ಕು.ಸ.ಮಧುಸೂದನರಂಗೇನಹಳ್ಳಿ
04/06/2016
ರಾಜ್ಯಸಭಾ ಚುನಾವಣೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ರಾಜ್ಯಸಭೆಯ ಅಸ್ಥಿತ್ವದ ಬಗ್ಗೆ ಮತ್ತು ಅದರ ಉಪಯುಕ್ತತೆಯ ಬಗ್ಗೆ ಹಾಗು ಅದಕ್ಕೆಸದಸ್ಯರುಗಳನ್ನು ಆಯ್ಕೆ ಮಾಡುವ ವಿದಾನಗಳ ಬಗ್ಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತುವ ಅನಿವಾರ್ಯತೆ ಇವತ್ತು ಎಂದಿಗಿಂತ ಹೆಚ್ಚಾಗಿದೆ.
ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುವ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ವಿದ್ವತ್‍ಪೂರ್ಣವಾಗಿ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಪ್ರತಿ ರಾಜ್ಯದಿಂದಲೂ ಅಲ್ಲಿನ ಜನಸಂಖ್ಯೆಗನುಗುಣವಾಗಿ ಮತ್ತು ನೇರ ಚುನಾವಣೆಯಲ್ಲಿ ಗೆಲ್ಲಲಾಗದಂತಹವರನ್ನು ಲೋಕಸಬೆಗೆ ಸಮಾನಾಂತರವಾದ ರಾಜ್ಯಸಭೆಗೆ ಆಯ್ಕೆ ಮಾಡಿ ತರುವುದೇ ರಾಜ್ಯಸಭೆಯ ಮೂಲ ಉದ್ದೇಶವಾಗಿತ್ತು. ಹಾಗಾಗಿ ಪ್ರಾರಂಭದಲ್ಲಿ ಆಯಾ ರಾಜ್ಯದವರೆ ಆಯ್ಕೆಯಾಗಿ ಲೋಕಸಭೆಯಲ್ಲಿ ಪ್ರಸ್ತಾಪಿತವಾಗದಂತಹ ಹಲವಾರು ವಿಷಯಗಳನ್ನು ರಾಹ್ಯಸಭೆಯ ಸದಸ್ಯರುಗಳು ಚರ್ಚಿಸಿ ಸರಕಾರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಲೋಕಸಭೆಯಲ್ಲಿ ಅಂಗೀಕಾರವಾದ ಮಸೂದೆಯೊಂದನ್ನು ತಾವು ಚರ್ಚಿಸಿ ಪುನರ್ ಪರಿಶೀಲನೆಗೆ ಕಳಿಸುವ ಹಿರಿಯಣ್ನನ ಅಧಿಕಾರವೂ ಈ ಸದಸ್ಯರಿಗೆ ಇರುತ್ತದೆ.
ಆದರೆ ಯಾವಾಗ ಶಕ್ತಿ ರಾಜಕಾರಣವು ದೇಶದ ಹಿತಾಸಕ್ತಿಯನ್ನೂ ಮೀರಿ ಬೆಳೆದು ನಿಂತಿತೊ ಆಗಿನಿಂದ ರಾಜ್ಯಸಭೆಗೆ ಸದಸ್ಯರನ್ನು ಆರಿಸುವ ರಾಜಕೀಯ ಪಕ್ಷಗಳ ಕಾರ್ಯವೈಖರಿ ಬದಲಾಗುತ್ತ ಹೋಗಿ ಅದಕ್ಕೆ ತಕ್ಕ ಹಾಗೆ ಕಾನೂನಿನಲ್ಲಿಯು ಬದಲಾವಣೆಗಳನ್ನು ತರಲಾಯಿತು. ಈ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳದೂ ಒಂದೇ ನಿಲುವು. ನಾನು ಮೊದಲಿಗೆ ಹೇಳಿದಂತೆ ಆಯಾ ರಾಜ್ಯದವರೆ ರಾಜ್ಯಸಭೆಯ ಅಭ್ಯರ್ಥಿಯಾಗಿ ಆಯ್ಕೆಯಾಗಬೇಕಿತ್ತು. ಆದರೆ ತದನಂತರದಲ್ಲಿ ಯಾವುದೇ ರಾಜ್ಯದ ವ್ಯಕ್ತಿಯೊಬ್ಬ ಇನ್ನೊಂದು ರಾಜ್ಯದ ಅಭ್ಯರ್ಥಿಯಾಗಿ ಸ್ಪರ್ದಿಸಬಲ್ಲ ಅವಕಾಶವನ್ನು ಕಾನೂನಿನ ಮೂಲಕ ತರಲಾಯಿತು. ಆದರದಕ್ಕೆ ಆತ ತಾನು ಸ್ಪರ್ದಿಸಲಿರುವ ರಾಜ್ಯದಲ್ಲಿ ವಾಸ ಮಾಡುತ್ತಿದ್ದೇನೆಂದು ಒದು ಪೂರಕ ವಿಳಾಸ ನೀಡಬೇಕಾಗಿತ್ತು ಅಷ್ಟೆ. ಈ ಹಿಂದೆ ರಾಂಜೇಠ್ಮಾಲಾನಿಯವರು ಕರ್ನಾಟಕದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದಾಗ ಮದ್ಯದ ವ್ಯಾಪಾರಿಯೊಬ್ಬರ ಅತಿಥಿ ಗೃಹದ ವಿಳಾಸವನ್ನು ನೀಡಿದ್ದನ್ನು ನಾವು ಸ್ಮರಿಸಬಹುದಾಗಿತ್ತು. ತದನಂತರ ಮಾಜಿ ಪ್ರದಾನಿ ಮನಮೋಹನ್ ಸಿಂಗ್ ಅಸ್ಸಾಮಿನಿಂದ ಸ್ಪರ್ದಿಸಿದಾಗ ನೀಡಿದ ಯಾವುದೋ ಅಪರಿಚಿತ ವಿಳಾಸ ಸಾಕಷ್ಟು ವಿವಾದ ಮತ್ತು ಚರ್ಚೆಗೆ ಗ್ರಾಸವಾಗಿತ್ತು. ಇಂತಹ ವಿಳಾಸ ನೀಡುವ ಪದ್ದತಿಯಿಂದ ಮುಜುಗರ ಎದುರಿಬೇಕಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡ ರಾಜಕೀಯ ಪಕ್ಷಗಳು ವಿಳಾಸ ನೀಡುವ ಔಪಚಾರಿಕತೆಯ ಅಗತ್ಯವೂ ಇಲ್ಲವೆಂಬ ಕಾನೂನು ಜಾರಿಗೆ ತಂದು ಯಾರು ಯಾವ ರಾಜ್ಯದಲ್ಲಿ ಬೇಕಾದರು ಸ್ಪÀರ್ದಿಸಲು ಬಹಳ ಸುಲಭವಾದ ಮಾರ್ಗವನ್ನು ಕಲ್ಪಿಸಿಕೊಟ್ಟವು. ಹಾಗಾಗಿ ಆಯಾ ರಾಜ್ಯದವರೇ ಸ್ಪರ್ದಿಸಬೇಕೆಂಬ ಯಾವ ಕಾನೂನು ಇವತ್ತು ಇಲ್ಲವಾಗಿದ್ದು, ಅದೀಗ ಕೇವಲ ರಾಜಕೀಯ ಪಕ್ಷಗಳ ನೈತಿಕತೆಯ ಪ್ರಶ್ನೆಯಾಗಿದೆ. ಆದರೆ ನಮ್ಮ ರಾಜಕೀಯ ಪಕ್ಷಗಳಿಂದ ನೈತಿಕತೆಯನ್ನು ನಿರೀಕ್ಷಿಸುವುದು ಮತದಾರರ ಮೂರ್ಖತನವೆಂಬುದನ್ನು ಇದೀಗ ನಡೆಯಲಿರುವ ರಾಜ್ಯಸಭಾ ಚುನಾವಣೆ ಸಾಬೀತು ಮಾಡಿದೆ.
ಇವತ್ತು ನಮ್ಮ ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಾಜಪ ನಿಲ್ಲಿಸಿರುವ ಅಭ್ಯರ್ಥಿಗಳನ್ನೂ ಮತ್ತು ಅವರುಗಳ ಮೂಲರಾಜ್ಯಗಳು ಹಾಗು ಸ್ಪರ್ದಿಸಿರುವ ರಾಜ್ಯಗಳತ್ತ ಒಂದಿಷ್ಟು ಕಣ್ಣು ಹಾಯಿಸಿದರೆ ಸಾಕು ನಮ್ಮ ರಾಜ್ಯಸಭಾ ಚುನಾವಣೆಗಳ ಹಣೇ ಬರಹ ಗೊತ್ತಾಗುತ್ತದೆ ಮೊದಲಿಗೆ ಅಧಿಕಾರರೂಢ ಬಾಜಪದ ಪಟ್ಟಿ ನೋಡಿ: ಆಂದ್ರಪ್ರದೇಶದ ವೆಂಕಯ್ಯನಾಯ್ಡುರವರು ರಾಜಾಸ್ಥಾನದಿಂದಲೂ, ನಿರ್ಮಲಾ ಸೀತಾರಾಮ್ ತಮಿಳುನಾಡಿನವರಾಗಿದ್ದು ಕರ್ನಾಟಕದಿಂದ ಸ್ಪರ್ದಿಸಿದ್ದಾರೆ. ಇನ್ನು ಕಾಂಗ್ರೇಸ್ ಸಹ ಇದರಿಂದ ಹೊರತಾದ್ದೇನಲ್ಲ: ಕಳೆದ ಬಾರಿ ಆಂದ್ರಪ್ರದೇಶದಿಂದ ಸ್ಪರ್ದಿಸಿದ್ದ ಜಯರಾಂರಮೇಶ್ ಈಗ ಕರ್ನಾಟಕದಿಂದ. ತಮಿಳುನಾಡು ಮೂಲದ ಪಿ.ಚಿದಂಬರಂ ಮಹಾರಾಷ್ಟದಿಂದಲೂ,ಪಂಜಾಬಿನ ಕಪಿಲ್ ಸಿಬಾಲ್ ಉತ್ತರಪ್ರದೇಶದಿಂದಲೂ ಸ್ಪರ್ದಿಸುತ್ತಿದ್ದಾರೆ. ಇನ್ನುಳಿದಂತೆ ಬಾಪದ ಪಿಯೂಶ್ ಗೋಯಲ್,ಮುಖ್ತಾರ್ ಅಬ್ಬಾಸ್ ನಕ್ವಿ ಮುಂತಾದವರು ಸಹ ಒಂದೊಂದು ಬಾರಿ ಒಂದೊಂದು ರಾಜ್ಯಗಳಿಗೆ ವಲಸೆ ಹೋಗಿ ಗೆದ್ದವರೆ ಆಗಿದ್ದಾರೆ.
ಹಾಗಿದ್ದರೆ ಹೀಗೆ ಬೇರೆ ರಾಜ್ಯಗಳಿಂದ ಗೆದ್ದು ಹೋದವರು ತಾವು ಪ್ರತಿನಿಧಿಸುವ ರಾಜ್ಯದ ಹಿತಾಸಕ್ತಿಯನ್ನು ಎಷ್ಟರ ಮಟ್ಟಿಗೆ ರಾಜ್ಯಸಭೆಯಲ್ಲಿ ಎತ್ತಿ ಹಿಡಿಯುತ್ತಾರೆಂಬುದೇ ನಮ್ಮ ಪ್ರಶ್ನೆಯಾಗಿದೆ. ತಾವು ಪ್ರನಿಧಿಸುವ ರಾಜ್ಯಗಳ ಬಾಷೆಯನ್ನೇ ಕಲಿಯದ ಅವರುಗಳು ಅದೆಷ್ಟರ ಮಟ್ಟಿಗೆ ಆ ರಾಜ್ಯದ ಸಂಸ್ಕøತಿಯನ್ನು ಪ್ರತಿನಿಧಿಸಬಲ್ಲರೊ ಅರ್ಥವಾಗದ ವಿಷಯವಾಗಿದೆ. ಇದಕ್ಕೊಂದಿಷ್ಟು ಉದಾಹರಣೆಗಳನ್ನು ನೋಡಬಹುದಾಗಿದೆ. ಬಾಜಪದಿಂದ ಕರ್ನಾಟಕವನ್ನು ನಾÀಲ್ಕುಬಾರಿ ಪ್ರತಿನಿದಿಸಿದ್ದ ಶ್ರೀ ವೆಂಕಯ್ಯನಾಯ್ಡುರವರು ಹದಿನೆಂಟು ವರ್ಷಗಳ ನಂತರವೂಕನ್ನಡ ಕಲಿತು ಮಾತನಾಡಲೇ ಇಲ್ಲ ಅದು ಹೋಗಲಿ ತಮಿಳು ನಾಡಿನ ಜೊತೆಕಾವೇರಿವಿವಾದ ತಾರಕಕ್ಕೇರಿದಾಗಲಾಗಲಿ, ಗೋವಾದೊಂದಿಗಿನ ಕಳಸಾ ಬಂಡೂರಿ ವಿವಾದದ ಬಗ್ಗೆ ಯಾಗಲಿ, ಆಂದ್ರದ ಜೊತೆಗಿನ ಕೃಷ್ಣಾ ನೀರು ಹಂಚಿಕೆಯ ವಿಷಯದಲ್ಲಾಗಲಿ ಅವರು ತಾವು ಪ್ರತಿನಿದಿಸುವ ರಾಜ್ಯಸಭೆಯಲ್ಲಿ ಒಂದೇ ಒಂದು ಮಾತನ್ನಾಡಲಿಲ್ಲ. ಇದರ ಬಗ್ಗೆ ಬಾಜಪವನ್ನು ಕೇಳಿದರೆ ಅವರು ರಾಷ್ಟ್ರೀಯ ನಾಯಕರು, ರಾಷ್ಟ್ರದ ಒಟ್ಟಾರೆ ಹಿತಾಸಕ್ತಿಯೇಅವರ ಮುಖ್ಯವೆಂದುಸಬೂಬು ಹೇಳುತ್ತಾರೆ. ಇನ್ನು ಬಹಳ ಹಿಂದೆ ಕರ್ನಾಟಕದಿಂದ ಆಯ್ಕೆಯಾಗಿದ್ದ ರಾಂಜೇಠ್ಮಾಲಿನಿಯವರುಸಹ ಒಂದೇ ಒಂದು ದಿನವೂ ಎದ್ದು ನಿಂತು ಕರ್ನಾಟಕದ ಪರ ಮಾತನಾಡಲಿಲ್ಲ.ಕಳೆದಬಾರಿ ಜನತಾದಳದ ಬೆಂಬಲದಿಂದ ಆಯ್ಕೆಯಾಗಿದ್ದ ತಮಿಳುನಾಡಿನ ರಾಮಸ್ವಾಮಿಯವರು ಕಾವೇರಿಯ ವಿವಾದ ಭುಗಿಲೆದ್ದಾಗ ಮಾಯವಾದವರು ಮತ್ತೆಂದೂ ಕಾಣಿಸಿಕೊಳ್ಳಲೇ ಇಲ್ಲ. ಕರ್ನಾಟಕವನ್ನು ಹಿಂದೆ ಬಾಜಪದ ಪರವಾಗಿ ಪ್ರತಿನಿದಿಸಿದ್ದ ಹೇಮಾ ಮಾಲಿನಿಯ ಮುಖವನ್ನು ಟಿ.ವಿ.ಜಾಹಿರಾತುಗಳಲ್ಲಿ ನೋಡಿದ್ದನ್ನು ಬಿಟ್ಟರೆ ಆಕೆಯೆಂದೂ ಕಾರ್ನಾಟಕದ ಒಳನಾಡಿಗೆ ಬರಲೇ ಇಲ್ಲ. ನೇರ ಚುನಾವಣೆಯಲ್ಲಿ ಗೆಲ್ಲಲಾಗದಂತಹ ಮುಖರಹಿತ ವ್ಯಕ್ತಿಗಳಿಗೆ ಮಣೆ ಹಾಕುತ್ತ ಪ್ರಜಾಸತ್ತೆಯ ನಿಜವಾದ ಆಶಯವನ್ನು ಗಾಳಿಗೆ ತೂರುತ್ತಿವೆ.ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಸೋತು ಮನೆ ಸೇರಿದವರಿಗೆ ರಾಜಕೀಯವಾಗಿ ಮರುಜನ್ಮ ನೀಡುವುದಕ್ಕೂ ಈ ಚುನಾವಣೆಗಳು ನೆರವಾಗುತ್ತಿವೆ. ಜೊತೆಗೆ ಬಂಡವಾಳಶಾಹಿ ಉದ್ಯಮಿಗಳಿಗೆ ತಮ್ಮ ವ್ಯವಹಾರಗಳನ್ನು ಸುಸೂತ್ರವಾಗಿ ನಡೆಸಿಕೊಂಡುಹೋಗಲು ಈ ಸದಸ್ಯತ್ವದ ದುರುಪಯೋಗವೂ É ನಡೆಯುತ್ತಿದೆ ಈ ಹಿಂದೆ ಗೆದ್ದ ವಿಜಯ ಮಲ್ಯ ಮತ್ತು ರಾಮಸ್ವಾಮಿಯವರ ಉದ್ದೇಶವೇ ತಮ್ಮ ವ್ಯಾಪಾರ ಉದ್ದಿಮೆಗಳಿಗೆ ಈ ಸದಸ್ಯತ್ವನೆರವಾಗಲಿಯೆಂಬುದಾಗಿತ್ತು.
ಆದ್ದರಿಂದ ಯಾವುದೋ ರಾಜ್ಯದವರನ್ನು ಇನ್ಯಾವುದೊ ರಾಜ್ಯದಿಮದ ಆರಿಸಿ ಕಳಿಸಿದರೆ ಆವ್ಯಕ್ತಿಯ ಆ ಪಕ್ಷದ ಹಿತಾಸಕ್ತಿ ಕಾಪಾಡಲ್ಪಡುತ್ತದೆಯೇ ಹೊರತು ಆ ರಾಜ್ಯದ ಹಿತಾಸಕ್ತಿಯಲ್ಲ. ತಾವುಆಯ್ಕೆಯಾದ ರಾಜ್ಯದ ನೆಲಜಲಗಳ ಬಗ್ಗೆ ದನಿಯೆತ್ತಬೇಕಾದ ಸದಸ್ಯರುಗಳು ತಮ್ಮ ಮೂಲರಾಜ್ಯಕ್ಕೆ ನಿಷ್ಠರಾಗಿರುತ್ತಾರೆ ಮತ್ತು ಪಕ್ಷದ ಹಿತದೃಷ್ಠಿಯಿಂದ ಮಾತ್ರ ಕೆಲಸ ನಿರ್ವಹಿಸಬಲ್ಲರು. ಕನಿಷ್ಠ ಪ್ರಾದೇಶಿಕ ಪಕ್ಷಗಳಾದರು ಇಂತಹ ಬೆಳವಣಿಗೆಗಳನ್ನು ವಿರೋದಿಸುತ್ತವೆಯೆಂದರೆ ಅವೂ ಸಹ ವಿವಿದ ಆಮೀಷಗಳಿಗೊಳಗಾಗಿ ಅನ್ಯರಾಜ್ಯದ ಉದ್ದಿಮೆದರರನ್ನು ಆರಿಸುವ ಕೆಟ್ಟಚಾಳಿಗೆ ಬಿದ್ದಿವೆ.
ವಿಪರ್ಯಾಸ ನೋಡಿ; ಕರ್ನಾಟಕದ ಜನತೆ ಅನ್ಯರಾಜ್ಯದ ಅಭ್ಯರ್ಥಿಗಳ ಬಗ್ಗೆ ಇಷ್ಟೊಂದು ವಿರೋಧ ವ್ಯಕ್ತ ಪಡಿಸುತ್ತಿರುವಾಗಲೇ ಪ್ರಾದೇಶಿಕ ಪಕ್ಷವಾದ (ಈ ಸತ್ಯ ಹೇಳಿದರೆ ದೇವೇಗೌಡರಿಗೆ ಕೋಪ ಬರಬಹುದು!)ಜನತಾದಳದ ಹೆಚ್.ಡಿ.ಕುಮಾರಸ್ವಾಮಿಯವರು ಬಾಜಪದ ನಾಯಕರಾದ ಶ್ರೀ ಆರ್ ಅಶೋಕ್ ಅವರೊಂದಿಗೆ ಚರ್ಚಿಸಿ ನಿರ್ಮಲಾ ಸೀತಾರಾಮ್ ಗೆಲ್ಲಬೇಕೆಂದು ಆಶಿಸಿದ್ದಾರೆ. ಕೇವಲ 40ಸ್ಥಾನಗಳನ್ನು ಇಟ್ಟುಕೊಂಡೇ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಎದೆಗಾರಿಕೆ ತೋರಿಸಿದ ಕುಮಾರಸ್ವಾಮಿಯವರೀಗ ಬಾಜಪಕ್ಕೆ ಕೊರತೆಯಾಗಬಲ್ಲ ಮತಗಳನ್ನು ತುಂಬಿ ಕೊಡುವ ಹಾದಿಯಲ್ಲಿದ್ದಾರೆ. ಕೊನೆಗೂ ಅವರಿಗೆ ತಮ್ಮ ಪಕ್ಷ ಅಧಿಕಾರದ ಹತ್ತಿರಕ್ಕೆ ಹೋಗುವುದು ಬೇಕಾಗಿದೆÀಯೇ ಹೊರತು ರಾಜ್ಯದಹಿತಾಸಕ್ತಿಯಲ್ಲ ಎಂಬುದನ್ನುಸಾಬೀತು ಮಾಡಿದ್ದಾರೆ
ಆದ್ದರಿಂಲೇ ಇವತ್ತು ರಾಜ್ಯಸಬೆಯ ಚುನಾವಣೆಗಳನ್ನು ಗಂಬೀರವಾಗಿ ತೆಗೆದುಕೊಂಡು, ಚಿರ್ಚಿಸಬೇಕಾದ ಪ್ರಮೇಯವಿದೆ. ಒಕ್ಕೂಟ ವ್ಯವಸ್ಥೆಗೆ ಯಾವುದೇ ಧಕ್ಕೆ ಬರದಂತೆ ಮತ್ತು ರಾಜ್ಯಗಳ ಹಿತಾಸಕ್ತಿಗಳಿಗೂ ತೊಂದರೆಯಾಗದಂತೆ ರಾಜ್ಯಸಭಾಸದಸ್ಯರನ್ನು ಆಯ್ಕೆ ಮಾಡುವ ಹೊಸ ವ್ಯವಸ್ಥೆಯೊಂದನ್ನು ರೂಪಿಸಬೇಕಾಗಿದೆ. ಲೋಕಸಭೆಯಷ್ಟೆ ಪ್ರಬಾವಶಾಲಿಯಾಗಿರುವ ಮತ್ತು ಹಿರಿಯರ ಪ್ರತಿಭಾವಂತರ ಮನೆಯೆಂದು ಖ್ಯಾತಿ ಪಡೆದಿರುವ ರಾಜ್ಯಸಭೆಯ ಘನತೆಯನ್ನು ಕಾಪಾಡಲು ಹಾಗು ಪ್ರಜಾಸತ್ತೆಯ ಆಶಯವನ್ನು ಸಾಕಾರಗೊಳಿಸಲು ಹಾಲಿಇರುವ ಕಾನೂನುನ್ನು ತಿದ್ದುಪಡಿ ಮಾಡಿ, ರಾಜ್ಯಸಭಾ ಚುನಾವಣೆಯನ್ನು ಇನ್ನಷ್ಟು ಪಾರದರ್ಶಕವಾಗಿಯೂ, ರಾಜ್ಯಗಳ ಹಿತಕಾಪಾಡುವ ನಿಟ್ಟಿನಲ್ಲಿ ನಡೆಯುವಂತೆಯೂ ಮಾಡುವುದು ನಮ್ಮ ರಾಜಕೀಯ ಪಕ್ಷಗಳ ಆದ್ಯತೆಯಾಗಬೇಕಿದೆ. ಇಲ್ಲದೇ ಹೋದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಸಂಸ್ತೆಗಳ ಮೌಲ್ಯ ಕಡಿಮೆಯಾಗುತ್ತ ಹೋಗುವುದು ನಿಶ್ಚಿತ!
ರಾಜ್ಯಸಭೆ ಹಾಗೂ ವಿಧಾನಪರಿಷತ್ತುಗಳನ್ನು ರೂಪಿಸಿದ ಉದ್ದೇಶ ಇಂದು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದೆ. ಸ್ವತಂತ್ರ ಚಿಂತನಾಶಕ್ತಿ ಇರುವ ಸಂವೇದನಾಶೀಲ ಹಾಗೂ ಪ್ರಬುದ್ಧ ಚಿಂತಕರು ಶಾಸನಸಭೆಗಳಿಗೆ ಬರಬೇಕೆಂಬುದು ಇವುಗಳನ್ನು ರಚಿಸಿದ ಮೂಲ ಉದ್ದೇಶ. ಕಡು ಸ್ವಾರ್ಥಿಗಳೂ, ಚಿಂತನಾಶಕ್ತಿಯಲ್ಲಿ ಅತ್ಯಂತ ಬಡವರೂ ಆಗಿರುವ ರಾಜಕಾರಣಿಗಳ ಕೈಯಲ್ಲಿ ದೇಶದ ಆಡಳಿತ ನೋಡಿಕೊಳ್ಳುವ ಜವಾಬ್ದಾರಿ ಕೊಟ್ಟರೆ ದೇಶ ಹಾಳಾಗಿ ಹೋಗುತ್ತದೆ ಎಂಬುದು ಇದರ ಹಿಂದೆ ಇದ್ದ ಉದ್ದೇಶ. ಆದರೆ ಇಂದು ರಾಜ್ಯಸಭೆ ಎಂಬುದು ರಾಜಕಾರಣಿಗಳ ಪುನರ್ವಸತಿ ಕೇಂದ್ರ ಹಾಗೂ ಧನಿಕ ಉದ್ಯಮಿಗಳು ತಮ್ಮ ಉದ್ಯಮಗಳ ಬೆಳವಣಿಗೆಗೆ ಪೂರಕವಾಗಿ ಆಡಳಿತದ ಮಟ್ಟದಲ್ಲಿ ಪ್ರಭಾವ ಬೀರುವ ಕೇಂದ್ರವಾಗಿ ಪರಿಗಣಿಸುತ್ತಿರುವುದು ನಮ್ಮ ರಾಜಕೀಯ ಪಕ್ಷಗಳ ನೈತಿಕ ದಿವಾಳಿತನದ ಸಂಕೇತವಾಗಿದೆ. ರಾಜ್ಯಗಳಿಂದ ರಾಜ್ಯಸಭೆಗೆ ಚುನಾಯಿತರಾಗುವವರು ಅದೇ ರಾಜ್ಯಕ್ಕೆ ಸೇರಿದವರಾಗಿರಬೇಕೆಂಬ ಕಾನೂನನ್ನು ತಿದ್ದುಪಡಿ ಮಾಡಿ ಯಾವ ರಾಜ್ಯದವರಾದರೂ ಸ್ಪರ್ಧಿಸಬಹುದು ಎಂಬ ಕಾನೂನು ತಿದ್ದುಪಡಿ ಮಾಡಿದ್ದು ತಪ್ಪು. ಇಂಥ ತಿದ್ದುಪಡಿ ಮಾಡುವ ಮೊದಲೇ ಜನಾಭಿಪ್ರಾಯವನ್ನು ಇವರು (ರಾಜಕಾರಣಿಗಳು) ಪಡೆದಿದ್ದಾರೆಯೇ? ಇಂಥ ತಿದ್ದುಪಡಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದಾರೆ ರಾಜಕಾರಣಿಗಳು. ಇಂಥ ತಿದ್ದುಪಡಿ ಮಾಡಬೇಕೆಂದು ಜನರ ಒತ್ತಡ ಇರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಈ ರೀತಿ ವರ್ತಿಸುವುದು ಪ್ರಜಾಪ್ರಭುತ್ವವಿರೋಧಿ ಧೋರಣೆ ಹಾಗೂ ಸರ್ವಾಧಿಕಾರಿ ನಿಲುವು ಕೂಡ ಹೌದು.
ReplyDeleteರಾಜ್ಯಸಭೆಗೆ ಪ್ರಬುದ್ಧ ಚಿಂತಕರು, ವಿಜ್ಞಾನಿಗಳು, ಸಾಹಿತಿಗಳು ಮೊದಲಾದ ಬುದ್ಧಿಜೀವಿಗಳು ಬರಬೇಕೇ ಹೊರತು ಚಿಂತನಾಶಕ್ತಿಯಿಲ್ಲದ ರಾಜಕಾರಣಿಗಳು, ಸಿನಿಮಾನಟರು, ಕ್ರಿಕೆಟ್ ಆಟಗಾರರು ಬರುವುದರಿಂದ ದೇಶಕ್ಕೆ ಮೂರುಕಾಸಿನ ಪ್ರಯೋಜನವೂ ಆಗಲಾರದು. ಹೀಗಾಗಿ ರಾಜ್ಯಸಭೆ, ವಿಧಾನಪರಿಷತ್ತುಗಳಿಗೆ ಪ್ರಬುದ್ಧ ಚಿಂತಕರು, ವಿಜ್ಞಾನಿಗಳು, ಸಾಹಿತಿಗಳನ್ನು ಮಾತ್ರ ಆರಿಸಿ ಕಳಿಸುವಂತೆ ಜನ ಒತ್ತಡ ತರಬೇಕಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಮುಂದೆ ಬಂದು ಜನಜಾಗೃತಿ ಮೂಡಿಸಬೇಕಾಗಿದೆ. ದೂರದೃಷ್ಟಿಯಿಲ್ಲದ, ಚಿಂತನಾಶಕ್ತಿಯಿಲ್ಲದ, ಸಂಕುಚಿತ ಮನೋಭಾವದ ರಾಜಕಾರಣಿಗಳು ದೇಶವನ್ನು ಈಗಾಗಲೇ ಹಾಳುಗೆಡವಿದ್ದಾರೆ. ಈಗ ಇವರು ರಾಜ್ಯಸಭೆಯಂಥ ಹಿರಿಯ ಚಿಂತಕರು ಇರಬೇಕಾದ ಜಾಗವನ್ನೂ ಲಗಾಡಿ ತೆಗೆಯುವ ಮೊದಲೇ ಜನ ಎಚ್ಚತ್ತು ತೀವ್ರ ಪ್ರತಿರೋಧ ತೋರಬೇಕಾಗಿದೆ.
ಹೆಚ್ಚು ಹಣ ಚೆಲ್ಲುವವರಿಗೆ ರಾಜ್ಯಸಭೆ ವಿಧಾನಸಭೆಗಳು ಸೀಮಿತವಾಗಿಬಿಡುತ್ತಿರುವುದು ಇವತ್ತಿನ ದುರಂತ
Delete