Aug 2, 2016

ನೀರು ತಿರುಗಿಸುವುದು ತಪ್ಪಾಗಲಾರದು - ಒಂದು ಪ್ರತಿಕ್ರಿಯೆ

'ಕೆಸರೆರಚಾಟದ ಮಧ್ಯೆ ಕೇಳಿಕೊಳ್ಳದ ಪ್ರಶ್ನೆಗಳು' ಲೇಖನಕ್ಕೆ ಬಂದಿರುವ ಒಂದು ಪ್ರತಿಕ್ರಿಯೆ. 
ಆನಂದ ಪ್ರಸಾದ್ 
02/08/2016
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯ ಬದಲು ಅದೇ ಮೊತ್ತದ ಹಣವನ್ನು (12,000 ಕೋಟಿಗೂ ಮೇಲ್ಪಟ್ಟು) ಬಳಸಿ ಆ ಜಿಲ್ಲೆಗಳಲ್ಲಿ ಬೀಳುವ ಮಳೆಯ ನೀರನ್ನು ಹಿಡಿದಿಡುವ ಹಾಗೂ ನೀರಿಂಗಿಸುವ ಕೆರೆಗಳು, ಹೊಂಡಗಳು, ಬದುಗಳು, ತಡೆಗಟ್ಟಗಳನ್ನು ನಿರ್ಮಿಸಿ ಮಳೆಯ ನೀರು ಹರಿದು ಹೋಗದಂತೆ ಮಾಡಿದರೆ ಕುಡಿಯುವ ನೀರಿನ ಕೊರತೆ ಉಂಟಾಗಲಾರದು. ಇದರ ಜೊತೆಗೆ ಬರಡು ಭೂಮಿಯಲ್ಲಿ ಕಾಡು ಬೆಳೆಸುವ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದರೆ ಮಳೆಯ ಪ್ರಮಾಣ ಹೆಚ್ಚುವ ಸಂಭವ ಇದೆ. ಹೀಗೆ ಮಾಡಿದರೆ ದೂರದಿಂದ ನೀರು ತರುವ ಯೋಜನೆಗಳ ಅಗತ್ಯ ಬೀಳಲಾರದು. ಇಂಥ ಯೋಜನೆ ಹಾಗೂ ಚಿಂತನೆಯನ್ನು ನೀರಾವರಿ ತಜ್ಞರು, ರಾಜಕಾರಣಿಗಳು ಬೆಳೆಸದೆ ಕೋಲಾರ, ಚಿಕ್ಕಬಳ್ಳಾಪುರ ಇತ್ಯಾದಿ ಜಿಲ್ಲೆಗಳ ಜನರಲ್ಲಿ ದೂರದಿಂದ ನೀರು ತರುವುದೇ ಪರಿಹಾರ ಎಂಬ ಕಲ್ಪನೆಯನ್ನು ಹುಟ್ಟುಹಾಕಿ ಬೆಳೆಸಿದ್ದಾರೆ. ಇದರಿಂದಾಗಿ ಸ್ಥಳೀಯ ನೀರಿಂಗಿಸುವ ಯೋಜನೆಗಳು, ಪರಿಹಾರಗಳಿಗಾಗಿ ಜನರಾಗಲೀ, ಸಂಘಟನೆಗಳಾಗಲೀ ಒತ್ತಾಯಿಸುತ್ತಿಲ್ಲ. ಅವರ ಒತ್ತಾಯವೇನಿದ್ದರೂ ದೂರದಿಂದ ನೀರು ತರುವ ತೀರಾ ತ್ರಾಸದಾಯಕ ಎತ್ತಿನಹೊಳೆಯಂಥ ಯೋಜನೆಗಳ ಕಡೆಗೇ ಇದೆ.

ಎತ್ತಿನ ಹೊಳೆ ಯೋಜನೆಯನ್ನು ಜಾರಿಗೊಳಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರೋಧ ವೈಚಾರಿಕ ನೆಲೆಗಿಂತ ಹೆಚ್ಚು ಭಾವನಾತ್ಮಕವಾದದ್ದು. ದಕ್ಷಿಣ ಕನ್ನಡ ಜಿಲ್ಲೆಯು ಸಾಕಷ್ಟು ಮಳೆ ಬೀಳುವ ಪ್ರದೇಶ. ಇದು ಸಾಕಷ್ಟು ಹಸುರಿನಿಂದ ಕೂಡಿರುವ ಹಾಗೂ ಘಟ್ಟದ ಹಾಗೂ ಕರಾವಳಿಯ ನಡುವೆ ಇರುವ ಕಾರಣ ಇಲ್ಲಿ ಬರಗಾಲ (ಘಟ್ಟದ ಮೇಲಣ ಜಿಲ್ಲೆಗಳಂತೆ) ಬಂದ ಅಥವಾ ಬರುವ ಸಂಭವ ಇಲ್ಲ. ನೇತ್ರಾವತಿಯ ಅಥವಾ ಅದರ ಉಪನದಿಯಾದ ಎತ್ತಿನಹೊಳೆ ಹಳ್ಳದ ನೀರನ್ನು ಮಳೆಗಾಲದಲ್ಲಿ ಅಥವಾ ಡಿಸೆಂಬರ್ ಕೊನೆಯವರೆಗೂ ಬೇರೆ ಕಡೆ ತಿರುಗಿಸಿದರೂ ಅದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಯಾವ ತೊಂದರೆಯೂ ಆಗುವ ಸಂಭವ ಇಲ್ಲವೇ ಇಲ್ಲ. ಏಕೆಂದರೆ ಈ ಸಮಯದಲ್ಲಿ ನದಿಯಲ್ಲಿ ಸಾಕಷ್ಟು ನೀರು ಹರಿದು ಸಮುದ್ರ ಸೇರುತ್ತಿರುತ್ತದೆ. ನೇತ್ರಾವತಿಯ ನೀರು ಪುತ್ತೂರು ಹಾಗೂ ಉಪ್ಪಿನಂಗಡಿ ಪೇಟೆ ವ್ಯಾಪ್ತಿಯ ಜನತೆಗೆ ಕುಡಿಯುವ ನೀರು ಹಾಗೂ ಮಂಗಳೂರು ನಗರದ ಕುಡಿಯುವ ನೀರು ಹಾಗೂ ಮಂಗಳೂರಿನ ಕೆಲವು ಬೃಹತ್ ಕೈಗಾರಿಕೆಗಳಿಗೆ ಬೇಕಾದ ನೀರನ್ನು ಒದಗಿಸುವ ಮೂಲ. ಇದನ್ನು ಬಿಟ್ಟರೆ ನೇತ್ರಾವತಿ ನದಿಯ ನೀರು ಪುತ್ತೂರು, ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗಗಳಿಗೆ, ಬೆಳ್ತಂಗಡಿ ತಾಲೂಕಿನ ಪೇಟೆ ಅಥವಾ ಗ್ರಾಮೀಣ ಭಾಗಗಳಿಗೆ ಹಾಗೂ ಸುಳ್ಯ ತಾಲೂಕಿನ ಪೇಟೆ ಹಾಗೂ ಗ್ರಾಮೀಣ ಭಾಗಗಳಿಗೆ ಬಳಕೆ ಆಗುವುದಿಲ್ಲ. ಸುಳ್ಯ ತಾಲೂಕಿನ ಜನರಿಗಂತೂ ನೇತ್ರಾವತಿಯ ಸಂಬಂಧವೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಬೀಳುವ ಕಾರಣ ಪೇಟೆ ಹಾಗೂ ಕೈಗಾರಿಕೆಗಳಿಗೆ ಹೊರತುಪಡಿಸಿ ಗ್ರಾಮೀಣ ದಕ್ಷಿಣ ಕನ್ನಡ ಭಾಗಗಳಲ್ಲಿ ನೇತ್ರಾವತಿ ನದಿ ನೀರಿನ ಅವಶ್ಯಕತೆ ಕೂಡ ಇಲ್ಲ. ಹೀಗಾಗಿ ದಕ್ಷಿಣ ಕನ್ನಡದ ಜನ ಈ ಯೋಜನೆಯ ಬಗ್ಗೆ ವಿರೋಧ ವ್ಯಕ್ತಪಡಿಸಬೇಕಾದ ಅಗತ್ಯ ಇಲ್ಲ. ಇಲ್ಲಿ ಜನರನ್ನು ಈ ಯೋಜನೆಯ ವಿಷಯದಲ್ಲಿ ಭಾವನಾತ್ಮಕವಾಗಿ ಅಪಪ್ರಚಾರ ಮಾಡಿ ಎತ್ತಿ ಕಟ್ಟಲಾಗುತ್ತಿದೆಯೇ ಹೊರತು ಈ ವಿರೋಧಕ್ಕೆ ವೈಜ್ಞಾನಿಕ ನೆಲೆಗಟ್ಟು ಇಲ್ಲ. ಕೋಲಾರ, ಚಿಕ್ಕಬಳ್ಳಾಪುರ ಇತ್ಯಾದಿ ಬಯಲುಸೀಮೆಗೆ ಹೋಲಿಸಿದರೆ ದಕ್ಷಿಣ ಕನ್ನಡದ ಜನ ಪ್ರಾಕೃತಿಕವಾಗಿ ಪುಣ್ಯವಂತರು ಏಕೆಂದರೆ ಇಲ್ಲಿ ಎಂದೂ ಬರಗಾಲ ಎಂಬ ಪರಿಸ್ಥಿತಿ ಬರುವುದಿಲ್ಲ. ಎಲ್ಲಿ ಎಷ್ಟೇ ಕಡಿಮೆ ಎಂದರೂ 200 ಸೆ.ಮೀ.ಗಿಂಥ ಹೆಚ್ಚು ಮಳೆ ಬಂದೇ ಬರುತ್ತದೆ. ಇಷ್ಟು ಮಳೆಯನ್ನು ಪ್ರಾಕೃತಿಕವಾಗಿ ಪಡೆದೂ ಎತ್ತಿನಹೊಳೆಯ ನೀರನ್ನು ಮಳೆಗಾಲದಲ್ಲಿ ಮಳೆ ಹಾಗೂನೀರಿನ ಕೊರತೆ ಇರುವ ಬೇರೆ ಕಡೆ ಕೊಂಡೊಯ್ಯಲು ದಕ್ಷಿಣ ಕನ್ನಡದ ಜನ ವಿರೋಧಿಸುತ್ತಾರೆ ಎಂದರೆ ಅದು ಸಮಂಜಸ ಆಗಲಾರದು.

ಎತ್ತಿನ ಹೊಳೆ ಪರಿಸರದಲ್ಲಿ ನೀರನ್ನು ಶೇಖರಿಸಲು ಕಟ್ಟುವ ಸಣ್ಣ ಅಣೆಕಟ್ಟುಗಳಿಂದ ಸ್ವಲ್ಪ ಮಟ್ಟಿಗೆ ಕಾಡು ಹಾಗೂ ಪರಿಸರ ನಾಶ ಆಗಬಹುದು ಆದರೆ ದೊಡ್ಡ ಮಟ್ಟದ ನಾಶ ಸಣ್ಣ ಸಣ್ಣ ಆಣೆಕಟ್ಟು ಕಟ್ಟುವುದರಿಂದ ಆಗಲಿಕ್ಕಿಲ್ಲ. ನೀರು ಸಾಗಿಸುವ ಕೊಳವೆ ಮಾರ್ಗಕ್ಕೆ ಒಂದು ರಾಷ್ಟ್ರೀಯ ಹೆದ್ದಾರಿಗೆ ಬೇಕಾಗುವುದಕ್ಕಿಂತ ಹೆಚ್ಚು ಜಾಗ ಬೇಕಾಗಲಿಕ್ಕಿಲ್ಲ. ಹೀಗಾಗಿ ಎತ್ತಿನ ಹೊಳೆ ಯೋಜನೆ ಜಾರಿಗೊಳಿಸುವುದರಿಂದ ದೊಡ್ಡ ಮಟ್ಟದ ಪರಿಸರ ನಾಶ ಆಗುವ ಸಂಭವ ಕಾಣುವುದಿಲ್ಲ. ಎತ್ತಿನಹೊಳೆ ಯೋಜನೆ ಕುಡಿಯುವ ನೀರಿಗೆ ಮಾತ್ರ ಮತ್ತು ಎತ್ತಿನಹೊಳೆ ಪರಿಸರದ ಮಳೆಗಾಲದ ನೀರನ್ನು ಮಾತ್ರ ಕೊಂಡೊಯ್ಯುವ ಯೋಜನೆ ಆದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರೋಧ ಕೂಡ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಇಲ್ಲ ಎಂದು ಹೇಳಬೇಕಾಗಿದೆ. ಕುಡಿಯುವ ನೀರಿನ ಯೋಜನೆಗೆ ಒಂದೇ ರಾಜ್ಯದಲ್ಲಿ ಇದ್ದುಕೊಂಡು ಇನ್ನೊಂದು ಭಾಗದ ಜನರಿಗೆ ವಿರೋಧ ವ್ಯಕ್ತಪಡಿಸುವುದು ಅದೂ ತಮ್ಮ ಜಿಲ್ಲೆಗೆ ಯಾವುದೇ ಹಾನಿ ಆಗದೇ ಇರುವ ಸಂದರ್ಭದಲ್ಲಿ ಸರಿ ಎಂದು ಅನಿಸುವುದಿಲ್ಲ. 

ಇನ್ನು ಸಾಗರ ಸೇರುವ ನೀರು ವ್ಯರ್ಥ ಅಲ್ಲ ಎಂಬ ಒಂದು ವಾದ ಕೂಡ ಇದೆ. ಇದರಿಂದ ನೀರಿನ ಜೊತೆಗೆ ಪೋಷಕಾಂಶಗಳು ಸಾಗರ ಸೇರಿ ಮೀನುಗಳ ಸಂತತಿ ಬೆಳೆಯಲು ಸಹಕಾರಿ ಎಂಬುದು ವಾದ. ನೇತ್ರಾವತಿಯ ವಿಷಯದಲ್ಲಿ ಈ ವಾದ ಕೂಡ ಅಪ್ರಸುಸ್ತುತ ಏಕೆಂದರೆ ಎತ್ತಿನ ಹೊಳೆಗಿಂಥ ಕೆಳಗಿನ ಭಾಗದಲ್ಲಿ ಭಾರೀ ಮಳೆಯಾಗುತ್ತದೆ. ಹೀಗಾಗಿ ಸಾಗರ ಸೇರುವ ನೀರಿನ ಪ್ರಮಾಣದಲ್ಲಿ ಎತ್ತಿನಹೊಳೆಯಿಂದ ನೀರನ್ನು ಮಳೆಗಾಲದಲ್ಲಿ ತೆಗೆದು ಬೇರೆ ಕಡೆ ತಿರುಗಿಸಿದರೂ ದೊಡ್ಡ ಮಟ್ಟದ ಇಳಿಕೆ ಆಗುವ ಸಾಧ್ಯತೆ ಇಲ್ಲ. ಇನ್ನು ಜಲಚಕ್ರದ ಬಗ್ಗೆ ಹೇಳುವುದಾದರೆ ನದಿಯ ನೀರು ಸಮುದ್ರ ಸೇರದೆ ಇದ್ದರೂ ಜಲಚಕ್ರ ಪೂರ್ತಿ ಆಗಿಯೇ ಆಗುತ್ತದೆ. ನೀರು ಎಲ್ಲಿದ್ದರೂ ಸೂರ್ಯನ ಬಿಸಿಲಿಗೆ ಆವಿ ಆಗಲೇಬೇಕು. ಇದನ್ನು ತಡೆಯಲು ಸಾಧ್ಯವಿಲ್ಲ. ಹೀಗೆ ಆವಿಯಾದ ನೀರು ಮತ್ತೆ ಮಳೆಯಾಗಿ ಭುವಿಗೆ ಬೀಳಲೇ ಬೇಕು. ಇದನ್ನು ಕೂಡ ತಡೆಯಲು ಸಾಧ್ಯವಿಲ್ಲ.

ಕಳಸಾ ಬಂಡೂರಿ ವಿಷಯದಲ್ಲಿ ಕೂಡ ಗೋವಾದ ವಾದ ಹುರುಳಿಲ್ಲದ್ದು. ಗೋವಾದ ಪರಿಸರ ಕೂಡ ಹೆಚ್ಚು ಕಡಿಮೆ ದಕ್ಷಿಣ ಕನ್ನಡದ ಪರಿಸರದಂತೆಯೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯಂತೆಯೇ ಅಲ್ಲಿ ಕೂಡ ಸಾಕಷ್ಟು ಮಳೆಯಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ವಿಸ್ತೀರ್ಣ 4559 ಚದರ ಕಿ.ಮೀ. ಆದರೆ ಗೋವಾ ರಾಜ್ಯದ ವಿಸ್ತೀರ್ಣ 3702 ಚದರ ಕಿ.ಮೀ. . ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ 2011 ಜನಗಣತಿ ಪ್ರಕಾರ 20,83,625; ಗೋವಾ ರಾಜ್ಯದ ಜನಸಂಖ್ಯೆ 14,57,723. ಹಾಗೆ ನೋಡಿದರೆ ಗೋವಾ ರಾಜ್ಯ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗಿಂಥ ಜನಸಂಖ್ಯೆ ಹಾಗೂ ವಿಸ್ತೀರ್ಣ ಎರಡರಲ್ಲಿಯೂ ಸಣ್ಣದು. ಗೋವಾ ರಾಜ್ಯದಲ್ಲಿ ಬೀಳುವ ಮಳೆ ನೀರು ಗೋವಾ ರಾಜ್ಯಕ್ಕೆ ಧಾರಾಳ ಸಾಕು. ಕಳಸಾ ಬಂಡೂರಿಯಿಂದ 7 ಟಿಎಂಸಿ ನೀರನ್ನು ಮಳೆಗಾಲದಲ್ಲಿ ತೆಗೆದು ಬೇರೆ ಕಡೆ ತಿರುಗಿಸುವುದರಿಂದ ಗೋವಾದ ಮೇಲೆ ಯಾವ ತೊಂದರೆಯೂ ಆಗಲಾರದು. ಗೋವಾದ ವಿರೋಧ ಕೂಡ ಭಾವನಾತ್ಮಕ ಹಿನ್ನೆಲೆಯ ರಾಜಕಾರಣಿಗಳಿಂದ ಪ್ರಚೋದಿಸಲ್ಪಟ್ಟ ವಿರೋಧವೇ ಹೊರತು ಅದಕ್ಕೆ ವೈಜ್ಞಾನಿಕ ಕಾರಣಗಳು ಇಲ್ಲ. ನ್ಯಾಯಾಲಯವು ತನ್ನ ಮಧ್ಯಂತರ ತೀರ್ಪಿನಲ್ಲಿ ಜಲಚಕ್ರದ ಬಗ್ಗೆ ಪಾಠ ಮಾಡಿದೆ. ಆದರೆ ಅದು ಸಮಂಜಸವೇನೂ ಅಲ್ಲ. ನದಿಯ ನೀರು 7 ಟಿಎಂಸಿ ಪ್ರಮಾಣದಲ್ಲಿ ಬೇರೆ ಕಡೆ ತಿರುಗಿಸುವುದರಿಂದ ಜಲಚಕ್ರದ ಮೇಲೆ ಒಂದು ಎಳ್ಳುಕಾಳಿನಷ್ಟು ಕೂಡ ಪರಿಣಾಮ ಆಗುವುದಿಲ್ಲ ಏಕೆಂದರೆ ಸಮುದ್ರದ ನೀರಿನ ಮಟ್ಟ ಎಂದೂ ಇಳಿಯಲಾರದು. ವಾಸ್ತವವಾಗಿ ಪಳೆಯುಳಿಕೆ ಇಂಧನ ದಹನದಿಂದ ಭೂತಾಪಮಾನ ಏರಿಕೆಯ ಪರಿಣಾಮವಾಗಿ ಧ್ರುವ ಪ್ರದೇಶದ ಹಿಮ ಕರಗಿ ಸಮುದ್ರದ ಮಟ್ಟ ಹೆಚ್ಚುತ್ತಿದೆ ಎಂದು ವಿಜ್ಞಾನಿಗಳು ಬೊಬ್ಬೆ ಹಾಕುತ್ತಿದ್ದಾರೆ. ಇದು ನ್ಯಾಯಾಧೀಶರಿಗೆ ತಿಳಿಯದೆ ಇರುವುದು ಆಶ್ಚರ್ಯವೇ ಸರಿ.

ಕೊನೆಯದಾಗಿ ಪ್ರಧಾನಿ ಮೋದಿ ಈ ವಿಷಯದಲ್ಲಿ ಸಂಬಂಧಿತ ರಾಜ್ಯಗಳ ರಾಜಕಾರಣಿಗಳನ್ನು ಕರೆದು ಈ ವಿಚಾರವನ್ನು ಪರಿಹರಿಸುವುದು ದೊಡ್ಡ ವಿಷಯವೇ ಅಲ್ಲ. ಪ್ರಧಾನಿ ಮೋದಿ ಹಾಗೂ ಸಂಘ ಪರಿವಾರದವರು ಮಾತಿನಲ್ಲಿ ರಾಷ್ಟ್ರೀಯತೆ ಎಂದು ಬುರುಡೆ ಬಿಡುತ್ತಾರೆ, ಆದರೆ ಪಾಲನೆಯಲ್ಲಿ ಅದನ್ನು ತೋರಿಸುವುದಿಲ್ಲ. ರಾಷ್ಟ್ರೀಯತೆ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ ಕುಡಿಯುವ ನೀರಿನ ಯೋಜನೆಗೆ ಉದ್ಧೇಶಿಸಿದ ಕಳಸ ಬಂಡೂರಿ ಯೋಜನೆಗೆ ಇರುವ ತೊಡಕನ್ನು ಪ್ರಧಾನಿ ಮೋದಿ ಹಾಗೂ ಸಂಘ ಪರಿವಾರದವರು ಸಂಬಂಧಿತ ರಾಜ್ಯಗಳ ಎಲ್ಲ ರಾಜ್ಯಗಳ ರಾಜಕೀಯ ಪಕ್ಷಗಳ ಸಭೆಯನ್ನು ಕರೆದು ಗೋವಾದ ವಿರೋಧ ಅರ್ಥಹೀನ ಹಾಗೂ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿಂತ ವಿರೋಧ ಅಲ್ಲ ಎಂದು ಮನವರಿಕೆ ಮಾಡಿಕೊಡಲು ಸಾಧ್ಯವಿದೆ. ಇದು ಒಬ್ಬ ರಾಜಕೀಯ ಮುತ್ಸದ್ಧಿ ಹಾಗೂ ರಾಷ್ಟ್ರೀಯ ಸಂಘಟನೆ ಮಾಡಬೇಕಾದ ಕೆಲಸ. ಮೋದಿ ಸಂಬಂಧಿತ ರಾಜ್ಯಗಳ ಎಲ್ಲ ಪಕ್ಷಗಳ ರಾಜಕಾರಣಿಗಳ ಸಭೆ ಕರೆಯದೆ ತೆಪ್ಪಗೆ ಕುಳಿತಿರುವುದು ಅವರಿಗೆ ನಿಜವಾಗಿ ರಾಷ್ಟ್ರೀಯತೆಯ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ತೋರಿಸುತ್ತದೆ. ಅದೇ ರೀತಿ ಸಂಘ ಪರಿವಾರವು ಕೂಡ ಈ ವಿಷಯದಲ್ಲಿ ಗೋವಾ ಜನರಿಗೆ ಅವರ ವಿರೋಧ ಅರ್ಥಹೀನ ಎಂದು ಮನವರಿಕೆ ಮಾಡಿಕೊಡದೆ ಇರುವುದು ಕೂಡ ಒಂದು ಲೋಪವೇ ಸರಿ.

2 comments:

  1. prasad raxidi8/8/16 10:52 PM

    ಎತ್ತಿನ ಹೊಳೆ ಯೊಜನೆಗೆ ಕೆಲವರ ವಿರೋಧ ಬಾವನಾತ್ಮಕವಾದದ್ದೇ ಇರಬಹುದು ಆದರೆ ಈ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿಯಿದ್ದವರು ಮಾಡುತ್ತಿರುವ ವಿರೋಧ ಬಾವನಾತ್ಮಕವೂ ಅಲ್ಲ ಬಯಲು ಸೀಮೆಯ ಜನರಿಗೆ ನೀರು ಕೊಡಬಾರದೆನ್ನುವ ಹಠಮಾರಿತನದ್ದೂ ಅಲ್ಲ. ಬಯಲು ಸೀಮೆಗೆ ದೊರೆಯುತ್ತಿರುವ ನೀರು ವಿದ್ಯುತ್ ಎಲ್ಲದಕ್ಕೂ ಮಲೆನಾಡಿನ ಸಾಕಷ್ಟು ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ. ಪೂರ್ವಕ್ಕೆ ಹರಿಯುವ ನದಿಗಳ ಹಲವಾರು ಯೋಜನೆಗಳಾದಗಲೂ ಮಲೆನಾಡಿನ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ಆದರೆ ಎತ್ತಿನ ಹೊಳೆ ಯೋಜನೆಯಲ್ಲಿ ‘ಪರಿಸರನಾಶ ವಾಗಲಾರದು’. ರಾಷ್ಟ್ರೀಯ ಹೆದ್ದಾರಿಯಷ್ಟು ಅಗಲದ ಜಾಗ ಪೈಪ್ ಲೈನಿಗೆ ಸಾಕಾದೀತು’ ಇತ್ಯಾದಿ ಬೀಸು ಹೇಳಿಕೆಗಳಿಗಿಂತ ನಿಖರವಾದ ಮಾಹಿತಿ ಈಗಾಗಲೇ ಜನರ ಮುಂದಿದೆ.
    ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲೇ ಇರುವ ಕಾಫಿ ಬೆಳಗಾರರೊಬ್ಬರು “ಬಯಲು ಸೀಮೆಗೆ ನೀರುಕೊಡುವುದು ಪುಣ್ಯದ ಕೆಲಸ, ಅದನ್ನು ವಿರೋಧಿಸುವ ನೀವೆಲ್ಲ ಪಾಪಿಗಳು” ಎಂದು ಹೇಳುತ್ತಿದ್ದವರು. ಈಗ ಯೋಜನೆಯ ಕೆಲಸ ಪ್ರಾರಂಭವಾಗುತ್ತಿದ್ದಂತೆ ಅವರ ತೋಟದಲ್ಲೇ ಹೇಳಿದ್ದಕ್ಕಿಂತ ಹತ್ತಾರು ಪಾಲು ಮಣ್ಣು ಸುರಿದು ತೋಟ ಮಣ್ಣು ಪಾಲಾಗುವುದನ್ನು ಕಂಡು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅದಿರಲಿ ಆದರೆ ಈ ಯೋಜನೆಯ ಬಗ್ಗೆ ಸ್ಪಷ್ಟ ಮಾಹಿತಿಯಿರುವವರು ಅದನ್ನು ವಿರೋಧಿಸುತ್ತಿರುವದು. ಈ ಯೋಜನೆಯ ಹಿಂದಿರುವ ಸುಳ್ಳಿಗೆ ಮತ್ತು ಇದು ಎತ್ತಿನ ಹೊಳೆಗೆ ಬದಲಾಗ ರಾಜಕಾರಣಿಗಳ, ಅಧಿಕಾರಗಳ ಹಾಗೂ ಗುತ್ತಿಗೆದಾರರಪಾಲಿಗೆ ಹಣದ ಹೊಳೆಯಾಗುತ್ತಿರುವುದರ ಬಗ್ಗೆ,
    ಮೊದಲನೆಯದಾಗಿ ಎತ್ತಿನ ಹೊಳೆಯೋಜನೆಯಲ್ಲಿ ಘಟ್ಟದ ಮೇಲಗಭಾಗದಲ್ಲಿ 24 ಟಿ.ಎಂ.ಸಿ ನೀರು ಸಿಗುವುದೇ ಸುಳ್ಳು. ಎತ್ತಿನ ಹೊಳೆ ಎಂದು ಕರೆಲಾಗುತ್ತಿರುವ “ಎತ್ತಿನ ಹಳ್ಳ” ದಲ್ಲಿ 3.5 ಟಿಎಂಸಿ. ಉಳಿದ ಕೀರಿಹಳ್ಳ, ಕಾಡುಮನೆಹೊಳೆ, ಕೆಂಕೆರಿಹೊಳೆ, ಮಂಜನಹಳ್ಳ ಎಲ್ಲಾ ಸೇರಿ ಒಟ್ಟು ಸಿಗುವುದು 8ರಿಂದ 9 ಟಿ.ಎಂ.ಸಿ ನೀರು, ಸರ್ಕಾರಗಳು ಅತ್ತ ಬಯಲುಸೀಮೆಯ ಜನಕ್ಕೆ 24 ಟಿ.ಎಂಸಿಯ ಆಸೆ ತೋರಿಸಿ 12ರಿಂದ 13000 ರೂ ಯೋಜನೆಯನ್ನು ಹಾಕಿದೆ. ಈಗಹಾಕುತ್ತಿರುವ ಕೊಳವೆಯ ಕಾಲುಭಾಗವೂ ಈಗ ದೊರೆಯುವ ನೀರಿನಿಂದ ತುಂಬಲಾಗದು. ಆದ್ದರಿಂದ 24 ಟಿ.ಎಂಸಿ ನೀರು ಬೇಕೆಂದರೆ 1500 ಅಡಿ ಕೆಳಗಿಳಿದು ಕುಮಾರಧಾರೆಯಿಂದಲೋ ನೇತ್ರಾವತಿಯಿಂದಲೋ ನೀರೆತ್ತಬೇಕು ಅದಕ್ಕೆ ಮತ್ತೆ ಸಾವಿರಾರು ಕೋಟಿ ರೂ ಬೇಕು. ಅಂದರೆ ಅನೇಕ ವರ್ಷಗಳ ಕಾಲ ನಮ್ಮನ್ನಾಳುವವರಿಗೆ ಇದು ಹಣದ ಹೊಳೆ..
    ನಾವು ಬಯಲು ಸೀಮೆಯಲ್ಲಿ ನಮ್ಮ ಬೆಳೆ ಪದ್ಧತಿಯನ್ನೇ ಸರಿಯಾಗಿ ರೂಡಿಸಿಲ್ಲ. ನೀರಾವರಿ ಬಂದ ತಕ್ಷಣ ಕಬ್ಬು ಭತ್ತ ವನ್ನೇ ಬೆಳೆಯಬೇಕಂಬ ಹಠದ ವಿರುದ್ಧ ಯಾರೂ ಮಾತಾಡುತ್ತಿಲ್ಲ. ನೀರಿನ ನಿರ್ವಹಣೆಯಲ್ಲಿ (ವಾಟರ್ ಮ್ಯಾನೇಜ್ಮೆಂಟ್) ನಾವು ಮಹಾರಾಷ್ಟ್ರ ಹಾಗೂ ತಮಿಳುನಾಡಿಗಿಂತ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ. ಅದಕ್ಕಾಗಿಯೇ ನಾವು ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದೇವೆ.
    ಎತ್ತಿನ ಹೊಳೆ ಯೋಜನೆಗೂ- ಮಹದಾಯಿ ಯೋಜನೆಗೂ ತಾತ್ವಿಕವಾಗಿ ವೆತ್ಯಾಸವಿಲ್ಲ. ಮೊದಲನೆಯದು ಒಂದೇ ರಾಜ್ಯದೊಳಗೆ ಇದೆ ಅಷ್ಟೆ, ಎತ್ತಿನಹೊಳೆಯೋಜನೆಯೂ ಹೀಗೆ ಕಾನೂನಾತ್ಮಕವಾಗಿ ಅಸಂಬದ್ಧ ನಿರ್ವಹಣೆಯ ಯೋಜನೆ. ಮಹದಾಯಿ ಯೋಜನೆಯಲ್ಲಿ ನ್ಯಾಯಾಧಿಕರಣ ಎತ್ತಿದ ಎಲ್ಲ ಪ್ರಶ್ನೆಗಳು ಎತ್ತಿನ ಹೊಳೆಗೂ ಅನ್ವಯಿಸುತ್ತವೆ.
    ಮುಖ್ಯವಾಗಿ ಈ ಎತ್ತಿನ ಹೊಳೆ ಯೋಜನೆ ಗೆ ವಿರೋಧವಿರುವುದು, ಎರಡೂ ಕಡೆಯ ಜನರನ್ನು ಮರುಳುಗೊಳಿಸಿ ಕೋಟ್ಯಂತರ ರೂಪಾಯಿ ಹಣವನ್ನು ಗುಳುಂಮಾಡುವ ಬಗ್ಗೆ, ಮತ್ತು ಅದರಿಂದ ಖಂಡಿತವಾಗಿಯೂ ಆಗುವ ಪರಿಸರ ನಾಶದ ಬಗ್ಗೆ.

    ReplyDelete