪುಡಿಯಿಂದಲೇ ತಯಾರಿಸಲಾಗುತ್ತದೆ. ಮಿಕ್ಕಿದ ರಕ್ತಪುಡಿ ರಸಗೊಬ್ಬರದ ಉತ್ಪಾದನೆಗೆ ಹೋಗುತ್ತದೆ. ಕೃಷಿ ಕೆಲಸದಲ್ಲಿ ದುಡಿಯುವ ಮಹಿಳೆ ತೀರ ದುರ್ಬಲಳಾಗಿದ್ದರೆ ಅನೀಮಿಯಾ ಕಾಯಿಲೆ ಇದೆಯೆಂದು ಡಾಕ್ಟರು ಬರೆದುಕೊಡುವ ಐರನ್ ಟ್ಯಾಬ್ಲೆಟ್ ಗೂ ದನದ ರಕ್ತವೇ ಮೂಲದ್ರವ್ಯ. ಇಡೀ ದೇಶದ ಗ್ರಾಮೀಣ ಗರ್ಭಿಣಿಯರಿಗೆ ಇಂದು ವಿತರಣೆಯಾಗುವ ಐರನ್ ಟ್ಯಾಬ್ಲೆಟ್ ಗಳಿಗೆ ಇದೇ ಮೂಲವಸ್ತು.

ದನಗಳ ಎಲುಬಿನ ಪುಡಿಯಿಂದಲೇ ಸಕ್ಕರೆಗೆ ಅಚ್ಚ ಬಿಳಿಬಣ್ಣ ಬರುತ್ತದೆ. ಪಿಂಗಾಣಿ ವಸ್ತುಗಳ ತಯಾರಿಕೆಯಲ್ಲೂ ಇದು ಬೇಕೇ ಬೇಕು. ಅತ್ಯುಚ್ಚ ಗುಣಮಟ್ಟದ ವೆಶೇಷ ಉಕ್ಕಿನ ತಯಾರಿಕೆಗೆ ಮೂಳೆಪುಡಿಯನ್ನು ಸೇರಿಸಬೇಕಾಗುತ್ತದೆ. ಎಲುಬಿನಿಂದ ತಯಾರಿಸಲಾದ ಬಟನ್ ಗಳಿಗೆ ಈ ಪ್ಲಾಸ್ಟಿಕ್ ಯುಗದಲ್ಲೂ ಬೇಡಿಕೆ ಇದೆ.

ದನಗಳ ಎಲುಬು ಮತ್ತು ಕೊಬ್ಬು ಎರಡರಿಂದಲೂ ‘ಟ್ಯಾಲೊ’ ಎಂಬ ವಿಶೇಷ ಬಗೆಯ ಎಣ್ಣೆಯನ್ನು ತೆಗೆಯುತ್ತಾರೆ. ಭಕ್ಷಣೆಗೆ ಯೋಗ್ಯವಲ್ಲದ ಟ್ಯಾಲೊ ಎಣ್ಣೆಯನ್ನು ಬ್ರೇಕ್ ದ್ರವ ಮತ್ತು ಜೆಟ್ ವಿಮಾನಗಳ ಕೀಲೆಣ್ಣೆಯ ಉತ್ಪಾದನೆಗೆ ಕಚ್ಚಾ ಪದಾರ್ಥವಾಗಿ ಬಳಸುತ್ತಾರೆ. ಬಸ್ಸು, ಲಾರಿ, ಕಾರುಗಳ ಹೈಡ್ರಾಲಿಕ್ ಬ್ರೇಕ್ ಗಳಿಗೆ ದನದ ಎಣ್ಣೆ ಬಳಕೆಯಾಗುತ್ತದೆ. ಬಸ್ ನಿಂತಾಗ ಆಟೊಮೆಟಿಕ್ ಬಾಗಿಲು ತೆರೆಯಲಿಕ್ಕೂ ಇದೇ ದ್ರವ ಬೇಕು. ಮೋಂಬತ್ತಿಗೆ ಇದೇ ಮೂಲವಸ್ತು. ನಟನಟಿಯರು ಕೃತಕ ಕಣ್ಣೀರು ಹರಿಸಲೆಂದು ಬಳಿದುಕೊಳ್ಳುವ ಗ್ಲಿಸರೀನ್ ಕೂಡ ಇದೇ ಟ್ಯಾಲೊದಿಂದಲೇ ಬರುತ್ತದೆ. ಇದರಿಂದ ಸಾಬೂನು, ಡಿಟರ್ಜಂಟ್ ಗಳೂ ತಯಾರಾಗುತ್ತವೆ. ವಿವಿಧ ಬಗೆಯ ಕಿವಿಗೆ ಹಾಕುವ ಹನಿಗಳು, ಕಣ್ಣಿಗೆ ಹಾಕುವ ಹನಿಗಳು, ಕೆಮ್ಮಿನ ಔಷಧಗಳು, ಹೇರ್ ಕಂಡೀಶನರ್ ಗಳು, ಶಾಂಪೂಗಳು ಎಲ್ಲವಕ್ಕೂ ಗ್ಲಿಸರೀನೇ ಮೂಲದ್ರವ್ಯ. ಇದರಿಂದಲೇ ಬಣ್ಣ ಬಣ್ಣದ ಇಂಕು, ಕಾರುಗಳ ಪೇಂಟ್ ಮೇಲೆ ಹಚ್ಚುವ ಪಾಲಿಶ್ ಗಳು, ಕಾರಿನ ಇಂಧನ ಚಳಿಯಲ್ಲೂ ಹೆಪ್ಪುಗಟ್ಟದಂತೆ ನೋಡಿಕೊಳ್ಳುವ ಆಂಟಿಫ್ರೀಝ್ ಮಿಶ್ರಣಗಳು ಎಲ್ಲವಕ್ಕೂ ಗ್ಲಿಸರೀನ್ ಬೇಕು.

ಸೂರಿನಿಂದ ಮಳೆನೀರು ಸೋರುವುದನ್ನು ತಡೆಗಟ್ಟಬಲ್ಲ ‘ವಾಟರ್ ಪ್ರೂಫಿಂಗ್’ ಅಂಟುಗಳ ತಯಾರಿಕೆಗೂ ಕಚ್ಚಾ ಟ್ಯಾಲೊ ಬಳಕೆಯಾಗುತ್ತದೆ. ಆಹಾರವಸ್ತುಗಳನ್ನು ಪ್ಯಾಕಿಂಗ್ ಮಾಡಲು ಬೇಕಾದ ವಿಶೇಷ ಬಗೆಯ ಎಣ್ಣೆಕಾಗದವೂ ಇದರಿಂದಲೇ ತಯಾರಾಗುತ್ತದೆ. ನಾನಾ ಬಗೆಯ ಆಂಟಿಬಯಾಟಿಕ್ ಔಷಧಗಳೂ ಕೂಡ.

ಇನ್ನು ಮೂಳೆ, ಗೊರಸು ಮತ್ತು ಕೊಂಬುಗಳನ್ನು ಕಾಯಿಸಿದಾಗ ಭಕ್ಷ್ಯಯೋಗ್ಯ ಟ್ಯಾಲೊ ಎಣ್ಣೆ ದೊರಕುತ್ತದೆ. ಇದು ಚ್ಯುಯಿಂಗ್ ಗಮ್, ಬೇಕರಿ ಖಾದ್ಯಗಳಲ್ಲಿ ಬಳಕೆಯಾಗುತ್ತದೆ.

ದನಗಳ ಅಂಗಾಂಶಗಳನ್ನು ಜೋಡಿಸುವ ‘ಕೊಲಾಜೆನ್’ ಎಂಬ ದ್ರವ್ಯಕ್ಕೆ ಭಾರಿ ಬೇಡಿಕೆ ಇದೆ. ಚರ್ಮವನ್ನು ಹಿಂಡಿದಾಗಲೂ ಕೊಲಾಜೆನ್ ಸಿಗುತ್ತದೆ. ಇದರ ವೈದ್ಯಕೀಯ ಉಪಯೋಗದ ಪಟ್ಟಿಯೇ ಸಾಕಷ್ಟು ದೀರ್ಘವಿದೆ. ಹಿರಿಯ ನಾಗರಿಕರಿಗೆ ಮೂತ್ರ ವಿಸರ್ಜನೆ ಅನಿಯಂತ್ರಿತವಾದಾಗ ಇದನ್ನೇ ಚುಚ್ಚುಮದ್ದಿನ ಔಷಧಿಯಾಗಿ ಕೊಡುತ್ತಾರೆ. ಗಾಯಗಳಿಗೆ ಸುತ್ತಲೆಂದು ನಂಜುನಿರೋಧಕ ಬ್ಯಾಂಡೇಜ್ ಗಳ ತಯಾರಿಕೆಗೆ ಇದೇ ಬೇಕು. ಗಾಯ ಒಣಗಿದ ನಂತರ ಆಳವಾದ ಗೀರು ಬಿದ್ದಿದ್ದರೆ, ಸುರೂಪ ಚಿಕಿತ್ಸಕರು ಅದನ್ನು ಮರೆಮಾಚಲೆಂದು ಕೊಲಾಜೆನ್ ತುಂಬುತ್ತಾರೆ. ಕಣ್ಣಿನ ಪೊರೆ ನಿವಾರಣೆಗೆ ಪಾಪೆ ಕವಚವಾಗಿ ಕೂಡ ಇದು ನೆರವಿಗೆ ಬರುತ್ತದೆ. ಇನ್ನು ಖಾದ್ಯ ಉದ್ಯಮದಲ್ಲಂತೂ ಇದೇ ಕೊಲಾಜೆನ್ ನ ಪಾತ್ರವನ್ನು ಹೇಳುವುದೇ ಬೇಡ. ಜಿಲೆಟಿನ್ ಪುಡಿ ಇದರಿಂದಲೇ ತಯಾರಾಗುತ್ತದೆ. ಜೆಲ್ಲಿ, ಜಾಮ್ ಗಳಿಗೆ ಇದಿಲ್ಲದಿದ್ದರೆ ಆಗುವುದಿಲ್ಲ. ಬಹಳಷ್ಟು ಸೌಂದರ್ಯ ವರ್ಧಕ ದ್ರವ್ಯಗಳಲ್ಲಿ ಕೊಲಾಜೆನ್ ಕ್ರೀಮ್ ಇದ್ದೇ ಇರುತ್ತದೆ. ಜತೆಗೆ ತರಾವರಿ ಮುಲಾಮು, ನೋವು ನಿವಾರಕ ಎಣ್ಣೆಗೆಲ್ಲ ಇದೇ ಬೇಕು. ಫೋಟೋಗ್ರಫಿ, ಸಿನಿಮಾ ಫಿಲ್ಮ್ ತಯಾರಿಕೆಗೂ ಇದು ಕಚ್ಚಾವಸ್ತುವಾಗಿ ಬಳಕೆಯಾಗುತ್ತದೆ. ಸಿನಿಮಾ ನಟ ನಟಿಯರ ಮುಖದಲ್ಲಿ ಸುಕ್ಕುಗಳು ಕಾಣಿಸದಂತೆ ಬಳಸುವ ವೃದ್ಧಾಪ್ಯನಿರೋಧಕ ಕ್ರೀಮ್ ಕೂಡ ಇದರಿಂದಲೇ ತಯಾರಾಗುತ್ತವೆ.

ಮಲಿನ ಗಾಳಿಯನ್ನು ಸೋಸಲು ಇಂದು ಬಳಕೆಯಾಗುತ್ತಿರುವ ವಿಧವಿಧದ ಫಿಲ್ಟರ್ ಗಳನ್ನು ದನಗಳ ಕೂದಲಿನಿಂದ ತಯಾರಿಸಲಾಗುತ್ತದೆ. ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಔದ್ಯಮಿಕ ಅಧಿಪತಿಗಳು ಬಳಸುವ ಅತಿ ದುಬಾರಿ ಸೋಫಾ ಮತ್ತು ಕಾರಿನ ಕುಶನ್ ಗಳಿಗೆ ವಿಶೇಷವಾಗಿ ಸಂಸ್ಕರಿಸಿದ ದನದ ಚರ್ಮವೇ ಬಳಕೆಯಾಗುತ್ತದೆ....

ಸಾಕು, ಸಾಕು ಈ ಗೋಪುರಾಣ! ದನಗಳು ತಾವಾಗಿ ಸಾವಪ್ಪಿದ ನಂತರವೂ ಅವುಗಳ ದೇಹದಿಂದ ಇವೆಲ್ಲ ಉಪಯುಕ್ತ ವಸ್ತುಗಳನ್ನು ಪಡೆಯಲು ಸಾಧ್ಯವಿದೆ, ಏನಂತೀರಿ?
ಅಲ್ಲೊಂದು ಇಲ್ಲೊಂದು ದನ ಸತ್ತರೆ ಈ ಯಾವ ಉತ್ಪಾದನೆಗೂ ಅವಕಾಶವಿಲ್ಲ. ಹಿಂದೆ ಹೇಳಿದಂತೆ, ಇವನ್ನೆಲ್ಲ ಕಸಾಯಿಖಾನೆಗಳಲ್ಲಿ ಸಂಸ್ಕರಣೆ ಮಾಡಿದರಷ್ಟೇ ಉದ್ಯಮಗಳಿಗೆ ಬೇಕಾದ ಪ್ರಮಾಣದಲ್ಲಿ ಇವು ಲಭ್ಯವಾಗುತ್ತವೆ. ಗೋಹತ್ಯೆ ನಿಷೇಧಿಸಿದರೆ ಮನುಷ್ಯರ ಕಾಯಿಲೆಗಳ ಚಿಕಿತ್ಸೆಗೆ ಬೇಕಾದ ಔಷಧಗಳನ್ನೆಲ್ಲ ವಿದೇಶಗಳಿಂದಲೇ ತರಿಸಬೇಕಾಗುತ್ತದೆ. ವೆಚ್ಚ ಅತಿಯಾಗುತ್ತದೆ. ಅಷ್ಟೇ ಅಲ್ಲ, ದನಗಳ ಕಾಯಿಲೆಗಳಿಗೂ ಔಷಧ ವೆಚ್ಚ ಹೆಚ್ಚುತ್ತದೆ!


ಹಾಗಿದ್ದರೆ, ಪಶುಸಂಗೋಪನೆ ಈಗಿನ ಸ್ಥಿತಿಯಲ್ಲೇ ಮುಂದುವರಿಯಬೇಕೆನ್ನುತ್ತೀರಾ? ಸಭ್ಯ ಪ್ರಾಣಿ ಗೋವಿನ ಬಗ್ಗೆ ದಯೆ, ಪ್ರೀತಿಯನ್ನೆಲ್ಲ ಕಳೆದುಕೊಂಡ ನಾವು ಮನುಷ್ಯತ್ವವನ್ನೇ ಕಳೆದುಕೊಂಡಂತೆ ಅಲ್ಲವೆ?
ಅದು ಹಾಗಲ್ಲ. ಗೋವುಗಳ ಸ್ಥಿತಿ ಈಗಿಗಿಂತ ಉತ್ತಮವಾಗಬೇಕೆಂದು ನಾವು ವಾದಿಸುತ್ತೇವೆ. ವ್ಯವಸ್ಥಿತ, ವೈಜ್ಞಾನಿಕ ಪಶುಸಂಗೋಪನೆ ಮತ್ತು ಸಂಸ್ಕರಣೆ ನಡೆಯಬೇಕು. ಗೋ – ಕುಲವನ್ನು ಕೇಂದ್ರವಾಗಿಟ್ಟುಕೊಂಡು ಇಡೀ ಜೀವಜಾಲ ಮತ್ತೆ ಸಮತೋಲ ಸ್ಥಿತಿಗೆ ಬರಬೇಕು. ನಮ್ಮದು ಸಮೃದ್ಧ, ಸುಸಂಸ್ಕೃತ ದೇಶ ಎಂಬುದು ಬಿಂಬಿತವಾಗಬೇಕು. ಹಾಗಾಗಬೇಕಾದರೆ ಗೋಹತ್ಯೆ ನಿಷೇಧವೆಂಬ ಬುಡುಬುಡಿಕೆ ಬಾರಿಸುವ ಬದಲು ಈ ಮುಂದೆ ಹೇಳಿದ ಕ್ರಮಗಳನ್ನು ಕೈಗೊಂಡು ನಮ್ಮ ಮಾನವೀಯ ಕಳಕಳಿಯನ್ನು ಮೆರೆಯಬೇಕು.

· ಗೋವುಗಳಿಗೆ ಸಾಕಷ್ಟು ಸಾವಯವ ಆಹಾರ, ಶುದ್ಧ ಮೇವು, ಶುದ್ಧ ನೀರು ಸಿಗುವಂತಾಗಬೇಕು. ಈಗಂತೂ ಕೆಮಿಕಲ್ ಮೇವು ತಿಂದು, ನೈಟ್ರೇಟ್ ಲವಣಗಳಿರುವ ಬೋರ್ ವೆಲ್ ನೀರು ಕುಡಿದು ಇಡೀ ಹೈನು ಉದ್ಯಮ ಕಾಯಿಲೆಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದೆ. ಅದನ್ನು ತಪ್ಪಿಸಬೇಕೆಂದರೆ ಸಾಧ್ಯವಿದ್ದಷ್ಟೂ ಗೋಮಾಳಗಳ ಸಂವರ್ಧನೆ ಆಗಬೇಕು. ಗುಡ್ಡಬೆಟ್ಟಗಳಲ್ಲಿ ಲಂಟಾನಾ, ಪಾರ್ಥೇನಿಯಂ, ಯುಪಟೋರಿಯಂ ಬದಲಿಗೆ ನಮ್ಮ ನಾಡಿಗೆ ಸಹಜವೆನಿಸಿದ ಹುಲ್ಲುಮೇವು ಬೆಳೆಯುವಂತಾಗಬೇಕು. ಕೃಷಿಭೂಮಿಯಿಂದ ಸಿಗುವ ಬೇಹುಲ್ಲಿನ ವಿಷ ರಸಗಳ ಪತ್ತೆಗೆ ಸರಳ ಸಾಧನಗಳು ಹೈನುಗಾರರಿಗೆ ಲಭಿಸಬೇಕು. ಹಾಲಿನಲ್ಲಿರುವ ಕೆಮಿಕಲ್ ವಸ್ತುಗಳ ಪತ್ತೆಗೆ ಉಪಕರಣಗಳು ಸಿಗಬೇಕು (ನಮ್ಮ ಈಗಿನ ಮೇವಿನಲ್ಲಿ ಎಂಡೊಸಲ್ಫಾನ್ ವಿಷದ ಪ್ರಮಾಣ ತೀರ ಜಾಸ್ತಿ ಇರುವುದರಿಂದ, ವಿದೇಶಗಳಿಗೆ ಹೈನು ಉತ್ಪನ್ನಗಳನ್ನು ರಫ್ತು ಮಾಡುವ ‘ಡೈನಮಿಕ್ಸ್’ನಂಥ ಕಂಪನಿಗಳು ಕರ್ನಾಟಕದ ಹಾಲನ್ನು ಖರೀದಿಸುತ್ತಿಲ್ಲ. ನಮ್ಮ ಕಾಮಧೇನುವಿನ ವಿಷವನ್ನು ನಾವೇ ಸೇವನೆ ಮಾಡಬೇಕಾಗಿದೆ). ಈ ಕ್ರಮಗಳನ್ನು ಕೈಗೊಂಡರೆ ನಮ್ಮ ಗುಡ್ಡಬೆಟ್ಟ ಕೆರೆಕಟ್ಟೆಗಳ ಜೀವಸಮೃದ್ಧಿಯೂ ಹೆಚ್ಚುತ್ತದೆ. ಪರಿಸರವೂ ಶುದ್ಧವಾಗುತ್ತದೆ. ಇಂಥ ಪರಿಶುದ್ಧ ಸ್ಥಿತಿಯಲ್ಲಿ ಸಿದ್ಧವಾಗುವ ಸಾವಯವ ಹೈನು ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಇರುವುದರಿಂದ ಗ್ರಾಮೀಣ ಜನರ ಆರ್ಥಿಕ ಬಲದ್ದೂ ಸಂವರ್ಧನೆಯಾಗುತ್ತದೆ.

· ಪಶುಸಂಗೋಪನೆಯಲ್ಲಿ ಅಸಮತೋಲ ನಿವಾರಣೆಯಾಗಬೇಕು. ಅಂದರೆ, ಹೋರಿ, ಎತ್ತು, ಎಮ್ಮೆ, ಕೋಣಗಳನ್ನೂ ಬೆಳೆಸಬೇಕು. ಅವನ್ನು ಪುಷ್ಟಿಗೊಳಿಸಲು ಬೇಕಾದ ಅಗಸೆ, ಹಾಲಿವಾಣ, ಸುಬಾಬುಲ್, ವೆಲ್ವೆಟ್ ಅವರೆ, ಕಾಡು ಅಲಸಂದೆ ಮುಂತಾದವುಗಳಿಗೆ ವಿಶೇಷ ಆದ್ಯತೆ ನೀಡಿ ಹೊಲದ ಬದುಗಳಲ್ಲಿ, ಬರಡುಭೂಮಿಯಲ್ಲಿ ಬೆಳೆಸಿದರೆ, ಅವೇ ಹಣದ ಬೆಳೆಯಾಗುತ್ತವೆ. ಅಷ್ಟೇ ಅಲ್ಲ, ಅಂತರ್ಜಲವನ್ನು ಹೆಚ್ಚಿಸುತ್ತವೆ. ಮಣ್ಣಿನ ಸವಕಳಿ ತಡೆಗಟ್ಟುತ್ತವೆ. ಕೆರೆಗಳಲ್ಲಿ ಹೂಳು ಶೇಖರವಾಗದಂತೆ ತಡೆಯುತ್ತವೆ. ಕೆರೆಕೊಳ್ಳ ಮತ್ತು ಸುತ್ತಲಿನ ಇಡೀ ಪರಿಸರ ಸಮೃದ್ಧ ಜೀವವೈವಿಧ್ಯದ ನೆಲೆದಾಣವಾಗುತ್ತದೆ. ಸಾಕುಪ್ರಾಣಿಗಳ ಬದುಕಿನ ಗುಣಮಟ್ಟವನ್ನು ಹೆಚ್ಚಿಸುವತ್ತ ಗಮನವಿರಬೇಕೇ ವಿನಾ ಕೃಶವಾಗಿದ್ದರೂ ಸರಿ ‘ಸಹಜ ಸಾವೇ ಬರಲಿ’ ಎಂದು ವಾದಿಸುವುದು ಸರಿಯಲ್ಲ. ಸಹಜ ಪರಿಸರದಲ್ಲಿ ಓಡಾಡುತ್ತ, ಉತ್ತಮ ಪೋಷಕಾಂಶ ಸೇವಿಸುತ್ತ ಅವು ನೆಮ್ಮದಿಯಿಂದ ಗರಿಷ್ಠ ಬೆಳವಣಿಗೆಯ ಹಂತ ತಲುಪಲು ಅವಕಾಶ ಕೊಟ್ಟು ನಂತರ ಪ್ರೀತಿಯಿಂದಲೇ ಅವನ್ನು ಕಸಾಯಿಖಾನೆಗೆ ಕಳಿಸಿಕೊಡಲು ಸಾಧ್ಯವಿದೆ. ನಿಸರ್ಗದಲ್ಲಿ ಹುಲಿ, ಸಿಂಹ, ಮೊಸಳೆಗಳ ಬಾಯಿಗೆ ಸಿಕ್ಕು ಸಾವಪ್ಪುತ್ತವೆ ತಾನೆ? ಅದು ಪ್ರಕೃತಿ ನಿಯಮಕ್ಕೆ ಅತಿ ಹತ್ತಿರದ ಪಶುಸಂಖ್ಯಾ ನಿಯಂತ್ರಣ ಕ್ರಮವೂ ಹೌದು.

· ಸರಕಾರಿ ನೆರವು ಪಡೆಯುವ ಹೈನುಗಾರಿಕೆಯಲ್ಲಿ ಗೋಬರ್ ಅನಿಲ ಉತ್ಪಾದನೆಯನ್ನು ಕಡ್ಡಾಯಗೊಳಿಸಬೇಕು. ಈಗಿನ ವ್ಯವಸ್ಥೆಯಲ್ಲಿ ಸೆಗಣಿಯ ರಾಶಿಯಿಂದ ಹೊರ ಬೀಳುವ ಮೀಥೇನ್ ಅನಿಲ ನಿರುಪಯುಕ್ತವಾಗಿ ಹೋಗುತ್ತಿದೆ ಅಷ್ಟೆ ಅಲ್ಲ, ವಾತಾವರಣಕ್ಕೆ ಸೇರಿ ಭೂಮಿಯ ತಾಪಮಾನವನ್ನು ಹೆಚ್ಚಿಸುತ್ತಿದೆ. ಸುಧಾರಿತ ದೇಶಗಳು ನಮ್ಮ ಪಶುಸಂಪತ್ತಿನ ದುರ್ವ್ಯಯದ ಬಗ್ಗೆ ಟೀಕೆ ಮಾಡಲು ಅವಕಾಶವಿರಕೂಡದು. ಸೆಗಣಿ ಅನಿಲದ ಬಾಟಲೀಕರಣ ಸಾಧ್ಯವಾದರೆ ಅದರಿಂದ ಟ್ರ್ಯಾಕ್ಟರ್ ಟಿಲ್ಲರ್ ಓಡಿಸಬಹುದು. ನೀರೆತ್ತುವ ಪಂಪ್ ಗಳಿಗೆ ಶಕ್ತಿ ಸಿಗುತ್ತದೆ. ಆಗ ಪಶುಸಂಗೋಪನೆ ಮತ್ತೆ ಸಮತೋಲಕ್ಕೆ ಬರುತ್ತದೆ; ಮತ್ತೊಮ್ಮೆ ನಿಜವಾದ ಅರ್ಥದಲ್ಲಿ ಕೃಷಿ ಎಂಬುದು ಪಶುಕೇಂದ್ರಿತವಾಗಿ ಗ್ರಾಮವಾಸಿಗಳ ಆರ್ಥಿಕಬಲವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ.

· ಕಸಾಯಿಖಾನೆಗಳ ಆಧುನೀಕರಣವಾಗಬೇಕು. ಧಾರ್ಮಿಕ ವಿಧಿಗಳಿಗೆ ಚ್ಯುತಿ ಬಾರದ ಹಾಗೆ ಸಾಧ್ಯವಾದಷ್ಟೂ ನೋವಿಲ್ಲದ ಸ್ಟನ್ನಿಂಗ್ ವಿಧಾನದಲ್ಲೇ ಪಶುವಧೆ ನಡೆಯಬೇಕು. ನಂತರದ ಸಂಸ್ಕರಣೆಯ ಪ್ರತಿ ಹಂತದಲ್ಲೂ ಕಟ್ಟುನಿಟ್ಟಾಗಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.

· ಗಲ್ಲಿ, ಮೊಹಲ್ಲಾಗಳ ಸಂದುಗೊಂದಿಗಳಲ್ಲಿ ಪಶುವಧೆಗೆ ಅವಕಾಶ ಕೊಡಬಾರದು. ಈಗಿನ ಸ್ಥಿತಿಯಲ್ಲಿ ಅದಕ್ಕೆ ನಿರ್ಬಂಧ ಹೇರುವುದು ಕಷ್ಟಸಾಧ್ಯ; ಏಕೆಂದರೆ ಕಸಾಯಿಖಾನೆಗಳು ತೀರಾ ದೂರದಲ್ಲಿವೆ. ಅಚ್ಚುಕಟ್ಟಾದ, ಮಾಲಿನ್ಯದ ಲವಲೇಶವೂ ಇಲ್ಲದ ಚಿಕ್ಕ ಚಿಕ್ಕ ಕಸಾಯಿಖಾನೆಗಳನ್ನು ಸ್ಥಾಪಿಸಲು ಸಾಧ್ಯವಿದೆ. ಅಂಥವು ಸೂಕ್ತ ಸ್ಥಳಗಳಲ್ಲಿ ಸ್ಥಾಪಿಸಬೇಕು. ಅಲ್ಲಿಂದ ಹೊರಬರುವ ಶೇಷದ್ರವ್ಯಗಳು ಚರಂಡಿಗೆ ಸೇರದಂತೆ ಪ್ರತ್ಯೇಕ ಸಾಗಿಸಬೇಕು. ಅಲ್ಲೆಲ್ಲ ಶಿಸ್ತಿನ ಮೇಲ್ವಿಚಾರಣೆ ನಡೆಯುತ್ತಿರಬೇಕು.

· ಬೀದಿಬದಿಗಳಲ್ಲಿ, ತೆರೆದ ಅಂಗಡಿಗಳಲ್ಲಿ ಮಾಂಸದ ಪ್ರಾಣಿಗಳ ವಿವಿಧ ಅಂಗಗಳ ಪ್ರದರ್ಶನವನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಯಾವ ಸಂದರ್ಭದಲ್ಲೂ ಸೈಕಲ್ ಗಳ ಮೇಲೆ, ದ್ವಿಚಕ್ರ ವಾಹನಗಳ ಮೇಲೆ ಮೂಕಪ್ರಾಣಿ – ಪಕ್ಷಿಗಳ ಸಾಗಾಟಕ್ಕೆ ಅವಕಾಶ ಕೊಡಬಾರದು.

ಇಂಥ ವ್ಯವಸ್ಥೆಯಲ್ಲಿ ಸಾಮಾಜಿಕ ನೆಮ್ಮದಿ ನೆಲೆಸುತ್ತದೆ. ವಾಸ್ತವದ ನೆಲೆಗಟ್ಟಿನಲ್ಲೇ ಈಗಿರುವ ಲೋಪಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಗೋವುಗಳೂ ಸೇರಿದಂತೆ ಎಲ್ಲ ಜೀವಿಗಳ ಮೇಲೆ ನಮಗಿರುವ ಮಾನವೀಯ ಅನುಕಂಪ, ಅಂತಃಕರಣ ಹಾಗೂ ಸಂವೇದನಗಳಿಗೆ ಭಂಗ ಬರುವುದಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ, ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದಿದ್ದೇ ಆದರೆ ಕೆಲವು ಗಂಭೀರ ಪ್ರಶ್ನೆಗಳು ಏಳುತ್ತವೆ. ಯಾವುದೇ ಕಾನೂನು ನಮ್ಮಲ್ಲಿ ಜಾರಿಗೆ ಬಂದರೂ ಈಗಿನ ಚಟುವಟಿಕೆಗಳು ಹೆಚ್ಚೆಂದರೆ ಭೂಗತವಾಗುತ್ತವೆ, ಕಾನೂನುಬಾಹಿರ ಕೃತ್ಯದ ಸಾಮಾಜಿಕ ವೆಚ್ಚ ಹೆಚ್ಚುತ್ತದೆ. ಗೋವಧೆ ಆಗದಂತೆ ಊರೂರಲ್ಲಿ ನಿಗಾ ಇಡಬೇಕಾದವರು ಯಾರು? ಪೊಲೀಸರಿಗೆ ಈಗಾಗಲೇ ಹೊರೆಯಷ್ಟು ಕೆಲಸಗಳಿವೆ. ಕೊಲೆ, ದರೋಡೆ, ಕಳ್ಳಸಾಗಣೆಯಂಥ ಕುಕೃತ್ಯಗಳ ಮೇಲೆ ನಿಗಾ ಇಡುವ ಬದಲು ಅವರು ಅರೆಹೊಟ್ಟೆಯ ಗೋವುಗಳ ಸಂರಕ್ಷಣೆಗೆ ಹೊರಡಬೇಕೆ? ಅವರಿಂದ ಅದು ಸಾಧ್ಯವಿಲ್ಲವೆಂದು ಸಂಘ ಪರಿವಾರದ ಉತ್ಸಾಹಿಗಳಿಗೆ ಅಥವಾ ಖಾಸಗಿ ಜನರಿಗೆ ಇಂಥ ಅಧಿಕಾರವನ್ನು ಕೊಟ್ಟರೆ ಅದು ಇನ್ನಷ್ಟು ಕ್ಷೋಭೆಗೆ ಕಾರಣವಾಗಬಹುದು. ಬಿಹಾರ, ಝಾರ್ ಖಂಡ್ ಗಳಲ್ಲಿ ಸರಕಾರವೇ ಹಳ್ಳಿಯವರಿಗೆ ಬಂದೂಕು ಕೊಟ್ಟು ‘ಸಲ್ವಾ ಝುಡುಮ್’ ಹೆಸರಿನಲ್ಲಿ ಅರಕಾಜಕತೆ ಉಂಟುಮಾಡಿದಾಗಿನ ಪರಿಸ್ಥಿತಿಯೇ ಇಲ್ಲಿ ತಲೆದೋರಬಹುದು. ದ್ವೇಷ, ಸೇಡು, ಅಸೂಯೆ, ಕ್ರೌರ್ಯಗಳ ರಕ್ತಬೀಜಾಸುರ ಸಂತಾನವನ್ನೇ ನಾವು ಸೃಷ್ಟಿ ಮಾಡಿದಂತಾಗುತ್ತದೆ. ರಾಸುಗಳನ್ನು ರಸ್ತೆಯಲ್ಲಿ ಒಯ್ಯುವುದೇ ಹಿಂಸಾಕೃತ್ಯಗಳಿಗೆ, ಕೋಮುಗಲಭೆಗಳಿಗೆ ಕಾರಣವಾಗಬಹುದು.

ಇಂಥ ಸಂವಿಧಾನಬಾಹಿರ ‘ಜಂಗಲ್ ರಾಜ್’ ನಮಗೆ ಬೇಕೆ? ಅದರಿಂದಾಗಿ ತಲೆದೋರುವ ಸಾಂಕ್ರಾಮಿಕ ತ್ವೇಷಗಳು ಬೇಕೆ? ಅಥವಾ ಪ್ರೀತಿಯಿಂದ ಗೋವುಗಳನ್ನು ಸಾವಯವ ವಿಧಾನದಲ್ಲಿ ಪಾಲನೆ ಪೋಷಣೆ ಮಾಡುತ್ತಲೇ ಅದರ ಜತೆಜತೆಗೇ ನಿಸರ್ಗ ಸಂವರ್ಧನೆ, ಆರ್ಥಿಕ ಸುಧಾರಣೆ ಹಾಗೂ ಸಮುದಾಯದ ನೆಮ್ಮದಿ ಕಾಪಾಡುವ ಕ್ರಮಗಳು ಬೇಕೆ?

ಆಯ್ಕೆ ನಿಮ್ಮದು.

(ನಿರೂಪಣೆ: ನಾಗೇಶ ಹೆಗಡೆ; ಪೂರಕ ಮಾಹಿತಿ: ಡಾ. ಜಿ. ರಾಮಕೃಷ್ಣ, ಪ್ರೊ. ಅಜ್ಮಲ್ ಪಾಶಾ)

2 comments:

  1. ಮಧುಮೇಹ ರೋಗದ ಚಿಕಿತ್ಸೆಯಲ್ಲಿ ಬಳಸುವ ಇನ್ಸುಲಿನ್ ಹಾರ್ಮೋನಿನ ಬಹುಪಾಲು ಈಗ ಜೆನೆಟಿಕ್ ಇಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ಬ್ಯಾಕ್ಟ್ರೀರಿಯ ಅಥವಾ ಯೀಸ್ಟ್ ಸೂಕ್ಷ್ಮಾಣು ಜೀವಿಗಳಲ್ಲಿ ಅವುಗಳನ್ನು ಉತ್ಪಾದಿಸುವ ಮೂಲಕ ಪಡೆಯಲಾಗುತ್ತಿದೆ. ಈ ತಂತ್ರಜ್ಞಾನದಲ್ಲಿ ಮಾನವ ಇನ್ಸುಲಿನ್ ಹಾರ್ಮೋನ್ ಅನ್ನು ಉತ್ಪಾದಿಸುವ ಜೀನ್ ಅನ್ನು ಬ್ಯಾಕ್ಟೀರಿಯಾ ಅಥವಾ ಯೀಸ್ಟ್ ಕೋಶಗಳಿಗೆ ಸೇರಿಸಿ ಆ ಕೋಶಗಳು ಹಾರ್ಮೋನ್ ಉತ್ಪಾದಿಸುವಂತೆ ಮಾಡಲಾಗುತ್ತದೆ. ೧೯೮೨ರವರೆಗೆ ಹಸು ಹಾಗೂ ಹಂದಿಗಳ ಮೇದೋಜೀರಕ ಗ್ರಂಥಿಗಳಿಂದ ಇನ್ಸುಲಿನ್ ಪಡೆಯಲಾಗುತ್ತಿತ್ತು. ಹಸು ಹಾಗೂ ಹಂದಿಗಳ ಇನ್ಸುಲಿನ್ ಮಾನವ ಇನ್ಸುಲಿನ್ಗಿಂಥ ತುಸು ಭಿನ್ನ ಆದರೂ ಮಾನವ ಇನ್ಸುಲಿನ್ನಿನಂತೆಯೇ ಕೆಲಸ ಮಾಡುತ್ತದೆ. ಜೆನೆಟಿಕ್ ಇಂಜಿನಿಯರಿಂಗ್ ಬಂದ ನಂತರ ಇನ್ಸುಲಿನ್ ಹಾರ್ಮೋನ್ ಅನ್ನು ಬೇಕಾದಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯವಾಗಿದೆ.

    ಗೋವಧೆ ನಿಷೇಧ ಎಂಬುದು ಹಿಂದೂಗಳಲ್ಲಿ ಮೇಲುಕೀಳು ಎಂಬ ಜಾತಿಭೇದ ಉಳಿಸಿಕೊಂಡೇ ಒಗ್ಗಟ್ಟನ್ನು ತರಲು ಜಾಣರು ಯೋಜಿಸಿದ ಒಂದು ತಂತ್ರ. ಇದೇ ಕಾರಣಕ್ಕೆ ಗೋವಿನ ಮೈಯಲ್ಲಿ ೩೩ ಕೋಟಿ ದೇವತೆಗಳು ವಾಸ ಮಾಡುತ್ತಾರೆ ಎಂಬ ಕಥೆಯನ್ನು ಕೆಲವರು ಹೆಣೆದು ಯೋಚಿಸಲಾರದ ಜನರ ಮೇಲೆ ಹಿಡಿತ ಸಾಧಿಸಲು ಅನುಕೂಲವಾಗಿದೆ. ದೇವರ ಹೆಸರಿನಲ್ಲಿ ಜನರನ್ನು ಕೆರಳಿಸುವುದು, ಎತ್ತಿ ಕಟ್ಟುವುದು ಸುಲಭವಾದುದರಿಂದ ಇದನ್ನರಿಯದ ಮುಗ್ಧ ಜನ ಈ ಕಥೆಗಳ ಪ್ರಭಾವಕ್ಕೆ ಸುಲಭವಾಗಿ ಒಳಗಾಗುತ್ತಾರೆ ಹಾಗೂ ತನ್ಮೂಲಕ ವೋಟ್ ಬ್ಯಾಂಕ್ ರೂಪಿಸುವುದು ಅತ್ಯಂತ ಸುಲಭವಾಗುತ್ತದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಭುದ್ಧವಾಗಿ ಬೆಳೆಯದೆ ಇರಲು ಇಂಥ ಕಟ್ಟುಕತೆಗಳೇ ಕಾರಣ.

    ReplyDelete
    Replies
    1. ಹೌದು. ಇನ್ಸುಲಿನ್ ಈಗ ಜೆನೆಟಿಕ್ ಇಂಜಿನಿಯರಿಂಗ್ ಮೂಲಕವೇ ಹೆಚ್ಚು ಉತ್ಪಾದನೆಯಾಗುವುದು.
      ಗೋವೆಂಬುದು ಅವರಿಗೆ ರಾಜಕೀಯವಾಗಿ ಮುಖ್ಯವಷ್ಟೆ. ಸರಿ ಸ್ವಾಮಿ ವಯಸ್ಸಾದ ಗೋವುಗಳನ್ನು, ಗಂಡು ಜರ್ಸಿ ಕರುಗಳನ್ನು ಏನು ಮಾಡೋದು ಅಂದರೆ ಅವರ ಬಳಿ ಉತ್ತರವಿಲ್ಲ. ನೀವೇ ಸಾಕ್ತೀರಾ ಅಂದ್ರೆ ಅದು ನನ್ನ ಕೆಲಸವಲ್ಲ ಅಂದುಬಿಡ್ತಾರೆ!

      Delete