Aug 9, 2016

ದಲಿತರು ತೋರಿದ ‘ಗುಜರಾತ್ ಮಾದರಿ’

ಡಾ. ಅಶೋಕ್. ಕೆ. ಆರ್
09/08/2016
ಕಳೆದ ಐದಾರು ವರುಷಗಳಿಂದ ‘ಗುಜರಾತ್ ಮಾದರಿ’ ಎಂಬ ಪದವನ್ನು ತೀರ ಸವಕಲಾಗುವಷ್ಟು ಬಳಸಲಾಗಿದೆ. ಕರ್ನಾಟಕದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೂ ಗುಜರಾತ್ ಮಾದರಿಯನ್ನು ಅಳವಡಿಸಿಕೊಳ್ಳಲಾಗುವುದು ಎಂದಿದ್ದರು. ನಂತರದಲ್ಲಿ ಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ ‘ಗುಜರಾತ್ ಮಾದರಿ’ ಎನ್ನುವುದು ಬಿಜೆಪಿಯ ಪ್ರಚಾರದ ಪ್ರಮುಖ ಅಸ್ತ್ರವಾಗಿತ್ತು. ಬಿಜೆಪಿ ಮತ್ತು ಮೋದಿ ಬೆಂಬಲಿಗರ ದೃಷ್ಟಿಯಲ್ಲಿ ‘ಗುಜರಾತ್ ಮಾದರಿ’ ಎನ್ನುವುದು ಕೈಗಾರಿಕೆಗಳಿಗೆ ವಿಪರೀತವಾಗಿ ಸಹಾಯಹಸ್ತ ಚಾಚುವ ಉದ್ಯಮಿಗಳನ್ನು ಆಹ್ವಾನಿಸುವ ಮಾದರಿಯಾಗಿದ್ದರೆ ಬಿಜೆಪಿ ಮತ್ತು ಮೋದಿ ವಿರೋಧಿಗಳ ದೃಷ್ಟಿಯಲ್ಲಿ ‘ಗುಜರಾತ್ ಮಾದರಿ’ ಎಂದರೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಮಾದರಿಯಾಗಿತ್ತು. ಈ ಎಲ್ಲಾ ಗುಜರಾತಿನ ಮಾದರಿಗಳನ್ನು ಹಿಂದಿಕ್ಕಿ ಈಗ ಗುಜರಾತ್ ರಾಜ್ಯದ ದಲಿತರು ಹೊಸ ರೀತಿಯ ಹೋರಾಟದ, ಚಳುವಳಿಯ, ಪ್ರತಿಭಟನೆಯ ಮಾರ್ಗವನ್ನು ತೋರಿದ್ದಾರೆ. ಗುಜರಾತಿನ ಎಲ್ಲಾ ಮಾದರಿಗಳಿಗಿಂತಲೂ ಇದು ವಿಭಿನ್ನವಾಗಿದೆ.

ಊನಾ ಎಂಬ ಊರಿನಲ್ಲಿ ಸತ್ತ ದನದ ಚರ್ಮ ಸುಲಿಯುತ್ತಿದ್ದ ದಲಿತರನ್ನು ‘ಗೋರಕ್ಷಕ’ ಪಡೆಯವರು ಹಿಡಿದು, ಬಟ್ಟೆ ಬಿಚ್ಚಿ ಬಡಿದಿದ್ದರು. ಅದರ ದೃಶ್ಯಾವಳಿಗಳು ಅಂತರ್ಜಾಲದ ಮೂಲಕ ಎಲ್ಲೆಡೆಯೂ ವ್ಯಾಪಕವಾಗಿ ಹರಡಿ ‘ಗೋರಕ್ಷಕರ’ ವಿರುದ್ಧದಲೆಯನ್ನು ಸೃಷ್ಟಿಸಿತು. ಇಲ್ಲಿಯವರೆಗೂ ಗೋರಕ್ಷಣೆಯ ನೆಪದಲ್ಲಿ ಮುಸ್ಲಿಮರನ್ನಷ್ಟೇ ಹಿಡಿದು ಬಡಿಯುತ್ತಿದ್ದ ಗೋರಕ್ಷಕರು ಪ್ರಥಮ ಬಾರಿಗೆ ಬಹಿರಂಗವಾಗಿ ದಲಿತರ ಮೇಲೆ ಹಲ್ಲೆ ನಡೆಸಿದ್ದರು. ಗುಜರಾತಿನ ದಲಿತರು ಪ್ರತಿಭಟನೆಗೆ ಇಳಿದರು. ಅವರು ಪ್ರತಿಭಟನೆಗೆ ಆಯ್ದುಕೊಂಡ ದಾರಿ ಭಿನ್ನವಾಗಿತ್ತು. ಸಾವಿರಾರು ಸಂಖೈಯಲ್ಲಿ ಜನರು ಸೇರಿದರು, ಮೆರವಣಿಗೆ ಮಾಡಿದರು ಇವೆಲ್ಲವೂ ಮಾಮೂಲು ರೀತಿಯ ಪ್ರತಿಭಟನೆಗಳೇ. ಆದರೆ ಪ್ರತಿಭಟನೆಯ ಸಂದರ್ಭದಲ್ಲಿ ‘ಇನ್ನು ಮೇಲೆ ಸತ್ತ ದನಗಳನ್ನು ನಾವು ಎತ್ತುವುದಿಲ್ಲ. ನಿಮ್ಮ ಮಾತೆಯನ್ನು ನೀವೇ ಎತ್ತಿ ಸಂಸ್ಕಾರ ಮಾಡಿಕೊಳ್ಳಿ’ ಎಂದು ಘೋಷಿಸಿದ್ದು ಜಾತಿ ವ್ಯವಸ್ಥೆಯನ್ನು ಅಪ್ಪಿ ಮಲಗಿರುವ ಸಮಾಜಕ್ಕೆ ದಿಗ್ಭ್ರಮೆ ಮೂಡಿಸಿಬಿಟ್ಟಿತು. ಸತ್ತ ದನಗಳ ಮೂಳೆಗಳನ್ನು ಕಳೇಬರವನ್ನು ಹೊತ್ತು ತಂದು ಸರಕಾರಿ ಕಛೇರಿಗಳ ಮುಂದೆ ಎಸೆದು ಪ್ರತಿಭಟಿಸಿದರು. ಸತ್ತ ದನಗಳನ್ನು ವಿಲೇವಾರಿ ಮಾಡುವುದೇಗೆಂದು ತಿಳಿಯದೆ ಗುಜರಾತಿನ ಅಧಿಕಾರಿ ವರ್ಗ ಕಕ್ಕಾಬಿಕ್ಕಿಯಾಯಿತು. ‘ನಮ್ಮ ಕೆಲಸ ನಾವು ಮಾಡಿದ್ರೆ ಹಲ್ಲೆ ಮಾಡಿ ಧರ್ಮ ರಕ್ಷಿಸುವ ಮಾತಾಡ್ತೀರಲ್ವಾ? ನಮ್ಮ ಕೆಲಸಾನೇ ಮಾಡಲ್ಲ, ನೀವೇ ಮಾಡ್ಕಳ್ಳಿ’ ಅನ್ನೋ ಪ್ರತಿಭಟನೆಯ ರೀತಿ ಅಸಂಘಟಿತ ವಲಯದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಕಾಣಿಸಿದೆ. ಸಣ್ಣ ಮಟ್ಟದಲ್ಲಿ ದಲಿತರು ಊರಿನ ಜಾತ್ರೆಯಲ್ಲಿ ತಮಟೆ ಬಾರಿಸುವುದಿಲ್ಲ ಎಂದಾಗಲೋ, ಹೆಣದ ಮುಂದೆ ತಮಟೆ ಬಾರಿಸುವುದಿಲ್ಲ ಎಂದಾಗಲೋ ದಲಿತರ ಮೇಲೆ ಹಲ್ಲೆ ನಡೆಯುವ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತದೆ. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡದೆ ಅಸಹಕಾರ ತೋರಿದ್ದು ಇದೇ ಮೊದಲಿರರಬೇಕು.

ಸಂಘಟಿತ ವಲಯದಲ್ಲಿ ಬೇಡಿಕೆಗಳನ್ನೀಡೇರಿಸಿಕೊಳ್ಳಲು ಇಂತಹ ಪ್ರತಿಭಟನೆಗಳು ಸರ್ವೇ ಸಾಮಾನ್ಯ. ಇತ್ತೀಚೆಗಷ್ಟೇ ಕರ್ನಾಟಕದ ಸಾರಿಗೆ ನಿಗಮದ ನೌಕರರು ಮುಷ್ಕರ ಹೂಡಿ ಸಾರಿಗೆ ವ್ಯವಸ್ಥೆಯನ್ನೇ ಅಸ್ತವ್ಯಸ್ತ ಮಾಡಿ ತಮ್ಮ ಬೇಡಿಕೆಗಳಲ್ಲಿ ಹಲವನ್ನಾದರೂ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಎಲ್ಲೆಡೆಯೂ ಚದುರಿ ಹೋಗಿರುವ, ಸಂಘಟನೆಗಳಿಲ್ಲದ, ಅವತ್ತಿನ ಕೂಲಿಯಲ್ಲೇ ಅವತ್ತಿನ ಅನ್ನ ಸಂಪಾದಿಸಬೇಕಾದ ಅಸಂಘಟಿತ ವಲಯದ ಜನರಿಗೆ ಈ ರೀತಿ ಮುಷ್ಕರ ಹೂಡುವುದು ಸುಲಭವಲ್ಲ. ಕರ್ನಾಟಕದಲ್ಲೇ ಕೆಲವು ವರುಷಗಳ ಹಿಂದೆ ಪೌರ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಲೆಯ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದ್ದರು. ತಮ್ಮ ತಲೆಯ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸುವ ಬದಲು, ‘ಇನ್ನು ಮುಂದೆ ನಿಮ್ಮ ಊರಿನ ಒಂದು ಚಿಕ್ಕ ಕಸದ ಚೂರನ್ನೂ ನಾವು ಎತ್ತಿಹಾಕುವುದಿಲ್ಲ’ ಎಂದವರು ಪ್ರತಿಭಟಿಸಿದ್ದರೆ ಊರುಗಳ ಕತೆ ನೆನಪಿಸಿಕೊಳ್ಳಿ…… ಗುಜರಾತಿನ ದಲಿತರು ಇಂತಹುದೊಂದು ಪ್ರತಿಭಟನೆ ಅಸಂಘಟಿತ ವಲಯದಲ್ಲೂ ಸಾಧ್ಯವಿದೆ ಎಂದು ತೋರಿಸಿಕೊಟ್ಟಿದ್ದಾರೆ. ಈ ‘ಗುಜರಾತ್ ಮಾದರಿ’ಯ ಪರಿಣಾಮ ಎಷ್ಟಿತ್ತೆಂದರೆ ದೇಶದೊಳಗಿನ ಆಗುಹೋಗುಗಳ ಬಗ್ಗೆ ಮೌನವಾಗಿದ್ದುಬಿಡುವ ಅಭ್ಯಾಸವನ್ನು ಬೆಳೆಸಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಸಹಿತ ಮೊದಲ ಬಾರಿಗೆ ‘ಗೋರಕ್ಷಕರ’ ವಿರುದ್ಧ, ದಲಿತರ ಪರವಾಗಿ ಹರಿಹಾಯ್ದಿದ್ದಾರೆ. ಅವರ ದೃಷ್ಟಿ ದಲಿತರ ಮತಗಳೆಡೆಗೇ ಇರಬಹುದು, ಮುಂದಿನ ಉತ್ತರ ಪ್ರದೇಶದ ಚುನಾವಣೆಗಳೆಡೆಗೇ ಇರಬಹುದು ಆದರೆ ಅವರ ಮಾತುಗಳಿಗೆ ಕಾರಣ ಗುಜರಾತ್ ದಲಿತರ ಪ್ರತಿಭಟನೆ. ಅವರ ಮಾತುಗಳಲ್ಲಿ ಗೋರಕ್ಷಕರಿಂದ ಅತಿ ಹೆಚ್ಚು ತೊಂದರೆಗೀಡಾದ ಮುಸ್ಲಿಮರ ಬಗ್ಗೆ ಯಾವ ಮಾತೂ ಇರಲಿಲ್ಲ ಎನ್ನುವುದನ್ನೂ ಗಮನಿಸಬಹುದು. ಇದಕ್ಕೆ ಮೋದಿಯವರ ಮತ್ತವರ ರಾಜಕೀಯ ಸಿದ್ಧಾಂತದ ಮನಸ್ಥಿತಿ ಎಷ್ಟು ಕಾರಣವೋ ಪ್ರತಿಭಟಿಸದ ಮುಸ್ಲಿಮರೂ ಅಷ್ಟೇ ಕಾರಣ.

ದಲಿತರು ಹಾಕಿಕೊಟ್ಟ ‘ಗುಜರಾತ್ ಮಾದರಿಯಿಂದ’ ಅತಿ ದೊಡ್ಡ ಪಾಠ ಕಲಿಯಬೇಕಿರುವುದು ನಮ್ಮ ದೇಶದ ಮುಸ್ಲಿಮರು. ಗೋರಕ್ಷಣೆಯ ನೆಪದಲ್ಲಿ ಅತಿ ಹೆಚ್ಚು ಹಿಂಸೆಗೀಡಾಗಿರುವುದು ಮುಸ್ಲಿಮರೇ. ಆದರೆ ಅಸಂಘಟಿತ ವಲಯದ ಮುಸ್ಲಿಮರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ ನಿದರ್ಶನಗಳು ತುಂಬಾ ಕಡಿಮೆ. ಪ್ರವಾದಿಗ್ಯಾರೋ ಏನೋ ಅಂದ್ರು ಅಂದಾಗ ಗುಂಪುಗೂಡುವ ಜನರಲ್ಲಿ ಹತ್ತು ಪರ್ಸೆಂಟಷ್ಟಾದರೂ ತಮ್ಮ ಕೆಲಸಕ್ಕೆ ಅಡ್ಡಿಯುಂಟುಮಾಡುವ ಜನರ ವಿರುದ್ಧದ ಪ್ರತಿಭಟನೆಯಲ್ಲಿ ಸೇರಿದ್ದರೆ ಮುಸ್ಲಿಮರ ಮೇಲೆ ಗೋರಕ್ಷಣೆಯ ನೆಪದಲ್ಲಿ, ಕದ್ದು ದನ ಸಾಗಿಸುತ್ತಾರೆ ಎಂಬ ನೆಪದಲ್ಲಿ ಹಲ್ಲೆಗಳು ನಿರಂತರವಾಗಿ ನಡೆಯುತ್ತಿರಲಿಲ್ಲ. ‘ಸತ್ತ ನಿಮ್ಮ ಮಾತೆಯನ್ನು ನೀವೇ ಎತ್ತಿ ಹೂತು ಹಾಕಿ’ ಎಂದ ಗುಜರಾತಿನ ದಲಿತರ ಮಾದರಿಯಲ್ಲೇ ಸುಖಾಸುಮ್ಮನೆ ಗೋರಕ್ಷಕರಿಂದ ಹೊಡೆತ ತಿಂದ ಮುಸ್ಲಿಮರು ಒಟ್ಟಾಗಿ ‘ಸರಿ ಬಿಡಿ ದನ, ಎಮ್ಮೆ, ಕೋಣ ಅಷ್ಟೇ ಅಲ್ಲ ಕುರಿ ಕೋಳೀನೂ ನಾವು ಕತ್ತರಿಸಿ ಮಾರುವುದಿಲ್ಲ. ನೀವೇ ಮಾಡ್ಕಳ್ಳಿ’ ಎಂದು ಘೋಷಿಸಿಬಿಟ್ಟಿದ್ದರೆ ಬಹುತೇಕ ಊರುಗಳ ಮಾಂಸಾಹಾರದ ವ್ಯಾಪಾರವೇ ಅಲ್ಲೋಲಕಲ್ಲೋಲವಾಗಿಬಿಡುತ್ತಿತ್ತು. ಪ್ರಭುತ್ವ ಏನನ್ನಾದರೂ ಸಹಿಸಿಕೊಳ್ಳುತ್ತದೆ, ಯಾವುದರ ಬಗ್ಗೆಯಾದರೂ ಮೌನವಾಗುಳಿದುಬಿಡುತ್ತದೆ. ಆದರೆ ವ್ಯಾಪಾರ - ವ್ಯವಹಾರ - ಆದಾಯದ ವಿಷಯದಲ್ಲಿ ಏರುಪೇರಾಗಿಬಿಟ್ಟರೆ ಸಹಿಸಿಕೊಳ್ಳುವುದಿಲ್ಲ. 
ಗುಜರಾತ್ ಮಾದರಿಯ ಹೋರಾಟ ಗುಜರಾತಿಗಷ್ಟೇ ಸೀಮಿತವಾಗುತ್ತದಾ ಅಥವಾ ಬೇರೆಡೆಗೂ ಹಬ್ಬುತ್ತದಾ? ಕಾದು ನೋಡಬೇಕು.

No comments:

Post a Comment