ಕು.ಸ.ಮಧುಸೂದನ ನಾಯರ್
ದೇಶದ ಹಿಂದಿ ಹೃದಯಭಾಗವಾದ ಬಿಹಾರವನ್ನು ಕಳೆದುಕೊಂಡ ನಂತರದಲ್ಲಿ ಉತ್ತರಪ್ರದೇಶ ರಾಜ್ಯವನ್ನು ಗೆಲ್ಲಲೇಬೇಕಾಗಿರುವುದು ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಮತ್ತು ಬಾಜಪದ ರಾಷ್ಟ್ರಾದ್ಯಕ್ಷರಾದ ಶ್ರೀ ಅಮಿತ್ ಷಾರವರಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿಬಿಟ್ಟಿದೆ. ಈ ದಿಸೆಯಲ್ಲವರು ಹಲವು ಚುನಾವಣಾ ಪೂರ್ವ ತಂತ್ರಗಳನ್ನು ಹೆಣೆಯುತ್ತ ಸಾದ್ಯವಿರಬಹುದಾದ ಎಲ್ಲ ನಡೆಗಳನ್ನೂ ನಡೆಸಲು ಪ್ರಾರಂಬಿಸಿದ್ದಾರೆ. ಮೊದಲಿನಿಂದಲೂ ಉತ್ತರಪ್ರದೇಶ ಜಾತಿಯಾಧಾರಿತ ರಾಜಕಾರಣಕ್ಕೆ ಹೆಸರು ವಾಸಿಯಾಗಿದ್ದು, ತೊಂಬತ್ತರ ದಶಕದ ನಂತರ ಜಾತಿ ರಾಜಕಾರಣದ ಜೊತೆಗೆ ಧರ್ಮ ರಾಜಕಾರಣವೂ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಹೀಗಾಗಿ ಉತ್ತರಪ್ರದೇಶದಲ್ಲಿರುವ ಶೇಕಡಾ 28 ರಷ್ಟು ಮುಸ್ಲಿಂ ಮತದಾರರು ಮುಂದಿನ ವಿದಾನಸಭಾ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿದ್ದಾರೆಂಬುದು ಖಚಿತ. ಅದೂ ಅಲ್ಲದೆ ಸುಮಾರು 73 ಕ್ಷೇತ್ರಗಳಲ್ಲಿ ಅವರ ಮತಗಳೇ ನಿರ್ಣಾಯಕವೂ ಆಗಿದೆ. ಹಾಗಾಗಿ ಈ 28ರಷ್ಟು ಮತವನ್ನು ಯಾವ ಪಕ್ಷ ಹೆಚ್ಚು ಸೆಳೆಯುತ್ತದೆಯೊ ಆ ಪಕ್ಷ ಬಹುಮತ ಪಡೆಯುವುದು ಸಾದ್ಯವಾಗುತ್ತದೆಯೆಂಬುದು ಒಂದು ಲೆಕ್ಕಾಚಾರ. ಈ ದೃಷ್ಠಿಯಿಂದ ಎಲ್ಲ ಪಕ್ಷಗಳು ಮುಸ್ಲಿಂ ಮತದಾರರನ್ನು ಓಲೈಸುವ ಮಾತುಗಳನ್ನಾಡುತ್ತಿವೆ.
ಇದುವರೆಗೂ ಬಹುತೇಕ ಮುಸ್ಲಿಂ ಮತದಾರರು ಸಮಾಜವಾದಿ ಪಕ್ಷದ ಕಟ್ಟಾ ಬೆಂಬಲಿಗರಾಗಿದ್ದರು. ಕಳೆದ ವಿದಾನಸಭಾ ಚುನಾವಣೆಯಲ್ಲಿ ಅಂದರೆ 2012ರಲ್ಲಿ ಸಮಾಜವಾದಿ ಪಕ್ಷವು ಶೇಕಡಾ 54ರಷ್ಟು ಮುಸ್ಲಿಂ ಮತಗಳನ್ನು ಪಡೆದು ನಿಚ್ಚಳ ಬಹುಮತ ಪಡೆದಿತ್ತು. ಆದರೆ 2014ರ ಲೋಕಸಭಾ ಚುನಾವಣೆಗಳ ನಂತರ ಈ ಸಮೀಕರಣ ಬಹಳಷ್ಟು ಬದಲಾದಂತೆ ಕಾಣುತ್ತಿದೆ. ಈ ಹಿಂದಿನಂತೆ ಮುಸ್ಲಿಂ ಸಮುದಾಯ ಸಂಪೂರ್ಣವಾಗಿ ಸಮಾಜವಾದಿ ಪಕ್ಷದ ಜೊತೆಗಿಲ್ಲ. ಅದು ಕಳೆದ ನಾಲ್ಕೂವರೆ ವರುಷಗಳ ಅಖಿಲೇಶ್ ಯಾದವ್ ಆಳ್ವಿಕೆಯಿಂದ ಭ್ರಮನಿರಸವಗೊಂಡಿದೆ. ಸಮಾಜವಾದಿ ಪಕ್ಷವು ಮುಜಾಫರ್ ನಗರದ ಗಲಬೆಗಳನ್ನು, ಮತ್ತು ದಾದ್ರಿ ಪ್ರಕರಣವನ್ನು ನಿರ್ವಹಿಸಿದ ರೀತಿ ಮುಸ್ಲಿಂ ಸಮುದಾಯದ ಕೋಪಕ್ಕೆ ಕಾರಣವಾಗಿದೆ. ಮುಜಾಫರ್ ನಗರದ ಗಲಬೆಗಳಾದ ಸುಮಾರು ಆರು ತಿಂಗಳ ನಂತರ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಅಲ್ಲಿಗೆ ಬೇಟಿ ನೀಡುವ ಮನಸ್ಸು ಮಾಡಿದ್ದರು, ಅದೂ ಲೋಕಸಭಾ ಚುನಾವಣೆಗೆ ಮತ ಕೇಳಲು. ಹೀಗಾಗಿ ಗಲಬೆಯಾದ ತಕ್ಷಣ ಸ್ಥಳಕ್ಕೆ ದಾವಿಸದ ಸಮಾಜವಾದಿ ಪಕ್ಷದ ತಂದೆ ಮಕ್ಕಳ ಬಗ್ಗೆ ಮುಸ್ಲಿಂ ಸಮುದಾಯ ತೀವ್ರ ಅಸಮಾದಾನಗೊಂಡಿದೆ. ನಂತರದಲ್ಲಿ ನಡೆದ ದಾದ್ರಿ ಪ್ರಕರಣವನ್ನು ಬಾಜಪಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ವಹಿಸಿದ ಉತ್ತರಪ್ರದೇಶದ ಸರಕಾರದ ಬಗ್ಗೆ ಆ ಸಮುದಾಯ ಮತ್ತಷ್ಟು ಕೋಪಗೊಂಡು ದೂರ ಸರಿಯುವಲ್ಲಿ ಕಾರಣವಾಯಿತು. ಇದರ ಜೊತೆಗೆ ಬಿಹಾರದಲ್ಲಿ ನಡೆದ ಮಹಾಘಟಬಂದನ್ ಜೊತೆ ಸೇರದೆ ಬಾಜಪಕ್ಕೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ನಡೆದುಕೊಂಡ ಮುಲಾಯಂ ಸಿಂಗ್ ಅವರ ನಡವಳಿಕೆ ಮುಸ್ಲಿಂ ಸಮುದಾಯಕ್ಕೆ ಸಮಾಜವಾದಿ ಪಕ್ಷದ ಬಗ್ಗೆ ದಶಕಗಳಿಂದ ಇದ್ದ ನಂಬಿಕೆ ಕುಸಿಯುವಂತೆ ಮಾಡಿತು.
ಇಂತಹ ಪರಿಸ್ಥಿತಿಯಲ್ಲ್ಲಿ ಬಾಜಪವನ್ನು ಸೋಲಿಸಬಲ್ಲ ಒಂದು ಪಕ್ಷವನ್ನು ಮುಸ್ಲಿಂ ಸಮುದಾಯ ಬೆಂಬಲಿಸುವ ಯೋಚನೆಯಲ್ಲಿದೆ ಮತ್ತು ಅಂತಹ ಪಕ್ಷದ ಹುಡುಕಾಟದಲ್ಲಿ ತೊಡಗಿರುವಾಗಲೇ ಬಹುಜನ ಪಕ್ಷದ ಮಾಯಾವತಿಯವರು ಮುಸ್ಲಿಂ ಸಮುದಾಯದ ಬೆಂಬಲ ಪಡೆಯಲು ಬೇಕಾದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಈ ಕಾರ್ಯಕ್ಕೆ ಪೂರ್ವಬಾವಿಯಾಗಿಯೇ ಅವರು ಉತ್ತರಕಾಂಡದಲ್ಲಿ ಇತ್ತೀಚೆಗೆ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ತಮ್ಮ ಪಕ್ಷದ ಶಾಸಕರುಗಳು ಕಾಂಗ್ರೆಸ್ಸಿಗೆ ಮತಚಲಾಯಿಸುವಂತೆ ನೋಡಿಕೊಂಡರು. ಹೀಗೆ ತಾನು ಕಾಂಗ್ರೆಸ್ಸಿನ ಪರವಾಗಿರುವುದನ್ನು ಸಾರ್ವಜನಿಕವಾಗಿ ತೋರಿಸಿಕೊಡುವುದರ ಮೂಲಕ ತಮ್ಮ ಪಕ್ಷ ಭವಿಷ್ಯದಲ್ಲಿ ಬಾಜಪವನ್ನು ಯಾವ ಕಾರಣಕ್ಕೂ ಬೆಂಬಲಿಸುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ಮುಸ್ಲಿಂ ಸಮುದಾಯಕ್ಕೆ ನೀಡುವಲ್ಲಿ ಯಶಸ್ವಿಯಾದರು. ಸಮಾಜವಾದಿ ಪಕ್ಷದಿಂದ ದೂರ ಸರಿಯುತ್ತಿರುವ ಮುಸ್ಲಿಂ ಸಮುದಾಯವನ್ನು ಸೆಳೆಯಲು ನಿರ್ದರಿಸಿರುವ ಮಾಯಾವತಿಯವರು ತಾವು ಹಿಂದೆ ಪ್ರಯೋಗಿಸಿದ ದಲಿತ ಮತ್ತು ಮುಸ್ಲಿಂ ಸಮೀಕರಣವನ್ನು ಮತ್ತೊಮ್ಮೆ ಪ್ರಯೋಗಿಸಲು ಸಿದ್ದತೆ ನಡೆಸಿದ್ದಾರೆ. 2007ರಲ್ಲಿ ಅವರು 206 ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿಯಾಗಲು ಸಹಾಯ ಮಾಡಿದ್ದೇ ಈ ದಲಿತ-ಮುಸ್ಲಿಂ-ಬ್ರಾಹ್ಮಣ ಸಮೀಕರಣ. ಈಗಾಗಲೇ ಟಿಕೇಟ್ ಹಂಚಿಕೆಯನ್ನು ಪ್ರಾರಂಬಿಸಿರುವ ಬಹುಜನ ಪಕ್ಷವು ಸುಮಾರು 100 ಸ್ಥಾನಗಳನ್ನು ಮುಸ್ಲಿಮರಿಗು, 50 ಸ್ಥಾನಗಳನ್ನು ಬ್ರಾಹ್ಮಣರಿಗೂ ಮೀಸಲಿಟ್ಟಿದ್ದು ಒಟ್ಟು ಸ್ಥಾನಗಳ ಪೈಕಿ ಶೇಕಡಾ ಇಪ್ಪತ್ತೈದರಷ್ಟನ್ನು ಮುಸ್ಲಿಂ ಸಮುದಾಯಕ್ಕೆ ಮೀಸಲಿಟ್ಟು , ತಾನು ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತಹ ಸೂಚನೆಯನ್ನು ನೀಡಿದ್ದಾರೆ.
ಈ ದಿಸೆಯಲ್ಲಿ ಅವರು ಬಾಜಪವನ್ನು ಸೋಲಿಸಲು ಕಾಂಗ್ರೆಸ್ ಜೊತೆಗೆ ಕೈಜೋಡಿಸುವ ಇರಾದೆಯನ್ನು ಹೊಂದಿದ್ದಾರೆ. ಇಂತಹ ಮೈತ್ರಿಯ ವಿಚಾರದಲ್ಲಿ ಕಾಂಗ್ರೆಸ್ ತಗೆದುಕೊಳ್ಳಬಹುದಾದ ನಿರ್ದಾರ ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ ಮುಂದಿನ ವಿದಾನಸಭಾ ಚುನಾವಣೆಗಳಲ್ಲಿ ಜಾತಿ ಲೆಕ್ಕಾಚಾರದ ಜೊತೆಜೊತೆಗೆ ಧಾರ್ಮಿಕ ಧ್ರವೀಕರಣಗಳೂ ನಡೆಯುವುದು ಖಂಡಿತಾ. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಠಿಯಿಂದ ಇಂತಹ ಬೆಳವಣಿಗೆಗಳು ಒಳ್ಳೆಯದಲ್ಲವಾದರೂ, ಇಂಡಿಯಾದ ರಾಜಕಾರಣ ನಡೆಯುತ್ತಿರುವುದೇ ಇಂತಹ ಜಾತಿ ಧರ್ಮಗಳ ಆಧಾರದ ಮೇಲೆ ಎನ್ನುವುದು ವಿಷಾದದ ವಿಷಯವಾಗಿದೆ.
ಉತ್ತರ ಪ್ರದೇಶದಲ್ಲಿ ಮಾಯಾವತಿಯ ಸಮೀಕರಣವು ಗೆಲುವು ಸಾಧಿಸುವ ಸಂಭವ ಹೆಚ್ಚಾಗಿದೆ. ಇದಕ್ಕೆ ಪ್ರಧಾನ ಕಾರಣ ಬಿಜೆಪಿಯು ಕೇಂದ್ರದಲ್ಲಿ ಭಾರೀ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದರೂ ಅದನ್ನು ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಗಿಂತ ಇಂದು ನಿರುದ್ಯೋಗ ದೇಶದಲ್ಲಿ ಹೆಚ್ಚುತ್ತಿರುವುದು ಎದ್ದು ಕಾಣುವ ಸತ್ಯ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಇಂಜಿನಿಯರ್ ಶಿಕ್ಷಣ ಪಡೆದರೂ ಇಂದು ದೇಶದಲ್ಲಿ ಲಕ್ಷಾಂತರ ಇಂಜಿನಿಯರುಗಳಿಗೆ ಕೆಲಸವಿಲ್ಲದ ಸ್ಥಿತಿ ನಿರ್ಮಾಣವಾಗಿ ಆ ಶಿಕ್ಷಣ ಪಡೆದವರು ಹೊಟ್ಟೆಪಾಡಿಗೆ ಸಿಕ್ಕಿದ ಯಾವುದೇ ಕೆಲಸ ಮಾಡುವ ಅನಿವಾರ್ಯತೆಗೆ ಬಿದ್ದಿದ್ದಾರೆ. ಇದು ನರೇಂದ್ರ ಮೋದಿಯವರ "ಅಚ್ಚೇ ದಿನ್" ಆಶ್ವಾಸನೆಗೆ ವಿರುದ್ಧವಾಗಿದೆ. ಇದರಿಂದ ಯುವ ಜನಾಂಗ ಭ್ರಮನಿರಸನಗೊಳ್ಳುತ್ತಿದ್ದಾರೆ. 'ಡಿಜಿಟಲ್ ಇಂಡಿಯಾ' ಎಂಬ ಮೋದಿಯವರ ಘೋಷಣೆ ಹಳ್ಳ ಹಿಡಿದಿದೆ. ಹಳ್ಳಿಗಳಿಗೆ ಕನಿಷ್ಠ ಒಂದು ೩ಜಿ ಸಂಪರ್ಕ ಒದಗಿಸುವ ಕೆಲಸ ಕೂಡ ಆಗಿಲ್ಲ. ಲಕ್ಷಾಂತರ ರೂಪಾಯಿಗಳಿಗೆ ತರಂಗಾಂತರ ಹರಾಜು ಹಾಕಿ ಸರಕಾರ ಹಣ ಮಾಡುವ ಕೆಲಸದಲ್ಲಿ ತೊಡಗಿದೆಯೇ ಹೊರತು ಆ ಹಣದ ಒಂದು ಪಾಲನ್ನು ಬಿಎಸ್ಸೆನ್ನೆಲ್ ಸಂಸ್ಥೆಗೆ ಒದಗಿಸಿ ದೇಶಾದ್ಯಂತ ೩ಜಿ ಸಂಪರ್ಕ ಒದಗಿಸುವ ಕೆಲಸ ಮಾಡಬಹುದಾಗಿತ್ತಾದ್ದರೂ ಅಂಥ ದೂರದೃಷ್ಟಿ ಮೋದಿ ಸರ್ಕಾರಕ್ಕೆ ಇಲ್ಲ. ಬರೀ ಡಿಜಿಟಲ್ ಇಂಡಿಯಾ ಎಂದು ಸರ್ಕಾರ ಡೋಲು ಬಾರಿಸುತ್ತಲೇ ಕಾಲಹರಣ ಮಾಡುತ್ತಿದೆ.
ReplyDeleteದೇಶದಲ್ಲಿ ಬೆಲೆಯೇರಿಕೆ ಬಿಸಿ ಜನಸಾಮಾನ್ಯರ ಜೀವನ ದುರ್ಬರ ಮಾಡುತ್ತಿದೆ. ಕೇಂದ್ರ ಸರ್ಕಾರ ತನ್ನ ನೌಕರರ ಸಂಬಳ ಏರಿಸಿದರೂ ಜನಸಾಮಾನ್ಯರ ಸಂಬಳ ಯಾರು ಏರಿಸುತ್ತಾರೆ? ಖಾಸಗಿ ಸಂಸ್ಥೆಗಳಲ್ಲಿ ಅತ್ಯಂತ ಕಡಿಮೆ ಸಂಬಳಕ್ಕೆ ಇಂದು ದೇಶಾದ್ಯಂತ ಕೋಟ್ಯಂತರ ಮಂದಿ ದುಡಿಯುತ್ತಿದ್ದಾರೆ. ಇವರ ಸಂಬಳ ಯಾರು ಏರಿಸುತ್ತಾರೆ? ಇವರಿಗೆ ಯಾವ 'ಪೇ ಕಮಿಷನ್ ' ಕೂಡ ಇಲ್ಲ. ಕೋಟ್ಯಂತರ ರೈತರು ಬೆಳೆಗಳಿಗೆ ಸಮರ್ಪಕ ಬೆಲೆಯಿಲ್ಲದೆ ಸೊರಗುತ್ತಿದ್ದಾರೆ. ಇವರ ಬೆಳೆಗಳಿಗೆ ಬೆಲೆ ಏರಿಸುವ 'ಪೇ ಕಮಿಷನ್' ಇಲ್ಲ. ಇಂಥ ಜನರ ಸಮಸ್ಯೆಗಳಿಗೆ ಮೋದಿ ಸರ್ಕಾರದ ಬಳಿ ಉತ್ತರ ಇಲ್ಲ. ಇದರಿಂದಾಗಿ ಜನ ಭ್ರಮನಿರಸನಗೊಂಡು ಬಿಜೆಪಿಯಿಂದ ದೂರ ಸರಿಯುವ ಸಂಭವ ಅಧಿಕವಾಗಿದೆ. ತಮ್ಮ ಸಿಟ್ಟನ್ನು ಬೇರೆ ಪಕ್ಷವನ್ನು ಆರಿಸುವ ಮೂಲಕ ತೋರಿಸುವ ಸಂಭವ ಅಧಿಕ.