ಆಕಾಶ ಎಂದಿನಂತೆ ಬಿಳಿಚಿಕೊಂಡಿತ್ತು
ಕಳೆದ ವರ್ಷದ ಮಳೆ ಕೈಕೊಟ್ಟು ಭೂಮಿ ಬಿರಿದು ಬಿದ್ದುಕೊಂಡಿತ್ತು
ನಡೆವ ದಾರಿಯೊಳಗಿನ ಸಣ್ಣ ಮುಳ್ಳುಗಳೂ
ಮೊಳೆಗಳಂತೆ ಪಾದಗಳಿಗೆ ಚುಚ್ಚುತ್ತಿದ್ದವು.
ಅಂತಹದೊಂದು ದಿನ
ಕಾಡಿನಂಚಿನಲ್ಲಿ ನನಗೆ ವಿದಾಯ ಹೇಳಿ ಹೋದ ನೀನು
ಮತ್ತೆ ಬರಬಹುದೆಂಬ ನಂಬಿಕೆ
ನಾಶವಾಗಿ ನಾನು ಕಾಯುವುದನ್ನೇ ನಿಲ್ಲಿಸಿಬಿಟ್ಟೆ!
ಅದೆಷ್ಟೋ ಕಾಲವಾದ ಮೇಲೆ
ನೀನು ಇನ್ನಿಲ್ಲವೆಂಬ ಸುದ್ದಿ ಬಂದಾಗ
ನಾನು ಅದೇ ನಗರದ ಬೇವಾರ್ಸಿ ಗಲ್ಲಿಗಳಲ್ಲಿ
ಗೇಣು ಹೊಟ್ಟೆಗಾಗಿ
ಅದೆಷ್ಟು ಜನರ ಬೂಟುಗಳ ನೆಕ್ಕುತ್ತಾ
ಅವರೆಸೆದ ರೊಟ್ಟಿಯ ಚೂರುಗಳ ಹಿಡಿಯುತ್ತ
ಬದುಕುತ್ತಿದ್ದೆ ಎಂದರೆ
ನಿನಗಿಂತ ಮೊದಲೇ ನಾನು
ಸತ್ತು ಹೋಗಿದ್ದೆ.
ಇದೀಗ ನೀನು ಬಿಟ್ಟು ಹೋದ ಬೂಟುಗಳಲ್ಲಿ
ನನ್ನ ಕಾಲುಗಳು ಹಿಡಿಸುತ್ತಿಲ್ಲ…….
ನೀನು ಕೊಟ್ಟು ಹೋದ ಸಂದೇಶಗಳ ಬಾರವ ನನ್ನ
ಹೆಗಲುಗಳಿಂದ ಹೊರಲಾಗುತ್ತಿಲ್ಲ
ಸಾದ್ಯವಾದರೆ ಕ್ಷಮಿಸು!
No comments:
Post a Comment