ಸಾಂದರ್ಭಿಕ ಚಿತ್ರ |
ಕು.ಸ.ಮಧುಸೂದನನಾಯರ್
23/08/2016
ಸರಿಸುಮಾರು ಹನ್ನೆರಡು ವರ್ಷಗಳ ನಂತರ ಮತ್ತೆ ಅಹಿಂದ ಸುದ್ದಿ ಮತ್ತು ಸದ್ದು ಎರಡನ್ನೂ ಮಾಡುತ್ತಿದೆ. ವ್ಯತ್ಯಾಸವೆಂದರೆ 2005ರ ಸುಮಾರಿನ ಅಹಿಂದ ಇವತ್ತು ಇಲ್ಲವಾಗಿ ಕೇವಲ ಹಿಂದ ಮಾತ್ರ ರಾರಾಜಿಸುತ್ತಿದೆ. ಹಳೆಯ ಅಹಿಂದದಲ್ಲಿ ಅಲ್ಪಸಂಖ್ಯಾತರನ್ನು ಪ್ರನಿಧಿಸುವ ‘ಅ’ ವನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ. ಯಾಕೆಂದರೆ ಈ ಬಾರಿ ಹಿಂದ ಚಳುವಳಿಯನ್ನು ಮರು ಪ್ರಾರಂಬಿಸಲು ಹೊರಟಿರುವುದು ಸಂಘಪರಿವಾರದ ಕಟ್ಟಾಳುವೂ, ಬಾಜಪದ ಪ್ರಮುಖನಾಯಕರೂ ಆದ ಶ್ರೀ ಈಶ್ವರಪ್ಪನವರು. ಹಾಗಾಗಿ ಯಾವ ಅಲ್ಪಸಂಖ್ಯಾತ ವಿರೋಧಿ ನೀತಿಯ ಸಂಘಟನೆಗಳ ನೆರಳಲ್ಲಿಯೇ ತಮ್ಮ ತಮ್ಮ ರಾಜಕಾರಣ ಮಾಡುತ್ತಾ ಬಂದರೋ ಆ ಈಶ್ವರಪ್ಪನವರಿಂದ ಹಿಂದ ಚಳುವಳಿಯಲ್ಲಿ ಅಲ್ಪಸಂಖ್ಯಾತ ವರ್ಗವೂ ಸೇರಿರುತ್ತದೆಯೆಂದು ನಂಬುವುದು ಮೂರ್ಖತನವಾಗುತ್ತದೆ. ಹಾಗಿದ್ದರೆ ಇವತ್ತೇನು ಈಶ್ವರಪ್ಪನವರು ಸಂಗೊಳ್ಳಿರಾಯಣ್ಣ ಬ್ರಿಗೇಡ್ ಮೂಲಕ ಹಿಂದ ಚಳುವಳಿಯ ಬಗ್ಗೆ ಹೇಳುತ್ತಿದ್ದಾರೆಯೊ ಅದಕ್ಕೂ ಈ ಹಿಂದೆ ಜಾತ್ಯಾತೀತ ಜನತಾದಳದಲ್ಲಿದ್ದಾಗ ಶ್ರೀ ಸಿದ್ದರಾಮಯ್ಯನವರು ಅಹಿಂದ ಚಳುವಳಿಯನ್ನು ಪುನಶ್ಚೇತನಗೊಳಿಸಿದ್ದಕ್ಕೂ ಇರುವ ಮುಖ್ಯ ವ್ಯತ್ಯಾಸವನ್ನು ನಾವಿಲ್ಲಿ ಗಮನಿಸಬೇಕಾಗಿದೆ.
ಈ ಹಿಂದೆ ಶ್ರೀ ಸಿದ್ದರಾಮಯ್ಯನವರು ಅಹಿಂದವನ್ನು ಪುನಶ್ಚೇತನಗೊಳಿಸಲು ಅವರಿಗೊಂದು ರಾಜಕೀಯ ಅನಿವಾರ್ಯತೆಯಿತ್ತು. ಜಾತ್ಯಾತೀತ ಜನತಾದಳದಲ್ಲಿ ತಮ್ಮನ್ನು ಮುಖ್ಯಮಂತ್ರಿ ಮಾಡದೆ ಉಪಮುಖ್ಯಮಂತ್ರಿ ಪಟ್ಟಕ್ಕೆ ಸೀಮಿತಗೊಳಿಸಿದ ಮಾಜಿ ಪ್ರದಾನಿಯೂ, ಜಾತ್ಯಾತೀತ ಜನತಾದಳದ ಅದ್ಯಕ್ಷರೂ ಆದ ಶ್ರೀ ದೇವೇಗೌಡರ ವಿರುದ್ದ ಸಿಡಿದು ನಿಂತು ತನ್ನ ರಾಜಕೀಯ ಅಸ್ಥಿತ್ವವನ್ನು ಸಾಬೀತು ಪಡಿಸುವ ಜರೂರತ್ತು ಅವತ್ತು ಸಿದ್ದರಾಮಯ್ಯನವರ ಮುಂದಿತ್ತು.ಜೊತೆಗೆ ಸರದಿಯಂತೆ ಅಧಿಕಾರ ಅನುಭವಿಸುತ್ತಿದ್ದ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯದ ಪಾರುಪತ್ಯವನ್ನು ಕೊನೆಗಾಣಿಸಿ ಅಹಿಂದವನ್ನು ಅಧಿಕಾರದ ಸನಿಹಕ್ಕೆ ತರುವ ಒಂದು ಹೊಣೆಗಾರಿಕೆಯೂ ಅವರಿಗಿತ್ತು. ದುರಂತವೆಂದರೆ ಅವರು ಹೀಗೆ ಅಹಿಂದದ ಪರವಾಗಿ ನಿಂತಾಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ಹಿಂದುಳಿದ ವರ್ಗದವರೇ ಆಗಿದ್ದ ಶ್ರೀ ಧರ್ಮಸಿಂಗ್ ಅವರು. ಆದರೆ ಅವರು ತಮ್ಮ ಅಧಿಕಾರ ನಡೆಸುವಲ್ಲಿ ಸಂಪೂರ್ಣವಾಗಿ ಜನತಾದಳದ ದೇವೇಗೌಡರ ಕಪಿಮುಷ್ಠಿಯಲ್ಲಿ ಸಿಲುಕಿಹಾಕಿಕೊಂಡಿದ್ದರು.
ಹೀಗಾಗಿ ರಾಜಕೀಯವಾಗಿ ತಮಗಿರುವ ಜನಸಮುದಾಯದ ಬೆಂಬಲವನ್ನೂ, ಅಹಿಂದ ವರ್ಗಗಳ ತಾಕತ್ತನ್ನು ತೋರಿಸಲು ಸಿದ್ದರಾಮಯ್ಯನವರಿಗೆ ಬೇಕಾಗಿದ್ದ ವೇದಿಕೆಯೊಂದನ್ನು ರಚಿಸಿಕೊಳ್ಳುವ ಕಷ್ಟ ಎದುರಾಗಲಿಲ್ಲ. ಯಾಕೆಂದರೆ ಅಲ್ಲಿಗಾಗಲೇ ಕರ್ನಾಟಕದಲ್ಲಿ ತನ್ನ ಅಸ್ಥಿತ್ವವನ್ನು ಪಡೆದಿದ್ದ ಅಹಿಂದವನ್ನು ಪುನರುಜ್ಜೀವನಗೊಳಿಸಿದ ಶ್ರೀ ಸಿದ್ದರಾಮಯ್ಯನವರು ಅದಕ್ಕೊಂದು ತಾರಾ ಮೆರುಗನ್ನು ನೀಡಿದರು. ಅದಾಗಲೇ ಕಾಂಗ್ರೆಸ್ಸಿನಿಂದ ದೂರಸರಿದಿದ್ದ ಒಕ್ಕಲಿಗ ಮತ್ತು ಲಿಂಗಾಯಿತ ರಾಜಕೀಯ ಶಕ್ತಿಗಳೆದುರು ಅಹಿಂದ ಎದ್ದುನಿಂತು ಕಾಂಗ್ರೆಸ್ಸಿಗೆ ಬೆಂಬಲ ನೀಡುವ ಎಲ್ಲ ಸೂಚನೆಯನ್ನು ನೀಡಿತು. ನಂತರ ಸಿದ್ದರಾಮಯ್ಯನವರು ಕಾಂಗ್ರೆಸ್ಸಿಗೆ ಹೋದರು. 2013ರಲ್ಲಿ ನಡೆದ ರಾಜ್ಯವಿದಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಈ ಅಹಿಂದ ವರ್ಗದ ಬೆಂಬಲವೇ ಮುಖ್ಯ ಕಾರಣವಾಗಿತ್ತು.. ಅಲ್ಲಿಗೆ ಅಹಿಂದದ ಮೂಲಕ ಸಿದ್ದರಾಮಯ್ಯನವರು ಎರಡು ವಿಚಾರಗಳ್ನು ಸಾಧಿಸಿ ತೋರಿಸಿದ್ದರು. ಒಂದು, ಅಹಿಂದ ವರ್ಗಗಳು ಒಟ್ಟಾಗಿ ನಿಂತರೆ, ತಾವೇ ಒಂದು ಪ್ರಬಲ ಶಕ್ತಿಯಾಗಿ ಅಧಿಕಾರ ಹಿಡಿಯಬಹುದು ಎನ್ನುವುದು. ಎರಡನೆಯದು, ತಾವು ದೇವೇಗೌಡರು ಹಾಗು ಯಡಿಯೂರಪ್ಪನವರಂತೆ ಒಂದು ಜಾತಿಯ ನಾಯಕರಾಗಿರದೆ ಒಟ್ಟಾರೆ ಅಹಿಂದ ವರ್ಗಗಳ ನಾಯಕರಾಗಿದ್ದೇನೆಂಬುದು. ಹೀಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದ ಸಿದ್ದರಾಮಯ್ಯನವರಿಗೆ ಅಹಿಂದ ಅನಿವಾರ್ಯವಾಗಿತ್ತು,ನಿಜ. ತಮ್ಮ ರಾಜಕೀಯ ಶಕ್ತಿಯ ಪ್ರದರ್ಶನಕ್ಕೆ ಅದನ್ನು ವೇದಿಕೆಯನ್ನಾಗಿ ಬಳಸಿಕೊಂಡಿದ್ದರೂ ಸಹ, ಆ ಹೊತ್ತಿಗಾಗಲೇ ಅವರಿಗಿದ್ದ ಜನಬೆಂಬಲವನ್ನು ಅಹಿಂದ ಪರವಾಗಿ ಬಳಸಿಕೊಂಡು ಅಧಿಕಾರ ಅಹಿಂಣದ ವರ್ಗಗಳಿಗೆ ಅಧಿಕಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಸಿದ್ದರಾಮಯ್ಯನವರ ಸ್ವಾರ್ಥ ರಾಜಕಾರಣದ ಹೊರತಾಗಿಯೂ ಅಹಿಂದಕ್ಕೆ ಪ್ರಾಮಾಣಿಕವಾಗಿ ದುಡಿದ ಮತ್ತು ಆ ವರ್ಗಗಳಿಗೊಂದು ರಾಜಕೀಯ ಅಧಿಕಾರ ತಂದುಕೊಟ್ಟ ಕೀರ್ತಿಯೂ ಸೇರುತ್ತದೆ.
ಇನ್ನು ಇವತ್ತು ಮಾಜಿ ಉಪಮುಖ್ಯಮಂತ್ರಿಯೂ, ಬಾಜಪದ ನಾಯಕರೂ ಆದ ಶ್ರೀ ಈಶ್ವರಪ್ಪನವರ ಹಿಂದ ಚಳುವಳಿಯ ಬಗ್ಗೆ ನೋಡೋಣ: ಯಡಿಯೂರಪ್ಪನವರು ಬಾಜಪದ ರಾಜ್ಯಾದ್ಯಕ್ಷರಾದ ತಕ್ಷಣ ಇಡೀ ಬಾಜಪವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಕ್ರಿಯೆಗೆ ಚಾಲನೆ ನೀಡಿದರು. ಜೊತೆಗೆ ಈ ಹಿಂದೆ ತಾವು ಕೆಜೆಪಿ ಕಟ್ಟಿದಾಗ ತಮ್ಮೊಂದಿಗೆ ಬಾರದೆ ತಮ್ಮನ್ನು ಕಟುವಾಗಿ ಟೀಕಿಸಿದ್ದ ಬಾಜಪದ ನಾಯಕರುಗಳ ವಿರುದ್ದ ಸೇಡಿನ ಕ್ರಮಕ್ಕೆ ಮುಂದಾದರು. ಇದರ ಭಾಗವಾಗಿ ಅವರು ಪಕ್ಷದ ಪದಾಧಿಕಾರಿಗಳ ಪಟ್ಟಿ ರಚಿಸುವಾಗ ಬಾಜಪದ ಇತರೇ ಯಾವುದೇ ನಾಯಕರುಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಾಗು ತಾವು ಹಿಂದೆ ಕಟ್ಟಿದಾಗ ತಮ್ಮ ಜೊತೆಗಿದ್ದ ಕೆಜೆಪಿಯ ಬಹಳಷ್ಟು ನಾಯಕರುಗಳಿಗೆ ಬಾಜಪದ ಪದಾಧಿಕಾರಿಗಳನ್ನಾಗಿ ಮಾಡಿದ್ದರು. ಯಡಿಯೂರಪ್ಪನವರ ಆಪ್ತವಲಯಕ್ಕೆ ಮಾತ್ರ ಅನುಕೂಲಕರವಾಗಿದ್ದ ಇಂತಹದೊಂದು ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾದಾಗ ಇದನ್ನು ನಿರೀಕ್ಷಿಸಿದ್ದವರಿಗೂ ಅಚ್ಚರಿಯಾಗುವಷ್ಟು ಜನ ಯಡಿಯೂರಪ್ಪನವರ ಬೆಂಬಲಿಗರೇ ತುಂಬಿದ್ದರು. ಇದು ಬಾಜಪದೊಳಗಿನ ಯಡಿಯೂರಪ್ಪನವರ ವಿರೋಧಿಬಣಕ್ಕೆ ನುಂಗಲಾರದ ತುತ್ತಾಯಿತು. ಆದರೆ ಯಡಿಯೂರಪ್ಪನವರ ಹಟಮಾರಿ ಧೋರಣೆ ಹಾಗು ಕೋಪದ ಬಗ್ಗೆ ಅರಿವಿದ್ದ ನಾಯಕರ್ಯಾರು ಅವರ ವಿರುದ್ದ ದ್ವನಿಯೆತ್ತುವ ಧೈರ್ಯ ಮಾಡಲಿಲ್ಲ. ಆದರೆ ಬಾಜಪ ಅಧಿಕಾರದಲ್ಲಿ ಇದ್ದಾಗಲಿಂದಲೂ ಯಡಿಯೂರಪ್ಪನವರ ಬಗ್ಗೆ ನೇರಾನೇರಾ ಮಾತಾಡುತ್ತಿದ್ದ ಈಶ್ವರಪ್ಪನವರು ಮಾತ್ರ ಸುಮ್ಮನೇ ಕೂರಲಿಲ್ಲ. ಬದಲಿಗೆ ಇದರ ಬಗ್ಗೆ ಮಾಧ್ಯಮಗಳ ಎದುರೇ ಹೇಳಿಕೆ ನೀಡಿದರು. ಅವರ ಇಂತಹ ಆಕ್ರೋಶಕ್ಕೂ ಸೂಕ್ತ ಕಾರಣವಿತ್ತು. ಅದೆಂದರೆ ಕಳೆದ ವಿದಾನಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣರಾಗಿದ್ದ ರುದ್ರೇಗೌಡರನ್ನು ಶಿವಮೊಗ್ಗ ಜಿಲ್ಲಾ ಬಾಜಪದ ಅದ್ಯಕ್ಷರನ್ನಾಗಿ ಮಾಡಲಾಗಿತ್ತು. ಇದರಿಂದ ತಮ್ಮ ಜಿಲ್ಲೆಯಲ್ಲಿಯೇ ತಮಗೆ ಅವಮಾನ ಮಾಡಲಾಗಿದೆಯೆಂಬ ಕೋಪ ಈಶ್ವರಪ್ಪನವರನ್ನು ಉದ್ರಿಕ್ತಗೊಳಿಸಿದ್ದು ನಿಜ.
ಆದರೆ ವಾಸ್ತವ ಇದಕ್ಕಿಂತ ಭಿನ್ನವಿದೆ. ಯಾಕೆಂದರೆ ಪಕ್ಷದೊಳಗಿನ ಉಳಿದ ನಾಯಕರುಗಳ ಸಂಪೂರ್ಣ ಬೆಂಬಲವಿಲ್ಲದೆ ಈಶ್ವರಪ್ಪನವರು ಯಡಿಯೂರಪ್ಪನವರ ವಿರುದ್ದ ಈ ಮಟ್ಟದಲ್ಲಿ ದನಿಯೆತ್ತುವುದು ಕಷ್ಟದ ಮಾತು. ಇದಕ್ಕೆ ತಕ್ಕ ಹಾಗೆ ಈಗ ಈಶ್ವರಪ್ಪನವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ತಾವು ಹಿಂದ( ಹಿಂದುಳಿದ ಮತ್ತು ದಲಿತ) ಚಳುವಳಿಗೆ ಮರುಜನ್ಮ ನೀಡಿ ಅವರ ಅಭಿವೃದ್ದಿಗಾಗಿ ಹೋರಾಡುವ ಮಾತಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಈ ಸಮುದಾಯಗಳ ಅನೇಕ ನಾಯಕರುಗಳ ಜೊತೆ ಸಭೆಗಳನ್ನು ನಡೆಸುತ್ತಿದ್ದು, ಸಕ್ರಿಯವಾಗಿ ತಾವು ಬ್ರಿಗೇಡಿನ ಪದಾಧಿಕಾರಿಯಾಗದೇ ಹೋದರು ಹಿನ್ನೆಲೆಯಲ್ಲಿ ನಿಂತು ಅದರ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದಾರೆ.
ಸರಿಯಾಗಿ ವಿಶ್ಲೇಷಿಸಿ ನೋಡಿದರೆ ಈಶ್ವರಪ್ಪನವರ ಈ ನಡೆಯ ಹಿಂದೆ ಯಡಿಯೂರಪ್ಪನವರ ನಾಗಾಲೋಟಕ್ಕೆ ತಡೆಯೊಡ್ಡಲು ಸಂಘಪರಿವಾರ ನಡೆಸುತ್ತಿರುವ ಚಾಣಕ್ಯ ನಡೆಯ ಒಂದು ಭಾಗವೇ ಈಶ್ವರಪ್ಪನವರ ಹಿಂದ ಚಳುವಳಿಯ ಮಾತುಗಳು. ಯಾಕೆಂದರೆ ಲಿಂಗಾಯಿತರ ಮತಬ್ಯಾಂಕಿನ ಏಕೈಕ ಕಾರಣಕ್ಕೆ ಮತ್ತು ಮುಂದಿನ ವಿದಾನಸಭಾ ಚುನಾವಣೆಗಳಲ್ಲಿ ಅಧಿಕಾರ ಹಿಡಿಯುವ ಉದ್ದೇಶದಿಂದ ಯಡಿಯೂರಪ್ಪನವರಿಗೆ ರಾಜ್ಯಾದ್ಯಕ್ಷ ಪದವಿ ನೀಡಿದ ಬಾಜಪದ ಹೈಕಮ್ಯಾಂಡ್, ಇದೀಗ ಕೈ ಕೈ ಹಿಚುಕಿಕೊಳ್ಳುವ ಸನ್ನಿವೇಶ ನಿಮಾಣವಾಗಿದೆ. ಯಾಕೆಂದರೆ ಅದ್ಯಕ್ಷ ಪದವಿ ದೊರೆತ ತಕ್ಷಣವೇ ಯಡಿಯೂರಪ್ಪನವರ ರಾಜಾಕಾರಣದ ನಡೆಗಳೇ ಬದಲಾಗಿತ್ತು. ಉಳಿದೆಲ್ಲ ರಾಜ್ಯಮಟ್ಟದ ನಾಯಕರುಗಳನ್ನು ಪಕ್ಕಕ್ಕೆ ಸರಿಸಿ ತಮ್ಮ ಬೆಂಬಲಿಗರನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸುವ ಅವರ ಆಸೆಗೆ ಅನುಗುಣವಾಗಿಯೇ ಪದಾಧಿಕಾರಿಗಳ ಪಟ್ಟಿ ತಯಾರಾಗಿತ್ತು. ಜೊತೆಗೆ ಮುಂದಿನ ವಿದಾನಸಭೆಗೆ ಟಿಕೇಟು ನೀಡುವಾಗ ತಮ್ಮ ಬೆಂಬಲಿಗರಿಗೆ ಹೆಚ್ಚು ಸ್ಥಾನ ದೊರೆಯತುವಂತೆ ಮಾಡಲು ಸಹ ಈ ಪದಾಧಿಕಾರಿಗಳ ಪಟ್ಟಿ ಸಹಾಯಕವಾಗುವಂತಿತ್ತು. ಯಡಿಯೂರಪ್ಪನವರ ಈ ಮಹತ್ವಾಕಾಂಕ್ಷೆಯನ್ನು ಸಂಘಪರಿವಾರವಾಗಲಿ, ಬಾಜಪದ ಹೈಕಮ್ಯಾಂಡ್ ಅಮಿತ್ ಷಾ ಅಥವಾ ಪ್ರದಾನಮಂತ್ರಿ ನರೇಂದ್ರರ ಮೋದಿಯವರಾಗಲಿ ಸಹಿಸುವ ಪರಿಸ್ಥಿತಿಯಲ್ಲಿ ಇಲ್ಲ. ತನಗಿಂತ ದೊಡ್ಡದಾಗಿ ಬೆಳೆಯುವ ಯಾವ ನಾಯಕನನ್ನೂ ಸಂಘಪರಿವಾರ ಸಹಿಸುವುದಿಲ್ಲ. ಇನ್ನು ಕೇಂದ್ರದಲ್ಲಿಯೂ ಇದೇ ಮನಸ್ಥಿತಿ ಇದೆ. ಅಮಿತ್ ಷಾ ಮತ್ತು ಮೋದಿ ಜೋಡಿ ತಮಗಿಂತ ಗಟ್ಟಿಯಾಗಿ ಬೆಳೆಯುವ ಯಾವ ಪ್ರಾದೇಶಿಕ ನಾಯಕನನ್ನೂ ಅದು ಸಹನೆಯಿಂದ ಕಾಣುವುದಿಲ್ಲ. ಈ ಹಿನ್ನೆಲೆಯಲ್ಲಿಯೇ ಅವರು ರಾಜಸ್ಥಾನದ ಮುಖ್ಯಮಂತ್ರಿ ವಸುಂದರರಾಜ್ ಅವರ ವಿರುದ್ದ ಭಿನ್ನಮತೀಯ ದ್ವನಿಗಳನ್ನು ಬೆಂಬಲಿಸಿದ್ದರು ಆದರೆ ರಾಜ್ಯದ ಶಾಸಕರುಗಳನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿದ್ದ ವಸುಂದರರಾಜೆ ಭಿನ್ನಮತವನ್ನು ಹತ್ತಿಕ್ಕಿ ಮುಂದುವರೆಯುತ್ತಿದ್ದಾರೆ, ಇನ್ನು ಮದ್ಯಪ್ರದೇಶದಲ್ಲಿ ಅದ್ವಾನಿಯವರ ಬೆಂಬಲಿಗರಾದ ಶಿವರಾಜಸಿಂಗ್ ಸಹ ಸ್ಥಳೀಯವಾಗಿ ಬಲಾಢ್ಯರಾಗಿದ್ದು ಅಲ್ಲಿ ಷಾ-ಮೋದಿ ಜೋಡಿಗೆ ಮಾನ್ಯತೆಯಿಲ್ಲದಂತಾಗಿದೆ. ಈ ಕಾರಣಗಳಿಂದಾಗಿಯೇ ಮಹಾರಾಷ್ಟ್ರ, ಗುಜರಾತ್, ಗೋವಾ, ಅಸ್ಸಾಮಿನಲ್ಲಿ ಮುಖರಹಿತವಾದ, ಹೊಸನಾಯಕರುಗಳನ್ನು, ತಮಗೆ ಬೇಕಾದವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿರುವುದು. ಹಾಗಾಗಿ ಮುಂದೆ ಯಡಿಯೂರಪ್ಪನವರು ರಾಜಕೀಯವಾಗಿ ಬಲಾಢ್ಯರಾಗಿ ಬಿಡುತ್ತಾರೆಂಬ ಕಾರಣದಿಂದಲೇ ಅವರನ್ನು, ಅವರ ಓಟವನ್ನು ತಡೆಹಿಡಿಯುವ ದೃಷ್ಠಿಯಿಂದಲೇ ಈಶ್ವರಪ್ಪನವರ ಕೈಲಿ ಹಿಂದ ಚಳುವಳಿಯ ಮಾತಾಡಿಸುತ್ತ, ಬಾಜಪಕ್ಕೆ ಹಿಂದ ವರ್ಗದವರ ಬೆಂಬಲವು ಇದ್ದು ಲಿಂಗಾಯಿತರ ಮತವಷ್ಟೇ ಅನಿವಾರ್ಯವಲ್ಲ ಎಂಬುದನ್ನು ಯಡಿಯೂರಪ್ಪನವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಲಾಗುತ್ತಿದೆ. ಇಂತಹ ಕಾರಣದಿಂದಲೇ ಸ್ವತ: ಯಡಿಯೂರಪ್ಪನವರೇ ಸಿದ್ದಪಡಿಸಿ ಕಳಿಸಿದ್ದ ಕೋರ್ ಕಮಿಟಿಯನ್ನು ಸಹ ಹೈಕಮ್ಯಾಂಡ್ ತನಗಿಷ್ಟಬಂದಂತೆ ಸರಿಪಡಿಸಿ ಕಳಿಸಿ, ಯಡಿಯೂರಪ್ಪನವರಿಗೆ ಒಂದು ಎಚ್ಚರಿಕೆಯನ್ನೂ ನೀಡಿದೆ.
ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಯಡಿಯೂರಪ್ಪನವರ ಯೋಜನೆಯನ್ನು ತಡೆಹಿಡಿಯಲು ಸಂಘಪರಿವಾರ ಇಂತಹದೊಂದು ತಂತ್ರಗಾರಿಕೆ ಹೆಣೆದಿದ್ದು, ಸದ್ಯ ಈಶ್ವರಪ್ಪನವರು ಅದರ ಯಾಗದ ಕುದುರೆಯಾಗಿದ್ದಾರೆ. ಇದನ್ನು ಅರಿತೊ ಅರಿಯದೆಯೋ ಈಶ್ವರಪ್ಪನವರು ಯಡಿಯೂರಪ್ಪನವರ ವಿರುದ್ದದ ತಮ್ಮ ಹಿಂದ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದಾರೆ. ಪಕ್ಷದೊಳಗಿರುವ ವಿವಿದ ಮೋರ್ಚಾಗಳನ್ನು ಬಳಸಿಕೊಂಡು ಈಶ್ವರಪ್ಪನವರು ಹೋರಾಟಮಾಡಲೆಂಬ ಯಡಿಯೂರಪ್ಪನವರ ಮಾತಿಗೆ ಈಶ್ವರಪ್ಪನವರು ತಲೆ ಕೆಡಿಸಿಕೊಳ್ಳದೆ, ಸೆಪ್ಟೆಂಬರ್ ತಿಂಗಳ 21ನೇ ತಾರೀಖು ಹಾವೇರಿಯಲ್ಲಿ ಹಿಂದ ಸಮಾವೇಶ ಮಾಡುವುದಾಗಿ ಬಹಿರಂಗವಾಗಿಯೇ ಘೋಷಿಸಿದ್ದಾರೆ. ಇದೀಗ ಮೌನವಾಗಿರುವಂತೆ ಕಾಣುತ್ತಿರುವ ಯಡಿಯೂರಪ್ಪನವರು ಅಷ್ಟು ಸುಲಭಕ್ಕೆ ಈ ತಂತ್ರಗಳಿಗೆ ಮಣಿಯುವವರಲ್ಲ.
ಈಶ್ವರಪ್ಪನವರ ಹಿಂದ ಚಳುವಳಿಯ ತಂತ್ರಗಾರಿಕೆಯಲ್ಲಿ ಅ ಅಂದರೆ ಅಲ್ಪಸಂಖ್ಯಾತರನ್ನು ಬಿಡಲಾಗಿದ್ದು, ಇದು ಸಂಘಪರಿವರದ ಪ್ರಾಯೋಜಿತ ಚಳುವಳಿ ಎನ್ನುವುದನ್ನು ಇದೊಂದೇ ತೋರಿಸುತ್ತದೆ. ಅಲ್ಲದೆ ಸಿದ್ದರಾಮಯ್ಯನವರಷ್ಟು ಜನಬೆಂಬಲವಿರದ ಈಶ್ವರಪ್ಪನವರು ಯಡಿಯೂರಪ್ಪನವರನ್ನು ಹಣಿಯುವ ಮತ್ತು ತಮ್ಮನ್ನು ಪಕ್ಷದೊಳಗೆ ಗಟ್ಟಿ ಮಾಡಿಕೊಳ್ಳುವ ಏಕೈಕ ಉದ್ದೇಶದಿಂದಲೇ ಹಿಂದವನ್ನು ಬಳಸಿಕೊಳ್ಳುತ್ತಿರುವುದು ಸ್ವತ: ಹಿಂದ ವರ್ಗಗಳಿಗೆ ಗೊತ್ತಾಗಿದೆ. ಯಾಕೆಂದರೆ ಇದೀಗ ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದು, ಅವರ ಸಚಿವ ಸಂಪುಟದಲ್ಲಿ ಹಿಂದುಳಿದ ಮತ್ತು ದಲಿತ ವರ್ಗದವರುಗಳೇ ಬಹುಮುಖ್ಯವಾದ ಖಾತೆಗಳನ್ನು ಹೊಂದಿದ್ದಾರೆ. ಜೊತೆಗೆ ಅಲ್ಪಸಂಖ್ಯಾತರಿಗೂ ಸಾಠಕಷ್ಟು ಪ್ರಾತಿನಿದ್ಯ ದೊರೆತಂತಾಗಿದೆ. ಪರಿಸ್ಥಿತಿ ಹೀಗಿರುವಾಗ, ಸ್ವತ: ಅಹಿಂದ ವರ್ಗಗಳೇ ಅಧಿಕಾರ ಅನುಭವಿಸುತ್ತಿರುವಾಗ ಮತ್ತೆ ಹಿಂದ ವರ್ಗಗಳ ಅಭಿವೃದ್ದಿಗಾಗಿ ಈ ಚಳುವಬಳಿ ಎನ್ನುವ ಈಶ್ವರಪ್ಪನವರ ಮಾತು ಚಟುವಟಿಕೆಗಳು ಹಾಸ್ಯಾಸ್ಪದವಾಗಿವೆ.
No comments:
Post a Comment