Aug 19, 2016

ಮೇಕಿಂಗ್ ಹಿಸ್ಟರಿ: ಎರಡನೇ ಭಾಗ - ವಸಾಹತುಶಾಹಿಯ ವಿರುದ್ಧ ನಡೆದ ಖ್ಯಾತ ಸಶಸ್ತ್ರ ಹೋರಾಟ (1800-1857)

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
19/08/2016
ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆಯ ತೀವ್ರತೆ ಜನರ ಕಡೆಯಿಂದ ಆ ತೀವ್ರತೆಯನ್ನು ಸರಿಗಟ್ಟುವ ಪ್ರತಿರೋಧವನ್ನು ಬಯಸಿತು. ಈ ಸತತ ಪ್ರತಿರೋಧವನ್ನು ಮತ್ತು ತನ್ನಾಡಳಿತಕ್ಕೆ ಎದುರಾಗುವವರನ್ನು ಸಾಧ್ಯವಿರುವ ಎಲ್ಲಾ ರೀತಿಯ ಕ್ರಮಗಳಿಂದ ದಮನಿಸುವುದರಿಂದಷ್ಟೇ ಬ್ರಿಟೀಷ್ ರಾಜ್ ತನ್ನ ಲೂಟಿಯ ಆಳ್ವಿಕೆಯನ್ನು ಉಳಿಸಿಕೊಳ್ಳಬಹುದಿತ್ತು. ಅದೆಷ್ಟೇ ಪ್ರಯತ್ನಿಸಿದರೂ, ಕರ್ನಾಟಕದ ಜನರು ಬ್ರಿಟೀಷ್ ವಸಾಹತುಶಾಹಿಗೆ ತಮ್ಮನುಕೂಲಕ್ಕೆ ಮತ್ತು ಶಾಂತಿಯಿಂದ ಲೂಟಿ ಮಾಡಲು ಅವಕಾಶ ನೀಡಲಿಲ್ಲ. 

ಹೈದರ್ ಮತ್ತು ಟಿಪ್ಪು ವಿದೇಶಿಗರು ನಮ್ಮ ನೆಲದಲ್ಲಿ ಕಾಲಿಡಲು ಪ್ರಯತ್ನಿಸಿದ್ದಕ್ಕೇ ವಸಾಹತುಶಾಹಿಯ ವಿರುದ್ಧ ಧೀರೋದ್ಧಾತವಾಗಿ ಹೋರಾಡಿದ್ದನ್ನು ನಾವೀಗಾಗಲೇ ನೋಡಿದ್ದೇವೆ. ಈ ನಲವತ್ತು ವರುಷಗಳ ವಸಾಹತುಶಾಹಿ ವಿರೋಧಿ ಮೈಸೂರು ಆಳ್ವಿಕೆಯನ್ನೊರತುಪಡಿಸಿದರೆ, 1857ರವರೆಗೆ, ಶತ್ರುಗಳ ವಿರುದ್ಧ ಸಶಸ್ತ್ರ ಹೋರಾಟಗಳು ಸತತವಾಗಿ ನಡೆಯುತ್ತಿದ್ದವು, ಈ ಹೋರಾಟಗಳು ಕರ್ನಾಟಕಕ್ಕೆ ಯುರೋಪ್ ಆಕ್ರಮಣಕಾರರ ವಿರುದ್ಧದ ಪ್ರತಿರೋಧದ ಶ್ರೀಮಂತ ಇತಿಹಾಸವನ್ನು ನೀಡಿತು. 1799ರಲ್ಲಿ ಟಿಪ್ಪುವಿನ ಸರಕಾರ ನಾಶಗೊಂಡ ಕೆಲವು ದಿನಗಳಲ್ಲೇ ಶುರುವಾದ ಹೋರಾಟ, 1857ರವರೆಗೆ ಮುಂದುವರೆಯಿತು; ಇಡೀ ಭಾರತದಲ್ಲಿ ಆಕ್ರಮಣಕೋರರ ವಿರುದ್ಧ ನಡೆದ ಹೋರಾಟಗಳ ಜೊತೆಗೂಡಿತು. ನಮ್ಮ ಬಳಿಯಿರುವ ದಾಖಲೆಗಳು, ಸಶಸ್ತ್ರ ಹೋರಾಟ 1799 – 1802ರಲ್ಲಿ ನಡೆಯಿತೆಂದು ತಿಳಿಸುತ್ತದೆ, 1806, 1810-11, 1819, 1820, 1824ರಲ್ಲಿ ಎರಡು, 1829-30. 1830, 1837, 1840, 1841, 1849, 1852 ಮತ್ತು 1857-58ರಲ್ಲಿ ಕೆಲವು ಹೋರಾಟಗಳು ನಡೆದವು. ನಾವೀಗ ನೋಡಿದಂತೆ, ಹೋರಾಟಗಳು ಸಮನಾಗಿ ಹರಡಿದ್ದವು ಮತ್ತು ಕೆಲವು ವರುಷಗಳ ಅಂತರದಲ್ಲಿ ಗಂಭೀರ ಹೋರಾಟ ನಡೆಯುತ್ತಿತ್ತು. 

ಈ ಹೋರಾಟಗಳಲ್ಲಿ ಮೂರು ವಿಧ. ಮೊದಲನೆಯ ಹೋರಾಟ ಟಿಪ್ಪುವಿನ ಮಾಜಿ ಸೈನ್ಯದ್ದು. ಸೈನಿಕರಲ್ಲಿದ್ದ ರಾಷ್ಟ್ರೀಯತೆ ಭಾವನೆಯನ್ನು ಉಪಯೋಗಿಸಿಕೊಂಡು ಹೆಚ್ಚಿನ ಸಂಖೈಯ ಜನರನ್ನು ಒಟ್ಟುಗೂಡಿಸಿದರು. ಈ ವಿಧಾನದ ಹೋರಾಟದಲ್ಲಿ ಸೈನಿಕರೇ ಪ್ರಮುಖ ಹೋರಾಟ ಶಕ್ತಿ. ಈ ರೀತಿಯ ಸಶಸ್ತ್ರ ಹೋರಾಟ ಮೊದಲಿಗೆ ಪ್ರಾರಂಭವಾದದ್ದಷ್ಟೇ ಅಲ್ಲ, ಮೊದಲಿಗೆ ಕೊನೆಯಾಗಿದ್ದೂ ಹೌದು; ಮೈಸೂರಿನಲ್ಲಿ ವಿದೇಶಿ ಆಳ್ವಿಕೆ ಪ್ರಾರಂಭವಾದ ಮೊದಲ ದಶಕದ ಕೆಲವು ವರುಷಗಳಷ್ಟೇ ಈ ಹೋರಾಟ ಚಾಲ್ತಿಯಲ್ಲಿತ್ತು. ಹಾಗಾಗ್ಯೂ, ಈ ಹೋರಾಟದ ಕ್ಷೀಣ ಪ್ರತಿಧ್ವನಿಯನ್ನು ಆಗಷ್ಟ್ 1857ರಲ್ಲಿ ಬ್ರಿಟೀಷ್ ಇಂಡಿಯನ್ ಸೈನ್ಯದ ಬೆಳಗಾವಿ ತುಕಡಿ ಯೋಜಿಸಿದ ಬಂಡಾಯದಲ್ಲಿ ಕಾಣಬಹುದು. ಈ ಯೋಜನೆ ವಿಫಲವಾಯಿತು ಮತ್ತದರ ಮುಖಂಡರನ್ನು ಗಲ್ಲಿಗೇರಿಸಲಾಯಿತು. (1A) 

ಎರಡನೇ ವಿಧದ ಹೋರಾಟವನ್ನು ಮುನ್ನಡೆಸಿದ್ದು ಊಳಿಗಮಾನ್ಯ ದೊರೆಗಳು. ಈ ಮಾಜಿ ಪಾಳೇಗಾರರು ತಮ್ಮಲ್ಲಿದ್ದ, ತಮ್ಮ ಸೇವೆಗೈದಿದ್ದ ಶಸ್ತ್ರದಾರಿಗಳನ್ನು ಸಜ್ಜುಗೊಳಿಸಿ ಊಳಿಗಮಾನ್ಯ ಸೈನ್ಯವನ್ನು ಕಟ್ಟಿದರು. 

ಮೂರನೇ ವಿಧದ ಹೋರಾಟ, ನಿಧಾನಕ್ಕೆ ರೂಪು ಪಡೆದುಕೊಂಡರೂ ಹೆಚ್ಚು ಕಾಲ ಉಳಿದ ಹೋರಾಟ, ಈ ಹೋರಾಟಗಳನ್ನು ಮುನ್ನಡೆಸಿದವರು ರೈತ ಸಮೂಹದ ಸದಸ್ಯರು ಮತ್ತಿವರ ಹೋರಾಟದ ಶಕ್ತಿ ಶೋಷಣೆಗೊಳಗಾದ ರೈತ – ಕಾರ್ಮಿಕರಾಗಿದ್ದರು. 

ಕೆಲವು ಇತಿಹಾಸಕಾರರು, ಉದಾಹರಣೆಗೆ ಶ್ಯಾಮ್ ಭಟ್ ರಂತವರು, ಊಳಿಗಮಾನ್ಯ ದೊರೆಗಳ ಮುಂದಾಳತ್ವದ ಹೋರಾಟಗಳನ್ನು ವಸಾಹತುಶಾಹಿ ವಿರೋಧಿ ಹೋರಾಟವಲ್ಲ ಎಂದು ಪರಿಗಣಿಸುತ್ತಾರೆ, ಯಾಕೆಂದರೆ ಇದರ ಮುಂದಾಳತ್ವ ವಹಿಸಿದ್ದವರು ಮಾಜಿ ಪಾಳೇಗಾರರು ಮತ್ತವರ ಏಕೈಕ ಗುರಿ ತಾವು ಕಳೆದುಕೊಂಡಿದ್ದ ಊಳಿಗಮಾನ್ಯತೆಯ ಸೌಕರ್ಯಗಳನ್ನು ಗಳಿಸುವುದಾಗಿತ್ತೇ ಹೊರತು ಮತ್ತೇನಲ್ಲ. ಆದ್ದರಿಂದ ಈ ಹೋರಾಟಗಳನ್ನು ಶ್ಯಾಮ್ ಭಟ್ ಪ್ರತಿಗಾಮಿ ಗುಣದ ಹೋರಾಟಗಳು ಎಂದು ಕರೆಯುತ್ತಾರೆ. 

ಭಾರತದ 1857ರ ಬಂಡಾಯವನ್ನು “ಸ್ವಾತಂತ್ರ್ಯಕ್ಕಾಗಿ ಭಾರತದ ಯುದ್ಧ” ಎಂದು ಮೊದಲು ಗುರುತಿಸಿದ್ದು ಮಾರ್ಕ್ಸ್ ಮತ್ತು ಏಂಜೆಲ್ಸ್. ಅದನ್ನವರು ತಮ್ಮದೇ ಪರಿಭಾಷೆಯಲ್ಲಿ ಹೊಗಳಿದರು. ಮಾರ್ಕ್ಸಿಸಂ ಅನ್ನು ಸ್ಥಾಪಿಸಿದವರಿಗೆ 1857ರ ಬಂಡಾಯವನ್ನು ಮುನ್ನಡೆಸಿದ್ದು ಊಳಿಗಮಾನ್ಯ ದೊರೆಗಳು ಮತ್ತು ತಮ್ಮ ಪ್ರಾಂತ್ಯ ಮತ್ತು ಅನುಕೂಲತೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಹೋರಾಡುತ್ತಿದ್ದ ರಾಜ – ರಾಣಿಯರು ಎನ್ನುವುದರ ಅರಿವಿರಲಿಲ್ಲವೇ? ಅಂತಿಮವಾಗಿ, ಈ ಚಳುವಳಿ ಮೊಘಲರ ವ್ಯಂಗ್ಯಚಿತ್ರದಂತಿದ್ದ, ಕೊನೆಯ ಹಾಗೂ ದುರ್ಬಲ ಬಹಾದ್ದೂರ್ ಶಾ ಝಾಫರನನ್ನು ಪೀಠದ ಮೇಲೆ ಕೂರಿಸಿತು. 

ಮಾರ್ಕ್ಸಿಸಂನ ಸ್ಥಾಪಕರು ಈ ಹೋರಾಟವನ್ನು ಮುನ್ನಡೆಸುತ್ತಿದ್ದ ವರ್ಗಗಳನ್ನು ಮಾತ್ರ ನೋಡುತ್ತಿರಲಿಲ್ಲ ಅಥವಾ ಬಿರುಸಿನ ದಾಳಿ ನಡೆಸಲು ಉತ್ತೇಜಿಸಿದ ಪ್ರಜ್ಞೆಯನ್ನು ಮಾತ್ರ ಗಮನಿಸುತ್ತಿರಲಿಲ್ಲ. ಅವರು ಈ ಹೋರಾಟದ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳುತ್ತಿದ್ದರು. ನಿಜವಾದ ಐತಿಹಾಸಿಕ ಭೌತವಾದಿಗಳಾದ ಅವರು ಈ ಹೋರಾಟದ ನೈಜತೆ ಮತ್ತು ಗುರಿಗಳ ಪರಿಣಾಮಗಳನ್ನು ಅಂದಾಜಿಸಿದರು. 

ಒಂದು ನಿರ್ದಿಷ್ಟ ಐತಿಹಾಸಿಕ ಕಾಲಘಟ್ಟದಲ್ಲಿ ಯಾವುದು ‘ಪ್ರಗತಿ’ ಮತ್ತು ‘ಪ್ರತಿಕ್ರಿಯೆ’ಯ ಅರ್ಥವೇನು ಎನ್ನುವಂತಹ ಪ್ರಧಾನ ಪ್ರಶ್ನೆಗಳಿಗೆ ಉತ್ತರಿಸಬೇಕು. 

ಈ ಹೋರಾಟಗಳ ಸಫಲತೆ – ಅದು ಚೆನ್ನಮ್ಮಳ ಮುಂದಾಳತ್ವದಲ್ಲಿ ನಡೆದಿರಬಹುದು ಅಥವಾ ಶೋಷಕ ಊಳಿಗಮಾನ್ಯ ಪಾಳೇಗಾರ ಮುನ್ನಡೆಸಿರಬಹುದು – ಈ ಹೋರಾಟಗಳ ತಾತ್ವಿಕ ತೀರ್ಮಾನಗಳು ಬ್ರಿಟೀಷ್ ವಸಾಹತುಶಾಹಿಯನ್ನು ನಮ್ಮ ಭೂಮಿಯಿಂದ ಹೊರಗಾಕುವುದಾಗಿತ್ತೇ ಹೊರತು ಅದಕ್ಕಿಂತ ಕಡಿಮೆಯೇನಲ್ಲ. 

ವಿದೇಶಿ ಶತ್ರುವಿನ ವಿರುದ್ಧದ ಹೋರಾಟದಲ್ಲಿ ಜಯವಾಗಿದ್ದರೆ, ಊಳಿಗಮಾನ್ಯ ವ್ಯವಸ್ಥೆಯ ಆಳ್ವಿಕೆಗೆ ನಾವು ಸಿಲುಕಿಕೊಂಡಿದ್ದರೂ, ಮಧ್ಯಮವರ್ಗದ ಪ್ರಜಾಪ್ರಭುತ್ವ ಕ್ರಾಂತಿಗೆ ಪೋಷಣೆ ಸಿಗುತ್ತಿತ್ತು. 

ಮತ್ತು, ಈ ಪ್ರಜಾಪ್ರಭುತ್ವ ಕ್ರಾಂತಿ ಪ್ರಗತಿಯೇ ಅಲ್ಲವೇ, ವಸಾಹತು – ಊಳಿಗಮಾನ್ಯ ಪ್ರಾಬಲ್ಯಕ್ಕಿಂತ ರಾಷ್ಟ್ರೀಯವಾದಿ ಊಳಿಗಮಾನ್ಯ ಆಳ್ವಿಕೆ ಪ್ರಗತಿಕಾರಕವಲ್ಲವೇ? ಈ ಇತಿಹಾಸಕಾರರು ಜಪಾನಿನ ಇತಿಹಾಸದ ಪುಟಗಳನ್ನು ಓದಿಕೊಂಡರೆ ಒಳ್ಳೆಯದು ಮತ್ತು 1868ರಲ್ಲಿ ಮೈಜಿ ಸಾಮ್ರಾಜ್ಯ ಮತ್ತೆ ಅಧಿಕಾರಕ್ಕೆ ಬಂದ ಮಹತ್ವವನ್ನು ಅರಿತುಕೊಳ್ಳಬೇಕು; ಇದು ಹೇಗೆ ಜಪಾನಿನ ಸ್ಥಳೀಯ ಮಾರುಕಟ್ಟೆಯ ರಕ್ಷಣೆಯನ್ನು ನಡೆಸಿ ನಿಧಾನವಾಗಿ ದೇಶೀ ಬಂಡವಾಳಶಾಹಿತ್ವವನ್ನು ಬೆಳೆಸಿತು ಎನ್ನುವುದನ್ನು ಅರಿತುಕೊಳ್ಳಬೇಕು. ಭಾರತೀಯ ಜನಸಮೂಹ ವಸಾಹತಿನ ಬೆಂಬಲವಿಲ್ಲದ ಊಳಿಗಮಾನ್ಯ ವ್ಯವಸ್ಥೆಯನ್ನು ಇನ್ನೂ ಸುಲಭವಾಗಿ ನಾಶ ಪಡಿಸಿಬಿಡುತ್ತಿದ್ದರು. ಬ್ರಿಟೀಷರ ಬಲದ ಕಾರಣದಿಂದಾಗಿ ಸಾವಿನಿಂದೆದ್ದು ಬಂದ ಊಳಿಗಮಾನ್ಯತೆಯನ್ನು ಎದುರು ಹಾಕಿಕೊಳ್ಳುವುದಕ್ಕಿಂತ ಅದು ಸುಲಭವಾಗಿತ್ತು. ವಸಾಹತುಶಾಹಿ ಪ್ರಮುಖ ಶತ್ರು ಮತ್ತು ಅದಕ್ಕೆ ಯಾವುದೇ ಮೂಲೆಯಿಂದ ಯಾವುದೇ ಗುರಿಯಿಟ್ಟುಕೊಂಡು ಹೊಡೆದ ಏಟೂ ಸಹಿತ ಅದನ್ನು ಮತ್ತಷ್ಟು ದುರ್ಬಲಗೊಳಿಸುತ್ತಿತ್ತು. 

ಎಲ್ಲಿಯವರೆಗೂ ಈ ಹೋರಾಟಗಳೆಲ್ಲವೂ ಕರ್ನಾಟಕ ಮತ್ತು ಭಾರತದ ಪ್ರಮುಖ ವೈರಿಯಾದ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧವಿದ್ದವೋ ಅಲ್ಲಿಯವರೆಗೂ ಇವು ಪ್ರಗತಿಪರ ಗುಣವನ್ನು ಹೊಂದಿದೆಯೆನ್ನಬಹುದು, ಸಮಾಜವನ್ನು ಮುನ್ನಡೆಸುವ ಗುಣ. ವಸಾಹತುಶಾಹಿಯ ವಿರುದ್ಧ ಊಳಿಗಮಾನ್ಯ ದೊರೆಗಳ ಗೆಲುವು ಸಹ ಕ್ರಾಂತಿಕಾರಕ ಸಾಧ್ಯತೆಯನ್ನು ಹೊಂದಿರುತ್ತದೆ; ಕಾರಣ ಇದು ಸ್ಥಳೀಯ ಬಂಡವಾಳಶಾಹಿಯನ್ನು ಬೆಳೆಸಿ ಮುಂದಕ್ಕೆ ಊಳಿಗಮಾನ್ಯ ಸಮಾಜವನ್ನು ಕಿತ್ತುಹಾಕುವ ಮತ್ತು ರೈತರನ್ನು ತಮ್ಮ ನೊಗದ ಭಾರದಿಂದ ಬಿಡುಗಡೆಗೊಳಿಸುತ್ತದೆ. ರಾಜ್ಯದ ಅಧಿಕಾರದ ಗುಣಮಟ್ಟದಲ್ಲಿ ಬದಲಾವಣೆಯಾಗಲೇಬೇಕಾದ ಅನಿವಾರ್ಯತೆ ಮತ್ತು ಬ್ರಿಟೀಷ್ ಆಕ್ರಮಣ ಆಳುವ ಮೈತ್ರಿಕೂಟದಲ್ಲಿ ತಂದ ಬದಲಾವಣೆಗಳನ್ನು ಮನಗಾಣದಿದ್ದರೆ, ಕುರುಡು ಮೈತ್ರಿಕೂಟಕ್ಕಷ್ಟೇ ದಾರಿಯಾಗಿಬಿಡುತ್ತದೆ. 

ಪ್ರಗತಿಪರ ಹೋರಾಟಗಳ ಬದ್ಧತೆಯನ್ನು ಕಡೆಗಣಿಸಿ ವಸಾಹತುಶಾಹಿ ವಿರೋಧಿ ಮುಂದಾಳತ್ವದಲ್ಲಿನ ವರ್ಗ ಬೇರುಗಳನ್ನಷ್ಟೇ ಹೊರತೆಗೆಯುವುದು ಅತಿಯಾದ ಮಾರ್ಕ್ಸಿಸಂ ಎಂದೆನ್ನಿಸುತ್ತದೆ. ಆದರಿದೇ ಮಾರ್ಕ್ಸಿಸಂ ಮತ್ತು ರಿವಿಷನಿಸಂ ನಡುವಿರುವ ವ್ಯತ್ಯಾಸ. ರಿವಿಷನಿಷ್ಟ್ ಇತಿಹಾಸ ಯಾಂತ್ರಿಕವಾಗಿರುತ್ತದೆ, ಮೇಲ್ಮಟ್ಟದ್ದಾಗಿರುತ್ತದೆ. ಅದರ ಕೊನೆಯ ಉದ್ದೇಶ ವಸಾಹತು ಆಕ್ರಮಣವನ್ನು ನ್ಯಾಯಬದ್ಧವೆನ್ನಿಸಿಬಿಡುವುದೇ ಆಗಿದೆ. ಮಾರ್ಕ್ಸಿಸ್ಟ್ ಇತಿಹಾಸ ವರ್ಗ ಗುಣಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ, ಐತಿಹಾಸಿಕ ಸನ್ನಿವೇಶದಲ್ಲದನ್ನು ಇಡುತ್ತದೆ ಮತ್ತು ಜಿಜ್ಞಾಸೆಯ(dialectical) ಕಾರ್ಯವಿಧಾನಗಳನ್ನು ಪರಿಗಣಿಸುತ್ತದೆ. 

ಇವೆಲ್ಲವನ್ನೂ ನಾವು ನೆನಪಿನಲ್ಲಿಟ್ಟುಕೊಂಡಾಗ ಮಾತ್ರ, ಇತಿಹಾಸದ ದಿಕ್ಕಿನ ಗುರಿಯನ್ನು ಗ್ರಹಿಸಿದಾಗ ಮತ್ತು ಪ್ರತಿಯೊಂದು ಐತಿಹಾಸಿಕ ತಿರುವಿನಲ್ಲೂ ಆಳುವ ವರ್ಗದ ಗುಣಗಳೇನಿದ್ದವು ಎನ್ನುವುದನ್ನು ಅರ್ಥೈಸಿಕೊಂಡಾಗ, ಕೆಲವೊಮ್ಮೆ ತದ್ವಿರುದ್ಧದ ಅಭಿಪ್ರಾಯವೆನ್ನಿಸಿದರೂ ಇತಿಹಾಸವನ್ನು ನಿಶ್ಚಿತತೆಯಿಂದ ಒಪ್ಪಬಹುದು. ಬ್ರಿಟೀಷರ ನೆರವಿನಿಂದ, ತಮ್ಮ ಪ್ರಾಂತ್ಯವನ್ನುಳಿಸಿಕೊಳ್ಳಲು ಟಿಪ್ಪುವಿನ ವಿರುದ್ಧ ಹೋರಾಡಿದ ಪಾಳೇಗಾರರು ಇತಿಹಾಸವನ್ನು ಹಿಂದಕ್ಕೆಳೆಯಲು ಪ್ರಯತ್ನಿಸುತ್ತಿದ್ದರು; ಅದೇ ಸಂದರ್ಭದಲ್ಲಿ, ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಶಸ್ತ್ರ ಸಜ್ಜಿತರಾಗಿ ತಮ್ಮ ಪ್ರಾಂತ್ಯವನ್ನುಳಿಸಿಕೊಳ್ಳಲು ನಿಂತ ಪಾಳೇಗಾರರು ಇತಿಹಾಸವನ್ನು ಮುಂದೆ ತಳ್ಳುತ್ತಿದ್ದರು.

ಮುಂದಿನ ವಾರ:
ಸೈನ್ಯದ ಮುನ್ನಡೆ

No comments:

Post a Comment