May 24, 2016

'ಹೊನಲಿಗೆ' ಮೂರು ವರುಷದ ಸಂಭ್ರಮ.

ಡಾ. ಅಶೋಕ್. ಕೆ. ಆರ್
ಭಾಷೆಯೊಂದು ನಿಂತ ನೀರೇ? ಅಥವಾ ಕಾಲದಿಂದ ಕಾಲಕ್ಕೆ ಅದರಲ್ಲಿ ಬದಲಾವಣೆಗಳಾಗಬೇಕಿರುವುದು ಅವಶ್ಯಕವೇ? ಇಂತಹುದೊಂದು ಪ್ರಶ್ನೆಗಳನ್ನು ಮೂಡಿಸುವುದು ನೀವು ಹೊನಲು (honalu.net ) ವೆಬ್ ಪುಟವನ್ನು ವೀಕ್ಷಿಸಿದಾಗ. ಅಲ್ಲಿ ಆಡು ಭಾಷೆಯ ಕನ್ನಡವನ್ನೇ 'ಎಲ್ಲರ ಕನ್ನಡದ' ಹೆಸರಿನಲ್ಲಿ ಹೆಚ್ಚು ಉಪಯೋಗಿಸಲಾಗಿದೆ. ಗ್ರಾಂಥಿಕ ಕನ್ನಡವನ್ನಷ್ಟೇ ಓದಿಕೊಂಡು ಬೆಳೆದವರಿಗೆ ಇದೇನಿದು ವಿಚಿತ್ರವೆಂದು ಅನ್ನಿಸುವುದು ಸಹಜ. ಇವರ ಈ ಪ್ರಯತ್ನ ಒಳ್ಳೆಯದಾ ಕೆಟ್ಟದ್ದಾ ಎಂದು ಇದಮಿತ್ಥಂ ಎಂದು ಹೇಳಿಬಿಡುವುದರ ಮೊದಲು ಹತ್ತಲವು ದಿಕ್ಕಿನಲ್ಲಿ ತೋಚಿದ ರೀತಿಯಲ್ಲಿ ಹರಿಯುವ ಭಾಷೆಗಷ್ಟೇ ಜೀವಂತಿಕೆ ಹಾಗೂ ಕಾಲದ ಮಿತಿಗಳನ್ನು ಮೀರಿ ಬೆಳೆಯುವ ಸಾಧ್ಯತೆಯಿರುವುದು ಎನ್ನುವುದನ್ನು ನೆನಪಿಟ್ಟುಕೊಳ್ಳುವುದು ಅತ್ಯವಶ್ಯಕ.
ಒಮ್ಮೆ ಶಾಲಾ ದಿನಗಳನ್ನು ನೆನಪಿಸಿಕೊಳ್ಳಿ, ಮನೆಯಲ್ಲಿ ಸ್ನೇಹಿತರೊಡನೆ ಅಷ್ಟು ಸರಾಗವಾಗಿ ಉಲಿಯುತ್ತಿದ್ದ ಕನ್ನಡ, ಶಾಲೆಗೆ ಬರುತ್ತಿದ್ದಂತೆ ಬ್ಬೆ ಬ್ಬೆ ಬ್ಬೆ ಎನ್ನಲಾರಂಭಿಸುತ್ತಿತ್ತು. ಧರಣಿ ಎಂದು ಬರೆಯುವ ಬದಲು ದರಣಿ ಎಂದು ಬರೆದುಬಿಟ್ಟರೆ ಮಹಾಪರಾಧವಾಗುತ್ತಿತ್ತು. ಇನ್ನು ಸಂಸ್ಕೃತ ಪದಗಳ ತತ್ಸಮ - ತದ್ಭವದ ಗೋಳಂತೂ ಅನುಭವಿಸಿದವರಿಗೇ ಗೊತ್ತು. ವ್ಯಾಕರಣ ಕಲಿಯಬೇಕು ಎನ್ನುವುದನ್ನು ಒಪ್ಪಬಹುದಾದರೂ ಭಾಷೆಯನ್ನು ಕಬ್ಬಿಣದ ಕಡಲೆಯನ್ನಾಗಿಸಿ, 'ಪಾಸಾದ್ರೆ ಸಾಕು, ಕನ್ನಡ ಪುಸ್ತಕ ಮುಟ್ಟಲ್ಲ' ಅನ್ನೋ ನಿರಭಿಮಾನವನ್ನೂ ಮೂಡಿಸಬಾರದಲ್ಲವೇ? ಇದಕ್ಕೆ ಉತ್ತರವಾಗಿ ಎಲ್ಲರ ಕನ್ನಡದ ಮೂಲಕ ಹೊನಲು ಎಂಬ ವೆಬ್ ಪುಟದ ಮೂಲಕ, ಅಂತರ್ಜಾಲದ ಮಟ್ಟಿಗೆ ಹೊಸ ಪ್ರಯತ್ನ ಪ್ರಾರಂಭವಾಗಿದೆ. 
ಹೊನಲು ತಂಡದ ಪ್ರಯತ್ನ ವಿಚಿತ್ರ ಎನ್ನಿಸಬಹುದು, ಅಸಹ್ಯ ಎನ್ನಿಸಬಹುದು, ಮೊನ್ನೆ ಫೇಸ್ ಬುಕ್ಕಿನಲ್ಲೊಂದು ಪೋಸ್ಟಿಗೆ ಸಹೃದಯರೊಬ್ಬರು ಹೊನಲುವಿನದು ವಿಧ್ವಂಸಕ ಕೃತ್ಯ ಎಂದು ಹೇಳಿದ್ದರು. ಈ ರೀತಿಯ ಎಲ್ಲಾ ಟೀಕೆಗಳ ಹಿಂದಿರಬಹುದಾದ 'ಭಾಷಾ ಶುದ್ಧತೆ'ಯನ್ನು ನಮ್ಮ ತಲೆಗೆ ತುಂಬಿರುವುದು ಮತ್ತದೇ ನಮ್ಮ ಶಾಲಾ ದಿನಗಳು ಎಂದರೆ ತಪ್ಪಲ್ಲ. ಭಾಷೆಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರಬೇಕು. ಈ ಹೊಸ ಪ್ರಯೋಗಗಳು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತವೋ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯುತ್ತದಾದರೂ ಈ ಪ್ರಯೋಗಗಳೇ ಭಾಷೆಯನ್ನು ಜೀವಂತವಾಗಿಡುವ ಸಂಗತಿಗಳು ಎನ್ನುವುದು ಸತ್ಯ. ಪ್ರಯೋಗಗಳೇ ಇಲ್ಲದಿದ್ದರೆ, ನಾವಿನ್ನೂ ಹಳಗನ್ನಡದಲ್ಲೋ, ಅಥವಾ ಅದಕ್ಕೂ ಮುಂಚೆ ಇದ್ದಿರಬಹುದಾದ ಭಾಷಾಶೈಲಿಯಲ್ಲೋ ಮಾತನಾಡುತ್ತಿದ್ದೆವು, ಬರೆಯುತ್ತಿದ್ದೆವು. ಇದೇನಿದು ಹಳೆಗನ್ನಡ ಹಿಂಗಿದೆ ಎಂದೊಬ್ಬರಿಗ್ಯಾರಿಗೋ ಅನ್ನಿಸಿ ಸಿದ್ಧ ಮಾದರಿಯ ಹಾದಿಯಿಂದ ಹೊರಬಂದಿದ್ದಕ್ಕೇ ಅಲ್ಲವೇ ನಾವಿವತ್ತೂ ಬರೆಯುತ್ತಿರುವ ಕನ್ನಡ ಹಳೆಗನ್ನಡಕ್ಕಿಂತ ಸುಲಭವಾಗಿರುವುದು? ಹೊನಲುವಿನ ತಂಡದ ಸದಸ್ಯರ ಶ್ರಮ ಎಂತದ್ದು ಎಂದು ಅರಿವುದಕ್ಕೆ ಸುಮ್ಮನೆ ಒಂದು ಪುಟ ಮಾತನಾಡುವ ಕನ್ನಡದಲ್ಲಿ ಬರೆದು ನೋಡಿ! ನಾನೂ ಪ್ರಯತ್ನಿಸಿದ್ದೆ, ಟೈಪಿಸಲು ಕುಳಿತರೆ ಸಾಕು ಗ್ರಾಂಥಿಕ ಕನ್ನಡವೇ ಬೆರಳ ತುದಿಯಲ್ಲಿರುತ್ತದೆ! ಮಾತನಾಡಲಾರಂಭಿಸಿದರೆ ಗ್ರಾಂಥಿಕ ಕನ್ನಡ ಹತ್ತಿರವೂ ಸುಳಿಯುವುದಿಲ್ಲ! ಎಲ್ಲರ ಕನ್ನಡದಲ್ಲಿ ಬರೆಯುವುದು ಗ್ರಾಂಥಿಕ ಕನ್ನಡದಲ್ಲಿ ಬರೆಯುವುದಕ್ಕಿಂತ ಕಷ್ಟಕರ....(ನನ್ನ ಕಡೆಯಿಂದ ಒಂದು ತಪ್ಪೊಪ್ಪಿಗೆಯೆಂದರೆ, ಬರ್ಕೊಡ್ತೀನಿ ಬರ್ಕೊಡ್ತೀನಿ ಎಂದು ಎರಡು ಮೂರು ಸಲ ಹೇಳಿ ಹೊನಲಿಗಾಗಲೀ ಅರಿಮೆಗಾಗಲೀ ಯಾವ ಲೇಖನವನ್ನೂ ಬರೆಯದೇ ಇರುವುದು! ಇನ್ನು ಮೇಲಾದರೂ ಬರೆಯಲು ಪ್ರಯತ್ನಿಸಬೇಕು!)
ಅಂದಮಾತ್ರಕ್ಕೆ ಹೊನಲು ವೆಬ್ ಪುಟದಲ್ಲಿ ಎಲ್ಲರ ಕನ್ನಡವೇ ಶ್ರೇಷ್ಟವೆಂಬ ಅಹಂ ತುಂಬಿ ಹೋಗಿದೆ ಎಂದು ಭಾವಿಸುವುದು ಬೇಡ. ಆ ರೀತಿ ಆಗಿಹೋದರೆ, ಗ್ರಾಂಥಿಕ ಕನ್ನಡವೇ ಶ್ರೇಷ್ಟ, ಸಂಸ್ಕೃತ ಪದಗಳ ಕನ್ನಡವೇ ಶ್ರೇಷ್ಟ ಎಂದುಕೊಳ್ಳುವವರಿಗೂ ಹೊನಲು ತಂಡಕ್ಕೂ ವ್ಯತ್ಯಾಸ ಉಳಿಯುವುದಿಲ್ಲ. ಸಾಧ್ಯವಾದಷ್ಟು ಆಡು ಮಾತಿನ ಕನ್ನಡ ಉಪಯೋಗಿಸಿ ಎನ್ನುವುದಷ್ಟೇ ಅವರ ವಿನಂತಿ. ಹೊನಲುವಿನ ಈ ಪ್ರಯತ್ನಕ್ಕೆ ಈಗ ಮೂರು ವರುಷದ ಸಂಭ್ರಮ. ಎಲ್ಲರ ಕನ್ನಡವನ್ನು ಮುಂದೊಯ್ಯಲು ಇವರು ಅನುಸರಿಸಿರುವ ದಾರಿಯೂ ಮಾದರಿಯಾಗುವಂತದ್ದು. ವಿಜ್ಞಾನದಿಂದ ಹಿಡಿದು ಅಡುಗೆಯವರೆಗೆ, ಮೊಬೈಲ್ ತಂತ್ರಾಂಶದಿಂದ ಹಿಡಿದು ಕಾರು ಬೈಕುಗಳವರೆಗೆ, ಕತೆ ಕವಿತೆಗಳೆಲ್ಲವೂ ಹೊನಲುವಿನ ಒಡಲಲ್ಲಿದೆ. ಜೊತೆಗೆ ವಿಜ್ಞಾನಕ್ಕೆಂದೇ ಮೀಸಲಾದ ಅರಿಮೆ ಎಂಬ ವೆಬ್ ಪುಟವನ್ನೂ ಇತ್ತೀಚೆಗೆ ಶುರು ಮಾಡಿದ್ದಾರೆ. 
ಈ ಭಾನುವಾರ ಬಿಪಿ ವಾಡಿಯಾ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಹೊನಲು, ಎಲ್ಲರ ಕನ್ನಡದ ಬಗ್ಗೆ ಪ್ರೀತಿಯಿರುವವರು, ದ್ವೇಷವಿರುವವರು, ಕನ್ನಡವನ್ನು ಹಾಳು ಮಾಡುತ್ತಿದ್ದಾರೆ ಎಂದು ಬಯ್ದುಕೊಳ್ಳುವವರು, ಭಾಷಾ ಬೆಳವಣಿಗೆಯ ಬಗ್ಗೆ ಆಸಕ್ತರಾಗಿರುವವರು ಈ ಕಾರ್ಯಕ್ರಮಕ್ಕೆ ಬಿಡುವು ಮಾಡಿಕೊಂಡು ಬನ್ನಿ. ಮತ್ತೇನಲ್ಲದಿದ್ದರೂ ಇಂತಹ ಕಾರ್ಯಕ್ರಮಗಳಿಂದ ಒಂದಷ್ಟು ಹೊಸ ಗೆಳೆಯರ ಪರಿಚಯವಾಗುತ್ತದೆ, ಹೊಸ ವಿಚಾರಗಳು ತಿಳಿಯುತ್ತದೆ. ಭಾನುವಾರ ಸಿಗೋಣ.

No comments:

Post a Comment