Jun 18, 2016

ಬಲಪಂಥೀಯ ಕೊಲೆಗಡುಕರ ಬಗ್ಗೆ ಸರ್ಕಾರಕ್ಕೆ ಹಾಗೂ ರಾಜಕೀಯ ಪಕ್ಷಗಳಿಗೆ ಮಮಕಾರವೇಕೆ?

vinayak baliga
ವಿನಾಯಕ ಬಾಳಿಗ
ಆನಂದ್ ಪ್ರಸಾದ್
18/06/2016
ಮಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾರ ಬರ್ಬರ ಕೊಲೆ ನಡೆದು ಮೂರು ತಿಂಗಳುಗಳು ಆಗುತ್ತಾ ಬಂದವು ಆದರೆ ಕೊಲೆಯ ಸೂತ್ರಧಾರಿಗಳ ಬಂಧನ ಇನ್ನೂ ಆಗಿಲ್ಲ. ಪೊಲೀಸರು ಇಂಥ ಬರ್ಬರ ಕೊಲೆಯ ಸೂತ್ರಧಾರರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸದೆ ಹೋದರೆ ಸಮಾಜದಲ್ಲಿರುವ ದುಷ್ಟ ಶಕ್ತಿಗಳಿಗೆ ಹಣ ಹಾಗೂ ರಾಜಕೀಯ ಬೆಂಬಲ ಇದ್ದರೆ ಎಷ್ಟು ಕೊಲೆಯನ್ನಾದರೂ ಮಾಡಿ ತಪ್ಪಿಸಿಕೊಳ್ಳಬಹುದು ಎಂಬ ತಪ್ಪು ಸಂದೇಶ ಹೋಗಿ ಇಂಥ ಘಟನೆಗಳು ಹೆಚ್ಚಿ ಸಮಾಜದಲ್ಲಿ ಅನ್ಯಾಯ ಹಾಗೂ ಅಕ್ರಮಗಳು ಹೆಚ್ಚಲಿವೆ. ವಿನಾಯಕ ಬಾಳಿಗಾರ ಕೊಲೆಯ ವಿಷಯದಲ್ಲಿ ರಾಜ್ಯದ ಮುಖ್ಯ ವಾಹಿನಿಯ ಮಾಧ್ಯಮಗಳು ಬಾಯಿ ಮುಚ್ಚಿ ಕುಳಿತಿರುವುದು ಪರಮಾಶ್ಚರ್ಯವೇ ಸರಿ. ಇನ್ನೂ ಆಶ್ಚರ್ಯದ ವಿಷಯವೆಂದರೆ ಬಿಜೆಪಿ ಪಕ್ಷದ ಒಬ್ಬ ನಿಷ್ಟಾವಂತ ಕಾರ್ಯಕರ್ತ ಹಾಗೂ ಪರಮ ಧಾರ್ಮಿಕ ಮನೋಭಾವದ ವ್ಯಕ್ತಿಯು ಅನ್ಯಾಯ ಹಾಗೂ ಅಕ್ರಮಗಳ ವಿರುದ್ಧ ಹೋರಾಡಿ ಬಲಿದಾನ ಮಾಡಿದರೂ ಅದೇ ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಈ ಭೀಕರ ಕೊಲೆಯ ವಿಷಯದಲ್ಲಿ ಮೌನ ವಹಿಸಿರುವುದು. ರಾಜಕೀಯದಲ್ಲಿ ವಿರುದ್ಧ ಪಕ್ಷದ ವ್ಯಕ್ತಿಗಳ ಕೊಲೆ ಕೆಲವು ರಾಜ್ಯಗಳಲ್ಲಿ ನಡೆಯುತ್ತದೆ ಆದರೆ ತಮ್ಮದೇ ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನು ಕೊಲ್ಲುವುದು ಬಹಳ ವಿರಳ ಅಥವಾ ಇಲ್ಲವೆಂದೇ ಹೇಳಬಹುದು. ಧರ್ಮದ ವಿಷಯದಲ್ಲಿ ದೊಡ್ಡ ದೊಡ್ಡ ಭಾಷಣ ಬಿಗಿಯುವ ಧಾರ್ಮಿಕ ನಾಯಕರು, ಸ್ವಾಮೀಜಿಗಳು ಮೊದಲಾದವರು ಈ ಕೊಲೆಯ ವಿಷಯದಲ್ಲಿ ಚಕಾರ ಎತ್ತುವುದು ಕಂಡುಬರಲಿಲ್ಲ. ಇದನ್ನೆಲ್ಲಾ ನೋಡುವಾಗ ಧರ್ಮಗ್ಲಾನಿಯಾಗಿದೆ ಎಂದು ಯಾರಿಗಾದರೂ ಅನಿಸುತ್ತದೆ.

ಮಂಗಳೂರಿನಂಥ ಸುಶಿಕ್ಷಿತರ ನಗರದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಭೀಕರವಾಗಿ ಕೊಲೆಯಾದರೂ ಹೆಚ್ಚಿನ ಪ್ರತಿಭಟನೆ ರೂಪುಗೊಳ್ಳಲಿಲ್ಲ. ಯಾವುದೇ ಧಾರ್ಮಿಕರು, ದೇವಭಕ್ತರು ಇಂಥ ಅನ್ಯಾಯ ನಡೆದರೂ ದನಿ ಎತ್ತಲಿಲ್ಲ. ಇದರ ವಿರುದ್ಧ ದನಿ ಎತ್ತಿ ಮಂಗಳೂರಿನ ಮಾನ ಕಾಪಾಡಿದ್ದು ದೇವರನ್ನು ನಂಬದ ವಿಚಾರವಾದಿ ನರೇಂದ್ರ ನಾಯಕರು ಹಾಗೂ ಕೆಲ ಎಡ ಪಕ್ಷಗಳವರು ಮಾತ್ರ. ಇವರು ಎರಡು ಸಲ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರತಿಭಟಿಸಿ ಇಡೀ ಮಂಗಳೂರಿನ ಮಾನ ಉಳಿಸಿದ್ದಾರೆ. ವಿನಾಯಕ ಬಾಳಿಗಾರನ್ನು ಕೊಲೆಗೈದ ಬಲಪಂಥೀಯ ಕೊಲೆಗಡುಕರು ನಿರೀಕ್ಷಣಾ ಜಾಮೀನಿಗೆ ಜಿಲ್ಲಾ ಮಟ್ಟದಲ್ಲಿ ಹಾಗೂ ಹೈಕೋರ್ಟ್ ಮಟ್ಟದಲ್ಲಿ ಅರ್ಜಿ ಸಲ್ಲಿಸಿದರೂ ನ್ಯಾಯಾಂಗ ಇವುಗಳನ್ನು ತಿರಸ್ಕರಿಸಿದೆ. ಹೀಗಿದ್ದರೂ ಕೊಲೆಯ ಸೂತ್ರಧಾರರನ್ನು ಬಂಧಿಸುವಲ್ಲಿ ಪೋಲೀಸರ ಕೈಯನ್ನು ಕಟ್ಟಲಾಗಿದೆ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಈ ಕೊಲೆಯ ಸೂತ್ರಧಾರರು ಯಾರು ಎಂಬುದು ಬಹುತೇಕ ಪೊಲೀಸರಿಗೆ ಗೊತ್ತಿದೆ ಮತ್ತು ಜನಸಾಮಾನ್ಯರಿಗೂ ಗೊತ್ತಿದೆ. ಇವರೇನು ನಕ್ಸಲರಂತೆ ಕಾಡಿನಲ್ಲಿ ಇಲ್ಲ. ಬಲಪಂಥೀಯ ಸಂಘಟನೆಗಳ ಸಹಕಾರದಿಂದ ಎಲ್ಲೋ ಅಡಗಿ ಕುಳಿತಿದ್ದಾರೆ. ನಕ್ಸಲರ ವಿಷಯದಲ್ಲಿ ಅತ್ಯಂತ ಕಠಿಣವಾಗಿ ವರ್ತಿಸಿ ಎನ್ಕೌಂಟರ್ ಮಾಡಿ ಕೊಲ್ಲುವ ಪೊಲೀಸರು ಬಲಪಂಥೀಯ ಕೊಲೆಗಡುಕರನ್ನು ತಪ್ಪಿಸಿಕೊಳ್ಳಲು ಬಿಟ್ಟಿರುವುದು ಸಮಾಜಕ್ಕೆ ಕೊಡುವ ಸಂದೇಶವಾದರೂ ಏನು ಎಂಬ ಬಗ್ಗೆ ರಾಜ್ಯದ ಮಾಧ್ಯಮಗಳು ಪ್ರಶ್ನಿಸಬೇಕಾಗಿತ್ತು. ಕೆಲವೇ ಕೆಲವು ಪತ್ರಿಕೆಗಳನ್ನು ಬಿಟ್ಟರೆ ಮುಖ್ಯ ವಾಹಿನಿಯ ಟಿವಿ ಮಾಧ್ಯಮಗಳು ಈ ವಿಚಾರದಲ್ಲಿ ಮೌನವಾಗಿವೆ. ಮಾಧ್ಯಮಗಳ ಈ ಮೌನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಮಧ್ಯಮ ಧರ್ಮಕ್ಕೆ ವಿರುದ್ಧವಾದದ್ದು.

ಪೊಲೀಸರು ಕೊಲೆಯಂಥ ಘೋರ ಅಪರಾಧದಲ್ಲಿ ಪರಾರಿಯಾದ, ತಲೆಮರೆಸಿಕೊಂಡ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಕಾನೂನಿನ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ತಂಡ ರಚಿಸಬೇಕಾಗಿತ್ತು. ಆದರೆ ವಿನಾಯಕ ಬಾಳಿಗಾರ ಕೊಲೆ ತನಿಖೆ ವಿಷಯದಲ್ಲಿ ಪೋಲೀಸರು ಇಂಥ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ಪರಾರಿಯಾಗಿ ತಲೆಮರೆಸಿಕೊಂಡ ಆರೋಪಿಗಳ ಎಲ್ಲ ಆಸ್ತಿಪಾಸ್ತಿಗಳನ್ನು ಪೊಲೀಸರು ಮುಟ್ಟುಗೋಲು ಹಾಕುವ ಮೂಲಕ ಆರೋಪಿ ಕಾನೂನಿನ ಮುಂದೆ ಶರಣಾಗುವಂತೆ ಮಾಡುವ ಅವಕಾಶ ಇದೆ ಎಂದು ನರೇಂದ್ರ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಪಾದಿಸಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಕೂಡ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ. ನಕ್ಸಲೀಯರ ವಿರುದ್ಧ ಕಠಿಣವಾಗಿ ವರ್ತಿಸುವ ಪೊಲೀಸರು ಬಲಪಂಥೀಯ ಕೊಲೆಗಡುಕರ ಬಗ್ಗೆ ಯಾಕೆ ಮೃದು ಧೋರಣೆ ತಳೆದಿದ್ದಾರೆ ಎಂದು ರಾಜ್ಯದ ಪ್ರಜ್ಞಾವಂತರು ಪ್ರಶ್ನಿಸುವ ಅಗತ್ಯ ಇದೆ.

No comments:

Post a Comment