ಸಾಂದರ್ಭಿಕ ಚಿತ್ರ |
10/07/2016
ಹಿಜ್ಡಾಗಳ ಬದುಕೇ ವಿಚಿತ್ರ ವಿಕ್ಷಿಪ್ತವಾಗಿ ಕಾಣುತ್ತದೆ. ನಗರಗಳು ದೊಡ್ಡದಾದಷ್ಟೂ ಇವರು ಹೆಚ್ಚು ಕಾಣುತ್ತಾರೆ. ಅಂಗಡಿ ಮುಂಗಟ್ಟುಗಳಿಂದ, ರೈಲುಗಳಲ್ಲಿ ಭಿಕ್ಷೆ ಪಡೆಯುತ್ತಿದ್ದವರು ಟ್ರಾಫಿಕ್ ಸಿಗ್ನಲ್ಲುಗಳಿಗೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ್ದಾರೆ. ಹಲವು ಮದುವೆಗಳಲ್ಲಿ ಇವರನ್ನು ಕರೆಸಿ ದುಡ್ಡು ಕೊಟ್ಟು ಕಳುಹಿಸುವುದು ಸಂಪ್ರದಾಯದಂತೆ ನಡೆಯಲಾರಂಭಿಸಿದೆ. ಹಲವೆಡೆ ಇವರೇ ಮದುವೆ ಮನೆಗೆ ಬಂದು ದುಡ್ಡು ಪಡೆದು ಹೋಗುವುದೂ ನಡೆಯುತ್ತಿದೆ. ಈ ಕಾರಣಕ್ಕೇ ಏನೋ ಇವರನ್ನು ಸೌಜನ್ಯದ ರೂಪದಲ್ಲಿ 'ಮಂಗಳಮುಖಿ' ಎಂದು ಬರೆಯುವುದು ಹೆಚ್ಚೆಚ್ಚು ನಡೆಯುತ್ತಿದೆ. ಮುಖದಲ್ಯಾವ ಮಂಗಳ ಅಮಂಗಳ? ಮಾತನಾಡುವಾಗ ಹಿಜ್ಡಾ ಚಕ್ಕಾ ಎಂದು ಹೇಳಿದರೂ ಬರೆಯುವಾಗ ಅದೇಕೆ ಮಂಗಳಮುಖಿ ಎಂದು ಬರೆಯುತ್ತಾರೋ? ತೃತೀಯಲಿಂಗಿಗಳು ಎಂದು ಕರೆಯುವುದು ಹೆಚ್ಚು ಸೂಕ್ತವೇನೋ.
ಮುಂಚೆಲ್ಲ ಹಿಜ್ಡಾಗಳು ಹಣ ಕೇಳಿದ ತಕ್ಷಣ ಕೊಡದೇ ಹೋದರೆ ದುಡ್ಡು ಕೊಡುವವರೆಗೂ ಪೀಡಿಸುತ್ತಿದ್ದರು, ಈಗ ಪರವಾಯಿಲ್ಲ ಮುಂದೆ ಹೋಗಿ ಎಂದ ತಕ್ಷಣ ಹೊರಟುಹೋಗುತ್ತಾರೆ. ಆ ಕ್ಷಣಕ್ಕೆ 'ಏನ್ ಬದುಕಪ್ಪ ಇವರ್ದು' ಎಂದು ಬಯ್ದುಕೊಂಡರೂ ಮತ್ಯಾವ ಬದುಕನ್ನು ಸಮಾಜ ಇವರಿಗೆ ಕೊಟ್ಟಿದೆ ಎಂಬ ಪ್ರಶ್ನೆಯೂ ಉತ್ತರ ಸಿಗದಂತೆ ಕಾಡುತ್ತದೆ. ಅಲ್ಲೆಲ್ಲೋ ಒಬ್ಬರು ಪದ್ಮಿನಿ ಪ್ರಕಾಶ್ ಎನ್ನುವ ತೃತೀಯಲಿಂಗಿ ಸುದ್ದಿ ಓದುವವರಾಗಿ ಕೆಲಸಕ್ಕೆ ಸೇರಿದರು. ಮತ್ತೆಲ್ಲೋ ಅಪರೂಪಕ್ಕೆ ತೃತೀಯಲಿಂಗಿಗಳು ಚುನಾವಣೆಗೆ ನಿಂತರು ಎನ್ನುವ ವರದಿಗಳು ಆಗೀಗ ಕಾಣಿಸಿಕೊಳ್ಳುತ್ತವೆಯಾದರೂ ಹೆಚ್ಚಿನಂಶ ತೃತೀಯಲಿಂಗಿಗಳೆಂದರೆ ಹಣಕ್ಕಾಗಿ ಪೀಡಿಸುವವರು ಮತ್ತು ವೇಶ್ಯಾವಾಟಿಕೆಯಲ್ಲಿರುವವರು ಎನ್ನುವುದೇ ನಮಗೆ ತೋಚುವ ಸತ್ಯ.
ಪಶ್ಚಿಮ ಬಂಗಾಳ ಸರಕಾರ ತೃತೀಯಲಿಂಗಿಗಳಿಗೆ ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯ ಕಟ್ಟಬೇಕೆಂದು ನಿರ್ಧರಿಸಿರುವುದರ ಬಗೆಗಿನ ಸುದ್ದಿ ಓದಿದಾಗ ಭಾರತ ಹತ್ತು ವರುಷದ ನಂತರ ಏನನ್ನು ಯೋಚಿಸುತ್ತದೋ ಅದನ್ನು ಬಂಗಾಳ ಇವತ್ತು ಯೋಚಿಸುತ್ತದೆ ಎನ್ನುವ ಮಾತು ನೆನಪಾಯಿತು. ಅಲ್ಲಿನ ಉನ್ನತ ಶಿಕ್ಷಣ ಇಲಾಖೆ ಸರಕಾರಿ ಶಾಲಾ ಕಾಲೇಜುಗಳ ಪ್ರಿನ್ಸಿಪಾಲರಿಗೆ ತೃತೀಯಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ಕಟ್ಟುವಂತೆ ಆದೇಶ ಕಳುಹಿಸಿದೆ. ಕೊಲ್ಕತ್ತಾದ ಲಾಲ್ ಬಜಾರಿನ ಪೋಲೀಸ್ ಠಾಣೆಯಲ್ಲೀಗಾಗಲೇ ತೃತೀಯಲಿಂಗಿಗಳಿಗೊಂದು ಶೌಚಾಲಯ ಕಟ್ಟಲಾಗುತ್ತಿದೆ ಎಂದು ಇಂಡಿಯನ್ ಎಕ್ಷ್ ಪ್ರೆಸ್ ವರದಿ ಮಾಡಿದೆ. ತೃತೀಯಲಿಂಗಿಗಳು ಶಾಲಾ ಕಾಲೇಜುಗಳಲ್ಲಿ ಓದುತ್ತಾರೆ ಎನ್ನುವುದೇ ನಮ್ಮ ಯೋಚನಾಲಹರಿಗೆ ದಕ್ಕದೇ ಇರುವಾಗ, ಅವರನ್ನು ಮನುಷ್ಯರೆಂದು ಪರಿಗಣಿಸುವುದೇ ನಮಗೆ ಕಷ್ಟಕರವಾಗಿರುವಾಗ ಪಶ್ಚಿಮ ಬಂಗಾಳದ ನಿರ್ಧಾರ ತೃತೀಯಲಿಂಗಿಗಳ ಬದುಕಿಗೊಂದು ಘನತೆ ಕೊಡುವಂತೆ ಮಾಡಿದೆ. ತೃತೀಯಲಿಂಗಿಗಳ ಬದುಕೂ ಬದಲಾಗಲಿ.
No comments:
Post a Comment