ಡಾ. ಅಶೋಕ್. ಕೆ. ಆರ್
ಒಂದು ನಿರ್ದಿಷ್ಟ ಜಾತಿಯ ಹುಡುಗನೊಬ್ಬ ಮಾಡಿದ ಸಣ್ಣದೊಂದು ತಪ್ಪಿಗೆ ಆ ಹುಡುಗನಿಗೆ ಶಿಕ್ಷೆ ನೀಡುವುದಕ್ಕಷ್ಟೇ ತೃಪ್ತಿ ಪಡದೆ ಆ ಇಡೀ ಜಾತಿಯ ಜನರನ್ನು ಅಟ್ಟಾಡಿಸಿ ಹೊಡೆಯುವ ಹತ್ತಲವು ಪ್ರಕರಣಗಳು ಹಲವಾರು ನಡೆಯುತ್ತಲೇ ಇರುತ್ತವೆ. ಅದು ಜಾತಿ ತಾರತಮ್ಯದಿಂದ ನಡೆದ ಕೃತ್ಯವೆಂದು ಸಲೀಸಾಗಿ ಒಪ್ಪಿಬಿಡುತ್ತೇವೆ. ಬೆಂಗಳೂರಿನ ಪ್ರಕರಣದಲ್ಲಿ ಆಫ್ರಿಕಾ ಖಂಡದ ಕಪ್ಪು ಹುಡುಗನೊಬ್ಬ ಕುಡಿದ ಅಮಲಿನಲ್ಲಿ ಶಬಾನಾ ಎಂಬ ಮಹಿಳೆ ಮೇಲೆ ಕಾರು ಚಲಾಯಿಸಿ ಆಕೆಯ ಸಾವಿಗೆ ಕಾರಣವಾಗಿಬಿಡುತ್ತಾನೆ. ಕಾರು ಚಲಾಯಿಸಿದವನಿಗೆ ಹೊಡೆದು ಪೋಲೀಸರಿಗೆ ಕೊಟ್ಟಿದ್ದರೆ ಅದು ಆ ಕ್ಷಣದ ಕೋಪದ ಪರಿಣಾಮವಾಗುತ್ತಿತ್ತು. ಅದಾಗಿ ಅರ್ಧ ಮುಕ್ಕಾಲು ಘಂಟೆಯ ನಂತರ ಅದೇ ದಾರಿಯಲ್ಲಿ ಬಂದ ಮತ್ತೊಂದು ಕಾರಿನಲ್ಲಿದ್ದ, ಆ ಅಪಘಾತಕ್ಕೆ ಸಂಬಂಧವೇ ಇಲ್ಲದ ತಾಂಜೇನಿಯಾದ ಮಹಿಳೆಯೊಬ್ಬಳನ್ನು ಎಳೆದಾಡಿದ್ದಾರೆ, ಹೊಡೆದಿದ್ದಾರೆ (ಮೊದಮೊದಲು ನಗ್ನವಾಗಿಸಿ ಪೆರೇಡ್ ಮಾಡಿದ್ದಾರೆ ಎಂಬಂತಹ ವರದಿಗಳು ಬಂದವಾದರೂ ದೂರಿನಲ್ಲಿ ಆ ಮಹಿಳೆ ಹೊಡೆದು ಎಳೆದಾಡಿದ್ದಾರೆ ಎಂದಷ್ಟೇ ತಿಳಿಸಿದ್ದಾರೆ). ಘಟನೆಗೆ ಸಂಬಂಧವಿರದಿದ್ದರೂ ಆಕೆಯನ್ನು ಎಳೆದು ಹೊಡೆದದ್ದು ಆಕೆಯ ಮೈಬಣ್ಣದ ಕಾರಣಕ್ಕೇ ಎಂದ ಮೇಲೆ ಇದು ಜನಾಂಗೀಯ ನಿಂದನೆ ಆಗದಿರಲು ಹೇಗೆ ಸಾಧ್ಯ? ಕೆಲವೊಮ್ಮೆ ಕಹಿ ಸತ್ಯಗಳನ್ನು ಒಪ್ಪಿಕೊಳ್ಳುವುದರಲ್ಲೇ ದೊಡ್ಡತನವಿದೆ.
ರಾಷ್ಟ್ರೀಯ ಹೆಸರಿನ ಆಂಗ್ಲ ಸ್ಥಳೀಯ ಮಾಧ್ಯಮಗಳು ಪ್ರಕರಣಕ್ಕೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಕೊಟ್ಟು ‘ಶೇಮ್ ಆನ್ ಬೆಂಗಳೂರು’ ಎಂದೆಲ್ಲ ಕೂಗೆಬ್ಬಿಸಿರುವುದನ್ನು ಖಂಡಿಸುವ ಭರದಲ್ಲಿ ವಿದೇಶಿ ವಿದ್ಯಾರ್ಥಿಗಳು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದಾರೆ, ಕುಡಿದು ಮೂರೊತ್ತು ಗಲಾಟೆ ಮಾಡುತ್ತಾರೆ ಅದನ್ನೆಲ್ಲ ಯಾಕೆ ಹೇಳುವುದಿಲ್ಲ ಎಂದು ವಾದಿಸುವುದು ಎಷ್ಟರ ಮಟ್ಟಿಗೆ ಸರಿ? ಹೌದು ಅವರು ಡ್ರಗ್ಸ್ ಜಾಲದಲ್ಲಿದ್ದಾರೆ, ಮನೆಯಿಂದ ದೂರವಿರುವ ಬಹಳಷ್ಟು ವಿದ್ಯಾರ್ಥಿಗಳು ಮಾಡುವಂತೆ ಅವರೂ ಮನಬಂದಂತೆ ಇರುತ್ತಾರೆ ಎನ್ನುವುದೆಲ್ಲವೂ ಸತ್ಯವೇ, ಆದರದನ್ನು ಈ ಹಲ್ಲೆಗೆ ಸಮರ್ಥನೆಯಂತೆ ಉಪಯೋಗಿಸಿಕೊಳ್ಳುವುದು ತಪ್ಪು. ಅವರು ಅಷ್ಟೆಲ್ಲ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ನಾವು ಮೊದಲು ಪ್ರಶ್ನಿಸಬೇಕಾದದ್ದು ನಮ್ಮದೇ ಪೋಲೀಸರ ನಿಷ್ಕ್ರಿಯತೆಯನ್ನು. ಯಾರೋ ಯಾವತ್ತೋ ಮಾಡಿದ ತಪ್ಪಿಗೆ ಮತ್ತೆಲ್ಲೋ ಮತ್ಯಾರನ್ನೋ ಅವರ ಬಣ್ಣದ ಕಾರಣಕ್ಕೆ, ಜನಾಂಗೀಯವಾಗಿ ಸಾಮ್ಯತೆ ಇರುವ ಕಾರಣಕ್ಕೆ ಹಿಡಿದು ಬಡಿದು ಬಿಡುವ ಪ್ರವೃತ್ತಿಯನ್ನು ಜನಾಂಗೀಯ ನಿಂದನೆಯೆಂದು ಒಪ್ಪಿಕೊಳ್ಳದೆ ಏನೇನೋ ಸಬೂಬುಗಳನ್ನು ಹೇಳಿಬಿಡುವುದು ನಮ್ಮೊಳಗಿರುವ ಜನಾಂಗೀಯ ಮೇಲ್ಮೆಯ ಸಂಕೇತವೇ ಹೊರತು ಮತ್ತೇನಲ್ಲ.
ತಾಂಜೇನಿಯಾದ ಮಹಿಳೆ ಪೋಲೀಸರಿಗೆ ಮೊದಲು ದೂರು ನೀಡಲು ಹೋದಾಗ ದೂರು ಸ್ವೀಕರಿಸಲೂ ಪೋಲೀಸರು ನಿರಾಕರಿಸಿದರೆಂಬ ಸುದ್ದಿ ಮತ್ತೆ ಪೋಲೀಸರ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತಿದೆ. ಶಬಾನಾಳ ಸಾವಿಗೆ ಕಾರಣವಾದವನನ್ನೂ ಬಂಧಿಸಿರುವ ಸುದ್ದಿ ವರದಿಯಾಗಿಲ್ಲ; ಮತ್ತಿಲ್ಲಿ ಪೋಲೀಸರ ನಿಷ್ಕ್ರಿಯತೆಯನ್ನೇ ನಾವು ಪ್ರಶ್ನಿಸಬೇಕು. ಘಟನೆಗೆ ಸಂಬಂಧಿಸಿದಂತೆ ತಡವಾಗಿಯಾದರೂ ಪೋಲೀಸರು ಒಂದಷ್ಟು ಸಕ್ರಿಯವಾಗಿ ಸಿಸಿಟಿವಿಯ ಆಧಾರದಲ್ಲಿ ಕೆಲವರ ಬಂಧನವಾಗಿದೆ. ಗೃಹ ಸಚಿವ ಪರಮೇಶ್ವರ್ ತಾಂಜೇನಿಯಾದ ಹುಡುಗಿಯನ್ನೂ ಭೇಟಿಯಾಗಿದ್ದಾರೆ, ಶಬಾನಾಳ ಮನೆಯವರನ್ನೂ ಭೇಟಿಯಾಗಿದ್ದಾರೆ. ಅವರ ಮಟ್ಟದಲ್ಲಿ ದೇಶದ ಮಾನ ಕಾಪಾಡಲೋ ವಿದೇಶಿ ವ್ಯವಹಾರಗಳ ಸಲುವಾಗೋ ಇದು ಜನಾಂಗೀಯ ನಿಂದನೆಯಲ್ಲ ಎಂದು ಹೇಳಿಕೊಳ್ಳುವುದು ಅನಿವಾರ್ಯವೇನೋ. ಆಂಗ್ಲ ಮಾಧ್ಯಮಗಳ ಅತ್ಯುತ್ಸಾಹವನ್ನು ವಿರೋಧಿಸುತ್ತಲೇ ಇದು ಜನಾಂಗೀಯ ನಿಂದನೆಯಲ್ಲ ಎಂದು ವಾದಿಸುವುದಕ್ಕೆ ಸಬೂಬುಗಳನ್ನು ಹುಡುಕುವುದನ್ನು ನಾವಾದರೂ ನಿಲ್ಲಿಸೋಣ. ತಪ್ಪಿಗೊಂದು ಕ್ಷಮೆ ಕೇಳುವುದರಲ್ಲಿ ತಪ್ಪಿದೆಯೇ?
No comments:
Post a Comment