ಬರ್ಟನ್ ಸ್ಟೈನಿನ ಮಾಹಿತಿ ವಸಾಹತುಶಾಹಿ, ಭೂಮಾಲೀಕರೊಟ್ಟಿಗೆ ಸರಳ ಗೆಳೆತನ ಬೆಳೆಸಿಕೊಳ್ಳುವುದರ ಜೊತೆಗೆ ದೇವಸ್ಥಾನದ ಆಸ್ತಿಯ ಒಡೆತನ ಹೊಂದಿದ್ದ ಬ್ರಾಹ್ಮಣರೊಟ್ಟಿಗೂ ಸಖ್ಯ ಬೆಳೆಸಿದ್ದನ್ನು ತಿಳಿಸುತ್ತದೆ. ಬ್ರಾಹ್ಮಣರ ಮಂತ್ರಾಕ್ಷತೆಯ ಶುಭ ಆಶೀರ್ವಾದದೊಂದಿಗೆ ವಸಾಹತುಶಾಹಿ ಮತ್ತು ಫ್ಯೂಡಲಿಸಂನ ನಡುವೆ ಐತಿಹಾಸಿಕ ವಿವಾಹವಾಗಿತ್ತು.
ಬರ್ಟನ್ ಬರೆಯುತ್ತಾನೆ: “1800ರ ಮನ್ರೋನ ವರದಿಗಳಿಗೆ ಆದಾಯ ತೆರಿಗೆ ಇಲಾಖೆಯಲ್ಲಿದ್ದ ಮೇಲಧಿಕಾರಿಗಳಿಂದ ಮತ್ತು ಮದ್ರಾಸಿನ ಗವರ್ನರಾಗಿದ್ದ ಲಾರ್ಡ್ ಕ್ಲೈವ್ ರಿಂದ ಶೀಘ್ರ ಅನುಮೋದನೆ ದೊರಕಿತು. ಕೆನರಾದ ಬಗ್ಗೆ ಮನ್ರೋ ಕೊಟ್ಟ ವರದಿ ಮೈಸೂರಿನ ಸಂಶಾಯಾಸ್ಪದ ಆಡಳಿತ ಕೆನರಾದ ಭೂ ಮಾಲೀಕತ್ವದ ವಿಚಾರವಾಗಿ ಪುರಾತನ ಹಿಂದೂ ಸರಕಾರವನ್ನು ಹೇಗೆ ಭ್ರಷ್ಟಗೊಳಿಸಿತು ಎಂದು ತಿಳಿಸಿಕೊಟ್ಟಿದ್ದಾಗಿ ಹೇಳುತ್ತಾನೆ ಲಾರ್ಡ್ ಕ್ಲೈವ್. ಮದ್ರಾಸಿನ ಆದಾಯ ತೆರಿಗೆ ಬೋರ್ಡು ಮನ್ರೋನ ಶಿಫಾರಸ್ಸುಗಳನ್ನು ಪಾಲಿಸಬೇಕೆಂದು ಕ್ಲೈವ್ ವಾದಿಸಿದ. ಮನ್ರೋನ ನಿಯಮಗಳಲ್ಲೊಂದಕ್ಕೆ ಅಚ್ಚರಿ ವ್ಯಕ್ತವಾಗುವ ನಿರೀಕ್ಷೆಯಿತ್ತು. ಇದು ಕೆನರಾದ ಇನಾಂ ಭೂಮಿಗೆ (ತೆರಿಗೆ ರಹಿತ ಭೂಮಿ) ಸಂಬಂಧಿಸಿದ್ದಾಗಿತ್ತು. ಇನಾಂ ಭೂಮಿಗಿದ್ದ ಸವಲತ್ತುಗಳನ್ನು ಟಿಪ್ಪು ಸುಲ್ತಾನ್ ವಾಪಸ್ಸು ಪಡೆದಿದ್ದ; ಟಿಪ್ಪು ಸುಲ್ತಾನನ ನಂತರ ಅಧಿಕಾರವಿಡಿದ ಕಂಪನಿಗೆ ಟಿಪ್ಪುವಿನ ನೀತಿ ನಿಯಮಗಳನ್ನು ಮುಂದುವರೆಸುವ ಹಕ್ಕಿರಬೇಕಾದರೆ ಮನ್ರೋ ಯಾಕೆ ಮತ್ತೆ ಇನಾಂ ಹಕ್ಕನ್ನು ದಯಪಾಲಿಸಬೇಕು ಎನ್ನುವುದು ಗವರ್ನರ್ ರ ಪ್ರಶ್ನೆಯಾಗಿತ್ತು. ಈ ಇನಾಮನ್ನು ದಯಪಾಲಿಸುವುದರಿಂದ ಹೈದರ್ ಅಲಿ, ಟಿಪ್ಪು ಮತ್ತು ಹಿಂದಿನ ಆಡಳಿತಗಾರರ ಸಮಯದಲ್ಲಿ ಬರುತ್ತಿದ್ದ ಆದಾಯಕ್ಕಿಂತಲೂ ಕಂಪನಿಗೆ ಬರುವ ಆದಾಯ ಕಡಿಮೆಯಾಗಿಬಿಡುವುದರಿಂದ ಇದನ್ಯಾಕೆ ಜಾರಿಗೊಳಿಸಬೇಕು?
ಕೆನರಾದ ಇನಾಂ ಭೂಮಿಗೆ ಸಂಬಂಧಿಸಿದ ಈ ಆಕ್ಷೇಪಣೆಗಳಿಗೆ ಉತ್ತರ ಸಿಕ್ಕಿತಾ ಎನ್ನುವುದರ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲ. ಇದೇ ತರಹದ ಆಕ್ಷೇಪಣೆಗಳು ಮನ್ರೋ ಕಾರ್ಯನಿರ್ವಹಿಸಿದ ಇತರೆ ಜಿಲ್ಲೆಗಳಲ್ಲಿಯೂ ಕೇಳಿ ಬಂದಿತ್ತು. ಕೆನರಾಗೆ ಸಂಬಂಧಪಟ್ಟಂತೆ 1804ರಲ್ಲಿ – ವರದಿ ಸಲ್ಲಿಕೆಯಾದ ಬಹುಕಾಲದ ನಂತರ – ಮನ್ರೋನ ಕೆನರಾ ವರದಿಗೆ ಕಂಪನಿಯ ನಿರ್ದೇಶಕ ಮಂಡಳಿಯಿಂದ ಪೂರ್ಣ ಒಪ್ಪಿಗೆ ಸಿಕ್ಕಿತು….” (48)
ದೇವಾಲಯ ಮತ್ತು ಬಸದಿಗಳಿಗೆ ಇನಾಂ ಹಕ್ಕುಗಳನ್ನು ಮರುಜಾರಿಗೊಳಿಸುವುದರ ಕುರಿತಾಗಿ ಮನ್ರೋ ನಿರ್ದಿಷ್ಟ ವಿವರಣೆಯನ್ನು ನೀಡಿಲ್ಲವಾದರೂ, ತನ್ನ ಬರವಣಿಗೆಯಲ್ಲಿ ಈ ನಿರ್ಧಾರದ ಬಗ್ಗೆ ಪ್ರಸ್ತಾಪಿಸಿದ್ದಾನೆ. ಮುಂದಿನ ಭಾಗಗಳಲ್ಲಿ ಇದರ ಬಗ್ಗೆ ತಿಳಿಯೋಣ. ಬುದ್ಧಿವಂತ ನಿರ್ದೇಶಕ ಮಂಡಳಿ ಮತ್ತವರ ಅಧಿಕಾರಿಗಳು ನಂತರದ ದಿನಗಳಲ್ಲಿ ಇದನ್ನು ನೋಡಿ ಒಪ್ಪಿಗೆ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಈ ಸಮಯದಲ್ಲಿ ಚಿತ್ರಾಪುರ ಬ್ರಾಹ್ಮಣರಲ್ಲಿ ಭೂಮಾಲೀಕರ ಹೊಸ ವರ್ಗ ರೂಪುಗೊಂಡಿದ್ದರ ಬಗ್ಗೆ ಸೂರ್ಯನಾತ ಕಾಮತ್: “1799ರಿಂದ ಕೆನರಾ ಜಿಲ್ಲೆಯಲ್ಲಿ ಬ್ರಿಟೀಷ್ ಆಡಳಿತ ಪ್ರಾರಂಭವಾದಾಗ ಚಿತ್ರಾಪುರ ಸಮುದಾಯದ ಜನರು ಉತ್ತರ ಮತ್ತು ದಕ್ಷಿಣ ಕೆನರಾದ ಬಹುತೇಕ ಹಳ್ಳಿಗಳಲ್ಲಿ ಶಾನುಭೋಗರಾಗಿ ನೇಮಕಗೊಂಡರು. ಈ ಕಾರಣದಿಂದಾಗಿ ಚಿತ್ರಾಪುರ ಸಾರಸ್ವತರಲ್ಲನೇಕರಿಗೆ ಈ ಎರಡು ಜಿಲ್ಲೆಯ ಹಳ್ಳಿಗಳ ಹೆಸರು ಸರ್ ನೇಮ್ ಆಗಿದೆ.” (49)
ಈಗ ಬೆಳಗಾವಿ, ಬಿಜಾಪುರ ಮತ್ತು ಧಾರವಾಡ ಜಿಲ್ಲೆಗಳನ್ನೊಳಗೊಂಡ ಬಾಂಬೆ – ಕರ್ನಾಟಕ ಭಾಗದಲ್ಲಿ ವಸಾಹತುಶಾಹಿ ಫ್ಯೂಡಲಿಸಂನ ಜೊತೆಗೆ ಕೈಜೋಡಿಸಿದ ರೀತಿಯನ್ನು ನೋಡೋಣ.
ಪೇಶ್ವೆಯ ಆಡಳಿತವನ್ನುನಭವಿಸಿದ್ದ ಈ ಮೂರೂ ಜಿಲ್ಲೆಗಳಲ್ಲಿ ಊಳಿಗಮಾನ್ಯ ಪದ್ಧತಿಯ ಮಧ್ಯಮವರ್ತಿಗಳಾಗಿ ಮತ್ತು ಮರಾಠರಿಗೆ ತೆರಿಗೆ ವಸೂಲಿ ಮಾಡಿಕೊಡುವವರಾಗಿ ದೇಸಾಯಿ ಮತ್ತು ದೇಶಮುಖರಿದ್ದರು. ರೈತ ಕಾರ್ಮಿಕರ ವಿರೋಧದ ನಡುವೆಯೂ ಊಳಿಗಮಾನ್ಯ ಪದ್ಧತಿ ಇಲ್ಲಿ ಸುಭದ್ರವಾಗಿತ್ತೆಂಬುದನ್ನು ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದ ಕೊನೆಯ ಅಧ್ಯಾಯದಲ್ಲಿ ನೋಡಿದ್ದೇವೆ. ಈ ಭಾಗವನ್ನು ವಶಪಡಿಸಿಕೊಂಡ ಬ್ರಿಟೀಷ್ ಸೈನ್ಯದ ಮುಂದಾಳತ್ವವನ್ನು ಥಾಮಸ್ ಮನ್ರೋ ವಹಿಸಿಕೊಂಡಿದ್ದ. ಮನ್ರೋ ಮೊದಲು ಬಳ್ಳಾರಿಯ ಕಲೆಕ್ಟರಾಗಿ (ಜಿಲ್ಲಾಧಿಕಾರಿ) ನಂತರ ಉತ್ತರ ಮತ್ತು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಹಾಗಾಗಿ ಕರ್ನಾಟಕದ ಬಹುಭಾಗಗಳಲ್ಲಿ ಎರಡು ಭಿನ್ನ ಸಾಮಾಜಿಕ ವ್ಯವಸ್ಥೆಯ ನಡುವೆ ಮದುವೆ ಮಾಡಿಸುವ ಜವಾಬ್ದಾರಿ ಮತ್ತು ಕರ್ನಾಟಕವನ್ನು ವಸಾಹತುಶಾಹಿ ನೆಲೆಯಾಗಿ ಬದಲಿಸುವ ಕೆಲಸ ಮನ್ರೋದ್ದಾಗಿತ್ತು. ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವ ಐತಿಹಾಸಿಕ ನಿರ್ಣಯಗಳಲ್ಲಿ ಮನ್ರೋನ ನೇರ ಪಾತ್ರವಿತ್ತು. ಮನ್ರೋನ ಪತ್ರಗಳು, ವರದಿಗಳು ಮತ್ತು ಟಿಪ್ಪಣಿಗಳೆಲ್ಲವೂ ವಸಾಹತುಶಾಹಿತನದ ಮನಸ್ಥಿತಿಯ ಬಗೆಗಿನ ಅರಿವನ್ನು ಹೆಚ್ಚಿಸುತ್ತವೆ.
1826ರಲ್ಲಿ ಈ ಭಾಗದಲ್ಲಿ ಜನ್ಮತಳೆದ ಊಳಿಗಮಾನ್ಯ ಪದ್ಧತಿಯ ಮಧ್ಯವರ್ತಿಗಳ ಬಗ್ಗೆ ಮನ್ರೋ ವಿವರಿಸುತ್ತಾನೆ:” ಬಹುತೇಕ ಜಾಗೀರುದಾರರು ಕೊಂಕಣದ ಕಡೆಯಿಂದ ಬಂದ ಆಗುಂತಕರು ಮತ್ತು ಕೃಷ್ಣ ನದಿಯಾಚೆಗಿನ ದೇಶದವರು…. ಜಾಗೀರುದಾರರಲ್ಲಿ ಪ್ರಮುಖರಾದ ಪಟವರ್ಧನರು ನನ್ನ ನಂಬಿಕೆಯ ಪ್ರಕಾರ ಧಾರವಾಡಕ್ಕೆ ಅಪರಿಚಿತರು. ಪರಸುರಾಮ ರಾವ್ ನ ತಂದೆ ಅಥವಾ ಬಹುಶಃ ಪರಸುರಾಮ ರಾವ್ ನ ಕಾಲದವರೆಗೆ ಇವರ ಬಗ್ಗೆ ಯಾರೂ ಕೇಳಿಯೇ ಇರಲಿಲ್ಲ….
ಇದನ್ನೆಲ್ಲ ಅಭ್ಯಸಿಸಿದ ಉದ್ದೇಶ ಧಾರವಾಡ ಮರಾಠ ಪ್ರಾಂತ್ಯಕ್ಕೆ ಸೇರಿರಲಿಲ್ಲ, ಬದಲಿಗೆ ಕೆನರಾ ಪ್ರಾಂತ್ಯಕ್ಕೆ ಸೇರಿತ್ತು, ಈ ಜಾಗೀರುದಾರರೆಲ್ಲ ಅಲ್ಲಿ ಅಪರಿಚಿತರಾಗಿದ್ದರು. ಬ್ರಿಟೀಷರ ಆಕಸ್ಮಿಕ ಮಧ್ಯಪ್ರವೇಶದಿಂದ ಅವರ ಜಾಗೀರು ಉಳಿದಿತ್ತು. ಬಳ್ಳಾರಿಯ ಗೋರಪರಿ (ಘೋರ್ಪಡೆ?) ಕುಟುಂಬದ ಸುಂದರ್ ಜಾಗೀರದಾರ ಮರಾಠ ಮುಖ್ಯಸ್ಥರೆಲ್ಲೆಲ್ಲಾ ಪ್ರಮುಖವಾಗಿದ್ದವರು. ಹರಪನಹಳ್ಳಿ ಮತ್ತು ಬಳ್ಳಾರಿ ನಡುವಿರುವ ತಮ್ಮ ಜಾಗೀರಿನಲ್ಲಿ ವಾಸಿಸುತ್ತಿರುವ ಅವರಲ್ಲಿ ಪೂನಾದಿಂದ ಬೇರಾಗಿರುವುದಕ್ಕೆ ಸಂತಸವೇ ಇದೆ.” (50)
1818ರಲ್ಲಿ ಮನ್ರೋ ಎಲ್ಫಿನ್ ಸ್ಟೋನಿಗೆ ಬರೆದ ಮತ್ತೊಂದು ಪತ್ರದಲ್ಲಿ: “ಪೇಶ್ವೆಗಳನ್ನು ಹಿಂಬಾಲಿಸುವ, ಗೌರವಿಸುವ ಮತ್ತು ಸೇವೆ ಸಲ್ಲಿಸುವ ಮನಸ್ಥಿತಿಯನ್ನು ಬದಲಿಸಲು ಮಾಡಬೇಕಾದ ಮೊದಲ ಕೆಲಸವೆಂದರೆ ಪೇಶ್ವೆಗಳ ಅಧಿಕಾರವನ್ನು ಬ್ರಿಟೀಷರು ವಶಪಡಿಸಿಕೊಳ್ಳುವುದು. ನನ್ನ ನಂಬಿಕೆಯ ಪ್ರಕಾರ ಈ ಕಾರ್ಯಗಳನ್ನು ಜಾಗೀರುದಾರರಲ್ಲಿರುವ ದೊರೆಗಳ ಚಿತ್ರಣವನ್ನು ಬದಲಿಸುತ್ತದೆ. ಮತ್ತು ಬ್ರಿಟೀಷ್ ಸರಕಾರದ ಕರೆಯ ಮೇರೆಗೆ ತಮ್ಮ ಸೈನ್ಯವನ್ನು ಕಳುಹಿಸಿಕೊಡಲು ತಯಾರಿರುತ್ತಾರೆ.” (51)
ಇವೆಲ್ಲವೂ ಸೈನ್ಯ ಶಕ್ತಿಯ ಮೈತ್ರಿಗೆ ತೆಗೆದುಕೊಂಡ ನಿರ್ಣಯಗಳು. ಈ ಸಂಬಂಧದಿಂದ ಜಾಗೀರುದಾರರೊಡನೆ ರಾಜಕೀಯ ಮತ್ತು ಆರ್ಥಿಕ ನೀತಿಗಳ ಕುರಿತೂ ಒಪ್ಪಂದಗಳಾಯಿತು.
ಬರ್ಟನ್ ಸ್ಟೈನನ ಮಾತುಗಳನ್ನು ಉಲ್ಲೇಖಿಸುವುದಾದರೆ: “ಆಗಸ್ಟ್ 28, 1818ರಲ್ಲಿ ಮನ್ರೋ ಎಲ್ಫಿನ್ ಸ್ಟೋನನಿಗೆ ಧಾರವಾಡ – ಬೆಳಗಾವಿ ಪ್ರದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ನಂಬಿಕೆಯ ಮಾತುಗಳನ್ನೇಳುತ್ತಿದ್ದ. ಅಲ್ಲಿನ ಪರಿಸ್ಥಿತಿ ಹತೋಟಿಯಲ್ಲಿದೆ ಮತ್ತೀ ಪರಿಸ್ಥಿತಿ ಮುಂದುವರಿಯಲು ಪ್ರಮುಖ ಜಾಗೀರುದಾರರಿಗೆ (ಗೋಖಲೆಯನ್ನು ಹೊರತುಪಡಿಸಿ; ಗೋಖಲೆಯ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು) ಮತ್ತು ಹಲವು ಸಣ್ಣಮಟ್ಟದ ಮುಖ್ಯಸ್ಥರಿಗೆ ಮನ್ರೋ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಅಗತ್ಯ ಮತ್ತು ದೊಡ್ಡ ಮಟ್ಟದ ಬದಲಾವಣೆಗಳನ್ನು ಪರಿಚಯಿಸಬಾರದು……ಅವರಿಗೆಲ್ಲ ಸೈನ್ಯವನ್ನಿಟ್ಟುಕೊಳ್ಳುವ ಅವಕಾಶವಿರಬೇಕು – ಮುಂಚೆ ಅವರ ಬಳಿ ಇದ್ದ ಸೈನ್ಯದ ಕಾಲುಭಾಗದಷ್ಟು ಮಾತ್ರ. ಇದು ಅವರ ಮಿಲಿಟರಿ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.
ಧಾರವಾಡ – ಬೆಳಗಾವಿಯ ರಾಜಕೀಯ ಬುನಾದಿ ತಾನು ಹಾಕಿದ ರೀತಿಯಲ್ಲೇ ಉಳಿಯಬೇಕೆಂದು ಬಯಸಿದ ಮನ್ರೋ ಆ ಬುನಾದಿಯನ್ನು ಶಿಥಿಲವಾಗಿಸಬಹುದಾದ ಯಾವುದೇ ಬದಲಾವಣೆಯನ್ನು ಮಾಡದಿರುವಂತೆ ಎಲ್ಫಿನ್ ಸ್ಟೋನರಿಗೆ ಶಿಫಾರಸು ಮಾಡಿದ. ಈ ಶಿಫಾರಸುಗಳಿಗೆ ಎಲ್ಫಿನ್ ಸ್ಟೋನರ ಸಮ್ಮತಿಯಿತ್ತು….
ಜಿಲ್ಲೆ ಮತ್ತು ಹಳ್ಳಿಯ ಮುಖ್ಯಸ್ಥರು, ಲೆಕ್ಕಪತ್ರ ನೋಡುವವರು ಗಣನೀಯ ಪ್ರಮಾಣದ ಇನಾಂ ಹೊಂದಿದ್ದರು! ಇವುಗಳ ಗೋಜಿಗೆ ಹೋಗಬಾರದು; ಯಾಕೆಂದರೆ ಅವರೆಲ್ಲರೂ ಗೌರವಾನ್ವಿತ ಭೂಮಾಲೀಕರು ಮತ್ತು ಸಮಾಜದ ಮೇಲ್ವರ್ಗದವರು. ಬ್ರಿಟೀಷರು ಅವಲಂಬಿಸಬೇಕಾದ ಜಿಲ್ಲೆ ಮತ್ತು ಹಳ್ಳಿಯ ಅಧಿಕಾರಿಗಳ ಅಧಿಕಾರದ ರಕ್ಷಣೆ ಇದರಿಂದ ಸಾಧ್ಯವಾಗುತ್ತದೆ. ಮರಾಠ ಪ್ರಾಂತ್ಯಗಳಲ್ಲಿದ್ದ ಇನಾಂ ಭೂಮಿಯ ಬಗ್ಗೆ ಸುಮ್ಮನಿದ್ದುಬಿಡಬೇಕು ಎನ್ನುವುದು ಮನ್ರೋನ ಶಿಫಾರಸ್ಸಾಗಿತ್ತು.
ವಹಿವಾಟಿಗೆ ಅಡ್ಡಿಯಾಗಿರುವ ಜಾಗೀರುದಾರರ ಹಣ ವಸೂಲಾತಿ, ವ್ಯವಹಾರ ತೆರಿಗೆ ಪದ್ಧತಿಯನ್ನು ರದ್ದು ಪಡಿಸಬೇಕು ಮತ್ತು ‘ತಮ್ಮ ಹಕ್ಕನ್ನು ತ್ಯಾಗ ಮಾಡಿದ’ ಜಾಗೀರುದಾರರಿಗೆ ಸೂಕ್ತ ಪರಿಹಾರ ನೀಡಬೇಕು.” (52)
ಆದಾಯ ತೆರಿಗೆ ನೀತಿಗಳನ್ನು ರೂಪಿಸುವುದರ ಹೊಣೆ ಹೊತ್ತ ಎಲ್ಫಿನ್ ಸ್ಟೋನ್ ಮನ್ರೋನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದ. ಅವನ ಸಲಹೆಗಳಿಗಿಂತ ಒಂದಡಿ ಹೆಚ್ಚೇ ಇಟ್ಟ.
ಜಾರ್ಜ್ ಫಾರೆಸ್ಟ್ ಬರೆಯುತ್ತಾರೆ: “ವಂಶಪಾರಂಪರ್ಯ ಹಕ್ಕುಗಳ ಬಗ್ಗೆ ಎಲ್ಫಿನ್ ಸ್ಟೋನ್ ಗೆ ಗೌರವವಿತ್ತು; ಮಾಲೀಕರಿಗೆ ಅವರವರ ಜಾಗೀರು ಭೂಮಿ ಹಿಂದಿರುಗಿಸುವುದರ ಜೊತೆಗೆ ಬಾಡಿಗೆ ರಹಿತ ಭೂಮಿ, ಪಿಂಚಣಿ, ಧಾರ್ಮಿಕ ಸವಲತ್ತುಗಳನ್ನು ಮತ್ತೆ ಕೊಡಲಾಯಿತು. ‘ಧಾರ್ಮಿಕ ಸವಲತ್ತುಗಳನ್ನು ಉಳಿಸುವುದು ಆಕ್ರಮಿಸಿದ ದೇಶದಲ್ಲಿ ಅವಶ್ಯಕ. ದೀರ್ಘಕಾಲದಿಂದ ಅಧಿಕಾರದಲ್ಲಿ ಬ್ರಾಹ್ಮಣರು ಇದ್ದಿದ್ದರಿಂದ ಇದು ಅತ್ಯಗತ್ಯ (ಪೇಶ್ವೆಗಳು ಬ್ರಾಹ್ಮಣರು). ಪೇಶ್ವೆಗಳ ದಾನ ಮತ್ತವರ ಧಾರ್ಮಿಕ ವೆಚ್ಚಗಳು ಹತ್ತಿರತ್ತಿರ ಹದಿನೈದು ಲಕ್ಷಗಳಷ್ಟಿತ್ತು. ಇದನ್ನು ಮುಂದುವರೆಸುವುದು ಮೂರ್ಖತನದಂತೆ ಕಂಡರೂ, ಈ ವೆಚ್ಚಗಳನ್ನು ಅನಿವಾರ್ಯವೆಂದು ಪರಿಗಣಿಸಬೇಕು….” (53) ಬ್ರಿಟೀಷರ ಆಳ್ವಿಕೆ ಬ್ರಾಹ್ಮಣರ ಪ್ರಾಬಲ್ಯವನ್ನು ಮುರಿಯಿತು ಎಂದೇಳುವವರಿಗೆ ಇಷ್ಟು ವಿವರಣೆ ಸಾಕೇನೋ?! ಅಸಲಿಗೆ ನಡೆದಿದ್ದು ತದ್ವಿರುದ್ದ. ಕರ್ನಾಟಕದಲ್ಲಿ ಬ್ರಾಹ್ಮಣರ ಪ್ರಾಬಲ್ಯದಲ್ಲಿ ಇತಿಹಾಸದ ಚಲನೆ ಬಿರುಕು ಮೂಡಿಸಲಾರಂಭಿಸಿದಾಗ ಕಾಪಾಡಿ ಮರುಸ್ಥಾಪಿತವಾಗುವಂತೆ ಮಾಡಿದ್ದೇ ವಸಾಹತುಶಾಹಿ.
ಫಾರೆಸ್ಟ್ ಮುಂದುವರೆಸುತ್ತ: “ಹಳ್ಳಿಯ ಅಧಿಕಾರಿಗಳ ಪ್ರಭಾವವನ್ನು ಎಲ್ಫಿನ್ ಸ್ಟೋನ್ ಉಳಿಸಿದ….. ನ್ಯಾಯಪಾಲನೆಯಂತಹ ಪ್ರಮುಖವಾದ ಸಂಗತಿಗಳಲ್ಲಿ ಆಂಗ್ಲರನ್ನು ಅಥವಾ ಬ್ರಿಟೀಷ್ ಮಾದರಿಯನ್ನು ಶೀಘ್ರವಾಗಿ ಪರಿಚಯಿಸಲು ಎಲ್ಫಿನ್ ಸ್ಟೋನ್ ಹಿಂಜರಿದ….. ಹಳ್ಳಿಗಳಲ್ಲಿ ಪಟೇಲರು ಅಥವಾ ಮುಖ್ಯಸ್ಥರು, ಪಟ್ಟಣಗಳಲ್ಲಿ ವ್ಯಾಪಾರಿ ಸಮೂಹದ ಮುಖಂಡರಿಗೆ ಪಂಚಾಯತಿ ಕರೆಯುವ ಅಧಿಕಾರವಿರಬೇಕೆಂದು ಪ್ರಸ್ತಾಪಿಸಿದ.” (54)
ಈ ನೀತಿಗಳಿಂದ ಸಿಕ್ಕ ಫಲಿತಾಂಶವನ್ನು ಗಮನಿಸೋಣ. 1819ರಲ್ಲಿ ಜೆ. ಮೆಕ್ ಲಾಯ್ಡ್ ವಿವಿಧ ತೆರಿಗೆ ರಹಿತ ಭೂಮಿ ಮತ್ತದನ್ನನುಭವಿಸಿದ ಭೂಮಾಲೀಕರ ವಿವರಗಳನ್ನು ದಾಖಲಿಸಿದ. ಫಾರೆಸ್ಟ್ ಈ ದಾಖಲೆಗಳನ್ನು ಉಲ್ಲೇಖಿಸುತ್ತಾನೆ: (55)
ಬಾಂಬೆ ಕರ್ನಾಟಕದ ತೆರಿಗೆ ರಹಿತ ಭೂಮಿಗಳು
ಈ ಮೊತ್ತ ಕಡಿಮೆಯದ್ದೇನಲ್ಲ. ಫ್ಯೂಡಲಿಸಂ ಬ್ರಿಟೀಷರ ಮೇಲಿಟ್ಟಿದ್ದ ನಂಬಿಕೆಯನ್ನು ಇದು ತಿಳಿಸುತ್ತದೆ. ದೊಡ್ಡ ರಿಯಾಯತಿಗಳು ಇನಾಮಿನ ಮೂಲಕ ಮತ್ತು ಜಮೀನುದಾರರ ಭೂಮಿ ಹಾಗೂ ಕಟ್ಟಡಗಳಿಗೆ ಸಿಕ್ಕಿತ್ತು. ಇವುಗಳಿಗೆ ನೀಡಿದ ತೆರಿಗೆ ವಿನಾಯಿತಿಯ ಒಟ್ಟು ಮೊತ್ತ 4,10,451 ರುಪಾಯಿಗಳಷ್ಟಿತ್ತು. ಇದು ಆಗ ತೆರಿಗೆ ವಿನಾಯಿತಿ ಪಡೆದಿದ್ದ ಭೂಮಿಯ 54 ಶೇಕಡಾ ಆಗಿತ್ತು. ಇದರ ಜೊತೆಗೆ ಧಾರ್ಮಿಕ ಕೇಂದ್ರಗಳಾದ ದೇಗುಲಗಳಿಗೆ ಕೊಟ್ಟ ಭೂಮಿಯೂ ಸೇರಿತ್ತು. ಈ ಪ್ರತಿಷ್ಟಿತ ಭೂ ಮಾಲೀಕರು ಮತ್ತು ಧಾರ್ಮಿಕ ಮುಖಂಡರು ಬಹಳಷ್ಟು ಬಾರಿ ಒಂದಾಗಿರುತ್ತಿದ್ದರು – ತಮಗೆ ಸಿಕ್ಕ ಸೌಕರ್ಯಗಳನ್ನು ವಿರಾಮದಿಂದ ಅನುಭವಿಸುತ್ತ.
1857ರಲ್ಲಿ ಕೆಲವು ಭೂಮಾಲೀಕರು ಬ್ರಿಟೀಷರ ವಿರುದ್ಧ ದಂಗೆಯೆದ್ದಾಗ ಅವರ ಬಳಿ ಇದ್ದ ಇನಾಂ ಭೂಮಿಯನ್ನು ಕಸಿದುಕೊಳ್ಳಲಾಯಿತು.
ಈ ಪಟ್ಟಿಯನ್ನು ಕೃಷ್ಣರಾವ್ ಮತ್ತು ಹಾಲಪ್ಪ ನಮಗೆ ಒದಗಿಸುತ್ತಾರೆ. ಈ ಸಂಕ್ಷಿಪ್ತ ಪಟ್ಟಿ ಇನಾಂ ಭೂಮಿ ಹೇಗೆ ವಸಾಹತುಶಾಹಿಗಳ ಜೊತೆಗೆ ಹೊಂದಿಕೊಂಡಿದ್ದವರಿಗೆ ಲಭಿಸಿತ್ತು ಎನ್ನುವುದನ್ನು ತಿಳಿಸುತ್ತದೆ.
ಬಾಂಬೆ ಕರ್ನಾಟಕ ಭಾಗದಲ್ಲಿ ಇನಾಂ ಪಡೆದಿದ್ದವರ ವಿವರ
ಊಳಿಗಮಾನ್ಯತೆಯ ಬುನಾದಿಗಳು ವಸಾಹತುಶಾಹಿಯೊಂದಿಗೆ ಎಷ್ಟು ಸಶಕ್ತವಾಗಿ ಸೇರಿಹೋಗಿತ್ತೆನ್ನುವುದಕ್ಕೆ “ಧಾರವಾಡದಲ್ಲಿರುವ ಹಳ್ಳಿಗಳಲ್ಲಿ 30% ಇನಾಂ ಹಳ್ಳಿಗಳು” ಎಂಬ ಫುಕಝೂವನ ಹೇಳಿಕೆಯೊಂದೇ ಸಾಕು. ಪೇಶ್ವೆಗಳ ಆಳ್ವಿಕೆಯಲ್ಲಿ ಚದುರಿ ಹೋದ ಪಟವರ್ಧನ ಬ್ರಾಹ್ಮಣರು ಬ್ರಿಟೀಷರ ಕೃಪೆಗೆ ಪಾತ್ರರಾದರು ಎಂದು ಎರಿಕ್ ಸ್ಟೋಕ್ಸ್ ನಿಂದ ಕಲಿಯಬಹುದು. ಬೆಳಗಾವಿ ಜಿಲ್ಲೆಯೊಂದರಲ್ಲೇ ಚಿಂಚೋಳಿ, ನಿಪ್ಪಾಣಿ, ಮೀರಜ್, ತಸ್ ಗಾಂವ್ ಮತ್ತು ಕಾಗೇವಾಡಗಳನ್ನು ಪುಣೆಯ ಒಳಸಂಚಿನಲ್ಲಿ ಭಾಗಿಯಾಗಿದ್ದವರಿಗೆ ಉಡುಗೊರೆಯಾಗಿ ನೀಡಲಾಯಿತು.
ಬೆಳಗಾವಿ ಜಿಲ್ಲೆಯ ಶಿರಸಂಗಿ ದೇಶಗತಿಯರ ಬಗ್ಗೆ ಅಧ್ಯಯನ ನಡೆಸಿದ ವಿರೂಪಾಕ್ಷ ಬಡಿಗೇರ ಕರ್ನಾಟಕದ ಈ ಭಾಗದಲ್ಲಿ ಊಳಿಗಮಾನ್ಯ ಸಂತತಿ ಸಮೃದ್ಧಿಯಾಗಿ ಹರಡಿಕೊಂಡಿದ್ದರ ಬಗ್ಗೆ ತಿಳಿಸುತ್ತಾರೆ. 1922ರಲ್ಲಿ ಬೆಳಗಾವಿಯೊಂದರಲ್ಲೇ ಇನಾಮಿನ ಮೇಲಿದ್ದ 122 ದೇಶಗತಿ ಕುಟುಂಬಗಳಿದ್ದವು ಎಂದು ಬರೆಯುತ್ತಾನೆ. (58)
ಹೈದರಾಬಾದ್ – ಕರ್ನಾಟಕ ಭಾಗದಲ್ಲಿ ಈ ವ್ಯವಸ್ಥೆಯನ್ನು ಗೌರವಾದರದೊಂದಿಗೆ ರಕ್ಷಿಸಲಾಗಿತ್ತು. ಇಡೀ ಪ್ರಾಂತ್ಯವನ್ನು ನಿಯಂತ್ರಿಸುತ್ತಿದ್ದ ಇನಾಂದಾರರು ಮತ್ತು ಜಾಗೀರುದಾರರು ನಿಜಾಮರಿಗೆ ತೆರಿಗೆ ಸಂಗ್ರಹಿಸಿ ಕೊಡುತ್ತಿದ್ದರು ಮತ್ತು ಬ್ರಿಟೀಷರಿಗೆ ನಿಜಾಮರು ತಲೆತಗ್ಗಿಸಿ ಶರಣಾದ ನಂತರ ಫ್ಯೂಡಲ್ ವ್ಯವಸ್ಥೆ ವಸಾಹತುಶಾಹಿಯನ್ನು ಲಗ್ನವಾಯಿತು.
ಕೊಡಗಿನಲ್ಲಿ ಬ್ರಿಟೀಷರು ಫ್ಯೂಡಲ್ ಕೊಡವ ಕುಟುಂಬಗಳಿಂದ ಅಪ್ಪರಂದ್ರ, ಚೆಪ್ಪುದಿರ ಮತ್ತು ಬಿಡ್ಡಂದ್ರದವರೊಡನೆ ಸಖ್ಯ ಬೆಳೆಸಿದರು. ಜೊತೆಗೆ ಬಿಟ್ಟಿಯಂದ್ರ, ಮಡಂದ್ರ, ಕೊಲೊವಂಡ್ರ, ಕುಟ್ಟೆತೀರ ಮತ್ತು ಮನಬಂಡ ಕುಟುಂಬಗಳೊಡನೆ ಒಪ್ಪಂದ ಮಾಡಿಕೊಂಡರು. (59) ಈ ಕುಟುಂಬಗಳು ನಂತರದ ದಿನಗಳಲ್ಲಿ “ನೂರಾರು ಎಕರೆ ಕಾಫಿ ಎಸ್ಟೇಟ್ ಮತ್ತು ಹಸಿ ಭೂಮಿಯ ಒಡೆಯರಾದರು ಹಾಗೂ ಸಾರ್ವಜನಿಕ ಜೀವನದಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಲು ಶಕ್ತರಾದರು.”(60)
ಬ್ರಿಟೀಷ್ ವಸಾಹತುಶಾಹಿ ಭಾರತದ ಊಳಿಗಮಾನ್ಯ ಪದ್ಧತಿಯನ್ನು ಮುರಿದು ಹಾಕಿ ಬಂಡವಾಳಶಾಹಿತನ ಅಡೆತಡೆಯಿಲ್ಲದೆ ಬೆಳೆಯಿತೆಂಬ ಭಾವನೆ ನವ ಭಾರತದ ಲಿಬರಲ್ ಇತಿಹಾಸಕಾರರು ಮತ್ತು ರಿವಿಷನಿಷ್ಟ್ (revisionist) ಇತಿಹಾಸಕಾರರಲ್ಲನೇಕರಿಗಿದೆ. (ರಿವಿಷನಿಷ್ಟ್: ದಾಖಲೆಗಳನ್ನು ಓದಿ ಇತಿಹಾಸ ರಚಿಸುವವರು). ವಸಾಹತುಶಾಹಿಯ ಇತಿಹಾಸದ ಬಗೆಗಿನ ಈ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವ ಸಲುವಾಗಿ ವಸಾಹತುಶಾಹಿಗಳ ಬಾಯಿಂದಲೇ ಉದುರಿಬಿದ್ದ ಅಕ್ಷರಗಳನ್ನು ಅಪಾರ ಶ್ರಮದಿಂದ ಸಂಗ್ರಹಿಸಿ ಉಲ್ಲೇಖಿಸಿದ್ದೇವೆ. ಬ್ರಿಟೀಷರು ಭೂಮಾಲೀಕ ವರ್ಗದೊಂದಿಗೆ ಮೃದುತ್ವದಿಂದ ವರ್ತಿಸಿದರು. ಫ್ಯೂಡಲ್ ದೊರೆಗಳು ಸಬಲರಾಗುವಂತೆ ನೋಡಿಕೊಂಡರು. ಮುಂದಿನ ದಿನಗಳಲ್ಲಿ ಈ ಸಬಲ ಬುನಾದಿಯ ನೆರವಿನಿಂದಲೇ ವಸಾಹತುಶಾಹಿ ವ್ಯಾಪ್ತಿ ಹಿಗ್ಗಿಸಿಕೊಂಡಿತು. ಈ ಬುನಾದಿ ಇರದಿದ್ದರೆ ಕೊಳ್ಳೆ ಹೊಡೆಯುವುದು ಸಾಧ್ಯವಿರಲಿಲ್ಲ ಎಂಬಂಶವನ್ನು ಹೇಳುವ ಅವಶ್ಯಕತೆ ಇಲ್ಲವೇನೋ.
ಊಳಿಗಮಾನ್ಯ ಪದ್ಧತಿ ವಸಾಹತುಶಾಹಿ ಮೇಲುಗೈ ಪಡೆಯಲಿಕ್ಕಿದ್ದ ಸಾಮಾಜಿಕ ಆಧಾರವಾಗಿತ್ತು. ಹಳೆಯ ಸಾಮಾಜಿಕ ರಚನೆಯಲ್ಲಿದ್ದ ಆಳುವ ವರ್ಗದೊಂದಿಗೆ ಮೈತ್ರಿ ಮಾಡಿಕೊಂಡ ವಸಾಹತುಶಾಹಿಗಳು ಬಂಡವಾಳಶಾಹಿತನದ ಪುರಾತನ ರೂಪದಲ್ಲಿದ್ದ ದಬ್ಬಾಳಿಕೆ ಮತ್ತು ಶೋಷಣೆಯನ್ನು ಮುಂದುವರಿಸಲು ನಿರ್ಧರಿಸಿದರು. ಈ ಸಾರ್ವತ್ರಿಕ ಇತಿಹಾಸಕ್ಕೆ ಕರ್ನಾಟಕವೂ ಹೊರತಾಗಿರಲಿಲ್ಲ. (61)
ಮುಂದಿನ ಅಧ್ಯಾಯ: ಬ್ರಿಟೀಷ್ ರಾಜ್ ನ ಸಾಮಾಜಿಕ ಸ್ಥಂಭಗಳು
Where can I buy this book?
ReplyDeletebook is still in the process of translation. Will inform once it is published. Thanks for the interest
Delete