Aug 6, 2016

ಯಾರೂ ಅಷ್ಟು ಸುಲಭಾಗಿ ಅಪರಿಚಿತರನ್ನು ಸಾಯಿಸುವುದಿಲ್ಲ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಯಾರೂ ಅಷ್ಟು ಸುಲಭವಾಗಿ 
ಅಪರಿಚಿತರನ್ನು
ಸಾಯಿಸುವುದಿಲ್ಲ

ನಿಮ್ಮ ಹಾಗೆ!
ನೀವು ನಂಬಿದ ದೇವರೂ ನಿಮ್ಮನ್ನು
ಕ್ಷಮಿಸಲಾರ ನೆನಪಿಡಿ.
ಅಮಾಯಕರ ಗುಂಡಿಗೆಗೆ ಹೊಡೆದ ಪ್ರತಿ ಗುಂಡೂ
ತಾಯಿಯೊಬ್ಬಳ ಎದೆಗೇನೇ ತಗುಲುವುದು
ಅಸಂಖ್ಯಾತ ಅನಾಥ ಹಸುಗೂಸುಗಳನ್ನು ಬೀದಿಯಲ್ಲಿ ಬಿಡುವುದು
ನಿಮಗೂ ಗೊತ್ತಿದೆ ಯಾವ ಧರ್ಮವೂ ಕೊಲ್ಲುವುದ ಅನುಮತಿಸುವುದಿಲ್ಲ
ಯಾವ ಗ್ರಂಥವೂ ರಕ್ತದ ಶಾಯಿಯಲ್ಲಿ ಬರೆಯಲ್ಪಟ್ಟಿರುವುದಿಲ್ಲ
ನೀವು ಕೊಂದ ಪ್ರತಿಯೊಬ್ಬನಿಗೂ
ಒಂದು ಗೂಡು
ಅದರೊಳಗಷ್ಟು ಅವನ ನಂಬಿದ ಜನರು
ಇರುವರು
ಸತ್ತವನೆದೆಯಲ್ಲಿ ಉಕ್ಕಿದ ನೆತ್ತರು
ತರುತ್ತದೆ ಬದುಕಿದವರ ಕಣ್ಣೊಳಗೆ ಕಣ್ಣೀರು
ಯಾವ ಹತ್ಯೆಯೂ ನಿಮ್ಮನ್ನು ಸ್ವರ್ಗದತ್ತ ಕರೆದೊಯ್ಯುವುದಿಲ್ಲ
ಯಾವ ಪ್ರಾರ್ಥನೆಯೂ ನಿಮ್ಮನ್ನು ಕ್ಷಮಿಸುವುದಿಲ್ಲ
ನಡೆದ ಹತ್ಯೆಗಳಿಗೆ ಪ್ರತಿಯಾಗಿ ನಿಮ್ಮನ್ನು ಕೊಲ್ಲುವುದು ಕಷ್ಟವೇನಲ್ಲ
ವ್ಯತ್ಯಾಸವಿಷ್ಟೆ ಕೊಲ್ಲುವವನನ್ನೂ ಕ್ಷಮಿಸುವ ಧಾರಿಣಿಯ ಮೇಲೆ
ನಿಮ್ಮಂತವರ ರಕ್ತ ಚೆಲ್ಲುವುದು ಬೇಡ
ಹಾಗೆ ನೋಡಿದರೆ ನಿಮ್ಮನ್ನು ಮನುಷ್ಯರೆಂದೇ ನಾವು ತಿಳಿದಿಲ್ಲ!

2.

ಮೊನ್ನೆಯವರೆಗು ಸಹನೆಯ ಮಾತಾಡುತ್ತಿದ್ದವರಿಂದು
ಸ್ವರ್ಗದ ಮಾತಾಡುತ್ತಿದ್ದಾರೆ
ಮೊನ್ನೆಯವರೆಗು ಶಾಂತಿಯ ಮಾತಾಡುತ್ತಿದ್ದವರಿಂದು
ಯುದ್ದದ ಮಾತಾಡುತ್ತಿದ್ದಾರೆ
ಮೊನ್ನೆಯವರೆಗು ಬದುಕಿಸುವ ಮಾತಾಡುತ್ತಿದ್ದವರಿಂದು
ಮುಗಿಸುವ ಮಾತಾಡುತ್ತಿದ್ದಾರೆ
ಮೊನ್ನೆಯವರೆಗು ಮೌನವಾಗಿದ್ದ ಹುಡುಗನಿಂದು
ಬೀಕರ ಬಾಷಣಕೋರನಾಗಿದ್ದಾನೆ
ಮೊನ್ನೆವರೆಗು ರಕ್ತ ಕಂಡರೆ ಚೀರುತ್ತಿದ್ದವನಿಂದು
ರಕ್ತ ಪಿಪಾಸುವಾಗಿದ್ದಾನೆ.
ಮೊನ್ನೆವರೆಗು ಭೂಲೋಕವೇ ಸ್ವರ್ಗವೆಂದು ಹೆಮ್ಮೆಯಿಂದ ಹೇಳುತ್ತಿದ್ದವನಿಂದು
ನೆಲವ ನರಕ ಮಾಡಿ ಸ್ವರ್ಗ ಸೇರುವ ಮಾತಾಡುತ್ತಿದ್ದಾನೆ.
ಮೊನ್ನೆವರೆಗು ಮನೆ ಮಗನಂತಿದ್ದವನಿಂದು
ಮನೆಮುರುಕನಂತಾಗಿದ್ದಾನೆ. 

No comments:

Post a Comment