ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
26/08/2016
ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನೋಡಿದಂತೆ (1) ಮೈಸೂರು ಸೈನ್ಯಕ್ಕೆ ವಸಾಹತು ವಿರೋಧಿ ಯುದ್ಧದಲ್ಲಿ ದೊಡ್ಡ ಪರಂಪರೆಯೇ ಇದೆ. ಇದರ ಕಾರಣದಿಂದಾಗಿ, ಸೈನಿಕರಲ್ಲಿ ಗಮನಾರ್ಹ ಮಟ್ಟದ ವಸಾಹತು ವಿರೋಧಿ ಪ್ರಜ್ಞೆಯಿದೆ. ಈ ವಸಾಹತು ವಿರೋಧಿ ಭಾವನೆಗಳು ಶ್ರೀರಂಗಪಟ್ಟಣ ಕುಸಿತ ಕಂಡ ಕೆಲ ದಿನಗಳಲ್ಲೇ ಗಮನಕ್ಕೆ ಬಂತು. ನಗರ ಕುಸಿದರೂ ಸಹಿತ, ಮೀರ್ ಸಾದಿಕ್ ನಂತಹ ವಿದ್ರೋಹಿಗಳನ್ನು ಶಿಕ್ಷಿಸಲಾಯಿತು. ನಂತರದಲ್ಲಿ, ಎಲ್ಲೋ ಕಮ್ರುದ್ದೀನಿನಂತಹ ಕೆಲವು ಅಧಿಕಾರಿಗಳನ್ನು ಬಿಟ್ಟರೆ ಇಡೀ ಸೈನ್ಯ ಸೋಲನ್ನು ಒಪ್ಪಿಕೊಂಡಾಗ್ಯೂ ಬ್ರಿಟಿಷರಿಗೆ ಸಹಕರಿಸಲು ನಿರಾಕರಿಸಿತ್ತು. ಸೈನಿಕರನ್ನು ವಸಾಹತು ಸೈನ್ಯಕ್ಕೆ ಸೇರಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನೂ ಬಹಿಷ್ಕರಿಸಲಾಗಿತ್ತು. ಸೈನ್ಯಕ್ಕೆ ಸೇರಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನೂ ಹೇಗೆ ಸೈನಿಕರ ಸಮೂಹ ನಿರಾಕರಿಸಿತು, ನಿರುದ್ಯೋಗಿಯಾಗಿ ಹಳ್ಳಿಗಳಿಗೆ ಬಲವಂತಾಗಿ ವಲಸೆ ಹೋಗಿ ಕೂಲಿಯಾಳಾದರೂ ಪರವಾಯಿಲ್ಲ ಬ್ರಿಟನ್ ಸೈನ್ಯ ಸೇರುವುದಿಲ್ಲ ಎಂದು ನಿರ್ಧರಿಸಿದ ಬಗ್ಗೆ ಬುಚನನ್ ನಮಗೆ ತಿಳಿಸುತ್ತಾರೆ. ಹೆಚ್ಚಿನ ಸಂಖೈ ಮುಸ್ಲಿಂ ಸೈನಿಕರಿದ್ದ ಸೈನ್ಯ, ದೊಡ್ಡ ತ್ಯಾಗಗಳನ್ನು ಮಾಡಲು ಸಿದ್ಧವಾಗಿತ್ತು; ಟಿಪ್ಪುವಿನ ಪತನದ ನಂತರ ದೇಶಭಕ್ತಿಯನ್ನು ತೋರಿದ ಮೊದಲಿಗರಿವರು ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಈ ನಿಯತ್ತು ಇದ್ದಕ್ಕಿದ್ದಂತೆ ಮೂಡಿಬಿಟ್ಟಿದ್ದಲ್ಲ. ಇದು ನಾಲ್ಕು ದಶಕಗಳಿಂದ ಸುಧಾರಣೆ ಕಂಡಿದ್ದ ಮೈಸೂರು ಸೈನ್ಯದ ಪರಂಪರೆ. ಯುದ್ಧದ ಸಂಕಷ್ಟದ ಸಮಯದಲ್ಲೂ ಓಡಿಹೋಗದೆ ಬ್ರಿಟೀಷರನ್ನು ಅಚ್ಚರಿಗೊಳಿಸಿದ ಸೈನ್ಯವಿದು. ಟಿಪ್ಪುವಿನ ಹತ್ಯೆ ಸೈನಿಕರಲ್ಲಿನ ರೋಷವನ್ನು ಮತ್ತಷ್ಟು ಹೆಚ್ಚಿಸಿತ್ತಷ್ಟೇ. ವಸಾಹತು ಆಕ್ರಮಣದ ಬಗೆಗಿನ ಈ ಆಳದಲ್ಲಿನ ಸಿಟ್ಟೇ ಬ್ರಿಟೀಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಲು ಸೈನಿಕರನ್ನು ಕ್ರೋಡೀಕರಿಸಿ ಪ್ರೇರೇಪಿಸಿದ ಪ್ರಮುಖ ಅಂಶ. ಮೈಸೂರು ಸೈನ್ಯದಲ್ಲಿ ಕುದುರೆ ಓಡಿಸುವವನಾಗಿದ್ದ, ಅತಿಯಾಸೆಗಳ ಕಾರಣಕ್ಕೆ ಟಿಪ್ಪುವಿನಿಂದ ಬಂಧನಕ್ಕೊಳಗಾಗಿದ್ದ ದೊಂಡಿಯಾ ವಾಗ್ ನಂತವರೂ ಕೂಡ ಈ ಪ್ರತಿರೋಧದಲ್ಲಿ ಸಕ್ರಿಯರಾಗಿದ್ದರು. ಹೈದರ್ ಮತ್ತು ಟಿಪ್ಪು ಕಟ್ಟಿದ್ದ ಕೇಂದ್ರೀಕೃತ ಸರಕಾರದಲ್ಲಿ ಸೈನ್ಯವೇ ಪ್ರಮುಖವಾಗಿತ್ತು. ಅದು ತನ್ನ ಸದಸ್ಯರಲ್ಲಿ ಊಳಿಗಮಾನ್ಯ ಪಾಳೇಗಾರ ಶಕ್ತಿಗಳು ಬೆಳೆಸಿದ ಪ್ರಜ್ಞೆಗಿಂತ ಬಹಳ ಭಿನ್ನವಾದ ಪ್ರಜ್ಞೆಯನ್ನು ಬೆಳೆಸಿತ್ತು. ಆಧುನಿಕ ಮತ್ತು ಕೇಂದ್ರೀಕೃತವಾಗಿದ್ದ ಮೈಸೂರು ಸೈನ್ಯ, ತನ್ನ ವಿವಿಧ ಇಲಾಖೆಗಳ ನಡುವೆ ಅತ್ಯಂತ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುತ್ತಿತ್ತು. ಈ ಹೊಂದಾಣಿಕೆಯ ಪ್ರಯತ್ನಗಳು ಅದರ ಸದಸ್ಯರಲ್ಲೂ ಕಂಡುಬರುತ್ತಿತ್ತು ಮತ್ತು ಮಾಜಿ ಸೈನಿಕರು ಬ್ರಿಟೀಷರ ವಿರುದ್ಧ ಮುಂದಾಳತ್ವ ವಹಿಸಿ ನಡೆಸಿದ ಹೋರಾಟದಲ್ಲೂ, ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದ ಇನ್ನಿತರೆ ಊಳಿಗಮಾನ್ಯ ಶಕ್ತಿಗಳನ್ನು ಒಂದುಗೂಡಿಸುವ ಪ್ರಯತ್ನಗಳನ್ನು ಕಾಣಬಹುದು. ಮಾಜಿ ಸೈನಿಕರು – ಅದು ದೊಂಡಿಯಾ ಇರಬಹುದು ಅಥವಾ ದಕ್ಷಿಣ ಕನ್ನಡದ ಸುಬ್ಬಾ ರಾವ್ ಮತ್ತು ತಿಮ್ಮಾನಾಯಕರಿರಬಹುದು – ಪಾಳೇಗಾರರ ನಡುವಿನ ಹೊಂದಾಣಿಕೆಗೆ ಕೇಂದ್ರಬಿಂದುವಾದರು. ಮತ್ತೊಂದೆಡೆ, ಪಾಳೇಗಾರರ ಜೀವನ ಶೈಲಿ ಮತ್ತವರ ಯುದ್ಧತಂತ್ರಗಳು ಯಾವಾಗಲೂ ಮುಚ್ಚಿದ ಬಾಗಿಲಿನಿಂದೆ ಕಿರಿದಾಗಿರುತ್ತಿತ್ತು.
1. ದೊಂಡಿಯಾ ವಾಗನ ಬಂಡಾಯ ಸೈನ್ಯ (1799 – 1800)
ದೊಂಡಿಯಾ ಶಿವಮೊಗ್ಗದ ಚೆನ್ನಗಿರಿಯವನು. ತನ್ನ ಸೇನಾ ಸಾಮರ್ಥ್ಯವನ್ನು ಪಟವರ್ಧನರಿಗೆ, ಕೊಲ್ಲಾಪುರದ ರಾಜನಿಗೆ ಮತ್ತು ಧಾರವಾಡದ ಲಕ್ಷ್ಮೇಶ್ವರ ದೇಸಾಯಿಗೆ ಸಲ್ಲಿಸಿದ ಸೇವೆಯಲ್ಲಿ ಸಾಬೀತು ಪಡಿಸಿದ್ದ.(2) ಹೈದರ್ 1780ರಲ್ಲಿ ಉತ್ತರ ಕರ್ನಾಟಕದಲ್ಲಿ ನಡೆಸುತ್ತಿದ್ದ ಕಾರ್ಯಾಚರಣೆಯೊಂದರ ಸಂದರ್ಭದಲ್ಲಿ ದೊಂಡಿಯಾನ ಸಂಪರ್ಕಕ್ಕೆ ಬಂದ ನಂತರ ಆತನನ್ನು ಮೈಸೂರು ಸೈನ್ಯಕ್ಕೆ ಕುದುರೆಸವಾರನಾಗಿ ಆಯ್ಕೆಮಾಡಿದ, ಅದೇ ಸಮಯದಲ್ಲಿ ಆತನನ್ನು ಇಸ್ಲಾಮಿಗೆ ಮತಾಂತರಿಸಿದ. 1792ರ ಮೂರನೇ ವಸಾಹತು ವಿರೋಧಿ ಯುದ್ಧದ ಸಂದರ್ಭದಲ್ಲಿ, ದೊಂಡಿಯಾ ಸೈನ್ಯವನ್ನು ತೊರೆದು ಧಾರವಾಡದಲ್ಲಿ ಸ್ವತಂತ್ರವಾಗಿ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನಿಸಿದ. 1794 ರಲ್ಲಿ ಟಿಪ್ಪು ಮತ್ತೆ ಅವನ ಮನಸ್ಸನ್ನು ಗೆದ್ದು ಸೈನ್ಯದಲ್ಲಾತನಿಗೆ ಬಡ್ತಿ ನೀಡಿದ. ಆದರೆ ಕೆಲವೇ ಸಮಯದಲ್ಲಿ, ತನ್ನದೇ ಸ್ವಂತ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂಬ ದೊಂಡಿಯಾನ ಆಸೆ, ಅವನಿಗೆ ಜೈಲಿನ ಹಾದಿ ತೋರಿಸಿತು; ಅಲ್ಲವನಿಗೆ ಸಣ್ಣ ಮೊತ್ತದ ವೇತನ ನೀಡಲಾಗುತ್ತಿತ್ತು. ಶ್ರೀರಂಗಪಟ್ಟಣದ ಕುಸಿತದೊಂದಿಗೆ, ಇತರೆ ಖೈದಿಗಳ ಜೊತೆಗೆ ದೊಂಡಿಯಾನನ್ನೂ ಬಿಡುಗಡೆ ಮಾಡಲಾಯಿತು. ಅರವತ್ತರ ವಯಸ್ಸಿನಲ್ಲಿ ಸ್ವತಂತ್ರಗೊಂಡ ದೊಂಡಿಯಾ, ಶ್ರೀರಂಗಪಟ್ಟಣವನ್ನು ತೊರೆದು ಸೈನ್ಯವನ್ನು ಕಟ್ಟಲಾರಂಭಿಸಿ ಬ್ರಿಟೀಷರನ್ನು ಸದೆಬಡಿಯಬೇಕೆಂದುಕೊಂಡಿದ್ದ ಎಲ್ಲಾ ಪಾಳೇಗಾರರನ್ನು ಸೇರಿಸಿ ಒಂದು ರಾಜಕೀಯ ಒಕ್ಕೂಟವನ್ನು ರಚಿಸಲಾರಂಭಿಸಿದ.
ಕೆ.ರಾಜಯ್ಯಮರ South Indian Rebellion ಮತ್ತವರ Rise and fall of the Palegaras of Tamil Nadu ಪುಸ್ತಕ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾಳೇಗಾರರ ಒಕ್ಕೂಟದ ಬಗ್ಗೆ ಒಂದು ಸ್ಥೂಲ ಚಿತ್ರಣವನ್ನು ನೀಡುತ್ತದೆ. ಈ ಪ್ರದೇಶಗಳನ್ನು ಒಂದಾಗಿಸಲು ದೊಂಡಿಯಾ ವಹಿಸಿದ ಪಾತ್ರ ಹಿರಿದು. ಹಾಗಾಗ್ಯೂ, ಒಂದೆಡೆ ಪ್ರದೇಶದ ವಿಸ್ತೀರ್ಣತೆ ಮತ್ತು ಒಕ್ಕೂಟದಲ್ಲಿ ಎಲ್ಲಾ ಸೈನ್ಯಗಳ ದುರ್ಬಲತೆಗಳು ಮತ್ತೊಂದೆಡೆ ಅವರಲ್ಲಿದ್ದ ವರ್ಗಾಧಾರಿತ ಮಿತಿಗಳು ಈ ಒಕ್ಕೂಟವನ್ನು ಅದಕ್ಷವನ್ನಾಗಿ ಮಾಡಿಬಿಟ್ಟಿತು, ಸಮನ್ವತೆಯಿಂದ ಏಕತೆಯಿಂದ ಕಾರ್ಯನಿರ್ವಹಿಸಲು ವಿಫಲವಾಯಿತು.
ಶ್ರೀರಂಗಪಟ್ಟಣ ತೊರೆದ ನಂತರ, ದೊಂಡಿಯಾ ಹಾಸನದ ಮಲೆನಾಡಿನ ಐಗೂರಿಗೆ ಹೋಗಿ ಅಲ್ಲಿನ ಪಾಳೇಗಾರರೊಂದಿಗೆ ಮಾತುಕತೆ ನಡೆಸಿ ಅಲ್ಲಿಂದ ಉತ್ತರಕ್ಕಿದ್ದ ಮರಾಠ ಪ್ರಾಂತ್ಯಕ್ಕೆ ತೆರಳಿದ. ರಾಜಯ್ಯಮ್ ಹೇಳುತ್ತಾರೆ: “ಅಲ್ಲಿಂದ ಟಿಪ್ಪುವಿನ ಸೈನ್ಯದಲ್ಲಿ ಕಾರ್ಯನಿರ್ವಹಿಸಿದ್ದ ಸರದಾರರೊಡನೆ ಪತ್ರವ್ಯವಹಾರ ನಡೆಸಿ, ಸಶಸ್ತ್ರ ಸೈನಿಕರ ತಂಡವನ್ನು ಮತ್ತು ಮೈಸೂರು ಸೈನ್ಯದ ಉಳಿಕೆಯಿಂದ ಐದು ಸಾವಿರ ಕುದುರೆಗಳನ್ನು ಒಟ್ಟುಗೂಡಿಸಿದ….. ಹೆಚ್ಚುಕಡಿಮೆ ಮೈಸೂರಿನ ಎಲ್ಲಾ ಮುಸ್ಲಿಮರೂ ಬಂಡಾಯಗಾರರ ಜೊತೆಗೆ ಗುರುತಿಸಿಕೊಂಡರು. ದೊಂಡೋಜಿ ವಾಗ್ ಶಿವಮೊಗ್ಗವನ್ನಾಕ್ರಮಿಸಿ ತಮ್ಮನ್ನು ತಾವೇ ‘ಎರಡು ಪ್ರಪಂಚದ ರಾಜ’ನೆಂದು ಘೋಷಿಸಿಕೊಂಡರು.’
ಶಿವಮೊಗ್ಗದಲ್ಲಿ ಕೇಂದ್ರ ಕಛೇರಿಯನ್ನು ಸ್ಥಾಪಿಸಿದ ನಂತರ, ದೊಂಡಾಜಿ ವಾಗ್ ಮೈಸೂರಿನಿಂದ ಬ್ರಿಟೀಷ್ ಅಧಿಕಾರವನ್ನು ಕಿತ್ತೊಗೆಯಲು ತಂತ್ರಗಳನ್ನು ರೂಪಿಸಿದ. ವಾಯುವ್ಯದಲ್ಲೊಂದಷ್ಟು ಸುಲಿಗೆ ಮಾಡಿ, ಬ್ರಿಟೀಷ್ ಸಂಗ್ರಹದಲ್ಲಿದ್ದ ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಂಡು ತನ್ನದೇ ಸ್ವಂತ ಫಿರಂಗಿ ದಳವನ್ನು ರಚಿಸಿದ. ಇದರ ನಂತರ ಕಂಪನಿಯಿಂದ ನಗರ ಮತ್ತು ಬೆದನೂರನ್ನು ವಶಪಡಿಸಿಕೊಳ್ಳಲಾಯಿತು. ಬಂಡಾಯಗಾರರ ಒಂದು ತಂಡ ಪೂರ್ವಕ್ಕೆ ತೆರಳಿ ನಿಜಾಮನ ಸಾಮ್ರಾಜ್ಯದಲ್ಲಿ ಗೂಟಿಯನ್ನು ವಶಪಡಿಸಿಕೊಂಡರು. ಮೈಸೂರಿನಲ್ಲಿದ್ದ ಬ್ರಿಟೀಷ್ ಸೈನ್ಯದ ಕಮಾಂಡರ್ ಕೊಲೊನಲ್ ವೆಲ್ಲೆಸ್ಲಿಯನ್ನು ಅಪಹರಿಸಲು ಯೋಜನೆಗಳನ್ನು ಹಾಕಿದ…. ಸೋತ ಸುಲ್ತಾನನ ಉದ್ದಿಶ್ಯಗಳನ್ನು ತೊರೆದು ಹೋಗಿದ್ದ ಪೂರ್ಣಯ್ಯನನ್ನು ಕೊಲೆ ಮಾಡುವ ಸಂಚು ರೂಪಿಸಿದ….” (3)
ಜೂನ್ 1799ರಲ್ಲಿ, ಮೈಸೂರು ಸಾಮ್ರಾಜ್ಯ ಕುಸಿದ ಎರಡೇ ತಿಂಗಳಿನಲ್ಲಿ ದೊಂಡಿಯಾ ಸೈನಿಕ ದಾಳಿಯನ್ನಾರಂಭಿಸಿ ದೊಡ್ಡ ಪ್ರದೇಶವನ್ನೇ ವಶಪಡಿಸಿಕೊಂಡಿದ್ದ; ವರುಷ ಕಳೆಯುವುದರಳೊಗೆ ಶಿವಮೊಗ್ಗ, ಚಿತ್ರದುರ್ಗ, ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಯ ಬಹುಭಾಗಗಳು ದೊಂಡಿಯಾನ ವಶದಲ್ಲಿತ್ತು. ಜೂನ್ 1800ರಲ್ಲಿ, ದೊಂಡಿಯಾನ ಪಡೆಗಳು ಹತ್ತು ಸಾವಿರ ಅಶ್ವಾರೋಹಿಗಳು, ಐದು ಸಾವಿರ ಕಾಲಾಳುಗಳು ಮತ್ತು ಎಂಟು ಗನ್ನುಗಳನ್ನೊಂದಿದ್ದ ಮರಾಠಾ ಕಮಾಂಡರ್ ದೊಂಡೋಜಿ ಪಂತ್ ಗೋಕಲೆಯನ್ನು ಕೊಂದು ಹಾಕಿದರು.(4) ರಾಮದುರ್ಗ, ಸೊಲ್ಲಾಪುರ, ಕೊಲ್ಲಾಪುರ, ಆನೆಗುಂದಿ ಮತ್ತು ಗ್ವಾಲಿಯರ್ರಿನ ರಾಜರ ಬೆಂಬಲವನ್ನೂ ಗಳಿಸಿಕೊಂಡ. (5)
ಕೇವಲ ಇನ್ನೂರು ಅಶ್ವಾರೋಹಿಗಳಿಂದ ಪ್ರಾರಂಭಗೊಂಡ ದೊಂಡಿಯಾನ ಸೈನ್ಯ, (6) ಚಿಕ್ಕ ಸಮಯದಲ್ಲೇ 5,000 ಅಶ್ವಾರೋಹಿಗಳಷ್ಟಾಯಿತು ಮತ್ತು ಉತ್ತುಂಗದ ದಿನಗಳಲ್ಲಿ 70,000 ದಿಂದ 80,000 ದಷ್ಟಿತ್ತು. (7)
ಈ ಗಮನಾರ್ಹ ಬೆಳವಣಿಗೆಗೆ ಮತ್ತು ತತ್ ಕ್ಷಣದ ನೇಮಕಕ್ಕೆ ಕಾರಣ ಮೈಸೂರಿನ ಸೈನಿಕರು ದೊಂಡಿಯಾನ ಸೈನ್ಯ ಸೇರಲು ಮೆರವಣಿಗೆ ಹೊರಟಿದ್ದು. ಶ್ರೀರಂಗಪಟ್ಟಣದ ಸೋತ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ಉಳಿಸಿಕೊಂಡಿದ್ದರು, ಅಶ್ವಾರೋಹಿಗಳು ತಮ್ಮ ಕುದುರೆಗಳನ್ನು. ಅವರು ದೊಡ್ಡ ಸಂಖೈಯಲ್ಲಿ ವಲಸೆ ಹೋದರು ಮತ್ತು ಬ್ರಿಟೀಷರಿಗೆ ಸೋತಿಲ್ಲದ ಕೋಟೆಗಳಲ್ಲೆವೂ ತಮ್ಮ ದಿಡ್ಡಿ ಬಾಗಿಲುಗಳನ್ನು ತೆರೆದು ದೊಂಡಿಯಾನ ಸೈನ್ಯವನ್ನು ಸ್ವಾಗತಿಸಿ ಅವನೊಡನೆ ಕೈಜೋಡಿಸಿದವು.
ಶ್ರೀರಂಗಪಟ್ಟಣ ಮೇ 1799ರಲ್ಲಿ ಕುಸಿದು ಬಿದ್ದರೂ, ಅದು ಬ್ರಿಟೀಷರಿಗೆ ಸಿಕ್ಕ ಗೆಲುವಾಗಿತ್ತೇ ಹೊರತು ಮೈಸೂರು ಸೈನ್ಯದೊಂದಿಗೆ ಯುದ್ಧ ಕೊನೆಯಾಗಿರಲಿಲ್ಲ. ಕರ್ನಾಟಕದ ದಕ್ಷಿಣಕ್ಕಿದ್ದ, ಪ್ರಮುಖ ಕೇಂದ್ರಗಳಾಗಿದ್ದ ಶ್ರೀರಂಗಪಟ್ಟಣ ಮತ್ತು ಬೆಂಗಳೂರನ್ನು ಬ್ರಿಟೀಷರು ವಶಪಡಿಸಿಕೊಂಡಿದ್ದರು, ಆದರೆ ಕೇಂದ್ರ ಮತ್ತು ಉತ್ತರ ಭಾಗಗಳಿನ್ನೂ ದೊಂಡಿಯಾ ಮತ್ತವನ ಮೈತ್ರಿಯ ಮರಾಠ ಸೈನ್ಯದ ವಶದಲ್ಲಿತ್ತು. 1799ರ ಜೂನ್ ತಿಂಗಳಿನಲ್ಲೇ ಬ್ರಿಟೀಷರು ತಮ್ಮ ಸೈನ್ಯವನ್ನು ದೊಂಡಿಯಾನನ್ನು ಹುಡುಕಿ ಹಿಡಿಯಲಟ್ಟಿದರು, ಮೈಸೂರಿನ ಇತರೆ ಭಾಗಗಳನ್ನೂ ತನ್ನ ವಶಕ್ಕೆ ಪಡೆದುಕೊಳ್ಳುವ ಸಲುವಾಗಿ.
ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಬ್ರಿಟೀಷರು ಕಳುಹಿಸಿದ್ದು ಕೊಲೊನೆಲ್ ವೆಲ್ಲೆಸ್ಲಿಯನ್ನು. ಬ್ರಿಟೀಷ್ ಆಳ್ವಿಕೆ ಪೂರ್ಣವಾಗಿ ಸಂಯೋಜಿತಗೊಳ್ಳತೇ ಇದ್ದುದರಿಂದ ಉಂಟಾದ ಗಂಭೀರ ಪರಿಸ್ಥಿತಿಯು ಮನ್ರೋ ವೆಲ್ಲೆಸ್ಲಿಗೊಂದು ಪತ್ರ ಬರೆಯುವಂತೆ ಮಾಡುತ್ತದೆ: “ದೊಂಡಿಯಾ ಸ್ವತಂತ್ರ ಮತ್ತು ಶಕ್ತಿಶಾಲಿ ರಾಜನಾಗುವುದರಲ್ಲಿ ಮತ್ತು ಕ್ರೂರ ವಿಶ್ವಾಸಘಾತುಕ ಸುಲ್ತಾನರನ್ನೊಳಗೊಂಡ ಸಾಮ್ರಾಜ್ಯದ ಸ್ಥಾಪಕನಾಗುವುದರಲ್ಲಿ ಯಾವುದೇ ಅನುಮಾನ ಬೇಡ” (8) (ಬ್ರೀಟಿಷರೆಡೆಗೆ “ಕ್ರೂರ” ಮತ್ತು ಬ್ರಿಟೀಷರ ಆಕ್ರಮಣಶಾಲಿತನಕ್ಕೆ “ವಿಶ್ವಾಸಘಾತುಕ”ತನ ಎಂಬುದು ವಸಾಹತುಶಾಹಿಗಳ ಇಂತಹ ಹಲವಾರು ಹೇಳಿಕೆಗಳನ್ನು ಓದಿರುವ ನಮ್ಮ ಓದುಗರಿಗೆ ಇಷ್ಟೊತ್ತಿಗೆ ಅರ್ಥವಾಗಿರಬೇಕು)
ದೊಂಡಿಯಾನ ಪಡೆಗಳ ಮುಖಂಡನನ್ನು ಏಕಾಂಗಿಯಾಗಿಸಿ ಕುಗ್ಗಿಸಬೇಕೆಂಬ ಬ್ರಿಟೀಷರ ಕಾರ್ಯತಂತ್ರದ ಕಾರಣ ಅವರು ದೊಂಡಿಯಾನ ವಿರುದ್ಧ ಜೂನ್ 1799ರಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದರು. ಆದಾಗ್ಯೂ, ಹಲವಾರು ಕದನಗಳವರಿಗೆ ಬೇಕಾಯಿತು ಮತ್ತು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡ ನಂತರವಷ್ಟೇ ಅವರಿಗೆ ದೊಂಡಿಯಾನ ಪಡೆಗಳನ್ನು ಸೋಲಿಸಲಾಗಿದ್ದು ಮತ್ತು ರಾಯಚೂರಿನ ಕೃಷ್ಣಾ ನದಿ ತೀರದಲ್ಲಿ ದೊಂಡಿಯಾನನ್ನು ಕೊನೆಗೊಳಿಸಲಾಗಿದ್ದು.
ಬ್ರಿಟೀಷರ ಕಾರ್ಯತಂತ್ರವೆಂದರೆ, ಮನ್ರೋನ ಸಿಹಿ ತುಂಬಿದ ಶಬುದಗಳಾದ ‘ಕ್ರೂರ’ ಮತ್ತು ‘ವಿಶ್ವಾಸಘಾತುಕ’ ಪದಗಳನ್ನು ಉಪಯೋಗಿಸಿಕೊಳ್ಳುವುದು. 1799ರ ಜುಲೈ 14ರಂದು ಡಾರ್ಲಿಂಪೈಲ್ ನೇತೃತ್ವದಲ್ಲಿ ಚಿತ್ರದುರ್ಗವನ್ನು ವಶಪಡಿಸಿಕೊಂಡಾಗ, ಅವರಿಗೆ ದೊಂಡಿಯಾನ ಸೈನ್ಯವೊಂದು ಎದುರಾಯಿತು, ಈ ಸೈನ್ಯವನ್ನು ಶಾಮ ರಾವ್ ಹೇಳುವಂತೆ, “ತಕ್ಷಣ ದಾಳಿ ಮಾಡಿಲಾಯಿತು, ಸೋಲಿಸಾಯಿತು ಮತ್ತು ಚದುರಿಸಲಾಯಿತು……ಬಂಧಿತರಾದ ನಲವತ್ತು ಜನರಲ್ಲಿ ಮೂವತ್ತೊಂಭತ್ತು ಮಂದಿಯನ್ನು ನೇಣಿಗೇರಿಸಲಾಯಿತು ಮತ್ತು ಒಬ್ಬನನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆ ಮಾಡಿದಾತ ತನ್ನ ಜೊತೆಗಾರ ನೇಣಿಗೇರಿದ್ದಕ್ಕೆ ಸಾಕ್ಷಿಯಾಗಿದ್ದ, ದೊಂಡಿಯಾನ ಜನರಿಗೆ ಆದ ಈ ವಿಧಿಯನ್ನು ಊರೂರುಗಳಲ್ಲಿ ಹೇಳಿ ಭಯಭೀತಿಯ ವಾತಾವರಣ ಸೃಷ್ಟಿಸುವ ಸಲುವಾಗಿಯೇ ಆತನನ್ನು ಬಿಡುಗಡೆ ಮಾಡಲಾಗಿತ್ತು”. (9)
ಒಂದು ವರುಷದವರೆಗೆ ರಕ್ತ ಹರಿಸಿದ ಯುದ್ಧಗಳಲ್ಲಿ ಬ್ರಿಟೀಷ್ ಸೈನ್ಯ ಭಾಗವಹಿಸಿದಾಗ್ಯೂ ಮತ್ತು ದೊಂಡಿಯಾನ ನಿಯಂತ್ರಣವಿದ್ದ ಹಲವಾರು ಕೋಟೆಗಳನ್ನು – ಉದಾಹರಣೆಗೆ ಹೊನ್ನಾಳಿ, ಶಿಕಾರಿಪುರ ಮತ್ತು ಚೆನ್ನಗಿರಿ - ವಶಪಡಿಸಿಕೊಂಡಾಗ್ಯೂ ಬ್ರಿಟೀಷರಿಗೆ ದೊಂಡಿಯಾನನ್ನು ಕೊನೆಗಾಣಿಸುವುದು ಕಷ್ಟದ ಸಂಗತಿಯಾಗಿತ್ತು. ಈ ಕಾರ್ಯಾಚರಣೆಯ ಬಗ್ಗೆ ನಡೆದ ಬ್ರಿಟೀಷ್ ಸೈನ್ಯದ ಪತ್ರವ್ಯವಹಾರವನ್ನು ಉದ್ಧರಿಸುತ್ತಾ ಶಾಮ ರಾವ್ ಹೇಳುತ್ತಾರೆ ದೊಂಡಿಯಾ “ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತ ಹುಡುಕುತ್ತಿದ್ದ ಶತ್ರುಗಳಿಂದ ಜಾರಿಕೊಳ್ಳುತ್ತಿದ್ದರು ಮತ್ತು ಕದನವನ್ನು ತಪ್ಪಿಸಿಕೊಳ್ಳುತ್ತಿದ್ದರು.” (10)
ದೊಂಡಿಯಾ ಭೂಭಾಗವನ್ನು ವಶಪಡಿಸಿಕೊಂಡು, ತನ್ನ ಸೈನ್ಯವನ್ನು ಕೋಟೆಯಲ್ಲಿರಿಸಿದರೂ ತಮಗಿಂತ ಉನ್ನತ ಮಟ್ಟದಲ್ಲಿದ್ದ ಬ್ರಿಟೀಷ್ ಸೈನ್ಯದ ವಿರುದ್ಧ ಕೋಟೆಯೊಳಗಿಂದ ಯುದ್ಧಗೈಯಲಿಲ್ಲ. ನಿರ್ಧಾರ ಮಾಡಿಬಿಡುವ ಯುದ್ಧಗಳಲ್ಲಿ ಭಾಗವಹಿಸುವುದೇ ಸಣ್ಣ ಚಕಮಕಿಯ ನಂತರ ಹಿಂದಡಿ ಇಡುತ್ತಿದ್ದರು. ಮೇಲ್ನೋಟಕ್ಕಿದು ದೊಂಡಿಯಾ ವಸಾಹತು ದಾಳಿಯ ಸಮಯದಲ್ಲಿ ಕದನರಂಗದಿಂದ ‘ಓಡಿಹೋಗುತ್ತಿದ್ದರು’ ಎಂದು ತೋರುತ್ತದಾದರೂ, ನಿಜಾರ್ಥದಲ್ಲಿ ದೊಂಡಿಯಾ ತನ್ನ ಸೈನ್ಯ ಬಲವನ್ನು ಉಳಿಸಿಕೊಳ್ಳುತ್ತ ಹೆಚ್ಚೆಚ್ಚು ಸೈನಿಕರನ್ನು ತನ್ನ ಕಡೆಗೆ ಸೇರಿಸಿಕೊಳ್ಳುತ್ತಿದ್ದ, 200 ಅಶ್ವಾರೋಹಿಗಳಿಂದಾರಂಭವಾದ ಪಡೆ 80,000 ಸೈನಿಕರ ಶಕ್ತಿಯುತ ಸೈನ್ಯವಾಯಿತು, ಅದರಲ್ಲಿ 5000ದಷ್ಟು ಕುದುರೆಸವಾರರೇ ಇದ್ದರು. ಸಾವಿರಾರು ಚದುರ ಕಿಮಿಗಳಲ್ಲಿ ಹರಡಿಹೋಗಿದ್ದ ಅರಣ್ಯ, ಕಣಿವೆ ಮತ್ತು ಬಯಲನ್ನುಪಯೋಗಿಸಿಕೊಂಡು ದೊಂಡಿಯಾ ಜಂಗಮ ಯುದ್ಧ ತಂತ್ರವನ್ನು ಅಳವಡಿಸಿಕೊಂಡಿದ್ದ. ಕೋಟೆಯೊಳಗಿನಿಂದ ನಡೆಸುವ ಯುದ್ಧಕ್ಕಿಂತ ಬಯಲಿನ ಕಾರ್ಯಾಚರಣೆಗೆ ಪ್ರಾಮುಖ್ಯತೆ ಕೊಟ್ಟಿದ್ದ. ಶಕ್ತಿಯುತ ಕುದುರೆಸವಾರರ ತಂಡದಿಂದ ಸಬಲವಾಗಿದ್ದ ದೊಂಡಿಯಾನನ್ನು ಹುಡುಕಲು ಮತ್ತವನನ್ನು ಸುತ್ತುವರಿಯಲು ಬ್ರಿಟೀಷರಿಗೆ ಯಾವಾಗಲೂ ಕಷ್ಟವಾಗುತ್ತಿತ್ತು.
ಆದರೆ ಕೊನೆಗೆ, ದೊಂಡಿಯಾನ ಶಕ್ತಿಯೇ ಅವನ ಸೋಲಿಗೂ ಕಾರಣವಾಗಿಬಿಟ್ಟಿತು. ಎಲ್ಲಿಯವರೆಗೆ ದೊಂಡಿಯಾನ ಪಡೆಗಳು ಚಿಕ್ಕವಾಗಿದ್ದವೋ ಅಲ್ಲಿಯವರೆಗೆ ಅವುಗಳು ವೇಗವನ್ನುಳಿಕೊಂಡಿದ್ದವು ಮತ್ತು ಮಿಂಚಿನ ವೇಗದಲ್ಲಿ ಸ್ಥಳಾಂತರ ಮಾಡುತ್ತ, ಬ್ರಿಟೀಷ್ ಸೈನ್ಯಕ್ಕೆ ಇವರನ್ನುಡುಕುವುದನ್ನು ಅಸಾಧ್ಯವಾಗಿಸಿಬಿಡುತ್ತಿದ್ದವು; ಗೆರಿಲ್ಲಾ ಯುದ್ಧದ ಚಲನಶೀಲತೆಗೆ ಉತ್ತಮ ಉದಾಹರಣೆಯಾಗಿತ್ತು. ದೊಂಡಿಯಾ ತನ್ನ ಸೈನಿಕ ಶಕ್ತಿಯನ್ನು ಹೆಚ್ಚಿಸುತ್ತಿದ್ದಂತೆ ಎಲ್ಲಾ ಪಡೆಗಳನ್ನೂ ಒಂದೇ ತುಕಡಿಯಾಗಿ ರೂಪಿಸಿದನು. ಕುದುರೆಸವಾರರು ಕಾಲಾಳುಗಳ ಜೊತೆಗೆ ಬೆರೆತಿದ್ದರು ಮತ್ತವರು ಆಡಳಿತ ನಡೆಸುತ್ತಿದ್ದವರ ಜೊತೆಗೆ. ಚಲಿಸುವ ಸೈನ್ಯಕ್ಕೆ ಬೇಕಾದ ಸಾಮಗ್ರಿಗಳನ್ನು ಮತ್ತಿತರೆ ವಸ್ತುಗಳನ್ನು ಪೂರೈಸಲು ಮರಾಠ ಸೈನ್ಯದ ಮಾದರಿಯನ್ನು ಉಪಯೋಗಿಸಲಾಗುತ್ತಿತ್ತು. ಈಗ ದೊಂಡಿಯಾನ ಸೈನ್ಯ ಚಲಿಸಲಾರಂಭಿಸಿದರೆ ದಟ್ಟ ಧೂಳೇಳುತ್ತಿತ್ತು ಮತ್ತವನ ಪಡೆ ಕ್ಯಾಂಪು ಮಾಡಿದಾಗ ಒಂದು ಚಿಕ್ಕ ನಗರದಂತೆ ಕಾಣುತ್ತಿತ್ತು. ಇದು ಗೆರಿಲ್ಲಾ ಯುದ್ಧ ತಂತ್ರಕ್ಕೆ ಹೊಂದಾಣಿಕೆಯಾಗದೇ ದೊಂಡಿಯಾನ ಸೈನ್ಯ ಸ್ಥಿರ ಯುದ್ಧವನ್ನು ಅಳವಡಿಸಿಕೊಳ್ಳುವಂತೆ ಮಾಡಿತು. ಆದರೆ ಈ ಹೊಸ ತಂತ್ರವನ್ನು ಕಾರ್ಯರೂಪಕ್ಕೆ ತರಲು ದೊಂಡಿಯಾ ಅಸಮರ್ಥನಾಗಿದ್ದ, ಯಾಕೆಂದರೆ ದೊಂಡಿಯಾ ಪ್ರಾಂತ್ಯವನ್ನು ಏಕೀಕೃತಗೊಳಿಸಿರಲಿಲ್ಲ ಮತ್ತವನ ಬಳಿ ಮೇಲ್ ದರ್ಜೆಯ ಸೈನ್ಯವನ್ನು ಎದುರಿಸಲು ಬೇಕಾದ ಶಸ್ತ್ರಾಸ್ತ್ರಗಳೂ ಇರಲಿಲ್ಲ. ದೊಂಡಿಯಾನ ಸೈನಿಕ ಪಡೆ ಹೆಚ್ಚಾದಷ್ಟೂ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ಜಾಸ್ತಿಯಾದವು, ದೊಂಡಿಯಾನನ್ನು ಹುಡುಕುವುದು – ಗುರುತಿಸುವುದು ಸುಲಭವಾಯಿತು. ವೆಲ್ಲೆಸ್ಲಿ ಪಡೆಗಳ ನಿರಂತರ ಕಾರ್ಯಾಚರಣೆಯಿಂದಾಗಿ, ಕೊನೆಗೆ ದೊಂಡಿಯಾ ಕೃಷ್ಣಾ ನದಿಯ ದಂಡೆಗೆ ಬಂದ, ಬಿರುಸಾಗಿ ಹರಿಯುತ್ತಿರುವ ನದಿಯ ಅಂಚಿಗೆ ಬಂದುಬಿಟ್ಟ. ಒಂದೆಡೆ ಆಳ ಸಮುದ್ರ ಮತ್ತೊಂದೆಡೆ ಸೈತಾನನಿಂದ ಸುತ್ತುವರಿದಂತೆ ದೊಂಡಿಯಾನನ್ನು ಸುತ್ತುವರಿಯಲಾಯಿತು ಮತ್ತು ಮೇಲ್ ದರ್ಜೆಯ ಸೈನಿಕ ಪಡೆಯಿಂದ ಅವನನ್ನು ಮಣಿಸಲಾಯಿತು. 1800ರ ಸೆಪ್ಟೆಂಬರ್ 10ರಂದು ದೊಂಡಿಯಾ ಬ್ರಿಟೀಷರ ಎದುರಿನ ಕದನದಲ್ಲಿ ಹುತಾತ್ಮನಾದ.
ಈ ಪರಿಸ್ಥಿತಿಗಿಂತ ಹೆಚ್ಚೇನೂ ಭಿನ್ನವಲ್ಲದ ಪರಿಸ್ಥಿತಿಯ (ದೆಹಲಿ ಸೋತ ನಂತರ ಬಂಡಾಯ ಸೈನಿಕರು ಹಳ್ಳಿಗಳ ಕಡೆಗೆ ಚದುರಿಹೋದಾಗ) ಬಗ್ಗೆ ಫ್ರೆಡರಿಕ್ ಏಂಜೆಲ್ಸ್ ಬರೆಯುತ್ತಾರೆ: “ಎಲ್ಲಿಯವರೆಗೆ ಬಂಡಾಯ ಸೈನಿಕರು ದೊಡ್ಡ ಸಂಖೈಯಲ್ಲಿದ್ದರೋ, ಎಲ್ಲಿಯವರೆಗೆ ಇದು ಆಕ್ರಮಣದ ಮತ್ತು ದೊಡ್ಡ ಮಟ್ಟದ ತೀಕ್ಷ್ಣ ಯುದ್ಧದ ಪ್ರಶ್ನೆಯಾಗಿತ್ತೋ, ಇಂಗ್ಲೀಷ್ ಪಡೆಗಳಿಗೆ ಇಂತಹ ಕಾರ್ಯಾಚರಣೆಯಲ್ಲಿದ್ದ ಉನ್ನತಿ ಅವರಿಗೆ ಅನುಕೂಲಕರವಾಗಿತ್ತು.” (11)
ಮುಂದಿನ ವಾರ:
ವೆಲ್ಲೂರಿನ ಬಂಡಾಯ
No comments:
Post a Comment