ಕು.ಸ.ಮಧುಸೂದನ ನಾಯರ್
25/06/2016
ಪಂಜಾಬ್ ವಿದಾನಸಭಾ ಚುನಾವಣೆಗಳು ನಡೆಯುವುದು ಮುಂದಿನ ವರ್ಷದಲ್ಲಾದರು (2017) ಅದು ಸೃಷ್ಠಿಸಿರುವ ಕುತೂಹಲ ಮಾತ್ರ ಅಗಾಧ. ಯಾಕೆಂದರೆ ಉತ್ತರಪ್ರದೇಶದಂತೆ ಇಲ್ಲಿಯೂ ತಾನು ಗೆಲ್ಲಲೇ ಬೇಕು ಮತ್ತು ತನ್ಮೂಲಕ ಇಡೀ ಉತ್ತರ ಭಾರತದಲ್ಲಿ ಕಾಂಗ್ರೆಸ್ಸನ್ನು ಅಧಿಕಾರದಿಂದ ದೂರವಿಡಲೇಬೇಕೆಂಬ ಹಟಕ್ಕೆ ಬಿದ್ದ ಬಾಜಪ ಆ ನೆಲೆಯಲ್ಲಿಯೇ ತನ್ನ ಮಿತ್ರಪಕ್ಷವಾದ ಶಿರೋಮಣಿ ಅಕಾಲಿದಳದ ಜೊತೆ ಸೇರಿ ಚುನಾವಣಾ ತಯಾರಿಮಾಡಿಕೊಳ್ಳುತ್ತಿತ್ತು. ಇಷ್ಟಲ್ಲದೆ ಕಾಂಗ್ರೆಸ್ ಕೂಡಾ ತನ್ನ ಮುಂದಿನ ನಡೆಗಳ ಕುರಿತು ಲೆಕ್ಕಾಚಾರ ಹಾಕುತ್ತಿತ್ತು. ಆದರೆ ಈ ಎರಡೂಪಕ್ಷಗಳಿಗೆ ಆಘಾತಕಾರಿಯಾಗವಂತಹ ಸುದ್ದಿಯೊಂದೀಗ ಹೊರಬಿದ್ದಿದೆ: ಹಫ್ ಪೋಸ್ಟ್-ಸಿ-ವೋಟರ್ ಒಂದು ಸಮೀಕ್ಷೆಯನ್ನು ನಡೆಸಿದ್ದು ಅದರ ಪ್ರಕಾರ ಮುಂದಿನ ಚುನಾವಣೆಯಲ್ಲಿ ದೆಹಲಿಯ ಮುಖ್ಯಮಂತ್ರಿಯಾದ ಶ್ರೀ ಅರವಿಂದ್ ಕೇಜ್ರೀವಾಲರ ಆಮ್ ಆದ್ಮಿ ಪಕ್ಷ ಒಟ್ಟು 117 ಸ್ಥಾನಗಳ ಪೈಕಿ 94ರಿಂದ100 ಸ್ಥಾನಗಳನ್ನು ಗಳಿಸುತ್ತದೆಯೆಂಬ ಪಲಿತಾಂಶ ಬಿಡುಗಡೆ ಮಾಡಿದೆ. ಇಷ್ಟಲ್ಲದೆ ಪಂಜಾಬಿ ಜನ ತಮ್ಮ ಮುಖ್ಯಮಂತ್ರಿಯನ್ನಾಗಿ ಕೇಜ್ರಿವಾಲರನ್ನು ಮೊದಲ ಸ್ಥಾನದಲ್ಲಿಯೂ, ಕಾಂಗ್ರೆಸ್ಸಿನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಎರಡನೇ ಸ್ಥಾನದಲ್ಲಿಯೂ ನೋಡಲು ಬಯಸಿದ್ದಾರೆಂಬ ಮಾಹಿತಿಯನ್ನೂ ನೀಡಿದೆ. ಶೇಕಡಾ 51ರಷ್ಟು ಜನ ಕೇಜ್ರಿವಾಲರನ್ನು, ಶೇಕಡಾ35 ರಷ್ಟು ಜನ ಅಮರಿಂದರ್ ಸಿಂಗ್ ಅನ್ನು ಆರಿಸುವ ಬಯಕೆ ಹೊಂದಿರುವುದು ಸಮೀಕ್ಷೆಯಲ್ಲಿ ಗೊತ್ತಾಗಿದ್ದು ಈ ಪಟ್ಟಿಯಲ್ಲಿ ಬಾಜಪದ ಅಥವಾ ಅಕಾಲಿದಳದ ಯಾವೊಬ್ಬ ನಾಯಕನೂ ಇಲ್ಲದಿರುವುದೇ ಬಾಜಪದ ತಲೆನೋವಿಗೆ ಕಾರಣವಾಗಿದೆ.
ಈ ಬೆಳವಣಿಗೆಗಳಿಂದ ಕಂಗೆಟ್ಟಂತಾಗಿರುವ ಬಾಜಪ ಪಂಜಾಬ್ ರಾಜಕಾರಣದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೇರೊಂದು ತಂತ್ರಗಾರಿಕೆ ಅನುಸರಿಸಲು ಸಿದ್ದವಾಗಿ ನಿಂತಿದೆ. ಪಂಜಾಬ್ ಬಾಜಪದ ರಾಜ್ಯಾದ್ಯಕ್ಷರಾದ ಕಮಲ್ ಶರ್ಮಾ ಮತ್ತು ಇತರೇ ಸ್ಥಳೀಯ ನಾಯಕರುಗಳು ಅಕಾಲಿದಳದೊಂದಿಗಿನ ಮೈತ್ರಿ ಮುರಿದುಕೊಂಡು ಬಾಜಪ ಏಕಾಂಗಿಯಾಗಿ ಚುನಾವಣೆ ಎದುರಿಸುವುದರಿಂದ ಮೋದಿಯವರ ಅಭಿವದ್ದಿಯ ಮಂತ್ರ ಮತ್ತು ಅವರ ವರ್ಚಸ್ಸಿನಿಂದ ಚುನಾವಣೆ ಗೆಲ್ಲಲು ಸಾದ್ಯವೆಂದು ರಾಷ್ಟ್ರೀಯ ಅದ್ಯಕ್ಷರಾದ ಅಮಿತ್ ಷಾಗೆ ಮನವಿ ಸಲ್ಲಿಸಿದ್ದಾರೆ. ಈ ವರ್ಷ ಅದ್ಯಕ್ಷ ಶರ್ಮಾರವರ ಅವಧಿ ಮುಗಿಯಲಿದ್ದು ಸಂಸತ್ ಸದಸ್ಯ ಮತ್ತು ಮಾಜಿ ಕ್ರಿಕೇಟಿಗ ಶ್ರೀ ನವಜೋತ್ ಸಿಂಗ್ ಸಿದ್ದುರವರನ್ನು ಪಕ್ಷಾದ್ಯಕ್ಷರನ್ನಾಗಿ ಮಾಡಲು ಸಹ ಒಂದುವರ್ಗ ಕೋರಿಕೆಯನ್ನಿಟ್ಟಿದೆ. ಇಷ್ಟು ದಿನ ಪಂಜಾಬಿನಲ್ಲಿ ನೆಲೆ ಕಂಡುಕೊಳ್ಳಲು ಮತ್ತು ಅಧಿಕಾರ ನಡೆಸಲು ಸಹಾಯ ಮಾಡಿದ ಅಕಾಲಿದಳಕ್ಕೆ ಕೈಕೊಡುವುದು ಮಾತ್ರವಲ್ಲದೆ, ಇಷ್ಟು ದಿನದ ದುರಾಡಳಿತಕ್ಕೆ ಮತ್ತೆಲ್ಲ ಕೆಡುಕುಗಳಿಗೂ ಅಕಾಲಿದಳವನ್ನೇ ಹೊಣೆಯಾಗಿಸಿ ತಾನು ಸ್ಪಟಿಕದಂತೆ ಸ್ವಚ್ಚ ಎಂಬ ಘೊಷಣೆಯೊಂದಿಗೆ ಜನತೆಯ ಮುಂದೆ ಹೋಗುವುದು ಬಾಜಪದ ಸದ್ಯದ ಲೆಕ್ಕಾಚಾರವಾಗಿದೆ. ಕಳೆದ ಹತ್ತು ವರ್ಷಗಳಿಂದ ಪಂಜಾಬಿನ ಅಧಿಕಾರದ ಗದ್ದುಗೆಯನ್ನು ಹಿಡಿದಿರುವ ಬಾಜಪ-ಅಕಾಲಿದಳದ ಮೈತ್ರಿಕೂಟ ಈಗಾಗಲೆ ಜನರಿಂದ ದೂರವಾಗುತ್ತಿದ್ದು ಮುಂದಿನ ಚುನಾವಣೆಯಲ್ಲಿ ಸೋಲುವ ಬೀತಿಯಲ್ಲಿದ್ದು, ತಾನು ಗೆಲ್ಲಲು ಸಾದ್ಯವಿಲ್ಲವೆಂಬ ಅಂಶವನ್ನು ತಿಳಿದೇ ಅಕಾಲಿದಳವನ್ನು ದೂರ ಮಾಡಿ ಆಗಿರುವ ಅನಾಹುತಕ್ಕೆಲ್ಲ ಅದೇ ಹೊಣೆ ತಾನಲ್ಲ ಎಂಬ ಅಂಶವನ್ನು ಜನರಿಗೆ ರವಾನಿಸಲು ಸಿದ್ದವಾಗಿ ನಿಂತಿದೆ.
ಇದೆಲ್ಲದರ ನಡುವೆ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಬಹುದಾಗಿದ್ದ ಕಾಂಗ್ರೆಸ್ ಅನಾಹುತವೊಂದನ್ನು ಮಾಡಿಕೊಂಡಿತು. ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಿದ ಕಾಂಗ್ರೆಸ್ ಪಂಜಾಬಿನ ಉಸ್ತುವಾರಿಯನ್ನು ಶ್ರೀ ಕಮಲ್‍ನಾಥ್ ಅವರಿಗೆ ನೀಡಿತು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ನೇಮಕವನ್ನು ಸಮರ್ಥಿಸಿಕೊಂಡರೂ ಪಂಜಾಬಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿಬಿಟ್ಟಿತು. ಯಾಕೆಂದರೆ 1984 ರಲ್ಲಿ ನಡೆದ ಸಿಖ್ ನರಮೇಧದ ಹಿಂದೆ ಕಮಲ್‍ನಾಥ್ ಕೈವಾಡವಿದೆಯೆಂಬ ಆರೋಪವಿದ್ದು ಪಂಜಾಬಿನ ಜನತೆ ಅದನ್ನಿನ್ನೂ ಮರೆತಿಲ್ಲ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯ ನಾಯಕರುಗಳ ಅಭಿಪ್ರಾಯವನ್ನು ಕೇಳಿಲ್ಲವೆಂಬ ಅಸಮಧಾನ ಅಲ್ಲಿನ ನಾಯಕರಲ್ಲಿ ಮೂಡಿದ್ದು ಸುಳ್ಳಲ್ಲ. ಯಾಕೆಂದರೆ ಈ ಹಿಂದೆ ಕಮಲ್ ನಾಥ್ ಅಮೇರಿಕಾ ಪ್ರವಾಸ ಕೈಗೊಂಡಾಗಲೂ ಅಲ್ಲಿನ ಸಿಖ್ ಜನತೆ ಅವರ ವಿರುದ್ದ ಪ್ರತಿಭಟನೆ ನಡೆಸಿದ್ದರು. ಇದನ್ನು ಅರಿತ ಕಮಲ್ ನಾಥ್ ಕೇವಲ ಮೂರೇ ದಿನಕ್ಕೆ ತಮ್ಮ ಹುದ್ದೆಗೆ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದರು. ನಂತರದಲ್ಲಿ ಶ್ರೀ ಗುಲಾಂನಬಿ ಆಜಾದ್ ಅವರನ್ನು ಆ ಹುದ್ದೆಗೆ ನೇಮಿಸಲಾಯಿತು. ಹೀಗೆ ಸಿಖ್ ಜನಾಂಗದವರ ಬಾವನಾತ್ಮಕ ವಿಚಾರವನ್ನು ಪರಿಗಣಿಸದೆ ಮಾಡಿದ ಒಂದು ನೇಮಕ ಒಂದಷ್ಟು ದಿನಗಳ ಕಾಲ ಕಾಂಗ್ರೆಸ್ಸಿಗೆ ಇರುಸುಮುರುಸನ್ನು ಉಂಟು ಮಾಡಿತು.
ಇನ್ನು ಅಕಾಲಿದಳ ಎಂದಿನಂತೆ ಬಾಜಪ ಜೊತೆಗಿನ ಮೈತ್ರಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಮ್‍ಆದ್ಮಿಪಕ್ಷ ಮಾತ್ರ ಮುಂದಿನ ಚುನಾವಣೆಯನ್ನು ಎದುರಿಸಲು ಸರ್ವಸಿದ್ದತೆಗಳನ್ನೂ ಮಾಡಿಕೊಳ್ಳುತ್ತಿದೆ. ಇದರ ಒಂದು ಭಾಗವಾಗಿ ಅದು ಎಲ್ಲ 117 ಕ್ಷೇತ್ರಗಳಲ್ಲಿಯೂ ತನ್ನ ಕಾರ್ಯಕರ್ತರ ಪಡೆ ಸಿದ್ದಗೊಳಿಸಲು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕರ್ತರ ಹೊಣೆಗಾರಿಕೆಗಳ ಬಗ್ಗೆ ಕೈಪಿಡಿಯೊಂದನ್ನು ಸಿದ್ದಪಡಿಸಿ ಅವನ್ನು ಕಾರ್ಯಕರ್ತರಿಗೆ ತಲುಪಿಸುವ ಯತ್ನವನ್ನೂ ಅದು ಮಾಡುತ್ತಿದೆ.
ಎಂದಿನಂತೆ ಬಾಜಪ ತನ್ನ ಹಳೆಯ ಚಾಳಿಯನ್ನು ಇಲ್ಲಿಯೂ ಮಂದುವರೆಸುವಂತೆ ಕಾಣುತ್ತಿದೆ. ಈ ಹಿಂದೆ ಅದು ಮಹಾರಾಷ್ಟ್ರದಲ್ಲಿ ಚುನಾವಣೆಗೂ ಮುಂಚೆ ಶಿವಸೇನೆಯಿಂದ ಮೈತ್ರಿ ಕಡಿದುಕೊಂಡು ಹಿಂದಿನ ಎಲ್ಲ ತಪ್ಪುಗಳಿಗೂ ಅದನ್ನು ಹೊಣೆಯಾಗಿಸಿ ತಾನು ಮಾತ್ರ ಸರ್ವಸಂಪನ್ನ ಪಕ್ಷವೆಂಬಂತೆ ಜನರ ಮುಂದೆ ಹೋಗಿ ನಿಂತು ಸರಳ ಬಹುಮತದತ್ತ ಹೋಗುವಲ್ಲಿ ಯಶಸ್ವಿಯಾಗಿತ್ತು. ಆಡಳಿತ ವಿರೋಧಿ ಅಲೆಯ ಭಯವಿರುವುದರಿಂದ ಪಂಜಾಬಿನಲ್ಲಯೂ ಅದು ಅಕಾಲಿದಳದೊಂದಿಗಿನ ಮೈತ್ರಿಗೆ ತಿಲಾಂಜಲಿ ಬಿಟ್ಟು ಹೊಸ ಮುಖವಾಡದೊಂದಿಗೆ ಚುನಾವಣೆ ಎದುರಿಸುವ ನಿರೀಕ್ಷೆಯಲ್ಲಿರುವಂತೆ ಕಾಣುತ್ತಿದೆ. ಬಾಜಪ ಹೈಕಮ್ಯಾಂಡಿನ ಈ ನಿರ್ದಾರಕ್ಕೆ ಮೂಲ ಕಾರಣ ಸ್ಥಳೀಯ ಬಾಜಪ ನಾಯಕರ ಮನವಿ ಎಂದು ಸಾರ್ವಜನಿಕರಿಗೆ ತೋರಿಸಲು ಅದು ರಾಜ್ಯ ನಾಯಕರುಗಳು ಈ ಬಗ್ಗೆ ಅಮಿತ್ ಷಾಗೆ ಮನವಿ ಮಾಡಿಕೊಂಡಂತಹ ಒಂದು ಪೂರ್ವನಿಯೋಜಿತ ನಾಟಕವನ್ನು ಈಗಾಗಲೇ ಮಾಡಿ ಮುಗಿಸಿದೆ.
ಇವೆಲ್ಲವನ್ನೂ ನೋಡಿದರೆ ಯಾವಾಗಲು ಕಾಂಗ್ರೆಸ್ ಮತ್ತು ಬಾಜಪ ಮೈತ್ರಿಕೂಟದ ನಡುವೆ ನಡೆಯುತ್ತಿದ್ದ ನೇರ ಸ್ಪರ್ದೆಯ ಬದಲಿಗೆ ಈ ಬಾರಿ ಚತುಷ್ಕೋನ ಸ್ಪರ್ದೆ ನಡೆಯುವ ಸಾದ್ಯತೆ ಹೆಚ್ಚಾಗಿದೆ. ಇದರಿಂದ ಯಾವ ಪಕ್ಷ ಶೇಕಡಾ 30ರಷ್ಟು ಮತ ಪಡೆಯುತ್ತದೆಯೊ ಅದು ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೂ ಈ ಬಗ್ಗೆ ನಾವು ಅಧಿಕೃತವಾಗಿ ಏನನ್ನೂ ನುಡಿಯಲು ಸಾದ್ಯವಿಲ್ಲ. ಮತ್ತು ನುಡಿಯಲೂಬಾರದು.
ಜನ ಪರ್ಯಾಯ ರಾಜಕೀಯ ಶಕ್ತಿಗಾಗಿ ಕಾಯುತ್ತಿದ್ದಾರೆ. ಕಾಂಗ್ರೆಸ್ ಅಥವಾ ಬಿಜೆಪಿ ಇವೆರಡನ್ನು ಒಂದರ ನಂತರ ಮತ್ತೊಂದರಂತೆ ಆರಿಸುವುದರಿಂದ ಬದಲಾವಣೆ ಸಾಧ್ಯವಾಗುವುದಿಲ್ಲ. ಮಂತ್ರಿಗಳು, ಸರಕಾರ ಮಾತ್ರ ಬದಲಾಗುತ್ತವೆಯೇ ಹೊರತು ವ್ಯವಸ್ಥೆಯಲ್ಲಿ ಧನಾತ್ಮಕ ಬದಲಾವಣೆ ಮಾಡುವ ಇಚ್ಛಾಶಕ್ತಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳಿಗೂ ಇಲ್ಲ. ಇದರಿಂದಾಗಿ ವ್ಯವಸ್ಥೆ ಚುನಾವಣೆಯಿಂದ ಚುನಾವಣೆಗೆ ಮತ್ತಷ್ಟು ಹದಗೆಡುತ್ತಿದೆ. ಇಂಥ ನಿಂತ ನೀರಿನಂತೆ ಕೊಳೆಯುತ್ತಿರುವ ಭಾರತದ ರಾಜಕೀಯ ವ್ಯವಸ್ಥೆಯನ್ನು ಶುದ್ಧೀಕರಿಸಬೇಕು ಎಂಬ ಚಿಂತನೆ ಮೋದಿಯವರಲ್ಲಿಯೂ ಕಂಡುಬರುವುದಿಲ್ಲ. ಇದನ್ನು ಸ್ವಲ್ಪ ಮಟ್ಟಿಗಾದರೂ ಶುದ್ಧೀಕರಿಸಬೇಕು ಎಂಬ ಚಿಂತನೆ ಕಂಡುಬರುತ್ತಿರುವುದು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದಲ್ಲಿ ಮಾತ್ರ. ಹೀಗಾಗಿ ದೇಶದಲ್ಲಿ ಆಮ್ ಆದ್ಮಿ ಪಕ್ಷ ಬೆಳೆಯಬೇಕಾಗಿರುವುದು ಇಂದಿನ ಅಗತ್ಯವೂ ಹೌದು.
ReplyDeleteಕಾಂಗ್ರೆಸ್ ಪಕ್ಷವನ್ನು ಇಂದು ಯುವ ಜನಾಂಗ ಅಷ್ಟಾಗಿ ಇಷ್ಟಪಡುತ್ತಿಲ್ಲ. ಬಹಳಷ್ಟು ಯುವಜನಾಂಗ ಕಾಂಗ್ರೆಸ್ ವಿರೋಧಿ ಧೋರಣೆಯನ್ನು ತಳೆಯುತ್ತಿರುವುದು ಕಂಡುಬರುತ್ತಿದೆ. ಇಂಥ ಯುವಜನಾಂಗ ಕಾಂಗ್ರೆಸ್ ಬದಲು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವ ಸಂಭಾವ್ಯತೆ ಹೆಚ್ಚುತ್ತಿದೆ. ಯುವಜನಾಂಗದ ಮತ ನಿರ್ಣಾಯಕವಾಗಿರುವುದರಿಂದ ಹಾಗೂ ಮುಂಬರುವ ದಿನಗಳಲ್ಲಿ ಯುವ ಮತದಾರರು ಹೆಚ್ಚುತ್ತಾ ಹೋಗುವುದರಿಂದ ಕಾಂಗ್ರೆಸ್ ಇನ್ನು ಮುಂದೆ ದೇಶದಲ್ಲಿ ಗೆಲ್ಲಲು ಬಹಳ ಕಷ್ಟ ಇದೆ. ಕಾಂಗ್ರೆಸ್ಸಿನ ಸ್ಥಾನವನ್ನು ಆಮ್ ಆದ್ಮಿ ಪಕ್ಷ ನಿಧಾನವಾಗಿ ಅಲಂಕರಿಸಿದರೂ ಅಚ್ಚರಿ ಇಲ್ಲ. ಬಿಜೆಪಿ ಮೊದಲು ಎರಡು ಎರಡು ಸಂಸತ್ ಸದಸ್ಯರ ಸ್ಥಾನ ಹೊಂದಿತ್ತು, ನಂತರ ಅದು ಬೆಳೆಯುತ್ತಾ ಇಂದು ದೇಶದ ಹಲವು ರಾಜ್ಯಗಳಲ್ಲಿ ಬೆಳೆದು ಇಂದು ಸ್ವತಂತ್ರವಾಗಿ ಅಧಿಕಾರ ಪಡೆಯುವ ಮಟ್ಟಕ್ಕೆ ಬೆಳೆದಿದೆ. ಯುವ ಜನಾಂಗವನ್ನು ಸೆಳೆಯುವ ಸಾಮರ್ಥ್ಯ ಹಾಗೂ ಜಾಣ್ಮೆ ಕೇಜ್ರಿವಾಲ್ ಅವರಲ್ಲಿದೆ. ಇದು ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿಯವರಲ್ಲಿ ಕಂಡುಬರುತ್ತಿಲ್ಲ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್ ಪಕ್ಷ ಎಂಬ ಪ್ರತೀತಿ ದೇಶಾದ್ಯಂತ ಬೆಳೆದಿರುವುದರಿಂದ ಹಾಗೂ ಭ್ರಷ್ಟಾಚಾರ ತಮ್ಮ ಮೂಲಭೂತ ಹಕ್ಕು ಎಂದು ಕಾಂಗ್ರೆಸ್ ರಾಜಕಾರಣಿಗಳು ತಿಳಿದಿರುವುದರಿಂದ ದೇಶಪ್ರೇಮಿ ರಾಜಕಾರಣಿಗಳನ್ನು ಕಾಂಗ್ರೆಸ್ ಪಕ್ಷದಲ್ಲಿ ಹುಡುಕುವುದು ಬಹಳ ಕಷ್ಟ ಆಗಿರುವ ಕಾರಣ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯ ಮಸುಕಾಗಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಇಂದು ಕಂಡುಬರುತ್ತಿರುವ ಅರಾಜಕತೆ, ಶಿಸ್ತಿನ ಕೊರತೆ, ಗುಂಪುಗಾರಿಕೆ ಇದನ್ನು ಜನರಿಂದ ಇನ್ನಷ್ಟು ದೂರ ಮಾಡಲಿದೆ. ಇಂಥ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ದೇಶದ ಹೊಸ ನಾಯಕನಾಗಿ ಬೆಳೆಯುವ ಸಂಭಾವ್ಯತೆ ಕಂಡುಬರುತ್ತಿದೆ. ಕೇಜ್ರಿವಾಲ್ ಪರಿಪೂರ್ಣ ನಾಯಕ ಎಂದೇನೂ ಅಲ್ಲ ಆದರೂ ಯಾರೂ ಸಮರ್ಪಕ ನಾಯಕರು ಇಲ್ಲದಿದ್ದಾಗ ಇರುವವರಲ್ಲೇ ಹೆಚ್ಚು ಸಮರ್ಥ ಎಂದು ಕಾಣುವವರೇ ಬೆಳೆಯುತ್ತಾರೆ ಈಗ ಮೋದಿ ಬೆಳೆದಿದ್ದಾರಲ್ಲ ಹಾಗೇ.
ಕೇಜ್ರಿವಾಲ್ ಸಣ್ಣ ಸಣ್ಣ ರಾಜ್ಯಗಳ ಕಡೆಗೆ ಗಮನ ಹರಿಸಿದ್ದಾರೆ. ದೆಹಲಿ ಆಯಿತು, ಇದೀಗ ಪಂಜಾಬಿನಲ್ಲಿ ಅಧಿಕಾರಕ್ಕೆ ಬರುವ ಸಂಭಾವ್ಯತೆ ಕಂಡುಬರುತ್ತಿದೆ. ಗೋವಾ, ಗುಜರಾತಿನಲ್ಲಿಯೂ ಪಕ್ಷ ಬಲಗೊಳ್ಳುವ ಸೂಚನೆಗಳಿವೆ. ಮೋದಿ ಹಾಗೂ ಸಂಗಡಿಗರು ಕಾಂಗ್ರೆಸ್ಸಿನ ಮೇಲೆ ಎರಗಿದಂತೆ ಆಮ್ ಆದ್ಮಿ ಪಕ್ಷದ ಮೇಲೆ ಎರಗುವಂತಿಲ್ಲ ಏಕೆಂದರೆ ಕಾಂಗ್ರೆಸ್ಸಿನ ವಿಷಯದಲ್ಲಿ ಟೀಕಿಸಲು ಬೇಕಾದಷ್ಟು ವಿಷಯಗಳು ಇವೆ. ಆಮ್ ಆದ್ಮಿ ಪಕ್ಷದ ಮೇಲೆ ಭ್ರಷ್ಟಾಚಾರದ ಆಪಾದನೆ ಮಾಡುವಂತಿಲ್ಲ. ಕೇಜ್ರಿವಾಲ್ ಸರ್ವಾಧಿಕಾರದ ಮನೋಭಾವದ ವ್ಯಕ್ತಿಯಾದರೂ ಭ್ರಷ್ಟ ಅಲ್ಲ. ಹೀಗಾಗಿ ಕೇಜ್ರಿವಾಲ್ ಅನ್ನು ಎದುರಿಸುವುದು ಬಿಜೆಪಿಗೆ ಅಥವಾ ಮೋದಿಗೆ ಸುಲಭವಲ್ಲ. ಇದರ ನಡುವೆ ಬಿಜೆಪಿ ಸರ್ಕಾರದ ವರ್ಚಸ್ಸು ಕೇಂದ್ರದಲ್ಲಿ ಕುಸಿಯುತ್ತಿದೆ. ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಬೆಲೆಯೇರಿಕೆ ಜನಸಾಮಾನ್ಯರ ಜೀವ ಹಿಂಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಕೊಟ್ಟ ಆಶ್ವಾಸನೆಗಳು ಮಣ್ಣುಪಾಲಾಗಿವೆ. ಮೋದಿ ಘೋಷಣೆಗಳ ಸರದಾರ ಹಾಗೂ ವಿದೇಶ ಪ್ರವಾಸದ ಚಾಂಪಿಯನ್ ಆಗಿ ಮಾತ್ರ ಕಂಡುಬರುತ್ತಿದ್ದಾರೆ ಹೊರತು ಮಹತ್ತರ ಬದಲಾವಣೆ ತರುವ ನಾಯಕನಾಗಿ ರೂಪುಗೊಂಡಿಲ್ಲ. ಇಂಥ ಪರಿಸ್ಥಿತಿಯಲ್ಲಿ ಜನ ದೇಶದಲ್ಲಿ ಪರ್ಯಾಯದ ಬಗ್ಗೆ ಚಿಂತಿಸಿದರೆ ಮತ್ತು ಆಮ್ ಆದ್ಮಿ ಪಕ್ಷದಲ್ಲಿ ಪರ್ಯಾಯವನ್ನು ಕಂಡುಕೊಂಡರೆ ಆಶ್ಚರ್ಯವಿಲ್ಲ (ಇದು ನಿಧಾನಕ್ಕೆ ನಡೆಯಬಹುದಾದದ್ದು, ಬರುವ ಚುನಾವಣೆಗಳಲ್ಲಿ ನಡೆಯುತ್ತದೆ ಎಂದಲ್ಲ).
ಆಮ್ ಆದ್ಮಿ ಪಾರ್ಟಿ ಒಂದಷ್ಟು ಸಣ್ಣ ಪುಟ್ಟ ತಪ್ಪುಗಳನ್ನು, ವಿಪರೀತ ನಾಟಕೀಯತೆಯನ್ನು ಬದಿಗಿಟ್ಟರೆ ಅದರ ಭವಿಷ್ಯ ಇನ್ನೂ ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ. ಉಳಿದದ್ದೇನೆ ಇರಲಿ, ಮೊಹಲ್ಲಾ ಕ್ಲಿನಿಕ್ ಮತ್ತು ಸರಕಾರೀ ಶಾಲೆಗಳನ್ನು ಉತ್ತಮಗೊಳಿಸುತ್ತಿರುವ ಆಮ್ ಆದ್ಮಿ ಪಕ್ಷದ ಕೆಲಸಗಳು ಅಭಿನಂದನಾರ್ಹ.
Delete