Aug 5, 2016

ಮೇಕಿಂಗ್ ಹಿಸ್ಟರಿ: ಕ್ಞಾಮ, ಕಾಲರ ಮತ್ತು ಪ್ಲೇಗ್: ಬಿಳಿ ದೇವರ ಶಾಪ

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
05/08/2016
ಕ್ಷಾಮವೆಂಬುದು ‘ಪ್ರಾಕೃತಿಕ’ ಸಂಗತಿ ಎಂಬುದು ನಮ್ಮಲ್ಲಿರುವ ಒಂದು ತಪ್ಪು ಗ್ರಹಿಕೆ. ಆದರೂ ಐತಿಹಾಸಿಕ ನೆನಪುಗಳು ತಿಳಿಸುವುದೇನೆಂದರೆ ಭಾರತದಲ್ಲಿ ಅತ್ಯಂತ ಹಳೆಯ ಕ್ಷಾಮ ಕಂಡುಬಂದದ್ದು ಬ್ರಿಟೀಷ್ ವಸಾಹತುಶಾಹಿಯ ದಿನಗಳಲ್ಲಿ. ಕರ್ನಾಟಕ ವಸಾಹತುಶಾಹಿಗೆ ಒಳಪಡುವ ಸಮಯದಲ್ಲಿ ಕರ್ನಾಟಕದ ಭೂಭಾಗ ಅರಣ್ಯವಾಗಿತ್ತು. ನೀರು ಕಡಿಮೆಯಿದ್ದ ಪ್ರದೇಶದಲ್ಲೂ ಸಹಿತ ಮರಗಳ ಸೂರು ಅಧಿಕವಾಗಿತ್ತು ಎನ್ನುವುದನ್ನು ಬುಚನನ್ನಿನ ವರದಿಗಳು ತಿಳಿಸುತ್ತವೆ. ಇದು ನದಿ ಮತ್ತು ಹೊಳೆಗಳರಿವನ್ನು ಧೀರ್ಘಕಾಲೀನವಾಗಿಸಿದ್ದವು. ಪರಿಣಾಮವಾಗಿ, ಅಂತರ್ಜಲ ಸಮೃದ್ಧವಾಗಿತ್ತು ಮತ್ತು ನೀರಾವರಿ ಕೆರೆಕಟ್ಟೆಗಳು ಹರಿದೋಡುತ್ತಿದ್ದ ನೀರಿಗೆ ತಡೆಯೊಡ್ಡಿ, ಭೂಮಿಗಿಂಗುವಂತೆ ಮಾಡಿ ಅಂತರ್ಜಲವನ್ನು ವೃದ್ಧಿಯಾಗಿಸುವುದಷ್ಟೇ ಅಲ್ಲದೇ ಭೂಮಿ ತೇವಾಂಶವನ್ನು ಹೆಚ್ಚಿಸುತ್ತಿತ್ತು; ಇದಕ್ಕೆ ಸಾಕ್ಷಿ ಎಂದರೆ ಮಳೆ ಕಡಿಮೆ ಬೀಳುವ ಪ್ರದೇಶದಲ್ಲೂ ಬಂಪರ್ ಬೆಳೆ ತೆಗೆಯುತ್ತಿದ್ದುದು ಮತ್ತು ಆರ್ದ್ರ ಬೆಳೆಗಳನ್ನೂ ಬೆಳೆಯುತ್ತಿದ್ದುದು. ಕರಾವಳಿ, ಮಲೆನಾಡು ಮತ್ತು ಅರೆ ಮಲೆನಾಡು ನೀರು ಹೆಚ್ಚಾಗಿದ್ದ ಪ್ರದೇಶಗಳು; ಕರಾವಳಿ ಮೂರು ಆರ್ದ್ರ ಬೆಳೆಗಳನ್ನು ವರುಷಕ್ಕೆ ಉತ್ಪಾದಿಸುತ್ತಿತ್ತು ಮತ್ತೀ ಪ್ರದೇಶ ಭಾರತ ಉಪಖಂಡದಲ್ಲಿ ಅತಿ ಹೆಚ್ಚು ಮಳೆ ಬೀಳುವ ಎರಡನೇ ಪ್ರದೇಶವಾಗಿತ್ತು. ಹಾಗಾಗಿ ಕರ್ನಾಟಕ ‘ಕಡಿಮೆ’ ಅಥವಾ ‘ಹೆಚ್ಚು’ ಮಳೆಯನ್ನನುಭವಿಸುತ್ತಿತ್ತೇ ಹೊರತು ಕ್ಷಾಮದ ದಿನಗಳಲ್ಲ. ಮಳೆ ಕಡಿಮೆಯಾದ ಬರದ ವರುಷಗಳಿದ್ದವೇ ಹೊರತು ಕ್ಞಾಮವಿರಲಿಲ್ಲ. ಈ ಬರವೂ ಕೂಡ ಅಲ್ಲಲ್ಲಿ ಕಂಡು ಬರುತ್ತಿತ್ತೇ ಹೊರತು ಇಡೀ ಕರ್ನಾಟಕದಲ್ಲಲ್ಲ, ಹೆಚ್ಚು ಆಹಾರಧಾನ್ಯ ಉತ್ಪಾದನೆಯಾದ ಪ್ರದೇಶದಿಂದ ಬರದ ಪ್ರದೇಶಕ್ಕೆ ಆಹಾರ ರವಾನೆಯಾಗುತ್ತಿತ್ತು. ಕ್ಷಾಮದ ಕಾರಣದಿಂದಾಗಿ ಹಸಿವಿನಿಂದ ಜನರು ಸಾಯುವುದನ್ನು ಮತ್ತು ರೋಗಪೀಡಿತರಾಗುವುದನ್ನು ಈ ರವಾನೆಯಾಗುವ ಆಹಾರ ತಡೆಯುತ್ತಿತ್ತು.

ಕರ್ನಾಟಕದಲ್ಲಿ ಕೃಷಿ ಕ್ಷೇತ್ರ ಉತ್ತುಂಗದಲ್ಲಿದ್ದಾಗ ಬಂದ ಮನ್ರೋ, ರಾಜ್ಯ ಕೃಷಿಯನ್ನು ಬಲವಂತವಾಗಿ ವಶಪಡಿಸಿಕೊಂಡಿರುವುದು ಮತ್ತು ಲೂಟಿ ಮಾಡುತ್ತಿರುವುದನ್ನು ಪರಿಶೀಲಿಸಿದರು. ಕ್ಷಾಮ ಹವಾಮಾನದಿಂದಾಗಿರುವುದಲ್ಲ, ಪ್ರಾಕೃತಿಕವಲ್ಲ ಬದಲಿಗೆ ಮನುಷ್ಯ ನಿರ್ಮಿತ ಎಂಬಂಶವನ್ನು ತಮ್ಮ ಬರಹದಲ್ಲಿ ಸಾದರಪಡಿಸಿದರು. ಕ್ಷಾಮ, ಅವರ ಬರಹಗಳಲ್ಲಿ ನಾವು ಓದಿದಂತೆ, ಸಾಮಾಜಿಕ ವ್ಯವಸ್ಥೆಯಲ್ಲಿನ ಹಸ್ತಕ್ಷೇಪದಿಂದುಂಟಾದದ್ದು, ಮತ್ತು ಈ ಹಸ್ತಕ್ಷೇಪವನ್ನು ಆ ಕಾಲಘಟ್ಟದಲ್ಲಿ ಮಾಡಿದ್ದು ವಸಾಹತುಶಾಹಿ.

1805ರಲ್ಲಿ ಮನ್ರೋ The course to be taken by government in dealing with the security of grainನಲ್ಲಿ ಬರೆಯುತ್ತಾರೆ: “ಕರ್ನಾಟಕದಲ್ಲಿ ಹವಾಮಾನ ವೈಪರೀತ್ಯ ಎಷ್ಟಾದರೂ ಇರಲಿ, ಸೇವಿಸಲೆಷ್ಟು ಆಹಾರ ಬೇಕೋ ಅಷ್ಟು ಬಹುಶಃ ಉತ್ಪಾದನೆಯಾಗುತ್ತದೆ; ಬೆಳೆಯ ಸಂಪೂರ್ಣ ವೈಫಲ್ಯವೆಂಬುದು ಇಲ್ಲಿ ಕೇಳಿಯೇ ಗೊತ್ತಿಲ್ಲ, ಕೆಲವೊಂದು ಸಣ್ಣ ಪುಟ್ಟ ಹಳ್ಳಿಗಳಲ್ಲಿ ಅಥವಾ ಚಿಕ್ಕ ಜಿಲ್ಲೆಗಳಲ್ಲಿ ಆಗಿರಬಹುದಷ್ಟೇ. ಎಲ್ಲೆಡೆಯೂ ಬೆಳೆ ಕಡಿಮೆಯಾಗಿಬಿಟ್ಟ ಮತ್ತು ಪೂರ್ತಿ ಹಳ್ಳಿಗಳೇ ನಾಶವಾಗಿಬಿಟ್ಟ ತೀರ ಕೆಟ್ಟ ವರ್ಷಗಳಲ್ಲೂ ಸಹ, ಉತ್ಪಾದನೆಯಾದ ಆಹಾರ ಎಂಟತ್ತು ತಿಂಗಳುವರೆಗೆ ಸಾಕಾಗುತ್ತೆ; ಕೊರತೆಯನ್ನು ಕೂಡಿಟ್ಟ ಕಳೆದ ವರುಷದ ಆಹಾರ ಧಾನ್ಯ ಪೂರೈಸುತ್ತಿತ್ತು ಮತ್ತು ಹವಾಮಾನ ಉತ್ತಮವಿದ್ದು ಆಹಾರಧಾನ್ಯ ಚೆನ್ನಾಗಿ ಬೆಳೆದ ನೆರೆಹೊರೆಯ ಪ್ರಾಂತ್ಯಗಳಿಂದ ಆಮದಾಗುತ್ತಿತ್ತು. ಬೀಜ ಸಮಯ ಭಾರತದಲ್ಲಿ ಎಷ್ಟು ಸುದೀರ್ಘವಾಗಿದೆಯೆಂದರೆ – ಒಂದು ರೀತಿಯ ಕಾಳು ಬೆಳೆಯದೇ ಹೋದರೆ, ಮತ್ತೊಮ್ಮೆ ಭೂಮಿಯನ್ನು ಉತ್ತು ಬೇರೊಂದು ಬೀಜವನ್ನು ನೆಡಬಹುದಿತ್ತು; ಸಾಮಾನ್ಯವಾಗಿ ಉತ್ಪಾದನೆ ಎಷ್ಟು ಸಮೃದ್ಧವಾಗಿ ಹೆಚ್ಚುವರಿ ಬೆಳೆಯನ್ನು ಕಳೆದ ವರುಷಗಳಲ್ಲಿ ರೈತರಿಗೆ ಮತ್ತು ವರ್ತಕರಿಗೆ ನೀಡಿರುತ್ತದೆಯೆಂದರೆ ಈ ದೇಶದಲ್ಲಿ ಹವಾಮಾನ ವೈಪರೀತ್ಯದ ಒಂದೇ ಕಾರಣಕ್ಕೆ ಕ್ಷಾಮ ಉಂಟಾಗುವುದು ಅಸಾಧ್ಯ. ಹವಾಮಾನ ವೈಪರೀತ್ಯದ ಕಾರಣದಿಂದ ಉಂಟಾಗುವ ಆಹಾರಧಾನ್ಯದ ಕೊರತೆಯನ್ನು ಕ್ಷಾಮವಾಗಿ ಪರಿವರ್ತಿಸುವುದು ಪ್ರಾಂತ್ಯಗಳ ನಡುವೆ ನಡೆಯುವ ಯುದ್ಧಗಳು, ಕಂದಾಯ ವಸೂಲು ಮಾಡಲು ಸರಕಾರ ತೋರುವ ಸುಲಿಗೆಯ ಸ್ವಭಾವ, ಬೆಲೆಯನ್ನು ನಿಯಂತ್ರಿಸಿ ದೊಡ್ಡ ಪಟ್ಟಣಗಳಿಗೆ ಪೂರೈಸುವ ನಿರ್ಧಾರಗಳು ಮತ್ತಿವೆಲ್ಲಕ್ಕಿಂತಲೂ ಹೆಚ್ಚಾಗಿ ಜಮೀನುದಾರರು ನಡೆಸುವ ದರೋಡೆ ಕ್ಷಾಮಕ್ಕೆ ಕಾರಣ”. (258)

ಮನ್ರೋ ಪಟ್ಟಿ ಮಾಡುವ ಈ ಎಲ್ಲಾ ಅಪರಾಧಗಳು ಕೊರತೆಯನ್ನು ಕ್ಷಾಮವನ್ನಾಗಿ ಪರಿವರ್ತಿಸುತ್ತವೆ; ಇವೆಲ್ಲವನ್ನೂ ಬ್ರಿಟೀಷ್ ವಸಾಹತುಶಾಹಿ ಮಾಡಿತು, ಪ್ರೋತ್ಸಾಹಿಸಿತು. ‘ಅನಾಗರೀಕ’ ಪ್ರಪಂಚಕ್ಕೆ ಬ್ರಿಟೀಷ್ ವಸಾಹತುಶಾಹಿ ಕ್ಷಾಮವನ್ನು ಉಡುಗೊರೆಯಾಗಿ ನೀಡಿತು.

ಬಳ್ಳಾರಿ ಮತ್ತು ನೆರೆಹೊರೆ ಜಿಲ್ಲೆಗಳು 1804ರಲ್ಲಿ ಕ್ಷಾಮದಿಂದ ತತ್ತರಿಸಿತು, ಇದಕ್ಕೆ ಮನ್ರೋ ಪ್ರತಿಕ್ರಯಿಸಿದ್ದನ್ನು ನಾವು ನೋಡಿದ್ದೇವೆ. ಈ ಕ್ಷಾಮದ ಉಪಟಳವನ್ನು ಮೈಸೂರು ಸಾಮ್ರಾಜ್ಯದಲ್ಲಿ ಕೈಯಳತೆ ದೂರದಲ್ಲಿರಿಸಿದ್ದಕ್ಕೆ ಕಾರಣ ವಸಾಹತುಶಾಹಿ ಆ ಸಮಯದಲ್ಲಿ ನೀರಾವರಿನ್ನಿನ್ನೂ ನಾಶ ಪಡಿಸಿರಲಿಲ್ಲ ಮತ್ತು ಬೇಳೆ ಕಾಳುಗಳ ವ್ಯಾಪಾರದಲ್ಲಿ ತನ್ನ ಕೈಯಾಡಿಸಿರಲಿಲ್ಲ. ಒಡೆಯರರಾಸ್ಥಾನದ ಇತಿಹಾಸಕಾರ ಶಾಮ ರಾವ್ ಹಿಗ್ಗಿನೊಂದಿಗೆ ನೆನಪಿಸಿಕೊಳ್ಳುತ್ತಾರೆ: “1804 ಕ್ಷಾಮದ ಸಂದರ್ಭದಲ್ಲಿ…… ಕ್ಷಾಮಪೀಡಿತ ಪ್ರದೇಶದ ಜನರು ದೊಡ್ಡ ಸಂಖೈಯಲ್ಲಿ ಮೈಸೂರಿಗೆ ವಲಸೆ ಬಂದರು. ಆ ಸಮಯದಲ್ಲಿ ಬೇಳೆ ಕಾಳುಗಳು ಎಷ್ಟು ಸಮೃದ್ಧವಾಗಿದ್ದವೆಂದರೆ, ವಲಸೆಗಾರರ ಹಸಿವನ್ನು ನೀಗಿಸುವುದಷ್ಟೇ ಅಲ್ಲದೆ ದೊಡ್ಡ ಪ್ರಮಾಣದ ಆಹಾರಧಾನ್ಯವನ್ನು ಬ್ರಿಟೀಷರಾಡಳಿತವಿದ್ದ ಜಿಲ್ಲೆಗಳಿಗೂ ರಫ್ತು ಮಾಡಲಾಯಿತು. ಆ ಸಮಯದಲ್ಲಿ ಮದ್ರಾಸಿನ ಗವರ್ನರ್ ಆಗಿದ್ದ ಲಾರ್ಡ್ ವಿಲಿಯಂ ಬೆಂಟಿಕ್ 4ನೇ ಜುಲೈ 1804ರಂದು ಪೂರ್ಣಯ್ಯನವರಿಗೆ ಬರೆದ ಪತ್ರದಲ್ಲಿ ಭಾರತದ ಇತರೆ ಭಾಗದಲ್ಲಿ ಕ್ಷಾಮದಿಂದಾದ ಆಹಾರ ಧಾನ್ಯ ಕೊರತೆಯಿಂದಾದ ಹಾನಿಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತ, ಮೈಸೂರು ರಾಜ್ಯ ಇಂತಹ ದುರಂತದಿಂದ ಪಾರಾಗುವಂತೆ ಮಾಡಿದ್ದಕ್ಕೆ ಧನ್ಯವಾದಗಳನ್ನರ್ಪಿಸುತ್ತಾನೆ. ಮೈಸೂರು ಮುಂದಕ್ಕೂ ಹೀಗೇ ಸಮೃದ್ಧವಾಗಿರಲಿ, ನೆರೆಯ ಜನರ ಅವಶ್ಯಕತೆಗಳನ್ನು ಪೂರೈಸುವಂತಾಗಿ ಮತ್ತು ಕ್ಷಾಮ ಪೀಡಿತ ಜನರಿಗೆ ಆಸರೆಯಾಗಲಿ ಎಂದು ಹಾರೈಸುತ್ತಾನೆ”. (259)

ಹೆಚ್ಚುವರಿ ಆಹಾರಧಾನ್ಯಗಳು ಕಡಿಮೆ ಸಮಯಾವಧಿಯದ್ದು. ಚಿನ್ನದ ಮೊಟ್ಟೆಯಿಡುವ ಬಾತುಕೋಳಿಯ ಕತೆಯಂತೆ, ವಸಾಹತುಶಾಹಿ ಮೈಸೂರಿನ ಕೃಷಿ ವ್ಯವಸ್ಥೆಯನ್ನು ಲೂಟಿ ಹೊಡೆಯಲಾರಂಭಿಸಿತು. ಮತ್ತು ಶಾಮ ರಾವ್ ಸ್ವತಃ ಒಪ್ಪಿಕೊಂಡಂತೆ, 1816-17ರಲ್ಲಿ ಮೈಸೂರಿಗೆ ಭೇಟಿ ಕೊಟ್ಟ ಬರಗಾಲ, 1823-24ರಷ್ಟರಲ್ಲಿ ಕ್ಷಾಮವಾಗಿ ಕಾಡಿತು. (260) ಮತ್ತೆ 1831 ಹಾಗೂ 1833ರಲ್ಲಿ ಕ್ಷಾಮ ಉಂಟಾಯಿತು. (261)

ಈ ಬಾರಿ ಸಾಮ್ರಾಜ್ಯದ ನೆರವಿಗೆ ಬರುವ ಯಾವ ಪ್ರದೇಶವೂ ಭಾರತದಲ್ಲಿ ಇರಲಿಲ್ಲ. ಬಹುಶಃ ಟಿಪ್ಪುವಿನ ಮೈಸೂರೇ ಕೊನೆಯ ಅನ್ನದ ಬಟ್ಟಲಾಗಿತ್ತು, ಡೆಕ್ಕನ್ನಿನ ಕೃಷಿ ವ್ಯವಸ್ಥೆಯನ್ನೀಗಾಗಲೇ ಅತ್ಯಾಚಾರ ಮಾಡಲಾಗಿತ್ತು ಮತ್ತು ಸಂಪೂರ್ಣ ನಾಶ ಮಾಡಿಬಿಡಲಾಗಿತ್ತು. ಕ್ಷಾಮ ಮೈಸೂರಿಗೆ ಭೇಟಿ ಕೊಟ್ಟಾಗ, ಒಬ್ಬಂಟಿಯಾಗಿ ಬಂದಿರಲಿಲ್ಲ; ರೋಗ ರುಜಿನಗಳನ್ನು, ಜೊತೆಗೂಡಿಸಿಕೊಂಡೇ ಭೇಟಿ ಕೊಟ್ಟಿತ್ತು. ಶಾಮ ರಾವ್ ಹೇಳುತ್ತಾರೆ: “ಹವಾಮಾನದ ಅನಿಶ್ಚಿತತೆಯನ್ನು ಹೊರತುಪಡಿಸಿ, ದೇಶದಲ್ಲೇ ಮೊದಲ ಬಾರಿಗೆ….. ಈಗ ಕಾಲರಾ ಎಂದು ಹೆಸರಿಸಲಾಗಿರುವ ಸಾಂಕ್ರಮಿಕ ರೋಗ ಜನರನ್ನು ಧೃತಿಗೆಡಿಸುತ್ತಿದೆ, ಕೃಷಿ ಕೆಲಸಕ್ಕೆ ಹೊಡೆತ ಕೊಡುತ್ತಿದೆ”. (262)

ಶಾಮ ರಾವ್ ಸಾಂಕ್ರಮಿಕ ರೋಗದ ಬಗ್ಗೆ “ಈಗ ಕಾಲರಾ ಎಂದು ಹೆಸರಿಸಲಾಗಿರುವ” ಎಂದು ಅವಲೋಕಿಸಿರುವುದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಕಾಲರಾ ಎಂಬ ಹೆಸರು ತೀರ ಇತ್ತೀಚೆನದು. ಇದು ಆ ಖಾಯಿಲೆಯೂ ಇತ್ತೀಚೆನದೇ ಎನ್ನುವುದನ್ನು ತೋರಿಸುತ್ತದೆಯಲ್ಲವೇ?

ಕಾರ್ಲ್ ಮಾರ್ಕ್ಸನ ಟಿಪ್ಪಣಿಗಳು ಈ ಸಂಗತಿಯನ್ನು ಸ್ಪಷ್ಟಪಡಿಸುತ್ತದೆ. ಆಗಷ್ಟ್ 1817ರಲ್ಲಿ ಆತ “the first outbreak of cholera with terrible vehemence in India” ನಲ್ಲಿ ಅವರಿದನ್ನು ತಿಳಿಸುತ್ತಾರೆ. “ಮೊದಲಿದಿದು ಕಲ್ಕತ್ತಾ ಸಮೀಪದ ಜೆಸ್ಸೋರ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿತು. ಇಡೀ ಏಷ್ಯಾಕ್ಕೆ ಹಬ್ಬಿ ಯುರೋಪ್ ಖಂಡವನ್ನು ತಲುಪಿತು, ಅಲ್ಲಿ ಬಲಿಯಾಕಿ ಇಂಗ್ಲೆಂಡಿಗೆ ಹೋಗಿ ನಂತರ ಅಮೆರಿಕಾಕ್ಕೆ ತಲುಪಿಕೊಂಡಿತು”. ಅಂದರೆ ಭಾರತದ ಕಾಲರಾ ಕಾಮನ್ ವೆಲ್ತ್ ದೇಶಗಳಿಗೆಲ್ಲ ಹೋಗಿ ರಾಣಿಯನ್ನು ಭೇಟಿಯಾಗಲು ಲಂಡನ್ನಿಗೂ ಭೇಟಿ ಕೊಟ್ಟಿತು. ಮಾರ್ಕ್ಸ್ ನಂತರ ನವೆಂಬರ್ 1817ರಲ್ಲಿ ಹ್ಯಾಸ್ಟಿಂಗ್ಸ್ ಸೈನ್ಯದ ಮೇಲೆ ದಾಳಿ ಮಾಡಿದ ಕಾಲರಾದ ಬಗ್ಗೆ ಹೇಳುತ್ತಾ, ಅದು ಬುಂದೇಲ್ ಖಂಡವನ್ನು ದಾಟುವಾಗ “ವಾರಗಟ್ಟಲೇ ದಾರಿಯಲ್ಲಿ ಸತ್ತ ಮತ್ತು ಸಾಯುತ್ತಿದ್ದ ಜನರ ದೇಹಗಳಿತ್ತು” ಎಂದು ತಿಳಿಸುತ್ತಾರೆ. (263) ಬ್ರಿಟೀಷ್ ಸೈನ್ಯ ಹೊಸ ಹೊಸ ಪ್ರದೇಶಗಳನ್ನು ಆಕ್ರಮಿಸುವ ಸಲುವಾಗಿ ಪ್ರದೇಶದಿಂದ ಪ್ರದೇಶಕ್ಕೆ ಹೋಗುತ್ತಿದ್ದಂತೆಯೇ ಅವರಲ್ಲಿದ್ದ ಖಾಯಿಲೆ ಪೀಡಿತರು ಈ ಮಾರಣಾಂತಿಕ ರೋಗವನ್ನು ಇಡೀ ಭೂಮಿಯ ತುಂಬೆಲ್ಲ ಹರಡಿಬಿಟ್ಟರು.

ಸಾಂಕ್ರಮಿಕ ರೋಗವಾದ ಪ್ಲೇಗಿಗೆ ಕನ್ನಡದಲ್ಲಿ ಸಮನಾರ್ಥಕ ಪದವೇ ಇರಲಿಲ್ಲವೆಂಬುದು ಅಚ್ಚರಿಯ ಸಂಗತಿಯೇನಲ್ಲ. ಕನ್ನಡೀಕರಣಗೊಂಡು ಪಿಲ್ಲೇಕಮ್ಮ ಎಂದು ಕರೆಸಿಕೊಂಡ ಪ್ಲೇಗ್ ಅಮ್ಮ, ಜನರರ್ಪಿಸುವ ಕಾಣಿಕೆಗಳನ್ನು ಸ್ವೀಕರಿಸಿ ತನ್ನ ಆಕ್ರಮಣವನ್ನು ನಿಲ್ಲಿಸುವ ತಾಯಿ ದೇವತೆ. ಬ್ರಿಟೀಷ್ ಆಳ್ವಿಕೆ ಕನ್ನಡ ನಿಘಂಟಿಗೆ ಹೊಸ ಹೊಸ ಪದಗಳನ್ನು ಸೇರಿಸಿದ್ದೇ ಅಲ್ಲದೆ, ಈಗಾಗಲೇ ದೈವಸಂದಣಿ ಹೆಚ್ಚಿರುವ ಹಿಂದೂ ಧರ್ಮದಲ್ಲಿ ಮತ್ತಷ್ಟು ಹೊಸ ಭೀತಿ ಮೂಡಿಸುವ ದೇವರನ್ನು ದೇವತೆಯರನ್ನು ಪರಿಚಯಿಸಿತು.

ಕ್ಷಾಮ, ಕಾಲರ ಮತ್ತು ಪ್ಲೇಗ್ ವಸಾಹತುಶಾಹಿ ಜನಸಮೂಹವನ್ನು ಬಿಕ್ಕಟ್ಟಿಗೆ ದೂಡಿಬಿಟ್ಟಿರುವ ಸ್ಪಷ್ಟ ಸೂಚನೆಗಳು. ಇದು ಲೂಟಿಕೋರ ಊಳಿಗಮಾನ್ಯ ದೊರೆಗಳ, ಹಣ ಬಾಕ ಬಡ್ಡಿವ್ಯಾಪಾರಿಗಳ ಮತ್ತು ದರೋಡೆ ಮಾಡುವ ಬಿಳಿ ವಸಾಹತುಶಾಹಿಗಳ ಒಟ್ಟಾರೆ ಪರಿಣಾಮ. ಸಾಮಾಜಿಕ ರಚನೆಯಲ್ಲಿ ಆಳವಾದ ಬಿಕ್ಕಟ್ಟನ್ನು ಪ್ರತಿಫಲಿಸುವ ಈ ಪರಿಣಾಮಗಳು ಶತ್ರುಗಳಲ್ಲಿ ಅಮಾನವೀಯತೆಯನ್ನು ಮತ್ತಷ್ಟು ಹೆಚ್ಚಿಸಿ ಅವರ ಕೋರೆ ಹಲ್ಲುಗಳು ಕರ್ನಾಟಕದ ಜನಸಮೂಹದ ಮಾಂಸದಾಳಕ್ಕೆ ಇಳಿಸಿ ಕ್ಷಾಮದಿಂದೆಷ್ಟು ಲಾಭವೋ ಅಷ್ಟನ್ನೂ ಮಾಡಿಕೊಳ್ಳಲು ಕಾರಣವಾಯಿತು. ಪರಿಣಾಮಗಳು ಮತ್ತಷ್ಟು ಬಿಕ್ಕಟ್ಟುಗಳುದ್ಭವವಾಗಲು ಕಾರಣವಾಯಿತು, ಜನರನ್ನು ದುಃಖಸಾಗರದಲ್ಲಿ ಮುಳುಗಿಸಿಬಿಟ್ಟಿತು.

ಮುಂದಿನ ವಾರ: ಬಲವಂತ ಮತ್ತು ಲೂಟಿ

No comments:

Post a Comment