Apr 16, 2016

ಆ ಜ್ಯೂಸಂಗಡಿ ಬಾಗಿಲು ಹಾಕೊಂಡಿದ್ಯಾಕೆ?

untouchability
ಡಾ. ಅಶೋಕ್. ಕೆ. ಆರ್
16/04/2016

ಮೊನ್ನೆ ದಿನ ಅಂಬೇಡ್ಕರ್ ಜಯಂತಿಯಂದು ಮಲ್ಲಿಕಾರ್ಜುನ ಖರ್ಗೆ ಹೇಳಿದೊಂದು ಮಾತು ಇನ್ನೂ ಕಾಡುತ್ತಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ‘ನಮ್ಮ ಪ್ರಧಾನಿ ಯಾವಾಗಲೂ ನಾನು ಚಹಾ ಮಾರುತ್ತಿದ್ದೆ ಎನ್ನುತ್ತಿರುತ್ತಾರೆ, ನಾನೊಮ್ಮೆ ಹೇಳಿದೆ – ನಾವು ಚಹಾ ಮಾರಿದರೆ ಅದನ್ನು ಯಾರೂ ತೆಗೆದುಕೊಳ್ಳುತ್ತಲೇ ಇರಲಿಲ್ಲ’ ಎಂದು ಹೇಳಿದ್ದಾರೆ ಖರ್ಗೆ. ಖರ್ಗೆ ಹಾಲಿ ವಿರೋಧ ಪಕ್ಷದ ನಾಯಕ, ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲೂ ಮೋದಿಯವರನ್ನು ಗೇಲಿ ಮಾಡುತ್ತ ರಾಜಕೀಯ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸಬಹುದು, ಅದು ಭಾಗಶಃ ಸತ್ಯವೂ ಇರಬಹುದು. ಆದರೆ ‘ನಾವು ಚಹಾ ಮಾರಿದರೆ ಅದನ್ನು ಯಾರೂ ತೆಗೆದುಕೊಳ್ಳುತ್ತಲೇ ಇರಲಿಲ್ಲ’ ಎಂಬ ಮಾತಿದೆಯಲ್ಲ ಅದು ಕೇವಲ ರಾಜಕೀಯದ ಮಾತಲ್ಲ. ದಲಿತನೊಬ್ಬನ ನೋವಿನ, ಅಸಹಾಯಕತೆಯ ಮಾತದು. ಎಷ್ಟೇ ವರ್ಷದ ರಾಜಕೀಯ ಅನುಭವ, ಶ್ರೀಮಂತಿಕೆ ಇದ್ದರೂ ಮಲ್ಲಿಕಾರ್ಜುನ ಖರ್ಗೆ ಕೂಡ ದಲಿತರೇ ಅಲ್ಲವೇ? ಯಾಕೋ ಮಲ್ಲಿಕಾರ್ಜುನ ಖರ್ಗೆಯವರ ಮಾತನ್ನು ರಾಜಕೀಯ ಹೇಳಿಕೆ ಎಂದು ಕಡೆಗಣಿಸಿಬಿಡಲಾಗಿದೆಯೇ ಹೊರತು ತುಂಬ ಹೆಚ್ಚು ಚರ್ಚೆಗೊಳಪಡಲಿಲ್ಲ. ಸಮಾಜದ ಮನಸ್ಥಿತಿಯ ವಿಶ್ಲೇಷಣೆ ನಡೆಯಲಿಲ್ಲ. ಖರ್ಗೆಯವರ ಹೇಳಿಕೆ ಮಂಡ್ಯದ ಘಟನೆಯೊಂದರ ಬಗ್ಗೆ ಗೆಳೆಯ ಎಸ್.ಅಭಿ ಗೌಡ ಹನಕೆರೆ ನೀಡಿದ ಮಾಹಿತಿಯೊಂದನ್ನು ಮತ್ತೆ ನೆನಪಿಸಿತು.

ಆ ಹುಡುಗರು ಅಲ್ಲಿ ಇಲ್ಲಿ ದುಡ್ಡು ಕೂಡಿಸಿ, ಚೂರು ಪಾರು ಸಾಲ ಮಾಡಿಕೊಂಡು ಒಂದು ವ್ಯಾಪಾರ ಪ್ರಾರಂಭಿಸಿಯೇಬಿಡಬೇಕೆಂದು ನಿರ್ಧಾರ ಮಾಡಿದರು. ನಿರ್ಧಾರವನ್ನು ಕಾಯಿಸದೆ ಅತಿ ಶೀಘ್ರವಾಗೇ ಜನನಿಬಿಡ ಸ್ಥಳದಲ್ಲಿ ಒಂದು ಅಂಗಡಿ ಬಾಡಿಗೆಗೆ ಹಿಡಿದು ತಾಜಾ ಹಣ್ಣಿನ ಜ್ಯೂಸ್ ಅಂಗಡಿಯನ್ನು ತೆರೆದರು. ಮಂಡ್ಯದಲ್ಲೇನು ಬಿಸಿಲ ಝಳಕ್ಕೆ ಕೊರತೆಯಿಲ್ಲವಲ್ಲ. ತಾಜಾ ಹಣ್ಣಿನ ಜ್ಯೂಸ್ ಅಂಗಡಿಯಲ್ಲಿ ವ್ಯಾಪಾರ ಕಚ್ಚಿಕೊಳ್ಳಲು ಹೆಚ್ಚು ಸಮಯವೇನು ಬೇಕಾಗಲಿಲ್ಲ. ಜ್ಯೂಸ್ ಅಂಗಡಿಯನ್ನು ಸ್ವಚ್ಛವಾಗಿಡದಿದ್ದರೆ ನೊಣ, ಜೇನ್ನೊಣಗಳೆಲ್ಲ ಮುತ್ತಿಬಿಡುತ್ತವೆಂದು ಗೊತ್ತಿತ್ತಲ್ಲ, ಈ ಉತ್ಸಾಹಿ ಹುಡುಗರು ಸ್ವಚ್ಛತೆಯನ್ನು ಮುತುವರ್ಜಿ ವಹಿಸಿ ಕಾಪಾಡಿದರು. ವ್ಯಾಪಾರ ಜೋರಿತ್ತು. ಜೋರಿದ್ದ ವ್ಯಾಪಾರ ಕೆಲವು ದಿನಗಳ ನಂತರ ಇದ್ದಕ್ಕಿದ್ದಂತೆ ಕುಸಿಯಲಾರಂಭಿಸಿತು. ಜ್ಯೂಸ್ ಅಂಗಡಿ ಸ್ವಚ್ಛವಾಗಿಲ್ಲವಾ? ಸ್ವಚ್ಛವಾಗೇ ಇದೆ. ತಾಜಾ ಜ್ಯೂಸ್ ಕೊಡ್ತಿಲ್ಲವಾ? ತಾಜಾ ಜ್ಯೂಸೇ ಸಿಗ್ತಿದೆ. ದುಡ್ಡು ಜಾಸ್ತಿ ಮಾಡಿಬಿಟ್ಟರಾ? ಇಲ್ಲ, ದುಡ್ಡು ಮೊದಲಿನಷ್ಟೇ ಇದೆ. ಹತ್ತಿರದಲ್ಲಿ ಮತ್ಯಾವುದಾದರೂ ಜ್ಯೂಸ್ ಅಂಗಡಿ ಶುರುವಾಗಿ ಹೋಯಿತಾ? ಯಾವುದೂ ಇಲ್ಲ. ಹಾಗಿದ್ದರೆ ಜೋರಿದ್ದ ವ್ಯಾಪಾರ ಕೆಲವೇ ದಿನಗಳ ನಂತರ ಕುಸಿತ ಕಂಡಿದ್ದಾದರೂ ಯಾಕೆ?

ಆ ಹುಡುಗರ ಜಾತಿ ಬಗ್ಗೆ ಮೊದಲಿಗೆ ಯಾರಿಗೂ ಗೊತ್ತಿರಲಿಲ್ಲ. ಮಂಡ್ಯದಂತಹ ಚಿಕ್ಕ ನಗರದಲ್ಲಿ ಅಂಗಡಿ ನಡೆಸುವವರ ಜಾತಿ ಗೊತ್ತಾಗುವುದಕ್ಕೆ ಹೆಚ್ಚಿನ ಸಮಯವೇನು ಬೇಕಿಲ್ಲವಲ್ಲ. ಅಂಗಡಿಗೆ ಬಂದು ಜ್ಯೂಸು ಕುಡಿದವನೊಬ್ಬ ತನ್ನ ಗೆಳೆಯನಿಗೆ ‘ಇದು ದಲಿತ್ರು ಅಂಗ್ಡಿ’ ಅಂದಿದ್ದಾನೆ. ದಲಿತ್ರು ಅಂಗ್ಡಿ ಅನ್ನೋ ಮಾತು ಹಣ್ಣಿನ ಪರಿಮಳಕ್ಕಿಂತ ವೇಗವಾಗಿ ಹಬ್ಬಿಬಿಟ್ಟಿದೆ. ಊಳಿಗಮಾನ್ಯತೆಯನ್ನು ಹೊದ್ದು ಮಲಗಿರುವ ಒಕ್ಕಲಿಗರ ಸಂಖೈ ಅಧಿಕವಾಗಿರುವ ಮಂಡ್ಯದ ಜಾತಿ ವ್ಯವಸ್ಥೆಯಲ್ಲಿ ಜ್ಯೂಸ್ ಕುಡಿಯಲು ಬರುತ್ತಿದ್ದವರು ‘ದಲಿತ್ರು ಅಂಗ್ಡಿ’ ಅಂತ ಗೊತ್ತಾಗುತ್ತಿದ್ದಂತೆ ಬಿಸಿಲ ಝಳಕ್ಕೆ ಸತ್ತರೂ ಸರಿ ದಲಿತ್ರು ಅಂಗ್ಡಿಗೆ ಕಾಲಿಡಬಾರದು ಎಂದು ನಿರ್ಧರಿಸಿಬಿಟ್ಟಿದ್ದಾರೆ! ಪರಿಣಾಮ, ಉತ್ಸಾಹಿ ಹುಡುಗರ ಜ್ಯೂಸಂಗಡಿ ಬಾಗಿಲು ಹಾಕೊಂಡಿದೆ. ಅಸ್ಪೃಶ್ಯತೆ ಈಗಿಲ್ಲ ಎಂದರೆ ಅದು ಆ ಜ್ಯೂಸಂಗಡಿಯ ದಲಿತ ಹುಡುಗರಲ್ಲಿ ಯಾವ ಭಾವನೆ ಮೂಡಿಸಬಹುದು?

ತುಂಬಾ ನಿರಾಶೆಯೂ ಬೇಕಿಲ್ಲ ಅನ್ನಿಸುತ್ತೆ. ಮೊದಮೊದಲು ಬ್ರಾಹ್ಮಣ್ ಕೆಫೆ, ಹಾಸನ ಅಯ್ಯಂಗಾರರ ಬೇಕರಿಗಳ ಹೆಸರುಗಳಷ್ಟೇ ಇತ್ತು, ಜೊತೆಗೆ ಸಾಬರ ಹೆಸರಿನ ಬಿರಿಯಾನಿ ಹೋಟೆಲ್ಲುಗಳಿದ್ದವು; ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಲಿಂಗಾಯತ ಖಾನಾವಳಿಗಳು ಈಗೀಗ ಬೆಂಗಳೂರಿನಲ್ಲೂ ಕಾಣಿಸುತ್ತಿವೆ. ಕಳೆದೊಂದೈದು ವರುಷಗಳಿಂದ ಗೌಡ್ರು ಮುದ್ದೆ ಮನೆ, ಗೌಡ್ರು ಮಿಲಿಟ್ರಿ ಹೋಟೆಲ್ಲು ಕಾಣಿಸಿಕೊಳ್ಳಲಾರಂಭಿಸಿವೆ. ಇದೇ ಲೆಕ್ಕದಲ್ಲಿ ನೋಡಿದರೆ ಇನ್ನೊಂದೈದತ್ತು ವರುಷಕ್ಕೆ ಕುರುಬರ ಕೋಳಿ ಕಾರ್ನರ್ ಶುರುವಾಗಬಹುದು. ಮಾದಿಗರ ಮಾಂಸದ ಹೋಟೆಲ್, ಮಾದಿಗರ ಮುದ್ದೆ ಮನೆ ಕೂಡ ಮುಂದೊಂದು ದಿನ ಬರಬಹುದೆಂದು ನಿರೀಕ್ಷಿಸಬಹುದು. ಈ ಜಾತಿ ವ್ಯವಸ್ಥೆಯಲ್ಲಿ ಅದು ಹತ್ತಿರದಲ್ಲಿ ನಡೆಯುವ ಸಾಧ್ಯತೆಗಳು ಇಲ್ಲವೆನ್ನಿಸುತ್ತಾದರೂ ನಿರೀಕ್ಷೆ ಮಾಡುವುದರಲ್ಲಿ ತಪ್ಪೇನಿದೆ ಅಲ್ಲವೇ…..ನಲವತ್ತು ವರುಷದಿಂದ ಒಂದಿಲ್ಲೊಂದು ಅಧಿಕಾರದಲ್ಲಿದ್ದ, ಕಡೇ ಪಕ್ಷ ವಿರೋಧ ಪಕ್ಷದಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಅಂತಹ ದಲಿತರೇ ‘ನಾವು ಚಹಾ ಮಾರಿದರೆ ಯಾರು ತೆಗೆದುಕೊಳ್ಳುವುದಿಲ್ಲ’ ಎಂದು ಹೇಳುತ್ತಾರೆಂದರೆ ಆ ನಿರೀಕ್ಷೆ ಸತ್ಯವಾಗುವುದೇ ಸುಳ್ಳು ಎಂಬನುಮಾನವೂ ಬಂದುಬಿಡುತ್ತದೆ. ಜಾತಿ ಹೆಸರಿನ ಹೋಟೆಲ್ಲುಗಳು ಮತ್ತಷ್ಟು ಜಾತೀಯತೆಯನ್ನು ತುಂಬಿಬಿಡುತ್ತದೆ ಎಂಬ ಪ್ರಶ್ನೆಯೂ ಮೂಡಬಹುದು. ಭಾರತದ ಸಮಾಜದಲ್ಲಿನ ಮನಸ್ಥಿತಿಯಲ್ಲಿ ಜಾತಿ ನಾಶವೆಂಬುದು ಹಗಲುಗನಸಷ್ಟೇ, ಭೂಮಿ ನಾಶವಾಗುವವರೆಗೂ ಇಲ್ಲಿ ಜಾತಿ ನಾಶವಾಗುವುದು ಅನುಮಾನ. ಜಾತಿಯ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಲೇ ಜಾತಿ ಸಮಾನತೆಗಾಗಿ ನಾವು ಹೋರಾಡಬೇಕು.

No comments:

Post a Comment