ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
12/08/2016
ಬಿಕ್ಕಟ್ಟನ್ನು ಮತ್ತಷ್ಟು ತೀವ್ರವಾಗಿಸಿದ ಮತ್ತು ಬ್ರಿಟೀಷ್ ಆಳ್ವಿಕೆಯ ವಿರುದ್ಧ ಜನಸಮೂಹದ ಧಿಕ್ಕಾರವನ್ನಾಹ್ವಾನಿಸಿದ ಮತ್ತೊಂದು ಅಂಶವೆಂದರೆ, ಬ್ರಿಟೀಷರು ತಮಗೆ ಬೇಕಾಗಿದ್ದನ್ನು ತೆಗೆದುಕೊಳ್ಳುತ್ತಿದ್ದ ರೀತಿ. ಜನಸಮೂಹದ ಅತ್ಯಮೂಲ್ಯ ಚಿಕ್ಕ ಪುಟ್ಟ ಸಂಪನ್ಮೂಲಗಳನ್ನು ಅವರು ದೈಹಿಕವಾಗಿ ಲೂಟಿ ಮಾಡಿದ್ದಷ್ಟೇ ಅಲ್ಲದೆ, ಅದೇ ಸಮಯದಲ್ಲೆ ತಮಗೆ ಬೇಕಾದ ಕೂಲಿಯನ್ನೂ ಸಹಿತ ಬಲವಂತದಿಂದ ಮಾಡಿಸಿಕೊಳ್ಳುತ್ತಿದ್ದರು.
ಮೈಸೂರು ಕುಸಿತ ಕಂಡ ಕೆಲದಿನಗಳಲ್ಲಿ ವೆಲ್ಲೆಸ್ಲಿ ಬರೆಯುತ್ತಾನೆ: “ಸೈನ್ಯದ ಅಧಿಕಾರಿಗಳು ದೇಶದ ಜನರನ್ನು ಕೂಲಿಯಾಳುಗಳಾಗಿ ಕೆಲಸ ಮಾಡುವಂತೆ ಒತ್ತಾಯಿಸುತ್ತಾರೆ, ಸೈನಿಕರು ಅಟ್ಟಾಡಿಸುತ್ತಾರೆ, ಕೆಲಸವಾದ ನಂತರ ಕೂಲಿ ಕಾಸನ್ನೂ ಕೊಡದೆ ಕಳಿಸಿಬಿಡುತ್ತಾರೆ ಎಂದು ಪೂರ್ಣಯ್ಯ ಹಲವಾರು ದೂರುಗಳನ್ನು ನೀಡಿದ್ದರು”. (264)
ಕೆಲ ವರುಷಗಳ ನಂತರ ಮನ್ರೋ ಬರೆಯುತ್ತಾರೆ: “….ಕ್ಯಾಂಪಿನವರಲ್ಲಷ್ಟೇ ಅಲ್ಲ, ಎತ್ತು ಸಾಕಿದ ಎಲ್ಲರೂ ಮಾಡುತ್ತಿದ್ದ ಸಾಮಾನ್ಯ ಕೆಲಸವೆಂದರೆ ಕಂಪನಿಯ ಹೆಸರಿನಲ್ಲಿ ಸ್ಥಳೀಯರ ಬಳಿ ಬಲವಂತದಿಂದ ಹುಲ್ಲನ್ನು ತೆಗೆದುಕೊಳ್ಳುತ್ತಿದ್ದು, ಕೆಲವೊಮ್ಮೆ ಏನೂ ಹಣ ಕೊಡದೆ ತೆಗೆದುಕೊಳ್ಳುತ್ತಿದ್ದರು ಅಥವಾ ಹಣ ಕೊಟ್ಟರೂ ಅದು ಹುಲ್ಲಿನ ಬೆಲೆಗಿಂತ ಕಡಿಮೆಯಿರುತ್ತಿತ್ತು….” (265)
ಮತ್ತೆ ಮನ್ರೋ ಬರೆಯುತ್ತಾನೆ “ಸ್ಥಳೀಯ ವ್ಯಕ್ತಿಗಳು ಮತ್ತವರ ಸಂಪತ್ತನ್ನು” ವಸಾಹತು ಸೈನ್ಯದ ತುಕಡಿಗಳು ಬಲವಂತದಿಂದ ವಶಕ್ಕೆ ತೆಗೆದುಕೊಳ್ಳುತ್ತಿದ್ದರು. “ಈ ಪಾಪದ ಕೆಲಸದ ಬಗ್ಗೆ ಬಹಳ ಹಿಂದಿನಿಂದಲೇ ದೂರುಗಳು ಬರುತ್ತಿದ್ದವು, ನಮ್ಮ ಶಕ್ತಿ ಹೆಚ್ಚಿದಂತೆ ಇದು ಹೆಚ್ಚುತ್ತಾ ಹೋಯಿತು….ಬಹಳಷ್ಟು ದೇಶಗಳಲ್ಲಿ ಒಂದು ಉತ್ತಮ ರಸ್ತೆಯು, ಅದರ ಹತ್ತಿರವಿರುವ ಹಳ್ಳಿಗಳಿಗೆ ಅನುಕೂಲಕರವಾಗಿದ್ದರೆ, ಈ ದೇಶದಲ್ಲದು ತದ್ವಿರುದ್ಧವಾಗಿಬಿಟ್ಟಿದೆ. ರಸ್ತೆಗೆ ಹತ್ತಿರವಿರುವ ಹಳ್ಳಿಗಳು ಸಾಮಾನ್ಯವಾಗಿ ತನ್ನ ಕೆಲವು ನಿವಾಸಿಗಳನ್ನು ಕಳೆದುಕೊಳ್ಳುತ್ತದೆ ಅಥವಾ ಅಲ್ಲಿನ ಕೆಲಸಗಾರರು ಕೂಲಿಗಳಾಗಿ ನೇಮಕವಾಗುತ್ತಾರೆ ಮತ್ತು ಕೆಲವು ಸಂದರ್ಭದಲ್ಲಿ ಇಡೀ ರೈತಾಪಿ ವರ್ಗ ಈ ಉಪಟಳದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಳ್ಳಿಯನ್ನು ತೊರೆದು ರಸ್ತೆಯಿಂದ ತುಂಬ ದೂರವಿರುವ ಹೊಸ ಜಾಗದಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ”. (266)
ಈ ನೀತಿಗಳು ಟಿಪ್ಪು ಮತ್ತು ಹೈದರನ ನೀತಿಗಳಿಗಿಂತ ಸಂಪೂರ್ಣ ಭಿನ್ನವಾಗಿತ್ತು. ಈ ಇಬ್ಬರೂ ರಾಜರು ತಮ್ಮಾಳ್ವಿಕೆಯ ಬಹುಕಾಲವನ್ನು ಯುದ್ಧದಲ್ಲೇ ಕಳೆದರೂ ಕೂಡ, ತಮ್ಮ ಸೈನಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಜನರ ಮೇಲೆ ಶೋಷಣೆ ನಡೆಸಿದ ಉದಾಹರಣೆಗಳಿಲ್ಲ.
ಮೇವು ಮತ್ತು ಗಂಡಸರನ್ನು ಇಷ್ಟು ಸುಲಭವಾಗಿ ದಕ್ಕಿಸಿಕೊಳ್ಳುವುದು ಸಾಧ್ಯವಾದ ಮೇಲೆ, ರಣಹದ್ದಿನಂತಹ ಬಿಳಿ ಗಂಡಸರ ಸೈನ್ಯ ಮಹಿಳೆಯರನ್ನು ಬಿಟ್ಟೀತೆ?
ಭಾರತದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದವರೊಬ್ಬರು 1858ರಲ್ಲಿ ಬರೆಯುತ್ತಾರೆ: “ವಾಸ್ತವವೆಂದರೆ, ಇಡೀ ಯುರೋಪಿನಲ್ಲಾಗಲೀ ಅಥವಾ ಅಮೆರಿಕಾದಲ್ಲಾಗಲೀ ಬ್ರಿಟೀಷ್ ಸೈನ್ಯದಷ್ಟು ಕ್ರೂರವಾದ ಸೈನ್ಯವಿಲ್ಲ. ಉಳಿದೆಡೆ ಶಿಸ್ತಾಗಿ ಮತ್ತು ಸಂಪೂರ್ಣವಾಗಿ ರದ್ದು ಮಾಡಲಾಗಿರುವ - ಲೂಟಿ, ಹಿಂಸೆ, ಸಾಮೂಹಿಕ ಹತ್ಯೆ – ಬ್ರಿಟೀಷ್ ಸೈನಿಕನ ಹೆಮ್ಮೆಯ ವಿಶೇಷಾಧಿಕಾರ, ಜನ್ಮದಾತ ಹಕ್ಕಾಗಿತ್ತು.” (267)
ಋ. ರಾಜಕೀಯ ರೂಪ ಪಡೆದುಕೊಂಡ ಬಿಕ್ಕಟ್ಟು
ಹತ್ತೊಂಭತ್ತನೇ ಶತಮಾನದ ಎರಡನೇ ದಶಕದಲ್ಲಿ ಸರ್ವವ್ಯಾಪಿಯಾಗಿಬಿಟ್ಟಿದ್ದ ಬಿಕ್ಕಟ್ಟು ರಾಜಕೀಯ ರೂಪ ಪಡೆದುಕೊಳ್ಳುವುದಕ್ಕೆ ತಡವಾಗಲಿಲ್ಲ.
ಜನರು, ಅದರಲ್ಲೂ ರೈತರು, ಈ ಶತ್ರುಗಳ ವಿರುದ್ಧ ಸಶಸ್ತ್ರ ಹೋರಾಟ ಕೈಗೊಂಡರು, ಮೂರನೇ ದಶಕದ ಪ್ರಾರಂಭದೊಂದಿಗೆ, ಗೆರಿಲ್ಲಾ ಯುದ್ಧ ಪ್ರಾರಂಭವಾಗಿಬಿಟ್ಟಿತು; ವಸಾಹತು ಶಕ್ತಿಗಳ ಮತ್ತವರ ಊಳಿಗಮಾನ್ಯ ಆಳುಗಳ ವಿರುದ್ಧ ಇದರ ತೀರ್ವತೆ ಮತ್ತು ಛಲ ಎಷ್ಟಿತ್ತೆಂದರೆ ಇದು ಆ ಸಮಯದಲ್ಲಿ ಭಾರತ ಕಂಡ ಅತಿ ದೊಡ್ಡ ಬಂಡಾಯ ಹೋರಾಟವಾಗಿತ್ತು, ಬಹುಶಃ ಬ್ರಿಟೀಷರು ಭಾರತದ ಮಣ್ಣ ಮೇಲೆ ಕಾಲಿಟ್ಟ ನಂತರ ಕಂಡ ಅತಿ ದೊಡ್ಡ ಬಂಡಾಯ. ಇದನ್ನು ನಗರ ಬಂಡಾಯ ಎಂದು ಕರೆಯಲಾಗುತ್ತದೆ, ಕಾರಣ ಈ ಬಂಡಾಯದ ಕೇಂದ್ರಬಿಂದು ಮಲೆನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರನ್ನೊಳಗೊಂಡ ನಗರ ಕಂದಾಯ ವಿಭಾಗವಾಗಿತ್ತು.
ಜನಸಮೂಹದ ಸಶಸ್ತ್ರ ಹೋರಾಟ ವ್ಯಾಪಕವಾಗುತ್ತಿದ್ದಂತೆ ಆಳುವ ವರ್ಗಗಳಲ್ಲಿ ತೀರ್ವತರವಾದ ಬಿಕ್ಕಟ್ಟು ಪ್ರಾರಂಭವಾಯಿತು ಮತ್ತಿದು ವಸಾಹತುಶಾಹಿಗೆ ಕೈಗೊಂಬೆ ರಾಜರೊಂದಿಗಿನ ತನ್ನ ಮೈತ್ರಿಯನ್ನು ಮತ್ತಷ್ಟು ತೀಕ್ಷ್ಣ ದೃಷ್ಟಿಯೊಂದಿಗೆ ವಿಮರ್ಶಿಸುವಂತೆ ಮಾಡಿತು. 1831ರಲ್ಲಿ ಜನಸಮೂಹ ದಂಗೆಯೆದ್ದ ಕೆಲವೇ ವಾರಗಳಲ್ಲಿ, ಮೈಸೂರು ರಾಜನ ಆಳ್ವಿಕೆಯನ್ನು ಕೊನೆಗಾಣಿಸಿದ ಕಂಪನಿ, ಬೆಂಗಳೂರಿನಲ್ಲಿದ್ದ ತನ್ನ ಕಮಿಷನರ್ರುಗಳ ಮೂಲಕ ಇಡೀ ಸಾಮ್ರಾಜ್ಯದ ಆಳ್ವಿಕೆಯನ್ನು ವಹಿಸಿಕೊಂಡಿತು. ಹೀಗೆ ಮಾಡುವುದರ ಮೂಲಕ, ಜನರ ಒಳಿತಿಗಾಗಿ ಕೆಟ್ಟ ಆಳ್ವಿಕೆ ನೀಡಿದ ಕೈಗೊಂಬೆ ರಾಜನನ್ನು ನಾವು ಶಿಕ್ಷಿಸಿದ್ದೇವೆ ಎನ್ನುವ ಅಭಿಪ್ರಾಯ ಮೂಡುವಂತೆ ಮಾಡಿದರು. ವೆಲ್ಲೆಸ್ಲಿ 1799ರಲ್ಲಿ ಮಾಡಿದ ವ್ಯವಸ್ಥೆಗಳನ್ನು ಈಗ ಜಾರಿಗೆ ತರಲಾಗಿತ್ತು ಮತ್ತದನ್ನು ವಸಾಹತುಶಾಹಿ ಪರೀಕ್ಷಿಸುತ್ತಿತ್ತು. ಈ ‘ಸರಕಾರದ ಬದಲಾವಣೆಯ’ ಹಿಂದಿದ್ದ ಸಂಗತಿಗಳಲ್ಲೊಂದರ ಹಿಂದಿದ್ದ ವಾಸ್ತವದ ಬಗ್ಗೆ ಮನ್ರೋ ಚೆನ್ನಾಗಿ ವಿವರಿಸುತ್ತಾನೆ: “ಯುರೋಪಿಯನ್ನರಲ್ಲಿ ಭ್ರಷ್ಟಾಚಾರದ ಕೆಲವೊಂದು ಸಂದರ್ಭಗಳಿದ್ದವು…. ಭ್ರಷ್ಟಾಚಾರವಿದ್ದರೆ ಅದು ನಮ್ಮಲ್ಲಿರುವುದೇ ಸೊಗಸು (ಅಂದರೆ ರಹಸ್ಯವಾಗಿ) ಯಾಕೆಂದರೆ ಜನರು ಆ ಪಾಪದ ಆರೋಪವನ್ನು ಸ್ಥಳೀಯರ ಮೇಲೆಯೇ ಹೊರಿಸಿಬಿಡುತ್ತಾರೆ: ನಮ್ಮ ಬಗ್ಗೆ, ನಮ್ಮ ವ್ಯಕ್ತಿತ್ವದ ಬಗ್ಗೆ ಆ ಜನರಲ್ಲಿ ಉನ್ನತ ಉತ್ತಮ ಭಾವವೇ ನೆಲೆಸಿರುತ್ತದೆ, ಈ ಭಾವವೇ ನಮ್ಮಧಿಕಾರವನ್ನುಳಿಸಲು ಇರುವ ಶಕ್ತಿಯುತವಾದ ಬೆಂಬಲ”. (268)
ನಿಗ್ರಹಕ್ಕಾಗಿ ಒಪ್ಪಂದದ ಮತ್ತೊಂದು ಕಲಮನ್ನು ಜಾರಿಗೊಳಿಸಲಾಯಿತು. ಆದರೆ ಹಾಗೆ ಮಾಡುವಾಗ, ಕೇಂದ್ರೀಕೃತ ಬ್ರಿಟೀಷ್ ಸರಕಾರ ಮತ್ತು ವಿವಿಧ ರಾಜ್ಯದ ರಾಜವಂಶಸ್ಥರ ನಡುವೆ ನಿಗ್ರಹಕ್ಕಾಗಿ ಒಪ್ಪಂದವನ್ನು ಜೀವಂತವಾಗಿಡಲಾಯಿತು. ಇದು 150 ವರುಷಗಳಿಗೂ ಹೆಚ್ಚು ಕಾಲ ಅಸ್ತಿತ್ವದಲ್ಲಿತ್ತು ಮತ್ತಿದನ್ನು ‘ಸ್ವತಂತ್ರ’ ಭಾರತದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ನಡುವಿನ ಸಂಬಂಧಕ್ಕಾಗಿ ಉಳಿಸಿಕೊಳ್ಳಲಾಯಿತು ಎಂದು ಹೇಳಲಾಯಿತು. ಸ್ವತಂತ್ರ ಭಾರತದ ರಾಜ್ಯಗಳ ರಾಜ್ಯಪಾಲರು ಹಳೆಯ ಬ್ರಿಟೀಷ್ ರೆಸಿಡೆಂಟರ ಪಾತ್ರವನ್ನಭಿನಯಿಸುತ್ತಿದ್ದಾರೆ ಮತ್ತು ಕೇಂದ್ರ ಸರಕಾರ ಅತಿ ದೊಡ್ಡ ಮಧ್ಯವರ್ತಿಯಾಗಿ ಕೆಲಸ ಮಾಡುತ್ತ ಭಾರತದ ಬ್ರಿಟೀಷ್ ಸರಕಾರದ ಬೂಟಿನಲ್ಲಿ ಕಾಲಿರಿಸಿದೆ. ನಿಗ್ರಹಕ್ಕಾಗಿ ಒಪ್ಪಂದ ಈಗಲೂ ಭಾರತದ ಸಂವಿಧಾನದ ಮೂಲಕ ಜಾರಿಯಲ್ಲಿದೆ, ಅದನ್ನು ಸಂಪೂರ್ಣವಾಗಿ ಮರೆತಿಲ್ಲ. ಅದು ಜೀವಂತವಿದೆ, ಭಾರತೀಯರ ಮೇಲೆ ಛಡಿ ಏಟು ನೀಡುತ್ತಿದೆ, ಕೇಂದ್ರ ಮತ್ತು ರಾಜ್ಯ ಸರಕಾರದ ನಡುವಿನ ಸಂಬಂಧದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಮೇಕಿಂಗ್ ಹಿಸ್ಟರಿಯ ಮೂರನೇ ಸಂಫುಟದಲ್ಲ ನೋಡೋಣ.
ವರುಷಗಳ ಕಾಲದಿಂದ ಈ ಬಿಕ್ಕಟ್ಟನ್ನು ಸೃಷ್ಟಿಸಲು ನೆರವಾದ ಶತ್ರುವೇ ಮೈಸೂರಿನ ಸ್ವಾತಂತ್ರ್ಯ ಹರಣದಿಂದ ಹೆಚ್ಚಿನ ಲಾಭವನ್ನು ಮಾಡಿಕೊಂಡಿದ್ದು; ಪ್ರತಿಯೊಂದನ್ನೂ ರೆಸಿಡೆಂಟ್ ಮುಖಾಂತರ ನಿರ್ದೇಶಿಸಲಾಗುತ್ತಿತ್ತು, ರೆಸೆಡೆಂಟ್ ಪ್ರಮುಖ ಪಾತ್ರಧಾರಿಯಾಗಿದ್ದ. ಈಗ ರೆಸಿಡೆಂಟ್ ಬ್ರಿಟೀಷ್ ಲೂಟಿಯನ್ನು ಮರೆಮಾಚಿದ, ಕೈಗೊಂಬೆ ರಾಜನ ಕಡೆ ಕೈ ತೋರಿದ, ತನ್ನ ರಕ್ತವಂಟಿದ ಕೈಗಳನ್ನು ಮರೆಮಾಚುತ್ತ. ಆದರೂ ಬಂಡಾಯವನ್ನೆದುರಿಸಿದ ಬಿಳಿ ಅಧಿಕಾರಿಗಳು, ರೈತ ಸಮೂಹವನ್ನು ಶೋಷಿಸುತ್ತ, ನೂರಾರು ಸಂಖೈಯಲ್ಲಿ ಕೊಲ್ಲುತ್ತ, ರೆಸಿಡೆಂಟರು ಕಾಪಾಡಿದ್ದ ರಹಸ್ಯಕ್ಕೆ ದ್ರೋಹ ಮಾಡುತ್ತ, ರಾಜ್ಯದ ನಿಜವಾದ ವ್ಯಕ್ತಿತ್ವವನ್ನು ಮತ್ತು ವಸಾಹತು ಆಳ್ವಿಕೆಯ ಪ್ರೇತಕಳೆಯನ್ನು ಬಹಿರಂಗಗೊಳಿಸಿದರು.
ಮೇಕಿಂಗ್ ಹಿಸ್ಟರಿ ಎರಡನೇ ಸಂಪುಟದ ಮೊದಲನೇ ಭಾಗದ ಮುಕ್ತಾಯ
ಮುಂದಿನ ವಾರ:
ಎರಡನೇ ಭಾಗ - ವಸಾಹತುಶಾಹಿಯ ವಿರುದ್ಧ ನಡೆದ ಖ್ಯಾತ ಸಶಸ್ತ್ರ ಹೋರಾಟ
No comments:
Post a Comment