ಅದು ರೋಹಿತ್ ವೇಮುಲನಿರಬಹುದು, ಡಿ.ಕೆ.ರವಿ ಇರಬಹುದು ಮತ್ತೊಬ್ಬರಿರಬಹುದು ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಕಂಡರೆ ನನಗೆ ಮುಂಚಿನಿಂದಲೂ ಒಂದಷ್ಟು ಅಸಹ್ಯವೇ. ರೋಹಿತ್ ವೇಮುಲನ ಸಾವಿಗೆ ಪೂರ್ವಾಗ್ರಹಪೀಡಿತ ವ್ಯವಸ್ಥೆಯ ಕಾರಣವೂ ಇದ್ದಿದ್ದರಿಂದ ವ್ಯವಸ್ಥೆಯ ಬಗ್ಗೆ ಒಂದಷ್ಟು ಸಿಟ್ಟಿತ್ತು. ಅವನ ಕೊನೆಯ ಪತ್ರ ಬಹಳವಾಗಿ ಕಾಡಿದ್ದೂ ಹೌದು. ರೋಹಿತನ ಸಾವಿಗೊಂದು ಸಂತಾಪ – ಪ್ರತಿಭಟನೆಯಲ್ಲಿ ಭಾಗವಹಿಸಿದಾಗಲೂ ಗೆಳೆಯರೊಂದಿಗೆ ಆತ್ಮಹತ್ಯೆಗೆ ಹತ್ತಾರು ಕಾರಣಗಳು ಇದ್ದಿರಬಹುದು, ಆದರೆ Instigating factor ಅಂತ ಇದ್ದರೆ ಅದು ವಿಶ್ವವಿದ್ಯಾಲಯದ ನಿರ್ಧಾರಗಳು ಎಂದು ಚರ್ಚಿಸಿದ್ದೆ. ಬಿಜೆಪಿ ಕೂಡ ‘ಇದು ವೈಯಕ್ತಿಕ ಕಾರಣಕ್ಕಾದ ಸಾವು’ ಎಂದು ತಿಪ್ಪೆ ಸಾರಿಸುವ ಮಾತುಗಳಾನ್ನಡುತ್ತಾರೆ ಎಂದೇ ನಿರೀಕ್ಷಿಸಿದ್ದೆ. ಆದರೆ ಯಾವಾಗ ರೋಹಿತನ ವ್ಯಕ್ತಿತ್ವಹರಣ, ಅವನು ದಲಿತನಲ್ಲ(ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಸದಸ್ಯನಾದವನೊಬ್ಬ ದಲಿತನೇ ಆಗಿರಬೇಕು ಎಂದುಕೊಳ್ಳುವ ನಮ್ಮೆಲ್ಲರ ಮನಸ್ಥಿತಿಯೂ ಒಂದು ರೀತಿಯಲ್ಲಿ ದುರಂತವೇ), ಅವನು ದೇಶದ್ರೋಹಿ, ವಿದ್ರೋಹಿ ಎಂದೆಲ್ಲ ಬಿಜೆಪಿಯ ವಕ್ತಾರರು, ಅವರ ಹಿಂಬಾಲಕರು, ದಲಿತ ಚಿಂತನೆಯ, ಮೀಸಲಾತಿಯ ವಿರೋಧಿಗಳು ಆಕ್ರಮಣಕಾರೀ ರೀತಿಯಲ್ಲಿ ಬೊಬ್ಬೆಯೊಡೆಯಲಾರಂಭಿಸಿದರೋ ಆಗ ರಾಜಕೀಯ ಕಾರಣ ಹೊರತು ಪಡಿಸಿ ಮತ್ಯಾವ ಕಾರಣವೂ ರೋಹಿತನನ್ನು ಆತ್ಮಹತ್ಯೆಗೆ ಪ್ರಚೋದಿಸಿಲ್ಲ ಎಂದು ಸ್ಪಷ್ಟವಾಯಿತು. ರೋಹಿತನ ಕೊನೆಯ ಪತ್ರ ಮೂಡಿಸಿದ ಬೇಸರದಿಂದ ಹೊರಬರುವಷ್ಟರಲ್ಲಿ 2014ರ ಸೆಪ್ಟೆಂಬರ್ ನಾಲ್ಕರಂದು ಐಐಟಿ ಬಾಂಬೆಯಲ್ಲಿ ಸತ್ತ ಅನಿಕೇತ್ ಅಂಬ್ಹೋರ್ ಎಂಬ ವಿದ್ಯಾರ್ಥಿಯ ತಾಯಿ ರೋಹಿತನ ಕುಟುಂಬಸ್ಥರಿಗೆ ಮತ್ತು ಗೆಳೆಯರಿಗೆ ಬರೆದ ಪತ್ರ ಮತ್ತಷ್ಟು ಬೇಸರ ಮೂಡಲು ಕಾರಣವಾಗಿದೆ. ಆ ತಾಯಿಯ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡುವ ಸಾಮರ್ಥ್ಯ ನಮ್ಮ ಸಮಾಜಕ್ಕೆ ಬಂದೇ ಇಲ್ಲ. ಜೀವನದಲ್ಲಿ ಮಾಡಿದ ಹತ್ತಲವು ತಪ್ಪುಗಳಲ್ಲಿ ಎಂಬಿಬಿಎಸ್ ಮಾಡುವಾಗ ಜಾತಿಯಾಧಾರಿತ ಮೀಸಲಾತಿ ಅಳಿಯಬೇಕು ಎಂಬ ಅಸಂಬದ್ಧ ಹೋರಾಟದಲ್ಲಿ ಭಾಗಿಯಾಗಿದ್ದೂ ಒಂದು. ಜಾತಿ ವ್ಯವಸ್ಥೆಯ ಕ್ರೂರ ಮುಖಗಳ ಪರಿಚಯವೇ ಇಲ್ಲದೆ ಭಾಗವಹಿಸಿಬಿಟ್ಟಿದ್ದ ದಿನಗಳವು. ಆ ಪ್ರತಿಭಟನೆಯಲ್ಲಿ ಮೈಸೂರು ಮೆಡಿಕಲ್ ಕಾಲೇಜಿನ ದಲಿತ ಹುಡುಗನೂ ಭಾಗವಹಿಸಿದ್ದಾನಂತೆ ಎನ್ನುವ ಸುದ್ದಿ ಮೀಸಲಾತಿ ತಪ್ಪು ಎನ್ನುವ ನಂಬಿಕೆಗೆ ಮತ್ತಷ್ಟು ಬಲ ತಂದಿತ್ತು. ಅನಿಕೇತನ ತಾಯಿಯ ಪತ್ರ ಓದುತ್ತಿದ್ದಂತೆ ಆ ಹುಡುಗ ಆ ಚಳುವಳಿಯಲ್ಲಿ ಭಾಗವಹಿಸುವುದರ ಹಿಂದೆ ಎಷ್ಟೆಲ್ಲ ಮಾತುಗಳನ್ನು, ಸಲಹೆಗಳನ್ನು, ಸವರ್ಣೀಯರ ಚರ್ಚೆಯನ್ನು ಕೇಳಿರಬೇಕು, ಅವನ ಮನದಲ್ಯಾವ ಭಾವನೆಗಳೆಲ್ಲ ಹರಿದಿರಬೇಕು ಎಂಬ ಯೋಚನೆ ಬಂತು. ನನ್ನ ಗೆಳತಿಯೊಬ್ಬಳಿದ್ದಳು, ಅವಳು ಹೇಳ್ತಿದ್ದಳು ಪ್ರತೀ ವರ್ಷ ಎಪ್ಪತ್ತು ಪರ್ಸೆಂಟ್ ತೆಗುದ್ರೂ ನೀನ್ ಬಿಡಮ್ಮ ರಿಸರ್ವೇಷನ್ನು ಅಂತ ಕೆಲವರು ಬೆನ್ನ ಹಿಂದೆ ಆಡಿಕೊಂಡರೆ, ಹಲವರು ನೇರವಾಗಿಯೇ ಹೇಳಿಬಿಡುತ್ತಿದ್ದರು, ಮೀಸಲಾತಿಯಿಂದ ಬಂದ ದಲಿತ ಹುಡುಗಿಯೊಬ್ಬಳು ನಮಗಿಂತ ಹೆಚ್ಚು ಅಂಕಗಳನ್ನು ತೆಗೆಯಬಲ್ಲಳು ಎನ್ನುವುದೇ ಅವರಿಗೆ ಅಪಥ್ಯದ ಸಂಗತಿಯಾಗಿತ್ತು ಅಂತ.
ನಮ್ಮ ಸಮಾಜಕ್ಕೆ ದಲಿತತ್ವದಿಂದ, ಅಂಬೇಡ್ಕರ್ ವಿದ್ಯಾರ್ಥಿ ಸಂಘದಿಂದ, ಪೆರಿಯಾರ್ ಸ್ಟಡಿ ಸರ್ಕಲ್ಲಿನಿಂದ ಯಾವ ಆಪತ್ತೂ ಇಲ್ಲ. ಬ್ರಾಹ್ಮಣ್ಯ ಪಾಲಿಸುವ ಬ್ರಾಹ್ಮಣರ ನೀಚತನ, ಬ್ರಾಹ್ಮಣ್ಯದ ಪಾದ ನೆಕ್ಕುತ್ತ ಬ್ರಾಹ್ಮಣರಿಗಿಂತ ಕೀಳಾದರೇನು, ದಲಿತರಿಗಿಂತ ನಾವು ಮೇಲಲ್ಲವೇ ಎನ್ನುವ ಭ್ರಮೆ ತುಂಬಿಕೊಂಡ ಶೂದ್ರರ ದೂರ್ತತನ, ಶೈಕ್ಷಣಿಕವಾಗಿ ಮೇಲೆ ಬಂದು ಆರ್ಥಿಕ ಉನ್ನತಿ ಕಾಣುತ್ತಿದ್ದಂತೆ ಬೇರುಗಳನ್ನು ಮರೆತು ಬ್ರಾಹ್ಮಣ್ಯದ ಹಿಂದೆ ನಾ ಮುಂದು ತಾಮುಂದು ಎಂದು ಓಡುತ್ತ ಬೆಳವಣಿಗೆಯ ಮೆಟ್ಟಿಲ ಮೇಲೆ ಮೊದಲ ಹೆಜ್ಜೆಯನ್ನೂ ಇಡದ ಇತರೆ ದಲಿತರನ್ನು ಕೀಳಾಗಿ ಕಾಣಲಾರಂಭಿಸಿರುವ ದಲಿತರಿಂದ ನಮ್ಮ ಸಮಾಜಕ್ಕೆ ನಿಜವಾದ ಅಪಾಯವಿದೆ. ‘ನಮ್ಮ ಮಕ್ಕಳು ಈ ಜಾತಿ ವ್ಯವಸ್ಥೆಯ ವಿರುದ್ಧ ಇನ್ನೂ ಎಲ್ಲಿಯವರೆಗೆ ಹೋರಾಡಬೇಕೋ ಗೊತ್ತಿಲ್ಲ’ ಎಂದು ಬೇಸರದಿಂದ ಹೇಳುವ ಅನಿಕೇತನ ಅಮ್ಮನ ಮಾತುಗಳಿಗೆ ಸಮಂಜಸ ಪ್ರತ್ಯುತ್ತರ ನಮ್ಮಲಿದೆಯೇ? - ಡಾ. ಅಶೋಕ್. ಕೆ. ಆರ್
ಐಐಟಿ, ಮುಂಬೈನಲ್ಲಿ ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅನಿಕೇತ್ ಅಂಬ್ಹೋರ್ ಸಂಶಯಾಸ್ಪದ ರೀತಿಯಲ್ಲಿ ಕ್ಯಾಂಪಸ್ಸಿನೊಳಗೆ ನಾಲ್ಕನೇ ಸೆಪ್ಟೆಂಬರ್ 2014ರಂದು ಸಾವನ್ನಪ್ಪುತ್ತಾನೆ. ಮರಣದ ನಂತರ ಅನಿಕೇತನ ಹೆತ್ತವರಾದ ಸುನಿತಾ ಮತ್ತು ಸಂಜಯ್ ಐಐಟಿಯ ನಿರ್ದೇಶಕರಿಗೆ ಹತ್ತು ಪುಟದ ಪತ್ರ ಬರೆದು ಅನಿಕೇತ್ ಕ್ಯಾಂಪಸ್ಸಿನೊಳಗೆ ಅನುಭವಿಸಿದ ಜಾತಿ ತಾರತಮ್ಯವನ್ನು ವಿವರಿಸುತ್ತಾರೆ. ಇದರ ನಂತರ ಸಾವಿನ ಕುರಿತು ತನಿಖೆ ನಡೆಸಲೊಂದು ಸಮಿತಿ ರಚನೆಯಾಗುತ್ತದೆ. ಅನಿಕೇತನ ಕುಟುಂಬ ಮತ್ತು ಸ್ನೇಹಿತರ ಸತತ ಒತ್ತಾಯದ ನಂತರವೂ ಸಮಿತಿಯ ವರದಿಯನ್ನು ಬಹಿರಂಗಗೊಳಿಸುವುದಿಲ್ಲ. ಅನಿಕೇತನ ತಾಯಿ ಸುನಿತ ರೋಹಿತ್ ವೇಮುಲನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೊಂದು ಪತ್ರ ಬರೆದಿದ್ದಾರೆ.
23, ಜನವರಿ 2015.
ರೋಹಿತ್ ವೇಮುಲನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ,
ರೋಹಿತ್ ವೇಮುಲನ ಕೊನೆಯ ಪತ್ರವನ್ನು ಓದಿದ ಮೇಲೆ ಉಸಿರು ಕಟ್ಟಿದಂತಾಗುತ್ತಿದೆ, ಆರಾಮಿಲ್ಲವೆನ್ನಿಸುತ್ತಿದೆ. ಶಿಕ್ಷೆಯ ಹೆಸರಿನಲ್ಲಿ ಸಂಶೋಧಕನೊಬ್ಬನಿಗೆ ಏಳು ತಿಂಗಳಿಂದ ಸ್ಕಾಲರ್ ಶಿಪ್ ಸಿಗುವುದಿಲ್ಲ, ಹಾಸ್ಟೆಲ್ಲಿನಿಂದ ಹೊರದಬ್ಬಲಾಗುತ್ತದೆ, ಎಲ್ಲವೂ ಆತನನ್ನು ಒಳಗಿನಿಂದ ಮುರಿದುಹಾಕುವ ಯತ್ನ. ರೋಹಿತ್ ಪತ್ರದಲ್ಲಿ ಯಾರನ್ನೂ ದೂಷಿಸಿಲ್ಲವಾದರೂ ಹೃದಯ ಹಿಂಡುವ ಪತ್ರವದು. ನನಗೆ ರೋಹಿತ್ ಮತ್ತು ಅನಿಕೇತನ ಯೋಚನೆಗಳಲ್ಲಿರುವ ಸಾಮ್ಯತೆ ಎದ್ದುಕಾಣಿಸುತ್ತಿದೆ ಮತ್ತು ಅವರಿಬ್ಬರೂ ಅನುಭವಿಸಿದ ನೋವೆಂತಹದಿರಬಹುದೆಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅನಿಕೇತ್ ಯಾವುದೇ ಪತ್ರ ಬಿಟ್ಟು ಹೋಗಲಿಲ್ಲ, ಆದರೆ ಅವನ ಡೈರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿರುವ ವಾಕ್ಯಗಳಿಂದ, ಅವನ ಕವಿತಗಳಿಂದ ಜೀವ ತೆಗೆದುಕೊಳ್ಳುವ ಹಂತದಲ್ಲಿದ್ದ ಇಬ್ಬರ ಮನಸ್ಥಿತಿಯೂ ಒಂದೇ ತೆರನಾಗಿತ್ತು ಎಂದು ಕಂಡುಕೊಂಡಿದ್ದೇನೆ.
ಅನಿಕೇತನೂ ಸಮಾನತೆಯ ಬಗ್ಗೆ ಮಾತನಾಡುತ್ತಿದ್ದ, ಮತ್ತು ಸಂಪೂರ್ಣ ಮನಸ್ಸಿನೊಂದಿಗೆ ತೃತೀಯ ಲಿಂಗಿಗಳ ಹೋರಾಟಕ್ಕೆ ಬೆಂಬಲಿಸುತ್ತಿದ್ದ. ಹೆತ್ತವರ ಬಗ್ಗೆ ಅವನಿಗೆ ಬಹಳಷ್ಟು ಯೋಚನೆಯಿತ್ತು. ಜಾತಿ, ಮೀಸಲಾತಿ, ದೇವರ ಬಗೆಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ. ಐಐಟಿಯ ಪೂರ್ವಭಾವಿ ಪರೀಕ್ಷೆಗೆ ತಯಾರಿ ನಡೆಸುವ ದಿನಗಳಿಂದಲೂ ಅನುಭವಿಸುತ್ತಿದ್ದ ತಾರತಮ್ಯದ ಹಿಂದಿನ ಮನಸ್ಸುಗಳನ್ನು ಎದುರಿಸುತ್ತಿದ್ದ.
ಯಾವಾಗ ಸಶಕ್ತರ ವಿರುದ್ಧದ ಹೋರಾಟದಲ್ಲಿ ವ್ಯಕ್ತಿಯೊಬ್ಬ ದಣಿದುಬಿಡುತ್ತಾನೋ, ಆಗಷ್ಟೇ ಅವನಿಗೆ ಖಾಲಿತನ ಕಾಡುತ್ತದೆ, ನನ್ನ ಮಗನ ಮತ್ತು ರೋಹಿತನ ಜೀವನದಲ್ಲಿ ಕಂಡಂತೆ. ಈ ಖಾಲಿತನ ಸೂಕ್ಷ್ಮಮತಿಗಳಿಗೆ, ಹೆಚ್ಚು ಯೋಚಿಸುವವರಿಗೆ ಮತ್ತು ತಮ್ಮ ಕನಸನ್ನು ನನಸಾಗಿಸಿಕೊಳ್ಳಬಯಸುವವರಿಗೆ ಭಯ ಮೂಡಿಸುತ್ತದೆ. ಈ ರೀತಿಯ ಜನರು ತಮ್ಮ ಸ್ವಭಾವದಿಂದಾಗಿ ಇತರರನ್ನು ದೂಷಿಸುವುದಿಲ್ಲ, ಮುಂದೆ ಸಾಗಲಾಗದಂತಹ ಒಂದು ಹಂತವನ್ನು ತಲುಪಿಬಿಡುತ್ತಾರೆ. ಅನಿಕೇತನ್ಯಾಕೆ ಅಷ್ಟೊಂದು ಯೋಚಿಸುತ್ತಿದ್ದ? ನಾವವನು ನಗುವುದನ್ನು, ಮಿಮಿಕ್ರಿ ಮಾಡುವುದನ್ನು, ಹಾಡುವುದನ್ನು ನೋಡಿದ್ದೆವು. ನನ್ನ ಮಗ ನಗು ಮರೆಯುವಂತಹದ್ದು ಐಐಟಿಯಲ್ಲೇನಿತ್ತು? ಅವನ ಮರಣದ ನಂತರ ವೈದ್ಯರು ಹೇಳಿದರು, ಅನಿಕೇತ್ ಗೊಂದಲದಲ್ಲಿದ್ದ ಎಂದು. ಆದರೆ ವಿಜ್ಞಾನ ಮತ್ತು ಗಣಿತ ಮೊದಲಿನಿಂದಲೂ ಅವನ ಮೆಚ್ಚಿನ ವಿಷಯಗಳು, ಅವನು ಗೊಂದಲಕ್ಕೇಕೆ ಈಡಾದ?
ಐಐಟಿಯಲ್ಲಿ ಅನಿಕೇತ್ ಅಪಮಾನಗಳನ್ನೆದುರಿಸಿರಬೇಕು, ಖಾಲಿತನ ಮೂಡಿರಬೇಕು. ಇದು ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿತ್ತು, ದಿನನಿತ್ಯದ ಚರ್ಚೆಗಳಲ್ಲಿ, ಗುರುಗಳು ಕೊಡುವ ಸಲಹೆಗಳೆಲ್ಲ ಇದನ್ನವನು ಅನುಭವಿಸಿರಬೇಕು. ಐಐಟಿ ಮಾತ್ರವಲ್ಲ, ಇತರೆ ಪ್ರತಿಷ್ಟಾರ್ಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಈ ಅಹಂಭಾವದ ಯೋಚನಾ ಲಹರಿಯಿದೆ. ಮೀಸಲಾತಿಯ ಮೂಲಕ ಈ ಸಂಸ್ಥೆಗಳಿಗೆ ಬಂದ ವಿದ್ಯಾರ್ಥಿಗಳಿಗೆ ಪದೇ ಪದೇ “ನೋಡು, ನೀನು ಮತ್ತು ನಾನು ಒಂದೇ ಆರ್ಥಿಕ ಪರಿಸ್ಥಿತಿಯಿಂದ ಬಂದಿದ್ದೇವೆ, ಆದರೂ ನಿನಗೆ ನಿನ್ನ ಜಾತಿಯ ಕಾರಣದಿಂದ ವಿಶೇಷ ಸೌಲತ್ತುಗಳು ಲಭಿಸಿವೆ…. ಮೀಸಲಾತಿ ತಪ್ಪು” ಹೇಳಲಾಗುತ್ತದೆ. ಇನ್ನಿತರೆ ಅದೇ ರೀತಿಯ ಸಂಗತಿಗಳನ್ನು ಹೇಳುತ್ತಾರೆ.
ಈ ಕಾರಣದಿಂದ ಅನಿಕೇತ್ ಜಾತಿಯ ಬೇರುಗಳನ್ನು ಹುಡುಕಲು ಶುರುಮಾಡಿದ. ವೈದಿಕ ಧರ್ಮ, ಅದರ ಪುಸ್ತಕಗಳು ಮತ್ತು ಅವುಗಳಲ್ಲಿನ ಜ್ಞಾನವೆಲ್ಲವೂ ಸತ್ಯವೆಂದು ಹೇಳುತ್ತ ಅದಕ್ಕೊಂದು ವೈಜ್ಞಾನಿಕ ರೂಪ ಕೊಟ್ಟು ಹುಡುಗರ ತಲೆಗೆ ಅಂತಹ ವಿಚಾರಗಳನ್ನು ತುಂಬುವ ಕೆಲಸ ಪ್ರತಿಷ್ಟಿತ ಸಂಸ್ಥೆಗಳಲ್ಲಿ ನಡೆಯುತ್ತಿದೆ. ಆದರೆ ಜಾತಿ ತಾರತಮ್ಯದಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರೆ ಸಂಸ್ಥೆಯ ವತಿಯಿಂದ ಯಾವುದೇ ನೆರವು ಸಿಗುವುದಿಲ್ಲ. ಈ ಸಮಸ್ಯೆಗಳ ಬಗ್ಗೆ ಸಮಾಲೋಚಿಸುವುದಿಲ್ಲ, ಇವನ್ನು ಸಮಸ್ಯೆ ಎಂದೇ ಪರಿಗಣಿಸುವುದಿಲ್ಲ, ಒಂದು ವರ್ಗದ ವಿದ್ಯಾರ್ಥಿ ಇದನ್ನು ಎದುರಿಸಬೇಕಾಗಿರುವುದು ವಾಸ್ತವ ಎಂದು ಬಿಂಬಿಸಿಬಿಡುತ್ತಾರೆ. ಮೀಸಲಾತಿ ಪಡೆಯುವುದನ್ನು ಅಪರಾಧದಂತೆ ನೋಡಲಾಗುತ್ತದೆ. ನೀವು ಮೀಸಲಾತಿ ಪಡೆದಿದ್ದರೆ ಜನರ ವಾದ ಮತ್ತು ತೀರ್ಪುಗಳನ್ನು ನೀವು ಎದುರಿಸಬೇಕೆಂದು ನಿರೀಕ್ಷಿಸುವುದು ಸವರ್ಣೀಯರ ಮನಸ್ಥಿತಿಯಾಗಿದೆ. ಅನಿಕೇತ್ ಮತ್ತು ಇತರೆ ಮಕ್ಕಳ ಸ್ಥಿತಿಯನ್ನು ಅನುಭೂತಿಯಿಂದ ನೋಡದೆ, ಅವರ ಸಾಮರ್ಥ್ಯದಲ್ಲಿನ ಕೊರತೆಯಾಗಿ, ಹೆತ್ತವರ ಒತ್ತಡದಂತೆ, ಜಾಸ್ತಿ ನಿರೀಕ್ಷೆಯಂತೆ ನೋಡುತ್ತಾರೆ, ಕಾರಣ? ನಿಜವಾದ ಸಮಸ್ಯೆಯ ಬಗ್ಗೆ ಸವರ್ಣೀಯರಾಗ ತಲೆ ಕೆಡಿಸಿಕೊಳ್ಳಬೇಕಿಲ್ಲ.
ತನ್ನ ಗುರುತನ್ನು ಅನಿಕೇತ್ ಕಳೆದುಕೊಂಡುಬಿಟ್ಟಿದ್ದ. “ನಾನ್ಯಾರು?” – ಇಂತಹ ಪ್ರಶ್ನೆ ಯಾಕೆ ಅವನನ್ನು ಕಾಡಬೇಕಿತ್ತು? ಐಐಟಿಗೆ ಬಂದ ಮೇಲೆ ಅನಿಕೇತ್ ಗ್ರಹ, ನಕ್ಷತ್ರ, ಆತ್ಮ, ಉನ್ನತಾತ್ಮ ಅಥವಾ ಇತರೆ ಪ್ರಪಂಚದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕಿತ್ತು? ಅವನ ಸ್ಪಷ್ಟ ಯೋಚನೆಗಳು, ಕ್ರಿಯಾತ್ಮಕ ಬುದ್ಧಿ ಮತ್ತವನ ನಗು ಎಲ್ಲಿ ಕಳೆದುಹೋಯಿತೆಂದು ನಮಗೆ ಗೊತ್ತಿಲ್ಲ. ನಮ್ಮ ಒಂದೇ ಒಂದು ಅಪರಾಧವೆಂದರೆ ಅವನನ್ನು ಐಐಟಿಗೆ ಜಾತಿ ಸರ್ಟಿಫಿಕೇಟಿನೊಡನೆ ಕಳುಹಿಸಿದ್ದು. ಅವನನ್ನು ಸಾಮಾನ್ಯ ಸಂಸ್ಥೆಗೆ ಸೇರಿಸಿದ್ದರೆ ಅವನ ಮನಸ್ಸನ್ನು ದುರ್ಬಲಗೊಳಿಸಿದ ಅಷ್ಟೊಂದು ಚರ್ಚೆ ಮತ್ತು ಸಲಹೆಗಳನ್ನವನು ಕೇಳಬೇಕಿರಲಿಲ್ಲ. ನೀನು ಅಸಾಮರ್ಥ್ಯ ಎನ್ನುವ ಭಾವನೆಯನ್ನು ಸಮರ್ಥ, ವಿವೇಕವುಳ್ಳ, ನಗುವಿನ ಹುಡುಗ ಅನಿಕೇತನಲ್ಲಿ ತುಂಬಿದ್ಯಾರು?
ಮಾನವ ಸಂಪನ್ಮೂಲ ಇಲಾಖೆಗೆ, ಪರಿಶಿಷ್ಟ ಜಾತಿಗಳ ಕಮಿಷನ್ನಿಗೆ ಬರೆದ ಯಾವ ಪತ್ರಕ್ಕೂ ನಮಗೆ ಪ್ರತಿಕ್ರಿಯೆ ಸಿಕ್ಕಿಲ್ಲ. ನಮ್ಮ ಮನವಿಯ ನಂತರ ಐಐಟಿ ಬಾಂಬೆ ತನಿಖಾ ಸಮಿತಿಯನ್ನೇನೋ ನೇಮಿಸಿತು ಆದರೆ ಸಂಸ್ಥೆಯ ಕಾರ್ಯವೈಖರಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ, ಸಮಿತಿಯ ವರದಿಯ ಬಗ್ಗೆ ನಮಗ್ಯಾವುದೇ ಮಾಹಿತಿಯಿಲ್ಲ. ಬಹುಶಃ ಉತ್ತರ ಕೊಡುವುದು ಅನವಶ್ಯಕ ಎಂದವರು ತಿಳಿದರೇನೋ…….
ನಮ್ಮ ಕಣ್ಣಲ್ಲಿ ನಾವು ತುಂಬ ಚಿಕ್ಕವಾರಾಗಿಬಿಟ್ಟಿದ್ದೀವಿ. ರೋಹಿತನ ಘಟನೆ ಮತ್ತೊಮ್ಮೆ ಈ ವಿಷಯವನ್ನು ಮುನ್ನೆಲೆಗೆ ತಂದಿದೆ. ಅನಿಕೇತ್ ಮತ್ತು ರೋಹಿತ್ ಎದುರಿಸಿದ ಸಂದರ್ಭಗಳು ಬೇರೆ ಬೇರೆ ಇದ್ದವು ಆದರೆ ಹೋರಾಟಕ್ಕಿದ್ದ ಕಾರಣ ಒಂದೇ ಆಗಿತ್ತು. ನಮ್ಮ ಮಕ್ಕಳು ಈ ಅವಿತು ಕುಳಿತ ಜಾತಿವ್ಯವಸ್ಥೆಯ ವಿರುದ್ಧ ಎಲ್ಲಿಯವರೆಗೆ ಹೋರಾಡಬೇಕೋ ಗೊತ್ತಿಲ್ಲ. ನಾವೂ ಹೋರಾಡುತ್ತಿದ್ದೇವೆ…..
ವಿದ್ಯಾರ್ಥಿಗಳ ಹೋರಾಟವಷ್ಟೇ ಈಗ ಉಳಿದಿರುವ ಆಶಾಕಿರಣ. ಬಹುಶಃ ವಿದ್ಯಾರ್ಥಿಗಳಿಗಷ್ಟೇ ನಿದ್ರಾವಸ್ಥೆಯಲ್ಲಿರುವ ವ್ಯವಸ್ಥೆಯನ್ನು ಬಡಿದೆಬ್ಬಿಸುವ ಶಕ್ತಿಯಿರುವುದು. ರೋಹಿತನ ಕುಟುಂಬ ಮತ್ತು ದಲಿತ ಸಮುದಾಯ ಅನುಭವಿಸುತ್ತಿರುವ ನೋವಿಗೆ ಒಂದಷ್ಟು ಶಾಂತಿ ದೊರಕುವುದೆಂಬ ನಿರೀಕ್ಷೆಯಲ್ಲಿದ್ದೀವಿ.
ಅನಿಕೇತನ ತಾಯಿ,
ಸುನಿತ ಅಂಬ್ಹೋರ್.
(ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್)
No comments:
Post a Comment