(ಸಾಂದರ್ಭಿಕ ಚಿತ್ರ) |
ಕು.ಸ.ಮಧುಸೂದನ ರಂಗೇನಹಳ್ಳಿ
ರಾಜ್ಯದಲ್ಲಿ ಆಯೋಜನೆಯಾಗುವ ಪ್ರತಿ ಗ್ಲೋಬಲ್ ಇನ್‍ವೆಸ್ಟ್ ಮೀಟ್‍ಗಳೂ ಈಗಾಗಲೇ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರಿಗೆ ಮತ್ತಷ್ಟು ಉತ್ತೇಜನ ಕೊಡುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿವೆ. ಮೊನ್ನೆ ತಾನೇ ನಡೆದ ಬೆಂಗಳೂರಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಾವಿರಾರು ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡಿಕೆಗೆ ಉದ್ಯಮಿಗಳು ಒಪ್ಪಿದ್ದಾರೆಂದು ಹೇಳಿರುವ ಬಾರಿ ಕೈಗಾರಿಕಾ ಮಂತ್ರಿ ಶ್ರೀ. ಆರ್.ವಿ.ದೇಶಪಾಂಡೆಯವರು ಇಷ್ಟೊಂದು ಪ್ರಮಾಣದ ಕೈಗಾರಿಕೆಗಳಿಗೆ ಅಗತ್ಯವಾದ ಭೂಮಿಯ ಪ್ರಮಾಣವೆಷ್ಟು ಮತ್ತು ಅಷ್ಟು ಭೂಮಿಯನ್ನು ಹೇಗೆ ನೀಡುತ್ತೇವೆಯೆಂಬುದನ್ನು ಮಾತ್ರ ಹೇಳಿಲ್ಲ. ಇಷ್ಟೊಂದು ಪ್ರಮಾಣದ ಬಂಡವಾಳ ಹೂಡಿಕೆಗೆ ಸಿದ್ದರಾಗಿರುವ ಉದ್ಯಮಿಗಳು ಸರಕಾರದಿಂದ ಸಾಕಷ್ಟು ಭೂಮಿಯನ್ನು ಕೇಳುವುದು ಮಾಮೂಲು. ಉದ್ಯಮಿಗಳ ಇಂತಹ ಬೇಡಿಕೆಯನ್ನು ಈಡೇರಿಸಲು ಸರಕಾರ ರೈತರ ಭೂಮಿಯನ್ನು ಸಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾಗುವುದು ಖಚಿತ! ಯಾಕೆಂದರೆ ಬೃಹತ್ ಕೈಗಾರಿಕೆಗಳಿಗೆ ಅಗತ್ಯವಾದ ಭೂಮಿಯನ್ನು ಒದಗಿಸುವುದು ಸರಕಾರವೇ ಒಪ್ಪಿಕೊಂಡ ಕರ್ತವ್ಯವಾಗಿದೆ. ಹೀಗೆ ಭೂಸ್ವಾಧೀನಕ್ಕೆ ಮುಂದಾಗುವ ಸರಕಾರಗಳು ಯಥಾಪ್ರಕಾರ ಅಭಿವೃದ್ದಿಯ, ಆರ್ಥಿಕ ಪ್ರಗತಿಯ, ನಿರುದ್ಯೋಗ ನಿವಾರಣೆಯ ಹುಸಿ ಮಾತುಗಳನ್ನಾಡುತ್ತವೆ. ಅಭಿವೃದ್ದಿಯ ಇಂತಹ ಮಾರ್ಗಗಳನ್ನು ವಿರೋಧಿಸುವವರಿಗೆ ತ್ಯಾಗದ ಪಾಠ ಮಾಡುತ್ತಾ ದೇಶದ ಸಮಗ್ರ ಪ್ರಗತಿಗೆ, ತಲಾ ಆದಾಯ ಹೆಚ್ಚಳಕ್ಕೆ ರೈತರು ತ್ಯಾಗ ಮಾಡುವುದು ಅನಿವಾರ್ಯವೆಂದೂ ಮತ್ತು ಅವರ ಮುಂದಿನ ಪೀಳಿಗೆಗೆ ಈ ತ್ಯಾಗದ ಫಲ ದೊರೆಯಲಿದೆಯೆಂದು ನಂಬಿಸಲು ಹೊರಡುತ್ತವೆ! ಇದು ಇವತ್ತು ನಿನ್ನೆಯ ಮಾತಲ್ಲ. ಇಂಡಿಯಾಕ್ಕೆ ಸ್ವಾತಂತ್ರ ದೊರಕಿದ ಪ್ರಾರಂಭದ ದಿನದಿಂದಲೂ ರೈತರಿಗೆ ಇಂತಹ ಮಾತುಗಳನ್ನು ಹೇಳಿಯೇ ಮೋಸ ಮಾಡಲಾಗುತ್ತಿದೆ.
ಸ್ವಾತಂತ್ರಾನಂತರದ ದಿನಗಳಲ್ಲಿ ಅಂದಿನ ಪ್ರದಾನಮಂತ್ರಿಯಾಗಿದ್ದ ಶ್ರೀ ಪಂಡಿತ್ ಜವಹರಲಾಲ್ ನೆಹರುರವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತ, ಮುಂದಿನ ಜನಾಂಗಕ್ಕೆ ಭದ್ರವಾದ ಆರ್ಥಿಕ ಬುನಾದಿಯನ್ನು ಹಾಕಲು, ದೇಶದ ಸರ್ವಾಂಗೀಣ ಪ್ರಗತಿಯನ್ನು ಸಾಧಿಸಲು ರೈತರು ತಮ್ಮ ಭೂಮಿ, ಮನೆ-ಕಾಣಿಗಳನ್ನು ಸರಕಾರದ ಇಚ್ಛೆಯಂತೆ ನೀಡಿ, ಭಾರಿ ಕೈಗಾರಿಕೆಗಳು ಮತ್ತು ಅಣೆಕಟ್ಟುಗಳ ನಿರ್ಮಾಣಕ್ಕೆ ಸಹಕರಿಸಬೇಕೆಂದು ಹೇಳಿದ್ದರು. ತಮ್ಮ ಕನಸಿನ ಕೂಸಾದ ಪಂಚವಾರ್ಷಿಕ ಯೋಜನೆಗಳ ಅನುಷ್ಠಾನಕ್ಕೆ ಕೃಷಿ ಸಮುದಾಯ ಇಂತಹದೊಂದು ತ್ಯಾಗ ಬಲಿದಾನಕ್ಕೆ ಸಿದ್ದವಾಗುವುದು ಅಗತ್ಯವಾಗಿದ್ದು, ಜನತೆ ತಮಗೆ ಬೆಂಬಲ ನೀಡುತ್ತಾರೆಂಬುದು ನೆಹರೂರವರ ನಂಬಿಕೆಯಾಗಿತ್ತು. ನೆಹರೂರವರ ನಂಬಿಕೆ ಸುಳ್ಳಾಗಲಿಲ್ಲ. ಅದು ಸ್ವಾತಂತ್ರ ಬಂದ ಹೊಸತಾದ್ದರಿಂದ ಸರಕಾರಗಳಿಂದ ಜನ ಭ್ರಮನಿರಸನರಾಗಿರಲಿಲ್ಲ. ಅವರಿಗಿನ್ನೂ ಸ್ವಾತಂತ್ರಪೂರ್ವದ ಆದರ್ಶಗಳು ತಮ್ಮ ಅಸ್ಮಿತೆಗಿಂತ ಮುಖ್ಯವಾಗಿದ್ದವು ಅನಿಸಿದ್ದವು. ಹಾಗಾಗಿ ಶೇಕಡಾ 90ಕ್ಕೂ ಅಧಿಕ ಜನ ಯಾವುದೇ ಪ್ರತಿರೋಧ ಒಡ್ಡದೆ, ಪ್ರಶ್ನೆಗಳನ್ನು ಕೇಳದೆ ತಮ್ಮ ಭೂಮಿಯ್ನು ಸರಕಾರಕ್ಕೆ ನೀಡಿದರು. ಜೊತೆಗೆ ಅಂದಿನ ದಿನಮಾನದಲ್ಲಿ ಬಹುತೇಕ ಯೋಜನೆಗಳು ಸರಕಾರದ ಒಡೆತನದವೇ ಆಗಿದ್ದು, ಖಾಸಗಿಯವರ ಪಾತ್ರವಿರಲಿಲ್ಲ. ಹೀಗಾಗಿ ಜನರು ಸಹ ತಾವು ತಮ್ಮ ಸರಕಾರಕ್ಕೆ ಭೂಮಿಯನ್ನು ತ್ಯಾಗ ಮಾಡಿದ ಸಂತೃಪ್ತಿಯನ್ನು ಕಂಡುಕೊಂಡಿದ್ದರು. ಆದರೆ ಸರಕಾರದ ಕೆಂಪುಪಟ್ಟಿಯ ವ್ಯವಸ್ಥೆ ಮತ್ತು ರಾಜಕೀಯ ಇಚ್ಚಾಶಕ್ತಿಯಿಲ್ಲದ ಕಾರಣವಾಗಿ ಜನರು ಬಹುಬೇಗ ನಿರಾಶರಾಗಬೇಕಾಯಿತು. ತಮ್ಮ ಮನೆಮಠ ಕಳೆದುಕೊಂಡು ನಿರಾಶ್ರಿತರಾದ ಲಕ್ಷಾಂತರ ಜನರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಪರಿಹಾರ ದೊರೆಯಲೇ ಇಲ್ಲ. ತಾವು ಯಾವುದಕ್ಕಾಗಿ ಮಾಡಿದ್ದೇವೆಂದು ರೈತರು ಬಾವಿಸಿದ್ದರೋ ಅಂತಹ ಫಲ ಅವರಿಗಿರಲಿ, ಅವರ ಮುಂದಿನ ಪೀಳಿಗೆಗೂ ದೊರೆಯಲಿಲ್ಲ. ಇದರಿಂದ ಇಂಡಿಯಾದ ಒಟ್ಟಾರೆ ಕೃಷಿಕ ವರ್ಗ ಭ್ರಮನಿರಸನಕ್ಕೆ ಒಳಗಾಯಿತು. ತದನಂತರದಲ್ಲಿನ ಸರಕಾರದ ಭೂಸ್ವಾಧೀನ ಪ್ರಕ್ರಿಯೆಗಳು ಎಲ್ಲೆಲ್ಲಿ ನಡೆಯಲು ಪ್ರಾರಂಭವಾಯಿತೊ ಅಲ್ಲೆಲ್ಲಾ ರೈತಾಪಿ ವರ್ಗದ ಪ್ರತಿಭಟನೆಗಳು ಶುರುವಾದವು.
ಈ ಹಿನ್ನೆಲೆಯಲ್ಲಿ ನೋಡಿದರೆ 1970ರಿಂದ 1990ವರೆಗಿನ ಎರಡು ದಶಕಗಳೂ ದೇಶದಲ್ಲಿ ಅಂತಹ ಯಾವುದೇ ಮಹತ್ವವಾದ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯಲಿಲ್ಲ. ಆದರೆ ತೊಂಭತ್ತರ ದಶಕದಲ್ಲಿ ಅಂದಿನ ಪ್ರದಾನಮಂತ್ರಿಯವರಾಗಿದ್ದ ದಿವಂಗತ ಶ್ರೀ ಪಿ.ವಿ. ನರಸಿಂಹರಾಯರ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಮತ್ತು ನಂತರ ದೇಶದ ಪ್ರದಾನ ಮಂತ್ರಿಯೂ ಆದಂತಹ ಶ್ರೀ ಮನಮೋಹನ್ ಸಿಂಗ್ ರವರು ಜಾರಿಗೆ ತಂದ ಮುಕ್ತ ಆರ್ಥಿಕ ನೀತಿಯು ವಿದೇಶಿ ಮತ್ತು ಸ್ವದೇಶಿ ಬಂಡವಾಳಿಗರನ್ನು ದೇಶದಲ್ಲಿ ಬೃಹತ್ ಕೈಗಾರಿಕೆಗಳಿಗೆ ಬಂಡವಾಳ ಹೂಡಲು ಕೆಂಪುಹಾಸು ಹಾಸಿ ಕರೆಯಿತು. ಆಗ ದೇಶಕ್ಕೆ ಕಾಲಿಟ್ಟ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉಧ್ಯಮಗಳನ್ನು ಸ್ಥಾಪಿಸಲು ಉಚಿತವಾದ ಭೂಮಿಯ ಬೇಡಿಕೆಯನ್ನಿಟ್ಟವು. ಅವರೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಂಡ ಸರಕಾರ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುಲು ಪ್ರಾರಭಿಸಿತು. ಮೊದಲಿಗೆ ಕೃಷಿಚಟುವಟಿಕೆಗಳಿಲ್ಲದಂತಹ ಬಂಜರು ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದ ಸರಕಾರ ಬೇಡಿಕೆ ಜಾಸ್ತಿಯಾದಂತೆ ಕೃಷಿ ಭೂಮಿಗೂ ಕೈಹಾಕಲು ತೊಡಗಿತು. ಈ ನಿಟ್ಟಿನಲ್ಲಿ ವಿರೋಧ ವ್ಯಕ್ತ ಪಡಿಸಿದವರಿಗೆ, ಇದೀಗ ತ್ಯಾಗದ ಕಥೆಯ ಜೊತೆಗೆ ಇನ್ನಷ್ಟು ಸುಳ್ಳುಗಳನ್ನು ಹೇಳಲು ಪ್ರಾರಂಭಿಸಿತು:
ಕೃಷಿಗೆ ಯಾವುದೇ ಭವಿಷ್ಯವಿಲ್ಲ. ಅದು ಹಳ್ಳಿಗಳ ಎಲ್ಲ ಜನರಿಗೂ ಉದ್ಯೋಗ ಕಲ್ಪಿಸುವಲ್ಲಿ ವಿಫಲವಾಗಿದೆ. ಅಲ್ಲದೇ ಕೃಷಿಯಿಂದ ಬರುವ ಅಲ್ಪ ಆದಾಯದಿಂದ ರಾಷ್ಟ್ರೀಯ ವರಮಾನಕ್ಕೆ ಯಾವುದೇ ಉಪಯೋಗವಿಲ್ಲ. ಅದೂ ಅಲ್ಲದೇ ಭೂಮಿಯಿಲ್ಲದೇ ಕೈಗಾರಿಕೆಗಳನ್ನು ಹೇಗೆ ಸ್ಥಾಪಿಸುವುದು? ಹೀಗೆ ಸ್ಥಾಪಿತವಾದ ಕೈಗಾರಿಕೆಗಳಿಂದ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗಗಳು ದೊರೆತು ಅವರ ತಲಾ ಆದಾಯ ಹೆಚ್ಚಳವಾಗಿ ರಾಷ್ಟ್ರೀಯ ಸಂಪತ್ತು ದ್ವಿಗುಣಗೊಳ್ಳುತ್ತದೆಯೆಂಬ ಕಪೋಲಕಲ್ಪಿತ ಸುಳ್ಳುಗಳನ್ನು ಸರಕಾರಗಳು ಆಡತೊಡಗಿದವು. ಅದೂ ಅಲ್ಲದೆ ಕಳೆದುಕೊಂಡ ಭೂಮಿಗೆ ಹೆಚ್ಚು ಪರಿಹಾರ ನೀಡುತ್ತಿರುವುದರಿಂದ ಅಂತಹ ರೈತರೂ ಸಹ ಸ್ವಯಂ ಉದ್ಯೋಗಗಳನ್ನು ಪ್ರಾರಂಬಿಸಿ ಆರ್ಥಿಕ ಪ್ರಗತಿಯನ್ನು ಸಾಧಿಸಬಹುದೆಂಬ ಆಮಿಷವನ್ನೂ ಒಡ್ಡತೊಡಗಿತು. ಆದರೆ ಸರಕಾರದ ಇಂತಹ ಹಸಿ ಸುಳ್ಳುಗಳನ್ನು ಜನರೀಗ ನಂಬುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಎಪ್ಪತ್ತರ ದಶಕಕ್ಕೆ ಮುಂಚೆ ಭೂಮಿ ಕಳೆದುಕೊಂಡ ಲಕ್ಷಾಂತರ ಕುಟುಂಬಗಳಿಗಿವತ್ತಿಗೂ ಸೂಕ್ತ ಪರಿಹಾರ ದೊರೆತಿಲ್ಲ. ಹಾಗು ಅವರುಗಳಿಗೆ ಸರಕಾರ ಅಂದು ನೀಡಿದ ಯಾವುದೇ ಆಶ್ವಾಸನೆಗಳೂ ಇವತ್ತಿಗೂ ಈಡೇರಿಲ್ಲ. ಅದೂ ಅಲ್ಲದೇ ಕೃಷಿಯ ಬಗ್ಗೆ ಅದರ ಉತ್ಪಾದನೆಯ ಶಕ್ತಿಯ ಬಗ್ಗೆ ಸರಕಾರ ಆಡುತ್ತಿರುವುದೆಲ್ಲ ಸುಳ್ಳುಗಳೆಂದು ಗ್ರಾಮೀಣ ಭಾಗದ ರೈತಾಪಿ ಕುಟುಂಬಗಳಿಗೆ ಮನವರಿಕೆಯಾಗಿದೆ.
ಇವತ್ತು ಕೃಷಿಯ ಉತ್ಪಾದನಾ ಸಾಮರ್ಥ್ಯ ಕುಸಿದಿದ್ದಲ್ಲಿ ಅದಕ್ಕೆ ಸರಕಾರವೇ ನೇರ ಹೊಣೆಯಾಗಿದೆ. ಯಾಕೆಂದರೆ ಕೈಗಾರಿಕೆಗಳಿಗೆ ಕೊಡಮಾಡುವಷ್ಟು ಆದ್ಯತೆಗಳನ್ನು ಸೌಕರ್ಯಗಳನ್ನು ಸರಕಾರ ಕೃಷಿಕ್ಷೇತ್ರಕ್ಕೆ ನೀಡದೆ ಅದನ್ನು ಕಡೆಗಣಿಸಿರುವುದೇ ಇವತ್ತಿನ ಕೃಷಿಯ ದುರಂತವಾಗಿದೆ. ಸರಿಯಾಗಿ ಕಲ್ಪಿಸದ ನೀರಾವರಿ ವ್ಯವಸ್ಥೆ, ನಿಗದಿತವಾಗಿ- ನಿರಂತರವಾಗಿ ವಿದ್ಯುತ್ ಪೂರೈಸಲಾಗದಿರುವುದು. ರೈತರಿಗೆ ಸುಲಭದರದಲ್ಲಿ ಗುಣಮಟ್ಟದ ಬೀಜ ಗೊಬ್ಬರಗಳನ್ನು ಪೂರೈಸದಿರುವುದು, ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡದಿರುವುದು. ನ್ಯಾಯಯುತ ಬೆಲೆ ಕೊಡಿಸುವಲ್ಲಿ ವಿಫಲವಾಗಿರುವುದೇ ಇವತ್ತಿನ ಕೃಷಿಯ ಉತ್ಪಾದಕತೆ ಕಡಿಮೆಯಾಗಿರಲು ಕಾರಣವೆಂಬ ಅಂಶವನ್ನು ಸರಕಾರಗಳು ಮರೆಮಾಚಿ ಕೃಷಿಕ್ಷೇತ್ರದ ಎಲ್ಲ ಬಿಕ್ಕಟ್ಟುಗಳಿಗೂ ರೈತರೇ ಹೊಣೆಯೆಂಬಂತೆ ಬಿಂಬಿಸುತ್ತಿವೆ. ನಗರವಾಸಿ ಅಕ್ಷರಸ್ಥ ಮಧ್ಯಮವರ್ಗ ಕೂಡ ಸರಕಾರಗಳ ಇಂತಹ ಸುಳ್ಳುಗಳನ್ನು ನಂಬಿಕೊಂಡು, ಭೂಸ್ವಾಧೀನದ ವಿರುದ್ದದ ಹೋರಾಟಗಳನ್ನು ಅಭಿವೃದ್ದಿಯ ವಿರುದ್ದದ ದೇಶದ್ರೋಹಿ ಹೋರಾಟಗಳೆಂಬಂತೆ ನೋಡುತ್ತಿದೆ. ಹೀಗಾಗಿ ಸಂಕಷ್ಟಕ್ಕೀಡಾದ ಇಂಡಿಯಾದ ರೈತಾಪಿ ವರ್ಗ ಏಕಾಕಿಯಾಗಿಯೇ ತನ್ನ ಹೋರಾಟವನ್ನು ನಡೆಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ.
ಕೈಗಾರಿಕರಣವೇ ದೇಶದ ಪ್ರಗತಿಗೆ, ಆರ್ಥಿಕ ಅಭಿವೃದ್ದಿಗಿರುವ ಏಕೈಕ ಮಾರ್ಗವೆಂದು ನಂಬಿಸಲು ಹೊರಟಿರುವ ಪ್ರಭುತ್ವದ ಮುಂದೆಯೂ ಇಂದು ಯಾವುದೇ ಅನ್ಯಮಾರ್ಗವಿರುವಂತೆ ಕಾಣುತ್ತಿಲ್ಲ. ಕಾರಣ ಆರ್ಥಿಕ ಪ್ರಗತಿಗೆ ಪಶ್ಚಿಮ ಮಾದರಿಯ ಅಭಿವೃದ್ದಿಪಥವೇ ಶ್ರೇಷ್ಠವೆಂದು ನಂಬಿಕೊಂಡು ಮುಕ್ತ ಆರ್ಥಿಕನೀತಿಯನ್ನು ಒಪ್ಪಿಕೊಂಡಾಗಿದೆ. ಜೊತಗೆ ರಾಷ್ಟ್ರ ಅಭಿವೃದ್ದಿಯ ಫಲ, ಸಮುದಾಯದ ತಳಮಟ್ಟದ ಪ್ರತೀ ವ್ಯಕ್ತಿಯನ್ನೂ ತಲುಪತ್ತದೆಯೆಂಬ ಸರಕಾರಗಳ ನಿಲುವು ಇವತ್ತು ಸುಳ್ಳಾಗುತ್ತಿದೆ. ಭೂಮಿ ಕಳೆದುಕೊಂಡ ರೈತನ ತ್ಯಾಗದ ಫಲ ಕೇವಲ ಸಮಾಜದ ಮೇಲ್ವರ್ಗಗಳಿಗೆ ಮಾತ್ರ ದೊರಕುತ್ತಿದೆ. .
ದುರಂತವೆಂದರೆ ಮುಕ್ತ ಆರ್ಥಿಕ ನೀತಿಗೆ ಶರಣಾಗಿ, ಜಾಗತೀಕರಣದ ಗುಲಾಮಿ ವ್ಯವಸ್ಥೆ ಅಡಿಯಾಳಾಗಿರುವ ನಾವೀಗ ಭೂಸ್ವಾಧೀನದ ವಿರೋಧಿ ಹೋರಾಟವನ್ನು ನಡೆಸುವುದು ಕೇವಲ ಸಾಂಕೇತಿಕ ಪ್ರತಿಭಟನೆಯ ಹಂತ ತಲುಪುತ್ತಿದೆ. ಆದ್ದರಿಂದ ನಮ್ಮ ಗುರಿ ಬೇರೆಯದೇ ಆಗಬೇಕಿದೆ. ಅಭಿವೃದ್ದಿಯ ಪರಿಕಲ್ಪನೆಯನ್ನೇ ಬುಡಮೇಲುಮಾಡಿರುವ ಮುಕ್ತ ಆರ್ಥಿಕನೀತಿಯ ಮೂಲವನ್ನೇ ಪ್ರಶ್ನಿಸಬೇಕಾದ ಸಂದರ್ಭವಿಂದು ಒದಗಿ ಬಂದಿದೆ. ನಾವೀಗ ಅಪ್ಪಿಕೊಂಡಿರುವ ಆರ್ಥಿಕ ನೀತಿಯಿಂದ ಹೊರಬಾರದೆ ನಮ್ಮ ಕೃಷಿ ಬಿಕ್ಕಟ್ಟಾಗಲಿ, ಭೂಮಿ ಕಳೆದುಕೊಳ್ಳುವ ರೈತರ ಸಂಕಷ್ಟವಾಗಲಿ ಪರಿಹಾರವಾಗುವ ಯಾವ ಲಕ್ಷಣಗಳೂ ನನಗಂತೂ ಗೋಚರವಾಗುತ್ತಿಲ್ಲ.
ಆದ್ದರಿಂದ ಈಗ ನಮ್ಮ ಮುಂದಿರುವುದು ಒಂದೇ ದಾರಿ: ಪರ್ಯಾಯ ಆರ್ಥಿಕ ನೀತಿಯೊಂದನ್ನು ಕಂಡುಕೊಳ್ಳಬೇಕಿರುವುದಾಗಿದೆ. ಇದಕ್ಕಾಗಿ ನಾವು ಒಂಷ್ಟು ಹಿಂದಕ್ಕೆ ಹೋಗಲೇ ಬೇಕಾದ ಅನಿವಾರ್ಯತೆಯಿದೆ. ಸಮಾಜವಾದಿ ಚಿಂತನೆ ಮತ್ತು ಗಾಂದಿವಾದಗಳನ್ನು ಬಳಸಿಕೊಂಡು ಹೊಸದಾದ ಆರ್ಥಿಕನೀತಿಯನ್ನು ಕಂಡುಕೊಳ್ಳಬೇಕಿದೆ. ಸದ್ಯದ ಸಂಕಷ್ಟಗಳಂದ ಪಾರಾಗಲು ನಮಗೆ ಬೇರಿನ್ನಾವ ಮಾರ್ಗಗಳೂ ಇರುವಂತೆ ಕಾಣುತ್ತಿಲ್ಲ.
No comments:
Post a Comment