May 27, 2016

ಮೇಕಿಂಗ್ ಹಿಸ್ಟರಿ: ಧರ್ಮದ ಪುನರುಜ್ಜೀವನ

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
27/05/2016

ಈ ಸಂಪುಟದ ಪ್ರಾರಂಭದಲ್ಲಿ ನಾವೀಗಾಗಲೇ ನೋಡಿರುವಂತೆ ಬ್ರಿಟೀಷ್ ವಸಾಹತುಶಾಹಿ ಮೈಸೂರಿನಲ್ಲಿ ಕೈಗೊಂಬೆ ರಾಜನನ್ನು ಕೂರಿಸಿದ ತಕ್ಷಣ ಮಾಡಿದ ಕೆಲಸವೆಂದರೆ, ಟಿಪ್ಪು ರದ್ದುಮಾಡಿದ್ದ ಮಠ ಮತ್ತು ಬ್ರಾಹ್ಮಣರಿಗೆ ಕೊಡಲಾಗಿದ್ದ ಇನಾಮು ಮತ್ತು ದಾನಧರ್ಮದ ಹಣವನ್ನು ಮತ್ತೆ ಕೊಡುವಂತೆ ಮಾಡಿದ್ದು. ಜೊತೆಗೆ ಈ ಪ್ರತಿಗಾಮಿ ಸಂಸ್ಥೆಗಳಿಗೆ ಹೊಸದಾಗಿ ಮತ್ತಷ್ಟು ಸಹಾಯಧನವನ್ನು ನೀಡಲಾಯಿತು. ಇದು ಬ್ರಾಹ್ಮಣ ದಿವಾನನನ್ನು ನೇಮಿಸಲಾಗಿದ್ದ ಮೈಸೂರಿಗಷ್ಟೇ ಸೀಮಿತವಾಗಿದ್ದ ಪ್ರಕ್ರಿಯೆಯಾಗಿರದೆ ಉಪಖಂಡದಲ್ಲಿ ಬ್ರಿಟೀಷ್ ವಸಾಹತುಶಾಹಿ ಅಳವಡಿಸಿಕೊಂಡ ಸಾಮಾನ್ಯ ನೀತಿಗಳಲ್ಲೊಂದಾಗಿತ್ತು. ಉತ್ತರ ಕರ್ನಾಟಕ ಸುತ್ತುತ್ತಿದ್ದ ಥಾಮಸ್ ಮನ್ರೋ, 1818ರಲ್ಲಿ ಎಲ್ಫಿನ್ ಸ್ಟೋನಿಗೆ ಬರೆದ ಪತ್ರದಲ್ಲಿ ಊಳಿಗಮಾನ್ಯತೆಯ ಸಾಂಸ್ಕೃತಿಕ ಸಂಸ್ಥೆಗಳೆಡೆಗೆ ಬ್ರಿಟೀಷರ ನೀತಿಗಳೇನಿರಬೇಕೆಂದು ತಿಳಿಸುತ್ತಾನೆ: “ಎಲ್ಲಾ ದಾನ ಧರ್ಮಗಳು ಮತ್ತು ಧಾರ್ಮಿಕ ಖರ್ಚುಗಳು, ಅದೆಷ್ಟೇ ಮೊತ್ತದ್ದಾಗಿರಬಹುದು, ನನ್ನ ಯೋಚನೆಯಂತೆ ಅದನ್ನು ಮುಂದುವರಿಸಬೇಕು; ಅದರಲ್ಲಿನ ಬಹುತೇಕ ಭಾಗ ಕಾಲ ಸವೆದಂತೆ ಪ್ರತ್ಯೇಕವಾಗಿಬಿಡುತ್ತದೆ ಮತ್ತು ಖಾಸಗಿ ಹಕ್ಕುಗಳನ್ನು ಉಲ್ಲಂಘಿಸದೆ ಹಾಗೂ ಧಾರ್ಮಿಕ ಪೂರ್ವಾಗ್ರಹಗಳನ್ನು ತೊಡೆಯದೆ ಅದನ್ನು ಮುಟ್ಟಲಾಗುವುದಿಲ್ಲ. ಇದರಲ್ಲಿನ ಹೆಚ್ಚಿನ ಭಾಗ ಕೂಡ, ಅನಧಿಕೃತ ಸಹಾಯಧನ ಮತ್ತು ಮೋಸದಿಂದ ಪಡೆಯಲಾಗಿರುತ್ತದೆ ಎನ್ನುವುದರ ಬಗ್ಗೆ ಯಾವುದೇ ಅನುಮಾನ ಬೇಡ. 

ನಾವು, ನನ್ನ ಯೋಚನೆಯಂತೆ ಧಾರ್ಮಿಕ ಸಂಸ್ಥೆಗಳು, ದಾನಧರ್ಮಗಳು, ಜಾಗೀರುಗಳು, ದೇಶಮುಖರು ಮತ್ತು ಇತರೆ ಸಾರ್ವಜನಿಕ ನೌಕರರನ್ನು ಇರುವಂತೆಯೇ ಉಳಿಸಬೇಕು….” (182) 

ಬುಚನನ್ನನ ತನಿಖೆಗಳು ಬ್ರಾಹ್ಮಣ ಮತ್ತು ಲಿಂಗಾಯತ ಮಠಗಳನ್ನು ಪೂರ್ಣಯ್ಯ ಮರುಸ್ಥಾಪಿಸಿದ ಅನೇಕ ದೃಷ್ಟಾಂತಗಳನ್ನು ನೀಡುತ್ತಾನೆ. ಇಕ್ಕೇರಿ ಪಾಳೇಗಾರರ ಲಿಂಗಾಯತ ಗುರುಗಳ ಉತ್ತರಾಧಿಕಾರಿಗಳಾದ ಹುಜಿನಿ ಸ್ವಾಮಿಯವರ ಉದಾಹರಣೆಯಾಗಿ ನೋಡಬಹುದು. (183) ಅದೇ ರೀತಿ ಕೋಲಾರದ ಜಾಮಗಲ್ಲಿನ ಜಂಗಮರಿಗೆ ಹೊಸದಾಗಿ ಸಹಾಯಧನವನ್ನು ನೀಡಲಾಯಿತು. (184) ಪೂರ್ಣಯ್ಯನ ಆಡಳಿತಾವಧಿಯಲ್ಲಿಯೇ ಕುಮಾರಪುರದ ಶ್ರೀವೈಷ್ಣವ ಬ್ರಾಹ್ಮಣರಿಗೆ ಬಿಳಿಗಿರಿರಂಗನಬೆಟ್ಟದ 22,300 ಎಕರೆ ದಟ್ಟ ಕಾಡನ್ನು ಸರ್ವಮಾನ್ಯವಾಗಿ ಉಡುಗೊರೆ ನೀಡಲಾಯಿತು, ಸೋಲಿಗ ಆದಿವಾಸಿಗಳ ಬದುಕನ್ನು ಆಕ್ರಮಿಸಲಾಯಿತು. (185) ಇದೇ ರೀತಿ ಶೃಂಗೇರಿ ಮಠಕ್ಕೆ 150 ಹಳ್ಳಿಗಳನ್ನು ಅಧಿಕೃತವಾಗಿ ಜಾಗೀರಾಗಿ ನೀಡಲಾಯಿತು. ಮಠದವರು ರೈತರ ಮೇಲೆ ಪರಾವಲಂಬಿಗಳಾಗಿ ಅಸ್ತಿತ್ವ ಉಳಿಸಿಕೊಂಡರು. 

ಮೈಸೂರು, ಬ್ರಿಟೀಷ್ ಆಕ್ರಮಣದ ವಿರುದ್ಧ ನಡೆಸಿದ ನಾಲ್ಕು ದಶಕದ ದೀರ್ಘ ಕದನದ ಸಮಯದಲ್ಲಿ, ವೈದಿಕ ಬ್ರಾಹ್ಮಣರ ಮತ್ತು ಮಠಾಧಿಪತಿಗಳಿಗಿದ್ದ ಸವಲತ್ತುಗಳನ್ನು ಕಿತ್ತುಕೊಂಡಿದ್ದ ಟಿಪ್ಪುವಿನ ವಿರುದ್ಧ ಪಾಳೇಗಾರರು ಮಾಡಿದಂತೆಯೇ ಈ ಬ್ರಾಹ್ಮಣರೂ ಮೋಸ ಮಾಡಿ ವಸಾಹತು ಆಕ್ರಮಣಕಾರರನ್ನು ಪ್ರೋತ್ಸಾಹಿಸಿದರು. ಧರ್ಮಸ್ಥಳದ ಹೆಗ್ಗಡೆ ಧರ್ಮಾಧಿಕಾರಿಗಳು ಉಜಿರೆಯ ಕೋಟೆಯನ್ನು ಟಿಪ್ಪು ಸುಲ್ತಾನನಿಂದ ವಶಪಡಿಸಿಕೊಳ್ಳಲು ಬ್ರಿಟೀಷರಿಗೆ ಕೊಟ್ಟ ಸಹಕಾರದ ಬಗ್ಗೆ ರಾಮಕೃಷ್ಣ ಮತ್ತು ಗಾಯಿತ್ರಿ ನಮಗೆ ತಿಳಿಸುತ್ತಾರೆ. (186) ಹಿಂದೂ ಊಳಿಗಮಾನ್ಯ ಪುರೋಹಿತರು ಬ್ರಿಟೀಷರು ಕರ್ನಾಟಕವನ್ನು ಅತಿಕ್ರಮಿಸುವುದಕ್ಕೆ ಶುಭ ಕೋರುವುದಷ್ಟೇ ಅಲ್ಲದೆ, ಜನರನ್ನು ಮತ್ತು ಸಾಮಗ್ರಿಗಳನ್ನು ಪೂರೈಸಿದರು; ಮೈಸೂರು ಸಂಪೂರ್ಣವಾಗಿ ವಿದೇಶಿ ಆಕ್ರಮಣಕಾರರ ವಶವಾಗುವುದಕ್ಕೆ ಮೊದಲೇ ವಸಾಹತುಶಾಹಿಯ ಮುಂದಾಳತ್ವದ ಪ್ರತಿಗಾಮಿ ಮೈತ್ರಿಕೂಟದ ಪ್ರಮುಖ ಭಾಗವಾದರು. 

ನಗರದ ಫೌಜದಾರಿಯೊಂದರಲ್ಲೇ ಬ್ರಾಹ್ಮಣರ 120 ಅಗ್ರಹಾರಗಳಿದ್ದವು ಎಂದು ಸಿದ್ಧಲಿಂಗಸ್ವಾಮಿ ತಿಳಿಸುತ್ತಾರೆ. (187) 

ಸೆಬಾಸ್ಟಿಯನ್ ಜೋಸೆಫರ ಗ್ರಂಥ State and the ritual in the nineteenth century Mysore ಪುಸ್ತಕ ಹೀಗೆ ಕೊನೆಯಾಗುತ್ತದೆ: “ವಸಾಹತು ಶಕ್ತಿಗಳು ನೇರವಾಗಿ ಮತ್ತು ಪರೋಕ್ಷವಾಗಿ ಸಂಪ್ರದಾಯಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತು, ಸಮಾಜವನ್ನು ಮೂಢನಂಬಿಕೆಯ ದಾಸ್ಯದಲ್ಲಿ, ಅಜ್ಞಾನದಲ್ಲಿ ಹಿಂದುಳಿಯುವಂತೆ ಮಾಡಲು”. (188) ಈ ಪ್ರಕ್ರಿಯೆಯ ವಿವರಗಳನ್ನು ಒದಗಿಸುತ್ತ ಸೆಬಾಸ್ಟಿಯನ್ ಹೇಳುತ್ತಾರೆ: “ಪೂರ್ಣಯ್ಯ ಬ್ರಿಟೀಷರ ಆಳ್ವಿಕೆಯಲ್ಲಿ ದಿವಾನರಾಗಿ ಅಧಿಕಾರ ವಹಿಸಿಕೊಂಡ ನಂತರ ದೊಡ್ಡ ಮಟ್ಟದಲ್ಲಿ ಹಣಕ್ಕೆ ಬದಲಾಗಿ ಭೂಮಿಯನ್ನು ವಿನಿಮಯ ಮಾಡಿಸಿದ್ದರು. ದೇವಸ್ಥಾನದ ಜಾಗಗಳನ್ನು, ಭಟ್ಟಮಾನ್ಯ ಅಥವಾ ಅಗ್ರಹಾರದ ಭೂಮಿಗಳನ್ನು ಪುನರ್ ಸ್ಥಾಪಿಸಿದರು. ಪೂರ್ಣಯ್ಯನವರ ಕೆಲವು ವರ್ಷದ ಆಳ್ವಿಕೆ ಪವಾಡದ ರೀತಿಯಲ್ಲಿ ದೇವಸ್ಥಾನಗಳ, ಛತ್ರಗಳ, ಮುಸಾಫಿರ್ ಖಾನಗಳ ಸಂಖೈಯನ್ನು ಹೆಚ್ಚಿಸಿತು. 

ಈ ಕೆಳಗಿನ ಪಟ್ಟಿ 1801ರಲ್ಲಿ ಮತ್ತು 1804ರಲ್ಲಿದ್ದ ಧಾರ್ಮಿಕ ಸಂಸ್ಥೆಗಳ ಅಂಕಿಸಂಖೈಯನ್ನು ನೀಡುತ್ತದೆ”. (188)


ಜಿ.ಹೆಚ್. ಗೋಪಾಲ್ ಊಳಿಗಮಾನ್ಯತೆಯ ಪುರೋಹಿತವರ್ಗದೆಡೆಗಿದ್ದ ಭಕ್ತಿಭಾವದ ಬಗೆಗಿನ ಮಾಹಿತಿಯನ್ನು ನೀಡುತ್ತಾರೆ. (189)



ದಾನದತ್ತಿಯ ಸಂಸ್ಥೆಗಳಿಗೆ ಕೊಡುವ ಮೊತ್ತ 1810-1811ರಲ್ಲಿ 18,825 ಪಗೋಡಾಗಳಷ್ಟಿದ್ದರೆ 1829-30ರಷ್ಟೊತ್ತಿಗೆ 3,11,414 ಪಗೋಡಾ ಗಳಾಗಿತ್ತು (ಅಂದರೆ 9,34,242 ರುಪಾಯಿ). (190) ವಸಾಹತಿನ ಕೈಗೊಂಬೆ ಆಡಳಿತದ ಅರೆಊಳಿಮಾನ್ಯ ರಾಜರ ಅತ್ಯಂತ ದೊಡ್ಡ ಖರ್ಚು ಧರ್ಮದೆಡೆಗಾಗಿತ್ತು. 1829-30ರಲ್ಲಿ ಕೃಷ್ಣರಾಜ ಒಡೆಯರ್ ದಾನಕ್ಕೆಂದು ಕೊಟ್ಟ ಮೊತ್ತ, ಇದು ಧಾರ್ಮಿಕ ಕಾರ್ಯಗಳೆಡೆಗೆ ಮಾಡಿದ ಖರ್ಚಿನ ಒಂದಂಶ ಮಾತ್ರ, ಬ್ರಿಟೀಷರಿಗೆ ಕಕ್ಕುತ್ತಿದ್ದ ಮೊತ್ತದ ಮೂರನೇ ಒಂದಂಶಕ್ಕಿಂತ ಹೆಚ್ಚಿನದಾಗಿತ್ತು. ವಸಾಹತುಶಾಹಿಗಳ ಮುನ್ನಡೆ ಈ ಧಾರ್ಮಿಕ ಪ್ರತಿಗಾಮಿಗಳಿಗೆ ದೈವದತ್ತ ವರದಂತಾಯಿತು. ರಾಜ್ಯದ ಜೊತೆಗಿನ ಸಂಬಂಧ ಗಟ್ಟಿಗೊಳಿಸಿಕೊಂಡ ಈ ಧಾರ್ಮಿಕ ಪ್ರತಿಗಾಮಿಗಳು ಶತಮಾನದಿಂದ ಇಲ್ಲದಿದ್ದ ಬಲ ಪಡೆದರು ಮತ್ತು ತಮ್ಮ ಸಿದ್ಧಾಂತವನ್ನು ನೆಲೆಗೊಳಿಸಿಕೊಂಡರು.

ಈ ಧಾರ್ಮಿಕ ಪುನರುತ್ಥಾನ ಆ ಕಾಲದ ಸಾಮಾಜಿಕ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಿತು. ವಸಾಹತು ಆಕ್ರಮಣದ ಅಘಾತವನ್ನು ಕಡಿಮೆಗೊಳಿಸಿದಂತೆ ಮಾಡಿತು. ವಸಾಹತು ಆಳ್ವಿಕೆ ಮತ್ತು ಊಳಿಗಮಾನ್ಯತೆಯ ಮರುಕಳಿಕೆಯ ಪರಿಣಾಮಗಳನ್ನು ತಗ್ಗಿಸುವ ಪ್ರತಿಔಷಧದಂತೆ ಕೆಲಸ ಮಾಡಿತು. ಈ ಧಾರ್ಮಿಕ ಸಂಸ್ಥೆಗಳು ಮಾರಣಾಂತಿಕ ಕರ್ಮ ಸಿದ್ಧಾಂತವನ್ನು ವೈಭವದ ಔದಾರ್ಯದೊಂದಿಗೆ ಪ್ರಸರಿಸದಿದ್ದರೆ ಕರ್ನಾಟಕವನ್ನು ವಸಾಹತುಶಾಹಿ ಶಕ್ತಿಗಳು ಇಷ್ಟು ಸುಲಭವಾಗಿ ವಶದಲ್ಲಿಟ್ಟುಕೊಳ್ಳುತ್ತಿದ್ದುದು ಅನುಮಾನವೇ.

ಟಿಪ್ಪು ಸುಲ್ತಾನನನ್ನು ದ್ರೋಹಿ ಎಂದು ಆರೋಪಿಸುವ ಹಿಂದೂ ಕೋಮುವಾದಿಗಳು ಒಡೆಯರ್ ಧಾರ್ಮಿಕ ಪ್ರತಿಗಾಮಿತನವನ್ನು ಪುನರ್ ಸ್ಥಾಪಿಸಿದ್ದರ ಬಗ್ಗೆ ಮೌನವಾಗಿದ್ದುಬಿಡುತ್ತಾರೆ. ಟಿಪ್ಪುವಿನ ವಿರುದ್ಧದ ತಮ್ಮ ದ್ವೇಷವನ್ನು ಹತ್ತಿಕ್ಕಲಾಗದೆ ಬಡಬಡಿಸುತ್ತಾರೆ.

ಮುಂದಿನ ವಾರ:
ಜಾತಿ ದೌರ್ಜನ್ಯದ ಹೆಚ್ಚಳ

No comments:

Post a Comment