30/07/2016
ರಾಜಕಾರಣದಲ್ಲಿ ಸತತ ಗೆಲುವೆಂಬುದಾಗಲಿ, ಸೋಲೆಂಬುದಾಗಲಿ ಇರುವುದಿಲ್ಲ. ಅದರಲ್ಲೂ ಇಂಡಿಯಾದಂತಹ ಬಹುಸಂಸ್ಕೃತಿಯ, ಬಹುಬಾಷೆಯ, ವಿಶಾಲ ರಾಷ್ಟ್ರದಲ್ಲಿ ಕಾಲದಿಂದ ಕಾಲಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಜನರ ರಾಜಕೀಯ ಒಲವುಗಳು ಬದಲಾಗುತ್ತಲೇ ಇರುತ್ತವೆ. ಇಲ್ಲಿ ಒಬ್ಬ ರಾಜಕಾರಣಿಯನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಲು ಜನ ರಾಜಕಾರಣದ ಒಂದೇ ಮಾನದಂಡವನ್ನು ಅನುಸರಿಸುವುದಿಲ್ಲ. ಬದಲಿಗೆ ಜನಪ್ರತಿನಿದಿಯೊಬ್ಬನ ಆಯ್ಕೆಯ ಮೆಲೆ ಆತನ ಜಾತಿ, ಧರ್ಮ, ಆರ್ಥಿಕ ಹಿನ್ನೆಲೆಗಳೂ ಪ್ರಬಾವ ಬೀರುವುದರಿಂದ ಎಲ್ಲವೂ ಪೂರ್ವನಿರ್ದಾರಿತವಾಗಿ ನಡೆಯುವುದು ಕಷ್ಟ. ಹಾಗಾಗಿಯೇ ಗೆಲ್ಲುವ ಆತ್ಮವಿಶ್ವಾಸದಿಂದ ಬೀಗುವ ಪಕ್ಷಗಳು ಅವಮಾನಕಾರಿಯಗಿ ಸೋಲನ್ನಪ್ಪುವುದು, ಸೋಲುತ್ತವೆಯೆಂದು ನಾವು ತೀರ್ಮಾನಿಸಿದ ಪಕ್ಷಗಳು ಬಾರಿ ಗೆಲುವು ಸಾದಿಸುವುದು ಇಂಡಿಯಾದ ಪ್ರಜಾಸತ್ತೆಯಲ್ಲಿ ಮಾಮೂಲಾಗಿದೆ. ಅದರ ಎಲ್ಲ ದೌರ್ಬಲ್ಯಗಳ ಹೊರತಾಗಿಯೂ ಇಂಡಿಯಾದ ಪ್ರಜಾಪ್ರಭುತ್ವದ ಸೌಂದರ್ಯ ಅಡಗಿರುವುದೆ ಇಂತಹ ಆಕಸ್ಮಿಕಗಳಲ್ಲಿ. 2015ರ ಮೊದಲಿಗೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಗಳಿಸಿದ ಅಭೂತಪೂರ್ವ ಗೆಲುವು ಅಂತಹ ಅಚ್ಚರಿಗಳಲ್ಲಿ ಒಂದು, ಇರಲಿ.
2014ರ ಲೋಕಸಭಾ ಚುನಾವಣೆಯ ಹೊತ್ತಿಗೆ ಇಡೀ ದೇಶ ನರೇಂದ್ರ ಮೋದಿಯವರ ಜಪ ಮಾಡುವಷ್ಟರ ಮಟ್ಟಿಗೆ ಅವರ ಜನಪ್ರಿಯತೆ ಉತ್ತುಂಗದಲ್ಲಿತ್ತು. ಬಾಜಪೇತರ ಪಕ್ಷಗಳ ನಾಯಕರುಗಳು ಸಹ ಮೋದಿ ಅಲೆಯ ಪ್ರಬಾವವನ್ನು ತಳ್ಳಿ ಹಾಕಲಾಗದಷ್ಟು ಬಲವಾಗಿ ಮೋದಿ ಪರ ಗಾಳಿ ಬೀಸ ತೊಡಗಿತ್ತು. ಆದರೆ ಚುನಾವಣೆಯ ಪಲಿತಾಂಶ ಬಂದಾಗ ಚಿತ್ರಣವೇ ಬೇರೆಯಾಗಿತ್ತು. ಕಾರಣ, ಸುಮಾರು 200 ರಿಂದ 240 ಸ್ಥಾನಗಳನ್ನು ಗೆಲ್ಲಬುದೆಂದು ಅಂದಾಜು ಮಾಡಲಾಗಿದ್ದ ಬಾಜಪ ಸ್ಪಷ್ಟ ಬಹುಮತ ಪಡೆದು ಒಂದು ರೀತಿಯ ಅಚ್ಚರಿಗೆ ಕಾರಣವಾಗಿತ್ತು. ಇನ್ನೊಂದೆಡೆ ದೇಶದಾದ್ಯಂತ ಬಾಜಪದ ಪರ ಒಲವಿದೆಯೆಂದು ಊಹಿಸಿದ್ದವರಿಗೆ ಅಚ್ಚರಿಯಾಗುವಂತೆ ಬಾಜಪ ದೇಶದ ಕೆಲವು ಪ್ರದೇಶಗಳಲ್ಲಿ ಶೂನ್ಯ ಸಾಧನೆ ಮಾಡಿ ಇನ್ನೊಂದು ತೆರನಾದ ಅಚ್ಚರಿಗೆ ಕಾರಣವಾಯಿತು. ದೇಶದ ಉತ್ತರ ಮತ್ತು ಪಶ್ಚಿಮದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರ ಮೂಲಕ ಬಹುಮತ ಪಡೆದಿದ್ದ ಬಾಜಪ ದೇಶದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ-ಕರ್ನಾಟಕ ಹೊರತು ಪಡಿಸಿ ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಲಿಲ್ಲ. ಬಾಜಪದ ಬೆಂಬಲಿಗರು ಏನೇ ಹೇಳಿಕೊಂಡರೂ ಬಾಜಪ ಪಕ್ಷ ಹಿಂದಿ ಮಾತನಾಡುವ ಹೃದಯ ಭಾಗದಲ್ಲಿ ಮಾತ್ರವೇ ಮನ್ನಣೆ ಪಡೆದ ಪಕ್ಷವೆಂಬುದನ್ನು ಸದರಿ ಚುನಾವಣೆ ಸಾಬೀತು ಮಾಡಿತು.
ಇದಕ್ಕೆ ಪೂರಕವೆಂಬಂತೆ ದಕ್ಷಿಣದ ಕೇರಳ, ತಮಿಳುನಾಡು, ಪುದುಚೇರಿ, ತೆಲಂಗಾಣ, ಆಂದ್ರ ಪ್ರದೇಶಗಳಲ್ಲಿ ಬಾಜಪದ ಸಾಧನೆಯೇನು ಹೇಳಿ ಕೊಳ್ಳುವಂತಿರಲಿಲ್ಲ. ಅದೇ ರೀತಿ ಪೂರ್ವದ ಪಶ್ಚಿಮ ಬಂಗಾಳ, ಒಡಿಸ್ಸಾ, ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮುಂತಾದೆಡೆಗಳಲ್ಲಿ ಬಾಜಪ ಯಾವ ಪ್ರಬಾವವನ್ನೂ ಬೀರಲಾಗಿರಲಿಲ್ಲ. ಇದರಿಂದ ಅರ್ಥವಾಗುವುದೇನೆಂದರೆ ಲೋಕಸಭೆಯಲ್ಲಿ ಬಹುಮತ ಪಡೆದ ಬಾಜಪ ಒಂದು ರಾಷ್ಟ್ರೀಯ ಪಕ್ಷವಾಗಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ತನ್ನ ಅಸ್ಥಿತ್ವವನ್ನು ತೋರಿಸುವಲ್ಲಿಯಂತು ವಿಫಲವಾಯಿತು.
ಬಾಜಪದ ಈ ಭಾಗಶ: ಯಶಸ್ಸಿಗೆ ಕಾರಣವೇನೇ ಇದ್ದರೂ ಅದು 2019ರ ಚುನಾವಣೆಯ ವೇಳೆಗೆ ರಾಷ್ಟ್ರದಾದ್ಯಂತ ವ್ಯಾಪಿಸಿ ಎಲ್ಲ ರಾಜ್ಯಗಳಲ್ಲಿಯೂ ಗೆಲುವು ಸಾಧಿಸುತ್ತದೆಯೆಂಬ ಅಭಿಪ್ರಾಯವನ್ನು ಅದರ ರಾಷ್ಟ್ರಾದ್ಯಕ್ಚರಾದಿಯಾಗಿ ಬಹುತೇಕ ನಾಯಕರುಗಳು ವ್ಯಕ್ತ ಪಡಿಸಿದರೂ ಅದು ಅಷ್ಟು ಸುಲಭದ ಕೆಲಸವೇನು ಅಲ್ಲ. ಬಾಜಪದ ಯಶಸ್ಸಿನಲ್ಲಿಯೇ ಅದರ ವಿಫಲತೆಯ ಕಾರಣಗಳೂ ಇವೆಯೆಂಬುದನ್ನು ನಾವು ಮರೆಯಬಾರದು. ಬಾಜಪದ ಗೆಲುವಿನ ಓಟ ಶಾಶ್ವತವೂ ಅಲ್ಲ, ನಿರಂತರವೂ ಅಲ್ಲ ಎಂಬುದನ್ನು ಕಳೆದ ಎರಡು ವರ್ಷಗಳಲ್ಲಿ ನಡೆದ ರಾಜ್ಯಗಳ ವಿದಾನಸಭೆಯ ಚುನಾವಣೆಗಳು ತೋರಿಸಿಕೊಟ್ಟಿವೆ, ಬಾಜಪ ಮಾತೆತ್ತಿದರೆ ಕಾಂಗ್ರೆಸ್ ಮುಕ್ತ ಭಾರತದ ಅಹಮ್ಮಿನ ಮಾತುಗಳನ್ನಾಡುತ್ತಲೇ ಕಾಂಗ್ರೆಸ್ಸನ್ನು ಜೀವಂತವಾಗಿಡುತ್ತಿದೆ. ಯಾಕೆಂದರೆ ಅಧಿಕಾರದಲ್ಲಿರುವ ಪಕ್ಷವೊಂದು ಇನ್ನೊಂದು ಪಕ್ಷವನ್ನು ಮುಗಿಸಿ ಬಿಡುವ ಮಾತಾಡತೊಡಗಿದೊಡನೆ ಮತದಾರರ ಮನಸಿನಲ್ಲಿ ಅನುಮಾನವೊಂದು ಹೆಡೆಯೆತ್ತುದೆ. ಸರ್ವಾಧಿಕಾರಿ ಧೋರಣೆಯನ್ನು ಸಹಿಸಿಕೊಳ್ಳದ ಭಾರತೀಯ ಮನಸ್ಥಿತಿ ಇಂತಹ ಹೇಳಿಕೆಗಳನ್ನು ನೀಡುವ ಪಕ್ಷವನ್ನು ದೀರ್ಘಕಾಲದಲ್ಲಿ ತಿರಸ್ಕರಿಸಲು ಪ್ರಯತ್ನಿಸುತ್ತದೆ. ಕಾಂಗ್ರೆಸ್ ಮುಕ್ತ ಭಾರತದ ಮಾತಾಡುವ ಬಾಜಪದ ಬಗ್ಗೆ ಪ್ರಾದೇಶಿಕ ಪಕ್ಷಗಳಿಗೂ ಸಹಜವಾದ ಭಯ ಪ್ರಾರಂಭವಾಗಿ ಅವು ಇನ್ನಷ್ಟು ಗಟ್ಟಿಯಾಗಿ ಬೆಳೆಯಲು ತಯಾರಾಗತೊಡಗುತ್ತವೆ. ಯಾಕೆಂದರೆ ಇವತ್ತು ಒಂದು ರಾಷ್ಟ್ರೀಯ ಪಕ್ಷವನ್ನೇ ಇಲ್ಲವಾಗಿಸಲು ಪ್ರಯತ್ನಿಸುವ ಪಕ್ಷವೊಂದು ಪ್ರಾದೇಶಿಕ ಪಕ್ಷಗಳನ್ನು ಉಳಿಯಲು ಬಿಡುವುದಿಲ್ಲ ಎಂಬ ಸತ್ಯ ಅವುಗಳಿಗೂ ಮನವರಿಕೆಯಾಗುತ್ತ ಹೋಗುತ್ತದೆ. ಇಂತಹ ಅಹಮ್ಮಿನ ಮಾತುಗಳ ಪ್ರಬಾವ ಈಗಾಗಲೇ ಆಗತೊಡಗಿರುವುದನ್ನು ಕೆಲವು ರಾಜ್ಯಗಳಲ್ಲಿ ನಾವು ನೋಡಿಯಾಗಿದೆ. ಸ್ವಲ್ಪ ಅವುಗಳತ್ತ ಗಮನ ಹರಿಸೋಣ:
2014ರ ಲೋಕಸಭಾ ಚುನಾವಣೆಗಳು ಮುಗಿದ ಕೆಲವೇ ತಿಂಗಳುಗಳಲ್ಲಿ ದೆಹಲಿ ವಿದಾನಸಭೆಗೆ ನಡೆದ ಚುನಾವಣೆಗಳು ಮೊಟ್ಟ ಮೊದಲಬಾರಿಗೆ ಮೋದಿಯ ಅಲೆಗೆ, ಬಾಜಪದ ನಾಗಾಲೋಟಕ್ಕೆ ಕಡಿವಾಣ ಹಾಕಿದವು. ಅರವಿಂದ್ ಕೇಜ್ರೀವಾಲಾರ ಆಮ್ ಆದ್ಮಿ ಪಕ್ಷ ಒಟ್ಟು 70ಸ್ಥಾನಗಳ ಪೈಕಿ 67ನ್ನು ಗೆಲ್ಲುವ ಮೂಲಕ ಮೋದಿ ಅಲೆಯ ಮಿಥ್ಯೆಯನ್ನು ಜಗಜ್ಜಾಹೀರು ಮಾಡಿತು. ಕೇವಲ 3 ಸ್ಥಾನಗಳನ್ನು ಗೆಲ್ಲುವ ಮೂಲಕ ಬಾಜಪ ದೆಹಲಿಯಲ್ಲಿ ಸೋಲು ಕಾಣುವುದರ ಮೂಲಕ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು.
ಆದರೆ ಹಾಗಾಗಲಿಲ್ಲ, ನಂತರ ನಡೆದ ಬಿಹಾರ ವಿದಾನಸಭಾ ಚುನಾವಣೆಯಲ್ಲಿಯೂ ಬಾಜಪ ಮೈತ್ರಿಕೂಟ, ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಕಾಂಗ್ರೆಸ್ಸಿನ ಜೊತೆ ಸೇರಿ ರಚಿಸಿಕೊಂಡ ಮಹಾಘಟಬಂದನ್ ವಿರುದ್ದ ಸೋಲನ್ನಪ್ಪಬೇಕಾಯಿತು. ಖುದ್ದು ಮೋದಿಯವರೇ ಅಖಾಡಕ್ಕಿಳಿದು ಪ್ರಚಾರ ಮಾಡಿದರೂ ಅಲ್ಲಿ ತೀವ್ರವಾದ ಮುಖಭಂಗ ಅನುಭವಿಸಿತು. ಅಲ್ಲಿಗೆ ಮೋದಿಯ ಅಲೆಯೆಂಬುದು ಬಾಜಪವು ಮಾಧ್ಯಮಗಳನ್ನು ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸೃಷ್ಠಿಸಿದ ಹುಸಿ ಅಲೆಯೆಂಬುದು ಕಣ್ಣಿಗೆ ರಾಚ ತೊಡಗಿತ್ತು. ಇದಾದ ನಂತರ ಮೋದಿಯವರ ತವರು ರಾಜ್ಯವಾದ ಗುಜರಾತಿನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳಲ್ಲಿಯೂ ಬಾಜಪ ಸೋಲು ಕಂಡಿತು.
ಇನ್ನು ಮೊನ್ನೆಮೊನ್ನೆ ನಡೆದ ಐದು ರಾಜ್ಯಗಳ ವಿದಾನಸಭೆಯ ಚುನಾವಣೆಯಲ್ಲಿಯೂ ವೈಯುಕ್ತಿಕವಾಗಿ ಬಾಜಪದ ಸಾಧನೆ ಮಹತ್ತರವಾದುದೇನಲ್ಲ. ಐದು ರಾಜ್ಯಗಳ ಪೈಕಿ ಅಸ್ಸಾಮಿನಲ್ಲಿ ಅದು ಅಧಿಕಾರಕ್ಕೆ ಬಂದರೂ ಅದೇನು ಅದರ ಸ್ವಂತ ಬಲದಿಂದಲ್ಲ. ಬದಲಿಗೆ ಅಸ್ಸಾಂ ಗಣಪರಿಷತ್ ಮತ್ತು ಬೋಡೋ ಪೀಪಲ್ಸ್ ಪಕ್ಷಗಳ ಮೈತ್ರಿಯಿಂದಾಗಿ ಅದು ಅಧಿಕಾರ ಪಡೆಯುವಲ್ಲಿ ಸಫಲತೆ ಸಾದಿಸಿತು. ಅಲ್ಲಿ ಅದು ಕಾಂಗ್ರೆಸ್ಸಿಗಿಂತ ಕಡಿಮೆ ಮತಗಳನ್ನು ಪಡೆದಿತ್ತು. ಅಕಸ್ಮಾತ್ ಕಾಂಗ್ರೆಸ್ ಏ.ಐ.ಯು.ಡಿ.ಎಫ್. ಜೊತೆ ಮೈತ್ರಿ ಮಾಡಿಕೊಂಡಿದ್ದರೆ ಬಾಜಪ ಇವತ್ತು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಿತ್ತು. ಇನ್ನು ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ, ತಮಿಳುನಾಡುಗಳಲ್ಲಿ ಗಣನೀಯ ಸಾಧನೆಯನ್ನೇನು ಬಾಜಪ ಮಾಡಲಗಲಿಲ್ಲ. ಹಾಗೆ ನೋಡಿದರೆ ಐದೂ ರಾಜ್ಯಗಳಿಂದ ಅದು ಪಡೆದ ಒಟ್ಟು ಸ್ಥಾನಗಳು ಕೇವಲ 66 ಮಾತ್ರ, ಆದರೆ ಕಾಂಗ್ರೆಸ್ 145 ಸ್ಥಾನಗಳನ್ನು ಪಡೆದು ಎಲ್ಲ ರಾಜ್ಯಗಳಲ್ಲಿಯೂ ತನ್ನ ಅಸ್ಥಿತ್ವವನ್ನು ತೋರಿಸಿಕೊಟ್ಟಿದೆ.
ಇದರಿಂದ ಅರ್ಥವಾಗುವುದೇನೆಂದರೆ ಬಾಜಪವನ್ನು ಎದುರಿಸುವಲ್ಲಿ ಕಾಂಗ್ರೆಸ್ ವಿಫಲವಾದರೂ ಪ್ರಾದೇಶಿಕ ಪಕ್ಷಗಳು ಮಾತ್ರ ಗಟ್ಟಿಯಾಗಿ ನೆಲೆ ನಿಂತು ಬಾಜಪವನ್ನು ಹಿಮ್ಮೆಟ್ಟಿಸುತ್ತಿವೆ. ಕಾಂಗ್ರೆಸ್ ಬಾಜಪದ ಮತಾಂಧ ರಾಜಕಾರಣದ ಮತ್ತು ಸಾಂಸ್ಕೃತಿಕ ರಾಜಕಾರಣದ ತಂತ್ರಗಾರಿಕೆಗೆ ಉತ್ತರ ನೀಡುವಲ್ಲಿ ಸೋತ ಕಡೆ ಪ್ರಾದೇಶಿಕ ಪಕ್ಷಗಳು ಖಡಕ್ಕಾಗಿ ಉತ್ತರ ನೀಡುತ್ತಿವೆ.. ಸ್ಥಳೀಯವಾಗಿ ಬಿಹಾರದ ನಿತೀಶ್ ಕುಮಾರ್ ರಾಷ್ಟ್ರೀಯ ನಾಯಕರಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅದೇ ರೀತಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರು ಸಹ ಹಿಂದೆ ರೈಲ್ವೇ ಮಂತ್ರಿಯಾಗಿ ರಾಷ್ಟ್ರೀಯ ಐಡೆಂಟಿಟಿಯನ್ನು ಪಡೆದವರಾಗಿದ್ದಾರೆ. ಹಾಗೆಯೇ ತಮಿಳುನಾಡಿನ ಕುಮಾರಿ ಜಯಲಲಿತಾರವರು ಸಹ ರಾಷ್ಟ್ರದ ರಾಜಕಾರಣದಲ್ಲಿ ಚಿರಪರಿಚಿತರೇ ಆಗಿದ್ದಾರೆ. ಇನ್ನು ದೆಹಲಿಯ ಅರವಿಂದ್ ಕೇಜ್ರೀವಾಲ್ ಸಹ ರಾಷ್ಟ್ರ ಮಟ್ಟದ ನಾಯಕರಾಗಿ ಗುರುತಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಕಾಂಗ್ರೆಸ್ಸನ್ನು ಹೊರತು ಪಡಿಸಿಯೂ ಪ್ರಾದೇಶಿಕ ಪಕ್ಷಗಳು ಬಾಜಪವನ್ನು ಎದುರಿಸುವ ಬಹುದೊಡ್ಡ ಶಕ್ತಿಯನ್ನು ಹೊಂದಿವೆ. ಇನ್ನುಳಿದ ರಾಜ್ಯಗಳಲ್ಲಿಯೂ ಪ್ರಾದೇಶಿಕ ನಾಯಕರುಗಳು ಇದ್ದು ಮುಂದಿನ ದಿನಗಳಲ್ಲಿ ಅವರ ರಾಜ್ಯಗಳ್ಲಿ ನಡೆಯುವ ವಿದಾನಸಭೆಯ ಚುನಾವಣೆಗಳು ಅವರ ಬಲಪ್ರದರ್ಶನಕ್ಕೆ ಸಾಕ್ಷಿಯಾಗಲಿವೆ.
ಈ ಸಾಲಿನಲ್ಲಿ 2017ಕ್ಕೆ ಉತ್ತರಪ್ರದೇಶ, ಉತ್ತರಾಕಾಂಡ್, ಪಂಜಾಬ್, ಗೋವಾ, ಮಣಿಪುರಗಳಲ್ಲಿ ಚುನಾವಣೆಗಳು ನಡೆಯ ಬೇಕಾಗಿದ್ದು ಬಾಜಪದ ಶಕ್ತಿಯನ್ನು ಅವು ಮತ್ತೊಮ್ಮೆ ಒರೆಹಚ್ಚಲಿವೆ. ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶದ ವಿದಾನಸಭಾ ಚುನಾವಣೆಗಳು ತೀವ್ರ ಕುತೂಹಲ ಮೂಡಿಸಿವೆ. ಕಾರಣ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಜಪ ಬಾರಿ ಜಯಗಳಿಸಿದ್ದು, ಅಲ್ಲೀಗ ಸಮಾಜವಾದಿ ಪಕ್ಷ ಅಧಿಕಾರದಲ್ಲಿರುವುದು. ಜೊತೆಗೆ ಮುಲಾಯಂಸಿಂಗ್ ಯಾದವ್ ಮತ್ತು ಮಾಯಾವತಿಯವರಂತಹ ಘಟಾನುಘಟಿ ನಾಯಕರುಗಳು ಎರಡು ಪ್ರಾದೇಶಿಕ ಪಕ್ಷಗಳನ್ನು ಮುನ್ನಡೆಸುತ್ತಿರುವುದಾಗಿದೆ. ಬಹುಜನಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಬಾಜಪವನ್ನು ಹೇಗೆ ಎದುರಿಸಿ ನಿಲ್ಲುತ್ತವೆಯೆಂಬುದೇ ಸದ್ಯಕ್ಕಿರುವ ಪ್ರಶ್ನೆ. ಬಾಜಪದ ಮತಾಂಧ ರಾಜಕಾರಣದ ವಿರುದ್ದ ಈ ಎರಡೂ ಪಕ್ಷಗಳ ಜಾತಿ ಸಮೀಕರಣದ ರಾಜಕೀಯ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನೋಡಬೇಕಿದೆ.
ಇನ್ನು ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ಆಳವಾಗಿ ಬೇರು ಬಿಡುತ್ತಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿತ್ತು. ಇದೀಗ ಅಲ್ಲಿನ ಅಕಾಲಿದಳ ಮತ್ತು ಬಾಜಪ ಮೈತ್ರಿಕೂಟಕ್ಕೆ ಗೆಲುವು ಸುಲಭ ಸಾದ್ಯವೇನಲ್ಲ. ಇದುವರೆಗು ಕಾಂಗ್ರೆಸ್ ಮತ್ತು ಅಕಾಲಿದಳ ಮೈತ್ರಿಕೂಟದ ನಡುವೆ ನಡೆಯುತ್ತಿದ್ದ ನೇರ ಹಣಾಹಣಿಯ ಬದಲು ತ್ರಿಕೋನ ಸ್ಪರ್ದೆ ಏರ್ಪಡಲಿದ್ದು ಅಕಾಲಿದಳದ ಮೈತ್ರಿಕೂಟ ಗೆಲ್ಲಲು ಕಷ್ಟಪಡಬೇಕಾಗಿದೆ.
ಇನ್ನು ಉತ್ತರಕಾಂಡದಲ್ಲಿ ಸದ್ಯ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದು ಇತ್ತೀಚೆಗೆ ಬಾಜಪ ಅಲ್ಲಿ ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರಕ್ಕೆ ಪ್ರಚೋದಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಿದ್ದನ್ನು ನ್ಯಾಯಾಲಯ ಅನೂರ್ಜಿತಗೊಳಿಸಿದ ಪ್ರಕರಣ ಮತದಾರರ ಮನಸಿನಲ್ಲಿ ಬಾಜಪದ ಬಗ್ಗೆ ಬೇಸರವುಂಟು ಮಾಡಿದ್ದು. ಕಾಂಗ್ರೆಸ್ಸಿಗೆ ಅನುಕಂಪದ ಆಸರೆ ದೊರೆಯಬಹುದಾಗಿದೆ. ಇನ್ನು ಗೋವಾದಲ್ಲಿ ಬಾಜಪ ಅಧಿಕಾರದಲ್ಲಿದ್ದರೂ ಮನೋಹರ್ ಪಣಿಕ್ಕರ್ ರಾಷ್ಟ್ರ ರಾಜಕೀಯಕ್ಕೆ ಬಂದ ನಂತರ ಅಲ್ಲಿನ ಬಾಜಪ ಶಕ್ತಿಕಳೆದುಕೊಂಡಂತೆ ಕಾಣುತ್ತದೆ. ಆಡಳಿತ ವಿರೋಧಿ ಅಲೆಯೇನಾದರು ಅಲ್ಲಿ ಬೀಸಿದರೆ ಬಾಜಪ ಗೆಲ್ಲುವುದು ಕಷ್ಟವಾಗಲಿದೆ. ಮಣಿಪುರದಲ್ಲಿ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದು ಸ್ಥಳೀಯ ಪಕ್ಷಗಳು ಸಹ ಬಲಾಡ್ಯವಾಗಿವೆ. ಅಲ್ಲಿ ಬಾಜಪ ಏನಾದರು ಮಾಡಬೇಕಿದ್ದಲ್ಲಿ ಸ್ಥಳೀಯ ಪಕ್ಷಗಳ ನೆರವನ್ನು ಪಡೆಯ ಬೇಕಾಗುತ್ತದೆ.
ಇವೆಲ್ಲವನ್ನೂ ಸೂಕ್ಷ್ಮವಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ನೋಡಿದರೆ ಮುಂದಿನ ದಿನಗಳಲ್ಲಿ ಬಾಜಪ ತಾನಂದು ಕೊಂಡಂತೆ ಸಲೀಸಾಗಿ ಗೆಲ್ಲುತ್ತಾ ಹೋಗುವುದು ಅಸಾದ್ಯದ ಮಾತು. ಮುಂದೆ ನಡೆಯಲಿರುವ ವಿದಾನಸಭಾ ಚುನಾವಣೆಗಳ ಪಲಿತಾಂಶಗಳೇನೇ ಆಗಿರಲಿ, ಪ್ರಾದೇಶಿಕ ಪಕ್ಷಗಳ ಕಾರ್ಯತಂತ್ರದ ಆಧಾರದ ಮೇಲೆ 2019ರ ಲೋಕಸಭಾ ಚುನಾವಣೆಯಲ್ಲಿ ಬಾಜಪದ ಸೋಲು ಗೆಲುವು ನಿರ್ದಾರವಾಗಲಿದೆ.
ಬಿಹಾರದಲ್ಲಿ ನಡೆದ ಮಹಾಘಟಬಂದನ್ ರಾಷ್ಟ್ರ ಮಟ್ಟದಲ್ಲೇನಾದರು ನಡೆದರೆ ಮುಂದಿನ ಚುನಾವಣೆಯ ದಿಕ್ಕೇ ಬದಲಾಗುವ ಸಂಭವವಿದೆ. ಆದರೆ ಈ ಮೈತ್ರಿ ಬಾಜಪ ಮತ್ತು ಕಾಂಗ್ರೆಸ್ ಎರಡರಿಂದಲೂ ಸಮಾನಾಂತರ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಏಕೆಂದರೆ ತಮ್ಮನ್ನು ಕಳೆದ ವಿದಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ವಿರೋದಿಸಿದ ಕಾಂಗ್ರೆಸ್ಸನ್ನು ಮಮತಾ ಬ್ಯಾನರ್ಜಿಯಾಗಲಿ ಜಯಲಲಿತಾ ಆಗಲಿ ಒಪ್ಪಿಕೊಳ್ಳಲಾರರು. ಈ ದಿಸೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗನ್ನು ದೂರವಿಟ್ಟು ಪ್ರಾದೇಶಿಕ ಪಕ್ಷಗಳು ಒಂದು ಮಹಾಮೈತ್ರಿಕೂಟವನ್ನು ರಚಿಸಿಕೊಂಡದ್ದೇ ಆದಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿಯವರ ಮುಂದಿನ ಹಾದಿ ಕಠಿಣವಾಗಲಿದೆ.
ನಿತೀಶ್ ಕುಮಾರ್, ಜಯಲಲಿತಾ ಹಾಗು ಮಮತಾ ಬ್ಯಾನರ್ಜಿಯವರು ಸದ್ಯದ ಮಟ್ಟಿಗೆ ತಮ್ಮ ರಾಜ್ಯಗಳಲ್ಲಿ ಬಾಜಪ ಮತ್ತು ಕಾಂಗ್ರೆಸ್ ಎನ್ನುವ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿಯೂ ಅವರುಗಳು ಒಂದಾಗಿ ಕಾರ್ಯನಿರ್ವಹಿಸುವ ಸಾದ್ಯತೆ ಹೆಚ್ಚಿದೆ. ಯಾಕೆಂದರೆ ಎಲ್ಲಿಯವರಗು ಈ ರಾಷ್ಟ್ರೀಯ ಪಕ್ಷಗಳು ಬಲಾಢ್ಯವಾಗಿರುತ್ತವೆಯೊ ಅಲ್ಲಿಯವರೆಗು ಪ್ರಾದೇಶಿಕ ಪಕ್ಷಗಳನ್ನು ನೆಮ್ಮದಿಯಾಗಿರಲು ಅವು ಬಿಡಲಾರವು ಎನ್ನುವ ಸತ್ಯ ಅವರಿಗೆ ಗೊತ್ತಿದೆ. ಇದರಲ್ಲಿ ಬಹಳ ಮುಖ್ಯವಾಗಿ ನಿತೀಶ್‍ಕುಮಾರ್ ಬಹಳ ಆಕ್ರಮಣಕಾರಿಯಾಗಿ ಎರಡೂ ಪಕ್ಷಗಳನ್ನು ಎದುರಿಸಿ ನಿಂತು ರಾಷ್ಟ್ರ ಮಟ್ಟದಲ್ಲಿ ಬೆಳೆಯುವ ಇರಾದೆ ಹೊದಿದ್ದಾರೆ. ಬಿಹಾರದ ಆಚೆಗೂ ಅವರ ಆಸಕ್ತಿ ಇರುವುದರಿಂದಲೇ ಅವು ಮೊನ್ನೆ ನಡೆದ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ತಮ್ಮ ಉಮೇದುವಾರರನ್ನು ಹಾಕಿದ್ದರು. ಇನ್ನು ಸಮಯ ಸರಿಯೆನ್ನಿಸಿದರೆ ಜಯಲಲಿತಾ ಸಹ ರಾಷ್ಟ್ರ ರಾಜಕಾರಣಕ್ಕೆ ದುಮುಕಲು ಸಿದ್ದರಾಗಿದ್ದಾರೆ. ಇನ್ನು ಮಮತಾ ಬ್ಯಾನರ್ಜಿ ಕೇಂದ್ರ ಸಚಿವೆಯಾಗಿದ್ದು ಇಡೀ ರಾಷ್ಟ್ರವನ್ನೇ ಸುತ್ತಿದವರು, ಅವರಿಗೂ ರಾಷ್ಟ್ರ ರಾಜಕಾರಣ ಹೊಸದೇನಲ್ಲ. ಇನ್ನು ಉತ್ತರ ಪ್ರದೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇ ಆದರೆ ಮಾಯಾವತಿಯವರೂ ಸಹ ಇವರೊಂದಿಗೆ ಕೈ ಜೋಡಿಸಬಹುದಾಗಿದೆ. ಈ ಪಟ್ಟಿಗೆ ನಾನು ಮುಲಾಯಂಸಿಂಗವರನ್ನು ಸೇರಿಸಲು ಹಿಂಜರಿಯುತ್ತೇನೆ. ಏಕೆಂದರೆ ಅವರ ಇತ್ತೀಚೆಗಿನ ನಡವಳಿಕೆ ಚಂಚಲವಾಗಿದೆ. ಬಾಜಪವನ್ನು ವಿರೋಧಿಸುವ ಮಾತಾಡುತ್ತಲೇ ಜಾತ್ಯಾತೀತ ಶಕ್ತಿಗಳ ಒಗ್ಗೂಡುವಿಕೆಗೆ ಅಡ್ಡಗಾಲು ಹಾಕುತ್ತಾರೆ. ಬಿಹಾರದ ಮಹಾಘಟಬಂದನ್ ಸಮಯದಲ್ಲಿ ನಿತೀಶರಿಗೆ ಕೊನೆ ಗಳಿಗೆಯಲ್ಲಿ ಕೈಕೊಟ್ಟು ನಡೆದದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.
ಇಂತಹದೊಂದು ಮೈತ್ರಿಕೂಟ ಸೃಷ್ಠಿಯಾಗುವುದೇ ಆದಲ್ಲಿ ಅದಕ್ಕೆ ರಾಷ್ಟ್ರದ ಇತರೇ ರಾಜ್ಯಗಳ ಹಲವಾರು ಬಲಾಢ್ಯ ನಾಯಕರುಗಳ ಪ್ರದೇಶಿಕ ಪಕ್ಷಗಳೂ ಸೇರಬಹುದಾದ ಸಾದ್ಯತೆಯಿದೆ. ಅವು ಯಾವುವೆಂದರೆ ಒಡಿಸ್ಸಾದ ಬಿಜುಜನತಾದಳ (ನವೀನ್‍ಪಟ್ನಾಯಕ್), ಜನತಾದಳ ಜಾತ್ಯಾತೀತ (ಹೆಚ್.ಡಿ.ದೇವೇಗೌಡ), ವೈ.ಎಸ್.ಆರ್. ಕಾಂಗ್ರೆಸ್(ಜಗನ್ಮೋಹನ ರೆಡ್ಡಿ), ತೆಲಂಗಾಣ ರಾಷ್ಟ್ರೀಯ ಸಮಿತಿ (ಚಂದ್ರಶೇಖರ ರಾವ್), ನ್ಯಾಷನಲ್ ಕಾನ್ಫರೆನ್ಸ್ (ಉಮರ್ ಅಬ್ದುಲ್ಲಾ), ಆಮ್ ಆದ್ಮಿ (ಅರವಿಂದ್‍ಕೇಜ್ರೀವಾಲ್), ಎನ್.ಸಿ.ಪಿ (ಶರದ್‍ಪವಾರ್), ರಾಷ್ಟ್ರೀಯ ಜನತಾದಳ್(ಲಾಲೂಪ್ರಸಾದ್ ಯಾದವ್) ಬಹುಜನಪಕ್ಷ( ಮಾಯಾವತಿ), ಅಸ್ಸಾಮಿನ ಏ.ಐ.ಯು.ಡಿ.ಎಫ್ ಹಾಗು ಕೇರಳದ ಕೆಲವು ಸಣ್ಣಪುಟ್ಟ ಪಕ್ಷಗಳು ಇಂತಹದೊಂದು ಮೈತ್ರಿಯಾಗುವುದಾದರೆ ಅದರ ಪಾಲುದಾರರಾಗಬಹುದಾದ ಸಾದ್ಯತೆಗಳಿವೆ.
ಅಕಸ್ಮಾತ್ ಇಂತಹ ಮಹಾಮೈತ್ರಿ ಸಾಕಾರಗೊಳ್ಳುವುದಾದಲ್ಲಿ ಅದರ ಪ್ರದಾನಮಂತ್ರಿ ಅಭ್ಯರ್ಥಿ ಯಾರಾಗಬೇಕೆಂಬುದು ತೀವ್ರವಾಗಿ ಚರ್ಚೆಯಾಗುವ ವಿಷಯವಾಗಿದೆ. ಈ ಸಾಲಿನಲ್ಲಿ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಜಯಲಲಿತಾ, ಮಾಯಾವತಿಯವರ ಹೆಸರುಗಳು ಬಹುಮುಖ್ಯವಾಗಿ ಕೇಳಿ ಬರಲಿವೆ. ಈ ನಾಲ್ವರಲ್ಲಿ ರಾಷ್ಟ್ರವ್ಯಾಪಿಯಾಗಿ ಜನ ಸ್ವೀಕರಿಸಬಹುದಾದ ಹೆಸರ್ಯಾವುದು ಎಂಬುದೇ ಕುತೂಹಲಕಾರಿಯಾದುದು. ಈ ನಾಲ್ಕೂ ಜನಗಳ ಬಗ್ಗೆ ಒಂದಿಷ್ಟು ನೋಡುವುದಾದರೆ:
ನಿತೀಶ್ ಕುಮಾರ್ ಬಿಹಾರದಲ್ಲಿ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ನಡೆಸಿದ ಸ್ವಚ್ಚ ಮತ್ತು ಪಾರದರ್ಶಕ ಆಡಳಿತದ ಬಗ್ಗೆ ಇಡೀ ದೇಶ ಮೆಚ್ಚುಗೆ ವ್ಯಕ್ತಪಡಿಸಿದೆ. ಜೊತೆಗೆ ನಿತೀಶರ ಸರಳತೆ ಮತ್ತು ಪ್ರಾಮಾಣಿಕತೆಯನ್ನು ಅವರ ವಿರೋಧಿಗಳೂ ಅಲ್ಲಗೆಳೆಯುವುದಿಲ್ಲ. ಉಳಿದಂತೆ ಕೇಂದ್ರದ ರೈಲ್ವೆ ಮಂತ್ರಿಯಾಗಿ ಜನರಿಗೆ ಚಿರಪರಿಚಿತರಾಗಿದ್ದಾರೆ. 2014ರ ಚುನಾವಣಾ ಪ್ರಚಾರಕ್ಕೆ ಬಿಹಾರಕ್ಕೆ ನರೇಂದ್ರ ಮೋದಿಯವರು ಬರುವ ಅಗತ್ಯವಿಲ್ಲವೆಂದು ನೇರವಾಗಿ ಬಾಜಪಕ್ಕೆ ಹೇಳಿದ್ದು ಅವರ ಜಾತ್ಯಾತೀತ ನಿಲುವಿಗೆ ಸಾಕ್ಷಿಯಾಗಿದೆ ಮತ್ತು ಕೋಮುವಾದವನ್ನು ವಿರೋಧಿಸುವ ಜನರ ದೃಷ್ಠಿಯಲ್ಲಿ ಗಟ್ಟಿನಾಯಕರಾಗಿ ಹೊರಹೊಮ್ಮಿದವರು. ಇವೆಲ್ಲವೂ ಅವರನ್ನು ಮುಂದಿನ ಪ್ರದಾನಿ ಎಂದು ಬಿಂಬಿಸವುದಕ್ಕೆ ಪೂರಕವಿಷಯಗಳಾಗಿವೆ.
ಇನ್ನು ಮಮತಾಬ್ಯಾನರ್ಜಿಯ ವಿಷಯಕ್ಕೆ ಬಂದರೆ ಅವರು ಕಾಂಗ್ರೆಸ್ ನಲ್ಲಿದ್ದಾಗಿನಿಂದಲೂ ತಮ್ಮ ಬಂಡಾಯದ ಗುಣಕ್ಕೆ, ನೇರಾನೇರಾ ಮಾತುಗಳಿಗೆ ಹೆಸರಾದವರು. ಕೆಲವು ಕಪ್ಪು ಚುಕ್ಕಿಗಳ ಹೊರತಾಗಿಯೂ ಎಡರಂಗದವರೆದುರು ಶಕ್ತಿಯುತವಾಗಿ ನಿಂತು ಐದು ವರ್ಷಗಳ ಕಾಲ ಬಂಗಾಳವನ್ನು ಮುನ್ನಡೆಸಿದ ಕೀರ್ತಿ ಆಕೆಗಿದೆ. ಅವರೂ ಕೇಂದ್ರದಲ್ಲಿ ಸಚಿವೆಯಾಗಿ ಕೆಲಸ ಮಾಡಿದ್ದು ರಾಷ್ಟ್ರವ್ಯಾಪಿಯಾಗಿ ಪರಿಚಿತವಾದ ಹೆಸರಾಗಿದೆ. ಆಕೆಗಿರುವ ಒಂದು ಹಿನ್ನಡೆಯ ವಿಷಯವೆಂದರೆ ಕೆಲವೊಮ್ಮೆ ಆಕೆ ತೀರಾ ಹಟಮಾರಿಯಂತೆ ವರ್ತಿಸಿ, ಮಿತ್ರ ಪಕ್ಷಗಳಿಗೆ ಕಿರಿಕಿರಿ ಉಂಟುಮಾಡುತ್ತಾರೆಂಬುದಾಗಿದೆ.
ಜಯಲಲಿತಾರವರು ಒಬ್ಬಂಟಿ ಹೆಣ್ಣುಮಗಳಾಗಿ ರಾಜಕೀಯ ಮಾಡುತ್ತಾ ಒಂದಿಡೀ ಪಕ್ಷವನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡು ತಮಿಳುನಾಡಂತಹ ರಾಜ್ಯವನ್ನು ಎರಡನೇ ಅವಧಿಯಲ್ಲೂ ಮುನ್ನಡೆಸುವ ಎದೆಗಾರಿಕೆಯುಳ್ಳ ಹೆಣ್ಣುಮಗಳು. ರಾಷ್ಟ್ರಮಟ್ಟದಲ್ಲಿ ಯಾವ ಅಧಿಕಾರವನ್ನೂ ಹೊಂದಿ ಕೆಲಸ ಮಾಡದೇ ಇದ್ದರೂ ನಿಪುಣ ಆಡಳಿತಗಾರ್ತಿಯೆಂದು ಹೆಸರು ಮಾಡಿರುವ ಜನಪ್ರಿಯ ನಾಯಕಿ. ಅವರಿಗಿರುವ ಒಂದು ಕೊರತೆಯೆಂದರೆ ರಾಷ್ಟ್ರ ಮಟ್ಟದಲ್ಲಿ ಅವರ ಹೆಸರನ್ನು ಜನತೆ ಕೇಳದೇ ಇರುವುದಾಗಿದೆ.
ದಲಿತ ಸಮುದಾಯಕ್ಕೆ ಸೇರಿದ ಮಾಯಾವತಿಯವರು ಸಹ ಏಕಾಂಗಿಯಾಗಿ ಒಂದು ಪಕ್ಷವನ್ನು ಮುನ್ನಡೆಸುತ್ತಿದ್ದು ಗಟ್ಟಿ ನಾಯಕತ್ವದ ಹೆಣ್ಣು ಮಗಳು. ದಲಿತೆಯಾಗಿರುವುದರಿಂದ ಇಡೀ ರಾಷ್ಟ್ರದ ದಲಿತರ ಒಲವು ಅವರಿಗೆ ಸಿಗುವ ಸಾದ್ಯತೆಯಿದೆ. ಉಳಿದಂತೆ ಈಗಾಗಲೇ ಬಹುಜನ ಪಕ್ಷ ಅನೇಕ ರಾಜ್ಯಗಳಲ್ಲಿ ಚುನಾವಣಾ ರಾಜಕೀಯ ಮಾಡುತ್ತ ಸಾಕಷ್ಟು ಬೆಂಬಲಿಗರನ್ನು ಹೊಂದಿದೆ. ಆದರೆ ಅವರ ಮೇಲಿರವ ಸಿ.ಬಿ.ಐ ಕೇಸುಗಳು ಅವರ ಪ್ರದಾನಿಯ ಕನಸಿಗೆ ಸಂಚಕಾರ ತರಬಲ್ಲವು ಎಂಬುದಂತು ಸತ್ಯ.
ಈ ಪಟ್ಟಿಗೆ ಸೇರಿಸಬಹುದಾದ ಇನ್ನೊಂದು ಹೆಸರು ಒಡಿಸ್ಸಾದ ಬಿಜು ಜನತಾಪಕ್ಷದ ನವೀನ್ ಪಟ್ನಾಯಿಕ್ ಅವರದು. ಉತ್ತಮ ಆಡಳಿತಗಾರರಾಗಿ ಹೆಸರು ಮಾಡಿ ಯಾವುದೇ ವಿವಾದಗಳಿಂದ ದೂರವಿದ್ದು ರಾಜ್ಯಬಾರ ನಡೆಸುತ್ತಿರುವ ನವೀನ್ ಪಟ್ನಾಯಿಕ್ ಸೂಕ್ತ ವ್ಯಕ್ತಿಯಾದರೂ ಅಖಿಲ ಭಾರತ ಮಟ್ಟದಲ್ಲಿ ಅವರ ಪರಿಚಯವಿಲ್ಲದಿರುವುದು ಅವರ ಹಿನ್ನಡೆಗೆ ಕಾರಣವಾಗುವುದು ನಿಜ.
ಇಲ್ಲಿಯವರೆಗೂ ನಾನು ಹೇಳಿದ್ದೆಲ್ಲ ಒಂದು ರಾಜಕೀಯ ಬದಲಾವಣೆಯ, ದೃವೀಕರಣದ ಸಾದ್ಯತೆಯ ಬಗ್ಗೆಯೇ ಹೊರತು ಬೇರೇನಲ್ಲ. ಯಾಕೆಂದರೆ ಇದುವರೆಗೂ ಅಧಿಕೃತವಾಗಿ ಯಾವೊಂದು ಪಕ್ಷವೂ, ಯಾರೊಬ್ಬ ನಾಯಕರೂ ಈ ಬಗ್ಗೆ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ಆದರೆ ತಮ್ಮಗಳ ಪಕ್ಷಗಳನ್ನು ಉಳಿಸಿಕೊಳ್ಳುವ ಮತ್ತು ತಮ್ಮ ರಾಜ್ಯಗಳಲ್ಲಿ ತಮಗಿರುವ ನೆಲೆಯನ್ನು ಉಳಿಸಿಕೊಳ್ಳುವ ದಿಕ್ಕಿನಲ್ಲಿ ಪ್ರಾದೇಶಿಕ ಪಕ್ಷಗಳು ಇಂದಲ್ಲಾ ನಾಳೆ ಇಂತಹದೊಂದು ಪ್ರಯೋಗಕ್ಕೆ ಮುಂದಾದರೆ ಅಚ್ಚರಿಯೇನಿಲ್ಲ. ಇಂತಹದೊಂದು ಮಾತುಕತೆ ಶುರುವಾದರೆ ಪ್ರದಾನಿ ಹುದ್ದೆಯ ಅಭ್ಯರ್ಥಿಯ ಹೆಸರು ಬಂದಾಗ ನಾನು ಉಲ್ಲೇಖಿಸಿದವರನ್ನು ಬಿಟ್ಟು ಸರ್ವಸಮ್ಮತವಾದ ವ್ಯಕ್ತಿಯೊಬ್ಬರ ಹೆಸರು ಕಂಡು ಬಂದರೂ ಆಶ್ಚರ್ಯವೇನಿಲ್ಲ. ಇಂತಹದೊಂದು ಮೈತ್ರಿಯೇನಾದರು ಉಂಟಾದರೆ ಕಾಂಗ್ರೆಸ್ ಇರಲಿ ಬಾಜಪ ಮತ್ತು ಮೋದಿಯವರಿಗೆ ಬಹಳಷ್ಟು ಹಿನ್ನಡೆಯುಂಟಾಗುವುದು ಖಚಿತ. ಏಕೆಂದರೆ ಬಾಜಪ ನಡೆಸುತ್ತಿರುವ ಸಾಂಸ್ಕೃತಿಕ ಮತ್ತು ಮತಾಂಧ ರಾಜಕಾರಣಕ್ಕೆ ಪರ್ಯಾಯವಾದ ರಾಜಕೀಯ ಮಾಡುವ ಶಕ್ತಿಯೊಂದನ್ನು ಜನತೆ ಬಯಸುತ್ತಿದೆ. ಆದರೆ ಮೋದಿ ಮತ್ತು ಅಮಿತ್ ಷಾರವರ ತಂತ್ರಗಾರಿಕೆಗಳನ್ನು, ಸಂಘಪರಿವಾರದ ರಹಸ್ಯ ಕಾರ್ಯಸೂಚಿಗಳನ್ನೂ ಎದುರಿಸಲು ಬೇಕಾದ ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸಲು ಇಲ್ಲಿಯವರೆಗು ಕಾಂಗ್ರೆಸ್ ವಿಫಲವಾಗಿದ್ದು ಜನರಿಗೆ ಅದರ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿದೆ. ಹೀಗಾಗಿ ಪ್ರಾದೇಶಿಕ ಪಕ್ಷಗಳು ಎಲ್ಲಿಯವರೆಗು ಬಲವಾದ ರಾಜಕೀಯ ಶಕ್ತಿಗಳಾಗಿರುತ್ತವೆಯೊ ಅಲ್ಲಿಯವರೆಗೂ ಬಾಜಪ ರಾಷ್ಟ್ರದಾದ್ಯಂದ ಬೆಳೆಯುವುದು ಕಷ್ಟದ ಕೆಲಸ.
ಆದರೆ ಅಧಿಕಾರದ ರುಚಿ ಕಂಡಿರುವ ಕಾಂಗ್ರೆಸ್ಸಾಗಲಿ, ಬಾಜಪವಾಗಲಿ ಇಂತಹದೊಂದು ಮೈತ್ರಿಕೂಟ ರಚನೆಯಾಗದಂತೆ ನೋಡಿಕೊಳ್ಳಲು ತಾವು ಕಲಿತ ವಿದ್ಯೆಯನ್ನೆಲ್ಲ ಖರ್ಚು ಮಾಡುವುದು ಖಂಡಿತಾ.
ಮೂರನೇ ರಾಜಕೀಯ ರಂಗದ ಅನಿವಾರ್ಯತೆಯ ಹಿಂದಿರುವ
ನೈಜ ಕಾರಣಗಳು!
ಕಾಂಗ್ರೆಸ್ ಮತ್ತು ಬಾಜಪಗಳ ಹೊರತಾಗಿ ರಚನೆಯಾಗಬಹುದಾದ ಒಂದು ವಿಶಾಲ ರಾಜಕೀಯ ವೇದಿಕೆಯ ಸಾದ್ಯತೆಗಳ ಕುರಿತಾಗಿ ಮಾತನಾಡಿದ ಮೇಲೂ ನಮ್ಮಲ್ಲಿ ಉಳಿಯುವ ಪ್ರಶ್ನೆ: ಇಂತಹದೊಂದು ರಾಜಕೀಯ ಶಕ್ತಿಯ ಅಗತ್ಯವೇನಿದೆ? ಎಂಬುದಾಗಿದೆ. ಈ ಪ್ರಶ್ನೆಗೆ ಸ್ಪಷ್ಟವಾದ ಮತ್ತು ನಿಖರವಾದ ಉತ್ತರ ಕಂಡುಕೊಂಡು ಜನರಿಗೆ ತಲುಪಿಸದ ಹೊರತು ಇಂತಹ ನಡೆ ಯಶಸ್ವಿಯಾಗಲಾರದು!
ಇವತ್ತು ಶತಮಾನಗಳಷ್ಟು ಹಳೆಯದಾದ ಕಾಂಗ್ರೆಸ್ ಪಕ್ಷ ತನ್ನ ಅಗಾಧಪ್ರಮಾಣದ ಭ್ರಷ್ಟಾಚಾರ ಪ್ರಕರಣಗಳಿಂದ, ಜಡಗಟ್ಟಿದ ನಾಯಕರುಗಳಿಂದ, ತಳ ಮಟ್ಟದಲ್ಲಿ ಜನಸಂಪರ್ಕ ಹೊಂದಿರದ ಭಟ್ಟಂಗಿ ರಾಜಕಾರಣಿಗಳ ಕಾರಣದಿಂದಾಗಿ ದಿನೇದಿನೇ ದುರ್ಬಲಗೊಳ್ಳುತ್ತ ಬರುತ್ತಿದೆ. ಇವೆಲ್ಲದರಿಂದ ಅದು ಬಾಜಪಕ್ಕೆ ಪರ್ಯಾಯವಾಗಿ ನಿಲ್ಲುವ ತ್ರಾಣ ಕಳೆದುಕೊಂಡಂತೆ ಕಾಣುತ್ತಿದೆ. ಅದರ ಅದ್ಯಕ್ಷರಾದ ಶ್ರೀಮತಿ ಸೋನಿಯಾಗಾಂದಿಯವರು ಸಹ ಆಯಾಸಗೊಂಡವರಂತೆ ಕಾಣುತ್ತಿದ್ದಾರೆ. ಅವರ ಸ್ಥಾನ ತುಂಬಲು ಸಿದ್ದವಾಗಿರುವ ಕಾಂಗ್ರೆಸ್ಸಿನ ಉಪಾದ್ಯಕ್ಷರಾದ ರಾಹುಲ್ ಗಾಂದಿಯವರಿಗೆ ಕಾಂಗ್ರೆಸ್ಸನ್ನು ಸಶಕ್ತವಾಗಿ ಮುನ್ನಡೆಸಬಲ್ಲ ಸಾಮರ್ಥ್ಯವಿದೆಯೆಂಬುದನ್ನು ಅವರು ತೋರಿಸಿಕೊಟ್ಟಿಲ್ಲ. ಸೋನಿಯಾರ ತಂತ್ರಗಾರಿಕೆಯಾಗಲಿ, ಖಡಕ್ ನಿರ್ದಾರ ತೆಗದುಕೊಳ್ಳಬಹುದಾದ ಪ್ರಬುದ್ದತೆಯನ್ನು ಅವರಿಲ್ಲಿಯವರೆಗೂ ತೋರಿಸಿಲ್ಲ. ಅಕಸ್ಮಾತ್ ಸೋನಿಯಾರವರೇನಾದರು ರಾಹುಲರ ಕೈಗೆ ಪಕ್ಷವನ್ನು ನೀಡಿದರೆ ಇವತ್ತಿರುವ ಕಾಂಗ್ರೆಸ್ ಇನ್ನಷ್ಟು ದುರ್ಬಲಗೊಳ್ಳಬಹುದಾದ ಸಾದ್ಯತೆಯೇ ಹೆಚ್ಚು. ಇಂತಹ ಸನ್ನಿವೇಶವೊಂದು ಎದುರಾದರೆ ಬಾಜಪದ ಮುಂದಿನ ಹಾದಿ ಸುಗಮವಾಗಲಿದ್ದು, ಅದಕ್ಕೆ ರಾಷ್ಟ್ರ ಮಟ್ಟದಲ್ಲಿ ಎದುರಾಳಿಯೇ ಇಲ್ಲದಂತಾಗಿ ಬಿಡುತ್ತದೆ. ಇದು ಬಾಜಪ ನಾಯಕತ್ವವನ್ನು ಸರ್ವಾಧಿಕಾರದತ್ತ ಕರೆದೊಯ್ದರೆ ಅಚ್ಚರಿಯೇನಿಲ್ಲ. ಸದ್ಯದಲ್ಲಿ ಪ್ರದಾನಿ ನರೇಂದ್ರ ಮೋದಿಯವರ ನಡವಳಿಕೆಗಳು ಅಂತಹದೊಂದು ಅನುಮಾನಕ್ಕೆ ಪುಷ್ಠಿ ಕೊಡುವಂತೆಯೇ ಇವೆ.
ಮತಾಂಧ ರಾಜಕಾರಣದ ಚುಂಗು ಹಿಡಿದು ಕೊಂಡು, ಸಂಘಪರಿವಾರದ ಗುಪ್ತ ಕಾರ್ಯಸೂಚಿಯ ಆಣತಿಯಂತೆ ರಾಜಕಾರಣ ಮಾಡುತ್ತ ಬಂದಿರುವ ಬಾಜಪದ ಸಿದ್ದಾಂತಗಳು ನಮ್ಮ ಬಹು ಸಂಸ್ಕೃತಿಯ ಸಮಾಜದ ಮಟ್ಟಿಗೆ ಪ್ರತಿಗಾಮಿಯಾಗಿರುತ್ತವೆ. ಪಶ್ಚಿಮದ ಏಕಧರ್ಮ, ಏಕಬಾಷೆ, ಏಕರಾಷ್ಟ ಎಂಬ ಸಿದ್ದಾಂತಗಳಿಗೆ ಪೂರಕವಾಗಿ ತನ್ನ ಮತಾಂಧ ರಾಜಕಾರಣವನ್ನು ಮಾಡುತ್ತಿರುವ ಬಾಜಪ ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇಂತಹ ಸನ್ನಿವೇಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ಯತ್ನಿಸುವುದು ಖಚಿತ. ಯಾವುದೇ ಬಲಪಂಥೀಯ ರಾಜಕೀಯ ಕೂಟವೂ ವಿರೋಧಿಗಳ ಇರುವಿಕೆಯನ್ನು ಬಯಸುವುದಿಲ್ಲ. ಆದರಿಂದ ಅದು ದುರ್ಬಲಗೊಂಡ ಕಾಂಗ್ರೆಸ್ಸಿನ ಜೊತೆಜೊತೆಗೆ ಪ್ರಾದೇಶಿಕ ಪಕ್ಷಗಳನ್ನೂ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತ ಹೋಗುತ್ತದೆ. ಅದರ ಇಂತಹ ಸಂಚಿಗೆ ಬಲಿಯಾದ ಪ್ರಾದೇಶಿಕ ಪಕ್ಷಗಳು ಅನಿವಾರ್ಯವಾಗಿ ರಾಷ್ಟ್ರ ಮಟ್ಟದಲ್ಲಿ ಅದರ ನೇತೃತ್ವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇಂತಹ ಬೆಳವಣಿಗೆಯಿಂದ ಪ್ರಾದೇಶಿಕ ಹಿತಾಸಕ್ತಿಗಳು ನಗಣ್ಯವಾಗಿ ಐಕ್ಯತೆ ಮತ್ತು ಬಲಿಷ್ಠ ರಾಷ್ಟ್ರದ ಹೆಸರಲ್ಲಿ ಸ್ಥಳೀಯವಾದ ಎಲ್ಲ ಪ್ರಜಾತಂತ್ರದ ವ್ಯವಸ್ಥೆಗಳನ್ನು ಅದು ನಾಶಪಡಿಸುತ್ತ ಹೋಗುತ್ತದೆ. ಇಂತಹದೊಂದು ಅಪಾಯ ಒಂದೆರಡು ದಿನಗಳಲ್ಲಿ ವರ್ಷಗಳಲ್ಲಿ ಆಗದಿvರಬಹುದು. ಆದರೆ ಒಂದು ರಾಷ್ಟ್ರದ ಇತಿಹಾಸದಲ್ಲಿ ತೀರಾ ದೀರ್ಘವೆನಿಸದ ಐದರಿಂದ ಹತ್ತು ವರ್ಷಗಳಲ್ಲಿ ಈ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆದು ಬಿಡಬಹುದು.
ಆದ್ದರಿಂದ ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು, ಇಂಡಿಯಾದ ಎಲ್ಲ ಸಮುದಾಯ -ಸಂಸ್ಕೃತಿಗಳ ಉಳಿವಿಗಾಗಿ ಬಾಜಪಕ್ಕೆ ಸವಾಲೊಡ್ಡಬಲ್ಲ ಒಂದು ಪ್ರಬಲ ಶಕ್ತಿಯ ಅಗತ್ಯ ಇವತ್ತು ಹಿಂದೆಂದಿಗಿಂತಲೂ ಹೆಚ್ಚಿದೆ. ಹೀಗಾಗಿಯೇ ಇವತ್ತು ಪ್ರಾದೇಶಿಕ ಪಕ್ಷಗಳು ಸಮಾನಮನಸ್ಕ ರಾಜಕೀಯ ವೇದಿಕೆಯೊಂದನ್ನು ರಚಿಸಿಕೊಂಡು ತಮ್ಮತಮ್ಮ ರಾಜ್ಯಗಳಲ್ಲಿ ಬಾಜಪವನ್ನು ಎದುರಿಸಿ ನಿಲ್ಲುವ ಸವಾಲನ್ನು ಸ್ವೀಕರಿಸಬೇಕಾಗಿದೆ. ಬಾಜಪ ಸಹ ಪ್ರಜಾಪ್ರಭತ್ವದಲ್ಲಿ ನಂಬಿಕೆಯನ್ನಿಟ್ಟುಕೊಂಡ ಒಂದು ರಾಷ್ಟ್ರೀಯ ಪಕ್ಷವಾಗಿ ಉಳಿಯಲು ಸಹ ಇದು ಸಹಕಾರಿಯಾಗುತ್ತದೆ.
ಆದರೆ ಇದು ಸಾದ್ಯವಾಗಲು ಪ್ರಾದೇಶಿಕ ಪಕ್ಷಗಳ ನಾಯಕರುಗಳು ತಮ್ಮ ಪಾಳೆಗಾರಿಕೆಯ ಅಹಮ್ಮನ್ನು ಬದಿಗೊತ್ತಿ, ಒಳಜಗಳಗಳನ್ನು ಕೈಬಿಟ್ಟು ಮುಕ್ತ ಮನಸ್ಸಿನಿಂದ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ.