ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
24/06/2016
ಕರ್ನಾಟಕವನ್ನಾಳಲು ಜೊತೆಯಾದ ಹೊಸ ಮೈತ್ರಿಕೂಟ ವೇಗವಾಗಿ ಜನರನ್ನು ಬಡತನಕ್ಕೆ ನೂಕಿ ಭೂಮಿಯನ್ನು ಪಾಳು ಬೀಳಿಸಿತು. ತನ್ನಾಳ್ವಿಕೆಯ ಸ್ವಲ್ಪ ಸಮಯದಲ್ಲೇ ಕೆಟ್ಟದಾಗಿ ನಿರ್ವಹಿಸಿದ ಸಾಮಾಜಿಕತೆಯ ಮೇಲೆ ಗೂಡು ಕಟ್ಟಿರುವುದನ್ನರಿತು, ತೀರ್ವ ಬಿಕ್ಕಟ್ಟಿನ ಪರಿಸ್ಥಿತಿಯಿಂದ ತನ್ನನ್ನು ತಾನೇ ಬಚಾಯಿಸಿಕೊಳ್ಳಲು ಪ್ರಯತ್ನಪಟ್ಟಿತು. ಇಂತಹ ಉದಾಹರಣೆಯನ್ನು ಶತಮಾನಗಳುದ್ದಕ್ಕೂ ಕರ್ನಾಟಕದ ಇತಿಹಾಸ ಕಂಡಿರಲಿಲ್ಲ. ವಸಾಹತುಶಾಹಿಯ ಸರಪಳಿಗಳಿಂದ ಬಂಧಿಸಲ್ಪಟ್ಟು ನಾಲ್ಕು ದಶಕಗಳು ಕಳೆಯುವಷ್ಟರಲ್ಲಿ, ಕರ್ನಾಟಕದ ಜನರ ಸಹನೆಯ ಕಟ್ಟೆ ಒಡೆದಿತ್ತು ಮತ್ತು ಶತ್ರುವನ್ನು ಒಡೆದೋಡಿಸಲು ಬೇಕಿದ್ದ ರಾಜಕೀಯ ವಿಸ್ತೀರ್ಣತೆಯನ್ನು ಪಡೆದುಕೊಳ್ಳಲಾರಂಭಿಸಿತ್ತು. 1830ರ ದಶಕದ ಮೊದಲರ್ಧವನ್ನು ಕರ್ನಾಟಕದ ಭವ್ಯ 1857 ಎಂದು ಪರಿಗಣಿಸಬಹುದು.
ನಾವೀಗಾಗಲೇ ನೋಡಿರುವಂತೆ, ಊಳಿಗಮಾನ್ಯತೆ – ವಸಾಹತುಶಾಹಿಯ ಆಳ್ವಿಕೆಯ ಬಿಕ್ಕಟ್ಟು ಆಕ್ರಮಣ ಮಾಡಿದ ಕೆಲವೇ ದಿನಗಳಲ್ಲಿ ಪ್ರಾರಂಭವಾಗಿತ್ತು, ಮೈಸೂರು ಸೈನ್ಯದ ವಿಸರ್ಜನೆಯೊಂದಿಗೆ. ಸಾಮಾಜಿಕ ರಚನೆ ವಸಾಹತುಶಾಹಿಯ ಲೂಟಿಗೆ ಪ್ರತಿಕ್ರಿಯಿಸಲಾರಂಭಿಸಿತ್ತು ಮತ್ತು ಒಂದು ದಶಕದೊಳಗೆ ಪ್ರತಿಕ್ರಿಯೆಗಳು ಆಳ ಪಡೆದುಕೊಳ್ಳಲಾರಂಭಿಸಿತ್ತು (ಗಹನತೆ ಪಡೆದುಕೊಳ್ಳಲಾರಂಭಿಸಿತ್ತು). 1820ರಷ್ಟರಲ್ಲಿ, ಬಿಕ್ಕಟ್ಟು ತೀರ್ವವಾಯಿತು ಮತ್ತು ರಾಜಕೀಯ ಸ್ವರೂಪ ಪಡೆದುಕೊಳ್ಳಲಾರಂಭಿಸಿತ್ತು. 1820ರ ದಶಕದುದ್ದಕ್ಕೂ ಕ್ರಾಂತಿಯ ಕಿಡಿಗಳು ಅಲ್ಲಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿತ್ತು, ದಶಕ ಮುಗಿಯುವಷ್ಟರಲ್ಲಿ ಎಲ್ಲೆಡೆಯೂ ಕ್ರಾಂತಿಯ ಬೆಂಕಿ ಹೊತ್ತಿಕೊಳ್ಳುವುದರ ಸೂಚನೆಯಾಗಿ.
ವಸಾಹತುಶಾಹಿ ಕರ್ನಾಟಕಕ್ಕೆ ಹತ್ತೊಂಬತ್ತನೇ ಶತಮಾನದು ಆದಿಭಾಗದಲ್ಲಿ ಪರಿಚಯಿಸಿದ ಬಿಕ್ಕಟ್ಟು ಇವತ್ತಿನವರೆಗೂ ಮುಂದುವರೆದಿದೆ. ರಾಜ್ಯಕ್ಕೆ ಅಂಟಿಕೊಂಡ ಈ ಮೊದಲ ಬಿಕ್ಕಟ್ಟು, ಕೆಲವೊಂದು ಸಾಮ್ಯತೆಗಳಿದ್ದಾಗ್ಯೂ, ಭವಿಷ್ಯದಲ್ಲಿ ಇಂಪೀರಿಯಲಿಸಂ ವಿರುದ್ಧ ಏಕೀಕೃತಗೊಂಡ ಹೋರಾಟಗಳಿಗೆ ಹೋಲಿಸಿದರೆ ಬಹಳಷ್ಟು ಭಿನ್ನವಾಗಿತ್ತು. ಈ ಬಿಕ್ಕಟ್ಟಿನ ವೈಶಿಷ್ಟ್ಯತೆಯೆಂದರೆ ಆಕ್ರಮಣಕಾರಿ ದೇಶವಾದ ಬ್ರಿಟನ್ನಿನಲ್ಲಿ ಕೈಗಾರಿಕಾ ಬಂಡವಾಳ ವರ್ತಕ ಬಂಡವಾಳಕ್ಕಿಂತ ಮೇಲುಗೈ ಪಡೆಯುವ ಪ್ರಕ್ರಿಯೆಯಿನ್ನೂ ನಡೆದಿರುವಾಗಲೇ ಕರ್ನಾಟಕದಲ್ಲಿ ವಸಾಹತುಶಾಹಿಯ ಸುದೀರ್ಘ ಇನ್ನಿಂಗ್ಸ್ ಪ್ರಾರಂಭವಾಗಿಬಿಟ್ಟಿತ್ತು. ಇದರಿಂದಾಗಿ ವಿವಿಧ ಬಗೆಯ ಲೂಟಿಗಳು ಮತ್ತು ಆ ಲೂಟಿಗೆ ಪ್ರತಿಕ್ರಿಯೆಯಾಗಿ ಬಿಕ್ಕಟ್ಟಿನ ಉದ್ಭವವಾಗುತ್ತಿತ್ತು; ಬಂಡವಾಳದಲ್ಲಿ ಬದಲಾವಣೆಯಾದಾಗ ಅಥವಾ ಮತ್ತೊಂದು ಬಗೆಯಲ್ಲಿ ಹೇಳುವುದಾದರೆ ಕೊಳ್ಳೆ ಹೊಡೆಯುವವರ ಸಾಮಾಜಿಕ ಅಸ್ತಿತ್ವದಲ್ಲಿ ಬದಲಾವಣೆಯಾದಾಗ ಬಿಕ್ಕಟ್ಟಿನ ರೂಪವೂ ಬದಲಾಗುತ್ತಿತ್ತು.
ಕರ್ನಾಟಕಕ್ಕೆ ಹೊರೆಯಾದ ವಸಾಹತುಶಾಹಿ ಮಾಡಿದ ಒಂದು ದೊಡ್ಡ ವಿಧ್ವಂಸಕ ಕೃತ್ಯವೆಂದರೆ ಕೃಷಿ ಕಂದಾಯ ಪದ್ಧತಿಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿಬಿಟ್ಟಿದ್ದು. ಆಕ್ರಮಿಸಿದ ಮೊದಲ ಹಲವು ದಶಕಗಳಲ್ಲಿ ಈ ತೆರಿಗೆ ವಸಾಹತಿಗೆ ದೊಡ್ಡ ಮಟ್ಟದ ಆದಾಯ ಮೂಲವಾಗಿಬಿಟ್ಟಿತ್ತು.
ಅ. ಕೃಷಿ ಕಂದಾಯ ಮತ್ತದರ ಶೋಷಕ ಶರಾತ್ (Revenue farming and its oppressive sharat)
ಕರಾವಳಿ ಮತ್ತು ಮಲೆನಾಡು ಭಾಗದಿಂದ ಸಾಂಬಾರ ಪದಾರ್ಥ ಹಾಗು ಉತ್ತರದ ಜಿಲ್ಲೆಗಳಿಂದ ಹತ್ತಿಯನ್ನು ತೆಗೆದುಕೊಳ್ಳುವುದನ್ನು ಬಿಟ್ಟರೆ ಬ್ರಿಟೀಷರು ಮೊದಲ ಐದು ದಶಕ ಕೃಷಿಯ ಬಗ್ಗೆ ತುಂಬಾ ಕಡಿಮೆ ಆಸಕ್ತಿ ತೋರಿಸುತ್ತಿತ್ತು. ಆದರೂ ರಾಜ್ಯವನ್ನಾಕ್ರಮಿಸಿದ ಕೆಲವೇ ವರ್ಷಗಳಲ್ಲಿ ಈ ಭಾಗದ ಕೃಷಿಯನ್ನಷ್ಟೇ ಅಲ್ಲದೇ ನಮ್ಮ ಭೂಮಿಯ ಇಂಚಿಂಚು ಭೂಮಿಯಲ್ಲೂ ಕೃಷಿಯನ್ನು ಹಾಳುಗೆಡವಿತು. ವಸಾಹತುಶಾಹಿ ಕೃಷಿಯನ್ನು ಹಾಳುಗೆಡವಿದ್ದಕ್ಕೆ ಮುಖ್ಯ ಕಾರಣ ಇಂಬಳದಂತೆ ರೈತರ ಶಕ್ತಿಯನ್ನೆಲ್ಲ ಹೀರಿ ಬಿಸಾಕಿದ ಕಂದಾಯ ಆಡಳಿತ. ಲಾಭವನ್ನು ಎಷ್ಟು ಕಾರುಣ್ಯರಹಿತವಾಗಿ ಹೀರಿಬಿಡಲಾಗುತ್ತಿತ್ತೆಂದರೆ ಮತ್ತೆ ಕೃಷಿ ಮಾಡಲು ಬಂಡವಾಳವೇ ಇರುತ್ತಿರಲಿಲ್ಲ. ಲಾಭದಾಯಕ ಕೃಷಿಯನ್ನು ಅಸ್ತಿತ್ವ ಉಳಿಸಿಕೊಳ್ಳಲು ಏದುಸಿರು ಬಿಡುವ ಕೃಷಿಯನ್ನಾಗಿ ಮಾಡಿಬಿಡಲಾಯಿತು ಮತ್ತಲ್ಲಿಂದ ಅದು ಸಂಪೂರ್ಣ ನಾಶದ ಹಾದಿ ಹಿಡಿಯಿತು. ವಸಾಹತುಶಾಹಿಯೊಂದಿಗೆ ರೈತ ಸಮೂಹಕ್ಕಾದ ಮೊದಲ ಕಹಿ ಅನುಭವವೆಂದರೆ ಬ್ರಿಟೀಷರ ಪರಾವಲಂಬಿ ಕೃಷಿ ಕಂದಾಯ ಪದ್ಧತಿ. ಈ ಲೂಟಿ ಕಂಪನಿಗೆ ಎಷ್ಟೊಂದು ಉಪಯುಕ್ತವಾಗಿತ್ತೆಂದರೆ, ಭೂಮಿಗಾಕುವ ತೆರಿಗೆಯಿಂದ ಕಂಪನಿಗೆ ಬರುವ ಆದಾಯ ಉಳಿದೆಲ್ಲ ಆದಾಯ ಮೂಲಕ್ಕಿಂತಲೂ ಅಧಿಕವಾಗಿತ್ತು ಮತ್ತು ಪರಿಚಯಿಸಿದ ದಶಕದಲ್ಲಿ ವಸಾಹತು ಪ್ರದೇಶದಿಂದ ಬ್ರಿಟಿಷರಿಗೆ ಸಿಗುತ್ತಿದ್ದ ಆದಾಯ ಮೂಲವಾಗಿತ್ತು. ಈ ಕೃಷಿ ಕಂದಾಯದ ಅಗಾಧತೆಯನ್ನು ನಾವು ಗಮನಿಸೋಣ, ಅದರ ವಿವಿಧ ರೂಪ ಮತ್ತು ಈ ಲೂಟಿಯಲ್ಲಿದ್ದ ಕ್ರೌರ್ಯತೆಯೊಂದಿಗೆ; ಇದನ್ನು ಅರಿಯುವ ಮೂಲಕ ಊಳಿಗಮಾನ್ಯ – ವಸಾಹತು ಆಳ್ವಿಕೆ ಮೂಡಿಸಿದ ಬಿಕ್ಕಟ್ಟಿನ ಸ್ವರೂಪಗಳನ್ನು ತಿಳಿಯಬಹುದು.
ನಾವೀಗಾಗಲೇ ಗಮನಿಸಿರುವಂತೆ, ಸಹಕಾರಿ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ತಮಗೆ ಶರಣಾದ ರಾಜರು ಮತ್ತು ಪಾಳೇಗಾರರಿಗೆ ಬ್ರಿಟೀಷರು ಹಾಕಿದ ಮೊದಲ ಶರತ್ತು ವಾರ್ಷಿಕ ಕಾಣ್ಕೆಯ ಕುರಿತಾಗಿತ್ತು. ವಾರ್ಷಿಕ ಕಾಣ್ಕೆಯನ್ನು ತಿಂಗಳ ಕಂತುಗಳಲ್ಲಿ ಬ್ರಿಟೀಷ್ ಸಾಮ್ರಾಜ್ಯಕ್ಕೆ ಉಡುಗೊರೆಯಂತೆ ನೀಡಬೇಕಿತ್ತು. ತಮ್ಮ ನೇರ ಆಡಳಿತವಿದ್ದ ಪ್ರದೇಶಗಳಲ್ಲಿ ಈ ಮೊತ್ತವನ್ನು ತಮ್ಮದೇ ತೆರಿಗೆ ಪದ್ಧತಿಯಿಂದ ಪಡೆಯುತ್ತಿದ್ದರು; ಅಧಿಕಾರಶಾಹಿಗೆ ಇಷ್ಟು ಮೊತ್ತವನ್ನು ಸಂಗ್ರಹಿಸಬೇಕೆಂದು ಗುರಿ ನೀಡಲಾಗುತ್ತಿತ್ತು. ಕರ್ನಾಟಕದಲ್ಲಿದ್ದ ಈ ಹೆಚ್ಚಿನ ತೆರಿಗೆ ಪದ್ಧತಿಯ ಕುರಿತು ಸೆಬಾಸ್ಟಿಯನ್ ಜೋಸೆಫ್ ತಿಳಿಸುತ್ತಾರೆ: “1799ರ ಸಹಕಾರಿ ಒಪ್ಪಂದದ ಎರಡನೇ ಆರ್ಟಿಕಲ್ಲಿನನುಸಾರ ಮೈಸೂರಿನ ಮೇಲೆ 24.5 ಲಕ್ಷ ರುಪಾಯಿಗಳಷ್ಟು ಕಪ್ಪ ಕಾಣ್ಕೆಯನ್ನು ವಿಧಿಸಲಾಯಿತು…ನಂತರ 1881ರಲ್ಲಿ ಇದನ್ನು ಹತ್ತೂವರೆ ಲಕ್ಷದಷ್ಟು ಏರಿಸಿ, ಒಟ್ಟು ಮೂವತ್ತೈದು ಲಕ್ಷವನ್ನು ಮುಂದಿನ 32 ವರುಷಗಳವರೆಗೆ ನಿಯಮಿತವಾಗಿ ಪಡೆಯಲಾಯಿತು, 1896ರಿಂದ 1928ರವರೆಗೆ. 1928ರಲ್ಲಿ ಮತ್ತೆ ಈ ಮೊತ್ತವನ್ನು 24.5 ಲಕ್ಷ ರುಪಾಯಿಗಳಿಗೆ ಇಳಿಸಲಾಯಿತು, ಮೂಲ ಒಪ್ಪಂದದಲ್ಲಿದ್ದಂತೆ. ಈ ಪದ್ಧತಿ 136 ವರುಷಗಳಿಗಿಂತ ಹೆಚ್ಚು ಮುಂದುವರಿಯಿತು…. ಮೈಸೂರಿನ ಈ ಕಾಣ್ಕೆ ವಸಾಹತಿಗೆ ಕಾಣ್ಕೆ ನೀಡುತ್ತಿದ್ದ 198 ರಾಜ್ಯಗಳ ಒಟ್ಟು ಮೊತ್ತದ 50 ಪರ್ಸೆಂಟಿನಷ್ಟಿತ್ತು.” (208) ಮೈಸೂರು ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿಬಿಟ್ಟಿತ್ತು.
ಈ ಕಾಣ್ಕೆ ಎಷ್ಟು ಅಗಾಧವಾಗಿತ್ತು ಎಂದರಿವಾಗಲು ಸಾಮ್ರಾಜ್ಯದ ತೆರಿಗೆ ಸಂಗ್ರಹದ ಬಗ್ಗೆ ಗಮನ ಹರಿಸಬೇಕು. 1809-10 ರಲ್ಲಿ ಸಂಗ್ರಹವಾದ ತೆರಿಗೆ 28,24,646 ರುಪಾಯಿ, 1811-12ರಲ್ಲಿ ತೆರಿಗೆ ಸಂಗ್ರಹ ಹೆಚ್ಚಿ 37,18,633 ರುಪಾಯಿಗೆ ತಲುಪಿದರೆ ಮತ್ತೆ 1825-26ರಷ್ಟೊತ್ತಿಗೆ 28,64,950 ರುಪಾಯಿಗಳಿಗೆ ನಿಧಾನಕ್ಕೆ ಕುಸಿಯಿತು. (209)
ಹಾಗಾಗಿ ಕೆಲವೊಮ್ಮೆ ಸಂಗ್ರಹವಾದ ತೆರಿಗೆಯ ಮೊತ್ತ ಬ್ರಿಟೀಷರಿಗೆ ಕೊಡಬೇಕಾದ ಕಾಣ್ಕೆಯ ಮೊತ್ತ ಮತ್ತು ಕಮಿಷನ್ ರೂಪದಲ್ಲಿ ಕೈಗೊಂಬೆ ರಾಜ ಮತ್ತವನ ದಿವಾನನಿಗೆ ಸಿಗುತ್ತಿದ್ದ ಮೊತ್ತಕ್ಕಿಂತಲೂ ಕಡಿಮೆಯಿರುತ್ತಿತ್ತು.
ಆದಾಗ್ಯೂ, 1831-32ರಲ್ಲಿ, ತೆರಿಗೆ ಸಂಗ್ರಹ 43,97,035 ರುಪಾಯಿಗೆ ಏರಿಕೆಯಾಯಿತು ಮತ್ತು 1848-49ರಲ್ಲಿ ಹೆಚ್ಚು ಕಡಿಮೆ ದ್ವಿಗುಣವಾಗಿ 80,08,339 ರುಪಾಯಿ ಸಂಗ್ರಹವಾಯಿತು. ಮೂರನೇ ದಶಕದವರೆಗಿನ ತೆರಿಗೆ ಸಂಗ್ರಹದ ವಿವರವನ್ನು ಜಾಳು ಜಾಳಾದ ಲೆಕ್ಕಾಚಾರ ಎಂದು ತಪ್ಪು ತಿಳುವಳಿಕೆ ಬರಬಾರದು. ತಪ್ಪು ತಿಳುವಳಿಕೆಗೆ ವ್ಯತಿರಿಕ್ತವಾಗಿತ್ತು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಟಿಪ್ಪುವಿನ ತೆರಿಗೆ ಪದ್ಧತಿಯನ್ನು ನಿಂದಿಸುವುದಕ್ಕೆ ಮೈಸೂರು ಇತಿಹಾಸದ ಮೇಲಿನ ತನ್ನ ಮೂರು ಸಂಪುಟಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ವಿಲ್ಕ್ಸ್ ತನ್ನ ವರದಿಗಳಲ್ಲಿ ಬ್ರಿಟೀಷರ ಲೂಟಿ ಮಾಡಿದ ಅಂಕಿಸಂಖೈಗಳ ಬಗ್ಗೆ ವಿವರ ಒದಗಿಸುತ್ತಾನೆ.
1792ರಲ್ಲಿ, ಟಿಪ್ಪು ಸುಲ್ತಾನನ ಆಳ್ವಿಕೆಯಿದ್ದ ಕಾಲದಲ್ಲಿ, ಮುಂದಿನ ದಿನಗಳಲ್ಲಿ ಮೈಸೂರು ಸಂಸ್ಥಾನವನ್ನು ಸೇರಿದ ಜಿಲ್ಲೆಗಳು ಒಟ್ಟು 14,12,533 ಕಾಂತರೇಯ ಪಗೋಡಾಗಳನ್ನು ತೆರಿಗೆ ರೂಪದಲ್ಲಿ ನೀಡಿತ್ತು. 1802-03ನೇ ಸಾಲಿನಲ್ಲಿ ಇದು ದ್ವಿಗುಣವಾಗಿ 25,41,571 ಕಾಂತರೇಯ ಪಗೋಡಾಗಳಷ್ಟಾಗಿತ್ತು. (210) ಈ ಹೆಚ್ಚಳ ನಡೆದ ಕಾಲದಲ್ಲಿ ಆರ್ಥಿಕತೆ ದುಸ್ಥಿತಿಯಲ್ಲಿತ್ತು ಮತ್ತು ಉತ್ಪಾದನೆ ಗಣನೀಯವಾಗಿ ಕುಸಿದುಹೋಗಿತ್ತು.
ರೈತರನ್ನು ಎಷ್ಟು ಸುಲಿಗೆ ಮಾಡಲಾಗಿತ್ತೆಂದರೆ 1811ರಲ್ಲಿ ಪೂರ್ಣಯ್ಯ ಬ್ರಿಟೀಷರ ಸೇವೆಯಿಂದ ನಿವೃತ್ತಿಯೊಂದುವಷ್ಟರಲ್ಲಿ ರಾಜ್ಯದ ಬೊಕ್ಕಸದಲ್ಲಿ ಎರಡು ಕೋಟಿ ರುಪಾಯಿಯಷ್ಟು ಅಧಿಕ ಹಣ ಸಂಗ್ರಹವಾಗಿತ್ತು! ಇದರ ಬಗ್ಗೆ ಲಿವಿಸ್ ರೈಸ್ ಹೇಳುತ್ತಾನೆ: “ಪೂರ್ಣಯ್ಯನವರ ಆಡಳಿತ ವೈಖರಿ ನಿರಂಕುಶವಾಗಿತ್ತು ಅನುಮಾನವಿಲ್ಲ; ಮತ್ತು, ಫೈನಾನ್ಶಿಯರ್ ಆಗಿ, ಅಧಿಕ ಆದಾಯವನ್ನು ಸಂಗ್ರಹಿಸುವುದು ಅವರ ಗುರಿಯಾಗಿತ್ತು. ಜನರ ಸಂಪನ್ಮೂಲಕ್ಕೆ ಕೈಇಟ್ಟು ರಾಜ್ಯದ ವೆಚ್ಚದಲ್ಲಿ ಖಜಾನೆಯನ್ನು ಭರ್ತಿ ಮಾಡಿದ್ದಾರಲ್ವಾ ಎಂದು ಪ್ರಶ್ನಿಸಬಹುದು. 1811ರಷ್ಟರಲ್ಲಿ ಸಾರ್ವಜನಿಕ ಗೋರಿಗಳಲ್ಲಿ ಎರಡು ಕೋಟಿ ರುಪಾಯಿಗಳನ್ನು ಕೂಡಿಹಾಕಿದ್ದರು”. (211)
ಎಂ.ಹೆಚ್.ಗೋಪಾಲ್ ಹೇಳುತ್ತಾರೆ: “ಪೂರ್ಣಯ್ಯನವರ ಆಡಳಿತ ಒಂದು ದೊಡ್ಡ ಟೀಕೆಗೆ ಒಳಗಾಗಿದೆ. 1815ರಷ್ಟು ಮೊದಲೇ ಮಹಾರಾಜ ಬರೆಯುತ್ತಾರೆ: ‘ಮಾಜಿ ದಿವಾನ್ ಪೂರ್ಣಯ್ಯ, ತೆರಿಗೆ ಸಂಗ್ರಹದಲ್ಲಷ್ಟೇ ಪ್ರತಿಭೆ ಹೊಂದಿದ್ದ ಪೂರ್ಣಯ್ಯ, ಹಣವನ್ನು ಸಂಗ್ರಹಿಸುವುದರೆಡೆಗೇ ಗಮನ ಹರಿಸಿದ್ದು ಆಡಳಿತದ ಈ ವಿಭಾಗದಲ್ಲಿ ತಮಗಿರುವ ಆಸಕ್ತಿಯನ್ನು ಪ್ರದರ್ಶಿಸುವ ಸಲುವಾಗಿ. ಹನ್ನೆರಡು ವರುಷಗಳಲ್ಲಿ ಪ್ರತ್ಯೇಕ ನಿಧಿಯನ್ನೇ ಇದಕ್ಕಾಗಿ ಸ್ಥಾಪಿಸಿದ್ದರು. ಆದರೆ ಪೂರ್ಣಯ್ಯ ಜನರ ವಿಚಾರಗಳೆಡೆಗೆ ನಿರಾಸಕ್ತರಾಗಿದ್ದರು ಮತ್ತು ಪ್ರಾಂತ್ಯದ ಜನರನ್ನು ವಿಪರೀತದ ಕಷ್ಟ ನಷ್ಟಗಳಿಗೆ ದೂಡಿಬಿಟ್ಟರು’. ಈ ಟೀಕೆಯನ್ನು 1832-33ರಲ್ಲಿ ಮೈಸೂರಿನ ದಂಗೆಯ ಬಗ್ಗೆ ತನಿಖೆ ನಡೆಸಿದ ಸಮಿತಿಯೂ ಪ್ರತಿಧ್ವನಿಸಿತು. ಸಮಿತಿಯ ವರದಿ ಹೇಳುತ್ತದೆ: ‘ದೇಶದ ಸಂಪತ್ತು ಪೂರ್ಣಯ್ಯನವರ ಆಡಳಿತದಲ್ಲಿ ಹೆಚ್ಚಾಯಿತೆಂದು ತೋರುವುದಿಲ್ಲ. ತೂಕದ ಹೇಳಿಕೆಯೆಂದು ಪರಿಗಣಸಿಸಬಹುದಾದ ಒಬ್ಬ ಸಾಕ್ಷಿದಾರ ಸಮಿತಿಗೆ, ಈ ಅವಧಿಯಲ್ಲಿ ರೈತರ ಪರಿಸ್ಥಿತಿ ತೀರ ಹದಗೆಟ್ಟು ಹೋಯಿತೆಂದು ತಿಳಿಸುತ್ತಾನೆ. ಅವನ ತೀಕ್ಷ್ಣ ಮಾತುಗಳನ್ನೇ ಉಲ್ಲೇಖಿಸುವುದಾದರೆ, ‘ಹೆಚ್ಚಿನ ಸಂಖೈಯ ರೈತರು ಈ ಆಡಳಿತದ ಶುರುವಿನಲ್ಲಿ ಆರಾಮಾಗೇ ಇದ್ದರು ಮತ್ತು ಅವರಲ್ಲಿ ಅರ್ಧದಷ್ಟು ಮಂದಿ ಆಡಳಿತಾವಧಿ ಮುಗಿಯುವಷ್ಟರಲ್ಲಿ ಬಡತನದ ಹತ್ತಿರಕ್ಕೆ ತಳ್ಳಲ್ಪಟ್ಟಿದ್ದರು’.” (212)
ಈ ಸುಲಿಯುವಿಕೆಯ ಮೊದಲ ನೋಟಗಳು ಬುಚನನ್ನಿನ ವಾಸದ ಸಮಯದಲ್ಲೇ ಕಾಣಿಸಲಾರಂಭಿಸಿತ್ತು. ಅಸ್ತಿತ್ವಕ್ಕೆ ಬಂದ ಕೆಲವು ತಿಂಗಳುಗಳಲ್ಲೇ ಕೈಗೊಂಬೆ ಸರಕಾರದ ಕುರಿತು ರೈತರ ಮನಸ್ಥಿತಿ ಬದಲಾಗಿದ್ದನ್ನು ಬುಚನನ್ ಗಮನಿಸುತ್ತಾನೆ. ಇದು ತ್ರಿಮೂರ್ತಿ ಆಳ್ವಿಕೆ ಮುಂದಿನ ದಿನಗಳಲ್ಲಿ ಎದುರಿಸಬೇಕಾದ ಸನ್ನಿವೇಶಗಳನ್ನು ಸೂಚಿಸುತ್ತಿತ್ತು. ಕೋಲಾರದ ಬೆತ್ತಮಂಗಲದ ರೈತರ ಅಭಿಪ್ರಾಯಗಳನ್ನು ದಾಖಲಿಸಿದ ಬುಚನನ್ ಹೇಳುತ್ತಾನೆ “ಇಲ್ಲಿನ ಜನರು….. ಮೈಸೂರು ಸರಕಾರದ ಅಮಲ್ದಾರರು ಟಿಪ್ಪು ಆಡಳಿತಾವಧಿಯಲ್ಲಿ ತೆಗೆದುಕೊಳ್ಳುತ್ತಿದ್ದ ಹಣಕ್ಕಿಂತ ಹೆಚ್ಚು ತೆಗೆದುಕೊಳ್ಳುತ್ತಾರೆ ಎಂದು ದೂರು ನೀಡಿದರು….” (213)
ಒಂದೆಡೆ ಕೃಷ್ಣರಾಜ ಒಡೆಯರ್, ಮತ್ತೊಂದೆಡೆ ಬ್ರಿಟೀಷ್ ಆಡಳಿತ ಇಷ್ಟೊತ್ತಿಗಾಗಲೇ ಸತ್ತು ಹೋಗಿದ್ದ ಪೂರ್ಣಯ್ಯನವರನ್ನು ದುಷ್ಟನೆಂದು ಚಿತ್ರಿಸಲು ಪ್ರಯತ್ನಿಸುತ್ತಿತ್ತು. ಆದರೆ ಪೂರ್ಣಯ್ಯನವರ ಕುಟಿಲತೆಯನ್ನು ಮೌನದಿಂದ ಒಪ್ಪಿ ಮತ್ತು ಬ್ರಿಟೀಷರು ಆ ಕುಟಿಲ ನೀತಿಗಳನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದರು!
ಕೃಷಿ ಕಂದಾಯ ರೈತರ ಮೇಲೆ ಗಮನ ಕೇಂದ್ರೀಕರಿಸಿತು. ಕಾಲ ಸರಿದಂತೆ ಇದರ ವ್ಯಾಪ್ತಿ ಇನ್ನುಳಿದ ಜನರನ್ನೂ ಒಳಗೊಂಡಿತು. ಯಾವ ಯಾವ ವಸ್ತುಗಳ ಮೇಲೆ ಬ್ರಿಟೀಷರು ತೆರಿಗೆ ವಿಧಿಸಿದರೆಂದರೆ, ಬ್ರಿಟೀಷರ ಈ ತೆರಿಗೆ ಪದ್ಧತಿ ಹದಿನೇಳನೇ ಶತಮಾನದ ಕೊನೆಯ ಭಾಗದಲ್ಲಿ ಚಿಕ್ಕದೇವರಾಜ ಒಡೆಯರರ ಮೋಸದ ತೆರಿಗೆಯನ್ನೂ ಮೀರಿಸಲಾರಂಭಿಸಿತ್ತು. ರೈಸ್ ಪ್ರಕಾರ ಮೊದಲ ಮೂರು ದಶಕಗಳಲ್ಲಿ “769 ಸಣ್ಣಪುಟ್ಟ ವಸ್ತುಗಳಿಗೂ ತೆರಿಗೆ ಹೇರಲಾಯಿತು”. “ಇದರಲ್ಲಿ ಮದುವೆಗೆ, ಮಗು ಹುಟ್ಟಿದ್ದಕ್ಕೆ, ಅದರ ನಾಮಕರಣಕ್ಕೆ ಮತ್ತು ತಲೆ ಬೋಳಿಸಿದ್ದಕ್ಕೂ ತೆರಿಗೆ ವಿಧಿಸಲಾಯಿತು. ಒಂದು ಹಳ್ಳಿಯಲ್ಲಿ, ಅಲ್ಲಿನ ಜನರ ಪೂರ್ವಿಕರು ಪಾಳೇಗಾರರ ಕುದುರೆಯನ್ನು ಪತ್ತೆ ಹಚ್ಚಿರಲಿಲ್ಲ ಎಂಬ ಕಾರಣಕ್ಕೆ ತೆರಿಗೆ ವಿಧಿಸಲಾಗಿತ್ತು. ನಗರದ ಒಂದು ನಿರ್ದಿಷ್ಟ ಸ್ಥಳವನ್ನು ದಾಟುವ ಜನರು ತಮ್ಮ ಕೈಗಳನ್ನು ದೇಹಕ್ಕಂಟಿಕೊಂಡಂತೆ ಇಟ್ಟುಕೊಂಡು ನಡೆಯದಿದ್ದರೆ ತೆರಿಗೆ ಕಟ್ಟಬೇಕಿತ್ತು. ಈ ಎಲ್ಲಾ ತೆರಿಗೆಗಳ ಬಗ್ಗೆಯೂ ಅಧಿಕೃತವಾಗಿ ಸರಕಾರದ ದಾಖಲೆಗಳಲ್ಲಿ ರಾಜ್ಯದ ಸಂಪನ್ಮೂಲದ ಭಾಗವೆಂದು ನಮೂದಾಗಿದೆ”. (214)
ಹೈದರ್ ಮತ್ತು ಟಿಪ್ಪುವಿನ ಕಾಲದಲ್ಲಿ ರೈತರು ಬೆಳೆದ ಬೆಳೆಯ ಆರನೇ ಒಂದಂಶದಷ್ಟು ತೆರಿಗೆ ರೂಪದಲ್ಲಿ ಸರಕಾರಕ್ಕೆ ಪಾವತಿಯಾಗುತ್ತಿದ್ದುದನ್ನು ನಾವು ನೋಡಿದ್ದೇವೆ; ಎಂ.ಹೆಚ್.ಗೋಪಾಲ್ ಕೈಗೊಂಬೆ ಸರಕಾರದ ಆಳ್ವಿಕೆಯಲ್ಲಿನ ತೆರಿಗೆಯನ್ನು ಅಂದಾಜಿಸುತ್ತಾ “ಒಟ್ಟು ಉತ್ಪನ್ನದ ಐದನೇ ಎರಡರಷ್ಟು ಭಾಗ ಸರಕಾರದ ಪಾಲಾಗುತ್ತಿತ್ತು” ಎಂದು ತಿಳಿಸುತ್ತಾರೆ. (215)
ಮದ್ರಾಸಿನ ಗವರ್ನರ್ ಲಷಿಂಗ್ಟನ್ ತಮ್ಮ ಟಿಪ್ಪಣಿಯೊಂದರಲ್ಲಿ ಮೈಸೂರಿನ ಬಗ್ಗೆ ಈ ರೀತಿಯಾಗಿ ಬರೆದುಕೊಂಡಿದ್ದಾರೆ: “ಬೇರೆ ಸರಕಾರವನ್ನು ರಚಿಸಿಕೊಂಡ ದೇಶಗಳು ವಿಭಜನೆಯ ಸಮಯದಲ್ಲಿ ಮಾಡಿಕೊಂಡ ಒಪ್ಪಂದದಲ್ಲಿದ್ದ ಆದಾಯಕ್ಕಿಂತ ದ್ವಿಗುಣದಷ್ಟು ಆದಾಯವನ್ನು ಪಡೆದುಕೊಳ್ಳಲಾರಂಭಿಸಿದವು”. (216) 1791ರಲ್ಲಿ ಟಿಪ್ಪು ಸುಲ್ತಾನನ ಆಡಳಿತಾವಧಿಯಲ್ಲಿ ಮೈಸೂರು ಸರಕಾರದ ಒಟ್ಟು ತೆರಿಗೆ ಆದಾಯ 42 ಲಕ್ಷ ರುಪಾಯಿಗಳಷ್ಟಿದ್ದರೆ, 1809ರಷ್ಟರಲ್ಲಿ ದ್ವಿಗುಣಗೊಂಡು 93 ಲಕ್ಷ ರುಪಾಯಿಗಳಾಯಿತು; ನಗರದ ದಂಗೆ ಮತ್ತು ಆಡಳಿತ ಯಂತ್ರದ ಕುಸಿತದ ಕಾರಣದಿಂದ 1831ರಲ್ಲಿ ಇದು ಕುಸಿತಗೊಂಡು 76ಲಕ್ಷ ರುಪಾಯಿಗಳಷ್ಟಾಯಿತು. (217)
ಆರ್.ಡಿ.ಚೋಕ್ಸಿ ಹೇಳುತ್ತಾರೆ: “ವಿವಿಧ ತೆರಿಗೆಗಳ ಹೊರತಾಗಿ, ಅದರಲ್ಲೂ ದಕ್ಷಿಣ ಕೆನರಾದಲ್ಲಿ, ಸರಕಾರ ಒಟ್ಟು ಉತ್ಪನ್ನದ ಮೂವತ್ತರಿಂದ ಐವತ್ತು ಪರ್ಸೆಂಟಿನಷ್ಟನ್ನು ತೆಗೆದುಕೊಂಡುಬಿಡುತ್ತಿತ್ತು”. (218)
ಆಡಳಿತದ ಮೊದಲ ಹಂತದಲ್ಲಿ ತುಳುನಾಡಿನ ಮೇಲೆ ವಸಾಹತುಶಾಹಿ ಮಾಡಿದ ಪರಿಣಾಮಗಳ ಬಗ್ಗೆ ಶ್ಯಾಮ್ ಭಟ್ ವಿವರಣಾತ್ಮಕ ಚಿತ್ರಣವನ್ನು ಕೊಡುತ್ತಾರೆ. ಅವರು ಹೇಳುತ್ತಾರೆ: “ಭೂ ಕಂದಾಯ ಆಡಳಿತವನ್ನು ಅಭ್ಯಸಿಸಿದ ನಂತರ ತಿಳಿದು ಬರುವ ಅಂಶವೆಂದರೆ ಸರಕಾರಕ್ಕೆ ಬರುತ್ತಿದ್ದ ಆದಾಯದ ಪಾಲು ಆಡಳಿತಗಾರರು ಅಂದಾಜಿಸಿದ್ದಕ್ಕಿಂತ ಹೆಚ್ಚಿರುತ್ತಿತ್ತು. ಭೂ ಕಂದಾಯವನ್ನು ಎಷ್ಟು ಸಾಧ್ಯವೋ ಅಷ್ಟು ಗರಿಷ್ಟ ಮಟ್ಟದಲ್ಲಿ ಇಡುವುದು ಬ್ರಿಟೀಷ್ ರಾಜ್ ವ್ಯವಸ್ಥೆ ಮುಂದುವರಿಯಲಿದ್ದ ಒಂದು ಶಕ್ತಿಯಾಗಿದ್ದನ್ನು ದಕ್ಷಿಣ ಕೆನರಾದಲ್ಲಿ ಕಾಣಬಹುದೆಂದು ಇರ್ಫಾನ್ ಹಬೀಬ್ ಗುರುತಿಸಿದ್ದರು”. (219)
ಅದೇ ಸಮಯದಲ್ಲಿ ಕರಾವಳಿಯಲ್ಲಿ ನಡೆಯುತ್ತಿದ್ದ ಕಂದಾಯ ಕೃಷಿಯ ಬಗ್ಗೆ ತಿಳಿಸುತ್ತ ಅವರೆನ್ನುತ್ತಾರೆ: “ಭೂ ಕಂದಾಯದಲ್ಲಾದ ಹೆಚ್ಚಳಕ್ಕೆ ಸರಕಾರ ಪಡೆಯುತ್ತಿದ್ದ ಭಾಗದಲ್ಲಾದ ಹೆಚ್ಚಳವು ಕಾರಣವೇ ಹೊರತು ಕರಾಬು ಭೂಮಿಯಲ್ಲಿ ಕೃಷಿ ಮಾಡಿದ್ದಾಗಲೀ ಅಥವಾ ಇಡೀ ಪ್ರದೇಶ ಸಮೃದ್ಧಿಯಾಗಿದ್ದಾಗಲೀ ಕಾರಣವಲ್ಲ.
ರೈತನೊಬ್ಬ ತನ್ನ ಕಂದಾಯ ಬಾಕಿಯನ್ನು ನಾಲ್ಕೈದು ವರುಷಗಳಾದರೂ ಕಟ್ಟದೇ ಇದ್ದ ಪಕ್ಷದಲ್ಲಿ ಅವನ ಆಸ್ತಿಯನ್ನು ಸರಕಾರ ಹರಾಜು ಹಾಕುತ್ತಿತ್ತು, ಬರಬೇಕಿದ್ದ ಬಾಕಿಯನ್ನು ವಸೂಲು ಮಾಡುವ ಸಲುವಾಗಿ. ಆದಾಗ್ಯೂ, ಬಾಕಿ ಮೊತ್ತ ತುಂಬ ಕಡಿಮೆಯಾಗಿದ್ದರೆ, ಅಧಿಕಾರಿಗಳು ಆ ಬಾಕಿಯನ್ನು ಮನ್ನಾ ಮಾಡುತ್ತಿದ್ದರು. ಈ ರೀತಿಯಾಗಿ ರೈತರ ಬಾಕಿಯನ್ನು ಮನ್ನಾ ಮಾಡುವುದರಲ್ಲಿ ಒಂದು ಪ್ರಮುಖ ದೋಷವಿತ್ತು. ಬಾಕಿ ಮನ್ನಾ ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದವರಿಗೆ ಅನ್ವಯವಾಗದೆ ಭೂಮಾಲೀಕರಿಗಷ್ಟೇ ಅನ್ವಯಿಸುತ್ತಿತ್ತು. ಸ್ವತಃ ಕೃಷಿ ನಡೆಸದೆ ಗುತ್ತಿಗೆ ಕೊಟ್ಟ ಭೂಮಾಲೀಕರಿಗೂ ಸರಕಾರ ಬಾಕಿ ಮನ್ನಾ ಮಾಡುತ್ತಿತ್ತು. ಹಾಗಾಗಿ ಇದು ನಿಜವಾಗಿ ಕೃಷಿ ಮಾಡುತ್ತಿದ್ದ ಕೃಷಿಕನಿಗೆ ಅನುಕೂಲಕರವಾಗಿರಲಿಲ್ಲ, ಕೃಷಿಕನೇ ಭೂಮಾಲೀಕನಾಗಿದ್ದರಷ್ಟೇ ಅನುಕೂಲವಾಗುತ್ತಿತ್ತು. ಇದು ತತ್ ಕ್ಷಣದ ಮಟ್ಟಿಗೆ ಕೃಷಿಯ ಹಿತಾಸಕ್ತಿಗಳಿಗೆ ಪೂರಕವಾಗಿರಲಿಲ್ಲ…
ಮುಂದಿನ ವಾರ
ಕೃಷಿ ಕಂದಾಯ ಮತ್ತದರ ಶೋಷಕ ಶರಾತ್: ಭಾಗ 2
No comments:
Post a Comment