Mar 4, 2016

ಮೇಕಿಂಗ್ ಹಿಸ್ಟರಿ: ಬ್ರಿಟೀಷ್ ರಾಜ್ ನ ಸಾಮಾಜಿಕ ಸ್ಥಂಭಗಳು

making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

04/03/2016
ಹದಿನೇಳನೇ ಶತಮಾನದಲ್ಲಿ ಬ್ರಿಟನ್ನಿನ ಮಧ್ಯಮವರ್ಗದ ಪ್ರಜಾಪ್ರಭುತ್ವ ಕ್ರಾಂತಿ ಪೂರ್ಣವಾಗಿದ್ದು ಊಳಿಗಮಾನ್ಯ ಪದ್ಧತಿಯ ವಿರುದ್ಧ ನಿಂತ ರೈತರಿಗೆ ಮಧ್ಯಮವರ್ಗದ ಮುಂದಾಳತ್ವ ಜೊತೆಯಾದಾಗ. ಬ್ರಿಟನ್ನಿನಲ್ಲಿ ಬಂಡವಾಳಶಾಹಿತನ ಪ್ರಾರಂಭವಾಗಿದ್ದು ಇದೇ ಕ್ರಾಂತಿಯಿಂದ. ಆದರೆ ನಾವು ನೋಡುವಂತೆ ಕರ್ನಾಟಕ ಮತ್ತು ಭಾರತದಲ್ಲಿ ಇದೇ ಬ್ರಿಟೀಷ್ ಬಂಡವಾಳ ಊಳಿಗಮಾನ್ಯ ಪದ್ಧತಿಯ ಜೊತೆಗೆ ಸಖ್ಯ ಬೆಳೆಸಿಕೊಂಡ ಊಳಿಗಮಾನ್ಯ ಪದ್ಧತಿ ಕೊಳೆಯುವಿಕೆಯಿಂದ ಜೀವಂತಿಕೆಯತ್ತ ಹೊರಳಿತು. ಇದು ನಮ್ಮ ದೇಶದ ಬಂಡವಾಳಶಾಹಿತನದ ಅಭಿವೃದ್ಧಿಯ ಇತಿಹಾಸದಲ್ಲಿನ ಅತಿ ಮುಖ್ಯ ಘಟ್ಟ ಮತ್ತು ನಮ್ಮ ನೆಲದಲ್ಲಿ ಹೂಡಲಾದ ವಿದೇಶಿ ಬಂಡವಾಳದ ವಿಶಿಷ್ಟ ಲಕ್ಷಣ. ಸಾಮಾಜಿಕ ಪರಿಸ್ಥಿತಿ ಮತ್ತಷ್ಟು ಜಟಿಲವಾಯಿತು. ಈ ಅಂಶ ಮಾರ್ಕ್ಸ್ – ಲೆನಿನ್ – ಮಾವೋವಾದಿಗಳನ್ನು ವಿಚಲಿಸಿದ ಕಾರಣಕ್ಕೆ ರಿವಿಷನಿಸ್ಟ್ ಇತಿಹಾಸ ಮುಕ್ಕಾಯಿತು. ಈ ಅಂಶ ಮೂಡಲು ಕಾರಣರಾದವರ ಬಗ್ಗೆ ಮೊದಲು ತಿಳಿದು ನಂತರ ಇತಿಹಾಸಕಾರರೊಡನೆ ಚರ್ಚೆಗೆ ಮರಳೋಣ.

ಮೈಸೂರನ್ನು ವಶಕ್ಕೆ ತೆಗೆದುಕೊಳ್ಳುವಾಗ ಮದ್ರಾಸ್ ಸರಕಾರಕ್ಕೆ ಗವರ್ನರ್ ಜೆನರಲ್ ಎರಡು ಮುಖ್ಯ ಸೂಚನೆಗಳನ್ನು ನೀಡುತ್ತಾನೆ. ಅವುಗಳಲ್ಲೊಂದು “ಅಸ್ತಿತ್ವದಲ್ಲಿರುವ ಸ್ಥಳೀಯ ಸಂಸ್ಥೆಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕು” ಎನ್ನುವುದಾಗಿತ್ತು. (62) ಗವರ್ನರ್ ಜೆನರಲ್ ಈ ಸಲಹೆಗೆ ಯಾವುದೇ ವಿವರಣೆ ನೀಡಿರಲಿಲ್ಲ; ಬಹುಶಃ ವಸಾಹತು ಕಟ್ಟುವ ಮನ್ರೋರಂತವರಿಗೆ ಇದರ ಬಗೆಗಿನ ಮಾಹಿತಿ ಮೊದಲೇ ಇತ್ತು.

1812-13ರಲ್ಲಿ ಬರೆದ ಪತ್ರವೊಂದರಲ್ಲಿ ಮನ್ರೋ: “ವ್ಯವಸ್ಥೆಯ ಒಳಚೌಕಟ್ಟನ್ನು ಹಿಡಿದಿಡುವ ರಾಜಕಾರಣದ ವಸ್ತುಗಳಾಗಿ ಪ್ರತೀ ಹಳ್ಳಿಯ ಪಟೇಲರು ಮತ್ತು ಶಾನುಭೋಗರು ಸರಕಾರಕ್ಕೆ ತುಂಬಾ ಉಪಯುಕ್ತರು.”(63) ಇದು ತುಂಬ ಸಂಕ್ಷಿಪ್ತ ನೋಟವಾದರೂ ನ್ಯಾಯಸಮ್ಮತವಾದದ್ದು! ಬ್ರಿಟೀಷ್ ವಸಾಹತುಶಾಹಿ, ಊಳಿಗಮಾನ್ಯ ವರ್ಗವನ್ನು ಅತಿಯಾಗಿ ಮುದ್ದಿಸುವ ಹಿಂದಿನ ಪ್ರೇರಣೆಯನ್ನು ಇದು ಹೊರಹಾಕಿತ್ತು.

ಮನ್ರೋನ ವಾದಗಳನ್ನು ಹೆಚ್ಚಿನ ವಿವರಗಳೊಂದಿಗೆ ನೋಡೋಣ. ಜಮೀನ್ದಾರರು ಮತ್ತು ಊಳಿಗಮಾನ್ಯ ಪದ್ಧತಿಯ ಉಳಿಯುವಿಕೆಯ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಾನೆ. “ನಮ್ಮ ಅಧಿಕಾರ ಶೈಶಾವಸ್ಥೆಯಲ್ಲಿದ್ದಾಗ, ದೊಡ್ಡ ಜಮೀನ್ದಾರರು ಒಡ್ಡುತ್ತಿದ್ದ ಸಶಕ್ತ ಪ್ರತಿರೋಧವನ್ನು ಕುಗ್ಗಿಸಲು ಅವರ ಸಾಮ್ರಾಜ್ಯದ ವ್ಯಾಪ್ತಿಯನ್ನು ಕಿರಿದುಗೊಳಿಸುವುದು ಸರಿಯಾದ ಮಾರ್ಗವಾಗಿತ್ತು. ನಮ್ಮ ಇವತ್ತಿನ ಅಧಿಕಾರ ಶಕ್ತವಾಗಿರುವ ಪರಿಸ್ಥಿತಿಯಲ್ಲಿ ಅವರನ್ನು ಎಷ್ಟು ಸಾಧ್ಯವೋ ಅಷ್ಟು ಪೂರ್ಣವಾಗಿ ಉಳಿಸಿಕೊಳ್ಳುವುದು ನಮ್ಮ ಗುರಿಯಾಗಬೇಕು. ಜಮೀನ್ದಾರರ ಸಂತತಿ ಪೂರ್ಣ ನಾಶವಾಗಿಬಿಟ್ಟರೆ, ದೇಶದ ಆಳ್ವಿಕೆಯಲ್ಲಿ ಸ್ಥಳೀಯರಾರೂ ಇರುವುದಿಲ್ಲ. ಎಲ್ಲಾ ಉದ್ಯೋಗ ಮತ್ತು ಅಧಿಕಾರ ಕೆಲವೇ ಕೆಲವು ಯುರೋಪಿಯನ್ನರ ಜವಾಬ್ದಾರಿಯಾಗುತ್ತದೆ. ಆ ರೀತಿಯ ಪರಿಸ್ಥಿತಿ ಸರಕಾರದ ಭದ್ರತೆಗೆ ಅಪಾಯಕಾರಿ; ಸ್ಥಳೀಯರು, ಆಳುವ ವಿದೇಶಿ ಜನರ ಐಷಾರಾಮಿತನ ಮತ್ತು ತಮ್ಮ ಹೀನ ಸ್ಥಿತಿಯನ್ನು ತುಲನೆ ಮಾಡದೆ ಇರಲಾರರು. ಎಲ್ಲಾದರೂ ಒಂದೆಡೆ ಅಸಹನೆ ಪ್ರತಿಭಟನೆಯ ಸ್ವರೂಪ ಪಡೆದುಕೊಂಡರೆ, ಅದು ಶೀಘ್ರವಾಗಿ ಇತರೆಡೆಗೂ ಹರಡುತ್ತದೆ. ಒಂದೆಡೆ ಪ್ರತಿಭಟನೆಯನ್ನು ಹತ್ತಿಕ್ಕುವುದು ಮತ್ತೊಂದೆಡೆ ಪ್ರತಿಭಟನೆಗೆ ಪ್ರಚೋದನೆ ನೀಡುತ್ತದೆ. ನಮ್ಮೆಡೆಗೆ ಅವರಿಗೆ ಕರುಣೆಯೇನಿಲ್ಲ. ತಮ್ಮ ಬದುಕಿನ ನಿರ್ವಹಣೆಗೆ ಕೆಲವರು ನಮ್ಮ ಮೇಲೆ ಅವಲಂಬಿತರಾಗಿರುವುದನ್ನು ಬಿಟ್ಟರೆ ಉಳಿದವರಿಗೆ ಸರಕಾರದ ಜೊತೆಗೆ ಯಾವುದೇ ಬಂಧವಿಲ್ಲ. ಕೆಳವರ್ಗದ ಅಧಿಕಾರಿಗಳಿಗೆ, ಮತ್ತಿತರ ಅವಲಂಬಿತ ಯುರೋಪಿಯನ್ನರಿಗೆ ಪುರಾತನ ಕುಟುಂಬಗಳ ಆಸ್ತಿಪಾಸ್ತಿ ಸಿಕ್ಕುಬಿಟ್ಟಿದೆ ಎನ್ನುವ ಅಂಶವಷ್ಟೇ ಸಾಕು ಅವರು ನಮ್ಮ ವಿರುದ್ಧ ಸಿಡಿದೇಳಲು.

ಜಮೀನ್ದಾರರಿಂದ ಏನನ್ನಾದರೂ ದಸ್ತಗಿರಿ ಮಾಡುವಷ್ಟು ನಮ್ಮ ಶಕ್ತಿ ಬೆಳೆದಿದೆ. ವಿರೋಧಿಸಲಾಗುವುದಿಲ್ಲ ಎನ್ನುವುದವರಿಗೆ ಗೊತ್ತಿದೆ; ಅವರಿಗಿರುವ ಸಂತಸದ ಹಕ್ಕುಗಳನ್ನು ಮೊಟಕುಗೊಳಿಸುವ ಕೆಲಸಗಳನ್ನು ನಾವು ಮಾಡುವುದಿಲ್ಲ ಎನ್ನುವುದೂ ಅವರಿಗೆ ಗೊತ್ತಿದೆ. ಜಮೀನ್ದಾರಿ ಆಸ್ತಿಯನ್ನು ತಮ್ಮ ಪುಟ್ಟ ಅಥವಾ ದೊಡ್ಡ ಸೈನಿಕ ಶಕ್ತಿಯ ಮೂಲಕ ಅವರು ರಕ್ಷಿಸಿಕೊಳ್ಳಲು ಬೇಕಾದ ಭದ್ರತೆ ಸಿಗುತ್ತದೆ. ಈ ಸುರಕ್ಷಾ ಭಾವದ ಬಗ್ಗೆ ಸ್ವಲ್ಪ ಸ್ವಲ್ಪವಾಗಿ ಅವರಿಗೆ ನಂಬಿಕೆ ಮೂಡುತ್ತಿದ್ದಂತೆ ಸೈನ್ಯ ಸಾಕುವ ಅಭ್ಯಾಸಗಳನ್ನು ಮರೆತು ಆಸ್ತಿ ಪಾಸ್ತಿಯನ್ನು ಹೆಚ್ಚಿಸುವ ಕಡೆಗೆ ಗಮನಹರಿಸುತ್ತಾರೆ. ಮತ್ತು ಅವರ ಒಳಿತಿಗಾಗಿ ಬೇರೆಲ್ಲಾ ವರ್ಗಗಳಿಗಿಂತಲೂ ಹೆಚ್ಚಾಗಿ ಯಾವುದೇ ಆತಂಕದ ಸಮಯದಲ್ಲಿ ಸರಕಾರದ ನೆರವಿಗೆ ಬರುತ್ತಾರೆ. ದೂರದ ಬೆಟ್ಟದ ಮೇಲಿನ ಮುಖ್ಯಸ್ಥರಲ್ಲಿ ಈ ರೀತಿಯ ಬದಲಾವಣೆ ಕೊನೆಗೆ ಬರಬಹುದು, ಆದರೆ ಎಲ್ಲರಲ್ಲೂ ಈ ಬದಲಾವಣೆ ಆಗೇ ಆಗುತ್ತದೆ. ನಮ್ಮ ಪ್ರಭಾವಳಿಯಿಂದ ಈ ಬದಲಾವಣೆ ವೇಗ ಪಡೆಯುತ್ತದೆ…..ನಮ್ಮ ಸಂಯಮದ ನಡವಳಿಕೆ ಪ್ರಭಾವಳಿಗಿಂತಲೂ ಮುಖ್ಯವಾದುದು.

ಜಮೀನುದಾರರ ಭೂಮಿಯಷ್ಟೇ ಅಲ್ಲ, ಹಳ್ಳಿಯಲ್ಲಿರುವ ಸೇವಕರ ಅಧಿಕೃತ ಜಮೀನನ್ನು ವಿಭಾಗಿಸಿ ಹಂಚಲಾಗುತ್ತಿದೆ. ಈ ಪಾಪ ಕಾರ್ಯವನ್ನು ತಡೆಯುವ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳದಿದ್ದರೆ ಪ್ರತೀ ಭೂಮಾಲೀಕನೂ ಸಾಮಾನ್ಯ ಕೃಷಿಕನ ಸ್ಥಾನಕ್ಕೆ ಇಳಿದುಬಿಡುತ್ತಾನೆ. ಮೇಲ್ವರ್ಗದ ಪತನದೊಂದಿಗೆ ಜನರ ವ್ಯಕ್ತಿತ್ವವೂ ಕುಗ್ಗಿ ಹೋಗುತ್ತದೆ; ಸರಕಾರದ ಜೊತೆಗಿನ ಬಂಧ ಸಡಿಲವಾಗುತ್ತದೆ, ಅವರನ್ನು ಉದ್ಧರಿಸುವ ನಮ್ಮ ಕಾರ್ಯಕ್ರಮಗಳ ಬಗೆಗಿನ ಆಸಕ್ತಿಯನ್ನು ಅವರು ಕಳೆದುಕೊಂಡುಬಿಡುತ್ತಾರೆ ಮತ್ತು ಸರಕಾರ ನಡೆಸುವುದು ದಿನೇ ದಿನೇ ಕಷ್ಟಕರವಾಗುತ್ತದೆ. ಈ ಕಾರಣಗಳಿಂದ ಪುರಾತನ ಜಮೀನುದಾರರನ್ನು ಉಳಿಸಲು ನಮ್ಮ ಅಧಿಕಾರಶಕ್ತಿಯಲ್ಲಿ ಸಾಧ್ಯವಾದದ್ದೆಲ್ಲವನ್ನೂ ಮಾಡಬೇಕು ಮತ್ತು ಅಧಿಕೃತ ಎಸ್ಟೇಟುಗಳು ಮುರಿದು ಬೀಳದಂತೆ ನೋಡಿಕೊಳ್ಳಬೇಕು. ಇದು ಸಮಾಜದಲ್ಲಿ ಉನ್ನತ ಮತ್ತು ಕೆಳ ವರ್ಗವನ್ನು ಉಳಿಸುತ್ತದೆ ಮತ್ತು ಈ ಉಳಿಯುವಿಕೆಯಿಂದಷ್ಟೇ ಇಲ್ಲಿನ ಪರಿಸ್ಥಿತಿಯನ್ನು ಸುಧಾರಿಸಬಹುದಾಗಿದೆ.

ಆ ನಿಯಮಗಳ ಪ್ರಕಾರ ಭೂಮಿ ಹೊಂದದ ಭೂಮಾಲೀಕರಿಗೆ ಅಥವಾ ಹಳೆಯ ಜಮೀನುದಾರರಿಂದ ಭೂಮಿ ಖರೀದಿಸಿರುವ ಅಪರಿಚಿತರಿಗೆ ಇದು ಅನ್ವಯವಾಗದು.

ಬಾಕಿ ತೆರಿಗೆಯ ವಸೂಲಿಗಾಗಿ ಜಮೀನುದಾರರ ಭೂಮಿಯನ್ನು ಮಾರಾಟ ಮಾಡುವುದನ್ನು ಗೌರವಾನ್ವಿತ ನಿರ್ದೇಶಕ ಮಂಡಳಿ ಈಗಾಗಲೇ ನಿಷೇಧಿಸಿದೆ.”(64)

ಪುರಾತನ ಊಳಿಗಮಾನ್ಯ ಪದ್ಧತಿಯ ಆಸ್ತಿ ಮತ್ತದನ್ನು ಹೊಂದಿದ್ದ ಜಮೀನ್ದಾರ ವರ್ಗವನ್ನು ರಕ್ಷಿಸುವಾಗ ಮನ್ರೋ ಮೇಲ್ಮಟ್ಟದ ಅಧಿಕಾರಸ್ಥರ ಒಪ್ಪಿಗೆಗೆ ಮಾತ್ರ ಕಾಯುತ್ತಿದ್ದ. ಬ್ರಿಟೀಷ್ ರಾಜ್ ನ ಆಳ್ವಿಕೆಗೊಳಪಟ್ಟಿದ್ದ ಒಂದು ದೊಡ್ಡ ರಾಜಸಮೂಹ ಶಿರಸಾವಹಿಸಿ ಒಪ್ಪಿಬಿಡುತ್ತದೆ.

ಇಲ್ಲಿಯವರೆಗೆ ಊಳಿಗಮಾನ್ಯ ಪದ್ಧತಿಯ ಆರ್ಥಿಕ ಬುನಾದಿಯನ್ನು ತಲುಪುವ ಮನ್ರೋನ ವಿಧಾನವನ್ನು ನೋಡಿದೆವು. ಬ್ರಿಟೀಷ್ ಸಾಮ್ರಾಜ್ಯದ ಅನುಕೂಲಕ್ಕೆ ತಕ್ಕಂತೆ ಅವನದನ್ನು ಅಭ್ಯಸಿಸಿದ್ದನ್ನು ಈಗ ನೋಡೋಣ.

ಭಾರತದಲ್ಲಿ ಕೆಲಸ ಮಾಡಲು ಬ್ರಿಟೀಷ್ ಸಿವಿಲ್ ಸರ್ವೀಸಿಗೆ ಹೊಸತಾಗಿ ಸೇರಿದವರಿಗೆ ತಮಗೆ ಎದುರಾದ ಫ್ಯೂಡಲ್ ಮೂರ್ಖರನ್ನು ಬದಲಿಸುವ ಉತ್ಸುಕತೆಯಿತ್ತು. ಇದಕ್ಕಿದ್ದ ಕಾರಣ ಸರಳ ಸಾಂಸ್ಕೃತಿಕ ದ್ವೇಷ. ಮದ್ರಾಸ್ ಪ್ರಾಂತ್ಯದ ಗವರ್ನರಾಗಿದ್ದ ಮನ್ರೋ ಇವರು ಸಾಗಬೇಕಾದ ದಾರಿಯನ್ನು ಹಾಕಿಕೊಟ್ಟಿದ್ದರು. 

“ಸ್ವತಂತ್ರ ದೇಶದಲ್ಲಿನ ಬುನಾದಿಯ ಮೇಲೆ ನಮ್ಮ ಸಂಸ್ಥೆಗಳು ನಿಂತಿಲ್ಲವಾದ್ದರಿಂದ ಸ್ವತಂತ್ರ ದೇಶದಲ್ಲಿ ಕಾರ್ಯನಿರ್ವಹಿಸಿದಂತೆಯೇ ಕೆಲಸ ಮಾಡುವುದು ಸಾಧ್ಯವಿಲ್ಲ. ಸತ್ತ ಹೆಣದಿಂದ ಜೀವಂತ ದೇಹದ ಕೆಲಸಗಳನ್ನು ಮಾಡಿಸುವುದು ಅಸಾಧ್ಯ. ಹಾಗಾಗಿ ನೀತಿ ನಿಯಮಗಳನ್ನಿಲ್ಲಿ ರಚಿಸುವಾಗ ಈ ದೇಶದ ಮೇಲೆ ಅದರ ಸಂಭಾವ್ಯ ಪರಿಣಾಮಗಳೇನು ಎನ್ನುವುದರ ಬಗ್ಗೆ ಯೋಚಿಸಬೇಕೇ ಹೊರತು ಈ ರೀತಿಯ ನೀತಿ – ನಿಯಮಗಳು ಇಂಗ್ಲೆಂಡಿನ ಮೇಲೆ ಯಾವ ಪರಿಣಾಮಗಳನ್ನುಂಟುಮಾಡುತ್ತಿತ್ತು ಎಂಬುದನ್ನಲ್ಲ…….”(65)

ಬ್ರಿಟೀಷ್ ಅಧಿಕಾರಿಗಳು ಮನ್ರೋಗೆ ಪತ್ರದ ಮೇಲೆ ಪತ್ರ ಬರೆದು ಜನರಿಗೆ ಆತ ತೆರೆದುಕೊಂಡ ರೀತಿ ಉಂಟುಮಾಡಬಹುದಾದ ದಾಳಿಯ ಬಗ್ಗೆ ಕೇಳುತ್ತಿದ್ದಾಗ 1801ರ ಡಿಸೆಂಬರಿನಲ್ಲಿ ಊಳಿಗಮಾನ್ಯ ಪದ್ಧತಿ ವಸಾಹತುಶಾಹಿ ಆಳ್ವಿಕೆಯ ಸುಭದ್ರತೆಗೆ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುತ್ತ: “ಗುರ್ರಂಕೊಂಡದ ಎಲ್ಲಾ ಪಾಳೇಗಾರರು ಮತ್ತವರ ಹಿಂಬಾಲಕರು ಸೇರಿದ್ದ ಸಭೆಗೆ ಹೋದಾಗ ನನ್ನ ಜೊತೆ ಒಬ್ಬೇ ಒಬ್ಬ ವ್ಯಕ್ತಿ ಇರಲಿಲ್ಲ, ಕಳೆದ ವರ್ಷ ಹೋದಾಗಲೂ ಇರಲಿಲ್ಲ. ಅವರಿಗೆ ಸಿಗುವ ತೆರಿಗೆಯ ಹಣವನ್ನು (cowle) ನಾನು ಕಡಿತಗೊಳಿಸಿದ್ದೆ ಮತ್ತು ನಾನವರನ್ನು ಪಟೇಲರ ಮಟ್ಟಕ್ಕೆ ಇಳಿಸುತ್ತೇನೆನ್ನುವುದೂ ಅವರಿಗೆ ಗೊತ್ತಿತ್ತು. ಆದರೂ ಒಂದಿನಿತೂ ಅಗೌರವ ತೋರಲಿಲ್ಲ. ಸಾಮಾನ್ಯವಾಗಿ ಭಾರತೀಯ ಸಂಜಾತರು ಸಾರ್ವಜನಿಕ ಅಧಿಕಾರಿಗಳೆಡೆಗೆ ಭಯ ಭಕ್ತಿಯಿಂದ ಕೂಡಿದ ಪೂಜ್ಯ ಭಾವನೆ ಹೊಂದಿರುತ್ತಾರೆ.” (66)

ಮಧ್ಯಮವರ್ಗದ ಪ್ರಜಾಪ್ರಭುತ್ವ ಇಂಗ್ಲೆಂಡ್ ಮತ್ತು ಅರೆಊಳಿಗಮಾನ್ಯ ಭಾರತದ ನಡುವಿನ ಗೆರೆಯನ್ನು ಮನ್ರೋ ಗುರುತಿಸಿದ್ದ. ಅವನಿಗೆ ಊಳಿಗಮಾನ್ಯ ಪದ್ಧತಿ ಮುಂದುವರೆಯಬೇಕಿತ್ತು. ಅದರ ಬಗ್ಗೆ ಅನುಮಾನ ಬೇಡ. ವರ್ಗ, ಜಾತಿ, ಲಿಂಗ ಮತ್ತಿನ್ಯಾವ ಭೇದಗಳಿವೆಯೋ ಹೆಸರಿಸಿ – ಅವೆಲ್ಲವೂ ಮುಂದುವರಿಯುವುದು ಆತನಿಗೆ ಬೇಕಿತ್ತು. ಸ್ಥಿರಾಸ್ಥಿಯ ಹಕ್ಕುಗಳನ್ನು ಕೀಲಿಕೈಯಾಗಿ ಬಳಸಿ ಊಳಿಗಮಾನ್ಯತೆಯ ಉಳಿವಿಗಾಗಿ ಆತ ಕೆಲಸ ಮಾಡಿದ. ಈ ಉಳಿಯುವಿಕೆಯನ್ನು ಸಾಧಿಸಲು ವಸಾಹತುಶಾಹಿಯಡಿಯ ನಿಯಮಗಳನ್ನು ಉಪಯೋಗಿಸಿಕೊಂಡ. ಊಳಿಗಮಾನ್ಯ ಪದ್ಧತಿ ವಸಾಹತುಶಾಹಿಯ ಸೇವೆ ಮಾಡಿಕೊಂಡಿರಬೇಕೆಂಬುದು ಆತನ ಆಸೆಯಾಗಿತ್ತು. ಊಳಿಗಮಾನ್ಯ ಪದ್ಧತಿಯು ಭಾರತವನ್ನು ಒಂದು ತಟ್ಟೆಯಲ್ಲಿಟ್ಟು ಬ್ರಿಟೀಷರಿಗೆ ಲೂಟಿ ಮಾಡಲು ಕೊಡುವುದನ್ನು ಆತ ನೋಡಬೇಕಿತ್ತು. ಕೆಲವು ಬದಲಾವಣೆಗಳೊಂದಿಗೆ ಊಳಿಗಮಾನ್ಯ ಪದ್ಧತಿ ಮುಂದುವರಿಯಬೇಕಿತ್ತೆಂದು ಹೇಳಬಹುದು. ಅರೆಊಳಿಗಮಾನ್ಯ ಪದ್ಧತಿಯನ್ನು ಪ್ರತಿಷ್ಠಾಪಿಸಬೇಕಿತ್ತು.

ಒಂದೆಡೆ ದೊಡ್ಡ ದೊಡ್ಡ ಭೂಮಾಲೀಕತ್ವ ಒಡೆದು ಹೋಗುವುದನ್ನು ತಡೆದು ಊಳಿಗಮಾನ್ಯ ಪದ್ಧತಿಯ ಆರ್ಥಿಕತೆಯನ್ನು ಉಳಿಸಿದ ವಸಾಹತುಶಾಹಿಗಳು ಮತ್ತೊಂದೆಡೆ ವೈಯಕ್ತಿಕವಾಗಿ ಅವರಿಗೆ ಅಸಹ್ಯವೇ ಹುಟ್ಟಿಸಿದ್ದ ಅಸ್ಪ್ರಶ್ಯತೆ, ಮೂಢನಂಬಿಕೆ, ನಿರಕ್ಷರತೆ, ಬಾಲ್ಯವಿವಾಹ, ವಿಧವಾ ಹತ್ಯೆ, ಬಸದಿ ಬಿಡುವುದು ಮತ್ತು ಇನ್ನಿತರೆ ಸನಾತನ ಪದ್ಧತಿಗಳನ್ನು ತಡೆಯುವುದಕ್ಕೆ ಬೇಕಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಜಾರಿಗೊಳಿಸುವುದಕ್ಕೆ ಹಿಂದೇಟು ಹಾಕಿದರು. ಬದಲಿಗೆ ಈ ಪ್ರತಿಗಾಮಿ ಮೂಢನಂಬಿಕೆಗಳ ಮುಂದುವರಿಕೆಗೆ ತಮ್ಮ ಪೂರ್ಣ ಸಹಕಾರ ನೀಡಿದರು; ವಸಾಹತು ಆಳ್ವಿಕೆಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ. ವರುಷಗಳ ಆಡಳಿತದಿಂದ ಬ್ರಿಟೀಷ್ ಆಳ್ವಿಕೆ ಪ್ರಬುದ್ಧತೆ ಪಡೆದುಕೊಂಡಾಗ, ಜನಪ್ರಿಯ ಹೋರಾಟಗಳ ದೆಸೆಯಿಂದ ಸಾಮಾಜಿಕ ಅನಿಷ್ಟಗಳ ವಿರುದ್ಧ ಕಾನೂನು ಜಾರಿಗೊಳಿಸುವುದನ್ನು ಕಲಿತುಕೊಂಡರು. ಆದರೆ ಅವುಗಳ ಜಾರಿಗೆ ತಮ್ಮ ರೆಟ್ಟೆಗೆ ಶ್ರಮ ಕೊಡಲಿಲ್ಲ. ಇದನ್ನು ಬ್ರಿಟೀಷರ ಹಗ್ಗದ ಮೇಲಿನ ನಡಿಗೆ ಎಂದು ಕರೆಯಬಹುದೇನೋ?! ಆದರಿದು ಭಾರತದ ಫಕೀರರು ಮತ್ತು ದೊಂಬರಾಟದವರ ಆಟಕ್ಕಿಂತ ಹೆಚ್ಚು ಕೃತ್ರಿಮವಾಗಿತ್ತು. ಇದು ಭಾರತದ ಜನ ಸಮುದಾಯದ ಮೇಲೆ ಮಾಡಿದ ಮೋಡಿ – ಈ ಮೋಡಿಯನ್ನು ಇವತ್ತು ಭಾರತವನ್ನಾಳುತ್ತಿರುವವರು ಕೊಂಚ ಉತ್ತಮಪಡಿಸಿಕೊಂಡು ಮುಂದುವರೆಸಿದ್ದಾರೆ. ಈ ರಾಜಕೀಯ ಯುಕ್ತಿಯ ನಡೆ ಸಂವಿಧಾನದ ಬದಲಾವಣೆ ಬಯಸಿದವರು ಮತ್ತು ಪ್ರಗತಿಪರರು ವೈಯಕ್ತಿಕವಾಗಿ ಬ್ರಿಟೀಷ್ ರಾಜ್ ಅನ್ನು ಹೊಗಳುವಂತೆ ಮಾಡಿತು. ಸಾರ್ವಜನಿಕ ಬೆಂಬಲ ಸಿಗುವಂತೆ ಮಾಡಿತು.

ಊಳಿಗಮಾನ್ಯ ಪದ್ಧತಿಯ ಬುಡ ತಲುಪಿದ ಬ್ರಿಟೀಷರು, ಭಾರತದ ಜನಸಮೂಹದ ವಿರುದ್ಧ ಅವರು ಉಪಯೋಗಿಸುತ್ತಿದ್ದ ಕಬ್ಬಿಣದ ಕೈಗವಸನ್ನು ತಾವು ಧರಿಸಿದರು. ಊಳಿಗಮಾನ್ಯ ಪದ್ಧತಿಯ ಮೇಲ್ರಚನೆಯನ್ನು ಉಳಿಸಿ ನೆಲೆ ನಿಂತರು.

ಊಳಿಗಮಾನ್ಯ ಪದ್ಧತಿಯ ಅಸ್ತಿತ್ವ, ಶ್ರಮಿಕ ವರ್ಗವನ್ನು ದಮನಿಸಲು ಮತ್ತು ಆಕ್ರಮಿಸಿಕೊಂಡ ದೇಶವನ್ನಾಳಲು ನೀಡುತ್ತಿದ್ದ ರಾಜಕೀಯ ಅನುಕೂಲ ಉಳಿದೆಲ್ಲಕ್ಕಿಂತಲೂ ದೊಡ್ಡದು. ಊಳಿಗಮಾನ್ಯ ಆರ್ಥಿಕತೆಯಲ್ಲಿ ನೇರ ಸಂಬಂಧ, ವಲಸೆಗೆ ಅವಕಾಶವಿಲ್ಲದಿರುವುದು ಮತ್ತು ಜೀತದ ಕಾರಣದಿಂದ ಕೂಲಿಯವನನ್ನು ಯಜಮಾನನಿಗೆ ಬಂಧಿಸುತ್ತಿತ್ತು ಮತ್ತು ಇಬ್ಬರೂ ಜಮೀನಿನ ಬಂಧಿಗಳಾಗಿದ್ದರು; ಇದು ವಸಾಹತುಶಾಹಿ ಸರಾಗವಾಗಿ ತನ್ನ ಯೋಜನೆಗಳನ್ನು ಜಾರಿಗೊಳಿಸಲು, ಬದಲಿಸಲು ಅವಕಾಶ ನೀಡುತ್ತಿತ್ತು. ಊಳಿಗಮಾನ್ಯ ಪದ್ಧತಿಯನ್ನು ಭೂಹಂಚಿಕೆಯ ಮೂಲಕ ನಾಶಗೊಳಿಸಿದ್ದರೆ ಬಂಡವಾಳಶಾಹಿತನದ ಪ್ರವೇಶವಾಗುತ್ತಿತ್ತು, ಮತ್ತಿದು ಕೂಲಿಕಾರ್ಮಿಕರಲ್ಲಿ ರಾಜಕೀಯ ಹಕ್ಕಿನ ಪ್ರಜ್ಞೆಯನ್ನು ಜಾಗ್ರತಗೊಳಿಸುತ್ತಿತ್ತು. ಇದಕ್ಕೆ ಜಪಾನ್ ದೇಶ ಉದಾಹರಣೆಯಾಗಿದೆ. ವಸಾಹತುಶಾಹಿಯ ಆಕ್ರಮಣ ಮತ್ತು ಜಪಾನ್ ಮಾರುಕಟ್ಟೆಯ ದೋಚುವಿಕೆ ಹೆಚ್ಚು ಕಾಲ ನಡೆಯಲಿಲ್ಲ; ಕಾರಣ, ಜಾಗ್ರತ ಕಾರ್ಮಿಕರು ನಗರ ಪ್ರದೇಶದ ಬಡವರ ಜೊತೆಗೆ ಕೈಜೋಡಿಸಿ ಊಳಿಗಮಾನ್ಯ ಪದ್ಧತಿಯ ವಿರುದ್ಧ ಹೋರಾಡಲಾರಂಭಿಸಿದ್ದರು. ಪಾಶ್ಚಿಮಾತ್ಯ ವಸಾಹತುಶಾಹಿಗಳು ಜಪಾನಿಗೆ ಕಾಲಿಟ್ಟು ಅಲ್ಲಿನ ಊಳಿಗಮಾನ್ಯ ದೊರೆಗಳು ಮತ್ತವರ ಹಿಂಬಾಲಕರ ಜೊತೆಗೆ ಒಪ್ಪಂದ ಮಾಡಿಕೊಂಡರೂ ಹೋರಾಟವನ್ನು ಹತ್ತಿಕ್ಕಲಾಗಲಿಲ್ಲ, ಊಳಿಗಮಾನ್ಯ ಪದ್ಧತಿಯ ವಿರುದ್ಧ ಪ್ರಾರಂಭವಾದ ಸಣ್ಣ ಮಟ್ಟದ ಹೋರಾಟ ರಾಷ್ಟ್ರೀಯತೆಯ ಭಾವನೆಯ ಜಾಗ್ರತಿಯೊಂದಿಗೆ ವೇಗ ಪಡೆದುಕೊಂಡು ಊಳಿಗಮಾನ್ಯ ಪದ್ಧತಿಯನ್ನು ಉಳಿಸಿ – ಬೆಳೆಸಿ ಜಪಾನ್ ದೇಶವನ್ನು ವಶಪಡಿಸಿಕೊಳ್ಳಬೇಕೆಂದಿದ್ದ ವಸಾಹತುಶಾಹಿಗಳನ್ನು ಹೊಡೆದೋಡಿಸಿದರು. (67)

ಮಸುದ್ ದನ್ಮೋಲೆಯ ಪುಸ್ತಕ ‘The Heritage of Imperialism’ ಎರಡು ಭಿನ್ನ ಸಾಮಾಜಿಕ ವ್ಯವಸ್ಥೆಗಳಾದ ಊಳಿಗಮಾನ್ಯತೆ ಮತ್ತು ವಸಾಹತುಶಾಹಿ ಹೇಗೆ ಮೇಲ್ಮಟ್ಟದಲ್ಲಿ ಒಂದಕ್ಕೊಂದು ಹೊಂದಿಕೊಂಡವು ಎನ್ನುವುದನ್ನು ವಿಶ್ಲೇಷಿಸುತ್ತದೆ. “ಭಾರತದ ಮಟ್ಟಿಗೆ…..ಸಾಮಾಜಿಕ ಹೋರಾಟದ ತಿರಸ್ಕಾರದ ಬೇರುಗಳು ಹಿಂದೂ ಧರ್ಮದ ಸಾಂಸ್ಕೃತಿಕ ರಚನೆಯಲ್ಲಿದೆ. ಒಂದು ಜಾತಿ ಮತ್ತೊಂದರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದಕ್ಕೆ ಅಥವಾ ಕೆಳ ಜಾತಿಯನ್ನು ಮೇಲ್ಜಾತಿ ಲೂಟಿ ಮಾಡುವುದಕ್ಕೆ ಹಿಂದೂ ಧರ್ಮದಲ್ಲೇ ಅವಕಾಶವಿದೆ! ಆದಕಾರಣ ವಸಾಹತುಶಾಹಿ ಸಾಮಾಜಿಕ ಸಂಬಂಧಗಳಲ್ಲಿ ಮೇಲು ಕೀಳಿನ ವ್ಯವಸ್ಥೆಯನ್ನು ಪರಿಚಯಿಸಿದ್ದು ಜನರಲ್ಲಿ ಅದಾಗಲೇ ಇದ್ದ ಮಾನಸಿಕ ಸಮ್ಮತಿ ಮತ್ತು ಆ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಸಾಮಾಜಿಕ ರಚನೆ ಅಸ್ತಿತ್ವದಲ್ಲಿದ್ದದ್ದು ವಸಾಹತುಶಾಹಿಗೆ ಅನುಕೂಲವನ್ನೇ ಮಾಡಿತು.” (68)

ಎಲ್ಫಿನ್ ಸ್ಟೋನ್ ದೇವಾಲಯಗಳಿಗೆ ದತ್ತಿ ಕೊಟ್ಟದ್ದು ಮತ್ತು ಮನ್ರೋ ಮಠಗಳ ಬಗ್ಗೆ ಆದರದ ಭಾವನೆ ಹೊಂದಿದ್ದರ ಹಿಂದಿನ ಉದ್ದೇಶಗಳನ್ನು ವಿಶ್ಲೇಷಿಸಿದ ದನ್ಮೋಲೆ: “ವಸಾಹತುಶಾಹಿಯ ದಬ್ಬಾಳಿಕೆಯ ಶಕ್ತಿಗಳು ಸನಾತದ ದೊರೆ ಮತ್ತವನ ವ್ಯವಸ್ಥೆಯ ಮಾಯಾಪರದೆಯ ಹಿಂದವಿತು ರಕ್ಷಣೆ ಪಡೆಯಿತು.”(69)

“……ಪುರಾತನ ಸಿದ್ಧಾಂತಗಳು ಸಮುದಾಯದ ಸಾಮಾಜಿಕ ಮೌಲ್ಯಗಳ ಮುಂದುವರಿಕೆಗೆ ಮತ್ತು ಅದರಿಂದ ಸಾಮಾಜಿಕ ಸಮತೋಲನವನ್ನು ಕಾಪಿಡುವುದಕ್ಕೆ ಸಹಕಾರಿ ಎಂದು ಮೇಲ್ನೋಟಕ್ಕೆ ಕಾಣಿಸುತ್ತಾದರೂ, ವರ್ಗ ಪಕ್ಷಪಾತವಿರುವಾಗ ದಬ್ಬಾಳಿಕೆ ಶಕ್ತಿಯಾಗಿ ಬೆಳೆಯುತ್ತದೆ. ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳಲಾಗುತ್ತದೆ. ಮೌಡ್ಯತೆಯನ್ನು ಮುಂದುವರೆಸಲಾಗುತ್ತದೆ. ಶೋಷಕ ವಿದೇಶೀ ಶಕ್ತಿಗಳು ಪುರಾತನ ಸಿದ್ಧಾಂತಗಳ ಜೊತೆ ಹೊಂದಿಕೊಂಡಿದ್ದು ವಸಾಹತಶಾಹಿ ಸಿದ್ಧಾಂತ ಸಶಕ್ತವಾಗಿ ಕಾರ್ಯನಿರ್ವಹಿಸಲೆಂದು. ಈ ಕಾರ್ಯನಿರ್ವಹಣೆಗೆ ಪುರಾತನ ಸಿದ್ಧಾಂತಗಳು ಒಂದು ಚೌಕಟ್ಟು ನಿರ್ಮಿಸಿಕೊಟ್ಟಿದೆ” ಎಂದು ತಮ್ಮ ಮಾತು ಮುಗಿಸುತ್ತಾರೆ ದನ್ಮೋಲೆ. (70)

ಕರ್ನಾಟಕ ಮತ್ತು ಭಾರತದ ಜನಸಮೂಹ, ಅದರಲ್ಲೂ ರೈತ – ಕಾರ್ಮಿಕರನ್ನು ಉಸಿರೆತ್ತದಂತೆ ಮಾಡುವ ಸಲುವಾಗಿ ಬ್ರಿಟೀಷರು ಊಳಿಗಮಾನ್ಯ ಪದ್ಧತಿಯೊಂದಿಗೆ ಜೊತೆಯಾದರು ಮತ್ತು ಅವಸಾನದತ್ತ ಸಾಗುತ್ತಿದ್ದ ಫ್ಯೂಡಲಿಸಂ ಮತ್ತೆ ಪುಟಿದೇಳುವಂತೆ ಮಾಡಿದರು. ವಸಾಹತುಶಾಹಿ ತನ್ನೆಲ್ಲಾ ಆರ್ಥಿಕ ಮತ್ತು ಸೈನಿಕ ಶಕ್ತಿಯೊಂದಿಗೆ ಅರೆ ಊಳಿಗಮಾನ್ಯ ಪದ್ಧತಿಯನ್ನು ಬೆಳೆಸಿ – ಉಳಿಸಿ, ಬೆಂಬಲಿಸಿ ವಿಸ್ತರಿಸಿತು.

ಇಂಗ್ಲೆಂಡಿನಲ್ಲಿ ಡಾ. ಜೆಕಿಲ್, ಭಾರತದಲ್ಲಿ ಮಿ.ಹೈಡ್ ಈ ವಿರೋಧಾತ್ಮಕ ವಿಭಾಗವನ್ನು ಮಧ್ಯಮವರ್ಗದ ವಸಾಹತುಶಾಹಿ ದುರಾಸೆ ಮತ್ತು ಬೂಟಾಟಿಕೆಯನ್ನು ಪೋಷಿಸಿದವು.

ಮುಂದಿನ ವಾರ: 
ತಲ್ಲೂರು ದೇಶಗತಿಯ ಸೂಕ್ಷ್ಮಜಗತ್ತು

Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.

No comments:

Post a Comment