ಡಾ. ಅಶೋಕ್. ಕೆ. ಆರ್
22/03/2016
ಹೆಚ್ಚೇನು ಹಿಂದಿನ ಮಾತಲ್ಲ, ವರುಷಗಳ ಹಿಂದೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಬಳ್ಳಾರಿಗೆ ಪಾದಯಾತ್ರೆ ಬೆಳೆಸಿತ್ತು. ಬಿಜೆಪಿಯ ಭ್ರಷ್ಟಾಚಾರ, ಬಳ್ಳಾರಿಯ ರೆಡ್ಡಿ ಸಹೋದರರ ಭ್ರಷ್ಟತೆ, ಆಪರೇಷನ್ ಕಮಲ ಮತ್ತು ಬಳ್ಳಾರಿ ರೆಡ್ಡಿ ಸಹೋದರರ ರಿಪಬ್ಲಿಕ್ ನಂತೆ ಆಗಿಬಿಟ್ಟಿದ್ದನ್ನು ವಿರೋಧಿಸಿ ಬೆಂಗಳೂರಿನಿಂದ ಬಳ್ಳಾರಿಗೆ ಸಿದ್ಧರಾಮಯ್ಯ ಪಾದಯಾತ್ರೆ ನಡೆಸಿದ್ದರು. ವೈಯಕ್ತಿಕವಾಗಿ ಸಿದ್ಧರಾಮಯ್ಯ ಕೂಡ ಭ್ರಷ್ಟರಲ್ಲ ಎಂದು ಅಲ್ಲಿಯವರೆಗಿನ ನಂಬಿಕೆಯಾಗಿತ್ತು. ಬಿಜೆಪಿಯ ಐದು ವರುಷದ ಆಡಳಿತಾವಧಿಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಕೆಲಸ ಮಾಡಿದ್ದು ಇದೊಂದೇ ಬಾರಿ. ಅಧಿಕೃತ ವಿರೋಧ ಪಕ್ಷವಲ್ಲದಿದ್ದರೂ ಜೆ.ಡಿ.ಎಸ್ ನ ಕುಮಾರಸ್ವಾಮಿ ಬಿಜೆಪಿಯ ಭ್ರಷ್ಟಾಚಾರ ಪ್ರಕರಣಗಳನ್ನು ಒಂದಾದ ಮೇಲೊಂದರಂತೆ ಬಯಲಿಗೆಳೆಯುತ್ತ (ಇವರ ಬಯಲಿಗೆಳೆಯುವಿಕೆಯು ಕೂಡ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿದು ಸದಾನಂದಗೌಡ ಮುಖ್ಯಮಂತ್ರಿಯಾದ ತಕ್ಷಣ ನಿಂತುಹೋಗಿತ್ತು!) ಕಾಂಗ್ರೆಸ್ಸಿನ ಗೆಲುವಿಗೆ ಮುನ್ನುಡಿ ಬರೆದರು. ಹೆಚ್ಚೇನೂ ಕಷ್ಟಪಡದೆ ಬಿಜೆಪಿಯ ಸ್ವಯಂಕೃತ ಅಪರಾಧ, ಯಡಿಯೂರಪ್ಪ ಕೆಜೆಪಿ ಸೇರಿದ್ದರ ಲಾಭ ಪಡೆದ ಕಾಂಗ್ರೆಸ್ ಸರಳ ಬಹುಮತ ಪಡೆದು ಅಧಿಕಾರವಿಡಿಯಿತು. ಮತ್ತೇನಲ್ಲದಿದ್ದರೂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಹಿಂದಿನ ಬಿಜೆಪಿಯಷ್ಟು ಭ್ರಷ್ಟವಾಗಲಾರದು ಎಂದೊಂದು ನಂಬಿಕೆಯಿತ್ತು. ವೈಯಕ್ತಿಕವಾಗಿ ಯಾರ್ಯಾರು ಎಷ್ಟೆಷ್ಟು ಭ್ರಷ್ಟರಾದರೋ ಬಿಟ್ಟರೋ ಭ್ರಷ್ಟರಿಗೆಲ್ಲ ರಕ್ಷಣೆ ನೀಡುವಂತೆ ಕರ್ನಾಟಕ ಲೋಕಾಯುಕ್ತದ ಬಲ ಕುಗ್ಗಿಸಿಬಿಡಲು ಅಧಿಸೂಚನೆ ಹೊರಡಿಸಿಬಿಟ್ಟಿದೆ ಸಿದ್ಧು ನೇತೃತ್ವದ ಕಾಂಗ್ರೆಸ್ ಸರಕಾರ. ಭ್ರಷ್ಟರ ರಕ್ಷಣೆ ನಮ್ಮ ಗುರಿಯಲ್ಲ ಎಂಬುದನ್ನು ತೋರ್ಪಡಿಸಲು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗಳ ಮೂಗಿನಡಿ ಕಾರ್ಯನಿರ್ವಹಿಸುವ ಭ್ರಷ್ಟಾಚಾರ ನಿಗ್ರಹ ದಳವನ್ನು (Anticorruption bureau – ಎಸಿಬಿ) ಸ್ಥಾಪಿಸಲಾಗಿದೆ. ನಿನ್ನೆ ವಿಧಾನಸಭೆಯಲ್ಲಿ ಬಿಜೆಪಿಯ ಜಗದೀಶ್ ಶೆಟ್ಟರ್ ಹೇಳಿರುವಂತೆ ಇದು ಎಸಿಬಿಯಲ್ಲ ಸಿಪಿಬಿ – corruption protection bureau.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕಾರ್ಯಾರಂಭವಾಗಿದ್ದು 1986ರಲ್ಲಿ. ಎರಡು ವರ್ಷಕ್ಕೆ ಮೊದಲು 1984ರಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಅನುಷ್ಠಾನಗೊಂಡಿತ್ತು. ಮಹಾರಾಷ್ಟ್ರ 1971ರಲ್ಲಿ ಲೋಕಾಯುಕ್ತ ಸ್ಥಾಪಿಸಿದ್ದರೆ ಕರ್ನಾಟಕ 1984ರಲ್ಲಿ ಸ್ಥಾಪಿಸಿತ್ತು. 1966ರಲ್ಲಿಯೇ ಇಂತಹುದೊಂದು ಅಗತ್ಯವನ್ನು ಮನಗಂಡಿದ್ದ administrative reforms commission ಕೇಂದ್ರದ ಮಟ್ಟದಲ್ಲಿ ಲೋಕಪಾಲ ಸಂಸ್ಥೆ ಮತ್ತು ರಾಜ್ಯ ಮಟ್ಟದಲ್ಲಿ ಲೋಕಾಯುಕ್ತವನ್ನು ಸ್ಥಾಪಿಸಲು ಸಲಹೆ ನೀಡಿತ್ತು. ಕರ್ನಾಟಕದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸರಕಾರಗಳ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದ ಜನತಾ ಪರಿವಾರ 1983ರ ಚುನಾವಣೆಯಲ್ಲಿನ ತನ್ನ ಪ್ರಣಾಳಿಕೆಯಲ್ಲಿ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತರುವುದಾಗಿ ತಿಳಿಸಿತ್ತು. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಅಧಿಕಾರವಿಡಿದ ಜನತಾ ಪರಿವಾರ ಕೊಟ್ಟ ಮಾತಿನಂತೆಯೇ ಮುಂದಿನ ವರುಷ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತಂದಿತು. ಜನತಾ ಪರಿವಾರದಿಂದ ಜಾರಿಯಾದ ಲೋಕಾಯುಕ್ತ ಸಂಸ್ಥೆಯನ್ನು ಹಿಂದೊಮ್ಮೆ ಜನತಾ ಪರಿವಾರದ ನಾಯಕನಾಗಿದ್ದ ಸಿದ್ಧರಾಮಯ್ಯ ಮಣ್ಣು ಮಾಡಲು ಹೊರಟಿದ್ದಾರೆ.
ಲೋಕಾಯುಕ್ತದ ಸ್ಥಾಪನೆಯೊಂದಿಗೆ ಭ್ರಷ್ಟಾಚಾರವೇನೂ ಅಂತ್ಯ ಕಾಣಲಿಲ್ಲ. ಲೋಕಾಯುಕ್ತವೆಂಬುದು ಸ್ವಾಯತ್ತ ಸಂಸ್ಥೆಯಾದರೂ ಲೋಕಾಯುಕ್ತ, ಉಪಲೋಕಾಯುಕ್ತರ ನೇಮಕದಲ್ಲಿ ರಾಜಕೀಯ ನಡೆದೇ ನಡೆಯುತ್ತದೆ. ಜೊತೆಗೆ ಆಯ್ಕೆಯಾದ ಲೋಕಾಯುಕ್ತರು ‘ಸರಿಯಾಗಿ’ ಕಾರ್ಯನಿರ್ವಹಿಸಲೇಬೇಕು ಎಂದೇನೂ ಒತ್ತಡವಿರುವುದಿಲ್ಲವಲ್ಲ. ಭ್ರಷ್ಟಾಚಾರ ತಡೆಗಟ್ಟಲು ಲೋಕಾಯುಕ್ತ ಸಂಸ್ಥೆಯೊಂದು ಅಸ್ತಿತ್ವದಲ್ಲಿದೆ ಎಂದು ಬಹುತೇಕ ಜನರ ಅರಿವಿಗೆ ಬಂದಿದ್ದೇ 2001ರಲ್ಲಿ ವೆಂಕಟಾಚಲಯ್ಯ ಅಧಿಕಾರವಿಡಿದಾಗ. ವಿವಿಧ ಕಛೇರಿಗಳಿಗೆ, ಆಸ್ಪತ್ರೆಗಳಿಗೆ ದಿಡೀರ್ ಎಂದು ಭೇಟಿ ನೀಡಿ ಲಂಚಕೋರರನ್ನು ಜನರ, ಮಾಧ್ಯಮದ ಎದುರಿಗೇ ಬಯ್ದಾಗಷ್ಟೇ ಜನರಿಗೆ ಲೋಕಾಯುಕ್ತದ ಅಸ್ತಿತ್ವದ ಅರಿವಾಗಿದ್ದು. ವೆಂಕಟಾಚಲಯ್ಯ ಭ್ರಷ್ಟತೆ ತಡೆಯುವುದಕ್ಕಿಂತ ಪ್ರಚಾರಕ್ಕೇ ಹೆಚ್ಚು ಆದ್ಯತೆ ಕೊಟ್ಟುಬಿಟ್ಟರು ಎಂದನ್ನಿಸುವುದು ಹೌದಾದರೂ ಲೋಕಾಯುಕ್ತ ಸಂಸ್ಥೆಯ ಶಕ್ತಿಯನ್ನು ಲೋಕಾಯುಕ್ತಕ್ಕೆ ತೋರಿಸಿಕೊಟ್ಟದ್ದೇ ವೆಂಕಟಾಚಲಯ್ಯ ಎಂದರದು ತಪ್ಪಲ್ಲ. ನಂತರ ಲೋಕಾಯುಕ್ತರಾದ ಸಂತೋಷ್ ಹೆಗಡೆ ಗಣಿ ದೋಚುವವರ ಬೆವರಿಳಿಸಿದರು. ರಾಜ್ಯದ ಗಣಿ ಲೂಟಿಯ ಬಗ್ಗೆ ವಿಸ್ತೃತ ವರದಿ ಕೊಟ್ಟರು. ನಂತರ ಲೋಕಾಯುಕ್ತರಾದ ಶಿವರಾಜ್ ಪಾಟೀಲ್ ಸರಕಾರದಿಂದ ಅಕ್ರಮವಾಗಿ ಭೂಮಿ ಪಡೆದುಕೊಂಡಿರುವ ಆರೋಪದ ಕಾರಣದಿಂದ ಮೂರು ತಿಂಗಳಿಗೇ ರಾಜೀನಾಮೆ ಕೊಟ್ಟುಬಿಟ್ಟರು. ಆಮೇಲೆ ನೇಮಕಗೊಂಡಿದ್ದ ವೈ.ಭಾಸ್ಕರ್ ರಾವ್ ಲೋಕಾಯುಕ್ತ ಸಂಸ್ಥೆ ಹತ್ತು ವರುಷದಿಂದ ಗಳಿಸಿಕೊಂಡಿದ್ದ ಚೂರುಪಾರು ವಿಶ್ವಾಸವನ್ನು ಮಣ್ಣು ಮಾಡಲು ಪ್ರಾರಂಭಿಸಿಬಿಟ್ಟಿತು. ಭಾಸ್ಕರ್ ರಾವರ ಭ್ರಷ್ಟಾಚಾರ, ಅವರ ಮಗ ಲೋಕಾಯುಕ್ತ ಸಂಸ್ಥೆಯನ್ನು ಭ್ರಷ್ಟವಾಗಿಸಿದ್ದರ ಬಗ್ಗೆ ಒಂದರ ಹಿಂದೊಂದರಂತೆ ವರದಿಗಳು ಬರಲಾರಂಭಿಸಿದವು. ಭ್ರಷ್ಟರಿಗ ಶಿಕ್ಷೆಯಾಗುವಂತೆ ಮಾಡಿ ಲೋಕಾಯುಕ್ತ ಸಂಸ್ಥೆಯ ಘನತ ಮರಳ ಗಳಿಸಬೇಕಿದ್ದ ರಾಜ್ಯ ಸರಕಾರ ಲೋಕಾಯುಕ್ತ ಸಂಸ್ಥೆಯನ್ನೇ ನಾಶ ಪಡಿಸಲು ಹೊರಟು ಬಿಟ್ಟಿದೆ.
ಲೋಕಾಯುಕ್ತ ಸಂಸ್ಥೆ ತನ್ನೆಲ್ಲ ಅಧಿಕಾರಗಳೊಂದಿಗೆ ಅಸ್ತಿತ್ವದಲ್ಲಿರುತ್ತದೆ, ಜೊತೆಗೆ ಎಸಿಬಿ ಕೂಡ ಇರುತ್ತದೆ ಎಂಬ ನೆಪವನ್ನು ಕಾಂಗ್ರೆಸ್ಸಿನ ಸಿದ್ಧರಾಮಯ್ಯ, ಟಿ.ಬಿ.ಜಯಚಂದ್ರ ಹೇಳುತ್ತಿದ್ದಾರಾದರೂ ಮುಖ್ಯಮಂತ್ರಿಯ, ಮುಖ್ಯಕಾರ್ಯದರ್ಶಿಗಳ ಅಧೀನದಲ್ಲಿರುವ ಸಂಸ್ಥೆಯೊಂದು ಅದು ಹೇಗೆ ನಿಷ್ಪಕ್ಷವಾಗಿರಲು ಸಾಧ್ಯ? ಲೋಕಾಯುಕ್ತ ಅಸ್ತಿತ್ವದಲ್ಲಿರುತ್ತದೆ ಎಂದ್ಹೇಳುತ್ತಲೇ ಲೋಕಾಯುಕ್ತದ ಅಡಿ ಇದ್ದ ಏಳು ನೂರಕ್ಕೂ ಅಧಿಕ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸಿದ್ಯಾಕೆ? ಲೋಕಾಯುಕ್ತಕ್ಕಿಂತ ಶಿಸ್ತಿನ ಭ್ರಷ್ಟಾಚಾರ ನಿಗ್ರಹ ಪಡೆಯನ್ನು ಕಟ್ಟುವುದೇ ರಾಜ್ಯ ಸರಕಾರದ ಉದ್ದೇಶವಾಗಿದ್ದರೆ ಇಷ್ಟೊಂದು ತಡಬಡಿಸಿ ಶೀಘ್ರವಾಗಿ ಎಸಿಬಿಯನ್ನು ರಚಿಸಿದ್ಯಾಕೆ? ಸ್ವಾಯತ್ತ ಸಂಸ್ಥೆಗಳನ್ನೇ ಆಡಳಿತ ಪಕ್ಷಗಳ ಉದ್ದಿಶ್ಯಗಳಿಗೆ ಬಳಸಿಕೊಳ್ಳುವಾಗ ಸ್ವಾಯತ್ತತೆ ಇಲ್ಲದ ಸಂಸ್ಥೆಯೊಂದು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವೇ? ಕೊನೇ ಪಕ್ಷ, ಲೋಕಾಯುಕ್ತದ ಅಸ್ತಿತ್ವ ಜನರಿಗೊಂದು ನೈತಿಕ ಬಲವನ್ನಾದರೂ ಕೊಡುತ್ತಿತ್ತು. ಈಗಲೂ ನೈತಿಕ ಬಲ ಸಿಕ್ಕಿದೆ, ಸಾಮಾನ್ಯರಿಗಲ್ಲ ಭ್ರಷ್ಟಾಚಾರಿಗಳಿಗೆ, ಲಂಚಕೋರರಿಗೆ. ಆಡಳಿತ ಪಕ್ಷದ ಜೊತೆ ‘ಚೆನ್ನಾಗಿದ್ದರೆ’ ಸಾಕು ಎಂಬ ಸೌಭಾಗ್ಯವನ್ನು ಸಿದ್ಧು ದಯಪಾಲಿಸಿಬಿಟ್ಟಿದ್ದಾರೆ.
ಆಕರ: ವಿಕಿಪೀಡಿಯಾ, lokayukta.kar.nic.in
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸರ್ವಾಧಿಕಾರಿ ಧೋರಣೆ ತಳೆಯುತ್ತಿದ್ದಾರೆಯೇ? ಹೌದು ಈಗಿನ ಅವರ ಧೋರಣೆ ನೋಡಿದರೆ ಹಾಗೇ ಅನಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಯ ಅಭಿಪ್ರಾಯಕ್ಕೆ ವಿರೋಧವಾಗಿ ಹೋಗುವುದು ಸರ್ವಾಧಿಕಾರಿ ಧೋರಣೆ ಎಂದೇ ಹೇಳಬೇಕಾಗುತ್ತದೆ. ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸುವ/ದುರ್ಬಲಗೊಳಿಸುವ ಪ್ರಯತ್ನದ ವಿರುದ್ಧ ಭಾರೀ ವಿರೋಧದ ಜನಾಭಿಪ್ರಾಯ ಇದೆ. ಇದರ ಬಗ್ಗೆ ಕುರುಡಾಗಿ ವರ್ತಿಸುವುದು ಸರ್ವಾಧಿಕಾರಿ ಧೋರಣೆಯಲ್ಲದೆ ಮತ್ತೇನೂ ಅಲ್ಲ. ಇದರಿಂದ ಸಿದ್ಧರಾಮಯ್ಯನವರಿಗೆ ಲೋಕಾಯುಕ್ತ ಸಂಸ್ಥೆಯ ಸಮಾಧಿ ಮಾಡಿದ ಕಳಂಕ ಇತಿಹಾಸದಲ್ಲಿ ದಾಖಲಾಗುತ್ತದೆ ಹಾಗೂ ಎಂದೆಂದೂ ಈ ಕಳಂಕವನ್ನು ಅಳಿಸಲು ಸಾಧ್ಯವಿಲ್ಲ. ಸಿದ್ಧರಾಮಯ್ಯನವರಿಗೆ ಯಾರ ಸಲಹೆಗೂ ಕಿವಿಗೊಡುವುದೇ ಇಲ್ಲವೇ? ದಿನೇಶ್ ಅಮೀನ್ ಮಟ್ಟು ಅವರಂಥ ಮಾಧ್ಯಮ ಸಲಹೆಗಾರರಿದ್ದರೂ ಸಿದ್ಧರಾಮಯ್ಯನವರು ಇಂಥ ಸ್ವಘಾತಕ ತೀರ್ಮಾನ ತೆಗೆದುಕೊಳ್ಳಲು ಕಾರಣವೇನು? ದಿನೇಶ್ ಅಮೀನ್ ಮಟ್ಟು ಅವರು ಮುಖ್ಯಮಂತ್ರಿಗಳಿಗೆ ಯಾವುದೇ ಜನಾಭಿಪ್ರಾಯದ ಸಲಹೆಗಳನ್ನು ನೀಡುತ್ತಿಲ್ಲವೇ ಅಥವಾ ಸಿದ್ಧರಾಮಯ್ಯನವರು ಯಾವುದೇ ಸಲಹೆಗಳನ್ನೂ ತೆಗೆದುಕೊಳ್ಳದಷ್ಟು ಅಹಂಕಾರವನ್ನು ಬೆಳೆಸಿಕೊಂಡಿದ್ದಾರೆಯೇ?
ReplyDeleteಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಿಲ್ಲ. ಸಾಮಾನ್ಯವಾಗಿ ಆಡಳಿತಾರೂಢ ಪಕ್ಷದ ಆಡಳಿತ ಉತ್ತಮವಾಗಿದ್ದರೆ ಇಂಥ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡುವುದು ಕಂಡುಬರುತ್ತದೆ. ಇದರಿಂದಲಾದರೂ ಸಿದ್ಧರಾಮಯ್ಯನವರು ತಮ್ಮ ಆಡಳಿತ ಶೈಲಿಯನ್ನು ತಿದ್ದಿಕೊಳ್ಳಬೇಕಾಗಿತ್ತು. ಲೋಕಾಯುಕ್ತರ ನೇಮಕ ನಿರಂತರವಾಗಿ ವಿಳಂಬವಾಗುತ್ತಿದೆ. ಈಗಿನ ಪರಿಸ್ಥಿತಿ ನೋಡಿದರೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವವರೆಗೆ ಈ ಹುದ್ಧೆ ಖಾಲಿ ಬಿಡುವ ಸಂಭವ ಇದೆಯೇನೋ ಎಂಬಂತೆ ಕಂಡುಬರುತ್ತದೆ. ಈಗ ಇವರು ಎಸ್ಸಾರ್ ನಾಯಕ್ ಅವರನ್ನು ಶಿಫಾರಸು ಮಾಡಿ ರಾಜ್ಯಪಾಲರಿಗೆ ಕಳುಹಿಸಿದ್ದಾರೆ ಆದರೆ ರಾಜ್ಯಪಾಲರು ಇದನ್ನು ನೇಮಕ ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆಡಳಿತ ಪಕ್ಷದವರು ಹೇಳುತ್ತಿದ್ದಾರೆ. ಇದನ್ನು ನೋಡುವಾಗ ಗುಜರಾತಿನಲ್ಲಿ ಲೋಕಾಯುಕ್ತರನ್ನು ನೇಮಕ ಮಾಡದೆ ಕಾಲಹರಣ ಮಾಡಿದ ರೀತಿಯೇ ಕರ್ನಾಟಕದಲ್ಲಿ ಮರುಕಳಿಸುವ ಸಂಭವ ಕಾಣುತ್ತದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು, ಹಾಗಾಗಿ ಇವರಿಗೆ ಜನರ ಬವಣೆ, ಸಂಕಟ ಅರ್ಥವಾಗಬೇಕಾಗಿತ್ತು. ಆದರೆ ಇವರ ಈಗಿನ ಧೋರಣೆ ನೋಡುವಾಗ ಇವರಿಗೆ ಜನರ ಸಂಕಟ ಅರ್ಥವೇ ಆಗದಷ್ಟು ಜಡ್ಡುಗಟ್ಟಿ ಹೋಗಿರುವಂತೆ ಕಂಡುಬರುತ್ತದೆ. ಸಿದ್ಧರಾಮಯ್ಯನವರಿಗೆ ರಾಜ್ಯದ ಆಡಳಿತ ಯಂತ್ರದ ಮೇಲೆ ಹಿಡಿತವೇ ಇಲ್ಲ. ಹೀಗಾಗಿ ರಾಜ್ಯದಲ್ಲಿ ಆಡಳಿತ ಹದಗೆಟ್ಟು ಹೋಗಿದೆ. ಅಧಿಕಾರಿಗಳು ಜನರ ಕೆಲಸವನ್ನು ಶೀಘ್ರವಾಗಿ ಮಾಡುತ್ತಲೇ ಇಲ್ಲ. ಹೇಗೆ ಮಾಡಿದರೂ, ಎಷ್ಟು ವಿಳಂಬ ಮಾಡಿದರೂ ನಡೆಯುತ್ತದೆ ಈಗಿನ ಸಿದ್ಧರಾಮಯ್ಯನವರ ಜಡ್ಡುಗಟ್ಟಿದ ಆಡಳಿತದಲ್ಲಿ ಎಂಬ ಸಂದೇಶ ಆಡಳಿತಶಾಹಿಗೆ ಬಂದುಬಿಟ್ಟಿದೆ, ಹೀಗಾದರೆ ಆಡಳಿತ ಹಳ್ಳ ಹಿಡಿಯುತ್ತದೆ. ಅಧಿಕಾರಶಾಹಿಯ ಮೇಲೆ ಹಿಡಿತ ಎಂದರೆ ಅಧಿಕಾರಿಗಳ ಕಪಾಳಕ್ಕೆ ಬಾರಿಸುವುದು ಮೊದಲಾದ ಗೂಂಡಾಗಿರಿಯ ವರ್ತನೆ ಅಲ್ಲ. ಜನರ ಕೆಲಸ ಮಾಡದ ಅಧಿಕಾರಿಗಳ ಮೇಲೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದು ಆಡಳಿತಶಾಹಿಯ ಮೇಲೆ ನಿಯಂತ್ರಣ ಸಾಧಿಸಲು ಅಗತ್ಯ. ಅದಕ್ಕೆ ಮಂತ್ರಿಗಳು ನೈತಿಕವಾಗಿ ಉನ್ನತ ಮಟ್ಟದಲ್ಲಿ ಇರಬೇಕಾಗುತ್ತದೆ. ಮಂತ್ರಿಗಳು/ಮುಖ್ಯಮಂತ್ರಿಗಳು ನೈತಿಕವಾಗಿ ಕುಸಿದಾಗ ಆಡಳಿತಶಾಹಿಯೂ ಕುಸಿದು ಇಂದು ರಾಜ್ಯದಲ್ಲಿ ಉಂಟಾಗಿರುವ ಅರಾಜಕತೆಯ ಪರಿಸ್ಥಿತಿ ತಲೆದೋರುತ್ತದೆ. ಈಗ ಕರ್ನಾಟಕದ ಅಧಿಕಾರಶಾಹಿಗೆ ಹೇಳುವವರು ಕೇಳುವವರು ಯಾರೂ ಇಲ್ಲ ಹೇಗೆ ಮಾಡಿದರೂ ನಡೆಯುತ್ತದೆ ಎಂಬ ಭಂಡ ಧೈರ್ಯ ಬಂದುಬಿಟ್ಟಿದೆ. ಇದಕ್ಕೆ ಆಡಳಿತ ನಡೆಸುವ ಮಂತ್ರಿಗಳು/ಮುಖ್ಯಮಂತ್ರಿಗಳು ನೈತಿಕವಾಗಿ ಕುಸಿದಿರುವುದೇ ಕಾರಣ. ಮುಖ್ಯಮಂತ್ರಿ ಸಿದ್ಧರಾಮಯ್ಯನವರಂತೂ ನೈತಿಕ ಅಧಃಪತನದ ಪಾತಾಳ ವನ್ನೇ ಮುಟ್ಟಿದ್ದಾರೆ. ಇನ್ನು ಉಳಿದವರ ಬಗ್ಗೆ ಹೇಳಲು ಏನು ಉಳಿದಿದೆ?
ಕರ್ನಾಟಕ ಮುಂದಿನ ಭವಿಷ್ಯ ಏನು? ಮುಂದೆ ಅಧಿಕಾರಕ್ಕೆಬಿಜೆಪಿ ಬರಬಹುದು. ಇದು ಕಾಂಗ್ರೆಸ್ಸಿನ ಇನ್ನೊಂದು ಮುಖ. ಇದರಿಂದ ರಾಜ್ಯದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂಬುದು ಕಳೆದ ಸಾರಿಯ ಬಿಜೆಪಿಯವರ ಜನವಿರೋಧಿ, ಜನಪೀಡಕ ಆಡಳಿತದಿಂದ ಸಾಬೀತಾಗಿದೆ. ರಾಜ್ಯದಲ್ಲಿ ಬಿಜೆಪಿ/ಕಾಂಗ್ರೆಸ್ಸ್/ಜೆಡಿಎಸ್ ಎಂಬ ತ್ರಿಮೂರ್ತಿಗಳು ಒಂದೇ ನಾಣ್ಯದ ಇನ್ನೊಂದು ಮುಖಗಳು. ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಗಳನ್ನು ಜನ ಬೆಳೆಸದೆ ಹೋದರೆ ರಾಜ್ಯಕ್ಕೆ ಭವಿಷ್ಯವೇ ಇಲ್ಲ. ಜನ ದೆಹಲಿಯ ಪಾಠದಿಂದ ಏನಾದರೂ ಕಲಿತುಕೊಳ್ಳದೆ ಹೋದರೆ ಬದಲಾವಣೆ ಸಾಧ್ಯವಿಲ್ಲ.