Dr Ashok K R
ಒಂದಂಶವಂತೂ ನಿಕ್ಕಿಯಾಗಿದೆ, ಆಕರ್ಷಣೀಯವಲ್ಲದ, ಮನೋರಂಜನೆಯ ಅಂಶವಿಲ್ಲದ ಯಾವುದೇ ಚರ್ಚೆಗಳ ಬಗೆಗಿನ ಆಸಕ್ತಿ ಸತ್ತು ಹೋಗಿದೆ. ನರೇಂದ್ರ ಮೋದಿ ಹತ್ತು ಲಕ್ಷದ ಬಟ್ಟೆಯ, ಪೂರ್ತಿ ತಮ್ಮ ಹೆಸರನ್ನೇ ಬರೆದಿರುವ ಸೂಟನ್ನು ಧರಿಸಿದ್ದು ಎಷ್ಟು ತಪ್ಪೋ ಸಿದ್ಧರಾಮಯ್ಯ ಐವತ್ತು ಲಕ್ಷದ್ದೋ ಎಪ್ಪತ್ತು ಲಕ್ಷದ್ದೋ ಬೆಲೆಯ ಕೈಗಡಿಯಾರವನ್ನು ಧರಿಸಿದ್ದೂ ಅಷ್ಟೇ ತಪ್ಪು. ಇಬ್ಬರೂ ಅದು ಉಡುಗೊರೆಯಾಗಿ ಸಿಕ್ಕಿದ್ದು ಎಂದು ಹೇಳಿದ್ದಾರಾದರೂ ಸಿಕ್ಕ ಉಡುಗೊರೆಯನ್ನು ತಿರಸ್ಕರಿಸುವ ಹಕ್ಕು ಇಬ್ಬರಿಗೂ ಇತ್ತು ಎನ್ನುವುದು ಸುಳ್ಳಲ್ಲವಲ್ಲ. ಉಡುಗೊರೆ ಸಿಕ್ಕಿದ್ಯಾಕೆ, ಒಂದು ಉನ್ನತ ಸ್ಥಾನದಲ್ಲಿರುವವರು ಹೀಗೆ ಬೆಲೆಬಾಳುವ ಉಡುಗೊರೆಗಳನ್ನು ಪಡೆಯುವುದು ಕೂಡ ಭ್ರಷ್ಟಾಚಾರದ ಮತ್ತೊಂದು ರೂಪವಲ್ಲವೇ ಎನ್ನುವ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರ ಪಡೆಯುವ ರೀತಿಯಲ್ಲೂ ಚರ್ಚೆಗಳು ನಡೆಯುವುದಿಲ್ಲ. ಕಾಂಗ್ರೆಸ್ ಬೆಂಬಲಿಗರಿಗೆ ಮತ್ತು ಮೋದಿ ವಿರೋಧಿಗಳಿಗೆ ಹತ್ತು ಲಕ್ಷದ ಸೂಟು ಮೋದಿಯನ್ನು ಆಡಿಕೊಳ್ಳುವ ವಿಷಯವಾಗಿತ್ತು; ಈಗ ಮೋದಿ ಬೆಂಬಲಿಗರಿಗೆ ಮತ್ತು ಕಾಂಗ್ರೆಸ್ ವಿರೋಧಿಗಳಿಗೆ ನೋಡಿ ನಿಮ್ ಸಿಎಮ್ಮು ದುಬಾರಿ ವಾಚು ಧರಿಸಿದ್ದಾರೆ ಈಗೇನಂತೀರಾ? ಎಂದು ಮೋದಿ ಸೂಟಿಗೆ ಪ್ರತಿಕ್ರಿಯೆಯಾಗಿ ಕೇಳಲೊಂದು ಪ್ರಶ್ನೆ ಸಿಕ್ಕಿತಲ್ಲ ಎಂಬ ಸಮಾಧಾನ! ಪ್ರಶ್ನೆ ಕೇಳಿದ ಕುಮಾರಸ್ವಾಮಿಗೆ ಉತ್ತರ ಹೇಳುವ ಬದಲು ನಿಮ್ ಮಗ ಐದು ಕೋಟಿಯ ಕಾರು ಖರೀದಿಸಿಲ್ಲವಾ? ಎಂಬ ಮಕ್ಕಳಾಟದ ಪ್ರಶ್ನೆಯನ್ನು ನಮ್ಮ ಮುಖ್ಯಮಂತ್ರಿಗಳು ಕೇಳುತ್ತಿದ್ದಾರೆ! ಈ ಎಲ್ಲಾ ಮನೋರಂಜನಾತ್ಮಕ ಚರ್ಚೆಗಳ ನಡುವೆ ಕರ್ನಾಟಕದಲ್ಲೊಂದು ಇನ್ವೆಸ್ಟ್ ಕರ್ನಾಟಕ ಸಮಾವೇಶ ನಡೆದಿದೆ, ಬರೋಬ್ಬರಿ ಮೂರು ಲಕ್ಷ ಕೋಟಿಗಳಷ್ಟು ಹಣ ಕರ್ನಾಟಕಕ್ಕೆ ಹರಿದರಿದು ಬರಲಿದೆ ಎಂದು ಭರವಸೆ ನೀಡಲಾಗಿದೆ. ಅಷ್ಟೆಲ್ಲ ದುಡ್ಡು ನಿಜಕ್ಕೂ ಬಂದೇ ಬಿಟ್ಟರೆ ಕರ್ನಾಟಕದ ಕೃಷಿ ಕ್ಷೇತ್ರ ಹರಿದು ಹೋಗಲಿದೆ ಎನ್ನುವುದೂ ಸತ್ಯವೇ!
ಇನ್ವೆಸ್ಟ್ ಕರ್ನಾಟಕದಂತಹ ಸಮಾವೇಶದಿಂದ ಉಪಯೋಗವಾಗುವುದ್ಯಾರಿಗೆ, ಅನಾನುಕೂಲವಾಗುವುದ್ಯಾರಿಗೆ ಎನ್ನುವುದನ್ನು ಗಮನಿಸಲು ಆ ಹಣ ಬಂದಾಗ ವಶಪಡಿಸಿಕೊಳ್ಳುವ ಭೂಮಿ ಯಾರದು, ಅಲ್ಲಿ ಕೆಲಸ ಸಿಗುವುದ್ಯಾರಿಗೆ ಎಂದೆಲ್ಲಾ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಕರ್ನಾಟಕ ಸರಕಾರ ಇನ್ವೆಸ್ಟ್ ಕರ್ನಾಟಕಕ್ಕೆ ಮಾಡಿಕೊಂಡ ತಯಾರಿಯನ್ನು ನೋಡಿಯೇ ಇದು ಯಾರ ಅನುಕೂಲತೆಗೆ ನಡೆಯುತ್ತಿರುವ ಸಮಾವೇಶ ಎನ್ನುವುದು ಅರ್ಥವಾಗಿಬಿಡುತ್ತದೆ. ದಿನನಿತ್ಯದ ಪ್ರಯಾಣಿಕರಿಗೆ ರಸ್ತೆ ಸರಿ ಮಾಡಲು ಹಣದ ಕೊರತೆ, ಮತ್ತೊಂದು ಮಗದೊಂದು ನೆಪ ಹೇಳುವ ಅಧಿಕಾರಸ್ಥರು ಇಂತಹ ಸಮಾವೇಶ ನಡೆದಾಗ ರಪ್ಪಂತ ಎಲ್ಲಾ ರಸ್ತೆಗಳನ್ನೂ ಲಕ ಲಕ ಎಂದು ಹೊಳೆಯುವಂತೆ ಮಾಡಿಬಿಡಲ್ಲರು. ಜೊತೆಗೆ ರಸ್ತೆಯ ಮಧ್ಯೆ ರಸ್ತೆಯ ಇಕ್ಕೆಲಗಳಲ್ಲೆಲ್ಲಾ ಚೆಂದ ಚೆಂದದ ಹೂವಿನ ಗಿಡಗಳು. ರಸ್ತೆ ಮೇಲೆ ಧೂಳಿರಬಾರದೆಂದು ಲಕ್ಷಗಟ್ಟಲೆ ನೀರನ್ನು ಉಪಯೋಗಿಸಿ ತಿಕ್ಕಿ ತಿಕ್ಕಿ ತೊಳೆಯುವುದು ಬೇರೆ. ಇವೆಲ್ಲ ಬಿಡಿ, ಮನೆಗೆ ನೆಂಟ್ರು ಬರ್ತಾರೆಂದಾಗ ಒಂದಷ್ಟು ಹೆಚ್ಚು ಮುತುವರ್ಜಿಯಿಂದ ಮನೆ ಕಿಲೀನು ಮಾಡಿ, ಶೋಕೇಸಿನಲ್ಲಿ ಧೂಳಿಡಿದು ಕೂತಿದ್ದ ಕಪ್ಪು ಸಾಸರುಗಳನ್ನೆಲ್ಲ ಹೊರಗೆ ತೆಗೆಯುವುದಿಲ್ಲವೇ! ಇದನ್ನೂ ಹಾಗೇ ಎಂದುಕೊಳ್ಳೋಣ. ಆದರೆ ಟ್ರಾಫಿಕ್ಕನ್ನು ನಿಯಂತ್ರಿಸಲು ಮತ್ತು ಮಾಲಿನ್ಯವನ್ನು ತಡೆಗಟ್ಟಲು ಬಸ್ಸುಗಳನ್ನು ಊರ ಹೊರಗೇ ನಿಲ್ಲಿಸಿದ್ದು ಯಾವ ಪುರುಷಾರ್ಥಕ್ಕೆ? ಈ ನಿರ್ಧಾರದಿಂದ ತೊಂದರೆಯಾಗಿದ್ಯಾರಿಗೆ?
ಮೊದಲು ಸರಕಾರಿ ಮತ್ತು ಖಾಸಗಿ ಬಸ್ಸುಗಳೆರಡನ್ನೂ ವಾರದ ಮಟ್ಟಿಗೆ ಊರ ಹೊರಗೆ ನಿಲ್ಲಿಸಿಬಿಡುವ ನಿರ್ಧಾರ ಮಾಡುತ್ತಾರೆ. ಒಂದಷ್ಟು ವಿರೋಧ ವ್ಯಕ್ತವಾದಾಗ ಖಾಸಗಿ ಬಸ್ಸುಗಳನ್ನು ಮಾತ್ರ ಮೂರು ದಿನದ ಮಟ್ಟಿಗೆ ಊರ ಹೊರಗೆ ನಿಲ್ಲಿಸುವ ನಿರ್ಧಾರ ಮಾಡುತ್ತಾರೆ. ಈ ಖಾಸಗಿ ಬಸ್ಸಿನ ಪ್ರಯಾಣಿಕರಾರು ಎಂದು ಗಮನಿಸಿದರೆ ತೊಂದರೆಗೊಳಗಾಗಿದ್ಯಾರು ಎಂದು ಅರಿವಾಗುತ್ತದೆ. ನಮ್ಮ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಉಳಿದ ರಾಜ್ಯದ ಸರಕಾರಿ ಬಸ್ಸುಗಳಿಗೆ ಹೋಲಿಸಿದರೆ ಅತ್ಯುತ್ತಮ ಸೇವೆ ನೀಡುತ್ತಿರುವುದು ಹೌದಾದರೂ ದರ ಮಾತ್ರ ಆಕಾಶದಲ್ಲೇ ಇರುತ್ತದೆ. ಇವಕ್ಕೆ ಹೋಲಿಸಿದರೆ ಖಾಸಗಿ ಬಸ್ಸುಗಳಲ್ಲಿ ದರ ಅತ್ಯಂತ ಕಡಿಮೆ. ಜೊತೆಗೆ ಹೆದ್ದಾರಿಗಳಲ್ಲಿ ಸಿಗುವ ಚಿಕ್ಕಪುಟ್ಟ ಹಳ್ಳಿಗಳಲ್ಲೂ ನಿಲ್ಲಿಸಿ ಜನರ ಜೊತೆಗೆ ಕೋಳಿ ಪಿಳ್ಳೆ, ಕೃಷಿ ಉತ್ಪನ್ನವನ್ನೂ ಹತ್ತಿಸಿಕೊಂಡು ಬರುತ್ತವೆ. ಹಣ ಕಡಿಮೆಯಿರುವವರು, ಸರಕಾರೀ ಎಕ್ಸ್ ಪ್ರೆಸ್ ಬಸ್ಸುಗಳು ಕ್ಯಾರೇ ಎನ್ನದ ಹಳ್ಳಿಗಳ ಜನರು ಹತ್ತುವ ಖಾಸಗಿ ಬಸ್ಸುಗಳನ್ನು ತಡೆದು ನಿಲ್ಲಿಸಿಬಿಟ್ಟಿತು ಸರಕಾರ. ಮಾಲಿನ್ಯದ ಹೆಸರು, ಟ್ರಾಫಿಕ್ ಜಾಮಿನ ಹೆಸರಿನಲ್ಲಿ ಯಾವ ಕೆಲಸ ಮಾಡಿದರೂ ತುಂಬಾ ವಿರೋಧವೇನು ಬರುವುದಿಲ್ಲ ಎನ್ನುವುದವರಿಗೆ ಗೊತ್ತಿತ್ತಲ್ಲ. ಜೊತೆಗೆ ಈ ಬಸ್ಸುಗಳ ಪ್ರಯಾಣಿಕರು ಪತ್ರಿಕೆಗಳಿಗೆ ಬರೆದು, ಟಿವಿಯೊಳಗೆ ಕುಳಿತು, ಸಾಮಾಜಿಕ ಮಾಧ್ಯಮಗಳಲ್ಲಿ ಗುಲ್ಲೆಬ್ಬಿಸಿ ಸರಕಾರವನ್ನು ಮುಜುಗರಪಡಿಸುವುದಿಲ್ಲ ಎನ್ನುವುದರ ಅರಿವೂ ಅವರಿಗಿತ್ತಲ್ಲ. ಮೆಜೆಸ್ಟಿಕ್ಕಿನಿಂದ ಇಪ್ಪತ್ತು ಮೂವತ್ತು ಕಿಲೋಮೀಟರು ದೂರದಲ್ಲಿ ಎಲ್ಲಾ ಖಾಸಗಿ ಬಸ್ಸುಗಳನ್ನೂ ತಡೆದು ನಿಲ್ಲಿಸಿಯೇ ಬಿಟ್ಟರು. ‘ಬದಲಿ ವ್ಯವಸ್ಥೆ’ಯನ್ನು ಮಾಡಿದ್ದೇವೆ ಎಂಬ ಸಮಾಧಾನ ಬೇರೆ. ಮಾರನೇ ದಿನ ಬಹಳಷ್ಟು ಪತ್ರಿಕೆಗಳಲ್ಲಿ ಖಾಸಗಿ ಬಸ್ಸುಗಳು ನಗರ ಪ್ರವೇಶಿಸದ್ದಕ್ಕೆ ಟ್ರಾಫಿಕ್ ಜಾಮೇ ಇರಲಿಲ್ಲ ಕಣ್ರೀ ಅನ್ನುವ ವರದಿಗಳು ಬೇರೆ. ಟ್ರಾಫಿಕ್ಕು ತಡೆಯುವುದೇ ಸರಕಾರದ ಉದ್ದೇಶವಾಗಿದ್ದರೆ, ಮಾಲಿನ್ಯ ನಿಯಂತ್ರಿಸುವುದೇ ಅದರ ಗುರಿಯಾಗಿದ್ದರೆ ಕಾರುಗಳ್ಯಾವೂ ರಸ್ತೆಗಿಳಿಯಕೂಡದು, ಎಲ್ಲರೂ ಬಸ್ಸಿನಲ್ಲೇ ಪಯಣಿಸಿ, ಅದಕ್ಕಾಗಿ ‘ಬದಲಿ ವ್ಯವಸ್ಥೆಯನ್ನು’ ಮಾಡಿದ್ದೇವೆ ಎಂದು ನಿರ್ಧಾರ ತೆಗೆದುಕೊಳ್ಳಬಹುದಿತ್ತಲ್ಲ? ಅರವತ್ತು ಕಾರುಗಳಲ್ಲಿ ಅರವತ್ತರಿಂದ ನೂರು ಜನರು ಪಯಣಿಸುವುದು ಟ್ರಾಫಿಕ್ಕು ಹೆಚ್ಚಿಸುತ್ತದೋ ಅಥವಾ ಅದೇ ಅರವತ್ತರಿಂದ ನೂರು ಜನರು ಎರಡು ಬಸ್ಸುಗಳಲ್ಲಿ ಹೋಗುವುದು ಟ್ರಾಫಿಕ್ಕು ಹೆಚ್ಚಿಸುತ್ತದೋ? ಹಾಗೆ ಮಾಡಿಬಿಟ್ಟರೆ ಸ್ಮಾರ್ಟ್ ಫೋನ್ ಧಾರಿಗಳೆಲ್ಲರೂ ಹ್ಯಾಷ್ ಟ್ಯಾಗು, ಟ್ವಿಟರ್ ಟ್ರೆಂಡು, ಆನ್ ಲೈನ್ ಪಿಟಿಷನ್ನು ಅಂತೆಲ್ಲ ಶುರುಮಾಡಿ ಸರಕಾರದ ಮರ್ಯಾದೆ ತೆಗೆದುಬಿಟ್ಟರೆ? ಹಾಗಾಗಿ ಅಂತಹ ಯಾವ ಅಪಾಯವನ್ನು ಒಡ್ಡದ ಖಾಸಗಿ ಬಸ್ಸಿನ ಪ್ರಯಾಣಿಕರ ಮೇಲೆ ಸರಕಾರದ ಕಣ್ಣು. ಇನ್ವೆಸ್ಟ್ ಕರ್ನಾಟಕ ಯಾರಿಗಾಗಿ ಎನ್ನುವುದು ಈ ಒಂದು ಸಣ್ಣ ನಿರ್ಧಾರದಿಂದಲೇ ತಿಳಿದುಬಿಡಬಹುದಲ್ಲವೇ? ಇನ್ನು ಮೂರು ಲಕ್ಷ ಕೋಟಿಗಳೂ ಹರಿದು ಬಂದು ಬಿಟ್ಟರೆ ಎಪ್ಪತ್ತೈದು ಸಾವಿರ ಎಕರೆಗಳಷ್ಟು ಭೂಮಿಯ ಜೊತೆಗೆ ಎಷ್ಟು ಲಕ್ಷ ಜನರ ಬದುಕು ಮೂರಾಬಟ್ಟೆಯಾದೀತೋ?
ಸಮಾಜವಾದಿ ಹಿನ್ನೆಲೆಯಿಂದ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಅಧಿಕಾರದ ಅಮಲಿನಲ್ಲಿ ಓರ್ವ ಸಮಾಜವಾದಿಯಲ್ಲಿರಬೇಕಾದ ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡು ಬೂರ್ಜ್ವಾ ವ್ಯಕ್ತಿಯಾಗಿ ಬದಲಾಗಿಹೋಗಿದ್ದಾರೆ. ಅಧಿಕಾರ ಎಂಬುದು ಮನುಷ್ಯನನ್ನು ಈ ರೀತಿ ಬದಲಾಯಿಸುವುದು ಓರ್ವನ ವ್ಯಕ್ತಿತ್ವ ಎಷ್ಟು ಗಟ್ಟಿಯಾಗಿದೆ ಎಂಬುದರ ಮಾಪಕವಾಗಿ ಕಂಡುಬರುತ್ತದೆ. ಅಧಿಕಾರ ಸಿಕ್ಕಿದ ನಂತರ ಸಿದ್ಧರಾಮಯ್ಯನವರಲ್ಲಿ ಓರ್ವ ಸೂಕ್ಷ್ಮ ಸಂವೇದನೆ ಇಲ್ಲದ ಬಂಡವಾಳಶಾಹಿ ಶ್ರೀಮಂತನಲ್ಲಿ ಕಂಡುಬರುವ ಎಲ್ಲಾ ಲಕ್ಷಣಗಳು ಇಂದು ಕಂಡುಬರುತ್ತಿವೆ. ಜನರ ಸಮಸ್ಯೆಗಳ ಬಗ್ಗೆ ಸಿದ್ಧರಾಮಯ್ಯ ಕುರುಡಾಗಿದ್ದಾರೆ. ಓರ್ವ ವ್ಯಕ್ತಿಯ ವ್ಯಕ್ತಿತ್ವ ಪಕ್ವವಾಗಿ ಇಲ್ಲದಿರುವಾಗ ಇಂಥ ಬದಲಾವಣೆಗಳು ಕಂಡುಬರುತ್ತವೆ. ಓರ್ವ ಪಕ್ವ ವ್ಯಕ್ತಿ ಈ ರೀತಿ ಬದಲಾಗುವುದಿಲ್ಲ, ಅಧಿಕಾರಕ್ಕಾಗಿ ಮೌಲ್ಯಗಳನ್ನು ಗಾಳಿಗೆ ತೂರುವುದಿಲ್ಲ. ಸಿದ್ಧರಾಮಯ್ಯ ಓರ್ವ ಸಮಾಜವಾದಿ ಹಿನ್ನೆಲೆಯಿಂದ ಬಂದವರಾದರೂ ಇಂದು ಎಲ್ಲಾ ಸಮಾಜವಾದಿ ಕಳೆದುಕೊಂಡು ಅಧಿಕಾರದ ಕುರ್ಚಿಗೆ ಅಂಟಿ ಕುಳಿತುಕೊಂಡಿರುವುದು ಅವರ ವ್ಯಕ್ತಿತ್ವದ ಅಪಕ್ವತೆಯನ್ನೇ ತೋರಿಸುತ್ತದೆ.
ReplyDeleteಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಡಿಗೆ ಆಯೋಜಿಸಿದ್ದ ಸಿದ್ಧರಾಮಯ್ಯ ಇಂದು ಲೋಕಾಯುಕ್ತ ಹುದ್ದೆಯನ್ನು ತುಂಬದೆ ಖಾಲಿ ಬಿಟ್ಟಿದ್ದಾರೆ. ಜನಸಾಮಾನ್ಯರು ಆಡಳಿತದ ಕುಂದುಕೊರತೆಗಳ ಬಗ್ಗೆ ದೂರು ನೀಡುವ ರಾಜ್ಯ ಸರ್ಕಾರದ ವೆಬ್ ಪೋರ್ಟಲ್ ನಿಷ್ಕ್ರಿಯವಾಗಿದೆ. ಇದು ಸಮಾಜವಾದಿ ಸಿದ್ಧರಾಮಯ್ಯನವರ ಅಸೂಕ್ಷ್ಮತೆಯನ್ನೂ, ಭ್ರಷ್ಟಾಚಾರಕ್ಕೆ ಇಂಬು ಕೊಡುವ ನಡವಳಿಕೆಯಾಗಿಯೂ ಕಂಡುಬರುತ್ತದೆ. ಬೇರೆ ರಾಜ್ಯಗಳ ಜನಸಾಮಾನ್ಯರು ದೂರು ನೀಡುವ ವೆಬ್ ಪೋರ್ಟಲ್ಗಳು ಜೀವಂತವಾಗಿವೆ. ಕರ್ನಾಟಕದ ಆಡಳಿತವನ್ನು ಚುರುಕಾಗಿಸಬಹುದಾದ ಇಂಥ ವೆಬ್ ಪೋರ್ಟಲ್ ನಿಷ್ಕ್ರಿಯವಾಗಿದೆ. ಇದರಿಂದ ಓರ್ವ ಸಮಾಜವಾದಿಯಾಗಿ ಸಿದ್ಧರಾಮಯ್ಯನವರ ವ್ಯಕ್ತಿತ್ವ ಎಷ್ಟು ಗಟ್ಟಿ ಎಂಬುದು ತಿಳಿಯುತ್ತದೆ.
ಸತ್ಯ
Delete