Aug 10, 2016

ಗೋವಾ ವಿದಾನಸಭಾ ಚುನಾವಣೆಗಳು: ಅಖಾಡಕ್ಕಿಳಿಯಲಿರುವ ಆಮ್ ಆದ್ಮಿ ಪಕ್ಷ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
10/08/2016
ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿದಾನಸಭೆಗಳ ಚುನಾವಣೆಗಳು ತಮ್ಮದೇ ಆದ ರಾಜಕೀಯ ಕಾರಣಗಳಿಗಾಗಿ ಮಾಧ್ಯಮಗಳಲ್ಲಿ ಪ್ರಾಮುಖ್ಯತೆ ಪಡೆದು ಚರ್ಚಿತವಾಗುತ್ತಿದ್ದರೆ, ಗೋವಾದಂತಹ ಪುಟ್ಟ ರಾಜ್ಯಗಳಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯಾಗಲಿ ಅವು ರಾಷ್ಟ್ರ ರಾಜಕಾರಣಕ್ಕೆ ನೀಡಬಲ್ಲ ಕೊಡುಗೆಗಳ ಬಗ್ಗೆಯಾಗಲಿ ನಾವ್ಯಾರು ಗಂಭೀರವಾಗಿ ಯೋಚಿಸುತ್ತಿಲ್ಲವೆಂಬುದು ವಿಷಾದದ ಸಂಗತಿ. ರಾಷ್ಟ್ರದ ಸಂಸತ್ತಿಗೆ ಅತಿ ಹೆಚ್ಚು ಸಂಸದರನ್ನು ನೀಡುವ ಉತ್ತರಪ್ರದೇಶಕ್ಕಾಗಲಿ, ಪ್ರದಾನಿಯವರ ತವರು ರಾಜ್ಯ ಗುಜರಾತಿಗಾಗಲಿ, ದೆಹಲಿಯ ಸನಿಹದಲ್ಲಿರುವ ಪಂಜಾಬಿಗಾಗಲಿ ನೀಡುವ ರಾಜಕೀಯ ಪ್ರಾದಾನ್ಯತೆಯಲ್ಲಿ ಒಂದಿಷ್ಟನ್ನಾದರು ನಾವು ಗೋವಾದಂತಹ ಪುಟ್ಟ ರಾಜ್ಯಗಳಿಗೆ ನೀಡದೇ ಹೋದರೆ ‘ಭಿನ್ನತೆಯಲ್ಲಿ ಏಕತೆ’ ಎನ್ನುವ ನಮ್ಮ ಘೋಷವಾಕ್ಯಕ್ಕೆ ಯಾವ ಅರ್ಥವೂ ಇರುವುದಿಲ್ಲ. ಅದರಲ್ಲೂ ಈಗ ರಾಷ್ಟ್ರದ ರಕ್ಷಣಾ ಮಂತ್ರಿಯಾಗಿರುವವರು ಗೋವಾದವರು ಎಂಬ ಹಿನ್ನೆಲೆಯಲ್ಲಾದರು ಗೋವಾದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಹೊಂದಿರುವುದು ಅಗತ್ಯವಾಗಿದೆ. ಗೋವಾ ಮತ್ತು ಕರ್ನಾಟಕದ ನಡುವೆ ಭುಗಿಲೆದ್ದಿರುವ ಮಹಾದಾಯಿ ನದಿನೀರಿನ ಹಂಚಿಕೆಯ ವಿವಾದದ (ಕಳಸಾ ಬಂಡೂರಿ ಹೋರಾಟ) ಈ ಸನ್ನಿವೇಶದಲ್ಲಿ ಗೋವಾದ ರಾಜಕಾರಣದಲ್ಲಾಗಬಹುದಾದ ಸಣ್ಣಪುಟ್ಟ ಕದಲಿಕೆಗಳು ಕರ್ನಾಟಕದ ಮಟ್ಟಿಗೆ ಮುಖ್ಯವಾಗುವ ದೃಷ್ಠಿಯಿಂದಲಾದರು ನಾವು ಕನ್ನಡಿಗರು ಗೋವಾದ ಪ್ರಸಕ್ತ ರಾಜಕೀಯದ ಬೆಳವಣಿಗೆ ಮತ್ತು ಬದಲಾವಣೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವುದು ಅಗತ್ಯವೆಂಬ ನನ್ನ ಆಶಯವೇ ಈ ಬರಹಕ್ಕೆ ಮುಖ್ಯ ಕಾರಣವೆಂದರೆ ತಪ್ಪಾಗಲಾರದು.

1985 ರ ನಂತರ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನಗಳನ್ನು ಪಡೆದ ನಂತರ ಗೋವಾದ ರಾಜಕೀಯ ಚಿತ್ರಣ ಬದಲಾಗುತ್ತ ಹೋಯಿತು. ಅಲ್ಲಿಯವರೆಗಿದ್ದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಅಧಿಪತ್ಯ ಇಲ್ಲವಾಗುತ್ತ ಕಾಂಗ್ರೆಸ್ ಮತ್ತು ಬಾಜಪಗಳ ನಡುವೆ ನೇರ ಹಣಾಹಣಿಯ ಚುನಾವಣಾ ಕಾಳಗ ಶುರುವಾಯಿತು. ಈ ಎರಡೂ ರಾಷ್ಟ್ರೀಯ ಪಕ್ಷಗಳು ಒಂದೊಂದು ಮೈತ್ರಿಕೂಟವನ್ನು ರಚಿಸಿಕೊಂಡೇ ಚುನಾವಣೆ ಎದುರಿಸುತ್ತ ಬಂದವು. ತನ್ನ ಮೊದಲಿನ ಪ್ರಾಬಲ್ಯ ಕಳೆದುಕೊಂಡ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಆಗಾಗ ತನ್ನ ಮೈತ್ರಿಕೂಟವನ್ನು ಬದಲಾಯಿಸುತ್ತ ಗೋವಾ ರಾಜಕಾರಣದ ಏಳು ಬೀಳುಗಳನ್ನು ನಿಯಂತ್ರಿಸತೊಡಗಿತು. ಇವುಗಳ ಜೊತೆಗೆ ಶರದ್‍ಪವಾರರ ಎನ್.ಸಿ.ಪಿ. ಗೋವಾ ವಿಕಾಸ್ ಪಕ್ಷಗಳು ಕೂಡ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದವು.

ಇನ್ನು 2005ರಿಂದ 2012ರವರೆಗು ಅಧಿಕಾರ ನಡೆಸಿದ ಕಾಂಗ್ರೆಸ್ 2012 ರಲ್ಲಿ ಬಾಜಪ ಮೈತ್ರಿಕೂಟದ ಎದುರು ಸೋಲನ್ನಪ್ಪಿ ಕೂರಬೇಕಾಯಿತು. ಗೋವಾದ ಒಟ್ಟು 40 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳನ್ನು( ಬಾಜಪ-21, ಗೋಮಾಂತಕ್ ಪಕ್ಷ-3) ಗೆದ್ದ ಬಾಜಪ ಇಂದಿನ ರಕ್ಷಣಾ ಮಂತ್ರಿಯಾಗಿರುವ ಶ್ರೀ ಮನೋಹರ್ ಪರಿಕ್ಕರ್ ಅವರನ್ನು ತನ್ನ ಮುಖ್ಯಮಂತ್ರಿಯನ್ನಾಗಿಸಿತು. ಕೇವಲ 9 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕೂರಬೇಕಾಗಿ ಬಂತು. ನಂತರ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ದಿಸಿ ಗೆದ್ದ ಮನೋಹರ್ ಪಣಿಕ್ಕರ್ ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಆಗ ತೆರವಾದ ಮುಖ್ಯಮಂತ್ರಿಯ ಕುರ್ಚಿಯನ್ನು ಅಲಂಕರಿಸಿದವರು ಮನೋಹರ್ ಅವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಶ್ರೀ ಲಕ್ಷಿಕಾಂತ್ ಪರೇಸ್ಕರ್. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಜಿ ಪ್ರಚಾರಕರಾಗಿದ್ದವರು. 

ಮುಂದಿನ ವರ್ಷದ ಚುನಾವಣೆಯನ್ನು ಎದುರಿಸಲು ಬಾಜಪ ತಮ್ಮ ಮುಖ್ಯಮಂತ್ರಿಯಾದ ಲಕ್ಷ್ಮಿಕಾಂತ್ ಅವರನ್ನೇ ಅವಲಂಬಿಸುವ ಪರಿಸ್ಥಿತಿಯಿದೆ. ಆದರೆ ಪಕ್ಷದ ಆಂತರಿಕ ವಲಯದಲ್ಲಿ ಇವತ್ತಿಗೂ ಮನೋಹರ್ ಪಣಿಕ್ಕರ್ ಅವರ ಬಗ್ಗೆಯೇ ಹೆಚ್ಚು ಒಲವಿದ್ದರೂ, ಅವರು ಹಿಂದಿರುಗಿ ರಾಜ್ಯ ರಾಜಕಾರಣಕ್ಕೆ ಬರುವುದನ್ನು ಪಕ್ಷವಾಗಲಿ, ಅವರಾಗಲಿ ಒಪ್ಪಲು ಸಾದ್ಯವಿಲ್ಲ. ಹೀಗಾಗಿ ಕಳೆದೆರಡು ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ಪರೇಸ್ಕರ್ ಅವರೇ ಬಾಜಪವನ್ನು ಮುನ್ನಡೆಸಲಿದ್ದು ಸ್ವತ: ಮನೋಹರ್ ಪಣಿಕ್ಕರ್ ಅವರೇ ಇದನ್ನು ಖಚಿತ ಪಡಿಸಿದ್ದಾರೆ. ಇನ್ನು ಬಾಜಪದ ಮೈತ್ರಿಕೂಟದಲ್ಲಿ ಯಾವ ಬದಲಾವಣೆಯೂ ಆಗುವ ಸಾದ್ಯತೆಗಳಿಲ್ಲವಾಗಿ ಅದು ಯಾವುದೆ ಭಿನ್ನಮತಗಳಿಲ್ಲದೆ ಚುನಾವಣೆ ಎದುರಿಸಲು ಸಜ್ಜಾಗಿದೆ. ಸದ್ಯಕ್ಕೆ ಅದಕ್ಕಿರುವ ದೊಡ್ಡ ತೊಡಕೆಂದರೆ ಆಡಳಿತ ವಿರೋಧಿ ಅಲೆಯ ಭಯವಷ್ಟೆ!

ಇನ್ನು ಕಾಂಗ್ರೆಸ್ ಕೂಡ ತನ್ನ ಚುನಾವಣಾ ಸಿದ್ದತೆಗಳನ್ನು ಮಾಡಿಕೊಳ್ಳಲು ಪ್ರಾರಂಬಿಸಿದ್ದು, ಈ ಬಾರಿ ಅದು ಯಾವ ಪಕ್ಷಗಳ ಜೊತೆಗು ಮೈತ್ರಿ ಮಾಡಿಕೊಳ್ಳದಿರಲು ನಿರ್ದರಿಸಿದೆ. ಹಾಗೊಂದು ವೇಳೆ ಮೈತ್ರಿಯ ಅನಿವಾರ್ಯತೆ ಎದುರಾದರೆ ಬ್ಲಾಕ್ ಮಟ್ಟದಲ್ಲಿ ಪಕ್ಷದ ನಾಯಕರು ತೆಗೆದುಕೊಳ್ಳಬಹುದಾದ ತೀರ್ಮಾನಗಳನ್ನು ಆಧರಿಸಿಯೇ ತೆಗೆದುಕೊಳ್ಳಲಾಗುವುದೆಂದು ಅದರ ಕೇಂದ್ರ ನಾಯಕರು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಮಾಂಡೋವಿ ನದಿಯಿಂದ ಕ್ಯಾಸೀನೊಗಳನ್ನು ಸ್ಥಳಾಂತರಿಸುವ ವಿವಾದವನ್ನು ಕೈಗೆತ್ತಿಕೊಂಡಿರುವ ಕಾಂಗ್ರೆಸ್ ಬಾಜಪವು ಗೋವಾದ ಕ್ಯಾಸಿನೋ ಮಾಲೀಕರ ಜೊತೆ ಕೈ ಜೋಡಿಸಿ ಸರಕಾರ ನಡೆಸುತ್ತಿದ್ದಾರೆಂಬ ಗಂಭೀರ ಆರೋಪವನ್ನು ಸಹ ಮಾಡಿದೆ. ಗೋವಾ ಪ್ರದೇಶ ಕಾಂಗ್ರೆಸ್ ಅದ್ಯಕ್ಷ ಲೂಸಿನೊ ಫೆಲೆರೋ ಈ ಬಗ್ಗೆ ಮಾಧ್ಯಮಗಳ ಮೂಲಕ ತಮ್ಮ ಹೋರಾಟವನ್ನು ನಡೆಸುತ್ತಿದ್ದಾರೆ.

ಇವೆಲ್ಲಕ್ಕಿಂತ ಈ ಬಾರಿ ಗೋವಾ ಚುನಾವಣೆಗಳ ಮುಖ್ಯವಾದ ಅಂಶವೆಂದರೆ ದೆಹಲಿಯ ಗದ್ದುಗೆಯನ್ನು ಹಿಡಿದು ಕೂತಿರುವ ಆಮ್ ಆದ್ಮಿ ಪಕ್ಷದ ಶ್ರೀ ಅರವಿಂದ್ ಕೇಜ್ರೀವಾಲ್ ಗೋವಾದ ವಿದಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಭ್ಯರ್ಥಿಗಳನ್ನು ಹಾಕುವುದಾಗಿ ಘೋಷಿಸಿರುವುದಾಗಿದೆ. ಬಹುಶ: ಅಧಿಕಾರ ರೂಢ ಬಾಜಪಕ್ಕೆ ತಲೆ ನೋವಾಗಿರುವುದೇ ಇದು. ಇತ್ತೀಚೆಗೆ ಈ ಸಂಬಂದವಾಗಿ ಗೋವಾದಲ್ಲಿ ಒಂದು ರ್ಯಾಲಿಯನ್ನು ಉದ್ದೇಶಿಸಿ ಮಾತಾಡಿದ ಅರವಿಂದ್ ಕೇಜ್ರೀವಾಲರು 40 ಕ್ಷೇತ್ರಗಳ ಪೈಕಿ 35 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿ, ಹಿಂದೆ ದೆಹಲಿಯಲ್ಲಿ ಮಾಡಿದಂತೆ ಮನೆಮನೆಗೆ ತೆರಳಿ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ನೀಡುವ ಪ್ರಚಾರ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಗೋವಾದ ಸ್ಥಳೀಯ ಸಮಸ್ಯೆಗಳ ಕುರಿತಾದ ಗೋವಾ ಸಂವಾದ್ ಎನ್ನುವ ಕೈಪಿಡಿಯನ್ನೂ ಈಗಾಗಲೇ ಸಿದ್ದಪಡಿಸುವ ಕಾರ್ಯ ನಡೆಯುತ್ತಿದೆ. ಗೋವಾದ ಸಾಕ್ಷರತೆ ಪ್ರಮಾಣ ಶೇಕಡಾ 88.70 ಇದ್ದು ಆಮ್ ಆದ್ಮಿ ಪಕ್ಷ ತನ್ನ ಪ್ರಣಾಳಿಕೆಗಳ ಮೂಲಕ ಹೆಚ್ಚು ಜನರನ್ನು ತಲುಪುವ ಸಾದ್ಯತೆ ಹೆಚ್ಚಾಗಿದೆ. ಆಮ್ ಆದ್ಮಿ ಪಕ್ಷದ ನಿಲುವನ್ನು ಮೆಚ್ಚಬಲ್ಲ ಜನರು ಗೋವಾದಲ್ಲಿ ಹೆಚ್ಚಿದ್ದರು, ಅದು ಈವರೆಗೆ ದೆಹಲಿಯಲ್ಲಿ ನಡೆಸಿದ ಆಡಳಿತದ ವೈಖರಿಯನ್ನು ಗಮನಿಸಿರುವ ಗೋವಾದ ಮತದಾರರು ಬಹಳ ಯೋಚಿಸಿಯೇ ಈ ತೀರ್ಮಾನಕ್ಕೆ ಬರಲಿದ್ದಾರೆ. 2017 ರಲ್ಲಿಯೇ ಅಧಿಕಾರ ಹಿಡಿಯಲು ಕಷ್ಟವೆಂಬುದನ್ನು ಅರಿತಿರುವ ಕೇಜ್ರೀವಾಲರು 2019ರ ಲೋಕಸಭಾ ಚುನಾವಣೆಗಾಗಿ ಈ ಚುನಾವಣೆಯನ್ನು ಪೂರ್ವಬಾವಿ ಸಿದ್ದತಾ ಚುನಾವಣೆಯನ್ನಾಗಿ ಬಳಸಿಕೊಳ್ಳಲು ನಿರ್ದರಿಸಿದಂತಿದೆ. ಆದರೆ ರಾಜಕಾರಣದಲ್ಲಿ ಒಂದು ವರ್ಷದ ಅವಧಿ ದೊಡ್ಡದು. ಹಾಗಾಗಿ ಮುಂದಿನ ಚುನಾವಣೆಯ ಹೊತ್ತಿಗೆ ಗೋವಾದ ರಾಜಕಾರಣದಲ್ಲಿ ಆಗಬಹುದಾದ ಬೆಳವಣಿಗೆಗಳನ್ನಾಗಲಿ, ಬೀಸಬಹುದಾದ ಹೊಸಗಾಳಿಯ ಬಗೆಗಾಗಲಿ ನಾವೀಗಲೇ ಭವಿಷ್ಯ ನುಡಿಯಲಾಗುವುದಿಲ್ಲ.

ಕೊನೆಯದಾಗಿ: ಕರ್ನಾಟಕದ ಉತ್ತರ ಭಾಗದಲ್ಲಿ ನಡೆಯುತ್ತಿರುವ ಕಳಸಾ ಬಂಡೂರಿ ಹೋರಾಟದ ಹಿನ್ನೆಲೆಯಲ್ಲಿ ನೋಡಿದರೆ ಬಾಜಪ ಅಥವಾ ಕಾಂಗ್ರೆಸ್ ಯಾವುದೇ ಪಕ್ಷ ಅಲ್ಲಿ ಅಧಿಕಾರಕ್ಕೆ ಬಂದರೂ ಮಹಾದಾಯಿ ನದಿ ನೀರಿನ ಹಂಚಿಕೆಗೆ ನ್ಯಾಯಾಧಿಕರಣದ ಆಚೆಗೊಂದು ಪರಿಹಾರ ಸಿಗುತ್ತದೆಯೆಂದು ನಂಬಲು ಸಾದ್ಯವಿಲ್ಲ. ಯಾಕೆಂದರೆ ಬಾಜಪವಾಗಲಿ, ಕಾಂಗ್ರೆಸ್ಸಾಗಲಿ ಮಹದಾಯಿ ನದಿಯನ್ನು ಮುಂದಿನ ಚುನಾವಣೆಯ ಮುಖ್ಯ ವಿಷಯವನ್ನಾಗಿ ಮಾಡಿ ಗೋವಾ ಜನರ ಮತಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಗೋವಾದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೇರಿದರೂ ನಾವು ನ್ಯಾಯಾಲಯದ ಮೂಲಕವೇ ಹೋರಾಡಿ ನೀರು ಪಡೆಯಬೇಕಾಗಿದೆ. ಗೋವಾ ಕನ್ನಡಿಗರು ತಮ್ಮದೇ ಆದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ರಾಜ್ಯದ ಹಿತಕಾಯುವ ಪಕ್ಷಕ್ಕೆ ನಮ್ಮ ಮತವೆಂದು ಘೋಷಿಸುವ ಸ್ಥಿತಿಯಲ್ಲಿ ಇಲ್ಲ. ಗೋವಾದ ಕನ್ನಡಿಗರಿಗೆ ಇವತ್ತಿಗೂ ಶಾಶ್ವತ ವಸತಿ ಸೌಲಭ್ಯವಾಗಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಲಭ್ಯತೆಯಾಗಲಿ ಇಲ್ಲದೆ ಅತಂತ್ರ ಸ್ತಿತಿಯಲ್ಲಿರುವುದರಿಂದ ನಾವು ಅವರಿಂದ ಅಂತಹದೊಂದು ನಿರೀಕ್ಷೆ ಇಟ್ಟುಕೊಳ್ಳುವುದು ಕೂಡ ತಪ್ಪಾಗುತ್ತದೆ. ಹಾಗಾಗಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಗಳ ನಂತರ ಮಹಾದಾಯಿ ಸಮಸ್ಯೆ ಬಗೆ ಹರಿದು ಬಿಡುತ್ತದೆಯೆಂದು ನಂಬುವುದು ಮೂರ್ಖತನವಗುತ್ತದೆ. 

No comments:

Post a Comment