ಕು.ಸ.ಮಧುಸೂದನನಾಯರ್
ಈ ದೇಶದ ಅಲ್ಪಸಂಖ್ಯಾತರಾದ ಮುಸ್ಲಿಮರನ್ನು ಎಲ್ಲಾ ರಾಜಕೀಯ ಪಕ್ಷಗಳು ಮತಬ್ಯಾಂಕನ್ನಾಗಿ ಮಾತ್ರ ನೋಡುತ್ತಿವೆಯೆಂಬ ಮಾತನ್ನು ನಾವು ಒಪ್ಪಿಕೊಳ್ಳುತ್ತಲೇ ಉತ್ತರಪ್ರದೇಶದ ರಾಜಕೀಯ ಲೆಕ್ಕಾಚಾರಗಳನ್ನು, ಮತ್ತು ಅಲ್ಲಿನ ಮುಸ್ಲಿಮರ ರಾಜಕೀಯ ನಡವಳಿಕೆಯನ್ನು ವಿಶ್ಲೇಷಣೆಗೊಳಪಡಿಸಬೇಕಾದುದು ಅಗತ್ಯವೆಂದು ನನ್ನ ಬಾವನೆ. ಉತ್ತರ ಪ್ರದೇಶದ ಒಟ್ಟು ಮತದಾರರ ಪೈಕಿ ಶೇಕಡಾ ೨೮ರಷ್ಟು ಮತದಾರರು ಮುಸ್ಲಿಂ ಸಮುದಾಯದವರಾಗಿದ್ದು ಸುಮಾರು ೭೫ ಕ್ಷೇತ್ರಗಳಲ್ಲಿ ಅವರ ಮತಗಳೇ ನಿರ್ಣಾಯಕವಾಗಿರುವುದು ಸುಳ್ಳಲ್ಲ. ಈ ಹಿನ್ನೆಲೆಯಲ್ಲಿ ೨೦೧೭ರಲ್ಲಿ ನಡೆಯಲಿರುವ ವಿದಾನಸಭಾ ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯ ಒಂದು ಸಂಘಟಿತ ಗುಂಪಾಗಿ ಮತ ಚಲಾಯಿಸುವುದೇ ಆದರೆ, ಯಾವ ಪಕ್ಷವನ್ನು ಯಾಕೆ ಬೆಂಬಲಿಸಬಹುದೆಂಬುದನ್ನೂ ನಾವೊಂದಿಷ್ಟು ನೋಡೋಣ.
ಕಳೆದ ವಿದಾನಸಭಾ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಕ್ಷ ಶೇಕಡಾ ೫೮ ರಷ್ಟು ಮುಸ್ಲಿಂ ಮತದಾರರ ಬೆಂಬಲನ್ನು ಗಳಿಸಿದ್ದರ ಪರಿಣಾಮವಾಗಿ ಆ ಪಕ್ಷ ಬಹುಮತ ಪಡೆದು ಅದಿಕಾರದ ಗದ್ದುಗೆ ಹಿಡಿದಿತ್ತು. ಆದರೆ ತದನಂತರದ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್, ಬಹುಜನ ಪಕ್ಷ, ಸಮಾಜವಾದಿ ಪಕ್ಷಗಳ ನಡುವೆ ಹಂಚಿ ಹೋಗಿದ್ದರಿಂದಾಗಿ ಬಾಜಪದ ಹಿಂದು ಮತಗಳನ್ನು ದೃವೀಕರಣಗೊಳಿಸಿ ಗೆಲ್ಲಲು ಸಾದ್ಯವಾಗಿತ್ತು. ಇದೀಗ ಪರಿಸ್ಥಿತಿ ಬಹಳ ಬದಲಾವಣೆಗಳನ್ನು ಕಂಡಿದೆ. ಹಿಂದಿನ ಹಾಗೆ ಮುಸ್ಲಿಂ ಸಮುದಾಯ ಸಮಾಜವಾದಿ ಪಕ್ಷವನ್ನು ಬೆಂಬಲಿಸುವಂತಹ ಸ್ಥಿತಿಯಲ್ಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಮುಸ್ಲಿಂ ಸಮುದಾಯವು ಸಮಾಜವಾದಿ ಪಕ್ಷದ ವಿರುದ್ದ ಮುನಿಸಿಕೊಳ್ಳುವಂತಹ ಹಲವಾರು ಘಟನೆಗಳು ನಡೆದು ಹೋಗಿದ್ದು, ಆ ಸಮುದಾಯ ಅಖಿಲೇಶ್ ಆಳ್ವಿಕೆಯಿಂದ ಭ್ರಮನಿರಸನಗೊಂಡಿದೆ. ಹಾಗಾದರೆ ಯಾಕೆ ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಸಮಾಜವಾದಿ ಪಕ್ಷದ ವಿರುದ್ದ ಮತ ಚಲಾಯಿಸುತ್ತಾರೆಂಬುದನ್ನು ಒಂದಿಷ್ಟು ವಿಶ್ಲೇಷಿಸೋಣ:
1.ಮುಸ್ಲಿಂ ಮತವಿಭಜನೆ ತಡೆಯಲು:
ಮುಸ್ಲಿಮರು ಯಾವಾಗಲೂ ಒಂದು ಸಂಘಟಿತ ಗುಂಪಾಗಿ ಒಂದೇ ಪಕ್ಷಕ್ಕೆ ಮತಚಲಾಯಿಸತ್ತಾರೆಂಬ ಜನಪ್ರಿಯ ಅನಿಸಿಕೆಯನ್ನೂ ಮೀರಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಹುಜನಪಕ್ಷ, ಬಾಜಪ ಮತ್ತು ಸಮಾಜವಾದಿ ಪಕ್ಷಗಳಿಗೆ ಬಿಡಿಬಿಡಿಯಾಗಿ ಮತಚಲಾಯಿಸಿದ್ದರು. ಬಾಜಪ ಮುಸ್ಲಿಂ ಮತ ಪಡೆಯುವಲ್ಲಿ ಸಮಾಜವಾದಿ ಪಕ್ಷದ ನಂತರದ ಸ್ಥಾನದಲ್ಲಿತ್ತು. ಹೀಗಾಗಿಯೇ ಮುಸ್ಲಿಂ ಮತದಾರರೇ ನಿರ್ಣಾಯಕವಾದ ಸ್ಥಾನಗಳ ಪೈಕಿ ಬಾಜಪ ಶೇಕಡಾ ೨೩ರಷ್ಟನ್ನು ಗೆಲ್ಲುವಂತಾಗಿತ್ತು. ಹಾಗಾಗಿ ಈ ಬಾರಿ ಮುಸ್ಲಿಂ ಮತದಾರರು ಸಮಾಜವಾದಿ ಪಕ್ಷವನ್ನು ಬೆಂಬಲಿಸಲು ಹಿಂದೆ ಮುಂದೆ ನೋಡುವುದೇ ಆದರೆ, ಅದರ ಬದಲಿಗೆ ಅವರ ಕಣ್ಮುಂದಿರುವ ಮತ್ತೊಂದು ಪಕ್ಷವೆಂದರೆ ಬಹುಜನ ಪಕ್ಷ ಮಾತ್ರ.
2. ಸಮಾಜವಾದಿ ಪಕ್ಷದಿಂದಾದ ಭ್ರಮನಿರಸನ:
ಮುಜಾಫರ್ ನಗರದ ಕೋಮುಗಲಭೆಗಳ ನಂತರ ಸಮಾಜವಾದಿ ಪಕ್ಷದ ಬಗ್ಗೆ ಮುಸ್ಲಿಮರಿಗಿದ್ದ ಒಲವು ಕಡಿಮೆಯಾಗಿದೆ. ಅಧಿಕಾರದಲ್ಲಿರುವ ಸಮಜವಾದಿ ಪಕ್ಷ ಕೋಮುಗಲಭೆಯ ಸಂದರ್ಭದಲ್ಲಿ ನಿಷ್ಪಕ್ಷಪಾತವಾಗಿ ವರ್ತಿಸಲಿಲ್ಲವೆಂದು ಅವರು ಬಾವಿಸಿದ್ದಾರೆ. ಜೊತೆಗೆ ಗಲಭೆಗಳು ತೀವ್ರಸ್ವರೂಪ ಪಡೆದುಕೊಂಡ ನಂತರವೂ ಸ್ಥಳಕ್ಕೆ ಪಕ್ಷದ ಮುಖ್ಯ ನಾಯಕರಾದ ಶ್ರೀ ಮುಲಾಯಂ ಸಿಂಗ್ ಯಾದವರಾಗಲಿ, ಮುಖ್ಯಮಂತ್ರಿ ಅಖಿಲೇಶ್ ಯಾದವರಾಗಲಿ ದಾವಿಸಲಿಲ್ಲವೆಂಬುದು ಮುಸ್ಲಿಮರ ಮುಖ್ಯ ಆರೋಪ. ಮುಲಾಯಂ ಮತ್ತು ಅಖಿಲೇಶ್ ಮುಜಾಫರ್ ನಗರಕ್ಕೆ ಬೇಟಿ ನೀಡಿದ್ದು ಗಲಭೆಗಳಾದ ಆರು ತಿಂಗಳ ನಂತರ, ಅದೂ ಲೋಕಸಭಾ ಚುನಾವಣೆಗೆ ಮತ ಕೇಳಲು. ಇದು ರಾಜ್ಯದ ಬಹುತೇಕ ಮುಸ್ಲಿಂ ನಾಯಕರುಗಳನ್ನು ಕೆರಳಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ನಂತರ ನಡೆದ ದಾದ್ರಿ ಪ್ರಕರಣ ಮುಸ್ಲಿಮರನ್ನು ಇನ್ನಷ್ಟು ಕೆರಳಿಸಿತು. ಸಮಾಜವಾದಿ ಪಕ್ಷವು ದಾದ್ರಿ ಪ್ರಕರಣವನ್ನು ನಿಬಾಯಿಸಿದ ರೀತಿ ಬಾಜಪದ ಪರವಾಗಿತ್ತೆಂಬ ಅನುಮಾನವೂ ಮುಸ್ಲಿಮರಲ್ಲಿ ಮೂಡಿತ್ತು. ಇತ್ತೀಚಗೆ ಎಬಿಪಿ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ ೬೫ ರಷ್ಟು ಮುಸ್ಲಿಮರು ಸಮಾಜವಾದಿ ಪಕ್ಷವನ್ನು ಈ ವಿಷಯಗಳಲ್ಲಿ ಟೀಕಿಸಿದ್ದಾರೆ.
3. ಬಾಜಪವನ್ನು ಅಧಿಕಾರದಿಂದ ದೂರವಿಡಲು:
ಉತ್ತರ ಪ್ರದೇಶದ ಮುಸ್ಲಿಂ ಮತದಾರರು ವಿದಾನಸಭಾ ಚುನಾವಣೆಗಳಲ್ಲಿ ಬಾಜಪ ಕೇಂದ್ರಿತವಾದ ನಕಾರಾತ್ಮಕ ಮತಚಲಾವಣೆಯನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ. ಬಾಜಪವನ್ನು ಸೋಲಿಸಲು ಶಕ್ತಿ ಹೊಂದಿರಬಹುದಾದ ಪಕ್ಷಕ್ಕವರು ಮತ ಚಲಾಯಿಸುವುದು ಹಿಂದಿನಿಂದ ನಡೆದುಬಂದ ರೀತಿ. ಈಗ ಸಮಾಜವಾದಿ ಪಕ್ಷದ ವಿರುದ್ದ ಅವರಿಗಿರುವ ಮುನಿಸು, ಜೊತೆಗೆ ಅದಕ್ಕಿರುವ ಆಡಳಿತ ವಿರೋಧಿ ಅಲೆಯಲ್ಲಿ ಸಮಾಜವಾದಿ ಪಕ್ಷ ಬಾಜಪವನ್ನು ಸೋಲಿಸುವುದು ಸಾದ್ಯವಿಲ್ಲವೆಂಬ ನೆಲೆಯಲ್ಲಿ ಉತ್ತರ ಪ್ರದೇಶದ ಮುಸ್ಲಿಮರು ಬಹುಜನ ಪಕ್ಷದತ್ತ ವಾಲುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡಿರುವ ಮಾಯಾವತಿ ಈಗಾಗಲೇ ಸುಮಾರು ೧೦೦ ಸ್ಥಾನಗಳನ್ನು ಮುಸ್ಲಿಮರಿಗೆ ಮೀಸಲಿಟ್ಟು ಅವರನ್ನು ಸೆಳೆಯುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಜೊತೆಗೆ ತಾವು ಯಾವತ್ತಿಗೂ ಬಾಜಪವನ್ನು ಬೆಂಬಲಿಸುವುದಿಲ್ಲವೆಂಬ ಘೋಷಣೆಯನ್ನೂ ಮಾಡಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶದ ಮಟ್ಟಿಗೆ ಕಾಂಗ್ರೆಸ್ ತೀರಾ ದುರ್ಬಲವಾಗಿದ್ದು ಅದನ್ನು ಬೆಂಬಲಿಸುವುದರಲ್ಲಿ ಪ್ರಯೋಜನವಿಲ್ಲವೆಂಬ ಅಭಿಪ್ರಾಯಕ್ಕೆ ಮುಸ್ಲಿಮರು ಬಂದಿದ್ದಾರೆ.
4.ಮುಸ್ಲಿಮರ ಶೋಚನೀಯ ಸ್ಥಿತಿಗತಿಗಳು.
ಹಾಗೆ ನೋಡಿದರೆ ಕಳೆದ ಎರಡೂವರೆ ದಶಕಗಳಿಂದ ಅಂದರೆ ೧೯೯೦ರಿಂದ ಅರ್ದಕ್ಕಿಂತ ಹೆಚ್ಚು ಅವಧಿಯಲ್ಲಿ ಮುಸ್ಲಿಮರ ಸಂಪೂರ್ಣ ಬೆಂಬಲದೊಂದಿಗೆ ಅಧಿಕಾರ ಅನುಭವಿಸಿರುವ ಸಮಾಜವಾದಿ ಪಕ್ಷ ಆ ಸಮುದಾಯಕ್ಕೆ ಸೂಕ್ತ ನ್ಯಾಯ ಒದಗಿಸಿಲ್ಲವೆಂಬುದು ಆ ಸಮುದಾಯದ ಜನರ ಆಕ್ರೋಶವಾಗಿದೆ. ಬಹಳ ಮಟ್ಟಿಗೆ ಅದು ನಿಜವೂ ಆಗಿದೆ. ಇಡೀ ರಾಷ್ಟ್ರದಲ್ಲಿ ಮುಸ್ಲಿಂ ಮಕ್ಕಳ ಶಾಲಾ ದಾಖಲಾತಿ ಪ್ರಮಾಣ ಶೇಕಡಾ ೧೨.೮ ಇದ್ದರೆ ಉತ್ತರ ಪ್ರದೇಶದಲ್ಲಿ ಕೇವಲ ಶೇಕಡಾ ೯.೬೪ ಮಾತ್ರವಿದೆ. ಕೇಂದ್ರದ ಮಾನವ ಸಂಪನ್ಮೂಲ ಖಾತೆಯೇ ನೀಡಿರುವ ಅಂಕಿಅಂಶಗಳ ಪ್ರಕಾರ ಮುಸ್ಲಿಮರ ಸಾಕ್ಷರತಾ ಪ್ರಮಾಣ ಇಡೀ ದೇಶಕ್ಕೆ ಹೋಲಿಸಿದರೆ ತೀರಾ ಕೆಳಮಟ್ಟದಲ್ಲಿದ್ದು ಸರಕಾರಿ ನೌಕರಿಗಳಲ್ಲು ಅವರದು ತೀರಾ ಶೋಚನೀಯ ಪರಿಸ್ಥಿತಿ. ಇನ್ನು ಮುಸ್ಲಿಂ ಮಹಿಳೆಯರ ಸಾಮಾಜಿಕ ಸ್ಥಾನಮಾನವಂತು ಇತರೇ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ತಳಮಟ್ಟದಲ್ಲಿದೆ.ಇನ್ನು ಸಾಮಾಜಿಕವಾಗಿ ಕೋಮುಗಲಭೆಗಳ ಪ್ರಮಾಣವೂ ಬೇರೆ ರಾಜ್ಯಗಳಿಗಿಂತ ಹೆಚ್ಚಿದ್ದು ಇದು ಮುಸ್ಲಿಮರಲ್ಲಿ ಸದಾ ಅಭದ್ರತೆಯ ಬಾವ ಮೂಡಿಸಿರುತ್ತದೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ ಮುಸ್ಲಿಂ ಸಮುದಾಯದ ಬೆಂಬಲವನ್ನು ಕಳೆದುಕೊಳ್ಳುತ್ತಾ ಸಾಗುತ್ತಿದೆ
ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಮುಂದಿನ ಚುನಾವಣೆಯ ಹೊತ್ತಿಗೆ ಮುಸ್ಲಿಂ ಸಮುದಾಯ ಸಮಾಜವಾದಿ ಪಕ್ಷದಿಂದ ದೂರ ಸರಿಯುವುದರಲ್ಲಿ ಸಂದೇಹವೇ ಇಲ್ಲ. ಒಂದು ಸಮುದಾಯವಾಗಿ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅದು ಬಾಜಪ ಕೇಂದ್ರಿತ ನಕಾರಾತ್ಮಕವಾಗಿಯೇ ಮತ ಚಲಾವಣೆ ಮಾಡುವುದೇ ಆದರೆ ಅದರ ಮುಂದಿರುವ ಉತ್ತಮ ಆಯ್ಕೆಯೆಂದರೆ ಬಹುಜನ ಪಕ್ಷ ಮಾತ್ರವೆನಿಸುತ್ತದೆ.
ಬಿಜೆಪಿ ಹಿಂದೂ ಮತ ಕ್ರೋಢೀಕರಣಕ್ಕಾಗಿ ಸಮಾನ ನಾಗರಿಕ ಸಂಹಿತೆ ತರುವ ಕುರಿತು ಕಾನೂನು ರೂಪಿಸುವ ಪ್ರಕ್ರಿಯೆ ನಡೆಸುವ ಸೂಚನೆ ನೀಡಿದೆ. ನನಗನಿಸುವಂತೆ ಇದರಿಂದ ಹಿಂದೂಗಳಿಗೆ ಏನೂ ಪ್ರಯೋಜನ ಇಲ್ಲ, ಹಾಗಾಗಿ ಇದರಿಂದ ಹಿಂದೂ ಮತಗಳ ಕ್ರೋಢೀಕರಣ ಆಗುವ ಸಂಭವ ಇಲ್ಲ. ಇದರಿಂದಾಗಿ ಮುಸ್ಲಿಂ ಮತಗಳ ಕ್ರೋಢೀಕರಣ ಬಿಜೆಪಿಗೆ ವಿರುದ್ಧವಾಗಿ ನಡೆಯುವ ಸಂಭವೇ ಹೆಚ್ಚು. ಬಿಜೆಪಿ ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸಿಲ್ಲ. ಉತ್ತರ ಪ್ರದೇಶ ರಾಜ್ಯದ ಚುನಾವಣೆಯಲ್ಲಿ ಮೋದಿಯ ನೇತೃತ್ವದಲ್ಲಿ ನಡೆಸಲು ಹೋದರೆ ಪ್ರಯೋಜನ ಆಗಲಿಕ್ಕಿಲ್ಲ ಏಕೆಂದರೆ ಮೋದಿಯವರ ವರ್ಚಸ್ಸು ಈಗಾಗಲೇ ಕುಸಿದಿದೆ ಮಾತ್ರವಲ್ಲ ರಾಜ್ಯದ ಜನ ಬಲಿಷ್ಠ ಸ್ಥಳೀಯ ನಾಯಕನನ್ನು ಬಯಸುತ್ತಾರೆ. ಬಿಜೆಪಿಯ ಬಳಿ ಉತ್ತರ ಪ್ರದೇಶದ ಮಟ್ಟಿಗೆ ಹೇಳುವುದಾದರೆ ಮಾಯಾವತಿಯ ವರ್ಚಸ್ಸಿಗೆ ನಿಲ್ಲಬಲ್ಲ ನಾಯಕರು ಇಲ್ಲ. ಧಾರ್ಮಿಕ ಧ್ರುವೀಕರಣ ಅಷ್ಟಾಗಿ ಪ್ರಭಾವ ಬೀರುವ ಸಂಭವ ಇಲ್ಲ ಏಕೆಂದರೆ ಮೋದಿಯವರ ಎರಡು ವರ್ಷಗಳ ಆಡಳಿತದಲ್ಲಿ ಯಾವುದೇ ಮಹತ್ತರ ಬದಲಾವಣೆ ಆಗಿಲ್ಲ ಬದಲಾಗಿ ಪರಿಸ್ಥಿತಿ ಮೊದಲು ಇದ್ದದ್ದಕ್ಕಿಂತಲೂ ಇಂದು ಕೆಟ್ಟಿದೆ. ಇದು ಉತ್ತರ ಪ್ರದೇಶದ ಚುನಾವಣೆಯಲ್ಲಿ ತನ್ನ ಪ್ರಭಾವ ಬೀರಲಿರುವುದು ಖಚಿತ.
ReplyDelete