ಮೋದಿ ಡಿಗ್ರಿಯನ್ನು ತೋರಿಸುತ್ತಿರುವ ಶಾ - ಜೈಟ್ಲಿ |
ಡಾ. ಅಶೋಕ್. ಕೆ. ಆರ್
ಕರ್ನಾಟಕದಲ್ಲಿ ಕಳೆದ ಬಾರಿ ಇದ್ದ ಬಿಜೆಪಿಯ ಆಡಳಿತದ ಸಂದರ್ಭ. ಸುದ್ದಿ ವಾಹಿನಿಯೊಂದು (ವಾಹಿನಿಯ ಹೆಸರು ಮರೆತಿದೆ) ಬಿಜೆಪಿ ಸೇರಿದ್ದ ವಿ.ಸೋಮಣ್ಣರ ವಿರುದ್ಧ ಗುರುತರವಾದ ಆರೋಪವೊಂದನ್ನು ಮಾಡಿತ್ತು. ವಾಹಿನಿಯೊಂದಿಗೆ ದೂರವಾಣಿಯೊಂದಿಗೆ ವಿ. ಸೋಮಣ್ಣ ನೀವು ಆಧಾರವಿಲ್ಲದೇ ಮಾತನಾಡುತ್ತಿದ್ದೀರಿ ಎಂದಾಗ ಸುದ್ದಿವಾಹಿನಿಯ ಪ್ರತಿನಿಧಿ ‘ನಾವು ಆರೋಪ ಮಾಡಿದ್ದೀವಿ, ಅದನ್ನು ಸುಳ್ಳು ಎಂದು ಸಾಬೀತುಪಡಿಸುವುದು ನಿಮ್ಮ ಜವಾಬ್ದಾರಿ’ ಎಂದು ಜೋರು ದನಿಯಲ್ಲಿ ಹೇಳಿದ್ದ! ಇದೇ ರೀತಿಯ ಘಟನೆಯನ್ನೀಗ ದೆಹಲಿಯ ರಾಜಕಾರಣದಲ್ಲಿ ನೋಡುವ ಸದವಕಾಶ ನಮಗೆ. ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷ ಮಾಡಿದ ಆರೋಪಗಳು ಸುಳ್ಳೋ ನಿಜವೋ ಎಂದು ಸಾಬೀತುಪಡಿಸುವ ಜವಾಬ್ದಾರಿ ಬಿಜೆಪಿಯ ತಲೆಯ ಮೇಲೆ ಬಿದ್ದಿದೆ. ಉಗುರಲ್ಲೋಗುವುದಕ್ಕೆ ಕೊಡಲಿ ಎತ್ತಿಕೊಳ್ಳುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಬಿಜೆಪಿ(ಉದಾಹರಣೆಯಾಗಿ ಜೆ.ಎನ್.ಯು ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ಘಟನೆಗಳು ಮುಂದಿವೆ) ಈ ವಿಚಾರದಲ್ಲೂ ಕೊಡಲಿಯನ್ನೇ ಕೈಗೆತ್ತಿಕೊಂಡು ತನ್ನ ಕೈಯನ್ನೇ ಘಾಸಿಕೊಳಿಸಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿಯವರು ಓದಿದ್ದೇನನ್ನು ಎನ್ನುವುದೇ ಆಪ್ ಪಕ್ಷದ ಪ್ರಶ್ನೆ. ಈ ಪ್ರಶ್ನೆಯನ್ನು ಮಾಹಿತಿ ಹಕ್ಕು ವಿಚಾರದ ಮೂಲಕವೂ ಹಲವರು ಕೇಳಿದ್ದರು, ಅವರಿಗೆ ಉತ್ತರ ಸಿಕ್ಕಿರಲಿಲ್ಲ. ಪ್ರಧಾನಿಯಾಗಲು ಶಿಕ್ಷಣಾರ್ಹತೆ ನಮ್ಮಲ್ಲಿಲ್ಲ ಎಂದಾಗ ಪ್ರಧಾನಿಯಾದವರು ಹತ್ತನೇ ತರಗತಿ ಓದಿದ್ದರೂ, ಎರಡೆರಡು ಪದವಿ ಪಡೆದಿದ್ದರೂ, ಅಕ್ಷರವೇ ಗೊತ್ತಿಲ್ಲದಿದ್ದರೂ ವ್ಯತ್ಯಾಸವೇನಾಗುವುದಿಲ್ಲ. ಆದರಿಲ್ಲಿ ಆಪ್ ಪಕ್ಷದ ಪ್ರಶ್ನೆಯನ್ನು ಬೆಂಬಲಿಸುತ್ತಿರುವವರು ಕೇಳುತ್ತಿರುವುದು ಪ್ರಧಾನಿಯಾದವರು ಚುನಾವಣೆಗೆ ಸಲ್ಲಿಸುವ ಪ್ರಮಾಣಪತ್ರದಲ್ಲಿ ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಸುಳ್ಳಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು. ಆ ಲೆಕ್ಕದಲ್ಲಿ ಚುನಾವಣೆಗೆ ನಿಲ್ಲುವ ಯಾರೇ ಆದರೂ ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆಯಾಗಲೀ ಮತ್ತೊಂದು ಅಂಶದ ಬಗ್ಗೆಯಾಗಲೀ ಸುಳ್ಳಾಡುವುದು ಕಾನೂನಿನ ಪ್ರಕಾರ ತಪ್ಪಾಗುತ್ತದೆ. ಆಪ್ ಪಕ್ಷಕ್ಕೆ ನರೇಂದ್ರ ಮೋದಿಯವರು ಸುಳ್ಳಾಡಿದ್ದು ಅಪರಾಧ ಎಂದೆನ್ನಿಸಿದ್ದರೆ ಕಾನೂನಿನ ಪ್ರಕಾರವೇ ಹೋರಾಟ ಮಾಡಬಹುದಿತ್ತು. ಕಾನೂನಾತ್ಮಕ ಹೋರಾಟವನ್ನೂ (ಮಾಹಿತಿ ಕೇಳುವ ಮೂಲಕ) ಅವರು ಮಾಡುತ್ತಿರುವವರಾದರೂ ಈ ವಿಷಯದಿಂದ ಸಿಗುವ ಪ್ರಚಾರದಿಂದಾಗಿ ಹೆಚ್ಚು ಜೋರಿನ ದನಿಯಲ್ಲಿ ಕೇಳುತ್ತಿದ್ದಾರೆ ಎಂದು ಯಾರಿಗಾದರೂ ಅರಿವಾಗುತ್ತದೆ. ಸರಿ, ಆಪ್ ಆರೋಪ ಮಾಡಿತು. ಅದಕ್ಕೆ ಬಿಜೆಪಿಯ ಪ್ರತಿಕ್ರಿಯೆ ಹೇಗಿರಬೇಕಿತ್ತು? ಒಂದೋ ಮೋದಿಯವರ ಪದವಿ ಸರ್ಟಿಫಿಕೇಟುಗಳನ್ನು ಮಾಧ್ಯಮಗಳಿಗೆ ತಲುಪಿಸಿ ಇದು ಸತ್ಯ ಎಂದಿದ್ದರೆ ಸಾಕಿತ್ತು. ಮೋದಿಯವರ ಪದವಿಯ ಬಗೆಗಿನ ಆರೋಪಗಳು ನಿಜವೇ ಆಗಿದ್ದಲ್ಲಿ, ಅದು ಕಾನೂನಿನ ಪ್ರಕಾರ ತಪ್ಪು ಎಂದು ಸಾಬೀತಾಗುವವರೆಗೆ ಸಭ್ಯನಂತೆ ಪೋಸು ಕೊಟ್ಟುಕೊಂಡು ಸುಮ್ಮಗಿರಬಹುದಿತ್ತು. ಆಗಲೇ ಹೇಳಿದೆನಲ್ಲ ಉಗುರಲ್ಲಿ ಹೋಗೋದಿಕ್ಕೆ ಕೊಡಲಿ ಎತ್ತಿಕೊಳ್ಳೋ ಖಯಾಲಿ ಈಗಿನ ಕೇಂದ್ರ ಸರಕಾರಕ್ಕೆ. ಸ್ವತಃ ಬಿಜೆಪಿಯ ಅಧ್ಯಕ್ಷರೂ ಮತ್ತು ವಿತ್ತ ಸಚಿವರು ಮೋದಿಯವರ ಡಿಗ್ರಿ ಸರ್ಟಿಫಿಕೇಟುಗಳನ್ನು ಹಿಡಿದುಕೊಂಡು ಪತ್ರಿಕಾಗೋಷ್ಟಿಯಲ್ಲಿ ಕುಳಿತುಬಿಟ್ಟರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಸಂಗತಿಗಳಲ್ಲಿ ನಿಜವೆಷ್ಟೋ ಸುಳ್ಳೆಷ್ಟೋ ಬಲ್ಲವರಾರು! ಆ ಸರ್ಟಿಫಿಕೇಟುಗಳ ಪೋಸ್ಟ್ ಮಾರ್ಟಮ್ ನಡೆದು ಹೋಯಿತು. ಇದು ಹೇಗೆ ಫೇಕು ಸರ್ಟಿಫಿಕೇಟು ಎಂದು ಎಳೆಯೆಳೆಯಾಗಿ ವಿವರಿಸಲಾಯಿತು; ಈ ವಿವರಣೆಯಲ್ಲಿ ಎಷ್ಟು ಸತ್ಯವಿದೆಯೋ ಬಲ್ಲವರಾರು. ಡಿಗ್ರಿ ಯಾಕೆ ಅನಿವಾರ್ಯವಲ್ಲ ಎಂದು ಮೋದಿ ಮತ್ತು ಬಿಜೆಪಿಯ ಭಕುತಗಣ ಸೃಷ್ಟಿಸಿದ ಮತ್ತಷ್ಟು ಫೋಟೋಶಾಪು ಚಿತ್ರಗಳು ಸರ್ಟಿಫಿಕೇಟು ಫೇಕೇ ಇರಬಹುದೇನೋಪ್ಪ ಎಂಬ ಭಾವನೆ ಮೂಡಿಸಿದ್ದಂತೂ ಹೌದು! ಈ ಇಡೀ ಪ್ರಹಸನದಲ್ಲಿ ಗೆದ್ದಿದ್ದು –ತಾತ್ಕಾಲಿಕವಾಗಿ - ಆಪ್.
ಔಟ್ ಲುಕ್ ಉಪಯೋಗಿಸಿದ ಚಿತ್ರವನ್ನುಪಯೋಗಿಸಿಕೊಂಡು ಮೋದಿಯನ್ನು ಸಮರ್ಥಿಸುತ್ತಿರುವ ಅಮಿತ್ ಶಾ. |
ಮೊದಲ ಬಾರಿಗೆ ಹಿಟ್ ವಿಕೆಟ್ ಆದ ನಂತರವೂ ಬಿಜೆಪಿ ಪಾಠ ಕಲಿತಂತಿಲ್ಲ. ಎರಡನೇ ಸಲ ಖುಷಿಖುಷಿಯಿಂದ ಹಿಟ್ ವಿಕೆಟ್ ಆಗಿರುವುದು ನಮ್ಮ ಪಕ್ಕದ ಕೇರಳದಲ್ಲಿ. ಕೇರಳದ ಚುನಾವಣೆ ಸಂದರ್ಭದ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೇರಳದ ಆದಿವಾಸಿ ಮಕ್ಕಳ ಮರಣ ಪ್ರಮಾಣ, ಅವರ ಅಪೌಷ್ಟಿಕತೆಯ ಕುರಿತು ಹೇಳುವಾಗ ಈ ಅಂಕಿಸಂಖೈಗಳು ಸೊಮಾಲಿಯಾ ದೇಶದ ಅಂಕಿಸಂಖೈಗಳಂತಿದೆ ಎಂದುಬಿಟ್ಟಿದ್ದಾರೆ. ಅದು ಸತ್ಯವೇ ಇದ್ದಿರಬಹುದು. ಮತ್ತು ನಮ್ಮ ಪತ್ರಿಕೆಗಳೇ ಅನೇಕ ಅಭಿವೃದ್ಧಿ ಸೂಚ್ಯಂಕಗಳನ್ನು ವರದಿ ಮಾಡುವಾಗ ಇತರೆ ರಾಷ್ಟ್ರಗಳಿಗಿಂತ ಅದು ಹೇಗೆ ಕಡಿಮೆಯಿದೆ ಎಂದು ಹೋಲಿಸುತ್ತಾರೆ. ಅದು ಅವಮಾನವೆಂದೇನೂ ಓದುಗನಿಗೆ ಅನ್ನಿಸುವುದಿಲ್ಲ. ಆದರೆ ಸೊಮಾಲಿಯಾಗೆ ಕೇರಳವನ್ನು ಹೋಲಿಸಿದ್ದಕ್ಕೆ (ಹೋಲಿಸಿದ್ದು ಒಂದು ನಿರ್ದಿಷ್ಟ ಪಂಗಡವನ್ನಾದರೂ ಅವರೂ ಕೇರಳಕ್ಕೇ ಸೇರುತ್ತಾರೆನ್ನುವುದೇ ವಿರೋಧಿಗಳಿಗೆ ಸಾಕಾಗಿತ್ತು) ಪ್ರತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ #ಪೋಮೋನೆಮೋದಿ (ಹೋಗು ಮಗನೇ ಮೋದಿ) ಎಂಬ ಹ್ಯಾಷ್ ಟ್ಯಾಗ್ ವ್ಯಾಪಕವಾಗಿಬಿಟ್ಟಿತು. ಮತ್ತೇನಿಲ್ಲ, ಬಿಜೆಪಿಯವರು ಕೇರಳದ ಆದಿವಾಸಿ ಮಕ್ಕಳಲ್ಲಿರುವ ಅಪೌಷ್ಟಿಕತೆಯ, ಮರಣ ಪ್ರಮಾಣದ ಅಧಿಕೃತ ಪಟ್ಟಿಯನ್ನಿಡಿದುಕೊಂಡು (ಕೇಂದ್ರದಲ್ಲಿ ಅಧಿಕಾರದಲ್ಲಿರುವವರಿಗೆ ಈ ಪಟ್ಟಿ ಸಿಗುವುದು ಕಷ್ಟವೇ!) ಸೊಮಾಲಿಯಾದ ಅಂಕಿಸಂಖೈಗಳನ್ನಿಟ್ಟುಕೊಂಡು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರೆ ಸಾಕಿತ್ತು. ಬಿಜೆಪಿಗೇನೂ ಈ ಹೇಳಿಕೆಯಿಂದ ಹೆಚ್ಚಿನ ಹಾನಿಯಾಗುತ್ತಿರಲಿಲ್ಲ ಕೇರಳದಲ್ಲಿ, ಯಾಕೆಂದರೆ ಅಲ್ಲಿ ಬಿಜೆಪಿ ಪಕ್ಷ ಇನ್ನೂ ಅಸ್ತಿತ್ವದ ಹುಡುಕಾಟದಲ್ಲಿದೆ; ಈ ಬಾರಿ ಒಂದಷ್ಟು ಹೆಚ್ಚಿನ ಮತಗಳನ್ನು, ಕೆಲವು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಪತ್ರಿಕೆಗಳಿಗೊಂದು ಮೇಲ್ ಕಳಿಸುವ ಮೂಲಕ ಮುಗಿಸಬಹುದಾದ್ದ ಕೆಲಸಕ್ಕೆ ಅಮಿತ್ ಶಾ ಪತ್ರಿಕಾಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದರು. ಅಧಿಕೃತ ಅಂಕಿಸಂಖೈಗಳನ್ನು ಪ್ರದರ್ಶಿಸದೆ ಔಟ್ ಲುಕ್ಕಿನಲ್ಲಿ ವರುಷಗಳ ಹಿಂದೆ ಪ್ರಕಟವಾಗಿದ್ದ ಲೇಖನದ ಮುಖಪುಟವನ್ನು ಹಿಡಿದುಕೊಂಡು ಪತ್ರಿಕಾಗೋಷ್ಟಿ ನಡೆಸಿದರು. ಅಮಿತ್ ಶಾ ದುರದೃಷ್ಟಕ್ಕೆ ಆ ಮುಖಪುಟದಲ್ಲಿದ್ದ ಚಿತ್ರ ಕೇರಳದ್ದಾಗಿರದೆ ಶ್ರೀಲಂಕಾದ ತಮಿಳು ನಿರಾಶ್ರಿತರದ್ದಾಗಿತ್ತು. ಅಲ್ಲಿಗೆ ಬಿಜೆಪಿ ಎರಡನೇ ಸಲವೂ ಹಿಟ್ ವಿಕೆಟ್ಟಾಗಿತ್ತು!
ಸೂಕ್ಷ್ಮವಾಗಿ ಗಮನಿಸಿದರೆ ಇದೆಲ್ಲ ವರ್ತನೆಗಳನ್ನೂ, ಪ್ರತಿಕ್ರಿಯೆಯ ರೀತಿಗಳನ್ನು ಕಲಿಸಿದ್ದೇ ಬಿಜೆಪಿ ಮತ್ತವರ ಐಟಿ ವಿಭಾಗ! ಕಳೆದ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದು ಬಿಜೆಪಿ. ಮಹಾತ್ಮ ಗಾಂಧಿಯಿಂದ ಹಿಡಿದು ಕಾಂಗ್ರೆಸ್ಸಿನ ಪುಡಿ ರಾಜಕಾರಣಿಯವರೆಗೆ ಎಲ್ಲರ ಫೋಟೋಶಾಪು ಚಿತ್ರಗಳನ್ನು ಅಂತರ್ಜಾಲದಲ್ಲಿ ಹರಿದಾಡುವಂತೆ ಮಾಡಲಾಗುತ್ತಿತ್ತು. ಅದು ಸತ್ಯವೋ ಸುಳ್ಳೋ ಎಂದು ಸಾಬೀತುಪಡಿಸಬೇಕಾದ ಜವಾಬ್ದಾರಿ ಇದ್ದಿದ್ದು ಚಿತ್ರ ಸೃಷ್ಟಿಸಿದವರಿಗಲ್ಲ ಬದಲಿಗೆ ಮಹಾತ್ಮ ಗಾಂಧಿಯ, ಕಾಂಗ್ರೆಸ್ಸಿನ ಬೆಂಬಲಿಗರಿಗೆ! ನಾವು ಆರೋಪ ಮಾಡ್ತೀವಿ, ಸುಳ್ಳೆಂದು ನೀವು ಸಾಬೀತು ಮಾಡ್ಕಳ್ಳಿ ಎನ್ನುವುದು ಬಿಜೆಪಿ ಮತ್ತವರ ಬೆಂಬಲಿಗರ ಧೋರಣೆಯಾಗಿತ್ತು. ನರೇಂದ್ರ ಮೋದಿಯವರ ಡಿಗ್ರಿಗೆ ಸಂಬಂಧಪಟ್ಟಂತೆಯೂ ಇದೇ ಧೋರಣೆಯಿದೆ. ಆದರೀಗ ಸಾಬೀತು ಮಾಡ್ಕಳ್ಳುವ ಜವಾಬ್ದಾರಿ ಮಾತ್ರ ಬಿಜೆಪಿಯ ಮೇಲೆ ಬಿದ್ದಿದೆ. ಯೂ – ಟರ್ನ್! ಇನ್ನು ವ್ಯಕ್ತಿಯ ದೂಷಣೆಯನ್ನು ಇಡೀ ರಾಜ್ಯದ ಸ್ವಾಭೀಮಾನಕ್ಕೆ ಸಮೀಕರಿಸುವುದನ್ನು ಕಲಿಸಿದ್ದೂ ಇದೇ ನರೇಂದ್ರ ಮೋದಿ. ಚುನಾವಣಾ ಭಾಷಣದಲ್ಲೊಮ್ಮೆ ಸೋನಿಯಾ ಗಾಂಧಿ ನರೇಂದ್ರ ಮೋದಿಯನ್ನು ‘ಸಾವಿನ ವ್ಯಾಪಾರಿ’ ಎಂದು ಬಣ್ಣಿಸಿದ್ದನ್ನು ನರೇಂದ್ರ ಮೋದಿ ‘ಗುಜರಾತಿ ಅಸ್ಮಿತೆ’ಗಾದ ಧಕ್ಕೆ ಎಂದು ಪ್ರಚುರಪಡಿಸಿಕೊಂಡಿದ್ದರು. ಮೋದಿಯವರು ಬಿಹಾರದ ನಿತೀಶ್ ಕುಮಾರರ ಡಿ.ಎನ್.ಎ ಬಗ್ಗೆ ಮಾತನಾಡಿದಾಗ ಮೋದಿ ತಂತ್ರವನ್ನೇ ಉಪಯೋಗಿಸಿದ ನಿತೀಶ್ ಕುಮಾರ್ ಇದು ಬಿಹಾರಕ್ಕೆ ಮಾಡಿದ ಅವಮಾನ ಎಂದು ಹೇಳಿದರು. ಮತ್ತದೇ ತಂತ್ರ ಕೇರಳದಲ್ಲೂ ಮೇಲ್ನೋಟಕ್ಕೆ ಯಶ ಕಂಡಿದೆ. ‘ಕೇರಳ ಅಸ್ಮಿತೆ’ ಯಶ ಕಂಡಿದೆ! ಅನವಶ್ಯಕ ವಿಚಾರಗಳಿಗೆ ಹೆಚ್ಚು ಪ್ರಚಾರ ಕೊಡುವ, ವೈಯಕ್ತಿಕ ಹೀಗಳಿಕೆಯನ್ನೇ ಹೆಚ್ಚಾಗಿ ಮಾಡುವ ಬಿಜೆಪಿಯ ತಂತ್ರಗಳು ಈಗ ಅವರಿಗೇ ತಿರುಗುಬಾಣವಾಗುತ್ತಿದೆ. ಫೋಟೋಶಾಪು ಕಲಿತವರು ಬೇರೆ ಪಕ್ಷದಲ್ಲಿ – ಆ ಪಕ್ಷದ ಬೆಂಬಲಿಗರಲ್ಲಿ, ಮತ್ತು ಆ ಪಕ್ಷಗಳನ್ನು ಬೆಂಬಲಿಸದ, ಆದರೆ ಬಿಜೆಪಿಯನ್ನು ವಿರೋಧಿಸುವವರಲ್ಲೂ ಇದ್ದಾರೆ ಎನ್ನುವುದು ಬಿಜೆಪಿಗೆ ಪದೇ ಪದೇ ಮನವರಿಕೆ ಮಾಡಿಕೊಡಲಾಗುತ್ತಿದೆ. ಈ ಫೋಟೋಶಾಪು, ಸಾಮಾಜಿಕ ಜಾಲತಾಣಗಳ ವಿಚಾರವೇನೇ ಇರಲಿ ಪೋಮೋನೆ ಮೋದಿ ಎಂದೆಲ್ಲ ಮಾತನಾಡುವುದು ಮಾತ್ರ ಸರಿಯಾದ ರೀತಿಯಲ್ಲ. ಮೋದಿ ತಪ್ಪಾಡಿದ್ದರೆ ಅದನ್ನು ವಿರೋಧಿಸಬೇಕೆ ಹೊರತು ಹೋಗು ಮಗನೆ ಮೋದಿ ಎಂದೆಲ್ಲ ಹೇಳುವುದು ಯಾವ ಸಂಪತ್ತಿಗೆ? ಮೋದಿಯ ಬಗ್ಗೆ ನಮಗೆ ಒಲವಿದೆಯೋ ವಿರೋಧವಿದೆಯೋ, ಅವರೂ ಈ ದೇಶದ ಪ್ರಜೆ, ಅವರನ್ನು ಹೋಗು ಎನ್ನುವ ಹಕ್ಕು ಯಾರಿಗೂ ಇಲ್ಲ. ಮೋದಿಯ ವಿರುದ್ಧ, ಬಿಜೆಪಿಯ ವಿರುದ್ಧ ಮಾತನಾಡಿದರೆ, ಬರೆದರೆ ‘ಹೋಗಿ ಪಾಕಿಸ್ತಾನಕ್ಕೆ’ ಎಂದಬ್ಬರಿಸುತ್ತಿದ್ದವರ ಲಿಸ್ಟಿನಲ್ಲಿ ಬಿಜೆಪಿಯ ಭಕ್ತಗಣವಷ್ಟೇ ಅಲ್ಲ ಅದರ ಮುಖಂಡರೂ ಇದ್ದರು. ಅದು ತಪ್ಪೆಂದಾದ ಮೇಲೆ ಮೋದಿಯನ್ನು ಹೋಗು ಎನ್ನುವುದು ಯಾವ ಕೋನದಿಂದ ಸರಿಯಾಗುತ್ತದೆ? ಅವರು ಮಾಡಿದರೆಂದು ಇವರು, ಇವರು ಮಾಡಿದರೆಂದು ಅವರು ಅವವೇ ತಪ್ಪುಗಳನ್ನು ಮಾಡಿಬಿಟ್ಟರೆ ಅವರಿಗೂ ಇವರಿಗೂ ವ್ಯತ್ಯಾಸಗಳೇನಿರುತ್ತವೆ?
No comments:
Post a Comment