Sep 8, 2016

ದಲಿತ ಮತ್ತು ಮಹಿಳೆಯನ್ನು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ನೋಡಲು ಇಚ್ಚಿಸದ ನಮ್ಮ ರಾಜಕೀಯ ವ್ಯವಸ್ಥೆ: ಮಾಯಾವತಿಯವರ ವಿರುದ್ದ ಮೂರೂ ಪಕ್ಷಗಳ ಕೆಂಗಣ್ಣು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
08/09/2016
ಇಂಡಿಯಾದ ರಾಜಕಾರಣ ಕಳೆದ ಏಳು ದಶಕಗಳಲ್ಲಿ ಸಾಕಷ್ಟು ಪ್ರಬುದ್ದತೆಯನ್ನು ಪಡೆದಿದೆಯೆಂಬ ಮಾತು ಕೆಲ ಮಟ್ಟಿಗೆ ನಿಜವಾದರು, ಅದರ ಸಮಯಸಾಧಕತನದ ಕನಿಷ್ಠಬುದ್ದಿಯೇನೂ ಕಡಿಮೆಯಾಗಿಲ್ಲವೆಂಬ ಮಾತು ಸಹ ನಿಜ. ಇದರ ಜೊತೆಗೆ ಜಾತಿ ತಾರತಮ್ಯದ ರಾಜಕಾರಣ ಹಿಂದೆಂದಿಗಿಂತಲೂ ಹೆಚ್ಚಾಗಿ ತನ್ನ ಇರುವಿಕೆಯನ್ನು ತೋರಿಸುತ್ತಿರುವುದು ಕೂಡ ಅಷ್ಟೇ ಸತ್ಯ. ಕಾಲದಿಂದ ಕಾಲಕ್ಕೆ ಚುನಾವಣೆಯಿಂದ ಚುನಾವಣೆಗೆ ಇದು ಮತ್ತೆ ಮತ್ತೆ ಸಾಬೀತಾಗುತ್ತ ಬರುತ್ತಿದೆ. ಜಾತಿ ರಾಜಕಾರಣದ ಜೊತೆಜೊತೆಗೆ ಲಿಂಗ ತಾರತಮ್ಯದ ರಾಜಕಾರಣವೂ ಸಹ ನಮ್ಮ ದೇಶದ ರಾಜಕಾರಣಕ್ಕೆ ಅಂಟಿರುವ ಒಂದು ಕಳಂಕವೆನ್ನಬಹುದಾಗಿದೆ. ಏಳು ದಶಕಗಳ ನಂತರವೂ ನಾವು ಮಹಿಳೆಯರಿಗೆ ಶೇಕಡಾವಾರು ಮೀಸಲಾತಿಯನ್ನು ನೀಡುವ ಮಾತಾಡುತ್ತಿದ್ದೇವೆಯೇ ಹೊರತು ಸಮಾನತೆಯನ್ನಲ್ಲ. ಜೊತೆಗೆ ಯಾವುದೆ ಪ್ರತಿಷ್ಠಿತ ಕುಟುಂಬದ ಹಿನ್ನೆಲೆಯಿಲ್ಲದ ಹೆಣ್ಣುಮಗಳೊಬ್ಬಳು ಈ ನೆಲದಲ್ಲಿ ಸ್ವತಂತ್ರವಾಗಿ ತನ್ನದೇ ಸಿದ್ದಾಂತಗಳಿಗನುಗುಣವಾಗಿ ರಾಜಕೀಯ ಮಾಡುವ ವಾತಾವರಣ ನಮ್ಮಲ್ಲಿನ್ನೂ ಸೃಷ್ಠಿಯಾಗಿಲ್ಲ. ಈ ಮಾತುಗಳನ್ನು ನಾನು ಹೇಳುವುದಕ್ಕೆ ಮುಖ್ಯ ಕಾರಣ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿಯಾದ, ಬಹುಜನ ಪಕ್ಷದ ನಾಯಕಿ ಕುಮಾರಿ ಮಾಯಾವತಿಯವರಿಗೆ ಇಂದು ಎದುರಾಗುತ್ತಿರುವ ಅಡೆತಡೆಗಳು. ಯಾಕೆಂದರೆ ಮೇಲೆ ನಾನು ಹೇಳಿದ ಜಾತಿ ಮತ್ತು ಲಿಂಗ ತಾರತಮ್ಯದ ಎರಡೂ ಕೆಡುಕುಗಳು ಇವತ್ತು ಮಾಯಾವತಿಯವರ ರಾಜಕೀಯ ಜೀವನವನ್ನು ಮುಗಿಸಲು ಬಳಕೆಯಾಗುತ್ತಿವೆ. ಮೊದಲಿಗೆ ಆಕೆ ಒಬ್ಬ ದಲಿತ ಮಹಿಳೆಯೆನ್ನುವ ಕಾರಣವಾದರೆ, ಎರಡನೆಯದು ಆಕೆ ಒಬ್ಬ ಮಹಿಳೆ ಎನ್ನುವುದಾಗಿದೆ. ಇವತ್ತೇನು ಉತ್ತರ ಪ್ರದೇಶದ ಮಟ್ಟಿಗೆ ಸಮಾಜವಾದಿ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಶ್ರೀ ಮುಲಾಯಂ ಸಿಂಗ್ ಯಾದವರ ವರ್ಚಸ್ಸಿಗೆ ಸರಿಸಮಾನವಾಗಿರುವವರು ಯಾರಾದರು ಇದ್ದರೆ ಅದು ಮಾಯಾವತಿಯವರು ಮಾತ್ರ. ಜನಪ್ರಿಯತೆಯಲ್ಲಿ ಹಾಗು ಸಮುದಾಯಗಳ ನಾಯಕರಾಗಿ ಮತ ಸೆಳೆಯುವ ತಾಕತ್ತಿನಲ್ಲಿ, ಹಾಗು ಹಿಡಿದ ಹಟ ಸಾಧನೆಯಲ್ಲಿ ಮುಲಾಯಮರಿಗೆ ಜಿದ್ದಾಜಿದ್ದಿಯಾಗಿ ನಿಲ್ಲಬಲ್ಲವರೆಂದರೆ ಅದು ಮಾಯಾವತಿಯವರು ಮಾತ್ರ. ಅಷ್ಟಲ್ಲದೆ ಚುನಾವಣಾ ತಂತ್ರಗಾರಿಕೆಯಲ್ಲಿ ಕೂಡ ಅವರು ಅಸಾಮಾನ್ಯರಾಗಿದ್ದಾರೆ.

ಕಳೆದ ವಿದಾನಸಭಾ ಚುನಾವಣೆಯಲ್ಲಿ ಮಾಯಾವತಿಯವರ ಬಹುಜನಪಕ್ಷ ಮುಲಾಯಮರ ಸಮಾಜವಾದಿ ಪಕ್ಷದ ಎದುರು ಸೋತು ವಿರೋಧಪಕ್ಷದ ಸ್ಥಾನದಲ್ಲಿ ಕೂರಬೇಕಾಯಿತು. ಆಡಳಿತವಿರೋಧಿ ಅಲೆಯ ಸಬೂಬು ನೀಡಿದ ಮಾಯಾವತಿಯವರು ಮತ್ತೆ ತಮ್ಮ ಪಕ್ಷವನ್ನು ಬಲಿಷ್ಠಗೊಳಿಸಲು ಪ್ರಯತ್ನಿಸುತ್ತಿರುವಾಗಲೇ 2014 ರಲ್ಲಿ ಲೋಕಸಭಾ ಚುನಾವಣೆ ಎದುರಾಯಿತು. ಈ ಚುನಾವಣೆ ಮಾತ್ರ ಮಾಯಾವತಿಯವರ ಆತ್ಮವಿಶ್ವಾಸವನ್ನೇ ಅಲ್ಲಾಡಿಸುವಷ್ಟರ ಮಟ್ಟಿಗೆ ಅವರಿಗೆ ಸೋಲನ್ನು ಕರುಣಿಸಿತ್ತು. ಯಾಕೆಂದರೆ ಆ ಚುನಾವಣಾ ಪ್ರಚಾರದಲ್ಲಿ ಬಾಜಪದ ಅದ್ಯಕ್ಷರಾದ ಶ್ರೀ ಅಮಿತ್ ಷಾರವರೆ ಬಹುಜನಪಕ್ಷ ಕನಿಷ್ಠ ಐದು ಸ್ಥಾನಗಳನ್ನು ಗೆಲ್ಲುತ್ತದೆಯೆಂದು ನುಡಿದಿದ್ದ ಮಾತು ಸುಳ್ಳಾಗುವಂತೆ ಮಾಯಾವತಿಯವರ ಪಕ್ಷ ಒಂದೇ ಒಂದು ಸ್ಥಾನವನ್ನೂ ಗೆಲ್ಲದೆ ಹತಾಶ ಸ್ಥಿತಿಯನ್ನು ತಲುಪಿತ್ತು. ಆ ಚುನಾವಣೆಯಲ್ಲಿ ಮಾಯಾವತಿಯವರ ಪಕ್ಷದ ಸೋಲು ಎಷ್ಟರಮಟ್ಟಿಗೆ ಅನಿರೀಕ್ಷಿತವಾಗಿತ್ತೆಂದರೆ ಆ ಸೋಲಿನಿಂದ ಅವರು ಚೇತರಿಸಿಕೊಂಡು ರಾಜಕೀಯ ಮಾಡಲಾರರೆಂದು ಜನ ಬಾವಿಸಿದ್ದರು. ಆದರೆ ಮಾಯಾವತಿಯವರು ಆ ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೆ ಪಕ್ಷವನ್ನು ಬಲಿಷ್ಠಗೊಳಿಸುವ ಪ್ರಯತ್ನ ಮಾಡುತ್ತ ಯಶಸ್ವಿಯೂ ಆಗುತ್ತಾ ಹೋದರು. ಅದಕ್ಕೆ ತಕ್ಕಂತೆ ಸಮಾಜವಾದಿ ಪಕ್ಷದ ವೈಫಲ್ಯಗಳು ಮತ್ತು ಮುಖ್ಯಮಂತ್ರಿಯಾದ ಅಖಿಲೇಶ್ ಯಾದವರ ಅಸಮರ್ಥ ಆಡಳಿತ ಶೈಲಿ ಮಾಯಾವತಿಯವರನ್ನು ಮತ್ತೆ ಮುಂಚೂಣಿಗೆ ತರುವಲ್ಲಿ ನೆರವಾಗತೊಡಗಿದವು. ಉತ್ತರಪ್ರದೇಶದ ಜನರು, ಅಲ್ಪಸಂಖ್ಯಾತರು ಸೇರಿದಂತೆ, ಮಾಯಾವತಿಯವರ ಆಡಳಿತವೇ ಉತ್ತಮವಾಗಿತ್ತೆಂಬ ಅಭಿಪ್ರಾಯಕ್ಕೆ ಬರತೊಡಗಿದ್ದರು. ಇದರ ಜೊತೆಗೆ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಾಜಪ ಚುನಾವಣೆ ವೇಳೆ ಸಾಮಾನ್ಯ ಜನತೆಗೆ ನೀಡಿದ ಹಲವಾರು ಆಶ್ವಾಸನೆಗಳನ್ನು ಈಡೇರಿಸಲಾಗದೆ ವಿಫಲವಾಗುತ್ತಿರುವದೂ ಜನರಿಗೆ ಅರ್ಥವಾಗತೊಡಗಿತ್ತು. ಇನ್ನು ಏನೇ ಲಾಗಾ ಹಾಕಿದರೂ ಕಾಂಗ್ರೇಸ್ ಉತ್ತರಪ್ರದೇಶದ ಮಟ್ಟಿಗೆ ಮುಗಿದು ಹೋದ ಒಂದು ಅದ್ಯಾಯವೆಂಬುದೂ ಜನರಿಗೆ ಮನವರಿಕೆಯಾಗಿತ್ತು.

ಇಂತಹ ಸಮಯದಲ್ಲಿ ದೃತಿಗೆಡದ ಮಾಯಾವತಿಯವರು ರಾಜ್ಯದಾದ್ಯಂತ ಪ್ರವಾಸ ಮಾಡುತ್ತ ಮತ್ತೊಮ್ಮೆ ಬಹುಜನ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸ ತೊಡಗಿದರು. ಕೆಲವು ತಿಂಗಳ ಹಿಂದಿನವರೆಗು ಅವರ ಈ ಪ್ರಯತ್ನಕ್ಕೆ ಯಾವ ಅಡ್ಡಿಯೂ ಇರಲಿಲ್ಲ. ಜೊತೆಗೆ ಮುಂದಿನ ವರ್ಷದ ಚುನಾವಣೆಯಲ್ಲಿ ಅವರ ಪಕ್ಷ ಬಹುಮತ ಪಡೆಯುತ್ತದೆಯೆಂದು ಹಲವಾರು ಮಾದ್ಯಮಗಳು ಸಹ ನುಡಿಯ ತೊಡಗಿದ್ದವು. ಆದರೆ ನಾನು ಮೊದಲು ಹೇಳಿದಂತೆ ಈ ದೇಶದ ರಾಜಕಾರಣ ದಲಿತರ ರಾಜಕೀಯ ಬಲವನ್ನಾಗಲಿ ಅಥವಾ ಮಹಿಳೆಯರ ರಾಜಕೀಯಬಲವನ್ನಾಗಲಿ ಸಹಿಸುವಷ್ಟು ಉದಾರವಾಗಿಲ್ಲ. ದಲಿತ ಮತ್ತು ಮಹಿಳೆ, ಎರಡೂ ಆದ ಮಾಯಾವತಿಯವರನ್ನು ರಾಜಕೀಯವಾಗಿ ಸಹಿಸಿಕೊಳ್ಳುವ ಮನಸ್ಥಿತಿಯಿರದ ಉಳಿದೆಲ್ಲ ಪಕ್ಷಗಳೂ ಅಪರೋಕ್ಷವಾಗಿ ಒಂದಾಗಿ ಮಾಯಾವತಿಯವರ ಬಹುಜನ ಪಕ್ಷವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸತೊಡಗಿದವು. ಮಾಯಾವತಿಯವರು ಜಾತಿರಾಜಕಾರಣದ ಒಳಸುಳಿಗಳನ್ನು ಅರ್ಥಮಾಡಿಕೊಂಡೇ ದಲಿತ ಮತ್ತು ಬ್ರಾಹ್ಮಣ ಸಮುದಾಯಗಳು ಜೊತೆಜೊತೆಗೆ ಹೋದರೆ ಬಹುಜನ ಪಕ್ಷಕ್ಕೆ ಅನುಕೂಲವಾಗುತ್ತದೆಯೆಂಬುದನ್ನು ಅರ್ಥ ಮಾಡಿಕೊಂಡು ಹಿಂದೆ ನಡೆದ ಚುನಾವಣೆಗಳಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡಿದ್ದರು. ಅದೇ ತಂತ್ರಗಾರಿಕೆಯ ಮೇರೆಗೆ ಈ ಬಾರಿಯೂ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಸ್ಪರ್ದಿಸಲು ಬ್ರಾಹ್ಮಣ ಸಮುದಾಯಕ್ಕೆ ಸರಿ ಸುಮಾರು 100 ಸ್ಥಾನಗಳನ್ನು ಮೀಸಲಾಗಿಟ್ಟಿದ್ದರು. ಮಾಯಾವತಿಯವರು ಸಕ್ರಿಯ ರಾಜಕೀಯಕ್ಕೆ ಬರುವವರೆಗು ಕಾಂಗ್ರೇಸ್ ಪಕ್ಷದ ಬೆಂಬಲಿಗರಾಗಿದ್ದ ಬ್ರಾಹ್ಮಣ ಸಮುದಾಯ ನಂತರ ಬಹುಜನ ಪಕ್ಷದತ್ತ ವಾಲಿತ್ತು. ಇದರಿಂದಾಗಿಯೇ ಈ ಹಿಂದೆ ಮಾಯಾವತಿಯವರು ಸತತವಾಗಿ ಎರಡು ಬಾರಿ ಮುಖ್ಯಮಂತ್ರಿಯ ಗಾದಿ ಅಲಂಕರಿಸಿದ್ದರು. 

ಇದನ್ನು ಅರ್ಥ ಮಾಡಿಕೊಂಡ ಕಾಂಗ್ರೆಸ್ ಮಾಯಾವತಿಯವರನ್ನು ಹಣಿಯಲು ವಿಶೇಷ ಕಾರ್ಯತಂತ್ರವೊಂದನ್ನು ರೂಪಿಸಿತು. ಉತ್ತರ ಪ್ರದೇಶದ ಮಟ್ಟಿಗೆ ನಾಯಕನೊಬ್ಬನನ್ನು ರೂಪಿಸಲು ಸಾದ್ಯವಿಲ್ಲದಂತಹ ದಿವಾಳಿ ಸ್ಥಿತಿಗೆ ತಲುಪಿದ್ದ ಕಾಂಗ್ರೆಸ್ ದೆಹಲಿಯ ಮಾಜಿ ಮುಖ್ಯಮಂತ್ರಿ ಶ್ರೀಮತಿ ಶೀಲಾ ದೀಕ್ಷಿತರನ್ನು ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿಯೆಂದು ಘೋಷಿಸಿ ಬ್ರಾಹ್ಮಣ ಸಮುದಾಯದ ಮತಗಳನ್ನು ಒಡೆಯುವ ಕಾರ್ಯಕ್ಕೆ ಮುನ್ನುಡಿ ಬರೆಯಿತು. ಆದರದು ಇದಕ್ಕೆ ನೀಡಿದ ಕಾರಣ ಮಾತ್ರ ಹಾಸ್ಯಾಸ್ಪದವಾಗಿತ್ತು. ಪ್ರಶಾಂತ್ ಕಿಶೋರ್ ಎಂಬ ಚುನಾವಣಾ ತಂತ್ರಜ್ಞನ ಸಲಹೆಯ ಮೇಲೆ ಇದನ್ನು ಮಾಡಲಾಗಿದೆಯೆಂದು ಕಾಂಗ್ರೆಸ್ ಸಾರುತ್ತಾ ಬಂದರೂ ಜನ ಇದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗೆ ಕಾಂಗ್ರೇಸ್ ಆಡಳಿತಾರೂಢ ಸಮಾಜವಾದಿಪಕ್ಷವನ್ನು ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳದೆ ಬಹುಜನ ಪಕ್ಷವನ್ನು ಹಣಿಯುವ ಕೆಲಸಕ್ಕೆ ಮುಂದಾಗಿದ್ದು ಮಾಯಾವತಿಯವರಂತಹ ದಲಿತ ಮಹಿಳೆಯ ಬಗ್ಗೆ ಅದಕ್ಕಿರಬಹುದಾದ ಅಸಹನೆಯನ್ನು ತೋರಿಸುತ್ತಿದೆಯೆಂದರೆ ತಪ್ಪಾಗಲಾರದು.

ಇನ್ನು ಈ ವಿಷಯದಲ್ಲಿ ಬಾಜಪವೇನೂ ಹಿಂದೆ ಬಿದ್ದಿಲ್ಲ.ಅದು ಕೂಡಾ ಸಮಾಜವಾದಿ ಪಕ್ಷವನ್ನು ಬದಿಗಿರಿಸಿ ಮಾಯಾವತಿಯವರ ಮೇಲೆ ಸತತ ದಾಳಿ ನಡೆಸುತ್ತಿದೆ. ಆಕೆಯನ್ನು ಬೆಂಬಲಿಸುವ ಬ್ರಾಹ್ಮಣ ಸಮುದಾಯವನ್ನು ತನ್ನತ್ತ ಸೆಳೆದುಕೊಳ್ಳಲು ಅದು ಕೂಡ ಹಲವಾರು ತಂತ್ರಗಳನ್ನು ಮಾಡುತ್ತಿದೆ. ಈ ಹಿಂದೆ ಕಲ್ಯಾಣ್‍ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ಹಿರಿಯ ಬ್ರಾಹ್ಮಣ ನಾಯಕರಾದ ಶ್ರೀ ಶಿವಪ್ರಕಾಶ್ ಶುಕ್ಲಾರವರನ್ನು ಹತ್ತು ವರ್ಷಗಳ ಅಜ್ಞಾತವಾಸದಿಂದ ಹೊರತಂದು ರಾಜ್ಯಸಭೆಗೆ ಆರಿಸಿಕಳಿಸುವುದರ ಮೂಲಕ ತಾನು ಬ್ರಾಹ್ಮಣ ಸಮುದಾಯವನ್ನು ಬೆಂಬಲಿಸುವುದಾಗಿ ತೋರಿಕೆಯ ರಾಜಕಾರಣ ಮಾಡಿ ಬಹುಜನ ಪಕ್ಷದ ಮತಬ್ಯಾಂಕನ್ನು ಒಡೆಯುವ ಯತ್ನ ಮಾಡುತ್ತಿದೆ. ಇದಾದ ನಂತರ ಉತ್ತರಪ್ರದೇಶದ ಬಾಜಪದ ಉಪಾದ್ಯಕ್ಷರಾದ ಶ್ರೀ ದಯಾಶಂಕರ್ ನೀಡಿದ ಒಂದು ಹೇಳಿಕೆಯ ವಿರುದ್ದ ಸಿಡಿದೆದ್ದ ಬಹುಜನ ಪಕ್ಷವನ್ನು ಮಟ್ಟ ಹಾಕಲು ಬಾಜಪ ಮೇಲ್ಜಾತಿಯವರನ್ನು ಎತ್ತಿಕಟ್ಟಿ ಮಾಯಾವತಿಯವರ ಪಕ್ಷ ಮೇಲ್ಜಾತಿಗಳ ವಿರುದ್ದವೇ ರಾಜಕೀಯ ಮಾಡುವ ಪಕ್ಷವೆಂದು ಬಿಂಬಿಸುವ ಪ್ರಯತ್ನದಲ್ಲಿದೆ.

ಇಷ್ಟಲ್ಲದೆ ಪಕ್ಷಾಂತರಗಳನ್ನು ಉತ್ತೇಜಿಸುವ ಮೂಲಕವೂ ಬಹುಜನ ಪಕ್ಷವನ್ನು ದುರ್ಬಲಗೊಳಿಸಲು ಎಲ್ಲ ರಾಜಕೀಯ ಪಕ್ಷಗಳೂ ನಿರಂತರವಾಗಿ ಶ್ರಮಿಸುತ್ತಿರುವುದು ಸಹ ಮಾಯಾವತಿಯವರ ರಾಜಕೀಯ ಬದುಕನ್ನು ಮುಗಿಸುವ ಒಂದು ಭಾಗವಾಗಿದ್ದು, ಬಹುಜನ ಪಕ್ಷದ ಹಿರಿಯ ನಾಯಕರಾದ ಶ್ರೀ ಸ್ವಾಮಿ ಪ್ರಸಾದ್ ಮೌರ್ಯ ಅವರು ಮಾಯಾವತಿಯವರು ಟಿಕೇಟುಗಳನ್ನು ಮಾರಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಪಕ್ಷವನ್ನು ತೊರೆದದ್ದು ಸಹ ಸಮಾಜವಾದಿ ಪಕ್ಷದ ಚಿತಾವಣೆಯಿಂದ. ಬಹುಜನ ಪಕ್ಷ ತೊರೆದು ಬಂದಲ್ಲಿ ಸಚಿವರನ್ನಾಗಿ ಮಾಡುವ ಭರವಸೆ ನೀಡಿದ ಸಮಾಜವಾದಿ ಪಕ್ಷ ಅವರು ಬಹುಜನ ಪಕ್ಷ ತೊರೆಯುವಂತೆ ಮಾಡಿ ಮಾಯಾ ವತಿಯವರ ವಿರುದ್ದ ಷಡ್ಯಂತರದಲ್ಲಿ ತಾನು ಪಾಲುದಾರನೆಂದು ತೋರಿಸಿಕೊಟ್ಟಿತು.ಇದರ ಜೊತೆಗೆ ಕಳೆದ 35 ವರ್ಷಗಳಿಂದ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಪರಮದೇವ್ ಕೂಡ ಪಕ್ಷವನ್ನು ಬಿಟ್ಟು ಹೋಗಿದ್ದಾರೆ. ಇದೇ ರೀತಿ ಹಿರಿಯ ನಾಯಕರುಗಳಾದ ಶ್ರೀ ಆರ್.ಕೆ.ಚೌದರಿ ಮತ್ತು ರವೀಂದ್ರನಾಥ್ ತ್ರಿಪಾಠಿಯವರು ಸಹ ಬಹುಜನ ಪಕ್ಷವನ್ನು ತೊರೆದಿದ್ದು, ಹೀಗೆ ಪಕ್ಷ ಬಿಟ್ಟು ಹೋದವರೆಲ್ಲ ನೀಡುತ್ತಿರುವ ಏಕೈಕ ಕಾರಣ ಮಾಯಾವತಿಯವರು ಪಕ್ಷದ ಟಿಕೇಟುಗಳನ್ನು ಮಾರಿಕೊಳ್ಳುತ್ತಿದ್ದಾರೆಂಬುದೇ ಆಗಿದೆ. ಯಾವುದೇ ಪುರಾವೆಗಳಿರದ ಇಂತಹ ಆರೋಪಗಳನ್ನು ಮಾಡಿ ಪಕ್ಷ ತೊರೆದು ಬಂದರೆ ಮುಂದಿನ ಚುನಾವಣೆಗಳಲ್ಲಿ ಅವರುಗಳಿಗೆ ತಮ್ಮ ಪಕ್ಷಗಳಿಂದ ಸ್ಪರ್ದಿಸಲು ಟಿಕೇಟ್ ನೀಡುವುದಾಗಿ ಉಳಿದ ಮೂರೂ ಪಕ್ಷಗಳೂ ಭರವಸೆ ನೀಡಿರುವುದೇ ಈ ಪಕ್ಷಾಂತರಗಳ ಹಿಂದಿನ ನೈಜ ಉದ್ದೇಶವಾಗಿದೆ.

ಹೀಗೆ ಮುಂದಿನ ವರ್ಷದ ವಿದಾನಸಭೆ ಚುನಾವಣೆಗಳಲ್ಲಿ ಬಹುಜನ ಪಕ್ಷ ಗೆಲ್ಲುವ ಸಾದ್ಯತೆಗಳು ಗೋಚರಿಸತೊಡಗಿದೊಡನೆ ಉಳಿದೆಲ್ಲ ಪಕ್ಷಗಳು ಮಾಯಾವತಿಯವರ ಮೇಲೆ ಮುರಿದು ಕೊಂಡು ಬಿದ್ದಿವೆ. ಒಂದು ಪಕ್ಷವನ್ನು ಸೋಲಿಸಲು ಉಳಿದ ರಾಜಕೀಯ ಪಕ್ಷಗಳು ಇಂತಹ ತಂತ್ರಗಾರಿಕೆಗಳನ್ನು ಮಾಡುವುದು ಸಾಮಾನ್ಯವಾದರೂ, ಮಾಯಾವತಿಯವರ ವಿಷಯದಲ್ಲಿ ಮಾತ್ರ ಮೂರೂಪಕ್ಷಗಳೂ ಅತಿರೇಕದಿಂದ ವರ್ತಿಸುತ್ತಿವೆಯೆಂದರೆ ತಪ್ಪಾಗಲಾರದು. ಕಾರಣ, ಆಕೆ ಮೊದಲಿಗೆ ಒಬ್ಬ ದಲಿತೆಯಾಗಿರುವುದು, ಎರಡನೆಯದು ಆಕೆ ಮಹಿಳೆಯಾಗಿರುವುದು. ಬೇರೆ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರುವಂತೆ ಕಂಡುಬಂದರೂ ಮಾಯಾವತಿಯವರ ವಿಚಾರದಲ್ಲಿ ಮಾತ್ರ ಮೂರೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಂತೆ ವರ್ತಿಸುತ್ತಿದ್ದು ಉತ್ತರಪ್ರದೇಶದ ಜನತೆಯಲ್ಲಿ ಮಾತ್ರವಲ್ಲದೆ ದೇಶದ ಇತರೇ ಭಾಗದ ಜನತೆಯಲ್ಲೂ ಇಂತಹದೊಂದು ಅನುಮಾನ ಹುಟ್ಟಿದೆ.

ಹೀಗಾಗಿಯೇ ನಾನು ಲೇಖನದ ಮೊದಲಿಗೆ ಹೇಳಿದ್ದು: ಈ ನೆಲದಲ್ಲಿ ದಲಿತನಾಗಲಿ, ಮಹಿಳೆಯಾಗಲಿ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯುವುದನ್ನು ಯಾವ ರಾಜಕೀಯ ಪಕ್ಷವೂ ಒಪ್ಪುವುದಿಲ್ಲವೆಂದು.ಮಾಯಾವತಿಯವರ ವಿರುದ್ದ ಮೂರೂ ಪಕ್ಷಗಳು ತೋರಿಸುತ್ತಿರುವ ಅಸಹನೆ ಮತ್ತು ಬಹುಜನಪಕ್ಷವನ್ನು ದುರ್ಬಲಗೊಳಿಸಲು ಅವು ನಡೆಸುತ್ತಿರುವ ಷಡ್ಯಂತ್ರಗಳಿಂದ ಇದು ಸ್ಪಷ್ಟವಾಗುತ್ತಿದೆ.

No comments:

Post a Comment