ಡಾ. ಅಶೋಕ್. ಕೆ. ಆರ್
30/07/2016
ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ, 7.56 ಟಿ.ಎಂ.ಸಿ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳಬೇಕೆಂದಿದ್ದ ಕರ್ನಾಟಕದ ಆಸೆಗೆ ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪು ತಣ್ಣೀರೆರಚಿದೆ. ಮಧ್ಯಂತರ ತೀರ್ಪು ಕರ್ನಾಟಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಬಂದಿರುವುದಕ್ಕೆ ಅಚ್ಚರಿ ಪಡುವ ಅವಶ್ಯಕತೆಯಿದೆಯಾ? ಈ ತೀರ್ಪಿಗೆ ಕಾಂಗ್ರೆಸ್ ಕಾರಣವಾ? ಬಿಜೆಪಿ ಕಾರಣವಾ? ‘ನಿಮ್ಮ ತಪ್ಪು, ನಿಮ್ದೇ ತಪ್ಪು’ ಎಂದು ಎರಡೂ ರಾಷ್ಟ್ರೀಯ ಪಕ್ಷಗಳು ಕೆಸರೆರಚಾಡುತ್ತಿವೆ. ನಿಜವಾಗಿ ತಪ್ಪು ಯಾರದ್ದು?
ಜಲದ ವಿಷಯದಲ್ಲಿ ನಮ್ಮಲ್ಲಿರುವ ರಾಜಕೀಯ ಪಕ್ಷಗಳಷ್ಟೇ ಅಲ್ಲ ಜನರಿಗೂ ಭರ್ಜರಿ ಆಲಸ್ಯ. ಜನರ ಆಲಸ್ಯ ರಾಜಕೀಯದಲ್ಲಿ ಪ್ರತಿಫಲಿಸುತ್ತಿದೆಯೋ ರಾಜಕಾರಣಿಗಳ ಆಲಸ್ಯ ಜನರಲ್ಲಿ ಪ್ರತಿಫಲಿಸುತ್ತಿದೆಯೋ ಹೇಳುವುದು ಕಷ್ಟ. ಪರರಾಜ್ಯಗಳ ರಾಜಕಾರಣಿಗಳು ಕೇಂದ್ರದಲ್ಲಿ ‘ಪವರ್ಫುಲ್’ ಎಂದು ಉದ್ಗರಿಸುವ ನಾವು ನಮ್ಮ ಸಂಸದರ್ಯಾಕೆ ಕೇಂದ್ರದಲ್ಲಿ ‘ವೀಕು’ ಎಂಬ ಪ್ರಶ್ನೆಯನ್ನೇ ಕೇಳುವುದಿಲ್ಲ. ನಮ್ಮ ಸಂಸದರು ಕರ್ನಾಟಕದ ವಿಷಯವಾಗಿ ಅದೆಷ್ಟು ಸಲ ಪಕ್ಷಭೇದ ಮರೆತು ಸಂಸತ್ತಿನಲ್ಲಿ ದನಿಯೆತ್ತಿದ್ದಾರೆ ಎಂದು ಗಮನಿಸುವುದಿಲ್ಲ. ಕರ್ನಾಟಕದಲ್ಲೊಂದು ಸಶಕ್ತ ಪ್ರಾದೇಶಿಕ ರಾಜಕೀಯ ಪಕ್ಷವಿಲ್ಲದಿರುವುದು ಇದಕ್ಕೊಂದು ಕಾರಣ. ಗೋವಾದಲ್ಲೂ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಇರುವುದರಿಂದ ಪ್ರಾದೇಶಿಕ ಪಕ್ಷದ ಕೊರತೆಯಷ್ಟೇ ಕಾರಣವೆಂದೂ ಹೇಳಲಾಗದು. ಇರುವ ರಾಷ್ಟ್ರೀಯ ಪಕ್ಷಗಳ ನಾಯಕರಿಗೂ ಇಚ್ಛಾಶಕ್ತಿ ಕಡಿಮೆ. ನಮ್ಮಲ್ಲಿರುವ ರಾಜಕೀಯ ನೇತಾರರು / ಸರಕಾರಗಳು ಬೀದಿಯಲ್ಲಿ ನಿಂತು ಕರ್ನಾಟಕದ ಪರವಾಗಿ, ಇಲ್ಲಿನ ನದಿಗಳ ಪರವಾಗಿ ವೀರಾವೇಷದ ಮಾತುಗಳನ್ನಾಡುವ ಅವಶ್ಯಕತೆಯೇನೂ ಇಲ್ಲ. ಕಾರಣ ಕಾವೇರಿಯಿರಲಿ, ಕಳಸಾ ಬಂಡೂರಿಯಿರಲಿ ಬೀದಿಯಲ್ಲಿ ನಿಂತು ಗೆಲ್ಲುವ ಸಂಗತಿಗಳಲ್ಲ. ಈ ಸಂಗತಿಗಳನ್ನು ಗೆಲ್ಲುವುದಕ್ಕಿರುವುದು ಎರಡೇ ದಾರಿ, ಒಂದು ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರುವುದು; ರಾಜಕೀಯ ಕಾರಣಗಳಿಗಾಗಿ ಅದನ್ನಂತೂ ನಮ್ಮ ಸಂಸದರಿಂದ ನಿರೀಕ್ಷಿಸುವುದು ಬೇಡ. ಎರಡು ನ್ಯಾಯಾಧೀಕರಣದ ಮೆಟ್ಟಿಲೇರಿದ ಪ್ರಕರಣಗಳಲ್ಲಿ ಕರ್ನಾಟಕದ ವಾದವನ್ನು ಸಮರ್ಥವಾಗಿ ಮಂಡಿಸುವಂತೆ ಮಾಡುವುದು. ನ್ಯಾಯಾಲಯಗಳಲ್ಲಿ ಕರ್ನಾಟಕದ ಹಿತಾಸಕ್ತಿಯ ವಿರುದ್ಧ ತೀರ್ಪು ಬರುವುದು ನಮ್ಮ ವಕೀಲರು ಸಮರ್ಪಕವಾಗಿ ವಾದ ಮಂಡಿಸದೇ ಇರುವುದರಿಂದ, ಸರಕಾರಗಳು ನ್ಯಾಯಾಲಯ ಕೇಳಿದ ದಾಖಲೆಗಳನ್ನು ಸರಿಯಾಗಿ ನೀಡದೇ ಇರುವುದರಿಂದ ಎಂದು ತಮ್ಮ ಎಫ್.ಬಿ ಪೋಸ್ಟಿನಲ್ಲಿ ಬರೆದಿದ್ದಾರೆ ಸಿ.ಎಸ್.ದ್ವಾರಕಾನಾಥ್. ಕರ್ನಾಟಕದ ನೆಲ ಜಲದ ವಿಷಯದಲ್ಲಿ ಪರರಾಜ್ಯದ ವಕೀಲರನ್ನೇ ಎಲ್ಲಾ ಸರಕಾರಗಳೂ ನೇಮಿಸುವುದ್ಯಾಕೆ ಎಂದವರು ಪ್ರಶ್ನಿಸುತ್ತಾರೆ. ಮಹದಾಯಿಯ ಸಂದರ್ಭದಲ್ಲೂ ನಮ್ಮ ವಾದಕ್ಕೆ ಸೋಲಾಗಿದ್ದಕ್ಕೆ ದಾಖಲೆಗಳನ್ನು ಸರಿಯಾಗಿ ಮಂಡಿಸದೇ ಇರುವುದು ಕಾರಣ, ನಮ್ಮ ಹುಳುಕುಗಳನ್ನು ಮರೆತು ನ್ಯಾಯಾಧೀಕರಣವನ್ನು ದೂರುವುದರಲ್ಲಿ ಪ್ರಯೋಜನವಿದೆಯೇ? ಕರ್ನಾಟಕ ಸರಕಾರಗಳ ನಡೆಗಳು, ಸರಕಾರ ನೇಮಿಸುವ ವಕೀಲರು, ನ್ಯಾಯಾಲಯದಲ್ಲಿ ನಮ್ಮವರು ನಡೆಸುವ ದುರ್ಬಲ ವಾದಗಳಿಗೆಲ್ಲ ದೊಡ್ಡ ಇತಿಹಾಸವೇ ಇರುವಾಗ ಕಳಸಾ ಬಂಡೂರಿ ನಾಲೆಯ ವಿಷಯದಲ್ಲಿ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ತೀರ್ಪು ಬಂದಿರುವುದರ ಬಗ್ಗೆ ಅಚ್ಚರಿ ಪಡುವ ಅವಶ್ಯಕತೆ ಖಂಡಿತ ಇಲ್ಲ.
ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ‘ನಿಮ್ಮಿಂದಾಯ್ತು’ ‘ನಿಮ್ಮಿಂದಾಯ್ತು’ ಎಂದು ಕೆಸರೆರಚಾಟದಲ್ಲಿ ತೊಡಗಿರುವುದು ಮುಂದಿನ ಚುನಾವಣೆಗಳ ದೃಷ್ಟಿಯಿಂದಷ್ಟೇ ಹೊರತು ಮತ್ತೇನಕ್ಕೂ ಅಲ್ಲ. ‘ನೀವು ಗೋವಾದ ಕಾಂಗ್ರೆಸ್ಸಿಗರನ್ನು ಒಪ್ಪಿಸಿ, ನಾವು ಬಿಜೆಪಿಯವರನ್ನು ಒಪ್ಪಿಸುತ್ತೇವೆ’ ‘ನೀವು ಗೋವಾದ ಬಿಜೆಪಿಯವರನ್ನು ಒಪ್ಪಿಸಿ, ನಾವು ಕಾಂಗ್ರೆಸ್ಸಿಗರನ್ನು ಒಪ್ಪಿಸುತ್ತೇವೆ’ ಎಂಬ ಬೂಟಾಟಿಕೆಯ ಮಾತುಗಳೂ ಕೂಡ ಇವರ ರಾಜಕಾರಣದ ಭಾಗವಷ್ಟೇ. ಎರಡೂ ಪಕ್ಷದವರ ರಾಜಕಾರಣ ನಮಗರ್ಥವಾಗಿಬಿಟ್ಟಿದೆ, ಮುಂದಿನ ಸಲ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ಆವೇಶದ ಮಾತುಗಳು ಚುನಾವಣೆ ಬರುತ್ತಿದ್ದಂತೆಯೇ ನಮ್ಮೆಲ್ಲರಿಗೂ ಖಂಡಿತವಾಗಿ ಮರೆತುಹೋಗಿರುತ್ತದೆ, ಮತ್ತದೇ ಜಾತಿಯ ಮುಖ ನೋಡಿಕೊಂಡು ಹೈಕಮ್ಯಾಂಡಿನಲ್ಲಿರುವ ನಾಯಕರ ಮುಖ ನೋಡಿಕೊಂಡು ಮತ ಹಾಕುತ್ತೇವೆ, ಆಮೇಲೆ ಕೈಕೈ ಹಿಸುಕಿಕೊಳ್ಳೋಣ ಬಿಡಿ.
ಇವೆಲ್ಲಾ ರಾಜಕೀಯ ಪ್ರಶ್ನೆಗಳನ್ನು ಪಕ್ಕಕ್ಕೆ ಸರಿಸಿ ನೋಡಿದರೆ ‘ಕಳಸಾ ಬಂಡೂರಿಯ’ ಹೆಸರಿನಲ್ಲಿ ಭಾವನಾತ್ಮಕವಾಗಿ ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆಯೇ ಎಂಬ ಅನುಮಾನ ಬರುತ್ತದೆ. (ಕಳಸಾ ಬಂಡೂರಿಯ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಮುನ್ನೋಟದಲ್ಲಿ ಓದಿ). ಕಳಸಾ ಬಂಡೂರಿ ಯೋಜನೆ 1978ರಲ್ಲೇ ರೂಪುಗೊಂಡಿತ್ತು, 2002ರಲ್ಲಿ ಅದಕ್ಕೆ ಚಾಲನೆ ಕೊಡಬೇಕೆಂದು ನಿರ್ಧರಿಸಲಾಯಿತು. ಈಗ 2016ರಲ್ಲಿದ್ದೇವೆ. ಅಂದರೆ ಹತ್ತಿರತ್ತಿರ ನಲವತ್ತು ವರುಷಗಳಿಂದ ಕಳಸಾ ಬಂಡೂರಿ ಯೋಜನೆ ಕಾರ್ಯಗತವಾಗದೆಯೇ ಉಳಿದಿದೆ. ಇಷ್ಟು ದೀರ್ಘ ವರುಷಗಳಿಂದ ನಿದ್ರಾವಸ್ಥೆಯಲ್ಲಿರುವ ಯೋಜನೆಯಿಂದಷ್ಟೇ ಕುಡಿಯುವ ನೀರು ಸಿಗಲು ಸಾಧ್ಯ ಎಂದ್ಯಾಕೆ ಜನರನ್ನು ನಂಬಿಸಲಾಗಿದೆ. ಸ್ಥಳೀಯ ಮಟ್ಟದ ಯೋಜನೆಗಳನ್ಯಾಕೆ ನಮ್ಮ ಸರಕಾರ ರೂಪಿಸಲಿಲ್ಲ? ಅಥವಾ ರೂಪಿಸಿ ಅವುಗಳು ವಿಫಲವಾದವೇ? ಒಂದೆಡೆ ಕರ್ನಾಟಕದೊಳಗೇ ಎರಡು ಪ್ರದೇಶಗಳ ನಡುವೆ ನೀರಿಗಾಗಿ ಮುನಿಸು ಶುರುವಾಗಿದೆ. ನೇತ್ರಾವತಿ ನದಿ ಸೇರುವ ಎತ್ತಿನಹೊಳೆಯನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ‘ಕುಡಿಯುವ ನೀರಿನ’ ಸಲುವಾಗಿ ತಿರುಗಿಸುವ ಸಾಹಸಕ್ಕೆ ಕರ್ನಾಟಕ ಸರಕಾರ ಕೈ ಹಾಕಿದೆ. ಈ ರೀತಿ ಹಳ್ಳವೊಂದನ್ನು ತಿರುಗಿಸುವುದು ಪ್ರಕೃತಿಗೆ ಮಾರಕ, ಪಶ್ಚಿಮಘಟ್ಟಕ್ಕೆ ಮಾರಕ ಎಂದು ದಕ್ಷಿಣ ಕನ್ನಡದಲ್ಲಿ ವಿರೋಧಗಳೆದ್ದವು. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಮಳೆಗೇನು ತುಂಬಾ ಕೊರತೆಯಿಲ್ಲ, ಮಳೆನೀರಿನ ನಿರ್ವಹಣೆ ಸರಿಯಾಗಿ ಮಾಡಿದರೆ, ಕೆರೆ ಕಟ್ಟೆಗಳನ್ನು ತುಂಬಿಸುವತ್ತ ಆಸಕ್ತಿ ತೋರಿಸಿದರೆ ನದಿ ತಿರುಗಿಸುವ ದುಸ್ಸಾಹಸ ಮಾಡುವುದೇ ಬೇಕಿಲ್ಲ ಎಂಬ ವಾದಗಳಿವೆ. ಕೆರೆ ಕಟ್ಟೆಗಳನ್ನು ನುಂಗಲಷ್ಟೇ ಆಸಕ್ತಿ ತೋರಿಸುವ ನಮಗೆ ಸ್ಥಳೀಯ ಮಟ್ಟದ ಪರಿಹಾರಗಳೆಡೆಗೆ ತುಂಬಾ ಆಸಕ್ತಿಯೇನಿಲ್ಲ. ಮಂಡ್ಯ ಮದ್ದೂರಿನ ಕೆರೆಗಳೆಲ್ಲ ನೀರಿಲ್ಲದೇ ಭಣಗುಡುತ್ತಿರುವಾಗ, ನೀರಿಲ್ಲದ ಕೆರೆಗಳು ಚಿಕ್ಕದಾಗುತ್ತಿರುವಾಗ ಅದು ಹೇಗೆ ಚನ್ನಪಟ್ಟಣದ ಕೆರೆಗಳಲ್ಲಿ ನೀರಿರುತ್ತದೆ ಎಂದು ನಾವು ಯೋಚಿಸುವುದಿಲ್ಲ. ಚನ್ನಪಟ್ಟಣದ ಶಾಸಕ ಯೋಗೇಶ್ವರ್ ಅದೇನು ಮಾಡಿದರೋ ಬಿಟ್ಟರೋ ಅವರಿಗೆ ನೀರಿನ ಮಹತ್ವದ ಅರಿವಾಗಿದೆ, ಕೆರೆಗಳು ತುಂಬುವುದರಿಂದ ಅಂತರ್ಜಲದ ವೃದ್ಧಿಯಾಗುತ್ತದೆ ಎಂದರಿವಾಗಿದೆ. ಬೆಂಗಳೂರಿನ ಉದಾಹರಣೆಯನ್ನೇ ನೋಡಿ. ಇಲ್ಲಿ ನೀರು ಬರುವುದಕ್ಕಿಂತ ವೇಗವಾಗಿ ಜನರು ಬಂದು ಸೇರುತ್ತಿದ್ದೇವೆ. ನಮಗೆಲ್ಲರಿಗೂ ನೀರು ಒದಗಿಸಲು ಕಾವೇರಿಯೇ ಬೇಕಾಗಿದೆ. ಇಲ್ಲಿನ ಕೆರೆ ಕಟ್ಟೆಗಳು ಜೀವಂತವಾಗಿದ್ದರೆ ಅಂತರ್ಜಲದಿಂದಾದರೂ ನಗರದ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸಬಹುದಿತ್ತು. ಆದರಿಲ್ಲಿ ಆಗುವುದೇನು? ಮೊದಲು ‘ಲೇಕ್ ವ್ಯೀವ್ ಅಪಾರ್ಟ್ ಮೆಂಟ್’ ತಲೆಯೆತ್ತುತ್ತೆ, ಕೆರೆಗೆ ತಲುಪಬೇಕಾದ ನೀರಿನ ಹಾದಿಗಳನ್ನೆಲ್ಲ ಮುಚ್ಚಲಾಗುತ್ತೆ. ನೀರು ಖಾಲಿಯಾದ ಕೆರೆಗೆ ಮಣ್ಣು ಸುರಿದು ಮತ್ತೊಂದು ಕಟ್ಟಡ ನಿರ್ಮಾಣವಾಗುತ್ತೆ. ಹೀಗೇ ಆದರೆ ಈಗ ಕಾವೇರಿ ನದಿಯಿಂದ ಪೈಪಿನಲ್ಲಿ ಬೆಂಗಳೂರಿಗೆ ನೀರು ಸಾಗಿಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಇಡೀ ಕಾವೇರಿ ನದಿಯನ್ನೇ ಬೆಂಗಳೂರಿನ ಕಡೆಗೆ ತಿರುಗಿಸಿದರೂ ಬೆಂಗಳೂರು ವಾಸಿಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲಾಗುವುದಿಲ್ಲ.
ಎತ್ತಿನಹೊಳೆ ಯೋಜನೆಯ ವಿರೋಧಕ್ಕೆ ಸಹಮತ ವ್ಯಕ್ತಪಡಿಸುತ್ತಾ ನದಿಗೆ ಸೇರುವ ಹೊಳೆಯನ್ನು ತಿರುಗಿಸುವ ಕಳಸಾ ಬಂಡೂರಿ ಯೋಜನೆಗೆ ಬೆಂಬಲ ವ್ಯಕ್ತಪಡಿಸುವುದು ಸರಿಯಾಗುವುದಾದರೂ ಹೇಗೆ ಎನ್ನುವ ಪ್ರಶ್ನೆ ಅನೇಕ ಸಲ ನನ್ನನ್ನು ಕಾಡಿದೆ. ಈ ಯೋಜನೆಯಿಂದ ‘ಕುಡಿಯುವ ನೀರು’ ತಲುಪುವ ಜಿಲ್ಲೆಗಳಲ್ಲಿ ನಾನು ಓಡಾಡಿಲ್ಲ. ಎತ್ತಿನಹೊಳೆ ಮತ್ತು ಕಳಸಾ ಬಂಡೂರಿ ಯೋಜನೆಗಳ ರೂಪುರೇಷೆಗಳು ಬೇರೆಯೇ ಇರಬಹುದು, ಅದು ನನ್ನರಿವಿಗೆ ಬಾರದೇ ಹೋಗಿರಬಹುದು. ಆದರೆ ನನ್ನ ಪ್ರಶ್ನೆಯೆಂದರೆ ಕಳೆದ ನಲವತ್ತು ವರುಷಗಳಿಂದ ಈ ಯೋಜನೆಗೆ ಬದಲಿಯಾಗಿ ಮತ್ತೊಂದು ಕುಡಿಯುವ ನೀರಿನ ಯೋಜನೆಯನ್ನು ಯಾಕೆ ನಮ್ಮ ಘನ ಸರಕಾರಗಳು ರೂಪಿಸಿಲ್ಲ? ಕುಡಿಯುವ ನೀರು ತಲುಪುತ್ತದೆ ಎನ್ನಲಾದ ಹುಬ್ಬಳ್ಳಿ, ಬೆಳಗಾವಿ ಮತ್ತು ಗದಗ ಜಿಲ್ಲೆಗಳಲ್ಲಿ ಕಳೆದ ನಲವತ್ತು ವರುಷಗಳಲ್ಲಿ ಎಷ್ಟು ಕೆರೆಗಳು ನಿರ್ಮಾಣಗೊಂಡಿವೆ? ಇದು ಮಳೆಯೇ ಆಗದ ಮರುಭೂಮಿ ಪ್ರದೇಶವಾ? ಬೀಳುತ್ತಿರುವ ಮಳೆಯನ್ನು ಹಿಡಿದಿಡಲಾಗದೇ ಈ ತಾಪತ್ರಯವಾ? ಎತ್ತಿನಹೊಳೆಯನ್ನು ತಿರುಗಿಸಿದರೂ ಸರಕಾರಗಳು ಹೇಳುವಷ್ಟು ನೀರು ಸಿಗುವುದಿಲ್ಲ ಎನ್ನಲಾಗುತ್ತದೆ, ಮುಂದೆ ನ್ಯಾಯಾಧೀಕರಣದ ಅಂತಿಮ ತೀರ್ಪು ನಮ್ಮ ಪರವಾಗಿ ಬಂದು ಕಳಸಾ ಬಂಡೂರಿ ಯೋಜನೆ ಕಾರ್ಯರೂಪಕ್ಕೆ ಬಂದಾಗ ಸರಕಾರ ಹೇಳುವಷ್ಟು ನೀರು ಸಿಗುತ್ತದಾ? ಹಳ್ಳದ ನೀರನ್ನು ಇತ್ಲಾಕಡೆ ತಿರುಗಿಸಿದ ನಂತರ ಅತ್ಲಾಕಡೆ ಮಳೆಯೇ ಆಗದಿದ್ದರೆ ಗತಿಯೇನು? ಈ ಪ್ರಶ್ನೆಗಳನ್ಯಾಕೆ ನಾವು ಕೇಳಿಕೊಳ್ಳುತ್ತಿಲ್ಲ? ‘ಕುಡಿಯುವ ನೀರೆಂಬುದು’ ಭಾವನಾತ್ಮಕ ವಿಚಾರ, ಮಾನವೀಯತೆಯ ವಿಷಯ. ‘ಮನುಷ್ಯರಿಗೇ ಕುಡಿಯಲು ನೀರಿಲ್ಲದಾಗ ಯಾವ ಪ್ರಕೃತಿಯ ಬಗ್ಗೆ ಮಾತಾಡ್ತಿ ಎದ್ದು ನಡಿಯಯ್ಯಾ’ ಎಂದು ಬಯ್ಯಸಿಕೊಳ್ಳುವ ಸಾಧ್ಯತೆಗಳು ಇಂತಹ ಪ್ರಶ್ನೆಗಳನ್ನು ಕೇಳಿದಾಗ ಹೆಚ್ಚಿರುತ್ತವೆ. ಬೆಂಗಳೂರಿನಲ್ಲಿ ಕುಳಿತು ದೂರದ ಕಾವೇರಿ ನದಿಯಿಂದ ಬರುವ ನೀರನ್ನು ಕುಡಿದು ಇಂತಹ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸುಲಭವಲ್ಲವೇ ಎಂಬ ಪಾಪಪ್ರಜ್ಞೆಯೂ ನನ್ನನ್ನು ಕಾಡುತ್ತದೆ. ಭಾವನಾತ್ಮಕ ವಿಚಾರದಲ್ಲಿ ಸ್ಥಳೀಯ ಪರಿಹಾರಗಳ ಬಗ್ಗೆ ಜನರಿಗೆ ಪ್ರಶ್ನೆಗಳು ಮೂಡದಿದ್ದರೂ ಬೇಡ, ಯೋಜನೆ ರೂಪಿಸುವ ಅಧಿಕಾರಿಗಳಿಗೆ, ಸರಕಾರದವರಿಗಾದರೂ ಈ ಪ್ರಶ್ನೆಗಳು ಮೂಡಬೇಕಲ್ಲವೇ? ಕಳಸಾ ಬಂಡೂರಿ ಯೋಜನೆಯ ತೀರ್ಪು ನಮ್ಮ ಪರವಾಗಿ ಬರದೇ ಹೋದ್ರೆ ಅಷ್ಟೇ ಹೋಯ್ತು, ಅದರ ಹತ್ತರಷ್ಟು ನೀರನ್ನು ಸ್ಥಳೀಯವಾಗಿ ಉಳಿಸಿಕೊಳ್ಳುವ ನೂರು ಯೋಜನೆಗಳು ನಮ್ಮಲ್ಲಿವೆ, ಬನ್ನಿ ಮೊದ್ಲು ಕೆರೆ ಕಟ್ಟೋಣ ಎಂದು ಒಬ್ಬನಾದರೂ ರಾಜಕಾರಣಿ ಕನಿಷ್ಟ ಪಕ್ಷ 2002ರಲ್ಲಿ ಹೇಳಿದ್ದರೂ ಕಳಸಾ ಬಂಡೂರಿಯ ವಿಚಾರವಾಗಿ ನಮ್ಮ ಜನರು ತಿಂಗಳುಗಟ್ಟಲೇ ಪ್ರತಿಭಟನೆ ನಡೆಸಬೇಕಿರಲಿಲ್ಲ ಎಂದನ್ನಿಸುವುದು ತಪ್ಪೇ?
No comments:
Post a Comment