Aug 15, 2016

ಬಲಪಂಥೀಯರ ಕಪಟ ದೇಶಭಕ್ತಿಯೂ ನಮ್ಮ ಯುವ ಪೀಳಿಗೆಯೂ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
15/08/2016
ಕಳೆದ ಇಪ್ಪತ್ತೆಂಟು ತಿಂಗಳ ಬಾಜಪದ ಆಡಳಿತ ನನ್ನಲ್ಲಿ ತೀವ್ರವಾದ ಭ್ರಮನಿರಸನವನ್ನಾಗಲಿ, ನಿರಾಸೆಯನ್ನಾಗಲಿ ಉಂಟುಮಾಡಿಲ್ಲ, ವಿಷಾದದ ಹೊರತಾಗಿ! ಇವತ್ತೇನು ರಾಷ್ಟ್ರದಾದ್ಯಂತ ದಲಿತರ, ಅಲ್ಪಸಂಖ್ಯಾತರ ಮೇಲೆ ಅಮಾನವೀಯ ಹಲ್ಲೆಗಳು ನಡೆಯುತ್ತಿವೆಯೊ ಅವೆಲ್ಲವೂ ನಿರೀಕ್ಷಿತವೇ ಆಗಿದ್ದವು. ಇನ್ನು ಅಸಹಿಷ್ಣುತೆಯ ವಿಚಾರದಲ್ಲಿ ಬಾಜಪದಿಂದ ಇದಕ್ಕಿಂತ ಭಿನ್ನ ನಡೆಗಳನ್ನೇನಾದರು ಯಾರಾದರು ನಿರೀಕ್ಷಿಸಿದ್ದೇ ಆಗಿದ್ದರೆ ಅವರು ಇತಿಹಾಸದ ಗಂಧಗಾಳಿ ಗೊತ್ತಿಲ್ಲದವರೇ ಇರಬೇಕು. ಯಾಕೆಂದರೆ ಬಲಪಂಥೀಯ ನಿಲುವಿನ ಫ್ಯಾಸಿಸ್ಟ್ ಪಕ್ಷವೊಂದು ಹೇಗೆಲ್ಲ ನಡೆದುಕೊಳ್ಳಬಹುದೋ ಹಾಗೆಯೇ ಅದು ನಡೆದುಕೊಳ್ಳುತ್ತಿದೆ.

2014ರವರೆಗು ಅಂಬೇಡ್ಕರ್ ಬಗೆಗೆ ಯಾವುದೇ ಪ್ರೀತಿ, ಗೌರವಗಳನ್ನು ಇಟ್ಟುಕೊಂಡಿರದ ಬಾಜಪ ದಿಡೀರನೆ ಅವರ ಬಗ್ಗೆ ತೋರಿಸುವ ಕಾಳಜಿಯ ಹಿಂದಿರುವ ನೈಜ ಕಾರಣಗಳನ್ನೂ ಹಾಗು ಇದೀಗ ಎಚ್ಚೆತ್ತವರಂತೆ ಪ್ರದಾನಿ ಮೋದಿಯವರು ದಲಿತರ ಮೀಸಲಾತಿ ಹಕ್ಕುಗಳ ಬಗ್ಗೆ ಮಾತಾಡುತ್ತಿರುವುದರ ಹಿಂದಿನ ತಂತ್ರಗಾರಿಕೆಯ ಕುಟಿಲತೆಗಳನ್ನು ನಾವು ಸೂಕ್ಷ್ಮವಾಗಿ ಆದರೆ ತಣ್ಣಗಿನ ಮನಸ್ಥಿತಿಯಲ್ಲಿ ವಿಶ್ಲೇಷಿಸಿ ನೋಡಬೇಕಾದ ಐತಿಹಾಸಿಕ ಅನಿವಾರ್ಯತೆಯಿದೆ. ಸ್ವಲ್ಪ ಹಿಂದಕ್ಕೆ ಹೋಗಿ ನೋಡಿ:

ವಸಾಹತುಶಾಹಿಗಳ ವಿರುದ್ದ ನಡೆದ ನಮ್ಮ ಸುದೀರ್ಘ ಸ್ವಾತಂತ್ರ ಹೋರಾಟದಲ್ಲಿ ಬಾಜಪದ ಹಿಂದಿನ ತಲೆಮಾರಿನ ನಾಯಕರುಗಳಾಗಲಿ, ಅದರ ಸೋದರ ಸಂಘಟನೆಗಳಾಗಲಿ ಯಾವತ್ತೂ ಪಾಲ್ಗೊಂಡಿರಲಿಲ್ಲ. ಹೀಗಾಗಿ ಇವತ್ತು ಅದಕ್ಕೆ ಸ್ವಾತಂತ್ರ ಹೋರಾಟದ ಬಗ್ಗೆ ಮಾತನಾಡುವ ಹಕ್ಕಾಗಲಿ ಹಾಗು ಅದರ ನೇತೃತ್ವ ವಹಿಸಿದ್ದರು ಎಂದು ಹೇಳಿಕೊಳ್ಳಲು ಬೇಕಾದ ಒಬ್ಬನೇ ಒಬ್ಬ ನಾಯಕನೂ ಇಲ್ಲ. ಆದರೆ ಈ ಪೀಳಿಗೆಯ ಮುಂದೆ ಅದನ್ನು ಒಪ್ಪಿಕೊಳ್ಳಲು ತಯಾರಿರದ ಸಂಘಪರಿವಾರ ಒಂದಷ್ಟು ಐತಿಹಾಸಿಕ ವ್ಯಕ್ತಿಗಳನ್ನು ಹೈಜಾಕ್ ಮಾಡಿ ಅವರುಗಳು ತಮ್ಮ ಸಿದ್ದಾಂತಕ್ಕೆ ಪೂರಕ ನಿಲುವು ತಳೆದಿದ್ದರೆಂಬ ಭ್ರಮೆ ಹುಟ್ಟಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿಯೇ ಹಿಂದಿನಿಂದಲೂ ಅದು ಹುತಾತ್ಮ ಶ್ರೀ ಭಗತ್ ಸಿಂಗ್ ಅವರನ್ನು, ಸ್ವಾಮಿ ವಿವೇಕಾನಂದ ಅವರನ್ನು ತನ್ನ ಪಕ್ಷದ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳುವ ಎಲ್ಲ ನಾಟಕಗಳನ್ನೂ ಮಾಡಿದೆ. ಭಗತ್ ಸಿಂಗ್ ಒಬ್ಬ ಅಪ್ಪಟ ದೇಶಪ್ರೇಮಿಯಾಗಿದ್ದು ಅವನ ಹೆಸರನ್ನು ಬಳಸಿಕೊಂಡು ಯುವಜನೆಗೆ ಹಿಂದುತ್ವದ ಮತಾಂಧತೆಯ ಪಾಠ ಹೇಳುತ್ತ ಬಂದಿದೆ. ಹಾಗೆ ನೋಡಿದರೆ ಕ್ರಾಂತಿಕಾರಿ ಭಗತ್ ಸಿಂಗ್ ಸಮಾಜವಾದಿ ಆಶಯಗಳನ್ನು ಹೊಂದಿದ್ದ ದೇಶಪ್ರೇಮಿ ಯುವಕನಾಗಿದ್ದು ಸಮಾಜವಾದಿ ಗಣವಾದಿ ಸಂಘಟನೆಯ ಮೂಲಕ ಮಾರ್ಕ್ಸ್ ವಾದಿ ತತ್ವಗಳನ್ನು ಆಧರಿಸಿದ ರೈತ-ಕಾರ್ಮಿಕ ಹೋರಾಟಗಳ ಮೂಲಕ ಬ್ರಿಟೀಶರಿಂದ ಸ್ವಾತಂತ್ರ ಪಡೆಯಲು ಕ್ರಾಂತಿಯ ಹಾದಿ ಹಿಡಿದು ಹುತಾತ್ಮನಾದವನು. ಬಾಜಪದ ಹಿಂದುತ್ವದ ತತ್ವಗಳಿಗಾಗಲಿ, ಬಲಪಂಥೀಯ ಶಕ್ತಿಗಳ ಪ್ರಭಾವವಾಗಲಿ ಆತನ ಮೇಲಿರಲಿಲ್ಲ. ಆದರೆ ಇವತ್ತು ಬಾಜಪದವರು ಅವನ ಪೋಟೋಗೆ ಕುಂಕುಮ ಹಚ್ಚಿ ಇವನು ಹಿಂದು ರಾಷ್ಟ್ರದ ಕನಸು ಕಂಡವನೆಂದು, ಈತನ ಕನಸು ನನಸು ಮಾಡುವುದು ಇಂದಿನ ಯುವಕರ ಗುರಿಯಾಗಬೇಕೆಂದು ಹೇಳಿಕೊಳ್ಳುತ್ತ ತನ್ನ ವಿದ್ಯಾರ್ಥಿ ಸಂಘಟನೆಗಳ ಮೂಲಕ ಕಾಲೇಜು ಯುವಕ ಯುವತಿಯರನ್ನು ದಾರಿತಪ್ಪಿಸುತ್ತ ಬಂದಿದೆ. ಇನ್ನು ಈ ನೆಲದ ಕೆಳವರ್ಗಗಳನ್ನು ಶೋಷಿಸುತ್ತ ಬಂದ ಪುರೋಹಿತಶಾಹಿ ಶಕ್ತಿಗಳ ವಿರುದ್ದದ ನಿಲುವುಗಳನ್ನು ಹೊಂದಿದ್ದ ಸ್ವಾಮಿ ವಿವೇಕಾನಂದರವರನ್ನು ಬಾಜಪ ತನ್ನ ಪಕ್ಷದ ಪರಿಧಿಯೊಳಗೆ ಎಳೆತಂದು, ಅವರನ್ನು ಹಿಂದುತ್ವದ ಪುನರುಥ್ಥಾನದ ಪ್ರವರಕರೆಂದು ಘೋಷಿಸಿ ಯುವ ಜನತೆಯ ದಿಕ್ಕು ತಪ್ಪಿಸುತ್ತಲೇ ಬಂದಿದೆ. ಇದರಿಂದ ಪ್ರಭಾವಿತರಾದ ನಮ್ಮ ನೆಲದ ಲಕ್ಷಾಂತರ ತಳಜಾತಿಯ ಯುವಕರು ಸಂಘಪರಿವಾರದ ಮತಾಂಧ ಚಿಂತನೆಗಳನ್ನು ಅನುಷ್ಠಾನಗೊಳಿಸುವ ಆಯುಧಗಳಾಗಿ ಬಳಕೆಯಾಗುತ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂತಹ ಯುವಕರು ಬಾಜಪದ ಹಿಂದುತ್ವವನ್ನು ನಂಬಿದ್ದಾರೆಂದರೆ ನಮ್ಮ ಹಳ್ಳಿಗಳ ಯುವಕರಿಗೆ ವಿವೇಕಾನಂದರ, ಭಗತ್ ಸಿಂಗ್ ಅವರುಗಳ ನೈಜ ಚಿಂತನೆಯ ಪುಸ್ತಕಗಳನ್ನು ಕೊಟ್ಟು ಓದಿಸಿದರೂ, ಇವುಗಳು ಎಡಪಂಥೀಯರು ಬರೆದ ಕಪೋಲಕಲ್ಪಿತ ಇತಿಹಾಸದ ಸೃಷ್ಠಿಯೆಂದು ವಾದಿಸುತ್ತಾರೆ. ಬಾಜಪ ಮತ್ತದರ ಸಂಘಪರಿವಾರದವರ ಇಂತಹ ಸುಳ್ಳುಗಳು ಒಂದು ಪೀಳಿಗೆಯ ಯೋಚನಾದಾಟಿಯನ್ನೇ ಬದಲಾಯಿಸಿರುವುದನ್ನು, ಅದರ ಪರಿಣಾಮಗಳನ್ನು ನಾವೀಗಾಗಲೇ ಗಮನಿಸಿದ್ದೇವೆ.

ಇನ್ನು ಅಂಬೇಡ್ಕರ್ ವಿಷಯಕ್ಕೆ ಬರುವ ಮುಂಚೆ, ಮಹಾತ್ಮಗಾಂದಿಯವರ ಬಗೆಗಿನ ಇವರುಗಳ ನಿಲುವುಗಳನ್ನೇ ನೋಡಿ ಇವರೆಂದೂ ಗಾಂದಿಯನ್ನು ರಾಷ್ಟ್ರಪಿತ ಎಂದು ಒಪ್ಪಿಕೊಂಡವರಲ್ಲ. ಬದಲಿಗೆ ಅವರು ಮುಸ್ಲಿಮರನ್ನು ಓಲೈಸುತ್ತಾರೆಂದೂ, ದೇಶವಿಭಜನೆಗೆ ಅವರೇ ಕಾರಣವೆಂದು ಇವತ್ತಿಗೂ ಆರೋಪಿಸುತ್ತಾರೆ. ನನಗೆ ತಿಳಿದ ಹಾಗೆ ಬಾಜಪದ ಹಿಂದಿನ ಅವತಾರವಾದ ಜನಸಂಘ ಇರುವವರೆಗೂ ಇವರುಗಳು ತಮ್ಮ ಚುನಾವಣೆಗಳಲ್ಲಾಗಲಿ, ಪ್ರಚಾರ-ಪ್ರಣಾಳಿಕೆಗಳಲ್ಲಾಗಲಿ ಗಾಂದಿಯವರನ್ನ ಪ್ರಸ್ತಾಪಿಸಿದವರೇ ಅಲ್ಲ. ಎಂಭತ್ತರ ದಶಕದಲ್ಲಿ ಬಾಜಪದ ಉದಯವಾದ ನಂತರವೇ 1984 ರಲ್ಲಿ ಇವರು ಮೊತ್ತಮೊದಲಬಾರಿಗೆ ಗಾಂದಿವಾದಿ ಸಮಾಜವಾದಿ ಚಿಂತನೆಗಳನ ಬಗ್ಗೆ ಮಾತಾಡಿದ್ದರು. ಹೀಗೆ ಕಾಲಕಾಲಕ್ಕೆ ದೇಶದ ಹಿರಿಯ ಐತಿಹಾಸಿಕ ವ್ಯಕ್ತಿಗಳನ್ನು ತಮ್ಮವರೆಂದು ಬಿಂಬಿಸಿಕೊಳ್ಳುವ ಪ್ರಯುತ್ನ ನಡೆಸುತ್ತ ಬಂದಿರುವ ಬಾಜಪದವರು ನರೇಂದ್ರ ಮೋದಿಯವರ ಕಾಲದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಆರ್.ಎಸ್.ಎಸ್. ಅನ್ನು ನಿಷೇಧಿಸಿದ್ದ ಅಂದಿನ ಗೃಹ ಮಂತ್ರಿ ಸರದಾರ್ ವಲ್ಲಬಾಯಿ ಪಟೇಲರನ್ನು ತಮ್ಮವರೆಂದು ಬಿಂಬಿಸಿ, ಗುಜರಾತಿನ ನರ್ಮದಾ ಸರೋವರದಲ್ಲಿ ಅವರ ಬೃಹತ್ ಪ್ರತಿಮೆಯೊಂದನ್ನು ಸ್ಥಾಪಿಸಿ, ತಾವು ಮಾತ್ರ ದೇಶಭಕ್ತರೆಂಬ ಭ್ರಮೆಯೊಂದನ್ನು ಭಾರತೀಯರಲ್ಲಿ ಹುಟ್ಟು ಹಾಕಲು ಪ್ರಯತ್ನಿಸಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನೇ ಬಿಡದ ಬಾಜಪದವರಿನ್ನು ಕಾಂಗ್ರೆಸ್ಸನ್ನು ಕಠೋರವಾಗಿ ಟೀಕಿಸುತ್ತಿದ್ದ ಬಿ.ಆರ್.ಅಂಬೇಡ್ಕರ್ ಅವರನ್ನು ಬಿಟ್ಟಾರೆಯೇ? ಅದರ ವರಸೆಯನ್ನೂ ಒಂದಿಷ್ಟು ನೋಡಿ:

2014ರಲ್ಲಿ ಬಹುಮತಗಳಿಸಿ ಅಧಿಕಾರಕ್ಕೇರಿದ ಬಾಜಪ ತಾನು ಅಖಿಲ ಭಾರತೀಯ ಮಟ್ಟದಲ್ಲಿ ಬೇರು ಬಿಡಲು ದಲಿತ ಮತ್ತು ಆದಿವಾಸಿ ಸಮುದಾಯಗಳ ಮತ ಪಡೆಯುವುದು ಸಹ ಮುಖ್ಯವೆಂದು ಬಾವಿಸಿ ಆ ದಿಸೆಯಲ್ಲಿ ತನ್ನ ಕಾರ್ಯ ಪ್ರಾರಂಬಿಸಿತು. ಇದರ ಒಂದು ಭಾಗವಾಗಿಯೇ ಮೋದಿಯವರು ಕಳೆದ ಮಾರ್ಚ ತಿಂಗಳಲ್ಲಿ ತಾನು ಸಹ ಅಂಬೇಡ್ಕರ್ ಅವರ ಅನುಯಾಯಿಯೆಂದೂ, ಅವರ ಆದರ್ಶಗಳನ್ನು ಅನುಷ್ಠಾನಗೊಳಿಸುವುದೇ ತನ್ನ ಪರಮ ಕರ್ತವ್ಯವೆಂದು ಬಾಷಣ ಮಾಡಿ, ಈ ನಾಡಿನ ಶೇಕಡಾ 25ರಷ್ಟಿರುವ ದಲಿತರನ್ನು ಓಲೈಸುವ ಕ್ರಮಕ್ಕೆ ನಾಂದಿ ಹಾಡಿದ್ದರು. ಯಾರೇ ಹೇಳಿದರೂ ದಲಿತರ ಮೀಸಲಾತಿಯನ್ನು ನಿಲ್ಲಿಸುವುದಿಲ್ಲ, ಸ್ವತ: ಅಂಬೇಡ್ಕರವರೇ ಮತ್ತೆ ಹುಟ್ಟಿ ಬಂದು ಹೇಳಿದರೂ ತಾವು ಮಾತ್ರ ಮೀಸಲಾತಿಯನ್ನು ಸ್ಥಗಿತಗೊಳಿಸುವುದಿಲ್ಲವೆಂಬ ಉಗ್ರ ಹೇಳಿಕೆಯನ್ನು ನೀಡಿ ದಲಿತರ ಕಣ್ಣಲ್ಲಿ ಹೀರೋ ಆಗಲು ಹೊರಟಿದ್ದರು. ಇದಕ್ಕೆ ಕಾರಣ ಕೆಲವೇ ದಿನಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೋಹನ್ ಬಾಗವತ್ ಅವರು ಮೀಸಲಾತಿಯನ್ನು ಪುನರ್ ಪರಿಶೀಲಿಸುವ ಅಗತ್ಯವಿದೆಯೆಂದು ಹೇಳಿ ದಲಿತರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಾಗಲೇ ಬಿಹಾರದಲ್ಲಿ ವಿದಾನಸಭಾ ಚುನಾವಣೆಗಳು ಘೋಷಣೆಯಾಗಿದ್ದ ಹಿನ್ನೆಲೆಯಲ್ಲಿ, ಇಂತಹ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗುವ ಬೀತಿಯಿಂದಷ್ಟೇ ಮೋದಿಯವರು ಅಂಬೇಡ್ಕರರ ಭಕ್ತರಾಗಿ ಪರಿವರ್ತನೆಯಾಗಿದ್ದರು. ಅಂಬೇಡ್ಕರ್ ಅವರು ಬದುಕಿದ್ದಾಗಲು ಅವರೆಂದು ಹಿಂದೂ ಧರ್ಮದ ಪುರೋಹಿತಶಾಹಿಯನ್ನ ಮೆಚ್ಚಿದವರಲ್ಲ, ಬದಲಿಗೆ ಹಿಂದೂಧರ್ಮದ ಜಾತಿ ವ್ಯವಸ್ಥೆಯ ಹಾಗು ಅದರು ಅವಮಾನಗಳನ್ನು ತಿರಸ್ಕರಿಸಿ ಬೌದ್ದ ಧರ್ಮಕ್ಕೆ ಮತಾಂತರವಾಗಿದ್ದವರು. ಅಂತಹ ಅಂಬೇಡ್ಕರ್ ಅವರನ್ನೂ ಬಿಡದ ಬಾಜಪ ಇದೀಗ ತಾನು ಅಂಬೇಡ್ಕರ್ ಅವರ ಆಶಯಗಳನ್ನು, ಆದರ್ಶಗಳನ್ನು ಅನುಸರಿಸಲು ಬದ್ದವಾಗಿದ್ದೇನೆಂದು ಹೇಳಿಕೊಂಡರೆ ಅದನ್ನು ನಂಬಿ ಮತ ಕೊಡಲು ಇವತ್ತು ದಲಿತರೇನು ದಡ್ಡರಾಗಿ ಉಳಿದಿಲ್ಲ. ಹೀಗೆ ಅಧಿಕಾರದಾಸೆಗಾಗಿ ಎಂತಹ ಸುಳ್ಳುಗಳನ್ನಾದರು ಹೇಳಬಲ್ಲ ಬಾಜಪ ಇದೀಗ ಮತ್ತೊಂದು ಸುಳ್ಳನ್ನು ಹೇಳಿದೆ. ಇತ್ತೀಚೆಗೆ ಗುಜರಾತಿನ ಊನಾದಲ್ಲಿ ನಡೆದ ದಲಿತ ಯುವಕರ ಮೇಲಿನ ಹಲ್ಲೆಯ ತರುವಾಯ ದೇಶದಾದ್ಯಂತ ಹೆಚ್ಚುತ್ತಾ ಹೋದ ಪ್ರತಿಭಟನೆಗಳಿಂದಾಗಿ ಮುಂದಿನ ವರ್ಷದ ರಾಜ್ಯ ವಿದಾನಸಭೆಗಳ ಚುನಾವಣೆಗಳಲ್ಲಿ ಎಲ್ಲಿ ದಲಿತರು ತಮ್ಮ ವಿರುದ್ದವಾಗಿ ನಿಲ್ಲುತ್ತಾರೊ ಎಂಬ ಭಯದಿಂದ ಮೋದಿಯವರ ಸರಕಾರ ದಲಿತರ ಬಗ್ಗೆ ಇನ್ನಷ್ಟು ಮೊಸಳೆ ಕಣ್ಣೀರು ಸುರಿಸಲು ತೊಡಗಿದೆ. ಇದರ ಭಾಗವಾಗಿಯೇ ಅದೀಗ, ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಖಾಸಗಿ ಕ್ಷೇತ್ರದ ಮೀಸಲಾತಿಯ ಮಸೂದೆಯನ್ನು, ಮತ್ತು ಸರಕಾರಿ ನೌಕರಿಯಲ್ಲಿ ಪದೋನ್ನತಿಯಲ್ಲಿನ ಮೀಸಲಾತಿಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮಾತಾಡುತ್ತಿದೆ. ಜೊತೆಗೆ ಕಳೆದೊಂದು ವರ್ಷದಿಂದ ಕೇಂದ್ರದ ಅಸಹಿಷ್ಣುತೆಯ ನೀತಿಯನ್ನು ವಿರೋಧಿಸುತ್ತಲೇ ಬಂದ ಕಲಾವಿದರ,ಬರಹಗಾರರನ್ನು ಸಮಾದಾನ ಪಡಿಸಲು ಅಖಿಲ ಭಾರತೀಯ ದಲಿತ ಬರಹಗಾರರ ಸಮಾವೇಶವೊಂದನ್ನು ಆಯೋಜಿಸುವ ಬಗ್ಗೆ ಹೇಳಿಕೆ ನೀಡಲಾಗಿದೆ. 

ಇಷ್ಟಲ್ಲದೆ ಸ್ವಯಂಘೋಷಿತ ಹಿಂದುತ್ವದ ವಕ್ತಾರ ಸಂಘಟನೆಗಳ ಸದಸ್ಯರುಗಳು ಗೋರಕ್ಷಣೆಯ ನೆಪದಲ್ಲಿ ದಲಿತರ ಅಲ್ಪಸಂಖ್ಯಾತರ ಮಲೆ ನಡೆಸುತ್ತಿರುವ ಅಮಾನವೀಯ ಹಲ್ಲೆಗಳ ವಿರುದ್ದ ದೇಶದಾದ್ಯಂತ ರೂಪುಗೊಳ್ಳುತ್ತಿರುವ ಜನಾಭಿಪ್ರಾಯದಿಂದ ಬೆದರಿದ ಮೋದಿಯವರು ಇದೀಗ ಕಪಟ ಗೋರಕ್ಷಕರ ವಿರುದ್ದ ಕಠಿಣಕ್ರಮ ಕೈಗೊಳ್ಳುವುದಾಗಿ ಹೇಳಿದ್ದು, ಈ ಸಂಬಂದ ರಾಜ್ಯಸರಕಾರಗಳಿಗೆ ಪತ್ರ ಬರೆದಿದ್ದಾರೆ. ಮೇಲ್ನೋಟಕ್ಕೆ ಇದೊಂದು ಒಳ್ಳೆಯ ಬೆಳವಣಿಗೆಯೆನಿಸಿದರೂ ಆಳದಲ್ಲಿ ಗೂಡಾರ್ಥವೇ ಬೇರೆ ಇದೆ. ಗೋರಕ್ಷಣೆಯ ಬಗ್ಗೆ ಮಾತಾಡುವ ನಾಯಕರು ದಲಿತರ ಆಹಾರ ಹಕ್ಕುಗಳನ್ನು ಸಂರಕ್ಷಿಸುವ ಮಾತಾಡುವುದಿಲ್ಲ. ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕಿರುವ ಆಹಾರ ಸೇವನೆಯ ಮೂಲಭೂತ ಹಕ್ಕಿನ ಬಗ್ಗೆ ಮಾತಾಡದೆ ಕಪಟ ಗೋರಕ್ಷಕರ ಬಗ್ಗೆ ಮಾತಾಡುವ ಮೋದಿ ತಾವು ದಲಿತರ ಮೇಲಿನ ಹಲ್ಲೆಯನ್ನು ತಡೆಯುವಲ್ಲಿ ನೂರಕ್ಕೆ ನೂರರಷ್ಟು ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಲು ವಿಫಲರಾಗಿದ್ದಾರೆ. ಜೊತೆಗೆ ದಲಿತರ ಮೇಲಿನ ಹಲ್ಲೆಗೆ ಗೋರಕ್ಷಣೆಯೊಂದೇ ಕಾರಣವೆಂಬಂತೆ ಮಾತಾಡಿದ್ದಾರೆ. ಅದರ ಹೊರತಾಗಿಯೂ ದಲಿತರ ಮೇಲೆ ನಿತ್ಯ ನಡೆಯುತ್ತಿರುವ ಇತರೇ ಕಾರಣಗಳ ಹಲ್ಲೆಗಳ ಬಗ್ಗೆ ಮೋದಿಯವರು ಮಾತಾಡುತ್ತಿಲ್ಲ. 

ಬಾಜಪ ತಾನು ಗಳಿಸಿರುವ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ಇಡೀ ರಾಷ್ಟ್ರದಾದ್ಯಂತ ತನ್ನ ಬೇರುಗಳನ್ನು ಬಿಡಲು ಬೇಕಾದ ಮತಗಳನ್ನು ಸೆಳೆಯಲು ಅಗತ್ಯವಿರುವ ಎಲ್ಲ ತಂತ್ರಗಳನ್ನೂ ಹೆಣೆಯುತ್ತಿದೆ. ಅದರ ಒಂದು ಭಾಗವಾಗಿಯೇ ಇವತ್ತು ಬಾಜಪ ಅಂಬೇಡ್ಕರ್ ಅವರನ್ನು ತನ್ನ ಆದರ್ಶವೆಂದು ಹೇಳುತ್ತಿರುವುದು ಮತ್ತು ದಲಿತ ಮೀಸಲಾತಿಯನ್ನು ಮುಂದುವರೆಸುವ ನಾಟಕದ ಮಾತಾಡುತ್ತಿರುವುದು. ಅದರ ಇಂತಹ ಗುಪ್ತಕಾರ್ಯಸೂಚಿಗಳ್ನು ವಿಫಲಗೊಳಿಸಲು ಇರುವ ದಾರಿಯೆಂದರೆ: ನನಗನಿಸಿದ ಹಾಗೆ ನಮ್ಮ ತಳಜಾತಿಯ ಯುವಕರುಗಳು ಬಲಪಂಥೀಯ ಸಂಘಟನೆಗಳ ತೆಕ್ಕೆಗೆ ಜಾರದಂತೆ ನೋಡಿಕೊಳ್ಳುವುದಾಗಿದೆ. ನಮ್ಮೆಲ್ಲ ಪ್ರಗತಿಪರ ಸಂಘಟನೆಗಳು ನಿರ್ದಿಷ್ಠ ಗುರಿಯೊಂದಿಗೆ ನಮ್ಮ ಯುವ ಪೀಳಿಗೆಯನ್ನು ಈ ದಿಸೆಯಲ್ಲಿ ತಯಾರು ಮಾಡಬೇಕಾಗಿದೆ. ಯಾಕೆಂದರೆ ಇವತ್ತಿನ ದೇಶದ ಒಟ್ಟು ಮತದಾರರ ಪೈಕಿ ಶೇಕಡಾ 50ರಷ್ಟಿರುವ ಯುವಜನತೆಯನ್ನು ಬಳಸಿಕೊಳ್ಳುತ್ತಿರುವ ಬಾಜಪವನ್ನು ತಡೆಯಲು ಇದೊಂದೇ ಮಾರ್ಗವೆಂದು ನನ್ನ ನಂಬಿಕೆ.

No comments:

Post a Comment