Jun 3, 2016

ಮೇಕಿಂಗ್ ಹಿಸ್ಟರಿ: ಜಾತಿ ದೌರ್ಜನ್ಯದ ಹೆಚ್ಚಳ

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
03/06/2016
ಹೆಚ್ಚಿನಂಶ ಶೂದ್ರರು ಗುತ್ತಿಗೆಗೆ ಪಡೆದಿದ್ದ ಇನಾಮುಗಳನ್ನು ಮಠಗಳು ವಾಪಸ್ಸು ಗಳಿಸಿಕೊಂಡಿದ್ದು, ಮತ್ತು ಸೈನಿಕರು ಹಾಗು ಕರಕುಶಲ ಕಾರ್ಮಿಕರು ಹಳ್ಳಿಗಳಿಗೆ ಗುಳೇ ಹೋಗಿದ್ದು ಜಾತಿ ದೌರ್ಜನ್ಯದ ಮತ್ತೊಂದು ಮಜಲನ್ನು ಉದ್ಘಾಟಿಸಿತು. ಊಳಿಗಮಾನ್ಯ ಆಳುವ ವರ್ಗ ಜಾತಿ ವ್ಯವಸ್ಥೆಯ ರಕ್ಷಣೆಯಲ್ಲಿ ಕಾರ್ಮಿಕರಿಂದ ಗರಿಷ್ಠ ಮಟ್ಟದ ಕೆಲಸ ತೆಗೆದುಕೊಂಡರು.

ಸಮಾಜ, ಸಂಸ್ಕೃತಿ ಮತ್ತು ಧಾರ್ಮಿಕ ವೃತ್ತಗಳಲ್ಲಿದ್ದ ಪ್ರಗತಿಪರ, ಜಾತಿ ವಿರೋಧಿ ಚಿಂತನೆಗಳೆಲ್ಲವೂ ಕುಸಿದಿದ್ದನ್ನು ಕೈಗೊಂಬೆ ಆಡಳಿತ ‘ವಿಶೇಷ’ ನೋವಿನಿಂದ ಗಮನಿಸಿತು.

ಮೇಲುಕೋಟೆಯಲ್ಲಿ ಪುರಾಣಗಳ ನೆಪದಲ್ಲಿ ಅಲ್ಲಿನ ಹೊಲೆಯರಿಗೆ ಶ್ರೀನಿವಾಸ ಬ್ರಾಹ್ಮಣರಿಂದ ಸಿಕ್ಕ ವಿಶೇಷ ಹಕ್ಕುಗಳ ಕುರಿತು ಥರ್ಸ್ಟನ್ (Thurston) ತಿಳಿಸುತ್ತಾರೆ. ಹೊಲೆಯರ ಹೋರಾಟದಿಂದ, ಅವರಿಗೆ ವಿಶೇಷ ಹಕ್ಕುಗಳು ದಕ್ಕಿತ್ತು; ದೇವಸ್ಥಾನಕ್ಕೆ ಪ್ರವೇಶ ಪಡೆವ ಹಕ್ಕನ್ನು ಪಡೆದುಕೊಂಡದ್ದು ಅದರಲ್ಲೊಂದು, ರಾಮಾನುಜಾಚಾರ್ಯ ಅವರನ್ನು ತಿರುಕುಲಂ ಅಥವಾ ‘ಪೂಜನೀಯ ಜಾತಿ’ ಎಂದು ಹೊಗಳಿದ್ದರು. ಮೈಸೂರಿನಲ್ಲಿ ಕೈಗೊಂಬೆ ಆಡಳಿತ ಶುರುವಾದ ನಂತರ ಇದು ಶೀಘ್ರವಾಗಿ ಬದಲಾವಣೆಯಾಯಿತು ಎಂದು ಥರ್ಸ್ಟನ್ ತಿಳಿಸುತ್ತಾರೆ. “1799ರಲ್ಲಿ, ದಿವಾನ್ ಪೂರ್ಣಯ್ಯ ಈ ಪವಿತ್ರ ಸ್ಥಳಕ್ಕೆ ಭೇಟಿ ಕೊಟ್ಟಾಗ ದಲಿತರಿಗೆ ದೇವಸ್ಥಾನದೊಳಗಡೆ ಹೋಗಲಿದ್ದ ಹಕ್ಕನ್ನು ಮೊಟಕುಗಳಿಸಿ ಅವರನ್ನು ಧ್ವಜಾಸ್ಥಂಭದಲ್ಲೇ ನಿಲ್ಲಿಸಲಾಯಿತು, ಧ್ವಜಾಸ್ಥಂಭದಿಂದಷ್ಟೇ ಅವರು ದೇವರ ದರ್ಶನ ಮಾಡಬೇಕಿತ್ತು.” (191)

ಪೂರ್ಣಯ್ಯನವರಿದ್ದ ಇಂತದ್ದೇ ಮತ್ತೊಂದು ಉದಾಹರಣೆಯನ್ನು ಸೆಬಾಸ್ಟಿಯನ್ ಜೋಸೆಫ್ ತಿಳಿಸುತ್ತಾರೆ. ಇದ್ಯಾಕೆ ಪ್ರಮುಖವೆಂದರೆ, ಊಳಿಗಮಾನ್ಯತೆಯ ವಿರೋಧಿ ಸಂಸ್ಕೃತಿಯ ನೆಲೆಯಾಗಿದ್ದ ಕರ್ನಾಟಕ ಭಕ್ತಿ ಪಂಥದ ಐತಿಹಾಸಿಕ ಮುನ್ನಡೆಯನ್ನು ತಡೆದ ನಿರ್ಧಾರವಿದು. “1807 – 08ರಲ್ಲಿ ಕಳುಹಿಸಿದ ಸುತ್ತೋಲೆಯಲ್ಲಿ ದಿವಾನ್ ಪೂರ್ಣಯ್ಯ ದೇವಾಂಗರು ತಮ್ಮ ಜಾತಿಯ ನಿಯಮಗಳನ್ನು ಮೀರಿ ಬ್ರಾಹ್ಮಣರ ರೀತಿರಿವಾಜುಗಳನ್ನು ಪಾಲಿಸುವುದನ್ನು ಕಠಿಣ ದನಿಯಲ್ಲಿ ಖಂಡಿಸುತ್ತಾರೆ. ದೇವಾಂಗರ ಸ್ವಘೋಷಿತ ಗುರು ಒಬ್ಬರು ದೇವಾಂಗರಿಗೆ ಜನಿವಾರವನ್ನು ತೊಡಿಸಿ ಧಾರ್ಮಿಕ ಶಿಕ್ಷಣವನ್ನು ಕೊಡುತ್ತಾರೆನ್ನುವ ಬಗ್ಗೆ ಪೂರ್ಣಯ್ಯನವರಿಗೆ ವರದಿಯಾಗಿತ್ತು. ಪೂರ್ಣಯ್ಯ ಬರೆಯುತ್ತಾರೆ: ‘ಒಬ್ಬ ಅನಾಮಿಕ ಶೂದ್ರ, ದೇವಾಂಗರ ಗುರು ಎನ್ನಿಸಿಕೊಳ್ಳುವಾತ ದೇವಾಂಗರು ಜನಿವಾರ ತೊಡಬೇಕೆಂದು, ಧಾರ್ಮಿಕ ಶಿಕ್ಷಣವನ್ನು ಪಡೆಯಬೇಕೆಂದು ಹೇಳುತ್ತಾ ಬೇಡದ ತೊಂದರೆಗಳನ್ನು ಸೃಷ್ಟಿಸುತ್ತಿದ್ದಾನೆ. ಶೂದ್ರರಿಗೆ ಜನಿವಾರವೆಲ್ಲಿದೆ? ಧಾರ್ಮಿಕ ಶಿಕ್ಷಣವೆಂದು ಹೇಳುತ್ತಿದ್ದಾರಲ್ಲ, ಅದರರ್ಥವೇನು? ಇದು ಶೂದ್ರರು ಮಾಡಬೇಕಾದ ಕೆಲಸವಲ್ಲ. ಅವನನ್ನು ಶಿಕ್ಷಿಸಬೇಕು. ಈ ದೇವಾಂಗರು ಶ್ರಂಗೇರಿ ಮಠದ ಭಕ್ತರಾಗಬೇಕಾದವರು. ಹಾಗಾಗಿ, ಮಠದ ಜನರು ದೇವಾಂಗರಿಗೆ ಇಂತಹ ಕೆಲಸಗಳ ಬಗ್ಗೆ ಎಚ್ಚರಿಕೆ ಕೊಟ್ಟು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಹೊಸದಾಗಿ ಬಂದಿರುವ ಈ ಶೂದ್ರ ತನ್ನ ನಿರ್ಧಾರಕ್ಕೆ ಗಟ್ಟಿಯಾಗಿ ಅಂಟಿಕೊಂಡು ಸಮಸ್ಯೆಯುಂಟು ಮಾಡಿದರೆ, ಆಗ ಅವನನ್ನು ದೇಶದಿಂದ ಆಚೆಗಟ್ಟಬೇಕು.’ ಜಾತಿ ಮತ್ತು ವರ್ಣದ ಮೂಲಭೂತ ಪ್ರಶ್ನೆಗಳ ಬಗ್ಗೆ ಶೃಂಗೇರಿ ಮಠದ ಅಭಿಪ್ರಾಯವನ್ನು ದಿವಾನ್ ಪೂರ್ಣಯ್ಯರ ಆಡಳಿತದ ಮೈಸೂರು, ರಾಜ್ಯ ನೀತಿಯಾಗಿ ಸಂಪೂರ್ಣವಾಗಿ ಒಪ್ಪಿಕೊಂಡಿತ್ತು ಎಂದು ಇದರಿಂದ ಸ್ಪಷ್ಟವಾಗುತ್ತದೆ. ಹಿಂದುಳಿದ ಜಾತಿಯವರು ಸಾಮಾಜಿಕ ಮೆಟ್ಟಿಲ ಮೇಲೇರಲು ನಡೆಸುವ ಯಾವುದೇ ಪ್ರಯತ್ನವನ್ನು ಅಸ್ತಿತ್ವದಲ್ಲಿದ್ದ ಸಾಮಾಜಿಕ ವ್ಯವಸ್ಥೆಗೆ ಅಪಾಯಕಾರಿಯಂತೆ ಪರಿಗಣಿಸಿ ರಾಜ್ಯದ ತಕ್ಷಣದ ಮಧ್ಯಪ್ರವೇಶಕ್ಕೆ ವಿನಂತಿಸಲಾಗುತ್ತಿತ್ತು ಮತ್ತು ಯಥಾಸ್ಥಿತಿಯನ್ನು ಕಾಯ್ದಿಡಲು ಬಯಸುವ ಶಕ್ತಿಗಳ ಬೆಂಬಲವನ್ನು ರಾಜ್ಯ ಪಡೆದುಕೊಳ್ಳುತ್ತಿತ್ತು.” (192)

ಮೊದಲ ಸಂಪುಟದಲ್ಲಿ ನೋಡಿದಂತೆ ಬ್ರಾಹ್ಮಣರ ಮೇಲ್ಮೆಗೆ ಸೆಡ್ಡುಹೊಡೆದವರಲ್ಲಿ ದೇವಾಂಗ ಜಾತಿ ಪ್ರಮುಖವಾದುದು. ಅವರ ಪಾತ್ರವಿಲ್ಲದೇ ಹೋಗಿದ್ದರೆ ಭಕ್ತಿ ಚಳುವಳಿ ಸಾಧ್ಯವಾಗುತ್ತಿರಲಿಲ್ಲ ಮತ್ತು ನಗರಗಳಲ್ಲಿ ಬ್ರಾಹ್ಮಣಿಕೆಯನ್ನು ಹೇರುವುದಕ್ಕೆ ಬಂದ ಪ್ರತಿರೋಧಗಳು ಸಾಧ್ಯವಾಗುತ್ತಿರಲಿಲ್ಲ. ಪೂರ್ಣಯ್ಯ ಒಂದು ಬಹುಮುಖ್ಯ ಜಾತಿಯನ್ನು ಗುರಿಯಾಗಿಸಿಕೊಂಡಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ. ಜಾತಿ ವ್ಯವಸ್ಥೆಯ ಭಾರವನ್ನು ಹೆಗಲ ಮೇಲಿಂದಿಳಿಸಲು ಮುಂದಾಗುತ್ತಿದ್ದ ದೇವಾಂಗ ಜಾತಿಯನ್ನು ಗುರಿಯಾಗಿಸುವ ಮೂಲಕ ಎಲ್ಲಾ ರೀತಿಯ ಶೂದ್ರರನ್ನು ಹತ್ತಿಕ್ಕುವ ಉದ್ದೇಶ.

ಜಾತಿ ದೌರ್ಜನ್ಯ ಮತ್ತು ಬ್ರಾಹ್ಮಣ್ಯದ ಒಟ್ಟುಗೂಡುವಿಕೆಯ ಮತ್ತೊಂದು ರೂಪವನ್ನು ಆಡಳಿತಶಾಹಿಯಲ್ಲಾದ ಬದಲಾವಣೆಗಳಲ್ಲಿ ಗಮನಿಸಬಹುದು.

1800ರಲ್ಲಿ ಟಿಪ್ಪುವಿನ ಪತನದ ನಂತರ ಬುಚನನ್ ಬ್ರಾಹ್ಮಣರು “ಹೆಚ್ಚುಕಡಿಮೆ ಎಲ್ಲಾ ಕಛೇರಿಗಳ ಉನ್ನತ ಹುದ್ದೆಗಳಲ್ಲಿದ್ದ” ಬಗ್ಗೆ ತಿಳಿಸುತ್ತಾನೆ. (193)

ಆಡಳಿತಶಾಹಿಯ ಪುನರ್ ರಚನೆ ಎಲ್ಲೆಡೆಯೂ ನಡೆಯಿತು. ಮುಸ್ಲಿಮರು ಮತ್ತು ಶೂದ್ರರನ್ನು ಎಲ್ಲೆಡೆಯಿಂದಲೂ ಓಡಿಸಿಬಿಡಲಾಯಿತು ಮತ್ತಿವೆಲ್ಲ ಕಡೆಗಳಲ್ಲಿ ಬ್ರಾಹ್ಮಣ ಅಧಿಕಾರಿಗಳು ಬಂದರು. ಶಾಮ ರಾವರ ಈ ಎರಡು ಉಲ್ಲೇಖಗಳು ಎಷ್ಟು ವೇಗವಾಗಿ ಬ್ರಾಹ್ಮಣರು ಆಡಳಿತಶಾಹಿಯಲ್ಲಿ ಏಕಸ್ವಾಮ್ಯತೆ ಮೆರೆದರು ಎನ್ನುವುದನ್ನು ಸೂಚಿಸುತ್ತದೆ. ಇದರಿಂದ ಬ್ರಾಹ್ಮಣ ಜಾತಿ ಮುಂದಿನ ಶತಮಾನದುದ್ದಕ್ಕೂ ಕರ್ನಾಟಕದ ಮಧ್ಯವರ್ತಿ ಅಧಿಕಾರಶಾಹಿಯ ಮೂಲವಾಗಿದ್ದನ್ನು ಅರಿಯಬಹುದು. ಮೈಸೂರಿನ ಮೂರನೇ ದಿವಾನರಾಗಿದ್ದ ರಾಮ ರಾವ್ ಬಗ್ಗೆ ಶಾಮ ರಾವ್ ತಿಳಿಸುತ್ತಾರೆ: 

“ರಾಮ ರಾವ್ ಮೂಲತಃ ಮರಾಠ ದೇಶದಲ್ಲಿದ್ದ ಬಾದಾಮಿಯೆಂಬ ಸ್ಥಳದಿಂದ ಬಂದಿದ್ದರು. ಜೊತೆಗೆ ಅವರ ಸಂಬಂಧಿಕರಾದ ಅಣ್ಣಿಗೇರಿಯ ಭೀಮಾ ರಾವ್ ಮತ್ತು ಹಾನಗಲ್ಲಿನ ಕೃಷ್ಣಾ ರಾವ್ ಬಂದಿದ್ದರು. ರಾಮ ರಾವರನ್ನು ಪೂರ್ಣಯ್ಯ ನಗರದ ಫೌಜುದಾರನನ್ನಾಗಿ 1799ರಲ್ಲಿ ನೇಮಿಸಿದರು. 1805ರವರೆಗೂ ಅಲ್ಲಿಯೇ ಕೆಲಸ ನಿರ್ವಹಿಸಿದರು. ಅವರ ಪ್ರಭಾವದಿಂದಾಗಿ ಫೌಜುದಾರಿಯಲ್ಲಿ ತಮ್ಮ ನಂತರದ ಪ್ರಮುಖ ಸ್ಥಾನಗಳಲ್ಲೆದರಲ್ಲೂ ತಮ್ಮ ಬಂಧುಗಳನ್ನು, ಅಣ್ಣಿಗೇರಿ ಮತ್ತು ಹಾನಗಲ್ಲಿನ ಕುಟುಂಬಸ್ಥರನ್ನೇ ತುಂಬಿಸಿಕೊಂಡರು. ಅವರ ಆಸಕ್ತಿಯ ಶಕ್ತಿಯುತ ಪಕ್ಷವೊಂದು ಈ ರೀತಿಯಾಗಿ ರಾಜ್ಯದ ಈ ಭಾಗದಲ್ಲಿ ರೂಪುಗೊಂಡು 1830ರಲ್ಲಿ ನಡೆದ ಹೋರಾಟದವರೆಗೂ ಮುಂದುವರೆಯಿತು. ಕೆಲವು ತಿಂಗಳುಗಳನ್ನೊರತುಪಡಿಸಿದರೆ 1805ರಿಂದ 1825ರವರೆಗೆ ಫೌಜುದಾರ್ ಕಛೇರಿಯಲ್ಲಿ ರಾಮ ರಾವರ ರಕ್ತ ಸಂಬಂಧಿಕರು ಅಥವಾ ಬೀಗರ ಕಡೆಯವರೇ ಇದ್ದರು. ಎರಡು ಬಾರಿ ಫೌಜುದಾರರಾಗಿದ್ದ ಸರ್ವೋತ್ತಮ ರಾವರ ಮಗ ರಾಮರಾವರ ಸೋದರಸೊಸೆಯನ್ನು ಮದುವೆಯಾಗಿದ್ದನು. ಪೊಂಪಯ್ಯ, ಕೃಷ್ಣರಾವ್ ಮತ್ತು ಬಾಲಕೃಷ್ಣರಾವ್ ರಾಮ ರಾವಿನ ಸೋದರಳಿಯಂದಿರು.” (194)

ಕೆಲವು ಬ್ರಾಹ್ಮಣ ಕುಟುಂಗಳು ಆಡಳಿತಶಾಹಿಯ ಮೇಲೆ ಹೊಂದಿದ್ದ ಏಕಸ್ವಾಮ್ಯತೆ ಎಷ್ಟು ಪ್ರಬಲವಾಗಿತ್ತೆಂಬುದಕ್ಕೆ ಮೋಟಿಕಾನೆಯ ನರಸಿಂಗ ರಾವರ ಪ್ರಕರಣ ಉದಾಹರಣೆ: “ಅವನ ಏಳು ತಮ್ಮಂದಿರು ಕೆಲಸದಲ್ಲಿದ್ದರು ಮತ್ತು ಸ್ವತಃ ಅವನು ಹತ್ತು ತಾಲ್ಲೂಕುಗಳ ರಹಸ್ಯ ಮೇಲ್ವಿಚಾರಕನಾಗಿದ್ದ. ವೀಣೆ ವೆಂಕಟಸುಬ್ಬಯ್ಯರ ಸಂಬಂಧಿಕರು ನಗರ ವಿಭಾಗದ ಏಳು ತಾಲ್ಲೂಕುಗಳ ಅಮಲ್ದಾರರಾಗಿದ್ದರು. 1816ರಿಂದ 1826ರವರೆಗೆ ನಗರದ ಫೌಜುದಾರನಾಗಿದ್ದ ಸರ್ವೋತ್ತಮ ರಾವ್ ಹತ್ತು ವರ್ಷದ ತನ್ನ ಸುದೀರ್ಘ ಆಡಳಿತಾವಧಿಯಲ್ಲಿ ತನ್ನ ಸಂಬಂಧಿಕರನ್ನು ಸರಕಾರಿ ಸೇವೆಗೆ ನಗರ ವಿಭಾಗದಲ್ಲಿ ಸೇರಿಸಿದ.” (195)

ಕರ್ನಾಟಕದ ಜನತೆಯ ಮೇಲೆ ಬ್ರಾಹ್ಮಣ ಶಕ್ತಿಗಳು ಪರಮಾಧಿಕಾರ ಸಾಧಿಸುವುದಕ್ಕೆ ಮೂರನೇ ಕೃಷ್ಟರಾಜ ಒಡೆಯರ್ ನ ಆಳ್ವಿಕೆ ಕಾರಣ ಎಂದರದು ಅತಿಶಯೋಕ್ತಿಯೇನಲ್ಲ. ಕರ್ನಾಟಕದಲ್ಲಾಗಲೀ, ಭಾರತದ ಇತರೆ ಭಾಗಗಳಲ್ಲಾಗಲೀ ಬ್ರಿಟೀಷ್ ವಸಾಹತುಶಾಹಿ ಬ್ರಾಹ್ಮಣರ ಅಧಿಕಾರವನ್ನು ಮೊಟಕುಗೊಳಿಸಿದೆಯೆಂದು ಬ್ರಾಹ್ಮಣೇತರ ಮತ್ತು ದಲಿತ ಚಳುವಳಿಗಳು ಅರ್ಥೈಸಿಕೊಂಡಿರುವುದು ಸರಿಯಲ್ಲ. ಬದಲಿಗೆ, ಮೈಸೂರಿನ ಉದಾಹರಣೆ ಸ್ಪಷ್ಟವಾಗಿ ತಿಳಿಸುವಂತೆ ವಸಾಹತುಶಾಹಿ ಬ್ರಾಹ್ಮಣ ಅಧಿಕಾರವನ್ನು ಮತ್ತಷ್ಟು ಸಶಕ್ತಗೊಳಿಸಿತು. ವಸಾಹತುಶಾಹಿ ಯಾವಾಗಲೂ ಬ್ರಾಹ್ಮಣ ಪ್ರತಿಗಾಮಿಗಳ ಜೊತೆಗೆ ನಿಂತಿತು. ಹೈದರ್ ಅಲಿ ಮತ್ತು ಅದಕ್ಕಿಂತ ಹೆಚ್ಚಾಗಿ ಟಿಪ್ಪು ಸುಲ್ತಾನನ ಕಾಲದಲ್ಲಿ ಕುಸಿತದ ಹಾದಿಯಿಡಿದಿದ್ದ ಬ್ರಾಹ್ಮಣ ಅಧಿಕಾರ ಶಕ್ತಿಯನ್ನು ಮತ್ತೆ ಪುನರ್ ಸ್ಥಾಪಿಸುವುದಕ್ಕೆ ಬ್ರಿಟೀಷರು ಕಾರಣಕರ್ತರಾದರು.

ಎಡ ಬಲ ಜಾತಿಯ ಉಗಮ ಮತ್ತು ಅವರ ಅಭಿವೃದ್ಧಿ ಹೇಗೆ ಜಾತಿ ವ್ಯವಸ್ಥೆಯನ್ನು ನಾಶಪಡಿಸುತ್ತಿತ್ತು ಎನ್ನುವುದನ್ನು ಮೇಕಿಂಗ್ ಹಿಸ್ಟರಿಯ ಒಂದನೇ ಸಂಪುಟದಲ್ಲಿ ಗಮನಿಸಿದ್ದೀವಿ. (196) ಕರ್ನಾಟಕ ವಸಾಹತಿನ ಆಳ್ವಿಕೆಗೆ ಒಳಪಟ್ಟ ನಂತರ, ಜಾತಿ ವ್ಯವಸ್ಥೆ ಮಗ್ಗಲು ಬದಲಿಸಿತು; ಅದರ ಸದಸ್ಯರು ವಸಾಹಿತನ ದೌರ್ಜನ್ಯದ ಜೊತೆಗೆ ಬ್ರಾಹ್ಮಣರ ಜಾತಿ ಶೋಷಣೆಗೂ ಒಳಪಟ್ಟರು. ಸ್ಥಳೀಯ ಮಾರುಕಟ್ಟೆಯ ನಾಶ ಮತ್ತು ಸ್ಥಳೀಯ ವರ್ತಕ ಜಾತಿಗಳನ್ನು ಗುರಿಯಾಗಿಸಿದ್ದು ಬಲದವರ ರಕ್ತ ಹರಿಸಿದ್ದು ಒಂದೆಡೆಯಾದರೆ, ಎಡದವರಾದ ಕಸುಬುದಾರ ಜಾತಿಯವರು ಹಾಗೂ ಏಳ್ಗೆ ಹೊಂದುತ್ತಿದ್ದ ಪಂಚಾಚಾರಿಗಳ ಮೇಲಿನ ಹಲ್ಲೆ ಮತ್ತೊಂದೆಡೆ ಆರ್ಥಿಕ ಪ್ರಗತಿಗೆ ಬೇಕಾದ ವಸ್ತುವಿನಾಧಾರವನ್ನೇ ನಾಶಪಡಿಸಿ ಅವರ ಸಾಮಾಜಿಕ ದನಿಯನ್ನೇ ಇಲ್ಲವಾಗಿಸಿತು. ಹಾಗಾಗಿ ವಸಾಹತು ಪೂರ್ವದ ಸಾಹಿತ್ಯದಲ್ಲಿ ಆವರಿಸಿಕೊಂಡಿದ್ದ ಎಡ ಮತ್ತು ಬಲ ಸಹೋದರತ್ವ ಬ್ರಿಟೀಷರ ಆಳ್ವಿಕೆಯ ಪ್ರಾರಂಭದೊಂದಿಗೆ ಮರೆಯಾಗಿಹೋಯಿತು. ಅದಾಗ್ಯೂ, ವಿಜಯ ರಾಮಸ್ವಾಮಿಯವರು ಸೇಂಟ್ ಜಾರ್ಜ್ ಕೋಟೆಯ ಸುತ್ತ ಬ್ರಿಟೀಷರ ಬಟ್ಟೆ ಉದ್ಯಮಕ್ಕೆ ಪೂರಕವಾಗಿ ಸೃಷ್ಟಿಸಲಾಗಿದ್ದ ಕಪ್ಪು ನಗರದ (black town) ಉದಾಹರಣೆ ಕೊಡುತ್ತ “ಬ್ರಿಟಿಷ್ ಬಟ್ಟೆ ಉದ್ಯಮ ಒಡ್ಡಿದ ಸ್ಪರ್ಧೆ, ಅವರ ಅಸ್ತಿತ್ವಕ್ಕೇ ಸಂಚುಕಾರ ತಂದಿತ್ತು. ಅವರು (ಬಲಕ್ಕೆ ಸೇರಿದ ಚೆಟ್ಟಿ ಜಾತಿಯವರು) ನೇಕಾರರೊಂದಿಗೆ ಸೇರಿ (ಎಡಕ್ಕೆ ಸೇರಿದವರು) ಬ್ರಿಟೀಷ್ ವಸಾಹತುಶಾಹಿಗೆ ಪ್ರತಿರೋಧ ಒಡ್ಡಿದರು” ಎಂದು ತಿಳಿಸುತ್ತಾರೆ. (197)

ಬ್ರಿಟೀಷರ ಮುನ್ನುಗ್ಗುವಿಕೆಗೆ ತಡೆ ಒಡ್ಡುವಲ್ಲಿ ಸಫಲತೆ ಕಾಣದ ಕಾರಣ ಅವರ ಐತಿಹಾಸಿಕ ಹೋರಾಟ ಉಂಟುಮಾಡಿದ ಬದಲಾವಣೆಗಳ ಬಗ್ಗೆ ವಿಜಯಾ ರಾಮಸ್ವಾಮಿ ತಿಳಿಸುತ್ತಾರೆ: “ಹದಿನೇಳನೇ ಶತಮಾನದಲ್ಲಿ ನೇಕಾರರ ಸಾಲು…..ಯುರೋಪಿನ ಕೈಗಾರಿಕೆಗಳ ಮತ್ತು ಕಪ್ಪು ನಗರದ ಸುತ್ತ ಸುತ್ತುತ್ತಿತ್ತು. (198) ಎಡ ಮತ್ತು ಬಲ ಜಾತಿಯ ನಡುವಿನ ಜಗಳಗಳ ಬಹುಮುಖ್ಯ ಪ್ರಶ್ನೆ ಕಂಪನಿಯ ಬಟ್ಟೆ ಗುತ್ತಿಗೆಯನ್ನು ಯಾರು ಪಡೆಯಬೇಕು ಎನ್ನುವುದರ ಕುರಿತಾಗಿರುತ್ತಿತ್ತು. ಕಂಪನಿಯ ಮಧ್ಯವರ್ತಿ ವರ್ತಕರು ತೋರಿದಂತೆ ಕೆಲಸ ಮಾಡಬೇಕಾದ ವ್ಯವಸ್ಥೆಯಲ್ಲಿ ನೇಕಾರರು ನಿಧಾನವಾಗಿ ಚೌಕಾಶಿ ಮಾಡುವ ಶಕ್ತಿಯನ್ನು ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಂಡರು.” (199)

ತಮಿಳುನಾಡಿನ ಉದಾಹರಣೆಯಲ್ಲಿ, ಮಧ್ಯವರ್ತಿಗಳ ಮೂಲಕ ಕಾರ್ಯನಿರ್ವಹಿಸಿದ ವಸಾಹತುಶಾಹಿ ಎಡ ಮತ್ತು ಬಲ ಜಾತಿಯ ನಡುವಿನ ಸಹೋದರತ್ವವನ್ನು ನಾಶಪಡಿಸಿತು.

ತಮಿಳುನಾಡಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಈ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯಿತು. ಸೆಂಟ್ ಜಾರ್ಜ್ ಕೋಟೆಯ ಸುತ್ತ ಕಪ್ಪು ನಗರಗಳ ಸೃಷ್ಟಿಯಾದ ನಂತರದ ಶತಮಾನದಲ್ಲಿ ಬ್ರಿಟೀಷ್ ವಸಾಹತುಶಾಹಿ ಪ್ರಪಂಚದಾದ್ಯಂತ ಪ್ರಶ್ನಿಸಲಾಗದ ಶಕ್ತಿಯಾಗಿ ಬೆಳೆಯಿತು. ಲೂಟಿಯಿಂದ ಕೊಬ್ಬಿದ ವಸಾಹತುಶಾಹಿ ವರುಷಗಳು ಕಳೆದಂತೆ ಮತ್ತಷ್ಟು ಆಕ್ರಮಣಕಾರನಾಗಿ, ತಾಳ್ಮೆ ಕಳೆದುಕೊಂಡ. ಈ ವ್ಯಾಪಾರಗಳ ಸಂದರ್ಭದಲ್ಲಿ ಬ್ರಿಟೀಷ್ ವಸಾಹತುಶಾಹಿ, ವಸಾಹತುಗಳು ಉತ್ಪಾದಿಸಿದ ಉತ್ಪನ್ನಗಳ ಮೇಲೆ ಅವಲಂಬಿತವಾಗಿತ್ತು. ಎಡ ಮತ್ತು ಬಲ ಜಾತಿಗಳ ಹುಟ್ಟುವಿಕೆಗೆ ವಸ್ತುವಿನ ಉತ್ಪಾದನೆ ಮತ್ತು ವ್ಯವಹಾರ ಕಾರಣವಾಗಿತ್ತು. ಆದರೆ ಬ್ರಿಟನ್ನಿನಲ್ಲಿ ಕೈಗಾರಿಕಾ ಬೂರ್ಜ್ವಾಶಾಹಿಯ ಬೆಳವಣಿಗೆ ಸಂದರ್ಭವನ್ನು ಬದಲಿಸಿತು ಮತ್ತು ಭಾರತದಲ್ಲಿ ಉತ್ಪಾದನೆಯಾದ ವಸ್ತುಗಳನ್ನು ತೆಗೆದುಕೊಳ್ಳುವುದಕ್ಕೆ ಬದಲಾಗಿ ಭಾರತದಿಂದ ಕಚ್ಛಾ ವಸ್ತುಗಳನ್ನಷ್ಟೇ ತನ್ನ ಕೈಗಾರಿಕೆಗಳಿಗೆ ತೆಗೆದುಕೊಳ್ಳುವ ಆದೇಶ ಹೊರಡಿಸಿತು. ವ್ಯಾಪಾರೀ ಬಂಡವಾಳ ಮತ್ತು ಕೈಗಾರಿಕಾ ಬಂಡವಾಳದ ಎರಡು ಕಾಲಘಟ್ಟಗಳನ್ನು ಹೋಲಿಸುತ್ತ, ಮಾರ್ಕ್ಸ್ ಹೇಳುತ್ತಾರೆ: “1813ರವರೆಗೂ ಭಾರತ ಪ್ರಮುಖ ರಫ್ತುದಾರ ದೇಶವಾಗಿತ್ತು, ಈಗ ಅದು ಆಮದು ದೇಶವಾಗಿದೆ.” (200)

ಈ ಎಲ್ಲಾ ಅಂಶಗಳ ಒಟ್ಟಾಗಿ ಕಾರ್ಯನಿರ್ವಹಿಸಿದ ಪರಿಣಾಮವಾಗಿ, ವಸ್ತುವಿನಾಧಾರದ ಮೇಲೆ ಅವಲಂಬಿಸಿದ್ದ ಎಡ ಮತ್ತು ಬಲ ಜಾತಿಗಳು ಮಗುಚಿಕೊಂಡವು: ಶತಮಾನಗಳ ಕಾಲ ಎಡ ಮತ್ತು ಬಲ ಸಾಮಾಜಿಕತೆಯನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಿದ್ದವರು, ಬಹುಬೇಗ ಅಂತ್ಯ ಕಂಡರು ಮತ್ತು ತಮ್ಮ ಕೋಪ ಮತ್ತು ನೋವಿನ ಕೂಗನ್ನು ಪ್ರೇಕ್ಷಕರ ಮುಂದೆ ತೋಡಿಕೊಳ್ಳಲಾರಂಭಿಸಿದರು.

ಮೈಸೂರನ್ನು ಬ್ರಿಟೀಷರು ಆಕ್ರಮಿಸಿಕೊಂಡ ಎಂಟು ದಶಕಗಳ ನಂತರ, ಎಡ ಮತ್ತು ಬಲದವರ ಸ್ಥಿತಿಗತಿಗಳ ಬಗ್ಗೆ ‘ವಿವರಿಸುತ್ತ ಲೆವಿಸ್ ರೈಸ್ ದಾಖಲಿಸುತ್ತಾರೆ “ಎರಡು ವರ್ಗಗಳ ನಡುವಿನ ವಿರೋಧಗಳು ಇನ್ನೂ ಇದ್ದಾವೆ, ಆದರೆ ಮುಂಚಿನ ದಿನಗಳಲ್ಲಿದ್ದ ಕಹಿ ಈಗಿಲ್ಲ”. (201) ಜಾತಿ ವ್ಯವಸ್ಥೆ ತನ್ನುದ್ದೇಶಕ್ಕಿಂತ ಹೆಚ್ಚಾಗಿಯೇ ಮುಂದುವರಿಯಿತು, ಅದರಲ್ಲೂ ನಾಮಧೇಯದಿಂದ ಚೂರು ಪ್ರಯೋಜನವಿಲ್ಲದ ಹೊಲೆಯ ಮತ್ತು ಮಾದಿಗ ಜಾತಿಯವರಲ್ಲಿ. ಮೇಲ್ಜಾತಿಯವರಿಗೆ ಇದು ಅವರನ್ನು ಮೂರ್ಖರನ್ನಾಗಿಸಲು ಉಪಯೋಗವಾಯಿತು. ದಲಿತರ ನಡುವೆ ಸತತವಾಗಿ ದ್ವೇಷವಿರುವಂತೆ ನೋಡಿಕೊಳ್ಳುವ ಸಾಂಸ್ಕೃತಿ ಸ್ಮೃತಿಯನ್ನು ಉಳಿಸಿಕೊಳ್ಳಲಾಗಿತ್ತು.

ಮುಂದಿನ ವಾರ: 
ಸಮಾಜದ ನೋವಿಗೆ ಔಷಧ

No comments:

Post a Comment