(ಸಾಂದರ್ಭಿಕ ಚಿತ್ರ) |
26/04/2016
ಇವತ್ತು ಇಡೀ ರಾಜ್ಯ ಭೀಕರ ಬರಗಾಲಕ್ಕೆ ಸಿಲುಕಿ ತತ್ತರಿಸುತ್ತಿದೆ. ಜಾನುವಾರುಗಳಿಗೆ ಮೇವಿರಲಿ, ಬಹಳಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಜನ ಪರದಾಡುವ ಸ್ಥಿತಿ ತಲೆದೋರಿದೆ. ಬಹುತೇಕ ಮಳೆಯನ್ನೇ ನಂಬಿ ಬದುಕುವ ರೈತಾಪಿ ಮತ್ತು ಕೃಷಿಕಾರ್ಮಿಕರು ಬದುಕುವುದೇ ಕಷ್ಟವಾಗಿದೆ. ನಿಗದಿತ ಸಮಯಕ್ಕೆ ಮಳೆಬಾರದೆ ಎರಡು ಮೂರು ವರ್ಷಗಳಿಗೊಮ್ಮೆ ಬರಗಾಲದ ಸುಳಿಗೆ ಸಿಕ್ಕಿ ನರಳುವುದು ಕರ್ನಾಟಕದ ಜನತೆಗೆ ಮಾಮೂಲಾಗಿ ಬಿಟ್ಟಿದೆ. ರಾಜ್ಯದ ಒಟ್ಟು ಅರಣ್ಯಪ್ರದೇಶ ನಾಶವಾಗುತ್ತಾ ಬಂದ ಪರಿಣಾಮವಾಗಿ ಕಾಡುತ್ತಿರುವ ಈ ಬರಗಾಲದ ಭೀಕರ ಚಕ್ರದ ಸುಳಿಯ ಬಗ್ಗೆ ಅರಿವಿದ್ದರೂ ಅರಿವಿಲ್ಲದಂತೆ ವರ್ತಿಸುವ ನಮ್ಮ ಪ್ರಭುತ್ವ ತನ್ನ ಎಂದಿನ ನಿದಾನಗತಿಯ ಧೋರಣೆಗಳಿಂದ ಪರಿಸ್ಥಿತಿಯನ್ನು ಇನ್ನಷ್ಟು ಘೋರಗೊಳಿಸುತ್ತಿದೆ. ಇಂತಹ ಸಮಯದಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸಲು ಬೇಕಾದ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸದ ರಾಜಾಕಾರಣಿಗಳು, ಆತ್ಮಸಾಕ್ಷಿಯನ್ನು ಕಳೆದುಕೊಂಡ ಅಧಿಕಾರಶಾಹಿಗಳ ಆಟಾಟೋಪಗಳು ಜನತೆಯನ್ನು ರೊಚ್ಚಿಗೇಳಿಸುವ ಮಟ್ಟಿಗೆ ನಿರ್ಲಜ್ಜ ನಿಶ್ಯಕ್ತಿಯನ್ನು ಪ್ರದರ್ಶಿಸುತ್ತಿವೆ.
ಹೀಗೆ ಸರದಿಯಂತೆ ಬಂದೆರಗುತ್ತಿರುವ ಬರಗಾಲಗಳೆಲ್ಲ ಬಹುತೇಕ ಮಾನವ ನಿರ್ಮಿತವಾದವೆಂಬುನ್ನು ನಾವು ಅರ್ಥಮಾಡಿಕೊಳ್ಳಬೇಕು. ಬರಗಾಲದ ಮೂಲ ಕಾರಣ ಮಳೆ ಬಾರದೆ ಇರುವುದಾದರೂ, ಮಳೆ ಬಾರದೇ ಇರುವುದಕ್ಕೆ ಕಾರಣ ಮಾತ್ರ ಮನುಷ್ಯನ ಆಧುನಿಕ ಬದುಕಿನ ಶೈಲಿಯಾಗಿದೆ. ಆದರೆ ಹೀಗೆ ಬರದ ಕಾರಣ ಹುಡುಕುತ್ತಾ ಅದರ ಪರಿಹಾರಕ್ಕೆ ಹೊರಡುವುದು ಸದ್ಯಕ್ಕೆ ಆಗದ ಮಾತು. ಈಗಿನ ತುರ್ತಿರುವುದು ಬಂದೆರಗಿದ ಬರಗಾಲವನ್ನೆದರಿಸಲು ನಾವು ಅಂದರೆ ಸರಕಾರ ಏನು ಮಾಡಬೇಕೆಂಬುದಾಗಿದೆ. ಆದ್ದರಿಂದ ಕಳೆದ ವರ್ಷ ಬಿದ್ದ ಅತಿ ಕಡಿಮೆ ಮಳೆಯ ಪ್ರಮಾಣದಿಂದಾಗಿ ಈ ವರ್ಷ ಬರಗಾಲ ಎದುರಾಗುವುದು ಎಲ್ಲರಿಗೂ ಮೊದಲೇ ಗೊತ್ತಾಗಿತ್ತು. ಹಾಗಾಗಿ ನಮ್ಮ ಸರಕಾರಗಳು ಇದನ್ನು ಎದುರಿಸಿ,ಬರನಿರ್ವಹಣೆ ಮಾಡಲು ಹಾಕಿಕೊಂಡಿರಬಹುದಾದ ಕಾರ್ಯಕ್ರಮಗಳ ಸ್ವರೂಪವನ್ನು ಅವಲೋಕಿಸುವುದು ನನ್ನ ಉದ್ದೇಶವಾಗಿದೆ.
ಮೊದಲಿಗೆ ನಾವು ಕರ್ನಾಟಕ ರಾಜ್ಯದೊಳಗಿನ ಬರಗಾಲದ ವ್ಯಾಪ್ತಿ ಎಷ್ಟು, ಎಷ್ಟು ಜನ ಮತ್ತು ಜಾನುವಾರುಗಳು ಬರದಿಂದ ಸಂಕಷ್ಟಕ್ಕೀಡಾಗಿವೆ ಎಂಬುದನ್ನು ಅದ್ಯಯನ ಮಾಡಿ ನಂತರ ಸರಕಾರ ರೂಪುಗೊಳಿಸಿದ ಯೋಜನೆಗಳನ್ನು ಮತ್ತು ಅವನ್ನು ಕಾರ್ಯರೂಪಕ್ಕಿಳಿಸಿದ ಬಗೆಗಿನ ವಿವರಗಳನ್ನು ವಿಶ್ಲೇಷಿಸಬೇಕಾಗುತ್ತದೆ.
ಕಳೆದ ವರ್ಷದ ಸೆಪ್ಟೆಬಂರ್ ಅಂತ್ಯದ ಹೊತ್ತಿಗೆ ಸ್ವತ: ಕರ್ನಾಟಕ ಸರಕಾರವೇ 30 ಜಿಲ್ಲೆಗಳ ಒಟ್ಟು 98 ತಾಲೂಕುಗಳು ಬರಪೀಡಿತವೆಂದು ಅಧಿಕೃತವಾಗಿ ಘೋಷಿಸಿತ್ತು. ಜೊತೆಗೆ ಬರದ ನಿರ್ವಹಣೆಗಾಗಿ ಕೇಂದ್ರಸರಕಾರವು ಸುಮಾರು 3050 ಕೋಟಿ ರೂಪಾಯಿಗಳ ಸಹಾಯಧನ ಬಿಡುಗಡೆ ಮಾಡಬೇಕೆಂದು ಕೇಳಿಕೊಂಡಿತ್ತು. ತಾಂತ್ರಿಕವಾಗಿ ನೋಡಿದರೆ ಕರ್ನಾಟಕದ ಸುಮಾರು 12 ಜಿಲ್ಲೆಗಳು ತೀರಾ ಕನಿಷ್ಠ ಮಳೆಯನ್ನು ಪಡೆದಿದ್ದು ಬರದ ಛಾಯೆ ಅಂದೇ ಆವರಿಸತೊಡಗಿತ್ತು. ವಿವಿಧ ಸಚಿವಾಲಯದ ಜಂಟಿ ಸಮಿತಿಗಳು ಪರಿಸ್ಥಿತಿಯ ಅಧ್ಯಯನಕ್ಕೆ ಬೇಟಿಯನ್ನೂ ನೀಡಿದವು. ಕಳೆದ ನಲವತ್ತು ವರ್ಷಗಳಲ್ಲೇ ಅತ್ಯಂತ ಬೀಕರ ಬರಗಾಲ ಬಂದೆರಗುವ ಮುನ್ಸೂಚನೆ ಅಂದೇ ಸಿಕ್ಕಿತ್ತು. ಇವತ್ತು ರಾಜ್ಯದ ಜಲಾಶಯಗಳ ನೀರಿನ ಮಟ್ಟವನ್ನು ನಾವು ಸುಮ್ಮನೆ ಗಮನಿಸಿದರೂ ಸಾಕು ಇದರ ಅರಿವಾಗುತ್ತದೆ. ಎಂದಿನಂತೆ ನಮ್ಮ ಮುಖ್ಯಮಂತ್ರಿಗಳು ಬರ ಪರಿಹಾರಕ್ಕಾಗಿ ಕೇಂದ್ರ ನೆರವು ನೀಡಬೇಕೆಂದು ಕೇಳಿ ಪತ್ರವನ್ನೂ ಬರೆದಿದ್ದಾಯಿತು. ಹಾಗು ತಕ್ಷಣಕ್ಕೆ200 ಕೋಟಿರೂಪಾಯಿಗಳನ್ನು ರಾಜ್ಯ ಸರಕಾರ ಬಿಡುಗಡೆಯನ್ನೂ ಮಾಡಿತು. ನಂತರದಲ್ಲಿ ಜನವರಿಯ ಹೊತ್ತಿಗೆ ಕೇಂದ್ರ ಸರಕಾರ ಬರಪರಿಹಾರಕ್ಕೆಂದು 1450 ಕೋಟಿರೂಪಾಯಿಗಳನ್ನು ಬಿಡುಗಡೆ ಮಾಡಿತು.ಇದಕ್ಕೆ ಪೂರಕವಾಗಿ ರಾಜ್ಯ ಸರಕಾರವೂ 300 ಕೋಟಿರೂಪಾಯಿಗಳನ್ನು ಬಿಡುಗಡೆ ಮಾಡಿತು. ಈ ಹಣವನ್ನು ರೈತರಿಗೆ ಬೆಳೆ ನಷ್ಟದ ಪರಿಹಾರವಾಗಿ ನೀಡಿ ,ಉಳಿದ ಹಣವನ್ನು ಕುಡಿಯುವ ನೀರಿನ ತುರ್ತು ಯೋಜನೆಗಳಿಗೆ ಬಳಸುವುದಾಗಿ ಕಂದಾಯ ಸಚಿವ ಶ್ರೀ ಶ್ರೀನಿವಾಸ್ ಪ್ರಸಾದ್ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದೂ ಆಯಿತು. ಆದರೆ ಈ ಹಣ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ರೈತರನ್ನು ಕೂಲಿ ಕಾರ್ಮಿಕರನ್ನು ತಲುಪಿತೆಂಬುದರ ಬಗ್ಗೆ ಸರಕಾರ ನೀಡುವ ಅಂಕಿಅಂಶಗಳು ನಂಬುವ ಅರ್ಹತೆ ಹೊಂದಿಲ್ಲ.
ನಾನಿಲ್ಲಿ ಬಿಡುಗಡೆಯಾದ ಹಣವೆಷ್ಟು? ಖರ್ಚು ಮಾಡಿದ ಹಣವೆಷ್ಟು? ಮತ್ತು ಅದನ್ನು ಹೇಗೆ ಯಾಕೆ ಖರ್ಚು ಮಾಡಿದರೆಂದು ಅಂಕಿಸಂಖ್ಯೆಗಳನ್ನು ನೀಡುತ್ತಾ ರೆವಿನ್ಯೂ ಇಲಾಖೆಯ ಗುಮಾಸ್ತನ ರೀತಿಯಲ್ಲಿ ವರದಿ ಬರೆಯಲು ಕೂತಿಲ್ಲ. ಬದಲಿಗೆ ನಮ್ಮ ಸರಕಾರಗಳ ಬರ ಪರಿಹಾರ ನಿರ್ವಃಹಣೆಯ ಕಾರ್ಯವೈಖರಿ ಎಂತಹುದು ಮತ್ತು ವೈಜ್ಞಾನಿಕವಾಗಿ ಅದು ವಿಪತ್ತು ನಿರ್ವಹಣೆಗೆ ಬಳಸುತ್ತಿರುವ ಕಾರ್ಯಕ್ರಮಗಳಾದರು ಎಂತವು ಎಂಬುದನ್ನು ವಿಶ್ಲೇಷಿಸಲು ಬಯಸುತ್ತೇನೆ. ಸರಕಾರ ಖರ್ಚು ಮಾಡಿರುವ ಒಟ್ಟು ಹಣವನ್ನೂ ಹಾಗು ಸಂತ್ರಸ್ತರ ಜನಸಂಖ್ಯೆಯನ್ನು ತಾಳೆ ಹಾಕಿ ನೋಡಿದರೆ ಒಬ್ಬ ವ್ಯಕ್ತಿಗೆ ದಿನಕ್ಕೆ ತಲಾ ನೂರೈವತ್ತು ರೂಪಾಯಿಗಳನ್ನೂ ಜಾನುವಾರುಗಳ ಮೇವಿಗೆ ಹತ್ತು ರೂಪಾಯಿಗಳನ್ನು ಖರ್ಚು ಮಾಡಿದ್ದಾರೆಂದು ಲೆಕ್ಕ ಹಾಕಬಹುದು( ಇದರಲ್ಲಿ ಒಂದೆರಡು ರೂಪಾಯಿಗಳ ವ್ಯತ್ಯಾಸವಿರುವುದು ಸಹಜವಿರಬಹುದು!)
ಇನ್ನೂ ಮುಂದುವರೆದು ನೋಡಿದರೆ ರಾಜ್ಯದ ಮುಕ್ಕಾಲುಭಾಗ ಬರದಿಂದ ತತ್ತರಿಸುತ್ತಿರುವಾಗ ನಾವು ಅದರ ನಿರ್ವಹಣೆಗೆ ಖರ್ಚು ಮಾಡಿರುವುದು ನಮ್ಮ ಒಟ್ಟು ವಹಿವಾಟಿನ ಶೇಕಡಾ 12ರಷ್ಟನ್ನು ಮಾತ್ರ. ಇದು ನಿಜಕ್ಕೂ ಸಮರ್ಥನೀಯವೇ?ಭೀಕರ ಬರಗಾಲದ ಸಮಯದಲ್ಲಾದರು ನಾವು ನಮ್ಮ ಎಂದಿನ ಸಾಂಪ್ರದಾಯಿಕ ವೆಚ್ಚಗಳನ್ನು ನಿಯಂತ್ರಿಸಿ ಆ ಹಣವನ್ನು ಬರಪರಿಹಾರಕ್ಕೆ ವೆಚ್ಚ ಮಾಡುವುದು ನಮ್ಮ ಸರಕಾರಗಳ ನೈತಿಕ ಕ್ರಿಯೆಯಾಗಬೇಕಿತ್ತೆಂಬುದನ್ನು ವ್ಯವಸ್ಥೆಯ ಒಳಗಿನ ಯಾರೂ ಒಪ್ಪಲು ತಯಾರಿಲ್ಲ. ಇದರ ಜೊತೆಗೆ ಸರಕಾರ ಬರಪರಿಹಾರ ನಿಧಿಯನ್ನು ಖರ್ಚು ಮಾಡಲು ಯಾವ ಮಾನದಂಡವನ್ನು ಅನುಸರಿಸುತ್ತಿದೆಯೆಂಬುದನ್ನು ನೋಡಿದರೆ ಎದೆದಸಕ್ಕೆನ್ನುತ್ತದೆ. ಬೆಳೆನಾಶ ಪರಿಹಾರವಾಗಿ ರೈತನಿಗೆ ನೀಡಿದ ಮೊತ್ತ ಆತನ ಒಟ್ಟು ವಾರ್ಷಿಕ ಉತ್ಪಾದನೆಯ ಶೇಕಡಾ 20ರಷ್ಟು ಸಹ ಇಲ್ಲ.ಇನ್ನು ಕುಡಿಯುವ ನೀರಿಗೆ ಖರ್ಚು ಮಾಡುವ ಹಣದಿಂದ ಯಾವುದೇ ಶಾಶ್ವತ ಪರಿಹಾರದ ವ್ಯವಸ್ಥೆಯಂತು ಆಗುವುದೇ ಇಲ್ಲ. ಜಲಕ್ಷಾಮವಿರುವ ಹಳ್ಳಿಗಳಿಗೆ ಪಟ್ಟಣಗಳಿಗೆ ಖಾಸಗಿಯವರ ಟ್ಯಾಂಕರುಗಳಿಂದ ನೀರು ಪೂರೈಸಲು ಖರ್ಚು ಮಾಡುವ ಹಣದಿಂದ ಪ್ರತಿ ಊರಿಗೂ ಶಾಶ್ವತ ವ್ಯವಸ್ಥೆ ಮಾಡುವಷ್ಟಾಗಿರುತ್ತದೆ. ಯಾಕೆಂದರೆ ಹೀಗೆ ಖಾಸಗಿಯವರಿಗೆ ಗುತ್ತಿಗೆ ನೀಡುವ ಸಂದರ್ಭದಲ್ಲಿ ದರ ನಿಗದಿಗೆ ಯಾವುದೇ ವೈಜ್ಞಾನಿಕ ಮಾನದಂಡವಿರುವುದಿಲ್ಲ.
ಇನ್ನುಳಿದಂತೆ ನಮ್ಮ ರಾಜಕೀಯ ಪ್ರಭೃತಿಗಳಿಗೆ ಮತ್ತು ನೌಕರಶಾಹಿಗೆ ಒಂದು ಕಲ್ಪನೆಯಿದೆ: ಬರಪರಿಹಾರವೆಂದರೆ, ಕೆರೆಗಳ ಹೂಳೆತ್ತುವುದು, ಶಾಲೆ ಅಂಗನವಾಡಿ, ಸಮುದಾಯ ಭವನಗಳನ್ನು ರಿಪೇರಿ ಮಾಡಿ ಸುಣ್ಣ ಬಣ್ನ ಹೊಡೆಸುವುದು, ಜಿಲ್ಲಾ ಹೆದ್ದಾರಿಗಳ ಗುಂಡಿಗಳಿಗೆ ಮಣ್ಣು ಹಾಕುವುದು, ಮಾತ್ರವೆಂದಾಗಿದೆ. ವಿಪರ್ಯಾಸವೆಂದರೆ ಇವತ್ತು ಇವೇ ಕೆಲಸಗಳು ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿಯೂ ನಡೆಯುತ್ತಿದ್ದು, ಯಾವ ಕಾಮಗಾರಿ ಯಾವ ಹಣದಲ್ಲಿ ಆಗುತ್ತಿದೆಯೆಂಬ ಮಾಹಿತಿ ಸರಕಾರಿ ಅಧಿಕಾರಿಗಳಿಗೆ ಬಿಟ್ಟರೆ ಇನ್ಯಾರಿಗೂ ಗೊತ್ತಾಗುವುದೇ ಇಲ್ಲ. ಆದರೆ ಈ ಯೋಜನೆಗಳ ಅಡಿಯಲ್ಲಿಯೂ ಜನರಿಗೆಸಂಪೂರ್ಣ ಉದ್ಯೋಗ ದೊರೆಯುತ್ತಿಲ್ಲವೆಂಬುದು ಸಹ ವಾಸ್ತವವಾಗಿದೆ. ಜೊತೆಗೆ ಇಂತಹ ಕಾಮಗಾರಿಗಳು ಸಹ ಆಯಾ ಊರಿನ ಬಲಿಷ್ಠ ವರ್ಗಗಳಿಗೆ ಮಾತ್ರ ದೊರೆಯುತ್ತಿದ್ದು ತೀರಾ ಕೆಳಸ್ಥರದ ಕೂಲಿಕಾರ್ಮಿಕರಿಗೆ ಇದರ ಲಾಭವೂ ಸಿಗುತ್ತಿಲ್ಲ. ಆಯಾ ಹಳ್ಳಿಯ ಬಲಾಢ್ಯ ಜಾತಿಗಳು ತಮ್ಮ ರಾಜಕೀಯ ಶಕ್ತಿ ಮತ್ತು ಪ್ರಭಾವಗಳನ್ನು ಬಳಸಿಕೊಂಡು ಬರಪರಿಹಾದ ದೊಡ್ಡ ಮೊತ್ತವನ್ನು ತಮ್ಮ ಉಡಿಗೆ ಹಾಕಿಕೊಳ್ಳುವುದು ಸಹ ಇದರ ವೈಫಲ್ಯತೆಯ ಇನ್ನೊಂದು ಮುಖವಾಗಿದೆ.
ಪ್ರತಿ ವರ್ಷವೂ ಬರಗಾಲ ಬಂದಾಗ ರಾಜ್ಯ ಸರಕಾರಗಳು ಒಂದಷ್ಟು ಹಣ ಬಿಡುಗಡೆ ಮಾಡುವುದು, ಕೇಂದ್ರ ಸರಕಾರದ ನೆರವು ಕೇಳುವುದು, ಅದು ರಾಜ್ಯ ಕೇಳಿದ್ದರಲ್ಲಿ ಅರ್ದದಷ್ಟನ್ನು ನೀಡಿ ಕೈತೊಳೆದುಕೊಳ್ಳುವುದು ನಿತ್ಯ ಪೂಜೆಯಂತೆ ನಡೆಯುತ್ತಿದೆ. ಇವತ್ತಿನವರೆಗೂ ಬರಪರಿಹಾರದ ಹಣ ಹೇಗೆಲ್ಲ ಖರ್ಚಾಯಿತೆಂದು ಸಾರ್ವಜನಿಕರಿಗೆ ತಿಳಿಯಪಡಿಸುವ ಒಂದು ಆಡಿಟ್ ಸಹ ನಡೆದಿಲ್ಲ. ಈ ವಿಷಯದಲ್ಲಿ ಎಲ್ಲ ಪಕ್ಷಗಳ, ಎಲ್ಲ ನಾಯಕರುಗಳ ಸರಕಾರಗಳೂ ಗುಪ್ತ್ ಗುಪ್ತ್!
ಆದ್ದರಿಂದ ಬರಪರಿಹಾರದ ಎಲ್ಲ ಕಾರ್ಯಕ್ರಮಗಳೂ ಸಮಗ್ರ ಹಳ್ಳಿಯನ್ನು, ಎಲ್ಲ ಸಮುದಾಯವನ್ನು ಒಳಗೊಂಡು ನಡೆಸುವಂತಿರಬೇಕು. ಜೊತೆಗೆ ಬರಪರಿಹಾರದ ಕಾರ್ಯಕ್ರಮಗಳು ದೀರ್ಘಾವಧಿಯ ಗುರಿಗಳನ್ನು ಹೊಂದಿರಬೇಕಾಗುತ್ತದೆ. ಪ್ರತಿವರ್ಷವೂ ನಾವು ಬರಗಾಲ ಬರುವುದನ್ನು ಕಾದವರಂತೆ ಕೂತಿದ್ದು ಸಂಕಷ್ಟ ಎದುರಾದ ತಕ್ಷಣ ಒಂದಷ್ಟು ಕೋಟಿಗಳನ್ನು ಖರ್ಚು ಮಾಡಿ ರಾಜಕೀಯ ಮತ್ತು ಅಧಿಕಾರಶಾಹಿಯ ಜೇಬು ತುಂಬಿಸುವ ಕೆಲಸವನ್ನು ಮೊದಲು ಕೈಬಿಡಬೇಕಿದೆ. ಬದಲಿಗೆ ಬರಗಾಲದ ತಕ್ಷಣದ ಕಾರಣವಾದ ಕನಿಷ್ಠ ಮಳೆಯ ಪರಿಸ್ಥಿತಿಯನ್ನು ಎದುರಿಸಲು ಶಾಶ್ವತ ನೀರಾವರಿ ವ್ಯವಸ್ಥೆಯ ಕಡೆ ಗಮನ ಕೊಡಬೇಕಿದೆ. ಇಲ್ಲಿ ಇನ್ನೊಂದು ತೊಡಕಿದೆ: ನೀವು ಯಾರಿಗಾದರು ಆಳುವವರ ಎದುರು ಶಾಶ್ವತ ನೀರಾವರಿ ಎಂದು ಹೇಳಿದ ಕೂಡಲೇ ಅವರು ಹೇಳುವುದು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟುವ ಬಗ್ಗೆ ಮತ್ತು ನದಿಜೋಡಣೆಯಂತಹ ಬೃಹತ್ ವಿಚಾರಗಳ ಬಗ್ಗೆ. ಯಾಕೆಂದರೆ ಅಂತಹ ಯೋಜನೆಗಳು ಮಾತ್ರ ಅವರಿಗೂ ಅವರನ್ನು ನಂಬಿದ ಅಧಿಕಾರಶಾಹಿಗೂ, ಗುತ್ತಿಗೆದಾರರಿಗೂ ಲಾಭದಾಯಕವಾಗಿರುತ್ತದೆ. ಆದ್ದರಿಂದ ಇಂತಹ ವಿಚಾರಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕಿರು ನೀರಾವರಿ ಯೋಜನೆಗಳು, ಕೆರೆಗಳ ಪುನಶ್ಚೇತನದಂತಹ ಕಡಿಮೆ ಬಂಡವಾಳದ ಕಾರ್ಯಕ್ರಮಗಳನ್ನು ರೂಪಿಸುವುದು ಮತ್ತು ಪ್ರತಿ ಗ್ರಾಮಗಳ ಸುತ್ತ ಸಾಮಾಜಿಕ ಅರಣ್ಯಗಳನ್ನು ಬೆಳೆಸಿ ನಿರ್ವಹಿಸುವಂತ ಕಾರ್ಯಕ್ರಮಗಳ ಮೂಲಕ ಬರಗಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸ ಬೇಕಾಗಿದೆ.
ಆದರೆ ಸದ್ಯಕ್ಕಿರುವ ನಮ್ಮ ರಾಜಕೀಯ ವ್ಯವಸ್ಥೆ ಹಾಗು ಜಡಗಟ್ಟಿರುವ ಅಧಿಕಾರಶಾಹಿಯಿಂದ ಇಂತಹ ಕ್ರಮಗಳನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಆದರೆ ಅಧಿಕಾರಶಾಹಿಯ ಹಿಡಿತದಿಂದ ಹೊರಬರಲಾಗದೆ ತಮ್ಮ ರಾಜಕೀಯ ಇಚ್ಚಾಶಕ್ತಿಯನ್ನು ಕಳೆದುಕೊಂಡ ರಾಜಕೀಯನಾಯಕರುಗಳು ಮನಸ್ಸು ಮಾಡಿದರೆ ಮಾತ್ರ ಇಂತಹದೊಂದು ಬದಲಾವಣೆಯನ್ನು ತರಲು ಸಾದ್ಯ ಇದಾಗದೇ ಹೋದಲ್ಲಿ ಜನರೇ ಹೊಸ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವತ್ತ ಯೋಚಿಸುವ ದಿನಗಳು ಬರುತ್ತವೆ. ಅಂತಹದೊಂದು ನಿರೀಕ್ಷೆ ತಪ್ಪೇನು ಅಲ್ಲವೆನಿಸುತ್ತದೆ.
No comments:
Post a Comment