Aug 3, 2016

ಅಧಿಕಾರಿಯ ಪರ ವಕಾಲತ್ತು ವಹಿಸುವುದರಲ್ಲಿ ಯಾವ ಸುಧಾರಣೆ ಇದೆ?

ಎಸ್. ಅಭಿ ಹನಕೆರೆ
03/08/2016
ಮೊನ್ನೆ ನಿರಂತರವಾಗಿ ಚಾನೆಲ್ ಛೇಂಜ್ ಮಾಡುತ್ತಾ ಇರುವಾಗ ಕೆಲವು ಮಕ್ಕಳು ತಮ್ಮ ಮೇಷ್ಟ್ರು ವರ್ಗಾವಣೆಯನ್ನು ಅಳುತ್ತಾ ವಿರೋಧಿಸುತ್ತಿದ್ದರು. ಸೂಪರ್! ಮೇಷ್ಟ್ರು ಈ ರೀತಿಯ ಪ್ರಭಾವವನ್ನು ಮಕ್ಕಳ ಮೇಲೆ ಬೀರಿದ್ದಾರಲ್ಲ ಎಂದು ಆಶ್ಚರ್ಯಪಟ್ಟೆ. ಹಾಗೆ ಚಾನೆಲ್ ಛೇಂಜ್ ಮಾಡುತ್ತಿರುವಾಗ ಹಾಸನದ ಮಹಿಳಾ ಅಧಿಕಾರಿಯೊಬ್ಬರು ತಮ್ಮನ್ನು ವರ್ಗಾವಣೆ ಮಾಡಿರುವುದನ್ನು ತಪ್ಪಿಸಿಕೊಳ್ಳುವ ಭಾಗವಾಗಿ ಆತ್ಮಹತ್ಯೆ ಪ್ರಯತ್ನ ಮಾಡಿರುವ ಸುದ್ದಿ ಪ್ರಕಟವಾಗುತ್ತಿತ್ತು. ಅಷ್ಟರಲ್ಲಾಗಲೇ ಪ್ರಮುಖ ರಾಜಕೀಯ ಪಕ್ಷದ ಮುಖಂಡರು ಆತ್ಮಹತ್ಯೆಗೆ ತಮ್ಮ ಎದುರಾಳಿ ಪಕ್ಷದ ದುರೀಣರೇ ಕಾರಣರೆಂದು ಟಿವಿ ಚಾನೆಲ್ ಗಳಿಗೆ ಬೈಟ್ ಕೊಡುತ್ತಿದ್ದರು. ಆ ಧುರೀಣರ ಹೇಳಿಕೆಯನ್ನೇ ಆಧರಿಸಿಕೊಂಡು ಟಿವಿ ಚಾನೆಲ್ ಗಳು ಅಧಿಕಾರಿಗೆ ಕಿರುಕುಳ, ಆತ್ಮಹತ್ಯೆಗೆ ಯತ್ನ ಎಂದು ಸುದ್ದಿ ಬಿತ್ತರಿಸುತ್ತಿದ್ದವು. ಇದೇನು ಈಗ ಇದ್ದಕ್ಕಿದ್ದಂತೆ ರಾಜ್ಯದಲ್ಲಿ ಅಧಿಕಾರಿಗಳ ಆತ್ಮಹತ್ಯೆ ಸರಣಿ ಸುರುವಾದಂತಿದೆಯಲ್ಲ ಎನ್ನಿಸಿತು. (ಅದು ಎಷ್ಟೇ ಅನುಕಂಪದಿಂದ ನೋಡಿದರೂ ಈ ಚಾನೆಲ್ಲುಗಳನ್ನು ಹತ್ತು ನಿಮಿಷಕ್ಕಿಂತ ಹೆಚ್ಚು ಕಾಲ ನೋಡುವುದಕ್ಕಾಗುವುದಿಲ್ಲ ಎಂಬುದು ಬೇರೆ ಮಾತು!) ಸದರಿ ಅಧಿಕಾರಿ ಹಾಸನದ ಎಸಿ ಆಗಿದ್ದವರು. ಸರ್ಕಾರ ತನ್ನಷ್ಟಕ್ಕೇ ಅವರನ್ನು ವರ್ಗಾವಣೆ ಮಾಡಿದೆ. ಆ ಸ್ಥಾನಕ್ಕೆ ದಕ್ಷ ಎಂದೇ ಖ್ಯಾತವಾಗಿರುವ ನಾಗರಾಜ್ ರನ್ನು ನಿಯೋಜಿಸಿದೆ. ಆದರೆ ಆ ಮಹಿಳಾ ಅಧಿಕಾರಿಗೆ ಸ್ಥಾನೊಪಲ್ಲಟ ಇಷ್ಟವಿಲ್ಲದ ಸಂಗತಿ. ಇನ್ನು ಅದಾಗಲೇ ಸಂಘಟನೆಗಳು ಬೀದಿಗಿಳಿದಿವೆ. ಆ ಅಧಿಕಾರಿಯ ಅಧಿಕಾರವನ್ನು ಹಸ್ತಾಂತರಿಸಲೆಂದು. ಮಹಿಳಾ ಅಧಿಕಾರಿಯು ಸುಮ್ಮನೆ ಕುಳಿತಿಲ್ಲ. ಕೆಎಟಿ ಮೊರೆ ಹೋಗಿ ವರ್ಗಾವಣೆ ರದ್ದು ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಂಘಟನೆಗಳು ಸುಮ್ಮನಿರುತ್ತಿಲ್ಲ. ಕಡೆಗೆ ಕಡೆ ಅಸ್ತ್ರವಾಗಿ ಆಕೆ ಆತ್ಮಹತ್ಯೆಯ ಮೂಲಕ ಎದುರಿಸಲು ಹೊರಟಿದ್ದಾರೆ. ಇದಿಷ್ಟು ಕಥೆಯ ಹೂರಣ. 
ಆದರೆ ನಮ್ಮ ಜನರು ಯಾರೋ ಒಬ್ಬ ಅಧಿಕಾರಿ ದಕ್ಷ ಎಂದ ಮಾತ್ರಕ್ಕೆ ನಮ್ಮ ಜಿಲ್ಲೆಗೇ ಇರಲಿ ಎಂದು ಹಠಕ್ಕೆ ಬೀಳುವುದು ಯಾಕೆ? ಅವರ ಜಾಗಕ್ಕೆ ಬರುವ ಮತ್ತೊಬ್ಬ ಅಧಿಕಾರಿಯನ್ನು ಈ ಹಿಂದಿನ ಅಧಿಕಾರಿಯಂತೆ ದಕ್ಷತೆಯಿಂದ ಕೆಲಸ ಮಾಡುವಂತಹ ಸಾಮಾಜಿಕ ಒತ್ತಡ ಸೃಷ್ಟಿಸಲು ಯಾಕೆ ಸಾಧ್ಯವಿಲ್ಲ ಎನ್ನಿಸಿತು. ಯಾವುದೇ ಸಂಘಟನೆಯಾಗಲೀ ಅಥವಾ ಜನಸಾಮಾನ್ಯರಾಗಲೀ ನಮ್ಮ ಸುತ್ತಲಿನ ಸಾಮಾಜಿಕ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳುವ ಅಧಿಕಾರ ನಮ್ಮಲ್ಲಿಯೇ ಇದೆ. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ದಕ್ಷತೆಯಿಂದ ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸಲೇಬೇಕಾದ ಅನಿವಾರ್ಯತೆಯನ್ನು ನಾವುಗಳೇ ಸೃಷ್ಟಿಸಬಹುದಾಗಿದೆ. ಆದರೆ ನಮ್ಮ ಆಲೋಚನೆಗಳು ವ್ಯಕ್ತಿ ಕೇಂದ್ರಿತವಾಗಿರುವುದರಿಂದ, ಕುಟುಂಬ ಕೇಂದ್ರಿತವಾಗಿರುವುದರಿಂದ, ಹೆಚ್ಚೆಂದರೆ ಗುಂಪು ಕೇಂದ್ರಿತವಾಗಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಯಾವುದೋ ಪಕ್ಷಕ್ಕೊ ಎಮ್ಮೆಲ್ಲೆಗೋ ನಮ್ಮ ನಿಷ್ಠೆ ಮುಡಿಪಾಗಿರುತ್ತದೆ. ಆದ್ದರಿಂದ ಜನರಿಗೆ ಎಲ್ಲಾ ಸರಕಾರೀ ಅಧಿಕಾರಿಗಳು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕೆಲಸ ಮಾಡಲೇಬೇಕು ಎಂದೆನ್ನಿಸುವುದಿಲ್ಲ. ನನ್ನ ಸ್ನೇಹಿತನೊಬ್ಬ ರಾಯಚೂರಿನಲ್ಲಿ ಸರಕಾರೀ ಕೆಲಸದಲ್ಲಿದ್ದಾನೆ. 'ಯಾವಾಗಪ್ಪ ನೀನು ಮಂಡ್ಯಕ್ಕೆ ಅಧಿಕಾರಿಯಾಗಿ ಬರೋದು' ಅಂದರೆ 'ಸುಮ್ನಿರಪ್ಪ ನೀನು. ಅಲ್ಲಿ ಹಾದೀ ಬೀದೀಲಿ ಹೋಗೋರೆಲ್ಲ ಅದು ಏನಾಯಿತು ಇದು ಏನಾಯಿತು ಎಂದು ಸರಕಾರೀ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡ್ತಾರಂತೆ. ಆದರೆ ಇಲ್ಲಿ ಜನಪ್ರತಿನಿಧಿಗಳು ಮಾತ್ರ ಪ್ರಶ್ನೆ ಮಾಡೋದು' ಎಂದು ಹೇಳಿದ! ನಿಜವಾದ ಪರಿಸ್ಥಿತಿ ಮಂಡ್ಯದಲ್ಲಿ ಆ ಪ್ರಮಾಣಕ್ಕೆ ಇಲ್ಲವಾದರೂ ಹೊರ ಜಿಲ್ಲೆಗಳಲ್ಲಿ ಮಂಡ್ಯ ಜಿಲ್ಲೆಯ ಬಗ್ಗೆ ಇರುವ ಬಿಲ್ಡಪ್ ನೋಡಿ ಖುಸಿಯಾಯಿತು. ಎಲ್ಲಿ ದುಡ್ಡು ಹರಿದಾಡುತ್ತೋ ಅಲ್ಲಿ ಭ್ರಷ್ಟಾಚಾರ ಮಾಡಲು ಮನುಷ್ಯ ಮುಂದಾಗುತ್ತಾನೆ. ಏಕೆಂದರೆ ಮನುಷ್ಯ ಮೊದಲು ಅಗತ್ಯಕ್ಕೆ ನಂತರ ಲಾಭಕ್ಕೆ ಆಮೇಲೆ ದೋಚುವುದಕ್ಕಾಗಿಯೇ ಬದುಕಲು ಶುರು ಮಾಡುತ್ತಾನೆ. ಕಂಟ್ರೋಲ್ ಆಗಿ ಬದುಕಲೆಂದೇ ಮನುಷ್ಯರಾದ ನಾವುಗಳು ಕೆಲವು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದಕ್ಕೆ ನೈತಿಕತೆ, ಮಾನವೀಯತೆಯನ್ನು ಆಧಾರವಾಗಿಸಿಕೊಂಡಿದ್ದೇವೆ. ಮನುಷ್ಯ ಹೊಸ ಹೊಸ ವ್ಯವಸ್ಥೆಗೆ ಹೋದಂತೆ ಇನ್ನಷ್ಟು ಪ್ರಬುದ್ಧನಾಗಬೇಕು, ಬದಲಿಗೆ ನಾವು ವ್ಯತಿರಿಕ್ತ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಒಬ್ಬ ಸರಕಾರಿ ಅಧಿಕಾರಿ ವರ್ಗವಾದರೆ, ಆತನಿಗಾಗಿ ನಾವು ಧರಣಿ ಕೂರಬೇಕಿಲ್ಲ. ಬದಲಿಗೆ ಬರುವ ಮತ್ತೊಬ್ಬ ದಕ್ಷತೆಯಿಂದ ಕೆಲಸ ಮಾಡಬೇಕಾದ ಅನಿವಾರ್ಯತೆಯನ್ನು ನಾವು ಸೃಷ್ಟಿಸಬೇಕಿದೆ. ಆ ಅಧಿಕಾರಿಗಳ ವರ್ಗಾವರ್ಗಿ ವಿಚಾರದಲ್ಲೂ ನನ್ನದು ಇದೇ ಅಭಿಮತ. ಶಾಲಾ ಮಕ್ಕಳು ಮೇಷ್ಟರಿಗಾಗಿ ಅಳುವುದರಲ್ಲಿ ಮುಗ್ದತೆ ಇದೆ. ಮಮಕಾರವಿದೆ. ಕೆಲವರು ಸಂಘಟನೆಗಳ ಹೆಸರಿನಲ್ಲಿ ಅಧಿಕಾರಿಗಳ ವರ್ಗಾವಣೆ ತಡೆಯುವುದರಲ್ಲಿ ಯಾವು ಮುಗ್ಧತೆಯಿದೆ? ಸಮಾಜವನ್ನು ಸರಿಪಡಿಸುವವರು, ಅದಕ್ಕಾಗಿ ಸಂಘಟನೆ ಕಟ್ಟಿಕೊಂಡಿರುವವರು ಒಬ್ಬ ಅಧಿಕಾರಿಯ ವರ್ಗಾವಣೆ ತಡೆಯುವುದರಿಂದ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವೇ? ಅದರಲ್ಲೂ ಇಂತಹ ಘಟನೆಗಳು ಜರುಗಲಿ ಎಂದು ಕಾಯುವ ನಮ್ಮ ರಾಜಕೀಯ ಪಕ್ಷಗಳ ಮುಖಂಡರು, ಈ ಪುಡಾರಿಗಳ ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ಸುದ್ದಿ ಪಸಾರ ಮಾಡುವ ಮಾಧ್ಯಮಗಳು ಸಮಾಜಕ್ಕೆ ಇನ್ನಷ್ಟು ಅಪಾಯಕಾರಿಯಾಗುತ್ತಿರುವ ಸನ್ನಿವೇಶದಲ್ಲಿ ನಾವು ಬದುಕುತ್ತಿದ್ದೇವೆ. ಇಂತಹ ಅಧಿಕಾರಿಗಳ ಪರ ವಿರೋಧವಾಗಿ ಪ್ರತಿಭಟನೆ ಮಾಡುವವರನ್ನೇ ಕರೆದು ಕರೆದು ಪ್ರಚಾರ ನೀಡುವ ವ್ಯವಸ್ಥೆ ಎಲ್ಲವೂ ಸೇರಿ ಸಮಾಜವನ್ನು ಇನ್ನಷ್ಟು ಕಲುಷಿತಗೊಳಿಸುವ ಮುನ್ನಾ ಜನರದ್ದೇ ಆದ ಪರ್ಯಾಯ ರಾಜಕಾರಣದ ನಿರ್ಮಾಣಕ್ಕೆ ಮುಂದಡಿ ಇಡೋಣ.

No comments:

Post a Comment